Homeಮುಖಪುಟಬಳೆ, ಗಂಡುಭಾಷೆ, ಲಿಂಗ ರಾಜಕಾರಣ ಇತ್ಯಾದಿ

ಬಳೆ, ಗಂಡುಭಾಷೆ, ಲಿಂಗ ರಾಜಕಾರಣ ಇತ್ಯಾದಿ

- Advertisement -

| ಸಂಜ್ಯೋತಿ ವಿ.ಕೆ |

“ಕೆಲಸ ಮಾಡಲಾಗದಿದ್ದರೆ ಕೈಗೆ ಬಳೆ ತೊಟ್ಟುಕೊಳ್ಳಿ” ಇದು ಇತ್ತೀಚೆಗೆ ಸಂಸದೆ ಶೋಭ ಕರಂದ್ಲಾಜೆಯವರು ಸಿದ್ಧರಾಮಯ್ಯನವರ ಕುರಿತು ನೀಡಿದ ಹೇಳಿಕೆ.
‘ಕೈಲಾಗದಿದ್ದರೆ ಸೀರೆ ಉಟ್ಟುಕೊ’, ‘ನಾನೇನು ಬಳೆ ತೊಟ್ಟುಕೊಂಡಿಲ್ಲ’, ‘ಬಳೆ ಕಳಿಸಿಕೊಡಲೇ’, ‘ಬಳೆ ತೊಟ್ಟು/ಸೀರೆಯುಟ್ಟು ಮನೆಯಲ್ಲಿ ಕೂರು’ ಹೀಗೆ ಹೆಣ್ಣು ‘ಕೆಲಸಕ್ಕೆ ಬಾರದವಳು’ ಅಥವಾ ‘ಕೆಲಸಕ್ಕೆ ಬಾರದಿರುವವರೆಲ್ಲ ಹೆಣ್ಣಿನಂತೆ’ ಎಂಬರ್ಥದ ಇಂತಹ “ಗಂಡುಭಾಷೆ”ಯ ಮಾತುಗಳನ್ನಾಡಿರುವುದರಲ್ಲಿ ಈಕೆ ಮೊದಲ ರಾಜಕಾರಣಿಯೂ ಅಲ್ಲ, ದುರದೃಷ್ಟವಶಾತ್ ಮೊದಲ ಮಹಿಳಾ ರಾಜಕಾರಣಿಯೂ ಅಲ್ಲ.
ಈ ಭಾಷಾ ರಾಜಕಾರಣದ ಹಿಂದಣ ಮನಸ್ಥಿತಿ, ಅದನ್ನು ಹುಟ್ಟುಹಾಕುವ ಲಿಂಗರಾಜಕಾರಣದ ಆಳ-ಹರಹು ಬಹಳ ದೊಡ್ಡದು. ಇಲ್ಲಿ ಮುಖ್ಯವಾಗಿ ಮೂರು ವಿಷಯಗಳನ್ನು ಗಮನಿಸಬೇಕಿದೆ.

ಮೊದಲನೆಯದು ಇಂತಹ ಮಾತುಗಳ ಮೂಲಕ ಕಟ್ಟಿಕೊಡುವ ಹೆಣ್ಣಿನ ಚಿತ್ರಣ. ಇಂತಹ ಎಲ್ಲ ಮಾತುಗಳ ಒಟ್ಟು ಸಾರಾಂಶ; ‘ಕೆಲಸಕ್ಕೆ ಬಾರದವರೆಲ್ಲ ಹೆಣ್ಣಿನಂತೆ’ ಅಥವಾ ‘ಹೆಣ್ಣುಗಳು ಅಪ್ರಯೋಜಕರು, ಕೆಲಸಕ್ಕೆ ಬಾರದವರು’. ಇಲ್ಲಿ ‘ಕೆಲಸ’ ಎಂದರೆ “ಹೊರ ಜಗತ್ತಿನಲ್ಲಿ ಮಾಡಬೇಕಾದ ಕೆಲಸಗಳು. ಅದರಲ್ಲೂ ಬೌದ್ಧಿಕತೆಯ ಅಗತ್ಯವಿರುವ, ಕಷ್ಟವೆನಿಸುವ ಸಂದರ್ಭಗಳನ್ನು ನಿಭಾಯಿಸುವ ಛಾತಿ ಬೇಡುವ ಕೆಲಸಗಳು(ಪ್ರಸ್ತುತ ಸಂದರ್ಭದಲ್ಲಿ ರಾಜಕಾರಣ). ಇವೆಲ್ಲವೂ ಕೇವಲ ಗಂಡು ಮಾಡಬೇಕಾದ, ಗಂಡು ಮಾತ್ರವೇ ಮಾಡಬಲ್ಲಂತ ಕೆಲಸಗಳು. ಇಂಥವನ್ನು ಮಾಡಲು ಲಾಯಕ್ಕಿಲ್ಲದ ಹೆಣ್ಣು ಯಾವುದೇ ಮಹತ್ವವಿಲ್ಲದ, ಕಿಮ್ಮತ್ತಿಲ್ಲದ ಮನೆಗೆಲಸ ಮಾಡಿಕೊಂಡು ಮನೆಯಲ್ಲಿರಬೇಕಾದುದು ಸಹಜ” ಎನ್ನುವ ಅರ್ಥವನ್ನು ಈ ಮಾತುಗಳು ಹೊಮ್ಮಿಸುತ್ತವೆ.

ಇಲ್ಲಿ ಸಾಮಾಜಿಕವಾಗಿ ಹೆಣ್ಣು-ಗಂಡಿನ ಪಾತ್ರಗಳನ್ನು ಲಿಂಗಾಧಾರಿತವಾಗಿ ನಿರ್ದಿಷ್ಟಗೊಳಿಸುವ ಮನಸ್ಥಿತಿಯು ಗಂಡಿನ ಆಯ್ಕೆಗಳನ್ನು ಆತನ ಅನುಕೂಲಕ್ಕನುಗುಣವಾಗಿ ಹೆಣ್ಣಿನ ಮೇಲೆ ಹೇರುತ್ತಿದೆ. ತನ್ನ ವ್ಯಕ್ತಿತ್ವವನ್ನು ನಿರೂಪಿಸಬಲ್ಲಂತ, ಅರ್ಥಪೂರ್ಣವೆನಿಸುವಂತೆ ಬದುಕಬಲ್ಲಂತ, ಆರ್ಥಿಕವಾಗಿ ಲಾಭದಾಯಕವಾದಂತಹ ಎಲ್ಲ ಆಯ್ಕೆಗಳನ್ನು ಸಹಜವಾಗಿ ಗಂಡಿನದು ಎನ್ನುತ್ತಲೇ ಅನಿವಾರ್ಯವೆನಿಸುವ, ವೈಯಕ್ತಿಕವಾಗಿ ಯಾವ ಗುರುತಿಸುವಿಕೆಯೂ ಇಲ್ಲದ, ಆರ್ಥಿಕ ಗಳಿಕೆಗೆ ಅವಕಾಶವಿರದ ಮನೆಗೆಲಸಗಳನ್ನು ಹೆಣ್ಣಿನ ಪಾಲಿನ ಸಹಜ ಕರ್ತವ್ಯವಾಗಿಸುವ ಈ ಪ್ರಕ್ರಿಯೆ ಬಹಳ ನಾಜೂಕಾಗಿ ಹೆಣ್ಣಿನ ಮೇಲೆ ಹೇರಲ್ಪಟ್ಟಿದೆ. ಬಹುಪಾಲು ಆಕೆಗೂ ಅದನ್ನು ಸಹಜ ಎಂದು ನಂಬಿಸಲಾಗಿದೆ. ನೈಸರ್ಗಿಕವಾಗಿ ಮಕ್ಕಳನ್ನು ಹೆರುವ ಮತ್ತು ಆ ಸಂದರ್ಭದಲ್ಲಿನ ಮಗುವಿನ ಆರೈಕೆಯ ಅಗತ್ಯದ ನೆಪವನ್ನೇ ಹಿಡಿದು, ಹೆಣ್ಣಿಗೆ ಆಕೆಯ ಇಡೀ ಜೀವನದ ಆಯ್ಕೆಯ ಹಕ್ಕನ್ನು ನಿರಾಕರಿಸುವ ಹುನ್ನಾರವನ್ನು ಸಮಾಜ ಹೂಡುತ್ತಲೇ ಬಂದಿದೆ. ಇಷ್ಟೆಲ್ಲ ಮಾಡಿ, ನಂತರ ‘ಹೆಣ್ಣಿನ ಪಾಲಿನ’ ಕೆಲಸವನ್ನು ನಿಕೃಷ್ಟವೆಂಬಂತೆ ಬಿಂಬಿಸಿ ಆಕೆಯನ್ನು ‘ಕೆಲಸಕ್ಕೆ ಬಾರದವಳು’ ಎನ್ನುವುದು (ಅಥವಾ ಕೆಲಸಕ್ಕೆ ಬಾರದವರು ಅನಿಸುವವರನ್ನೆಲ್ಲ ಹೆಣ್ಣಿಗೆ ಹೋಲಿಸುವುದು) ಸಲೀಸಾಗಿ ನಡೆದಿದೆ.

ಹೆಣ್ಣಿಗೆ ವಿದ್ಯಾಭ್ಯಾಸದ ಹಕ್ಕನ್ನು ನಿರಾಕರಿಸಿ, ಬಾಲ್ಯದಲ್ಲೇ ವಿವಾಹ ಮಾಡಿ, ಮನೆಯ ಚೌಕಟ್ಟಿನೊಳಗೇ ಆಕೆಯನ್ನು ಬಂಧಿಸಿಟ್ಟು, ಆಸ್ತಿಯ ಹಕ್ಕನ್ನು ನಿರಾಕರಿಸಿ, ಆಕೆಗೆ ಆರ್ಥಿಕವಾಗಿ ಸಬಲಳಾಗುವಂತ ಆಯ್ಕೆಗಳನ್ನು ನಿರಾಕರಿಸಿ, ಆಕೆಯ ಜೀವನದ ಪರಮ ಪವಿತ್ರ ಕರ್ತವ್ಯವೆಂಬಂತೆ ಬಿಂಬಿಸುತ್ತಾ ಆಕೆಯನ್ನು ಹೆರುವ ಹೊರುವ ಪೆÇರೆಯುವ ಯಂತ್ರವಾಗಿಸಿ, ಏನೆಲ್ಲವನ್ನು ಮಾಡುತ್ತಾ ಬಂದರೂ ಕಾಲಾಂತರದಲ್ಲಿ ಹೆಣ್ಣು ಇಂತಹ ಹಲವಾರು ಅಡೆತಡೆಗಳನ್ನು ಮೆಟ್ಟಿ ಮುನ್ನಡೆಯುವ ಸಾಹಸವನ್ನು ಮಾಡುತ್ತಲೇ ಬಂದಿದ್ದಾಳೆ.
ಅನೇಕ ವಿಷಯಗಳಲ್ಲಿ, ಏಕಕಾಲದಲ್ಲಿ ಹಲವು ಕಾಲಮಾನಗಳ ವೈರುಧ್ಯಗಳನ್ನು ಬದುಕುತ್ತಿರುವ ಭಾರತದಲ್ಲಿ ಹೆಣ್ಣಿನ ವಿಷಯದಲ್ಲೂ ಅದನ್ನೇ ಕಾಣುತ್ತೇವೆ. ಇತಿಹಾಸದಲ್ಲಿ ಇಂತಹ ದುರಿತ ದಮನದ ನಡುವೆಯೂ ನಮ್ಮದೇ ನೆಲದ ಅಕ್ಷರದವ್ವ ಸಾವಿತ್ರ ಬಾಫುಲೆ, ರಾಣಿ ಚೆನ್ನಮ್ಮನಿಂದ, ದೇಶದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ, ಅಸ್ಟ್ರೋನಾಟ್ ಕಲ್ಪನಾ ಛಾವ್ಲಾವರೆಗೆ ಸಾಧನೆಯನ್ನು ತೋರಿದ ಹಲವು ಮಹಿಳೆಯರ ದಿಟ್ಟ ಉದಾಹರಣೆಗಳು ಕಣ್ಣ ಮುಂದೆಯೇ ಇದ್ದರೂ, ಇಂದಿಗೂ ಮನೆಯ ಮಗನ ವಿದ್ಯಾಭ್ಯಾಸಕ್ಕಾಗಿ ತನ್ನನ್ನು ಶಾಲೆ ಬಿಡಿಸಿ ಮನೆಗೆಲಸಕ್ಕೆ ಹಚ್ಚುವುದನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾದ ಹೆಣ್ಣುಮಕ್ಕಳ ಸಂಖ್ಯೆಯೂ ಇಲ್ಲಿ ಕಡಿಮೆ ಇಲ್ಲ.

1983ರಲ್ಲಿ ಕ್ಯಾಲಿಫೆರ್ನಿಯಾ ವಿಶ್ವವಿದ್ಯಾಲಯದ ಸಮಾಜಶಾಸ್ತ್ರಜ್ಞ ಎರ್ಲಿ ರಸಲ್ ಹೋಸ್ಚೈಲ್ಡ್ ‘ಎಮೋಷನಲ್ ಲೇಬರ್’ ಎಂಬ ಪದಪುಂಜವನ್ನು ಹುಟ್ಟುಹಾಕಿದ. ಉದ್ಯೋಗದ ಸ್ಥಳದಲ್ಲಿ ಗ್ರಾಹಕರಲ್ಲಿ ಅಪೇಕ್ಷಿತ ಭಾವನೆಗಳನ್ನು ಉದ್ದೀಪಿಸಲು ಬೇಕಾದಂತ ಕಾರ್ಯಕ್ಷಮತೆ ಎಂಬರ್ಥದಲ್ಲಿ ಈ ಪದಪುಂಜ ಬಳಕೆಗೆ ಬಂತು. ಉದಾಹರಣೆಗೆ, ಒಂದು ಹೋಟೆಲಿನ ಸ್ವಾಗತಕಾರ ಗ್ರಾಹಕರಲ್ಲಿ ಉಲ್ಲಾಸ ಮೂಡಿಸುವುದಕ್ಕಾಗಿ ಪ್ರವೇಶದ್ವಾರದಲ್ಲಿ ನೀಡುವ ನಗೆಮೊಗದ ಸ್ವಾಗತ, ಶುಭಹಾರೈಕೆ. ಇತ್ತೀಚಿನ ದಿನಗಳಲ್ಲಿ ಈ ‘ಎಮೋಷನಲ್ ಲೇಬರ್’ ಪದಗುಚ್ಚ ತನ್ನ ಅರ್ಥವನ್ನು ವಿಸ್ತರಿಸಿಕೊಂಡು, ಅದು ಮನೆಯಲ್ಲಿ ಸಂಗಾತಿಗಳ ನಡುವೆ ತಮ್ಮೊಳಗೆ ಮತ್ತು ಪರಸ್ಪರರಲ್ಲಿ ಸಂತೋಷವನ್ನು, ಬದುಕಿನ ಬಗೆಗೆ ಸಂತೃಪ್ತಿಯನ್ನು ಹೆಚ್ಚಿಸಿಕೊಳ್ಳಲು, ಮನೆಯ ಜವಾಬ್ದಾರಿಗಳನ್ನು ಅದರಲ್ಲೂ ಬಹುತೇಕ ಹೆಣ್ಣಿನ ಮೇಲೆ ಹೆಚ್ಚಿನ ಹೊರೆಯಾಗಿರುವ ಮನೆಗೆಲಸಗಳನ್ನು ಹಂಚಿಕೊಳ್ಳುವ ಬಗೆ ಹೇಗೆ? ಎಂಬ ವಿಷಯವನ್ನು ಒಳಗೊಂಡು ಚರ್ಚಿಸಲ್ಪಡುತ್ತಿದೆ. ಒಂದೆಡೆ ಜಗತ್ತು ‘ಮನೆಗೆಲಸವೆಂಬುದು ಶ್ರೇಷ್ಠವೋ ಕನಿಷ್ಠವೋ ಅಲ್ಲ, ಅದು ಎಲ್ಲರ (ಕೇವಲ ಹೆಣ್ಣಿನದ್ದಲ್ಲ) ಅಗತ್ಯ ಅನಿವಾರ್ಯತೆಗೆ ಸಂಬಂಧಿಸಿದ್ದು, ಹೆಣ್ಣನ್ನು ಮನೆಗೆಲಸಕ್ಕೆ ಸೀಮಿತಗೊಳಿಸುವುದು ಆಕೆಯ ಬದುಕಿನ ಆಯ್ಕೆಯನ್ನು ಮುರುಟಿಸುವುದು ಮಾತ್ರವಲ್ಲ ಅದು ಆಕೆಯ ಸಂಗಾತಿಗೂ, ಒಟ್ಟಾರೆ ಮನುಷ್ಯರ ಬದುಕಿನ ಸ್ವಾಸ್ಥ್ಯಕ್ಕೂ ಮಾರಕ’ ಎಂದು ಕಂಡುಕೊಂಡು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಯೋಚಿಸುತ್ತಿರುವಾಗಲೇ ಇಲ್ಲಿ ಅದನ್ನೇ ನಿಕೃಷ್ಟವೂ ಕನಿಷ್ಠವೂ ಎಂಬಂತೆ ಹೀಗಳೆಯುತ್ತಾ ಒಬ್ಬ ಮಹಿಳೆಯೇ ಹೀಗೆ ಅಗ್ಗವಾಗಿ ಮಾತಾಡುತ್ತಿರುವುದು ದುರದೃಷ್ಟಕರ.
ಇದು ಎರಡನೆಯ ಮುಖ್ಯ ವಿಷಯ; ಮಹಿಳೆಯರೇ ಇಂತಹ ಗಂಡುಭಾಷೆಗೆ ಒಗ್ಗಿಕೊಂಡು ತಾವೂ ಅದನ್ನೇ ಬಳಸುತ್ತಾ ಹೀಗೆ ಹೆಣ್ಣಿನ ಅಸ್ಮಿತೆಯನ್ನೇ ಅವಮಾನಿಸುವ ದುರಂತ. “ಹೀಗೆ ಸಮಾಜ ಕಟ್ಟಿಟ್ಟಿರುವ ಚೌಕಟ್ಟಿನಲ್ಲಿ ತನ್ನನ್ನು ತಾನು ಗುರುತಿಸಿಕೊಂಡರೆ ಮಾತ್ರವೇ ತನಗೊಂದು ಗುರುತು, ಇಲ್ಲವಾದರೆ ಆಕೆ ಹೆಣ್ಣೇ ಅಲ್ಲ” ಎಂಬುದನ್ನು ಚಿಕ್ಕಂದಿನಿಂದಲೇ ಹೆಣ್ಣು, ಗಂಡುಗಳಿಬ್ಬರಲ್ಲೂ ತುಂಬಿ ಬೆಳೆಸುವವರು ಗಂಡುಗಳು ಮಾತ್ರವಲ್ಲ, ಗಂಡು ಮನಸ್ಥಿತಿಯ ಹೆಣ್ಣುಗಳು ಕೂಡಾ. ಈಗೊಂದೆರಡು ಮೂರು ದಶಕಗಳ ಹಿಂದಾದರೆ ಸ್ತ್ರೀ ಸಮಾನತೆ, ಸಬಲೀಕರಣದ ಚರ್ಚೆ, ಪ್ರಯತ್ನಗಳು ನಮ್ಮ ಸಮಾಜದಲ್ಲಿ ನಡೆದಿತ್ತಾದರೂ, ಹೆಣ್ಣುಮಕ್ಕಳ ವಿದ್ಯಾಭ್ಯಾಸ ಇಷ್ಟು ವ್ಯಾಪಕವಾಗಿರಲಿಲ್ಲ. ಹೆಣ್ಣಿನ ಅಸ್ತಿತ್ವವೇ ಹೀಗೆ ಗಂಡು ಮನಸ್ಥಿತಿಯೊಂದಿಗೆ ಗುರುತಿಸಿಕೊಳ್ಳುವ ಅನಿವಾರ್ಯತೆ ಎಂಬಂತಿತ್ತು. ಸಿದ್ಧಮಾದರಿಯನ್ನು ಒಡೆಯುವ ಆಲೋಚನೆ, ಪ್ರಯತ್ನ ಮಾಡುವವರನ್ನು ‘ನೀನು ಹೆಣ್ಣೇ?’ ಎಂಬಂತಹ ಪ್ರಶ್ನೆಗಳ ಮೂಲಕ ಒಂಟಿಯಾಗಿಸುವುದು ಸುಲಭವಿತ್ತು. ಇಂತಹ ವಾತಾವರಣದಲ್ಲಿ ಗಂಡು ಮನಸ್ಥಿತಿಯನ್ನೇ ಒಪ್ಪಿ ಆವಾಹಿಸಿಕೊಳ್ಳತ್ತಿದ್ದ ಹೆಣ್ಣಗಳನ್ನೇ ಅದಕ್ಕೆ ಪೂರ್ಣ ಜವಾಬ್ದಾರರನ್ನಾಗಿಸುವುದು ಸಾಧ್ಯವಿರಲಿಲ್ಲ. ಅದರ ಮೂಲವಿದ್ದದ್ದು ಹೆಣ್ಣನ್ನು ಅನಿವಾರ್ಯವಾಗಿ ಅವಲಂಬಿಯಾಗಿಸಿಟ್ಟಿದ್ದ ಪುರುಷಾಧಿಪತ್ಯದಲ್ಲಿ. ಆದರೆ ಇಂದಿನ ಶೈಕ್ಷಣಿಕ ಅಭಿವೃದ್ಧಿ, ಸಾಮಾಜಿಕ ಮಾಧ್ಯಮ/ಜಾಲತಾಣಗಳ ವ್ಯಾಪಕತೆ ಮಹಿಳೆಯರಿಗೆ ವಿಷಯಾಧಾರಿತ ಚರ್ಚೆಗಳಿಗೆ ತೆರೆದುಕೊಳ್ಳುವ ಅವಕಾಶಗಳನ್ನು ಗಣನೀಯವಾಗಿ ಹೆಚ್ಚಿಸಿವೆ. (ಅದಾಗ್ಯೂ ಇವೆಲ್ಲದರಿಂದ ಹೊರಗುಳಿದಿರುವ ಮಹಿಳೆಯರ ಸಂಖ್ಯೆಯೂ ಗಣನೀಯವಾಗಿದೆ. ಅವರನ್ನು ಒಳಗೊಳ್ಳುವ ಪ್ರಕ್ರಿಯೆ ಸಹ ಜೊತೆಜೊತೆಗೇ ಆಗಬೇಕಿದೆ). ಆದರೆ ಹಾಗೆ ಇಂತಹ ಅವಕಾಶಗಳಿಗೆ ತೆರೆದುಕೊಂಡ ಹೆಣ್ಣುಮಕ್ಕಳೂ ಮತ್ತೆ ಈ ಗಂಡುಭಾಷೆಯನ್ನೇ ತಮ್ಮದಾಗಿಸಿಕೊಳ್ಳುವುದು ಅತ್ಯಂತ ವಿಷಾದದ ಸಂಗತಿ.
‘ಸ್ವಾತಂತ್ರ್ಯ, ಆಯ್ಕೆ ಮತ್ತು ಬದುಕಿನ ಘನತೆಯನ್ನು ನೀಡದ ಯಾವುದೇ ವ್ಯವಸ್ಥೆಯನ್ನು, ರೂಢಿಗತ ಆಚರಣೆಯನ್ನು, ಜೀವನ ಮಾರ್ಗವನ್ನು ಬಿಟ್ಟು, ಅದನ್ನು ಮೀರಿ ಬೆಳೆಯುವುದೇ ಮನುಷ್ಯರ ನಿಜವಾದ ಉನ್ನತಿ’ ಎಂಬ ಅರಿವು ಹೆಣ್ಣು-ಗಂಡುಗಳಿಬ್ಬರಿಗೂ ಒಟ್ಟಾರೆ ಮನುಷ್ಯ ಕುಲಕ್ಕೇ ದಕ್ಕಬೇಕಿದೆ.


ಸ್ತ್ರೀ ಸಮಾನತೆಯ ಕುರಿತಾಗಿ ಇಂತಹ ಪ್ರಗತಿಪರ ನಿಲುವು ಸಮಾಜದಲ್ಲಿ ಬೆಳೆಯಲು ಅದಕ್ಕೆ ಕಾನೂನಿನ, ಶಾಸನಗಳ ಬಲವೂ ಅಗತ್ಯ. ಪ್ರಸ್ತುತ ಸಂದರ್ಭದಲ್ಲಿ, ಇಂದಿಗೂ ಪುರುಷಾಧಿಪತ್ಯದ ಕ್ಷೇತ್ರವೇ ಆಗಿರುವ ರಾಜಕಾರಣದಲ್ಲಿ ಬಲವಾಗಿಯೇ ಗುರುತಿಸಿಕೊಂಡಿರುವ ಸಂಸದೆ ಶೋಭ ಕರಂದ್ಲಾಜೆ ಅದನ್ನು ಮರೆತು ಹೀಗೆ ಹೆಣ್ಣನ್ನು ಅವಮಾನಿಸುವಂತ ಮಾತಾಡಿರುವುದು ಖೇದಕರ.
ಇದು ನಾವು ಗುರುತಿಸಿಕೊಳ್ಳಬೇಕಾದ ಮೂರನೆಯ ವಿಷಯ; ಇಂತಹ ಮಾತುಗಳನ್ನು ರಾಜಕಾರಣಿಗಳು ಬಳಸುವುದರ ಅರ್ಥ, ಅದರಲ್ಲೂ ಮಹಿಳಾ ರಾಜಕಾರಣಿಗಳು ಬಳಸುವುದರಲ್ಲಿನ ಅಪಾಯ ಮತ್ತು ಅದರ ಪರಿಣಾಮದ ವ್ಯಾಪ್ತಿ. ಪ್ರಜಾಪ್ರಭುತ್ವದಲ್ಲಿ ನಮ್ಮನ್ನು ಪ್ರತಿನಿಧಿಸುವ ಸಂಸದರು, ಶಾಸಕರು ನಮ್ಮ ಪರವಾಗಿ ಶಾಸನಗಳನ್ನು ರೂಪಿಸುವವರು. ಇಂತಹವರು ಸಾಧ್ಯವಾದಷ್ಟೂ ಮನುಷ್ಯಪರವಾಗಿ, ಎಲ್ಲ ಬಗೆಯ ಸಮಾನತೆಯ ಪರವಾಗಿ ಆಲೋಚಿಸುವ ಮತ್ತು ಅದನ್ನೇ ಶಾಸನ ಸಭೆಗಳಲ್ಲಿ ಪ್ರತಿನಿಧಿಸುವಂತವರಾಗಿ ಇರಬೇಕಾದ್ದು ಅವಶ್ಯ.
ಸ್ತ್ರೀವಾದ, ಮಹಿಳಾ ಸಬಲೀಕರಣದ ಆರಂಭಿಕ ಹೋರಾಟದ ದಿನಗಳಲ್ಲಿ ಅಮೆರಿಕಾದಂತಹ ದೇಶಗಳಲ್ಲೂ ಮಹಿಳೆಯರ ಮತದಾನದ ಹಕ್ಕಿಗಾಗಿ ಹೋರಾಟ ನಡೆದಿದ್ದರ ಮಹತ್ವವನ್ನು ಮರೆಯುವಂತಿಲ್ಲ. ಸ್ವತಂತ್ರ ಭಾರತದಲ್ಲಿ ಆರಂಭದಿಂದಲೇ ಸ್ತ್ರೀಯರಿಗೆ ಮತದಾನದ ಹಕ್ಕು ನೀಡಿರುವುದು ಸರಿಯಾದ ನಡೆ. ಭಾರತ ಮಟ್ಟಿಗೆ ಸೂಕ್ಷ್ಮ ಮನಸ್ಸಿನ ಅಪ್ಪಟ ಸ್ತ್ರೀಪರ ರಾಜಕಾರಣಿ
ಡಾ| ಅಂಬೇಡ್ಕರ್ ಸಂವಿಧಾನದಲ್ಲೇ ಲಿಂಗಾಧಾರಿತವಾಗಿ ಸ್ತ್ರೀಯರ ವಿರುದ್ಧ ಯಾವುದೇ ಅಸಮಾನತೆಗೆ ಅವಕಾಶವಿಲ್ಲದಂತೆ ಅದನ್ನು ರೂಪಿಸಿದ್ದಾರೆ.

ಆದರೆ ನಮ್ಮ ಚುನಾಯಿತ ಪ್ರತಿನಿಧಿಗಳು, ಇಂತಹ ಸೂಕ್ಷ್ಮಗಳಿಗೆ ಹೊರತಾಗಿ, ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿ, ಸ್ತ್ರೀವಿರೋಧಿ ನಿಲುವಿನವರಾದರೆ, ಮೊದಲೇ ಸಾಮಾಜಿಕವಾಗಿ ಗಟ್ಟಿಗೊಳ್ಳದ ಸಮಾನತೆಯ ಆಶಯ ಇನ್ನೂ ದುರ್ಬಲಗೊಳ್ಳುತ್ತದೆ.
ಈಗ ಮತದಾನದ ಹಕ್ಕಷ್ಟೇ ಸಾಲದು, ‘ನಿಜಕ್ಕೂ ‘ಸ್ಟೇಟ್’ ಎಂಬುದು ಮಹಿಳಾ ಸಮಾನತೆಯ ಪರವಾಗಿ ನಿಲ್ಲಬೇಕಾದಲ್ಲಿ ಶಾಸನ ರೂಪಿಸುವಲ್ಲಿಯೂ ಮಹಿಳೆಯೇ ಪಾಲುದಾರಳಾಗಬೇಕಾದ್ದು ಅನಿವಾರ್ಯ’ ಎಂಬ ಅರಿವಿನೊಂದಿಗೆ ಶಾಸನಸಭೆಗಳಲ್ಲಿ ಮೂರನೇ ಒಂದರಷ್ಟು ಸ್ಥಾನಕ್ಕೆ ಮಹಿಳಾ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ ತುಂಬ ಮಹತ್ವದ್ದು. ಪುರುಷಾಧಿಪತ್ಯ ಮನಸ್ಥಿತಿಯ ಯಾವುದೇ ಪಕ್ಷವೂ ಇದನ್ನು ಜಾರಿಗೆ ತರುವ ಮನಸ್ಸು ಮಾಡದಿರುವಾಗ ನಿಜಕ್ಕೂ ನಮಗೆ ಉಳಿದಿರುವ ಭರವಸೆ ರಾಜಕೀಯದಲ್ಲಿರುವ ಸ್ತ್ರೀಯರು ಮತ್ತು ಕೆಲವೇ ಸಮಾನತಾವಾದಿ ಪುರುಷ ರಾಜಕಾರಣಿಗಳು.

ಈ ಸಂದರ್ಭದಲ್ಲಿ ಶೋಭಾರವರ ಮಾತನ್ನಿಟ್ಟು ನೋಡಿದಾಗ ಬಹಳ ನಿರಾಸೆಯಾಗುತ್ತದೆ. ಮಹಿಳಾ ರಾಜಕಾರಣಿಗಳು ಈ ಗಂಡು ಮನಸ್ಥಿತಿಯನ್ನು ತೋರುವುದು ಇನ್ನೂ ಅಪಾಯಕಾರಿ. ಮಹಿಳಾ ರಾಜಕಾರಣಿಗಳು ತಾವೇ ಸ್ವತಃ ಸಿದ್ಧಮಾದರಿಗೆ ವಿರುದ್ಧವಾಗಿ ಪುರುಷಾಧಿಪತ್ಯದ ರಾಜಕಾರಣ ಕ್ಷೇತ್ರದಲ್ಲಿ ಒಂದು ಮಟ್ಟಿಗೆ ನೆಲೆ ನಿಂತಿದ್ದಾಗ್ಯೂ, ಹೀಗೆ ಸ್ತ್ರೀ ಸ್ವಾತಂತ್ರ್ಯ, ಸಮಾನತೆಗಳ ವಿರುದ್ಧ ಮಾತನಾಡುವಾಗ ಅವರು “ತಾನು ಮಾತ್ರ ಒಬ್ಬ ಅಸಾಧಾರಣ ಹೆಣ್ಣು ಅಥವಾ ‘ಗಂಡಿನಂತಾ ಹೆಣ್ಣು’, ಆದರೆ ಸಾಮಾನ್ಯವಾಗಿ ಹೆಣ್ಣು ಹೀಗಿರಬೇಕಿಲ್ಲ, ಹೀಗಿರಲು ಸಾಧ್ಯವಿಲ್ಲ” ಎಂಬಂತ ಅಪಾಯಕಾರಿ ಸಂದೇಶ ರವಾನಿಸುವ ಪ್ರಯತ್ನದಲ್ಲಿರುತ್ತಾರೆ.
ಪ್ರಸ್ತುತ ಭಾರತದ ಸಾಮಾಜಿಕ ಮತ್ತು ರಾಜಕೀಯದ ಸಂದರ್ಭದಲ್ಲಿ ಮತ್ತೊಂದು ಮುಖ್ಯ ಅಂಶವನ್ನು ಕಡೆಗಣಿಸುವಂತಿಲ್ಲ. ಅದು ಶೋಭಾರ ಇಂತಹ ಗಂಡು ಮನಸ್ಥಿತಿಯ ಹಿಂದೆ ಕೆಲಸ ಮಾಡುತ್ತಿರುವ ಆಕೆಯ ಪಕ್ಷದ ಸಿದ್ಧಾಂತ. ಇದರಿಂದಲೇ ಈ ಪಕ್ಷದ ಅನೇಕ ಚುನಾಯಿತ ಪ್ರತಿನಿಧಿಗಳು ಬಹಿರಂಗವಾಗಿಯೇ ಸ್ತ್ರೀ ವಿರೋಧಿ ದಮನಕಾರಿ ಹೇಳಿಕೆಗಳನ್ನು ನೀಡಿಯೂ ಅದನ್ನು ದಕ್ಕಿಸಿಕೊಳ್ಳಬಹುದು. ಸ್ತ್ರೀಯರು ಸ್ವತಂತ್ರಕ್ಕೆ ಅರ್ಹರೇ ಅಲ್ಲ ಎನ್ನುವ ಜೀವವಿರೋಧಿ ಮನುಸ್ಮೃತಿಯನ್ನು ತಮ್ಮ ಸಂವಿಧಾನ ಎಂದು ಘೋಷಿಸಿಕೊಳ್ಳುವ ಈ ಪಕ್ಷವು ಮನುಸ್ಮೃತಿ ಯೇ ಭಾರತದ ಸಂವಿಧಾನಕ್ಕಿಂತ ಶ್ರೇಷ್ಠ ಎಂಬ ಬಹಿರಂಗ ನಿಲುವುಳ್ಳದ್ದಾಗಿದೆ.

ಅದರಿಂದ ಸಹಜವಾಗಿಯೇ ಒಂದು ರಾಜ್ಯದ ಮುಖ್ಯಮಂತ್ರಿಯಂತ ಜವಾಬ್ದಾರಿಯುತ ಸ್ಥಾನದ ಘನತೆಯನ್ನೂ ಲೆಕ್ಕಿಸದೆ ಆದಿತ್ಯನಾಥ ಬಹಳ ಸುಲಭವಾಗಿ ‘ಸ್ತ್ರೀಯರು ಪುರುಷನ ಅಧೀನದಲ್ಲಿದ್ದು, ತಾಯಿ ಹೆಂಡತಿಯಾಗಿ ತನ್ನ ಕರ್ತವ್ಯ ನಿರ್ವಹಿಸಿದಾಗಲಷ್ಟೇ ಮಹಾನ್ ಪುರುಷರು ಹುಟ್ಟುತ್ತಾರೆ. ಹೆಣ್ಣಿಗೆ ಸ್ವಾತಂತ್ರ್ಯದ ಅಗತ್ಯವಿಲ್ಲ, ರಕ್ಷಣೆಯ ಅಗತ್ಯವಿದೆ’ ಎಂಬಂತ ಕೀಳು ಮಟ್ಟದ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯ. ರಾಜಾಸ್ತಾನದ ಸಂಸದೆ ಶೋಭಾ ಚೌಹಾನ್ ‘ಬಾಲ್ಯವಿವಾಹಕ್ಕೆ ಪೆÇಲೀಸರು ತೊಂದರೆ ಕೊಡದಂತೆ ತಾನು ನೋಡಿಕೊಳ್ಳುತ್ತೇನೆ’ ಎಂಬಂತ ಆಘಾತಕಾರಿ ಚುನಾವಣಾ ಭರವಸೆ ನೀಡಲು ಸಾಧ್ಯ. ಇದೇ ಪಕ್ಷದ ಸಂಸದರಾದ ಸಾಕ್ಷಿ ಮಹಾರಾಜ್, ಅನಂತಕುಮಾರ್ ಹೆಗಡೆ, ನಳಿನ್ ಕುಮಾರ್ ಕಟೀಲ್ ಆದಿಯಾಗಿ ಇನ್ನೂ ಅನೇಕರ ಹೇಳಿಕೆಗಳೂ ಇದೇ ರೀತಿ ಅವಹೇಳನಕಾರಿಯಾಗಿರುವುದು ಅಚ್ಚರಿಯೇನಲ್ಲ.
ಹಾಗಾದರೆ ಬೇರೆ ಪಕ್ಷಗಳ ರಾಜಕಾರಣಿಗಳು ಸ್ತ್ರೀ ಸಮಾನತೆಯ ಪರವಾಗಿದ್ದಾರೆಯೇ ಎಂದರೆ, ನಿಜಕ್ಕೂ ಇಲ್ಲ. ಆದರೆ ಇಲ್ಲಿ ಗಮನಿಸಲೇಬೇಕಾದ ಒಂದು ಮುಖ್ಯವಾದ ವ್ಯತ್ಯಾಸವೆಂದರೆ, ಇತರ ಪಕ್ಷಗಳು ಕನಿಷ್ಠ ಪಕ್ಷ ಬಹಿರಂಗವಾಗಿ ತಮ್ಮ ಸಿದ್ಧಾಂತಗಳನ್ನು ಮತ್ತು ತಮ್ಮನ್ನು ಸಂವಿಧಾನದ, ಸಮಾನತೆಯ ಪರ ಎಂದು ಗುರುತಿಸಿ ಕೊಳ್ಳುತ್ತವೆಯಾದ್ದರಿಂದ ಆ ಪಕ್ಷದ ರಾಜಕಾರಣಿಗಳು ವೈಯಕ್ತಿಕವಾಗಿ ಇಂತಹ ನಿಲುವುಳ್ಳವರಾದರೂ ಅದನ್ನು ಒಂದು ಪಕ್ಷವಾಗಿ ಅವರು ಖಂಡಿಸಬೇಕಾಗುತ್ತದೆ. ಅಂತಹದ್ದರ ವಿರುದ್ಧ ಕನಿಷ್ಠ ಮಟ್ಟದಲ್ಲಾದರೂ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

ಬಹುಸಂಸ್ಕೃತಿಯ ಬಹುತ್ವದ ನಾಡಾದ ನಮ್ಮ ದೇಶದಲ್ಲಿ ಒಂದು ರಾಜಕೀಯ ಪಕ್ಷ, ‘ಸಂಸ್ಕೃತಿ’ ಎಂಬ ಪದದ ಅರ್ಥವನ್ನೇ ಸಂಕುಚಿತಗೊಳಿಸಿ, ಅದನ್ನು ಬಹುಸಂಖ್ಯಾತವಾದದ ಮಟ್ಟಕ್ಕೆ ಇಳಿಸಿಬಿಟ್ಟಿರುವುದು ವಿಷಾದನೀಯ. ಈ ಪಕ್ಷದ ‘ಒಂದು ದೇಶ, ಒಂದು ಭಾಷೆ, ಒಂದು ಧರ್ಮ’ ಎಂಬ ಅತ್ಯಂತ್ಯ ಪ್ರತಿಗಾಮಿ ದೃಷ್ಟಿಕೋನ ಕರಾವಳಿಯವರೇ ಆದ ಶೋಭ ಕರಂದ್ಲಾಜೆಯವರಿಗೆ ತಮ್ಮ
ಮಣ್ಣಿನ ಸಂಸ್ಕೃತಿಯನ್ನೇ ಅವಮಾನಿಸುವ ಮಬ್ಬು ತರುತ್ತದೆ ಎಂಬುದು ನಿಜಕ್ಕೂ ದುರಂತ. ಕರಾವಳಿಯ ಪತ್ರಕರ್ತ ಮಿತ್ರ ನವೀನ್ ಸೂರಿಂಜೆಯವರು ಒಂದೆಡೆ ಉಲ್ಲೇಖಿಸಿದಂತೆ, “ಶೋಭಾ ಕರಂದ್ಲಾಜೆ ಪ್ರತಿನಿಧಿಸುವ ಉಡುಪಿ ಜಿಲ್ಲೆಯಲ್ಲಿ ಪುರುಷರು ಬಳೆ ತೊಡುವುದು ಎಂದರೆ ವೀರತ್ವದ ಸಂಕೇತ. ಹಾಗೇನಾದರೂ ಬಳೆ ತೊಟ್ಟವರನ್ನು ಹೀಯಾಳಿಸಿದರೆ ಅದು ಕರಾವಳಿಯ ನೆಲ ಸಂಸ್ಕೃತಿ, ದೈವ, ನಾಗಬೆರ್ಮೆರು, ಸಿರಿಯಪ್ಪೆ, ಗುತ್ತಿನಾರು, ಗುರಿಕಾರರನ್ನು, ಬಂಟ, ಬಿಲ್ಲವ, ಮೊಗವೀರರನ್ನು ಅವಮಾನಿಸಿದಂತೆ !”
‘ಅಷ್ಟೇಅಲ್ಲದೆ ಇಲ್ಲಿನ ಕೆಲ ಪಾಡ್ದನಗಳ ಪ್ರಕಾರ ಗಂಡನನ್ನು ಬಿಟ್ಟ ಸಿರಿಯನ್ನು ಊರ ಪಂಚಾತಿಯಲ್ಲಿ ಬಳೆ ತೆಗೆಯಲು ಆದೇಶಿಸಿದಾಗ, ಸಿರಿ ಅದನ್ನು ಧಿಕ್ಕರಿಸಿ ಗಂಡನಿಲ್ಲದೆಯೇ ಬಳೆ ತೊಟ್ಟುಕೊಂಡೇ ರಾಜ್ಯಭಾರ ಮಾಡುತ್ತಾಳೆ. ಈ ನಾಡಲ್ಲಿ ಸಿರಿ ಮಾತ್ರವಲ್ಲದೆ ಆಳುಪ ರಾಣಿ, ಬಲ್ಲಮಹಾದೇವಿ, ಬಲ್ಲಾಳನ ಪಟ್ಟದ ರಾಣಿ ಕಿಕ್ಕಾಯಿ ತಾಯಿ, ಉಳ್ಳಾಳದ ರಾಣಿ ಅಬ್ಬಕ್ಕ ಸೇರಿದಂತೆ ಅನೇಕ ರಾಣಿಯರು ರಾಜ್ಯಭಾರ ಮಾಡಿದ್ದಾರೆ. ಸಿರಿಯ ಪ್ರಭಾವದಿಂದಲೇನೋ ತುಳುನಾಡಿನಲ್ಲಿ ಗ್ರಾಮಗಳ ಆಡಳಿತ ನಡೆಸುತ್ತಿದ್ದ ಗುತ್ತು ಬರ್ಕೆಗಳಲ್ಲೂ ತಾಯಂದಿರೇ ಆಡಳಿತ ನಡೆಸಿದ ಉದಾಹರಣೆಗಳಿವೆ. ‘ಬಳೆ ತೊಡುವವರು ನಾಲಾಯಕರು’ ಎಂದು ಹೇಳುವುದು ನಿಜಕ್ಕೂ ಮಾತೃಪ್ರಧಾನ ಸಂಸ್ಕೃತಿ ಕರಾವಳಿಯಲ್ಲಿರುವ ಬಂಟರು, ಬಿಲ್ಲವರು, ಮೊಗವೀರರು, ಗುತ್ತು, ಬರ್ಕೆ, ಗುರಿಕಾರರು, ದೈವಗಳಿಗೆ ಮಾಡಿದ ಅವಮಾನ.’ ಎಂಬ ಅಭಿಪ್ರಾಯವನ್ನು ನವೀನ್ ವ್ಯಕ್ತಪಡಿಸುತ್ತಾರೆ.

ಬಹುತ್ವದ ಕಾಣ್ಕೆಯನ್ನು ಅರಿಯದ ಇವರಿಗೆ ಮನುಷ್ಯರ ಖಾಸಗಿತನ, ಮೂಲಭೂತ ಸ್ವಾತಂತ್ರ್ಯ, ಘನತೆಗಳ ಬೆಲೆ ಸಹ ತಿಳಿದಿಲ್ಲ. ಇವರು ಪ್ರತಿಯೊಬ್ಬರೂ ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು, ಯಾರೊಡನೆ ಮಾತಾಡಬೇಕು, ಯಾರೊಡನೆ ಮಾತನಾಡಬಾರದು, ಎಷ್ಟು ಮತ್ತು ಹೇಗೆ ಮಾತಾಡಬೇಕು, ಯಾರ, ಯಾವ ಯಾವ ಮಾತನ್ನು ಅನುಮೋದಿಸಬೇಕು, ಯಾವುದನ್ನು ಅನುಮೋದಿಸಬಾರದು ಎಂಬೆಲ್ಲಕ್ಕೂ ಅನೈತಿಕ ದಬ್ಬಾಳಿಕೆಯ ಹೇರಿಕೆ ಮಾಡುವುದನ್ನೇ ಸಂಸ್ಕೃತಿಯ ರಕ್ಷಣೆ ಎಂದು ಬಿಂಬಿಸುತ್ತಿದ್ದಾರೆ. ಇಂತಹ ಸಾಂಸ್ಕೃತಿಕ ಗೂಂಡಾಗಿರಿಯ ಅತ್ಯಂತ ಕೆಟ್ಟ ಫಲಾನುಭವಿ ಹೆಣ್ಣು. ಹೆಣ್ಣಿನ ವಿಷಯಕ್ಕೆ ಬಂದಾಗಲಂತೂ ಆಕೆಯ ಉಡುಗೆ ತೊಡುಗೆಗಳನ್ನೂ ತಾವೇ ನಿರ್ದೇಶಿಸುವ ಇವರ ಪ್ರಕಾರ ಹೆಣ್ಣು ಬಳೆ ತೊಟ್ಟುಕೊಳ್ಳುವುದು, ಸೀರೆ ಉಡುವುದು ಇತ್ಯಾದಿ ಶ್ರೇಷ್ಠ ಸಂಸ್ಕೃತಿ. ಒಂದೆಡೆ ಹೀಗೆ ಹೇರಿಕೆ ಮಾಡುತ್ತಲೇ ಮತ್ತೊಂದೆಡೆ ಬಳೆ, ಸೀರೆ ಇತ್ಯಾದಿಗಳನ್ನು ಅಧೀನತೆಯ, ನಿರರ್ಥಕತೆಯ ಸಂಕೇತವಾಗಿ ಹೀಗಳೆಯುವಾಗ ಇವರು ಸ್ಪಷ್ಟವಾಗಿ ಒಂದು ವಿಚಾರ ಹೇಳುತ್ತಿದ್ದಾರೆ; ‘ಹೆಣ್ಣು ಅಧೀನಲಿಂಗಿಯಾಗಿ, ಗಂಡಿಗೆ ತಲೆಬಾಗಿ, ಮನೆಯ ಚೌಕಟ್ಟಿನೊಳಗೆ ಉಳಿಯಬೇಕು’.
ಇಂತಹ ಆಷಾಢಭೂತಿತನವನ್ನು, ಬೂಟಾಟಿಕೆಯನ್ನೂ, ಇದರ ಹಿಂದಿರುವ ಸ್ತ್ರೀ ವಿರೋಧಿ ನಿಲುವನ್ನು ಗುರುತಿಸಿಕೊಳ್ಳುವುದು ಮತ್ತು ಅದನ್ನು ಬಲವಾಗಿ ವಿರೋಧಿಸುವುದು ಅತ್ಯಗತ್ಯ. ಸಮಾನತೆಗಾಗಿ ಸ್ತ್ರೀಯರು ಬಹುವಾಗಿ ಹೋರಾಡಿ ಕ್ರಮಿಸಿರುವ ಹಾದಿಯಲ್ಲಿ ನಮ್ಮೆಲ್ಲರನ್ನೂ ಬಹಳ ಸಲೀಸಾಗಿ ದಶಕಗಳ ಹಿಂದಕ್ಕೆ ನೂಕಿಬಿಡುವ ಹುನ್ನಾರವಿದು.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಂಜಾಬ್‌: ಅಧಿಕಾರದ ಕಿತ್ತಾಟಕ್ಕೆ ಅಂತ್ಯ; ಸಿಎಂ ಅಭ್ಯರ್ಥಿ ಘೋಷಿಸಲು ನಿರ್ಧರಿಸಿದ ಕಾಂಗ್ರೆಸ್‌ | Naanu Gauri

ಪಂಜಾಬ್‌: ಅಧಿಕಾರದ ಕಿತ್ತಾಟಕ್ಕೆ ಅಂತ್ಯ; ಸಿಎಂ ಅಭ್ಯರ್ಥಿ ಘೋಷಿಸಲು ನಿರ್ಧರಿಸಿದ ಕಾಂಗ್ರೆಸ್‌

0
ಅಧಿಕಾರದ ಕಚ್ಚಾಟಕ್ಕೆ ಅಂತ್ಯ ಹಾಡಲು ಪಂಜಾಬ್‌ನಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮೊದಲೇ ಘೋಷಿಸಲು ಕಾಂಗ್ರೆಸ್ ನಿರ್ಧರಿಸಿದೆ. ಜಲಂಧರ್‌ನ ಆನ್‌ಲೈನ್‌ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶೀಘ್ರದಲ್ಲೇ ಕಾರ್ಯಕರ್ತರೊಂದಿಗೆ ಚರ್ಚಿಸಿ...
Wordpress Social Share Plugin powered by Ultimatelysocial