ಕಠ್ಮಂಡು: ‘ಬಾಲೆನ್’ ಎಂದು ಪ್ರೀತಿಯಿಂದ ಕರೆಯಲ್ಪಡುವ ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು, ಹಿಮಾಲಯನ್ ರಾಷ್ಟ್ರದಲ್ಲಿ ಉನ್ನತ ಕಾರ್ಯಕಾರಿ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ನಾಯಕರಾಗಿ ಬಾಲೆನ್ ಆಯ್ಕೆಯಾದರು.
ಕಳೆದ ವರ್ಷ ಭ್ರಷ್ಟಾಚಾರದ ವಿರುದ್ಧ ಯುವಕರು ನಡೆಸಿದ ದಂಗೆಯನ್ನು ನಿಯಂತ್ರಿಸಲಾಗದೆ, ನೇಪಾಳ ಸರ್ಕಾರವು ಪತನಗೊಂಡಿತ್ತು. ಅದಾದ ಬಳಿಕ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರನ್ನು ಸೋಲಿಸಿರುವ ಬಾಲೇಂದ್ರ ಶಾ ಅವರು ಇಂದು (ಮಾರ್ಚ್27) ನೇಪಾಳದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
35 ವರ್ಷದ ರ್ಯಾಪರ್ನಿಂದ ರಾಜಕಾರಣಿಯಾಗಿ ಪರಿವರ್ತನೆಗೊಂಡಿರುವ ಅವರು ಮಾಧೇಶ್ ಪ್ರದೇಶದ ಮೊದಲ ಪ್ರಧಾನಿಯೂ ಆಗಿದ್ದಾರೆ.
ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರು ರಾಷ್ಟ್ರೀಯ ಸ್ವತಂತ್ರ ಪಕ್ಷದ (RSP) ಸಂಸದೀಯ ಪಕ್ಷದ ನಾಯಕ ಬಾಲೆನ್ ಅವರನ್ನು ಸಂವಿಧಾನದ 76 (1) ನೇ ವಿಧಿಗೆ ಅನುಗುಣವಾಗಿ ಪ್ರಧಾನ ಮಂತ್ರಿಯಾಗಿ ನೇಮಿಸಿದ್ದಾರೆ ಎಂದು ರಾಷ್ಟ್ರಪತಿ ಕಚೇರಿ ಹೊರಡಿಸಿದ ಸೂಚನೆಯಲ್ಲಿ ತಿಳಿಸಲಾಗಿದೆ.
ಬಾಲೆನ್ 15 ರಿಂದ 18 ಸಚಿವರನ್ನು ಹೊಂದಿರುವ ಸಣ್ಣ ಸಂಪುಟವನ್ನು ರಚಿಸುವ ಸಾಧ್ಯತೆಯಿದೆ ಎಂದು ಪಿಟಿಐ ವರದಿ ತಿಳಿಸಿದೆ.
ಬಾಲೆನ್ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಿದ್ದ ಆರ್ಎಸ್ಪಿ, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಎಚ್ಒಆರ್) ನ ಒಟ್ಟು 275 ಸ್ಥಾನಗಳಲ್ಲಿ 182 ಸ್ಥಾನಗಳನ್ನು ಗಳಿಸುವ ಮೂಲಕ ಸಂವಿಧಾನದ 76 (1) ನೇ ವಿಧಿಯ ಅಡಿಯಲ್ಲಿ ಬಹುಮತದ ಸರ್ಕಾರ ರಚಿಸಲು ಅರ್ಹತೆ ಪಡೆದಿದೆ.
ಕಠ್ಮಂಡುವಿನ ಮಾಜಿ ಮೇಯರ್ ಆಗಿರುವ ಬಾಲೆನ್, ನೇಪಾಳ ಕಮ್ಯುನಿಸ್ಟ್ ಪಕ್ಷದ (ಯುನೈಟೆಡ್ ಮಾರ್ಕ್ಸ್ವಾದಿ-ಲೆನಿನಿಸ್ಟ್) ದೀರ್ಘಕಾಲದ ಭದ್ರಕೋಟೆಯಾಗಿದ್ದ ಝಾಪಾ-5 ಕ್ಷೇತ್ರದಲ್ಲಿ ನಾಲ್ಕು ಬಾರಿ ಪ್ರಧಾನಿಯಾಗಿದ್ದ ಕೆ.ಪಿ. ಶರ್ಮಾ ಓಲಿ ಅವರನ್ನು ಭಾರಿ ಅಂತರದಿಂದ ಸೋಲಿಸಿದ್ದಾರೆ.


