ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕಲ್ಲಂಗಡಿ ಹಣ್ಣಿನ ಬಡ ವ್ಯಾಪಾರಿ ನಬಿಸಾಬ್ ಅವರ ಮೇಲೆ ಗೂಂಡಾಗಿರಿ ನಡೆಸಿ, ತಿನ್ನುವ ಹಣ್ಣುಗಳನ್ನು ನೆಲಕ್ಕೆ ಚೆಲ್ಲಿ ಅಮಾನವೀಯಕೃತ್ಯ ಎಸಗಿರುವ ಶ್ರೀರಾಮಸೇನೆಯ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಹಾಗೂ ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಹುತ್ವ ಕರ್ನಾಟಕ ವೇದಿಕೆಯಿಂದ ಮಂಗಳವಾರ ಪ್ರತಿಭಟನೆ ನಡೆಸಿ ಸಿಂಧನೂರು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಲಾಯಿತು.
ಪ್ರತಿಭಟನೆಗೂ ಮುನ್ನ ಬಹುತ್ವ ಕರ್ನಾಟಕ ವೇದಿಕೆಯಡಿ ಕಲ್ಲಂಗಡಿ ಹಣ್ಣಿನ ವ್ಯಾಪಾರಿಗಳು ತಹಸಿಲ್ದಾರ್ ಕಾರ್ಯಾಲಯದ ಮುಂದೆ ಸಾರ್ವಜನಿಕರಿಗೆ ಉಚಿತವಾಗಿ ಕೆಲವೊತ್ತು ಕಲ್ಲಂಗಡಿ ಹಣ್ಣುಗಳನ್ನು ಹಂಚಿ ಸೌಹಾರ್ದತೆ ಸಂದೇಶ ಸಾರಿದರು. ಹಿಂದೂ-ಮುಸ್ಲಿಂ ವ್ಯಾಪಾರಿಗಳು ಪರಸ್ಪರ ಸಹೋದರರು, ಕೋಮುವಾದಿ ಸಂಘಟನೆಗಳು ಹಾಗೂ ವ್ಯಕ್ತಿಗಳು ನಮ್ಮ ನಡುವಿನ ಸಾಮರಸ್ಯ ಕದಡಲು ಸಾಧ್ಯವಿಲ್ಲ ಎಂದು ಏಕತೆಯ ಸಂಕೇತ ಬಿಂಬಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಹಕ್ಕುಗಳ ಹೋರಾಟಗಾರ ಅಶೋಕ ನಂಜಲದಿನ್ನಿ, “ಕೆಲವು ಕೋಮುವಾದಿ ವ್ಯಕ್ತಿಗಳು ಮತ್ತು ಸಂಘಟನೆಗಳು ದಲಿತ, ಶೂದ್ರ, ಹಿಂದುಳಿದ ವರ್ಗದ ಯುವಕರಿಗೆ ಧರ್ಮದ ನಶೆ ಏರಿಸಿ; ಇಲ್ಲ-ಸಲ್ಲದ ಕಪೋಲ ಕಲ್ಪಿತ ದುಷ್ಟ ವಿಚಾರಗಳನ್ನು ತಲೆಯಲ್ಲಿ ತುಂಬಿ, ಬಡ ಮುಸ್ಲಿಂ ಜನರ ಮೇಲೆ ಎತ್ತಿಕಟ್ಟಿ ಅವರ ಬದುಕನ್ನು ಹಾಳುಮಾಡುತ್ತಿದ್ದಾರೆ. ಇಂತವರಿಂದ ಪ್ರೇರೇಪಣೆಗೊಂಡು ದುಷ್ಕೃತ್ಯ ನಡೆಸಿದ ದಲಿತ, ಶೂದ್ರ, ಹಿಂದುಳಿದ ವರ್ಗದ ಯುವಕರು ಜೈಲಿಗೆ ಹೋದರೆ ಬದುಕು ಬೀದಿಗೆ ಬೀಳುತ್ತದೆ. ಪರಸ್ಪರ ದಲಿತ, ಶೂದ್ರ ಹಾಗೂ ಹಿಂದುಳಿದ ವರ್ಗದವರನ್ನು ಮುಸ್ಲಿಂ ಸಮುದಾಯದವರ ಮೇಲೆ ಛೂ ಬಿಟ್ಟು ಇತ್ತ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಅವರ ಹಿಡನ್ ಅಜೆಂಡಾವಾಗಿದೆ” ಎಂದು ಕಿಡಿಕಾರಿದರು.
ಇದನ್ನೂ ಓದಿ: ಧಾರವಾಡ ಘಟನೆ: ಶ್ರೀರಾಮ ಸೇನೆಯ ನಾಲ್ವರು ದುಷ್ಕರ್ಮಿಗಳ ಬಂಧನ
ಬಹುತ್ವ ವೇದಿಕೆಯ ಸಂಚಾಲಕ ನಾಗರಾಜ ಪೂಜಾರ್ ಮಾತನಾಡಿ, “ಕಳೆದ ಹಲವು ದಿನಗಳಲ್ಲಿ ರಾಜ್ಯಾದ್ಯಂತ ಕೋಮುಸಾಮರಸ್ಯ ಕದಡುವಂತಹ ದುಷ್ಕೃತ್ಯಗಳು ಸರಣಿಯೋಪಾದಿಯಲ್ಲಿ ನಡೆಯುತ್ತಿವೆ. ಅಲ್ಲದೇ ಸರ್ಕಾರದ ಭಾಗವಾಗಿರುವ ಗೃಹ ಸಚಿವರೇ ಬಹಿರಂಗವಾಗಿ ಕೋಮು ಸಂಘಟನೆಗಳ ಏಜೆಂಟರಂತೆ ಮಾತನಾಡುತ್ತಿದ್ದಾರೆ. ಇನ್ನು ಮುಖ್ಯಮಂತ್ರಿಗಳು ಈ ಹಿಂದೆಯೇ ಕ್ರಿಯೆಗೆ-ಪ್ರತಿಕ್ರಿಯೆ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಮತೀಯವಾದ ಮತ್ತು ಮತೀಯವಾದಿಗಳನ್ನು ಬೆಂಬಲಿಸಿ ಸಂವಿಧಾನ ಮತ್ತು ನಾಡಿನ ಜನರಿಗೆ ದ್ರೋಹ ಬಗೆದಿದ್ದಾರೆ” ಎಂದು ಹೇಳಿದರು.
ಮನುಜಮತ ಬಳಗದ ಬಸವರಾಜ ಬಾದರ್ಲಿ ಮಾತನಾಡಿ, “ಕೋಮುವಾದಿ ಬಜರಂಗಿಗಳು ಬಡ ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ಹಣ್ಣುಗಳನ್ನು ಬೀದಿ ಎಸೆದು ರೈತರಿಗೆ, ಅವರ ಶ್ರಮಕ್ಕೆ ಅವಮಾನ ಮಾಡಿದ್ದಾರೆ. ಶಾಂತಿ-ಸೌಹಾರ್ದತೆಯಿಂದ ಬದುಕುತ್ತಿರುವ ಹಿಂದೂ-ಮುಸ್ಲಿಂ ವ್ಯಾಪಾರಿಗಳ ನಡುವೆ ಬಿರುಕು ಮೂಡಿಸಿ ರಾಜಕೀಯ ಲಾಭ ಪಡೆಯಲು ಕೆಲ ಶಕ್ತಿಗಳು ಹವಣಿಸುತ್ತಿದ್ದು ಅದರ ಭಾಗವಾಗಿ ಈ ಘಟನೆ ನಡೆದಿದೆ” ಎಂದು ವಿಶ್ಲೇಷಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ (ಕೋಡಿಹಳ್ಳಿ ಬಣ) ಮುಖಂಡ ರಾಮಯ್ಯ ಜವಳಗೇರಾ ಮಾತನಾಡಿ, “ಸಂಪೂರ್ಣ ಆಡಳಿತ ವೈಫಲ್ಯ ಕಂಡಿರುವ ಬಿಜೆಪಿ ಸರ್ಕಾರವು ಮುಂಬರುವ ಕರ್ನಾಟಕ ವಿಧಾನಸಭೆಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಯೋಜಿತ ಕಾರ್ಯತಂತ್ರದಭಾಗವಾಗಿ ಜನರ ಮನಸ್ಸನ್ನು ದಿಕ್ಕು ತಪ್ಪಿಸಲು, ಕೋಮುವಾದಿ ಸಂಘಟನೆಗಳ ದುಷ್ಕೃತ್ಯಗಳಿಗೆ ಪ್ರೋತ್ಸಾಹಿಸುತ್ತಿರುವುದಲ್ಲದೇ ಧರ್ಮ/ ಧರ್ಮಗಳ ನಡುವೆ ಕೋಮುಗಲಭೆ ಸೃಷ್ಟಿಮಾಡಲು ಕೀಳುಮಟ್ಟಕ್ಕಿಳಿದು ಏನೆಲ್ಲಾ ಹುನ್ನಾರ ನಡೆಸುತ್ತಿರುವುದು ನಾಚಿಕೆಗೇಡಿತನದ ಸಂಗತಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ವೆಂಕಟೇಶ ಗಿರಿಜಾಲಿ, ಮಂಜುನಾಥ ಗಾಂಧಿನಗರ, ಬಸವರಾಜ ಹಸಮಕಲ್, ಶಾಮೀದ್‌ಸಾಬ್ ಸಿದ್ರಾಂಪುರ, ಸೈಯ್ಯದ್ ಬಾಷಾ, ಹುಸೇನ್ ಬಾಷಾ, ಖಾಸಿಂಸಾಬ್, ಸಮ್ಮದ್ ಚೌದ್ರಿ, ಪಂಪಾಪತಿ, ಅರ್ಶದ್, ಎಂ.ಎಡಿ.ಅಸೀಫ್, ಯಂಕಪ್ಪ, ಹೊಳೆಯಪ್ಪ ದಿದ್ದಿಗಿ, ಅಬೂಬಕರ್, ಎಂ.ಡಿ.ಮಂಜಿಲ್. ಶೇಖ್, ಸುಹೈಲ್ ಅಲಿ, ಸಬ್ಜಲಿಸಾಬ್, ಶಫಿ ಸೇರಿದಂತೆ ಇನ್ನಿತರರು ಇದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಧಾರವಾಡದ ಮುಸ್ಲಿಂ ವರ್ತಕನ ಕಲ್ಲಂಗಡಿ ಹಣ್ಣು ಧ್ವಂಸ: ದುಷ್ಕರ್ಮಿಗಳ ವಿರುದ್ಧ FIR


