Homeಮುಖಪುಟಕಥುವಾ ಬಾಲಕಿ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಜಾಮೀನು: ಮೆಹಬೂಬ ಮುಫ್ತಿ ಕಿಡಿ

ಕಥುವಾ ಬಾಲಕಿ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಜಾಮೀನು: ಮೆಹಬೂಬ ಮುಫ್ತಿ ಕಿಡಿ

ಡಿಸೆಂಬರ್ 16 ರಂದು ತಿಲಕ್ ರಾಜ್ ಎಂಬುವವರಿಗೆ ಜಾಮೀನು ದೊರಕಿದರೆ, ಡಿಸೆಂಬರ್ 21 ರಂದು ಆನಂದ್ ದತ್ತಾಗೆ ಜಾಮೀನು ದೊರಕಿದ್ದು ಉಳಿದ ಶಿಕ್ಷೆಯನ್ನು ಅಮಾನತುಗೊಳಿಸಲಾಗಿದೆ.

- Advertisement -
- Advertisement -

2018ರಲ್ಲಿ ಜಮ್ಮುಕಾಶ್ಮೀರದ ಕಥುವಾದಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ನಡೆದ ಅಮಾನವೀಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿಗಳಿಬ್ಬರಿಗೆ ಪಂಜಾಬ್ ನ್ಯಾಯಾಲಯ ಜಾಮೀನು ನೀಡಿದ್ದು, ಶಿಕ್ಷೆಯನ್ನು ಅಮಾನತುಗೊಳಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ನ್ಯಾಯಾಂಗದ ಚಕ್ರಗಳು ಸಂಪೂರ್ಣವಾಗಿ ಕುಸಿದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕಥುವಾ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿದ್ದಕ್ಕಾಗಿ ಅಪರಾಧಿ ಎಂದು ಆರೋಪಿಸಲಾದ ಪೊಲೀಸರಿಗೆ ಜಾಮೀನು ನೀಡಲಾಗಿದ್ದು, ಆತನ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಲಾಗಿದೆ. ಅತ್ಯಾಚಾರಕ್ಕೊಳಗಾದ ಮತ್ತು ಹತ್ಯೆಗೊಳಗಾದ ಮಗು ನ್ಯಾಯದಿಂದ ವಂಚಿತವಾದಾಗ, ನ್ಯಾಯದ ಚಕ್ರಗಳು ಸಂಪೂರ್ಣವಾಗಿ ಕುಸಿದಿವೆ ಎಂಬುದು ಸ್ಪಷ್ಟವಾಗುತ್ತದೆ” ಎಂದು ಮೆಹಬೂಬ ಮುಫ್ತಿ ಟ್ವೀಟ್ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ 2018 ಜನವರಿ ತಿಂಗಳಿನಲ್ಲಿ ಎಂಟು ವರ್ಷ ಬಾಲಕಿಯ ಸಾಮೂಹಿಕ ಬರ್ಬರ ಅತ್ಯಾಚಾರ, ಚಿತ್ರಹಿಂಸೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ದೋಷಿಗಳೆಂದು ಪಠಾಣ್ ಕೋಟ್ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತನಿಖೆಯನ್ನು ಪಠಾಣ್ ಕೋಟ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಜೂನ್ 10, 2019ರಲ್ಲಿ ತೀರ್ಪು ನೀಡಿದ ನ್ಯಾಯಾಲಯ ಮುಖ್ಯ ಆರೋಪಿಗಳಾದ ಸಾಂಜಿ ರಾಮ್, ವಜಾಗೊಂಡ ಪೊಲೀಸ್ ಅಧಿಕಾರಿಗಳಾದ ದೀಪಕ್ ಖಾಜರಿಯ ಮತ್ತು ಪರ್ವೇಶ್ ಕುಮಾರ್ ಎಂಬುವವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸಾಕ್ಷ್ಯ ನಾಶ ಆರೋಪ ಮಾಡಿದ ಆರೋಪದಲ್ಲಿ ಆನಂದ್ ದತ್ತಾ, ತಿಲಕ್ ರಾಜ್ ಮತ್ತು ಸುರೇಂದರ್ ವರ್ಮಾ ಎಂಬ ಪೊಲೀಸ್ ಅಧಿಕಾರಿಗಳಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಡಿಸೆಂಬರ್ 16 ರಂದು ತಿಲಕ್ ರಾಜ್ ಎಂಬುವವರಿಗೆ ಜಾಮೀನು ದೊರಕಿದರೆ, ಡಿಸೆಂಬರ್ 21 ರಂದು ಆನಂದ್ ದತ್ತಾಗೆ ಜಾಮೀನು ದೊರಕಿದ್ದು ಉಳಿದ ಶಿಕ್ಷೆಯನ್ನು ಅಮಾನತುಗೊಳಿಸಲಾಗಿದೆ.

ಜನವರಿ 10, 2018ರಲ್ಲಿ ನಡೆದ ಅತ್ಯಾಚಾರ ಪ್ರಕರಣ ವಿಚಾರಣ ನಡೆಸಿದ ಪೊಲೀಸರು 2018 ರ ಎಪ್ರಿಲ್ ತಿಂಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 8 ವರ್ಷದ ಬಾಲಕಿಗೆ ಮಾದಕ ಸೇವನೆ ಮಾಡಿಸಿ ದೇವಾಲಯವೊಂದರಲ್ಲಿ ಸತತ ನಾಲ್ಕು ದಿನಗಳ ಕಾಲ ಅತ್ಯಾಚಾರ ಮಾಡಿ ಕಲ್ಲಿನಿಂದ ಚಚ್ಚಿ ಕೊಲೆ ಮಾಡಲಾಗಿತ್ತು.

ಕಥುವಾ ಪ್ರದೇಶ ಹಾಗೂ ಸುತ್ತಮುತ್ತ ಇರುವ ಅಲೆಮಾರಿಗಳನ್ನು ಭಯಪಡಿಸುವ ಸಲುವಾಗಿ ಹಾಗೂ ಅವರನ್ನು ಅಲ್ಲಿಂದ ಓಡಿಸುವ ಸಲುವಾಗಿಯೂ ಸಹ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆಯನ್ನು ಮಾಡಲಾಗಿದೆ ಎಂಬ ಘೋರ ಸತ್ಯವು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಬಿಜೆಪಿ ನಾಯಕರಾದ ಚೌಧುರಿ ಲಾಲ್ ಸಿಂಗ್ ಮತ್ತು ಪ್ರಕಾಶ್ ಗಂಗಾ ಎಂಬುವವರು ಆ ಸಂದರ್ಭದಲ್ಲಿ ಆರೋಪಿಗಳ ರಕ್ಷಣೆಗೆ ನಿಂತಿದ್ದರು. ಅಲ್ಲದೆ ಬಿಜೆಪಿ ಶಾಸಕ ರಾಜೀವ್ ಜಸ್ ರೊಟಿಯಾ ಎಂಬುವವರು ಆರೋಪಿಗಳ ಪರವಾಗಿ ಬಹಿರಂಗ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದನ್ನು ಬಹುತೇಕರು ಖಂಡಿಸಿದ್ದರು.


ಇದನ್ನೂ ಓದಿ : ರಾಜಕೀಯ ಅಸ್ತ್ರವಾಗಿ ಅತ್ಯಾಚಾರವನ್ನು ಸಮರ್ಥಿಸಿದ್ದ ಸಾವರ್ಕರ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಎಪಿ ನಾಯಕರಿಂದ ಪ್ರತಿಭಟನೆ; ದೆಹಲಿ ಬಿಜೆಪಿ ಕೇಂದ್ರ ಕಚೇರಿಗೆ ಬಿಗಿ ಭದ್ರತೆ

0
ಎಎಪಿಯ ರಾಷ್ಟ್ರೀಯ ಸಂಚಾಲಕ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಘೋಷಿಸಿದ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ಪೊಲೀಸರು ಇಲ್ಲಿನ ಬಿಜೆಪಿ ಪ್ರಧಾನ ಕಚೇರಿ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೀನ್ ದಯಾಳ್...