Homeಕಥೆಕಪಿಲ ಪಿ ಹುಮನಾಬಾದೆಯವರ ಕಥೆ ’ಬಿದಿರು’

ಕಪಿಲ ಪಿ ಹುಮನಾಬಾದೆಯವರ ಕಥೆ ’ಬಿದಿರು’

- Advertisement -
- Advertisement -

ಪೋರ್ಟಿಕೊದ ಆರಾಮ ಚೇರಲ್ಲಿ ಬೆನ್ನು ಒತ್ತಿ ಕೂತ ಗಂಗಾಧರನ ಕೈಯಿಂದ ಪುಸ್ತಕವೊಂದು ಟಪ್ ಎಂದು ನೆಲದ ಮೇಲೆ ಬಿದ್ದಾಗಲೇ ಎಚ್ಚರವಾಯ್ತು. ಪುಸ್ತಕದ ರಟ್ಟಿನ ತುದಿ ಛಿದ್ರವಾಗಿದ್ದಕ್ಕೆ ಬೇಸರದಿಂದಲೆ ಅದನ್ನೆತ್ತಿ ತೊಡೆಮೇಲೆ ಇಟ್ಟುಕೊಂಡು, ಮನೆ ಮುಂದಿನ ಗಾರ್ಡನಿನಲ್ಲಿ ಬೆಳೆದು ನಿಂತ ದಟ್ಟ ಬಿದಿರು ನೋಡುತ್ತ ಕೂತ. ಅವ ದಿಟ್ಟಿಸುತ್ತ ಹೋದಂತೆ ಅವನ ಕಣ್ಣೆದುರೆ ರಭಸವಾಗಿ ಬಿದಿರು ಬೆಳೆಯುತ್ತಿದ್ದವು. ಇಲ್ಲಿ ಮನೆ ಕಟ್ಟಿ ಐದಾರು ವರ್ಷವಾಗಿರಬಹುದು. ಆವಾಗಿನಿಂದ ಇವು ಬೆಳೆಯುವುದು ನಿಲ್ಲಿಸಿಲ್ಲ. ಅವುಗಳ ಗುಂಪು ಎಂದಿಗಿಂತ ಇವತ್ತು ಅವನನ್ನು ತುಸು ಜೋರಾಗಿಯೇ ಸೆಳೆಯುತ್ತಿತ್ತು. ಉದ್ದವಾದ ಬೊಂಬುಗಳಂತೆ ಎದ್ದುನಿಂತಿರುವ ಹಸಿರು ಬಿದುರಿನ ಗಿಡಗಳು ಕೈಬೀಸಿ ಕರೆಯುತ್ತಿದ್ದವು. ಅವುಗಳ ಮೇಲೆ ಕುಂತು ಚಿಂವ್ ಚಿಂವ್ ಮಾಡುತ್ತಿರುವ ಪುಟ್ಟ ಗುಬ್ಬಿಗಳು, ಗಾಢಹಸಿರಿನ ಗಿಳಿಗಳು ಕಣ್ಣು ಅತ್ತಿತ್ತ ತಿರುಗಿಸುತ್ತ ಏನೋ ಹುಡುಕುತಿದ್ದವು.

ಗಂಗಾಧರನ ಹತ್ತು ವರ್ಷದ ಮಗಳು ಜೀವನ್ಮುಖಿ ‘ಯೇ ಅಪ್ಪ ನೀ ಇಲ್ಲಿ ಕುಂತಿದಿಯಾ?! ನಿನಗೆ ಮನೆ ತುಂಬಾ ಹುಡುಕಿದೆ, ಚಹಾ ತಗೋ’ ಎಂದು ಹೇಳಿದಾಗಲೆ ಅವನು ಬಿದುರು ಗಿಡಗಳಿಂದ ಹೊರಬಂದ.

ಮಗಳ ಅಕ್ಕಿಯಂತಹ ಹಲ್ಲುಗಳು, ಎಳಿ ಕೈಕಾಲುಗಳು, ಅವಳು ಉಟ್ಟಿದ್ದ ಪುಟ್ಟ ಲಂಗ, ಅವಳ ಕೂದಲಿಗೆ ಕಚ್ಚಿಕೊಂಡ ಪಿನ್ನು, ಹಣೆ ಮೇಲೆ ಜಾರಿ ಬೀಳುತಿದೆಯೇನೋ ಅನ್ನುವಂತಹ ನೀರಿನ ಸಣ್ಣ ಚುಕ್ಕಿಯಂತಹ ಸ್ಟಿಕರ್ ಹಚ್ಚಿಕೊಂಡು ಚಹಾ ಕೈಯಲ್ಲಿ ಹಿಡಿದುಕೊಂಡು ನಿಂತಿದ್ದಳು.

‘ಅಪ್ಪ ಕೈಸುಡತದ ಫಸ್ಟ್ ಚಹಾ ತೊಗೊರೋ’ ಎಂದಾಗಲೇ ಅವಳನ್ನು ದಿಟ್ಟಿಸುವುದು ಬಿಟ್ಟ. ಮನೆಯಲ್ಲಿ ಈಗ ಒಂದು ವಾರವೇ ಆಯ್ತು ಇವನು ಬದಲಾಗಿ. ನಡುರಾತ್ರಿವರೆಗೂ ಸಿಗರೇಟ್ ಸುಡುತ್ತ ಕಣ್ಣು ತೆರೆದು ರಾತ್ರಿ ನೋಡುತ್ತಿದ್ದ. ಹಗಲು ಅವನಿಗೆ ನುಂಗುತಿರುವಂತೆ ಅನಿಸುತ್ತಿತ್ತು. ಹೆಂಡತಿ ಪಕ್ಕದಲ್ಲಿ ಮಲಗುವುದನ್ನು ಬಿಟ್ಟಿದ್ದ. ಅವಳು ಎಷ್ಟೇ ಬೈದರೂ, ಏನೇ ಕೇಳಿದರು ನನಗೆ ಏನು ಸಂಬಂಧವೇ ಇಲ್ಲವೆಂಬಂತೆ ಇರುತ್ತಿದ್ದ. ತಾನಾಯ್ತು ತನ್ನ ಪುಸ್ತಕಗಳಾಯ್ತು ಇಷ್ಟೇ ಅವನ ಬದುಕು ಆಗಿತ್ತು.

ಮನೆಗೆ ಬಂದವರೆದುರು ಗಂಗಾಧರನ ಹೆಂಡತಿ ಹೇಳುವುದು ಒಂದೇ ಮಾತು ‘ನಿನ್ನೆ ಮೊನ್ನೆವರೆಗೂ ಎಲ್ಲಾ ಆರಾಮ ಇದ್ರು, ಯಾವಾಗ ಅವರ ಊರಿಗಿ ಹೋಗಿ ಬಂದ್ರೊ ಆವಾಗಿನಿಂದ ಹಿಂಗ ಆಗ್ಯಾರ’ ಅಂತ ಹೇಳುತ್ತಿದ್ದಳು.

ಡಿಗ್ರಿ ಕಾಲೇಜೊಂದರಲ್ಲಿ ಲೈಬ್ರರಿಯನ್ ಆಗಿರುವ ಗಂಗಾಧರನಿಗೆ, ಪುರುಸೊತ್ತು ಎಂಬುವ ಪದದ ಅರ್ಥವೇ ಗೊತ್ತಿಲ್ಲದಂತಿರುವ ಮನುಷ್ಯ. ಒಮ್ಮಿಂದೊಮ್ಮೆಲೆ ಹೀಗೆ ಮುದುಡಿಹೋಗಿರುವ ಅವನ ಬಗ್ಗೆ ಹೆಂಡತಿಗಂತೂ ಹೇಳಲಾಗದ ಏನೇನೋ ಯೋಚನೆಗಳು ಕುಕ್ಕುತಿದ್ದವು.

ಪೋರ್ಟಿಕೊದಲ್ಲಿ ಒಂದೊಂದು ಸಲ ಕಾಲೇಜಿಗೆ ಹೋಗದೆ ಪುಸ್ತಕ ಓದುತ್ತ ಕುಂತುಬಿಡುತ್ತಿದ್ದ. ಅವ ಒಂದು ತಿಂಗಳಿಂದ ಒಂದೇ ಪುಸ್ತಕ ತಿರುಗಿ ತಿರುಗಿ ಓದುತ್ತಿದ್ದ. ಆ ಪುಸ್ತಕ ಯಾಕೆ ಅವ ಅಷ್ಟು ಸಾರಿ ಓದುತ್ತಿದ್ದಾನೋ ಯಾರಿಗೂ ಗೊತ್ತಾಗಲಿಲ್ಲ. ಮನೆಮುಂದಿನ ಬಿದಿರುಗಳ ಬುಡದಲ್ಲಿ ಹೋಗಿ ನಿಂತು ಒಂದು ಫುಲ್ ಪ್ಯಾಕ್ ಸಿಗರೇಟ್ ಸೇದಿ ಬರುತ್ತಿದ್ದ.

ಕೂತಲ್ಲಿಂದ ಎದ್ದವನೆ ಎಂದಿನಂತೆ ಬಿದಿರುಗಳ ಗುಂಪಿನತ್ತ ನಡೆದ. ಅಲ್ಲೊಂದು ಹಸಿರು ಬಟ್ಟೆಯ ಚಿಂದಿ ಅವುಗಳಿಗೆ ಜೋತು ಬಿದ್ದಿತ್ತು. ಅದನ್ನು ಎಷ್ಟು ನಾಜೂಕಾಗಿ ಎಳೆದರು ಪರ್ ಅಂತ ಹರಿದೆಹೊಯ್ತು. ಅದರ ಕೆಳಗೆ ಕುಂತವನೆ ಗಳಗಳನೆ ಅತ್ತ. ಯಾರೂ ನೋಡಿಲ್ಲವೆಂದು ತುಸು ಖಾತ್ರಿ ಪಡಿಸಿಕೊಂಡು ಎದ್ದು ನಿಂತ. ಅವನ ಅಳುವಿಗೆ ಯಾವ ಕಾರಣವಿರಬಹುದೆಂದು ಅವನೊಬ್ಬನಿಗೆ ಮಾತ್ರ ಗೊತ್ತಿತ್ತು.

ಒಂದು ವಾರದ ಹಿಂದೆ ಇವನ ಆತ್ಮೀಯ ಬಾಲ್ಯದ ಗೆಳೆಯ ದಿನೇಶ್ ಫೋನ್ ಮಾಡಿದ್ದ. ‘ಲೇ ಫ್ರೀ ಇದಿಯೇನೊ, ಒಂದ ಅರ್ಜಂಟ್ ಮಾತ ಹೇಳದದ. ನೀ ಗಾಭರಿ ಆಗಬ್ಯಾಡ, ಸಮಾಧಾನನಿಂತ ಕೇಳು ನಿಮ್ಮ ಮನಿ ಬಾಜುದ ಮೀನಾ ಸತ್ತಾಳ ಲೇ, ವಿಷ ತಗೊಂಡ’ ಎಂದ. ಆ ಕಡೆಯಿಂದ ಧ್ವನಿ ಬರುತ್ತಿದ್ದರೂ ಇವ ಏನನ್ನೂ ಮಾತಾಡದೆ ಫೋನ್ ಕೆಳಗಿಳಿಸಿ ಜೇಬಲ್ಲಿ ಇಟ್ಟುಕೊಂಡ. ಕಾರ್ ಸ್ಟಾರ್ಟ್ ಮಾಡಿ ಊರಿನ ದಾರಿ ಹಿಡಿದ. ಅಳು ಒಳಗಿನಿಂದ ಚೆಲ್ಲುತಿತ್ತು. ಹೇಗೊ ಸಂಭಾಳಿಸಿಕೊಂಡು ಕಾರು ಓಡಿಸುತ್ತಿದ್ದ. ಹೊರಗಡೆಗೆ ಕಾರಿನ ಗ್ಲಾಸಿನ ಮೇಲೆ ಬೀಳುತ್ತಿದ್ದ ಮಳೆ ನೀರು ರ್ಯಾಪರ್ ಒರೆಸುತ್ತಿತ್ತು. ಇವ ಬೆವರಿನಿಂದ ತೊಯ್ದು ಹೋಗಿದ್ದ. ದಿನೇಶ್ ಫೋನಿನಲ್ಲಿ ಹೇಳಿರುವ ಮೀನಾ ಇವನ ಆತ್ಮೀಯ ಹೈಸ್ಕೂಲ್ ಗೆಳತಿ. ಅವಳು ದೊಡ್ಡವಳಾದ ಮೇಲಿನಿಂದ ಇವನಿಗೆ ಅವಳ ಮೇಲೆ ವಿಶೇಷ ಆಸಕ್ತಿ. ಅವಳು ಮದುವೆ ಆಗಿ ಹೋಗುವವರೆಗೂ ಅವಳೊಂದಿಗೆ ಎಲ್ಲಾ ರೀತಿಯ ಸಂಪರ್ಕಗಳು ಹೊಂದಿದ್ದ. ಅವರಿಬ್ಬರೂ ಹೊಲದ ಬಣಮಿಗಳ ಮರೆಯಲ್ಲಿ ಎಷ್ಟೋ ಸಲ ಕೂಡಿದ್ದರು. ಅದೆಲ್ಲ ಗಂಗಾಧರನಿಗೆ ಮೊದಮೊದಲ ಪುಳಕಗಳು. ಇವ ಎಲ್ಲಾ ಹುಡುಗರಂತೆ ಸಿಟಿ ಸೇರಿಕೊಂಡು ಓದಿಗಿಳಿದ. ಅವಳು ಮದುವೆ ಆಗಿ ಹೋದಳು. ಇದಾದ ಮೇಲೆ ಅವರಿಬ್ಬರಿಗೂ ಸಂಪರ್ಕವೆ ಇಲ್ಲ. ಅವ ಆಗಾಗ ಹಳೆ ನೆನಪುಗಳಲ್ಲಿ ಮರುಗುತ್ತಿದ್ದನಾದರೂ ಬೆಳೆದಂತೆ ಬದಲಾಗುತ್ತ ನಡೆದ.

ಕುಡುಕ ಗಂಡನ ದೆಸೆಯಿಂದ ಮೀನಾ ವಿಷ ಕುಡಿದಿದ್ದಳು. ಹೆಣ ಗೋಡೆಗೊರಗಿಸಿ ಕೂಡಿಸಿದ್ದರು. ಇವ ಒಮ್ಮಿಂದೊಮ್ಮೆಲೆ ಹೀಗೆ ಪ್ರತ್ಯಕ್ಷವಾಗಿರುವುದಕ್ಕೆ ಊರಲ್ಲಿ ಯಾರು ಖುಷಿಪಡಲಿಲ್ಲ. ಅವರಿಬ್ಬರ ಮಧ್ಯೆ ಇದ್ದ ಹಳೆ ಸಂಬಂಧಗಳು ಸಹ ಅಲ್ಲಿ ಯಾರಿಗೂ ಗೊತ್ತಿರಲಿಲ್ಲ. ಅವನ ಗೆಳೆಯ ದಿನೇಶನಿಗೆ ಬಿಟ್ಟು.

‘ಇದೇನೆ ಯವ್ವಾ ಅಪೆಸಿ ಬಂದು ಅಂಗಳಾಗ ನಿಂತದ ಅಲಾ’ ಎಂದು ಜನ ಮಾತಾಡಿಕೊಂಡರು.

ಮೀನಾಳ ಮುಖಕ್ಕೆ ಬಿಳಿ ಬಟ್ಟೆ ಸುತ್ತಿದ್ದರು. ಆಗತಾನೆ ಮೈತೊಳೆದು ಕೂಡಿಸಿರಬಹುದು. ಕೆಂಪು ಸೀರೆ ಉಡಿಸಿದ್ದರು. ಅವಳ ಮುಂದೆ ಅವಳವ್ವ ಜೋರಾಗಿ ಅತ್ತು ಅತ್ತು ಸುಸ್ತಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಅವಳ ಅಪ್ಪ ಅಂಗಳದಲ್ಲೆ ಬೀಡಿ ಸೇದುತ್ತ ಕಣ್ಣು ತುಂಬಾ ನೀರು ತುಂಬಿಕೊಂಡಿದ್ದ. ಅವಳ ಜೀವವಿಲ್ಲದ ಮುಖ ನೋಡಿದ ಗಂಗಾಧರನಿಗೆ ವಾಕರಿಗೆ ಬಂದ ಹಾಗಾಯ್ತು. ಈ ತುಟಿಗಳಲ್ಲವೆ ನಾ ದೀರ್ಘವಾಗಿ ಮುತ್ತಿಟ್ಟದ್ದು. ಕಪ್ಪು ಬಿದ್ದ ಈ ಕೆನ್ನೆಗಳ ಮೇಲೆ ಅಲ್ಲವೆ ನಾ ಮಲಗಿ ಮುದ್ದಾಡಿದು. ಅವಳ ಸೆಟದು ನಿಂತಿರುವ ಒಣ ಕಟ್ಟಿಗಿಯಂತಹ ಕೈಗಳೆ ಅಲ್ಲವೆ ನನ್ನ ಕೂದಲು ಸುರುಳಿ ಸುತ್ತಿ ಆಟವಾಡಿದ್ದು. ಗಂಗಾಧರ ಯೋಚಿಸುತ್ತ ಹೋದಂತೆ ಒಳಗೊಳಗೆ ಪುಡಿಪುಡಿಯಾಗುತ್ತ ಕುಸಿಯುತಿದ್ದ. ಅವಳ ಹೆಣ ಎತ್ತಲು ಮಾಡಿದ ಬಿದಿರು ಕುರ್ಚಿ ಅವನನ್ನು ಕರೆಯುತಿರುವಂತೆ ಭಾಸವಾಗುತ್ತಿತ್ತು. ಅದಕ್ಕೆ ನಯವಾಗಿ ಜೋಡಿಸಿದ ಸಣ್ಣ ಬಿದರಿನ ತುಂಡುಗಳ ಸಿಬಿರು ಅವನ ಮೈಯಲ್ಲ ಚುಚ್ಚುತ್ತಿದ್ದವು. ಅದರ ಸುತ್ತ ನಿಂತ ಯುವಕರು ಅದನ್ನು ಸಪ್ಪೆ ಮುಖ ಮಾಡಿಕೊಂಡು ನೋಡುತ್ತಿದ್ದರು. ಅವಳ ಹೆಣ ನೋಡಿದವನಿಗೆ ಇಷ್ಟು ದಿನ ಎಲ್ಲಿದ್ದವೋ ಏನೋ ಆ ಕಣ್ಣೀರುಗಳು, ಗಳಗಳನೆ ಅತ್ತ. ಊರ ಮಂದಿ ದಂಗು ಆಗಿ ಹೋದರು.

ಗಂಗಾಧರ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟಿದ್ದ. ಅವನನ್ನು ಎತ್ತಿ ಅಂಗಳದಲ್ಲಿ ಕೂಡಿಸಿ ಮೂಗಿನಲ್ಲಿ ಬೀಡಿಯ ಖಾಟ್ ನೀಡುತ್ತಿದ್ದರು. ಪಾದಗಳು ಜೋರಾಗಿ ಉಜ್ಜಿದರು. ಬೇಹೊಸ್ ಬಿದ್ದಿದ್ದ ಗಂಗಾಧರ ಮಿಸುಕಾಡುವಂತೆ ಕಾಣಲಿಲ್ಲ. ಅವನ ಸುತ್ತ ನೆರದಿದ್ದ ಮಂದಿಗೆಲ್ಲ ಸರಿಸಿ ಗಾಳಿಗೆ ಜಾಗ ಬಿಟ್ಟರು. ಗಂಗಾಧರ ಮೆಲ್ಲಗೆ ಎಚ್ಚರಗೊಂಡು ಮೂಲೆಯಲ್ಲಿ ಕೂತ. ಅಂಗಳದ ತುಂಬಾ ಕಣ್ಣಾಡಿಸಿದ ದಿನೇಶನ ಸುಳಿವೆ ಕಾಣಲಿಲ್ಲ. ಒಂದಿಬ್ಬರೂ ಮುದುಕಿಯರು ಹೆಣದ ಮುಂದೆ ಕುಂತು ಕಥೆ ಹೇಳಿ ಹಾಡಿ ಹಾಡಿ ಅಳುತ್ತಿದ್ದರು.

ಹೋದ ವರ್ಷವೆ ಇರಬಹುದು. ಗಂಗಾಧರನ ಅಪ್ಪ ಹಾರ್ಟ್ ಅಟ್ಯಾಕ್ ಆಗಿ ಸತ್ತಾಗ, ಊರಿಂದ ಬಂದಿದ್ದ ಗಂಗಾಧರ ಒಂದು ಹನಿ ಕಣ್ಣೀರು ಸಹ ಹಾಕಿರಲಿಲ್ಲ. ಇವನ ಅಕ್ಕ ಕೊಳ್ಳಿಗೆ ಬಿದ್ದು ಅಳುವಾಗ ಯಾವ ಪ್ರತಿಕ್ರಿಯೆ ತೋರಿಸದೆ ಅವಳಿಗೆ ತುಸು ಸಮಾಧಾನ ಮಾಡಿ, ಸುಮ್ಮನೆ ಕಲ್ಲು ಕಂಬದಂತೆ ನಿಂತಿದ್ದ.

ಅವನಪ್ಪನ ಹೆಣ ಎತ್ತಲು ತಂದ ಬಿದಿರು ಕುರ್ಚಿ ನೋಡಿ ಒಳಗೊಳಗೆ ಎಷ್ಟು ಚಂದ ಹೆಣೆದಿದ್ದಾರೆ ಎಂದುಕೊಂಡು ಅದು ತಂದವರಿಗೆ ಒಂದಿಷ್ಟು ಹೆಚ್ಚಿಗೆ ದುಡ್ಡು ಕೊಟ್ಟು ಕಳಿಸಿದ. ಅವನ ಜೊತೆ ಬಂದಿದ್ದ ಗೆಳೆಯರಿಗೆ ಅದರ ವಿಶೇಷತೆಗಳೆಲ್ಲ ವಿವರಿಸಿ ಹೇಳುತ್ತಿದ್ದ. ಇವನ ಜೊತೆ ಬಂದವರೆ ಇವನ ಮಾತುಗಳಿಂದ ತಪ್ಪಿಸಿಕೊಳ್ಳಲು ತಲೆತಗ್ಗಿಸಿ ನಿಂತಿದ್ದರು. ಬೀಡಿ ಸೇದುತ್ತ ನಿಂತ ಒಂದಿಬ್ಬರು ಮುದುಕರೂ, ಆ ಕುರ್ಚಿಯ ವಿಶೇಷತೆಗಳಲ್ಲಿ ಇಲ್ಲದ್ದು ಇದ್ದಿದ್ದು ಎಲ್ಲಾ ಸೇರಿಸಿ ಗಂಗಾಧರನೆದುರು ಕೊರೆಯುತ್ತಿದ್ದರು. ಇವ ಏನೋ ಅದ್ಭುತವಾದದ್ದು ಕೇಳಿಸಿಕೊಳ್ಳುತ್ತಿರುವಂತೆ, ಅವರನ್ನು ದೇವದೂತರಂತೆ ನೋಡುತ್ತಿದ್ದ.

ಆವತ್ತು ಊರಿನ ಹಳೆ ಮುದುಕಿಯೊಂದು ಯಾರದೋ ಕಿವಿಯಲ್ಲಿ ಮೆಲ್ಲಗೆ ಊಸುರುತ್ತಿದ್ದಳು ‘ಇವ ನಮ್ಮ ಗಂಗ್ಯಾ ಮೊದಲಿಂದ ಹಿಂಗೆ ಅದ ಪಾರ, ತನ್ನ ಜೀವ ಛೋಲೋ ಇದ್ರ ಸಾಕ ಅಂತದ, ಅವರ ಮುತ್ಯಾ ಸತ್ತಾಗ ಒಂದು ಗೆಣ ಇತ್ತ ನೋಡ ಪಾರ, ಅವರ ಮುತ್ಯಾಂದ ಹೆಣ ಅಂಗಳಾಗ ಹೊರಸಿನ ಮ್ಯಾಲ ಮಲಗಿಸಿರು, ಈ ಗಂಗ್ಯಾ ಏನ ಜಿದ್ದಿಗಿ ಬಿತ್ತು ಅಂತಿ, ಆವತ್ತ ನನಗ ಅನ್ನ ಬೇಕಂದರ ಬೇಕು ಅಂತ ಅಂಗಳದಾಗ ನೆಲ ತಿಕ್ಕಾಡಿ ಅಳಲತಿತು ನೋಡ. ಆವತ್ತು ಅಲ್ಲಿ ಇದ್ದ ನಾನೇ ಹೇಳದೆ ‘ಇವತ್ತ ಕುಣ್ಯಾಗ ಒಯ್ದು ಇಡೋ ಹೆಣದ ಸಲ್ಯಾಕ ಎಳಿ ಪಾರಂದ ಹೊಟ್ಟಿ ಯಾಕ ಸುಡತರಿ ಅನ್ನ ಮಾಡ ಹಾಕರಿ’ ಅಂದೆ. ಈ ಪಾರ ಆಗ ಅವರ ಮುತ್ಯಾನ ಹೆಣದ ಕಾಲಬಲ್ಲೆ ಕುಂತ ಉಣ್ಣುತು ನೋಡ. ಊರ ಮಂದಿ ಎಲ್ಲಾ ‘ಆ ಪರಮಾತ್ಮ ಆಡಸದಂಗ’ ಅದ ಅಂತ ಹೇಳಿ ಸುಮ್ಮನಾದರು.

‘ಈಗ ಇಷ್ಟು ದೊಡ್ಡ ಕೋಣ ಆಗ್ಯಾದ ಸ್ವಂತ ಅಪ್ಪನ ಹೆಣದ ಮುಂದ ನಾಕ ಹನಿ ಅಳಬಾರದ’ ಅಂತ ಅಜ್ಜಿ ಮಾತಾಡಿಕೊಂಡಿತು.

ಅವರಪ್ಪನ ಮಣ್ಣು ಆದಮೇಲೆ ಮರುದಿನ ದಿನೇಶ್ ಕೇಳಿದ ‘ಯಾಕಲೇ ನಿನೌವನ ನಿಮ್ಮಪ್ಪನೆದುರು ನಾಲ್ಕ ಹನಿ ಅಳಲಿಲ್ಲ ಅಲ್ಲೊ?’
‘ಯಾಕೋ ಏನೋ ಅಳುನೆ ಬರಲಿಲ್ಲ’ ಎಂದ ಗಂಗಾಧರ.

ಅಪ್ಪನ ಮುಂದೆ ಅಳಲಾರದವ ಇವತ್ತು ಮೀನಾ ಹೆಣದ ಮುಂದ ಅತ್ತಾನ ಅಂದರ ಏನದ ಇದರ ಒಳಗಿಂದ ಮಾತು ಎಂದು ತಿಳಿದುಕೊಳ್ಳಬೇಕೆನ್ನುವ ಕೆಟ್ಟ ಕುತೂಹಲ ದಿನೇಶನಿಗೆ ಸೇರಿದಂತೆ ಊರಿನವರಿಗೂ ಇತ್ತು. ಮೀನಾ ಮಣ್ಣು ಮಾಡಿದ ಮರುದಿನವೇ ದಿನೇಶ ಹೆಗಲಿಗೊಂದು ಬ್ಯಾಗ್ ಏರಿಸಿಕೊಂಡು ಸಿಟಿಗೆ ಹೋಗಿ ಗಂಗಾಧರನ ಮನೆ ಹಾದಿ ಹಿಡಿದ. ಪೋರ್ಟಿಕೊದಲ್ಲಿ ಕಣ್ಣು ಮುಚ್ಚಿ ಕೂತಿದ್ದ ಗಂಗಾಧರ ಇವ ಬರುವುದು ಅವನಿಗೆ ಮೊದಲೆ ಗೊತ್ತಿದೆ ಏನೋ ಎಂಬಂತೆ ಪಕ್ಕದಲ್ಲಿ ಚೇರ್ ಕೊಟ್ಟು ‘ನೋಡೊ ದಿನೇಶ ನನ್ನಪ್ಪ ಸತ್ತಾಗ ಯಾಕ ಅಳಬೇಕು ಅನ್ನಸಲಿಲ್ಲವೋ ನನಗೆ ಈಗಲೂ ಗೊತ್ತಿಲ್ಲ. ಅವನ ಜೊತೆ ನೆನಪು ಭಾಳ ಇದಾವೆ. ಆದರೆ ಯಾವು ಕೂಡ ಕಣ್ಣೀರು ಬರಸಲಿಲ್ಲ. ನೀ ನಮ್ಮಪ್ಪನ ಹೆಣ ನೋಡಿದ್ದಿ? ಅವನೌನ ಹೆಂಗ ಮಲಗಿದ್ದ ಹುಲಿ, ಅದೆ ಖಡಕ್ ಮುಖ ಇತ್ತು. ಹೆಂಗ ಅಳಬೇಕೊ ಅದರ ಎದುರು?

‘ಮೀನಾ ಸುದ್ದಿ ತಗೋ, ನನ್ನ ಮೈಮೇಲಿನ ಪ್ರತಿ ಕೂದಲಿಗೂ ಅವಳ ವಾಸನೆ ಗೊತ್ತದ, ಅವಳ ಮುಖ ನೋಡಿದಿ ಹೆಂಗ ಕಪ್ಪು ಆಗಿತ್ತು. ಆ ಮುಖಕ್ಕೆ ಅಲ್ವಾ ನಾ ಮುತ್ತಿಟ್ಟದ್ದು’ ಎಂದು ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದ.

ಅವರಿಬ್ಬರೂ ಮಾತಾಡುತ್ತ ಕೂತವರು, ಬಿದಿರಿನ ಗುಂಪು ಗಿಡಗಳತ್ತ ನಡೆದರು. ತನ್ನ ಬದುಕಿನ ಅಂತ್ಯವೆಲ್ಲ ಅವುಗಳ ಬುಡದಲ್ಲಿಯೇ ಇರುವಂತೆ ದಿನೇಶನಿಗೆ ಗಂಗಾಧರ ಅದರ ಮೈಮಾಟಗಳೆಲ್ಲ ವರ್ಣಿಸುತ್ತಿದ್ದ. ಚೂಪಾದ ಬಿದಿರೊಂದು ಹೊಟ್ಟೆಯಲ್ಲಿ ಯಾರೋ ತಿವಿಯುತಿರುವಂತೆ ಆಗಿ ರಾತ್ರಿಯಲ್ಲ ಕಣ್ಣಿಗೆ ನಿದ್ದೆಯೇ ಇಲ್ಲವೆಂದು ದಿನೇಶನಿಗೆ ಹೇಳಿ, ಬಿಕ್ಕುತ್ತ ಮಗುವಂತೆ ಅತ್ತ…

(ಲೇಖಕರು ಯುವ ಬರಹಗಾರರು, ಪ್ರಕಾಶಕರು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...