ಯಾರು ಪರ್ಯಾಯವನ್ನು ಕಟ್ಟಲು ಬಯಸುತ್ತಾರೋ ಅವರಿಗೆ ಕಾಂಗ್ರೆಸ್ ಒಂದು ತಡೆಯಾಗಿದೆ. ಮುಖ್ಯವಾಹಿನಿಯಲ್ಲಿನ ದೊಡ್ಡ ಪಕ್ಷವು, ಒಂದು ಅಯಸ್ಕಾಂತದಂತೆ ಕೆಲಸ ಮಾಡುತ್ತಾ, ಸುತ್ತಲಿನ ಬಹಳಷ್ಟು ಚೈತನ್ಯವನ್ನು ಅದೇ ಹೀರಿಕೊಂಡುಬಿಡುತ್ತದೆ. ಕಾಂಗ್ರೆಸ್ ತಾನೇ ಬಿಜೆಪಿಯನ್ನು ಸೋಲಿಸಲು ಅಶಕ್ತವಾಗಿದ್ದರೂ, ಅದರೆಡೆಗೆ ಎಳೆಯಲ್ಪಡುವ ಬಹಳಷ್ಟು ಶಕ್ತಿಯು ನಿಜಕ್ಕೂ ಎಲ್ಲಿ ಉಪಯೋಗವಾಗಬಹುದಿತ್ತೋ ಆ ಕಡೆಗೆ ಹೋಗದೇ ವ್ಯರ್ಥವಾಗುತ್ತದೆ. ದೇಶದ ಪ್ರಧಾನ ಪ್ರತಿಪಕ್ಷದ ಪಾತ್ರದ ಕುರಿತು ‘ಕಾಂಗ್ರೆಸ್ ಸತ್ತು ಹೋಗಬೇಕು’ ಎಂದು ಟಿವಿ ಚರ್ಚೆಯೊಂದರಲ್ಲಿ ನಾನು ಹೇಳೀದ ಮಾತು ಚರ್ಚೆಗೆ ಕಾರಣವಾಗಿದೆ. ಇದು ಸ್ವಲ್ಪ ಅವಸರವಾಯಿತೆನಿಸುತ್ತದೆ. ಇದಕ್ಕೆ ಆರಂಭಿಕವಾಗಿ ಬಂದ ಕೆಲವು ಪ್ರತಿಕ್ರಿಯೆಗಳು ಬಹಳ ತೀವ್ರವಾಗಿದ್ದವು. ಬಹುಶಃ ವ್ಯಕ್ತಿಯೊಬ್ಬ ಕುಸಿದಿದ್ದಾಗ ಆತನಿಗೇ ಒದ್ದ ಹಾಗೆ ಅನಿಸುವ ರೀತಿಯ ಸಂದರ್ಭ ಅದಾಗಿತ್ತು. ಜೊತೆಗೆ ಸಾಯಲಿ ಎಂಬ ರೂಪಕವೂ ಬಹಳ ಭಾವನಾತ್ಮಕವಾದ ಪ್ರತಿಕ್ರಿಯೆಯನ್ನು ಆಹ್ವಾನಿಸಿತ್ತು.

ಹಾಗಾಗಿ, ನಿಜಕ್ಕೂ ಗಂಭೀರವಾದ ಮತ್ತು ರಚನಾತ್ಮಕವಾದ ಚರ್ಚೆ ನಡೆಯಲಿ ಎಂಬ ಕಾರಣಕ್ಕೆ ನನ್ನ ಮಾತುಗಳ ಅರ್ಥವೇನು ಎಂಬುದನ್ನು ಹೇಳಬಯಸುತ್ತೇನೆ. ನನ್ನ ಅಭಿಪ್ರಾಯ ಏನಾಗಿರಲಿಲ್ಲ ಎಂಬುದನ್ನು ಮೊದಲು ಸ್ಪಷ್ಟಪಡಿಸುತ್ತೇನೆ. ಅದು ಮತಗಟ್ಟೆ ಸಮೀಕ್ಷೆಗೆ ಪ್ರತಿಕ್ರಿಯಿಸಿ ನೀಡಿದ ಭಾವನಾತ್ಮಕವಾದ ತಕ್ಷಣದ ಪ್ರತಿಕ್ರಿಯೆ ಅಲ್ಲ. ಇಂತಹ ಅನಿಸಿಕೆಯನ್ನು ನಾನು ಈ ಹಿಂದೆಯೂ ವ್ಯಕ್ತಪಡಿಸಿದ್ದೆ. ಈ ನನ್ನ ಅನಿಸಿಕೆಯು ಮತಗಟ್ಟೆ ಸಮೀಕ್ಷೆಗಳ ಮೇಲೆ ನಿರ್ಧರಿತವಾಗಿಯೂ ಇರಲಿಲ್ಲ. ಹ್ಞಾಂ, ಒಂದು ವೇಳೆ ಕಾಂಗ್ರೆಸ್ ನೇರಾನೇರ ಬಿಜೆಪಿಯನ್ನು ಎದುರಿಸುತ್ತಿರುವ ರಾಜ್ಯಗಳಲ್ಲಿ ಬಿಜೆಪಿಯನ್ನು ಸೋಲಿಸಲು ಶಕ್ತವಾಗಿದ್ದರೆ ನಾನೀ ಮಾತನ್ನು ಹೇಳುತ್ತಿರಲಿಲ್ಲವೆಂಬುದೇನೋ ನಿಜ.


ಎರಡನೆಯದಾಗಿ, ಕಾಂಗ್ರೆಸ್ ನಾಯಕರ ಕುರಿತಾಗಿ ನನಗೆ ದ್ವೇಷವಾಗಲೀ ಶತ್ರುತ್ವವಾಗಲೀ ಇಲ್ಲ. ನಾನು ಬಲ್ಲ ಬಹುತೇಕ ರಾಜಕೀಯ ನಾಯಕರಿಗಿಂತ ರಾಹುಲ್ ಗಾಂಧಿ ಪ್ರಾಮಾಣಿಕರು ಮತ್ತು ಬಹಳಷ್ಟು ಜನರು ತಿಳಿದಿರುವುದಕ್ಕಿಂತಲೂ ಬುದ್ಧಿವಂತರು ಎಂಬುದನ್ನು ನಾನು ಬಹಿರಂಗವಾಗಿಯೇ ಹೇಳಿದ್ದೇನೆ.
ಮೂರನೆಯದಾಗಿ, ಇದು ಒಂದು ಭವಿಷ್ಯವಾಣಿ ಏನಲ್ಲ. ದೊಡ್ಡ ರಾಜಕೀಯ ಪಕ್ಷಗಳು ಸುಲಭಕ್ಕೆ ಸತ್ತು ಹೋಗುವುದಿಲ್ಲವೆಂಬುದು ನನಗೆ ಗೊತ್ತು, ಅದರಲ್ಲೂ ಎರಡು ಚುನಾವಣೆಗಳಲ್ಲಿ ಸೋತದ್ದಕ್ಕಾಗಿ ಅಂಥದ್ದೇನೂ ಸಂಭವಿಸುವುದಿಲ್ಲ. ಅಥವಾ ಒಂದು ವೇಳೆ ಅದು ನನ್ನ ಬಯಕೆಯಾಗಿದ್ದರೆ, ಅದನ್ನು ಸಾಕಾರಗೊಳಿಸಲು ಪ್ರಗ್ಯಾ ಠಾಕೂರ್‍ರ ರೀತಿ ಶಾಪ ಕೊಡುವ ಶಕ್ತಿಯೂ ಇಲ್ಲ. ಜೊತೆಗೆ ನನ್ನ ಈ ಬಯಕೆಯು ಜನ್ಮಜಾತ ಕಾಂಗ್ರೆಸ್ ವಿರೋಧಿವಾದದಿಂದ ಹುಟ್ಟಿದ್ದೂ ಅಲ್ಲ. ನಾನು ಯಾವಾಗಲೂ ಹೇಳುತ್ತಾ ಬಂದಿರುವುದೇನೆಂದರೆ, ರಾಮ ಮನೋಹರ ಲೋಹಿಯಾರ ಕಾಂಗ್ರೆಸ್ ವಿರೋಧಿವಾದವು ಒಂದು ಅಲ್ಪಾವಧಿಯ ರಾಜಕೀಯ ಕಾರ್ಯತಂತ್ರವಾಗಿತ್ತೇ ಹೊರತು, ಅದನ್ನೊಂದು ಸಿದ್ಧಾಂತವಾಗಿಸಬಾರದು ಎಂದು. ಇತರ ಲೋಹಿಯಾವಾದಿಗಳಿಗಿಂತ ಭಿನ್ನವಾಗಿ, ನಾನು ಸ್ವಾತಂತ್ರ್ಯಾನಂತರದ ಎರಡು ದಶಕಗಳ ರಾಷ್ಟ್ರ ನಿರ್ಮಾಣದಲ್ಲಿ ನೆಹರೂ ಮತ್ತು ಕಾಂಗ್ರೆಸ್ ಪಕ್ಷಗಳ ಪಾತ್ರವನ್ನು ಪ್ರಶಂಸಿಸುತ್ತಿದ್ದೇನೆ.


ನನ್ನ ಪ್ರಕಾರ ಪ್ರಧಾನವಾದ ಸಂಗತಿಯೇನೆಂದರೆ, ನಮ್ಮ ಗಣರಾಜ್ಯದ ಬುನಾದಿಯ ಮೇಲೇ ನಡೆಯುತ್ತಿರುವ ದಾಳಿಯನ್ನು ತಡೆದು ನಿಲ್ಲಿಸುವಲ್ಲಿ ಕಾಂಗ್ರೆಸ್‍ನ ಸಾಮಥ್ರ್ಯವೇನು ಎಂಬುದನ್ನು ಒರೆಗೆ ಹಚ್ಚುವುದು. ಈ ವಿಚಾರದಲ್ಲಿ ಎರಡು ಪ್ರಮೇಯಗಳಿವೆ. ಒಂದು, ನಮ್ಮ ಸಾಂವಿಧಾನಿಕ ಮೌಲ್ಯಗಳಾದ ಪ್ರಜಾತಂತ್ರ ಮತ್ತು ಬಹುತ್ವಕ್ಕೆ ಮೋದಿ ನೇತೃತ್ವದ ಬಿಜೆಪಿಯ ಬೆಳವಣಿಗೆಯು ಅಪಾಯವನ್ನು ತಂದೊಡ್ಡಿದೆ. ಎರಡು, ಗಣ್ಯರಾಜ್ಯದ ಮೇಲಾಗುತ್ತಿರುವ ಈ ದಾಳಿಯಿಂದ ರಕ್ಷಿಸುವ ಹೊಣೆಗಾರಿಕೆ ಪ್ರಧಾನ ಪ್ರತಿಪಕ್ಷವಾದ ಕಾಂಗ್ರೆಸ್ ಮೇಲೆ ಇರುತ್ತದೆ.

ನಾವು ಈ ಎರಡು ಸಂಗತಿಗಳ ಬಗ್ಗೆ ಸಹಮತ ಹೊಂದಿರುವುದಾದರೆ – ನನ್ನನ್ನು ಟೀಕಿಸುತ್ತಿರುವ ಬಹುತೇಕರು ಇವೆರಡನ್ನೂ ಒಪ್ಪುತ್ತಾರೆಂದು ಭಾವಿಸುತ್ತೇನೆ – ಕೆಳಗಿನ ಪ್ರಶ್ನೆಗಳ ಸುತ್ತ ನಾವು ಒಂದು ಒಂದು ಅರ್ಥಪೂರ್ಣವಾದ ವಾಗ್ವಾದ ಅಥವಾ ಭಿನ್ನಮತಕ್ಕೆ ಮುಂದಾಗಬಹುದೆನಿಸುತ್ತದೆ. ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಈ ಐತಿಹಾಸಿಕ ಜವಾಬ್ದಾರಿಗೆ ನ್ಯಾಯ ಸಲ್ಲಿಸಿದೆಯೇ? ಅಥವಾ ಮುಂದಿನ ದಿನಗಳಲ್ಲಿ ಅದು ಈ ಜವಾಬ್ದಾರಿಯನ್ನು ನಿರ್ವಹಿಸುತ್ತದೆಂಬ ವಿಶ್ವಾಸವಿಡಬಹುದೇ? ನನ್ನ ಸ್ಪಷ್ಟವಾದ ಉತ್ತರ, ಇಲ್ಲ. ಕಾಂಗ್ರೆಸ್ ಈ ಕರ್ತವ್ಯವನ್ನು ನಿಭಾಯಿಸುವ ಶಕ್ತಿಯನ್ನು ಹೊಂದಿಲ್ಲ ಮಾತ್ರವಲ್ಲಾ, ಅದನ್ನು ಮಾಡಲು ಬಯಸುವವರಿಗೆ ಅದೊಂದು ಅಡ್ಡಿಯಾಗಿದೆ.

ಕಳೆದೈದು ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿತು, ಅಥವಾ ಅದೇನನ್ನು ಮಾಡಲಿಲ್ಲ ಎಂಬುದನ್ನು ನೊಡೋಣ. ಮೋದಿ ಸರ್ಕಾರವು ಆರ್ಥಿಕತೆಯನ್ನು ನಿಭಾಯಿಸಿದ ರೀತಿ ಏನೂ ಚೆನ್ನಾಗಿರಲಿಲ್ಲ. ರೈತರು ಸಂಕಷ್ಟದಲ್ಲಿದ್ದಾಗ, ಯುವಜನರು ನಿರುದ್ಯೋಗದಿಂದ ಬಳಲುತ್ತಿದ್ದಾಗ, ಸಣ್ಣ ವ್ಯಾಪಾರಿಗಳು ಜಿಎಸ್‍ಟಿ ಜಾರಿಯಾದ ರೀತಿಯಿಂದ ಕ್ರುದ್ಧರಾಗಿದ್ದಾಗ, ನೋಟು ರದ್ದತಿಯಂತಹ ವಿನಾಶಕಾರಿ ನೀತಿ ತಂದಾಗ ಕಾಂಗ್ರೆಸ್ ದೇಶಾದ್ಯಂತ ಜನಾಂದೋಲನವನ್ನೇನಾದರೂ ಸಂಘಟಿಸಿತ್ತೇ? ಈ ಐದು ವರ್ಷಗಳಲ್ಲಿ ಮುಸ್ಲಿಮರನ್ನು ಬೀದಿಯಲ್ಲಿ ಕೊಲ್ಲಲಾಯಿತು ಮತ್ತು ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿತ್ತು. ಆಗ ಕಾಂಗ್ರೆಸ್ ಪಕ್ಷವು ಅದರ ಕುರಿತು ಸರಿಯಾಗಿ ದನಿಯೆತ್ತಿ ಮುಸ್ಲಿಮೇತರರು ಮತ್ತು ದಲಿತೇತರರು ಸಹಾ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಏನನ್ನಾದರೂ ಮಾಡಲು ಸಾಧ್ಯವಾಯಿತೇ?

ಅಥವಾ ಈ ಚುನಾವಣೆಯನ್ನೇ ತೆಗೆದುಕೊಳ್ಳಿ, ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸಿಕ್ಕ ವಿಜಯವನ್ನು ಒಂದು ಚಿಮ್ಮು ಹಲಗೆಯನ್ನಾಗಿ ಪರಿವರ್ತಿಸುವ ಅವಕಾಶ ಅದಕ್ಕೆ ಒದಗಿ ಬಂದಿತ್ತು. ಅದರ ನಂತರ, ಆ ರಾಜ್ಯಗಳಲ್ಲಿ ಮೋದಿ ಆಡಳಿತಕ್ಕೆ ಪರ್ಯಾಯವೆಂದು ಜನರ ಮುಂದಿಡಬಹುದಾದ ವಿಶೇಷ ಆಡಳಿತವನ್ನೇನಾದರೂ ನೀಡಲು ಕಾಂಗ್ರೆಸ್ ಪ್ರಯತ್ನಿಸಿತೇ? ದೇಶದ ಸಮಸ್ತ ಮತದಾರರಿಗೆ ಕೊಡಲು ಕಾಂಗ್ರೆಸ್ ಬಳಿ ಸಂದೇಶವೇನಾದರೂ ಇತ್ತೇ? ಹೌದು, ಅಂತಿಮವಾಗಿ ಅದು ಒಂದು ಉತ್ತಮವಾದ ಪ್ರಣಾಳಿಕೆಯನ್ನೇನೋ ತಂದಿತು, ಆದರೆ ಕಟ್ಟ ಕಡೆಯ ವ್ಯಕ್ತಿಗೆ ಅದರ ಮೂಲಕ ಒಂದು ರಾಜಕೀಯ ಸಂದೇಶವನ್ನು ತಲುಪಿಸಲು ಸಾಧ್ಯವಾಗಲಿಲ್ಲ.

ಅದಕ್ಕೆ ಸರ್ವಮಾನ್ಯರಾದ ಒಬ್ಬ ಸಂದೇಶ ವಾಹಕರೂ ಇರಲಿಲ್ಲ. ಮೋದಿಯ ಸಂವಹನ ಯಂತ್ರಾಂಗದ ದಾಳಿಯ ಮುಂದೆ ಒಡ್ಡಲಾದ ರಾಹುಲ್‍ಗಾಂಧಿ ಜನರನ್ನು ಹೆಚ್ಚೇನೂ ತಲುಪಲಾಗಲಿಲ್ಲ. ಪುಲ್ವಾಮಾ ನಂತರದ ಬಿಜೆಪಿಯ ‘ರಾಷ್ಟ್ರೀಯವಾದಿ’ ದಾಳಿಯನ್ನು ನಿಭಾಯಿಸಲು ಕಾಂಗ್ರೆಸ್‍ಗೆ ಸರಿಯಾದ ಒಂದು ತಂತ್ರ ಇದ್ದಂತೆಯೇ ತೋರಲಿಲ್ಲ. ಇನ್ನು ಮಹಾಮೈತ್ರಿಯನ್ನು ಕಟ್ಟಲು ಬೇಕಾದ ಮಾರ್ಗನಕ್ಷೆಯಂತೂ ಖಂಡಿತಾ ಇರಲೇ ಇಲ್ಲ.: ಬಿಜೆಪಿಯು ಶಿವಸೇನೆ ಮತ್ತು ಅಸ್ಸಾಂ ಗಣಪರಿಷತ್‍ಅನ್ನು ತನ್ನ ತೆಕ್ಕೆಗೆ ಮರಳಿ ತಂದದ್ದು ಹೇಗೆ ಮತ್ತು ಕಾಂಗ್ರೆಸ್ ತನ್ನ ಮೈತ್ರಿಯ ಸಾಧ್ಯತೆಗಳನ್ನು ಉ.ಪ್ರದೇಶ, ಬಿಹಾರ ಮತ್ತು ದೆಹಲಿಯಲ್ಲಿ ನಿಭಾಯಿಸಿದ್ದು ಹೇಗೆ ಎಂಬುದನ್ನು ಹೋಲಿಸಿ ನೋಡಿ.

ಕಾಂಗ್ರೆಸ್‍ಗಿದ್ದ ಅನಾನುಕೂಲಕರ ಅಂಶಗಳನ್ನು ನಾನು ಕಡೆಗಣಿಸುತ್ತಿಲ್ಲ: ಮೋದಿ ಸರ್ಕಾರವು ರಾಜ್ಯಾಧಿಕಾರವನ್ನು ನಿರ್ಲಜ್ಜವಾಗಿ ದುರುಪಯೋಗ ಪಡಿಸಿಕೊಂಡಿದ್ದು, ದಿಕ್ಕೆಡಿಸುವ ಅದರ ಆರ್ಥಿಕ ಬಲ ಮತ್ತು ಮುಖ್ಯವಾಹಿನಿ ಮಾಧ್ಯಮಗಳ ಮೇಲೆ ಹೆಚ್ಚು ಕಡಿಮೆ ಸಂಪೂರ್ಣ ನಿಯಂತ್ರಣಗಳ ಸವಾಲು ದೊಡ್ಡದೇ ಇತ್ತು. ಆದರೆ, ಮುಖ್ಯವಾಹಿನಿ ಪಕ್ಷಗಳ ಅಸ್ತಿತ್ವ ಮತ್ತು ಬೆಳವಣಿಗೆಗಳ ಕಾರಣವೇ, ಅವುಗಳಿಗೆ ಇರುವ ಸಾಧ್ಯತೆಗಳು ಮತ್ತು ಬೇರೆ ಬೇರೆ ಸಮೂಹಗಳನ್ನು ತಲುಪುವ ಸಾಮಥ್ರ್ಯದಲ್ಲಿ. ಎಲ್ಲರೂ ಅವರಾಗೇ ತನ್ನೆಡೆಗೆ ಬರಬೇಕು ಎಂದು ಕಾಂಗ್ರೆಸ್ ಹೇಳಲಾಗದು ಏಕೆಂದರೆ, ಬಿಜೆಪಿಯನ್ನು ಎದುರಿಸುವ ಸಾಧ್ಯತೆಯಿದ್ದ ಏಕೈಕ ಪಕ್ಷ ಇದಾಗಿತ್ತು.

ಇರಲಿ, ಈಗ ಭವಿಷ್ಯದ ಕುರಿತು ಗಮನ ಹರಿಸೋಣ. ಮೋದಿಯವರ ಎರಡನೇ ಕಂತು ನಮ್ಮ ಗಣರಾಜ್ಯಕ್ಕೆ ಎರಡು ಆಳವಾದ ಸವಾಲುಗಳನ್ನು ಹೊತ್ತು ತಂದಿದೆ. ಒಂದೆಡೆ, ನಾವು ಜನಾದೇಶವನ್ನು ಹೊಂದಿದ ಸರ್ವಾಧಿಕಾರದ ಕಡೆಗೆ ನಡೆಯುತ್ತಿದ್ದೇವೆ. ಇದರಲ್ಲಿ ಜನಾದೇಶವು ಸಾಂವಿಧಾನಿಕ ನಿರ್ಬಂಧಗಳನ್ನು ತೆಗೆದು ಹಾಕಲು ದಾರಿ ಮಾಡಿಕೊಡುತ್ತದೆ. ಇನ್ನೊಂದೆಡೆ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆ ನಾಗರಿಕರ ಸ್ಥಾನಕ್ಕೆ ತಳ್ಳುವ ಬಹುಸಂಖ್ಯಾತವಾದದ ಕಡೆಗೆ ಸರಿಯುತ್ತಿದ್ದೇವೆ. ಕಾಂಗ್ರೆಸ್ಸನ್ನು ಈ ಎರಡು ಅಪಾಯಗಳನ್ನು ಎದುರಿಸುವ ಪ್ರಧಾನ ಶಕ್ತಿಯಾಗಿ ನಿರೀಕ್ಷಿಸಬಹುದೇ? ನನ್ನ ಪ್ರಕಾರ ಈ ಐತಿಹಾಸಿಕ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮುನ್ನೋಟ, ಕಾರ್ಯತಂತ್ರ ಅಥವಾ ತಳಮಟ್ಟದ ಬಲವನ್ನು ಕಾಂಗ್ರೆಸ್ ಹೊಂದಿದ್ದಂತೆ ತೋರುವುದಿಲ್ಲ. ಹಾಗಿದ್ದ ಮೇಲೆ ಗಣರಾಜ್ಯವನ್ನು ಉಳಿಸಬಲ್ಲ ಉಪಕರಣ ಕಾಂಗ್ರೆಸ್ ಅಲ್ಲ.

ಇದನ್ನೂ ಓದಿ: ಮೋದಿ ಗೆಲುವಿನ ಸಂದರ್ಭದಲ್ಲಿ ಕೇಳಲೇಬೇಕಾದ ಪ್ರಶ್ನೆಗಳು – ಎ ನಾರಾಯಣ

ಅದಕ್ಕಿಂತ ಕೆಟ್ಟ ಸಂಗತಿಯೆಂದರೆ, ಪರ್ಯಾಯವನ್ನು ಕಟ್ಟಬಯಸುವವರಿಗೆ ಕಾಂಗ್ರೆಸ್ ಒಂದು ತಡೆಯಾಗಿರುತ್ತದೆ. ಯಾವುದೇ ದೊಡ್ಡ ಮುಖ್ಯವಾಹಿನಿ ಪಕ್ಷವು ತನ್ನ ಸುತ್ತಲಿನ ಶಕ್ತಿಯನ್ನೆಲ್ಲಾ ಎಳೆದುಕೊಳ್ಳುವ ಅಯಸ್ಕಾಂತದಂತೆ ಕೆಲಸ ಮಾಡುತ್ತದೆ. ಕಾಂಗ್ರೆಸ್ ತಾನೇ ಬಿಜೆಪಿಯನ್ನು ಸೋಲಿಸಲು ಅಶಕ್ತವಾಗಿದ್ದರೂ, ಅದರೆಡೆಗೆ ಎಳೆಯಲ್ಪಡುವ ಬಹಳಷ್ಟು ಶಕ್ತಿಯು ನಿಜಕ್ಕೂ ಎಲ್ಲಿ ಉಪಯೋಗವಾಗಬಹುದಿತ್ತೋ ಆ ಕಡೆಗೆ ಹೋಗದೇ ವ್ಯರ್ಥವಾಗುತ್ತದೆ. ಮಾಡಬೇಕಾದ್ದನ್ನು ತಾನೂ ಮಾಡುವುದಿಲ್ಲ, ಬೇರೆಯವರನ್ನೂ ಮಾಡಲು ಬಿಡುವುದಿಲ್ಲ. ‘ಕಾಂಗ್ರೆಸ್ಸಿಗೇ ಮತ ಹಾಕಿ, ಇಲ್ಲದಿದ್ದರೆ……’ ಎನ್ನುವ ಮಿಥ್ಯೆಯನ್ನು ಮಿಥ್ಯೆಯೆಂದು ಕರೆಯದೇ ಪರ್ಯಾಯ ರಾಜಕಾರಣವು ಮುಂದೆ ಹೋಗುವುದಿಲ್ಲ. ಇಲ್ಲವಾದರೆ, ಕಾಂಗ್ರೆಸ್ ಎಂಬುದೇ ಅಸ್ತಿತ್ವದಲ್ಲಿಲ್ಲ ಎಂಬಂತೆ ಅದು ಮುಂದುವರೆಯಬೇಕು. ಸಾಯಲಿ ಎಂಬ ರೂಪಕವನ್ನು ಈ ರೀತಿ ಅರ್ಥ ಮಾಡಿಕೊಳ್ಳಬೇಕು.

ಇದನ್ನೂ ಓದಿ: ಫಲಿತಾಂಶದ ಪಾಠಗಳು – ಯೋಗೇಂದ್ರ ಯಾದವ್

ಹಾಗೆಂದಾಕ್ಷಣ ಪಕ್ಷಗಳು ತಮ್ಮಂತೆ ತಾವೇ ಉದುರಿ ಹೋಗುವುದಿಲ್ಲ ಅಥವಾ ಇದ್ದಕ್ಕಿದ್ದಂತೆ ಸತ್ತು ಹೋಗಿಬಿಡುವುದಿಲ್ಲ. ಕಾಂಗ್ರೆಸ್ ‘ಸಾಯಬಹುದಾದ’ ಎರಡು ಮಾರ್ಗಗಳಿವೆ. ತಿಕ್ಕಾಟದಿಂದ ಉಂಟಾಗುವ ಸಾವು, ಅಂದರೆ ದೊಡ್ಡ ಪಕ್ಷವೊಂದು ನಿಧಾನಕ್ಕೆ ಅಂಚಿಗೆ ಸರಿಯುತ್ತಾ, ಮತದಾರರನ್ನೂ ಕಳೆದುಕೊಳ್ಳುತ್ತಾ ಹೋಗುವುದು. ಇದಕ್ಕೆ ಹಲವಾರು ಚುನಾವಣೆಗಳು, ದಶಕಗಟ್ಟಲೆ ಸಮಯ ಬೇಕು. ಕಾಂಗ್ರೆಸ್ಸು ಹೀಗೇ ಆಗಬೇಕೆಂದು ಬಿಜೆಪಿ ಬಯಸುತ್ತದೆ. ಇದಲ್ಲದೇ ಇನ್ನೊಂದು ದಾರಿ ಇದೆ; ಅದು ‘ಮುಳುಗುವುದರೊಂದಿಗೆ’ ಆಗಬಹುದಾದ ಸಾವು, ಅಂದರೆ ಪಕ್ಷದಲ್ಲಿ ಉಳಿದುಕೊಂಡಿರುವಷ್ಟು ಚೈತನ್ಯವು ಹೊಸದಾದ ಮತ್ತು ದೊಡ್ಡದಾದ ಮೈತ್ರಿಕೂಟದೊಳಗೆ ಕರಗುವುದು. ಗಣರಾಜ್ಯಕ್ಕೆದುರಾಗಿರುವ ಸವಾಲನ್ನು ಎದುರಿಸಲು ಈ ದೇಶದಲ್ಲಿ ಇನ್ನೂ ಸಾಕಷ್ಟು ಶಕ್ತಿ ಇದೆ. ಕಾಂಗ್ರೆಸ್ಸಿನ ಒಳಗೆ ಮತ್ತು ಹೊರಗೆ ಇರುವ ಈ ಶಕ್ತಿಯು ಹೊಸ ಪರ್ಯಾಯದೊಳಗೆ ವಿಲೀನವಾಗುವಂತಹ ‘ಸಾವು’ ಕಾಂಗ್ರೆಸ್ಸಿಗೆ ಸೂಕ್ತವಾದುದು.
ಸಾವೆಂಬ ಕರಾಳ ರೂಪಕವು ಹೊಸ ಹುಟ್ಟಿನ ಕುರಿತು ಚಿಂತಿಸಲು ಆಹ್ವಾನವಾಗಿರುತ್ತದೆ. ಅಥವಾ ಅದನ್ನು ಪುನರ್ಜನ್ಮವೆಂದೂ ಕರೆಯಬಹುದೇನೋ?

  • – ಯೋಗೇಂದ್ರ ಯಾದವ್

ಕೃಪೆ: ಇಂಡಿಯನ್ ಎಕ್ಸ್‍ಪ್ರೆಸ್
ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರಾಗಿದ್ದು, ಅವು ನಾನುಗೌರಿ.ಕಾಂ ಸಂಪಾದಕೀಯ ತಂಡದ ಅಭಿಪ್ರಾಯಗಳಾಗಿರಬೇಕೆಂದೇನೂ ಇಲ್ಲ.

 

LEAVE A REPLY

Please enter your comment!
Please enter your name here