Homeಮುಖಪುಟಬಹುಜನ ಭಾರತ : ಹಸಿವಿನ ಸಾವುಗಳು ಮತ್ತು ತುಂಬಿ ತುಳುಕಿರುವ ಗೋದಾಮುಗಳು

ಬಹುಜನ ಭಾರತ : ಹಸಿವಿನ ಸಾವುಗಳು ಮತ್ತು ತುಂಬಿ ತುಳುಕಿರುವ ಗೋದಾಮುಗಳು

ಕಂಗೆಟ್ಟ ಬಡಭಾರತದತ್ತ ಕಣ್ಣು ಮುಚ್ಚಿದ್ದಾರೆ ಮೋದಿ. ಹೆಚ್ಚುವರಿ ದಾಸ್ತಾನಿನ ಉಚಿತ ಹಂಚಿಕೆ ಮಾಡುತ್ತಿಲ್ಲ ಯಾಕೆ?

- Advertisement -
- Advertisement -

ಕೊರೊನಾ ಲಾಕ್ ಡೌನ್ 200ಕ್ಕೂ ಹೆಚ್ಚು ಬಡಜೀವಗಳನ್ನು ಬಲಿ ತೆಗೆದುಕೊಂಡಿದೆ. ಇವು ವರದಿಯಾಗಿರುವ ಪ್ರಕರಣಗಳು. ಮನೆಯ ಕದಗಳಷ್ಟೇ ಅಲ್ಲದೆ ಮನದ ಕದಗಳನ್ನೂ ಮುಚ್ಚಿಕೊಂಡಿರುವ ಭಾರತ ದೇಶದಲ್ಲಿ ಕಂಗೆಟ್ಟವರೆಡೆಗೆ ಕಣ್ಣುಮುಚ್ಚಿರುವವರೇ ಹೆಚ್ಚು. ಹೀಗಾಗಿ ಒಳನಾಡುಗಳಲ್ಲಿ, ದೂರದ ಸೀಮೆಗಳಲ್ಲಿ ವರದಿಯಾಗದಿರುವ ಪ್ರಕರಣಗಳ ಸಂಖ್ಯೆ ಕಡಿಮೆಯೇನೂ ಇರಲಿಕ್ಕಿಲ್ಲ. ದನಿ ಕಳೆದುಕೊಂಡ ಭಾರತವೊಂದಿದೆ. ಅದರ ಆಕ್ರಂದನ ಕೇಳುವವರಿಲ್ಲ. ಅಲ್ಲಿ ಹಿಂದು- ಮುಸ್ಲಿಂ ಕೋಮುವಾದಿ ಕೋನವಿದ್ದರೆ ಮಾತ್ರ ಮೀಡಿಯಾದ ಕಣ್ಣು ಕಿವಿಗಳು ಅರಳುತ್ತವೆ. ಯಾರೂ ಕೇಳದವರನ್ನು ಸರ್ಕಾರ ಯಾಕೆ ಕೇಳೀತು?

ಏಪ್ರಿಲ್ 11ರಂದು ಲಭ್ಯವಿದ್ದ ಅಂಕಿ ಅಂಶಗಳ ಪ್ರಕಾರ ಹಸಿವು, ದಣಿವು, ಪೊಲೀಸ್ ದೌರ್ಜನ್ಯ, ಹೆದ್ದಾರಿಗಳಲ್ಲಿ ಕಾಲುನಡಿಗೆಯಲ್ಲಿ ಊರು ಸೇರುವ ತವಕದಲ್ಲಿ ವೇಗದ ವಾಹನಗಳ ಚಕ್ರಗಳಿಗೆ ಸಿಕ್ಕವರು, ಮದ್ಯ ಸಿಗದೆ ಒದ್ದಾಡಿದವರು, ಸೋಂಕಿತರೆಂಬ ಸಂಶಯಕ್ಕೆ ಗುರಿಯಾಗಿ ಗುಂಪುಗಳಿಂದ ಜಜ್ಜಿಸಿಕೊಂಡವರು, ವರಮಾನವಿಲ್ಲದೆ ಆತ್ಮಹತ್ಯೆಯಂತಹ ಕಾರಣಗಳಿಂದಾಗಿ ಲಾಕ್ ಡೌನ್ ಅವಧಿಯಲ್ಲಿ ಸತ್ತವರ ಸಂಖ್ಯೆ 185. ತಮ್ಮದಲ್ಲದ ತಪ್ಪಿಗೆ ಬದುಕನ್ನು ಮುಗಿಸಿದ ಈ ಬಡಪಾಯಿಗಳಿಗಾಗಿ ದೀಪ ಮುಡಿಸಿದವರು, ಜಾಗಟೆ ಹೊಡೆದವರು ಯಾರೂ ಇಲ್ಲ. ಜನರನ್ನು ಉಳಿಸಲೆಂದು ಕೈಗೊಂಡ ಕ್ರಮಗಳೇ ಅವರಿಗೆ ಉರುಳಾಗಿವೆ. ಇದಕ್ಕಿಂತ ವ್ಯಂಗ್ಯ ಮತ್ತೊಂದು ಇದ್ದೀತೇ?

ದೇಶ ಅಳುವವರು ಹೆಚ್ಚು ವಿವೇಕಿಗಳೂ, ಬಡವರ ಬವಣೆಗಳ ಕುರಿತು ಹೆಚ್ಚು ಸಂವೇದನಾಶೀಲರೂ ಆಗಿದ್ದಲ್ಲಿ ಮಾನವೀಯವಾದ ಯೋಜಿತ ಮತ್ತು ಸುಸಜ್ಜಿತ ಲಾಕ್ ಡೌನ್ ಮಾಡುತ್ತಿದ್ದರು. ಆಗ ಸಾವುಗಳ ಸಂಖ್ಯೆಯೂ ತಗ್ಗುತ್ತಿತ್ತು.

ಅಂತಹ ಅಮೆರಿಕೆಯಲ್ಲೇ ಒಂದೂವರೆ ಕೋಟಿ ಮಂದಿ ಸರ್ಕಾರದ ಮುಂದೆ ನಿರುದ್ಯೋಗ ಪರಿಹಾರಗಳಿಗೆಂದು ಕೈ ಚಾಚಿ ನಿಂತಿದ್ದಾರೆ. ಇನ್ನು ಸಾಮಾಜಿಕ-ಆರ್ಥಿಕ ರಕ್ಷಣೆ ಇಲ್ಲದ ಜನಸಮುದಾಯಗಳ ಪಾಲಿಗೆ ಲಾಕ್ ಡೌನ್ ಎಂಬುದು ಹಸಿವು ಮತ್ತು ಮರಣದ ನಿಶ್ಚಿತ ದಾರಿ. ಬಡದೇಶಗಳ ಸುಮಾರು 200 ಕೋಟಿ ಮಂದಿಯ ಮುಂದೆ ನಿರುದ್ಯೋಗದ ಕತ್ತಲು ಕವಿದಿದೆ. ಸರ್ಕಾರಗಳು ಅವರ ನೆರವಿಗೆ ಧಾವಿಸುವ ಅವಕಾಶಗಳು ಕ್ಷೀಣ.

ದೇಶದಲ್ಲಿ ಅಸಂಘಟಿತ ಕಾರ್ಮಿಕ ವಲಯ ಮತ್ತು ವಲಸೆ ಕಾರ್ಮಿಕರ ಸಂಖ್ಯೆಯನ್ನು 39 ಕೋಟಿ ಎಂದು ಅಂದಾಜು ಮಾಡಲಾಗಿದೆ. ಸಾಮಾಜಿಕ-ಆರ್ಥಿಕ ಭದ್ರತೆಯ ನೆರಳಿನಿಂದ ವಂಚಿತರು ಇವರು. ತಮ್ಮ ಹಳ್ಳಿಗಳು ಊರುಗಳನ್ನು ಸೇರಿಕೊಂಡ ನಂತರವೂ ಹಸಿವು ಇವರನ್ನು ಕಾಡುವುದಿಲ್ಲ ಎಂಬ ಖಾತರಿ ಇಲ್ಲ. ಶ್ರಮದ ಮಾರುಕಟ್ಟೆಯಲ್ಲಿ ಇವರ ಬೆವರು ಈಗಾಗಲೆ ಬೆಲೆ ಕಳೆದುಕೊಳ್ಳತೊಡಗಿದೆ. ರೆಟ್ಟೆ ಮುರಿದರೂ ಹೊಟ್ಟೆ ತುಂಬುವ ಸೂಚನೆಗಳು ಕಾಣುತ್ತಿಲ್ಲ. ಬದುಕುಗಳು ಬಲು ದುರ್ಭರವಾಗಲಿವೆ. ಶಾಲೆಗೆ ಹೋಗುತ್ತಿರುವ ಇವರ ಮಕ್ಕಳು ಸಂಸಾರದ ನೊಗಕ್ಕೆ ಹೂಡುವ ಕರುಗಳಾಗಲಿದ್ದಾರೆ. ಈ ಜನವರ್ಗಗಳ ದೈಹಿಕ, ಮಾನಸಿಕ ಹಾಗೂ ಲೈಂಗಿಕ ಹಿಂಸೆ ಮೇರೆ ಮೀರಲಿದೆ.

ವರ್ಷಾಂತ್ಯದ ಹೊತ್ತಿಗೆ ಕರೋನಾ ವೈರಸ್ ಮಹಾಮಾರಿಯು ಮಹಾಕ್ಷಾಮವೊಂದಕ್ಕೆ ದಾರಿ ಮಾಡಲಿದೆ ಎಂದು ವಿಶ್ವ ಆಹಾರ ತಜ್ಞರು ಭವಿಷ್ಯ ನುಡಿದಿದ್ದಾರೆ. 2020ರ ಅಂತ್ಯದ ವೇಳೆಗೆ ಹಸಿವಿನ ಅಂಚಿಗೆ ತಲುಪಲಿರುವ ವಿಶ್ವದ ಜನಸಂಖ್ಯೆ ಮೂವತ್ತು ಕೋಟಿಯನ್ನು ಸಮೀಪಿಸಲಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇಳಿದೆ.

ತಿಂಗಳ ಹಿಂದೆ ಮಾರ್ಚ್ ಒಂದರ ಅಂಕಿ ಅಂಶದ ಪ್ರಕಾರ ದೇಶದ ಸರ್ಕಾರೀ ಗೋದಾಮುಗಳು 77 ದಶಲಕ್ಷ ಮೆಟ್ರಿಕ್ ಟನ್ ಗಳಷ್ಟು ಅಕ್ಕಿ ಮತ್ತು ಗೋಧಿಯ ಧಾರಾಳ ದಾಸ್ತಾನು ಹೊಂದಿದ್ದವು. ನಮಗೆ ಅಗತ್ಯವಿರುವ ಕಾಪು ದಾಸ್ತಾನಿನ ಪ್ರಮಾಣ 21.4 ದಶಲಕ್ಷ ಮೆಟ್ರಿಕ್ ಟನ್ನುಗಳು ಮಾತ್ರ. ಉಳಿದದ್ದೆಲ್ಲ ಹೆಚ್ಚುವರಿ. ಹಿಂಗಾರು ಇಳುವರಿಯ ಖರೀದಿ ಕಾರ್ಯಾಚರಣೆಗಳು ಹತ್ತಿರದಲ್ಲಿವೆ.

ಮನೆಯಲ್ಲಿನ ಆಹಾರ ಕಣಜ ಕಂಠಮಟ್ಟ ಭರ್ತಿ, ಕುಟುಂಬದ ದುರ್ಬಲರು ಹಸಿವಿನಿಂದ ಸತ್ತರೂ ಕಣಜದಿಂದ ಆಹಾರ ಧಾನ್ಯ ಹೊರತೆಗೆಯುವುದಿಲ್ಲ ಎಂಬ ಧೋರಣೆ ಭಾರತ ಸರ್ಕಾರದ್ದು. ಕರೋನಾ ಮಹಾಮಾರಿಯ ತಾಂಡವದಲ್ಲಿ ಕಾಡತೊಡಗಿರುವ ಹಸಿವನ್ನು ಸರ್ಕಾರದ ಗೋದಾಮುಗಳಲ್ಲಿನ ಆಹಾರಧಾನ್ಯ ಹೊರತೆಗೆದರೆ ಅಡಗಿಸಬಹುದು. ಎಲ್ಲರೂ ಬಲ್ಲ ಸತ್ಯವಿದು. ಆದರೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಪರಿಸ್ಥಿತಿಯ ಘೋರ ಭೀಕರ ಸ್ವರೂಪ ಆಳುವವರಿಗೆ ಅರ್ಥವಾಗುತ್ತಿಲ್ಲ ಎನ್ನುತ್ತಾರೆ ಆರ್ಥಿಕ ತಜ್ಞ ಮತ್ತು ಸಮಾಜವಿಜ್ಞಾನಿ ಜೀನ್ ಡ್ರೆಜ್.

ದೇಶದ ಆಹಾರ ದಾಸ್ತಾನನ್ನು ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ಸಾರ್ವಜನಿಕ ಕಾಮಗಾರಿಗಳಿಗೆ ಬಳಸಿಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಪೀಪಲ್ಸ್ ಯೂನಿಯನ್ ಅಫ್ ಸಿವಿಲ್ ಲಿಬರ್ಟೀಸ್ (ಪಿ.ಯು.ಸಿ.ಎಲ್) ಇಪ್ಪತ್ತು ವರ್ಷಗಳ ಹಿಂದೆ ಸುಪ್ರೀಮ್ ಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತು. ಪರಿಣಾಮವಾಗಿ ಮಧ್ಯಾಹ್ನದ ಬಿಸಿಯೂಟ, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿನ ಸುಧಾರಣೆಗಳು, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಜಾರಿಗೆ ಬಂದವು. ಈ ಯೋಜನೆಗಳಿಗಾಗಿ ಪ್ರತಿ ವರ್ಷ 50-60 ದಶಲಕ್ಷ ಟನ್ನುಗಳಷ್ಟು ಅಕ್ಕಿ ಗೋಧಿ ಹಂಚಿಕೆಯಾಗುತ್ತಿದೆ. ಆಹಾರ ದಾಸ್ತಾನಿನ ಪ್ರಮಾಣ ಕೂಡ ವರ್ಷದಿಂದ ವರ್ಷಕ್ಕೆ ಜಿಗಿಯುತ್ತಲೇ ಬಂದಿದೆ. ಈ ವರ್ಷದ ದಾಸ್ತಾನು 77 ದಶಲಕ್ಷ ಟನ್ನುಗಳು. ಹಿಂಗಾರಿನ ಫಸಲು ಸದ್ಯದಲ್ಲೇ ಕೈ ಸೇರಿದರೆ ಈ ದಾಸ್ತಾನು 97 ದಶಲಕ್ಷ ಟನ್ನುಗಳಿಗೆ ಏರಲಿದೆ. ಮುಂದಿನ ಮೂರು ತಿಂಗಳ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪಡಿತರವನ್ನು ದುಪ್ಪಟ್ಟು ಮಾಡಿರುವುದಾಗಿ ಕೇಂದ್ರ ಹಣಕಾಸು ಮಂತ್ರಿ ಇತ್ತೀಚೆಗೆ ಘೋಷಿಸಿದರು. ಅದು ದೊಡ್ಡ ಉಪಕಾರವೇನೂ ಅಲ್ಲ. ಹಿಂಗಾರು ಹಂಗಾಮಿನ ಖರೀದಿ ಹೊಸ್ತಿಲಲ್ಲಿ ನಿಂತಿತ್ತು. ಗೋದಾಮುಗಳಲ್ಲಿ ಸ್ಥಳಾವಕಾಶ ಇರಲಿಲ್ಲ.

ಕರೋನಾ ಕಾಲದ ಹಸಿವು ಭಾರತ ದೇಶದ ದೀನರ ನಡುವೆ ಹೊಂಚು ಹಾಕಿದೆ. ಕೇಂದ್ರ ಸರ್ಕಾರ ತನ್ನ ಗೋದಾಮುಗಳನ್ನು ತನ್ನದೇ ಬಡಜನರಿಗಾಗಿ ತೆರೆಯಬೇಕಿದೆ. ಆಹಾರ ಧಾನ್ಯಗಳನ್ನು ಅರ್ಹರಿಗೆ ಉಚಿತವಾಗಿ ಹಂಚಬೇಕಿದೆ. ಜನಧನ ಯೋಜನೆಯಡಿ ಹೆಣ್ಣುಮಕ್ಕಳ ಖಾತೆಗಳಿಗೆ ತಿಂಗಳಿಗೆ 500 ರುಪಾಯಿ ಹಾಕುವ ಕ್ರಮ ಯಾತಕ್ಕೂ ಸಾಲದು. ಬಡವರ ಪಾಲಿನ ಬ್ಯಾಂಕಿಂಗ್ ವ್ಯವಸ್ಥೆ ಈಗಲೂ ಅಸಮರ್ಪಕ.

ತಮ್ಮನ್ನು ಬಡವರ ಬಂಧು ಎಂದೇ ಘೋಷಿಸಿಕೊಂಡು ಅವರ ಮತಗಳನ್ನು ಕೊಳ್ಳೆ ಹೊಡೆದಿರುವ ಪ್ರಧಾನಮಂತ್ರಿ ನರೇಂದ್ರ ದಾಮೋದರದಾಸ ಮೋದಿಯವರು ದೊಡ್ಡ ಮನಸ್ಸು ಮಾಡಬೇಕು.


ಇದನ್ನೂ ಓದಿ: ಲಾಕ್‍ಡೌನ್ – ಮನೆಯಿಂದಲೇ ಕೆಲಸ, ಮನೆಕೆಲಸ ಮತ್ತು ಮಹಿಳೆ! – ಮಲ್ಲಿಗೆ ಸಿರಿಮನೆ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...