ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ ಥಳಿಸಿ ಕೊಂದಿರತುವ ಕೃತ್ಯ ಬುಧವಾರ ರಾತ್ರಿ ನಡೆದಿದೆ.
19 ವರ್ಷದ ಸುದೀಪ್ ಬಸಪ್ಪ ಪಂಗೆ ಎಂಬ ಯುವಕ ಬಲಿಯಾಗಿದ್ದಾನೆ. ರಾಜು ಭೀಮಪ್ಪ ಮಾಳಿ, ವಿಜಯ್ ರಾಮಚಂದ್ರ ಸಾವಳಗಿ ಮತ್ತು ಮಲ್ಲಿಕಾರ್ಜುನ ನಿಂಗಪ್ಪ ಮಾಳಿ ಎಂಬುವವರ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ನಡೆದದ್ದೇನು?
ಗ್ರಾಮದ ಸರ್ಕಾರಿ ಕನ್ನಡ ಬಾಲಕಿಯರ ಶಾಲೆಲ್ಲಿ ವಾರ್ಷಿಕೋತ್ಸವ ಆಯೋಜಿಸಲಾಗಿತ್ತು. ಮಕ್ಕಳು ವೇದಿಕೆಯಲ್ಲಿ ನೃತ್ಯ ಮಾಡುವುದುನ್ನು ಗ್ರಾಮಸ್ಥರು ವೀಕ್ಷಿಸುತ್ತಿದ್ದರು. ಪಂಚಾಯಿತಿ ಕಟ್ಟಡದ ಛಾವಣಿಯ ಮೇಲೆ ಕುಳಿತಿದ್ದ ಯುವಕರ ಗುಂಪಿನಿಂದ ಯಾರೋ ಒಬ್ಬರು ಕೆಳಗಿನ ಗುಂಪಿನ ಮೇಲೆ ಸಣ್ಣ ಬೆಣಚುಕಲ್ಲು ಎಸೆದಿದ್ದಾರೆ. ಈ ಘಟನೆ ಕೆಳಗೆ ಕುಳಿದ್ದವರನ್ನು ಕೆರಳಿಸಿದೆ.
ಕಲ್ಲು ಎಸೆದವರು ಯಾರು ಎಂದು ಕಂಡುಹಿಡಿಯುವ ಮೊದಲೇ ಗುಂಪು ದಲಿತ ಯುವಕ ಸುದೀಪ್ ಮಲೆ ಆರೋಪ ಹೊರಿಸಿದ್ದಾರೆ. ‘ನೀನೇ ಕಲ್ಲು ಎಸೆದಿದ್ದೀಯ..’; ಎಂದು ಆತನೊಂದಿಗೆ ವಾಗ್ವಾದ ಮಾಡಿದ್ದಾರೆ. ನಂತರ ಗುಂಪು ಅವನ ಮೇಲೆ ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಳಿಂದ ನಿಂದಿಸಿದ್ದಾರೆ. ಸಾಲದ್ದಕ್ಕೆ ನಿರ್ದಯವಾಗಿ ಥಳಿಸಿದ್ದಾರೆ.
ಗುಂಪು ದಾಳಿಯಲ್ಲಿ ಸುದೀಪ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಆತನನ್ನು ಜಮಖಂಡಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ನೀಡುವಾಗಲೇ ಯುವಕ ಪ್ರಾಣಬಿಟ್ಟಿದ್ದಾನೆ. ಸಾವಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.


