28 ವರ್ಷಗಳ ಹಳೆಯ ಬಾಬರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಇಂದು ಅಂತಿಮ ತೀರ್ಪನ್ನು ಪ್ರಕಟಿಸಿದ್ದು, ನ್ಯಾಯಾಧೀಶ ಎಸ್.ಕೆ.ಯಾದವ್ ವಿಚಾರಣೆ ನಡೆಸಿ, ತೀರ್ಪು ನೀಡಿದ್ದು, ಬಿಜೆಪಿ ಮತ್ತು ವಿಶ್ವಹಿಂದೂ ಪರಿಷತ್‌ನ ಸದಸ್ಯರು ದೋಷಮುಕ್ತರು ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ 32 ಆರೋಪಿಗಳೂ ದೋಷಮುಕ್ತರು ಎಂದಿರುವ ನ್ಯಾಯಾಲಯ, “ಈ ದ್ವಂಸ ಪೂರ್ವನಿರ್ಧರಿತವಲ್ಲ” ಎಂದು ತೀರ್ಪು ನೀಡಿದೆ.
2 ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಇಂದು ತೀರ್ಮಾನ ತೆಗೆದುಕೊಂಡಿದೆ. ಮೊದಲನೆಯದ್ದು, 197/1992, ಮಸೀದಿಯನ್ನು ಕೆಡವಿದ್ದ ಅನಾಮಧೇಯ ಕರಸೇವಕರ ವಿರುದ್ಧ ಮತ್ತು ಎರಡನೆಯದು, 198/1992, ಮಸೀದಿ ಕೆಡವುವಿಕೆಗೆ ಪ್ರಚೋದನೆ ನೀಡಿದ್ದಕ್ಕಾಗಿ 8 ಜನ ಬಿಜೆಪಿ ಮುಖಂಡರ (ಎಲ್.ಕೆ.ಅಡ್ವಾಣಿ, ಎಂ.ಎಂ.ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್, ಸಾಕ್ಷಿ ಮಹಾರಾಜ್, ಲಲ್ಲು ಸಿಂಗ್, ಬಿಬಿ ಶರಣ್ ಸಿಂಗ್) ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಪ್ರಕರಣದ ಆರೋಪಿಗಳಾದ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಮತ್ತು ರಾಜಸ್ಥಾನದ ಮಾಜಿ ಗವರ್ನರ್ ಕಲ್ಯಾಣ್ ಸಿಂಗ್, ಬಿಜೆಪಿ ಮುಖಂಡ ಎಂ.ಎಂ.ಜೋಶಿ, ಉಮಾ ಭಾರತಿ ಮತ್ತು ವಿನಯ್ ಕಟಿಯಾರ್ ಸೇರಿದಂತೆ 32 ಆರೋಪಿಗಳು ವಿಚಾರಣೆಯಂದು ನ್ಯಾಯಾಲಯದಲ್ಲಿರುವಂತೆ ತಿಳಿಸಲಾಗಿತ್ತು.
ಆದರೆ, ವಯಸ್ಸಿನ ಕಾರಣಕ್ಕೆ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಮಹಾಂತ್ ಗೋಪಾಲ ದಾಸ್ ಮತ್ತು ಉಮಾ ಭಾರತಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ವಿಚಾರಣೆಗೆ ನೇರವಾಗಿ ಹಾಜರಾಗಿರಲಿಲ್ಲ. ಸತೀಶ್ ಪ್ರಧಾನ್ ಸೇರಿದಂತೆ ಈ 6 ಜನ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಉಳಿದ 26 ಆರೋಪಿಗಳು ನೇರವಾಗಿ ಹಾಜರಿದ್ದರು.
ಇದನ್ನೂ ಓದಿ: ಅಯೋಧ್ಯೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ: ಉಮಾಭಾರತಿ
ಈ ಆರೋಪಿಗಳ ಮೇಲೆ 1992 ರ ಡಿಸೆಂಬರ್‌ನಲ್ಲಿ 15 ನೇ ಶತಮಾನದ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲು ಕಾರಣವಾದ ಪಿತೂರಿಯ ಆರೋಪ ಇದೆ. ಈ ಪ್ರಕರಣದಲ್ಲಿ ದೇಶಾದ್ಯಂತ ಗಲಭೆಗಳು ಸಂಭವಿಸಿ ಸುಮಾರು 3,000 ಜನರು ಸಾವನ್ನಪ್ಪಿದರು.
ಏಪ್ರಿಲ್ 2017 ರಲ್ಲಿ, ಉನ್ನತ ನ್ಯಾಯಾಲಯವು, ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಎರಡು ವರ್ಷಗಳಲ್ಲಿ ಮಸೀದಿ ದ್ವಂಸ ಪ್ರಕರಣದ ವಿಚಾರಣೆಯನ್ನು ನಡೆಸಿ ಪೂರ್ಣಗೊಳಿಸಲು ಕೇಳಿಕೊಂಡಿತ್ತು. ಅದರ ನಂತರ ಹಲವು ಬಾರಿ ಗಡುವು ವಿಸ್ತರಿಸಲಾಗಿತ್ತು. ಮತ್ತೆ ವಿಶೇಷ ನ್ಯಾಯಾಧೀಶ ಎಸ್.ಕೆ. ಯಾದವ್ ಹೆಚ್ಚಿನ ಸಮಯವನ್ನು ಕೇಳಿದಾಗ, ಸೆಪ್ಟೆಂಬರ್ 30 ರೊಳಗೆ ತನ್ನ ತೀರ್ಪನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಇದನ್ನೂ ಓದಿ: ರಾಮ ಮಂದಿರದ ’ಭೂಮಿ ಪೂಜೆ’ಗೆ ಬಾಬರಿ ಮಸೀದಿ ಧ್ವಂಸಗೊಳಿಸಿದವರನ್ನು ಆಹ್ವಾನಿಸಿ: ದುಬೆ
ಕಳೆದ ನವೆಂಬರ್‌ನಲ್ಲಿ ಸುಪ್ರೀಂಕೋರ್ಟ್ ರಾಮ್ ಜನ್ಮಭೂಮಿ ಪ್ರಕರಣದ ತೀಪೂ ನೀಡಿದ್ದು, ದೇವಾಲಯ ನಿರ್ಮಿಸಲು ಆದೇಶಿಸಿತ್ತು. ಈಗಾಗಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಗಳು ಆರಂಭವಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ನಡೆದ ಭೂಮಿಪೂಜೆ ಸಮಾರಂಭದಲ್ಲಿ ಭಾಗವಹಿಸಿದ್ದರು.
ಇಂದು ತೀರ್ಪು ಬರುವ ಹಿನ್ನೆಲೆ ಬಿಜೆಪಿ ನಾಯಕಿ, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಉಮಾ ಭಾರತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ಸೆಪ್ಟೆಂಬರ್ 26 ರಂದು ಪತ್ರ ಬರೆದಿದ್ದಾರೆ. ಯಾವುದೇ ಕಾರಣಕ್ಕೂ ನಾನು ಜಾಮೀನು ಕೋರುವುದಿಲ್ಲ. ತಪ್ಪಿತಸ್ಥರೆಂದು ಸಾಬೀತಾದರೆ ಗಲ್ಲಿಗೇರಲೂ ನಾನು ಸಿದ್ಧ ಎಂದಿದ್ದರು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಅಯೋಧ್ಯೆಯ ಮಸೀದಿ ಜಾಗದಲ್ಲಿ ಬಾಬ್ರಿ ಆಸ್ಪತ್ರೆ ಸ್ಥಾಪನೆ? ಈ ಸುದ್ದಿ ನಿಜವೆ?


