Homeಚಳವಳಿಹತ್ರಾಸ್ ದಲಿತ ಯುವತಿಯ ಬರ್ಬರ ಅತ್ಯಾಚಾರ-ಕೊಲೆ: ಪ್ರಕರಣ ನಡೆದುಬಂದು ಹಾದಿ

ಹತ್ರಾಸ್ ದಲಿತ ಯುವತಿಯ ಬರ್ಬರ ಅತ್ಯಾಚಾರ-ಕೊಲೆ: ಪ್ರಕರಣ ನಡೆದುಬಂದು ಹಾದಿ

- Advertisement -
- Advertisement -

ದೇಶದ ಜನರ ಆತ್ಮಸಾಕ್ಷಿ ಕಲಕಿದ್ದ ಉತ್ತರ ಪ್ರದೇಶದ ಹತ್ರಾಸ್ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ, ಕೊಲೆ ಘಟನೆಯ ತನಿಖೆಯ ಕುರಿತು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಮೂವರು ಆರೋಪಿಗಳನ್ನು ಖುಲಾಸೆಗೊಳಿಸುವ ಮೂಲಕ ಅದು ಸಾಮೂಹಿಕ ಅತ್ಯಾಚಾರವಲ್ಲ ಎಂಬ ಸಂದೇಶ ನೀಡಿದೆ. ತೀವ್ರ ನೋವು ನೀಡಿದ್ದ ಈ ಪ್ರಕರಣ ನಡೆದು ಬಂದ ಹಾದಿಯನ್ನು ಇಲ್ಲಿ ನೆನಪಿಸಿಕೊಳ್ಳಲಾಗಿದೆ.

ಸೆಪ್ಟಂಬರ್ 14, 2020: ಅಮಾನುಷ ಅತ್ಯಾಚಾರ – ಹಲ್ಲೆ

ಅಂದು ಉತ್ತರ ಪ್ರದೇಶ ರಾಜ್ಯದ ಹತ್ರಾಸ್ ಜಿಲ್ಲೆಯ ಮನೀಶ ಎಂಬ 19 ವರ್ಷದ ದಲಿತ ಹೆಣ್ಣುಮಗಳು ಹುಲ್ಲು ತರಲು ಕುಟುಂಬದೊಂದಿಗೆ ಹೊಲಕ್ಕೆ ಹೋಗಿದ್ದರು. ಸವರ್ಣೀಯ ಠಾಕೂರ್ ಸಮುದಾಯದ ನಾಲ್ವರು ಯುವಕರು ಆಕೆಯನ್ನು ಅಪಹರಿಸಿ ಅಮಾನು‍ಷವಾಗಿ ಅತ್ಯಾಚಾರವೆಸಗಿ, ತೀವ್ರವಾಗಿ ಹಲ್ಲೆ ನಡೆಸಿದ್ದರು. ಕುತ್ತಿಗೆಯ ಮೂರು ಮೂಳೆಗಳು ಮುರಿದಿದ್ದವು. ನಾಲಿಗೆ ತುಂಡಾಗಿದ್ದು, ಉಸಿರಾಡಲು ತೊಂದರೆಯಾಗುತ್ತಿತ್ತು ಎಂದು ಮೃತ ಯುವತಿಯ ಸಹೋದರ ತಿಳಿಸಿದ್ದಾರೆ. ಗಾಯಗಳು, ಮೂಳೆ ಮುರಿತ ಮತ್ತು ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಯುವತಿಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಬೇಕೆಂದು ವೈದ್ಯರು ಸಲಹೆ ನೀಡಿದ್ದರು. ಆದರೆ ಯುವತಿಯನ್ನು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ಸೇರಿಸಲಾಯಿತು. ಆರಂಭದಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಲು ನಿರಾಕರಿಸಿದ ಪೊಲೀಸರು ಕೊಲೆಯತ್ನ ಪ್ರಕರಣ ಮಾತ್ರ ದಾಖಲಿಸಿದ್ದರು. ತದನಂತರ ಯುವತಿಯು ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿಕೆ ನೀಡಿದ ನಂತರವಷ್ಟೇ ಅತ್ಯಾಚಾರ ಮತ್ತು ಜಾತಿ ದೌರ್ಜನ್ಯ ಪ್ರಕರಣ ದಾಖಲಾಗಿತ್ತು.

ಸೆಪ್ಟಂಬರ್ 29, 2020: ಯುವತಿಯ ಸಾವು – ಪೊಲೀಸರಿಂದ ಅನಧಿಕೃತ ಅಂತ್ಯಸಂಸ್ಕಾರ

ತೀವ್ರ ಗಾಯಗಳಿಂದ ನರಳಿದ್ದ ಮನೀಶ ಸೆಪ್ಟಂಬರ್ 29ರಂದು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪೊಲೀಸರು ಮೃತದೇಹವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸದೆ ಅಥವಾ ಅವರ ಅನುಮತಿ ಪಡೆಯದೆ ಸುಟ್ಟು ಹಾಕಿದರು. ದೇಶದ ಅಂತಃಸಾಕ್ಷಿಯನ್ನು ಕಲಕಿದ ಈ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ದೇಶಾದ್ಯಂತ ನೋವು, ಸಂಕಟ ವ್ಯಕ್ತವಾಯಿತು. ಅದರಲ್ಲಿಯೂ ಪೊಲೀಸರ ವರ್ತನೆ ಮತ್ತಷ್ಟು ಅನುಮಾನ ಮತ್ತು ಆಕ್ರೋಶ ಹುಟ್ಟು ಹಾಕಿತು. ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಚಿತ್ರನಟರಾದ ಅಕ್ಷಯ್ ಕುಮಾರ್ ಸೇರಿದಂತೆ ಕೋಟ್ಯಾಂತರ ಜನರು ನೋವು ವ್ಯಕ್ತಪಡಿಸಿದರು.

ಸೆಪ್ಟಂಬರ್ 30, 2020: ಆರೋಪಿಗಳನ್ನು ಬಿಡುವುದಿಲ್ಲ – ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರು, “ಹತ್ರಾಸ್‌ನಲ್ಲಿ ಹೆಣ್ಣು ಮಗುವಿಗೆ ಸಂಭವಿಸಿದ ಅಹಿತಕರ ಘಟನೆಯ ಅಪರಾಧಿಗಳನ್ನು ಬಿಡುವುದಿಲ್ಲ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಈ ತಂಡ ಮುಂದಿನ ಏಳು ದಿನಗಳಲ್ಲಿ ವರದಿ ಸಲ್ಲಿಸಲಿದೆ. ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು, ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು” ಎಂದು ಟ್ವೀಟ್ ಮಾಡಿದರು.

ಅಕ್ಟೋಬರ್ 1, 2020: ನಿಷೇದಾಜ್ಞೆ ಜಾರಿ, ರಾಜಕೀಯ ಮುಖಂಡು ಹತ್ರಾಸ್ ಪ್ರವೇಶಿಸದಂತೆ ತಡೆ

ದಲಿತ ಯುವತಿಯ ಸಾವಿಗೆ ನ್ಯಾಯಕ್ಕೆ ಒತ್ತಾಯಿಸಿ ಪ್ರತಿಭಟಿಸಲು ದೇಶಾದ್ಯಂತ ಹಲವಾರು ರಾಜಕೀಯ ನಾಯಕರು, ಹೋರಾಟಗಾರರು ಹತ್ರಾಸ್ ಕಡೆಗೆ ಹೊರಟರು. ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮತ್ತಿತತರನ್ನು ಯುಪಿ ಪೊಲೀಸರು ಹತ್ರಾಸ್ ಪ್ರವೇಶಿಸದಂತೆ ತಡೆದರು. ತಳ್ಳಾಟ ನೂಕಾಟ ನಡೆಯಿತು. ರಾಜಕೀಯ ಮುಖಂಡರನ್ನು ಪೊಲೀಸರು ಹೀನಾಯವಾಗಿ ನಡೆಸಿಕೊಂಡರು. ಹತ್ರಾಸ್‌ನಲ್ಲಿ ಒಂದು ತಿಂಗಳ ಕಾಲ ನಿಷೇದಾಜ್ಞೆ ಹೇರಲಾಯಿತು.

ಹತ್ರಾಸ್‌‌ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ, ಕೊಲೆ ಹಾಗೂ ನಂತರ ಯುವತಿಯ ಮೃತದೇಹವನ್ನು ಕುಟುಂಬವರಿಗೆ ನೀಡದೇ ತಾವೇ ರಾತ್ರೋರಾತ್ರಿ ಸುಟ್ಟು ಹಾಕಿದ್ದು ದೇಶದಾದ್ಯಂತ ಹಲವು ಅನುಮಾನ ಹಾಗೂ ತೀವ್ರ ಆಕ್ರೋಶಗಳಿಗೆ ಕಾರಣವಾಗಿದೆ. ಇಂತಹ ಸಮಯದಲ್ಲೇ ಹತ್ರಾಸ್ ಡಿಎಂ (ಜಿಲ್ಲಾಧಿಕಾರಿ) ಯುವತಿಯ ತಂದೆಯ ಬಳಿ ಹೋಗಿ ಹೇಳಿಕೆಯನ್ನು ಬದಲಾಯಿಸುವಂತೆ ಧಮಕಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿತ್ತು.

ಬಲವಂತದ ಶವಸಂಸ್ಕಾರ ಮತ್ತು ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ, ಅಕ್ಟೋಬರ್ 1, 2020ರಂದು ಅಲಾಹಾಬಾದ್‌ ಉಚ್ಚ ನ್ಯಾಯಾಲಯ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿತ್ತು.

ಅಕ್ಟೋಬರ್ 3, 2020 : ಹತ್ರಾಸ್‌ಗೆ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಭೇಟಿ

ಕೊನೆಗೂ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಹತ್ರಾಸ್ ತಲುಪಿ ಸಂತ್ರಸ್ತ ಯುವತಿಯ ತಂದೆ ತಾಯಿಯನ್ನು ಭೇಟಿಯಾದರು. ಅವರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದರು. ಸಂತ್ರಸ್ತೆಯ ಸಹೋದರ ಪೊಲೀಸರು ನಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು.

ಅಕ್ಟೋಬರ್ 4, 2020 : ಆರೋಪಿಗಳ ಪರ ಪ್ರತಿಭಟನೆ

ರಾಷ್ಟ್ರೀಯ ಸವರ್ಣ ಪರಿಷತ್” ಎಂಬ ಸಂಘಟನೆ ಆರೋಪಿಗಳ ಬೆಂಬಲಕ್ಕೆ ನಿಂತಿತ್ತು. ಅಕ್ಟೋಬರ್ 4 ರಂದು ಬಿಜೆಪಿಯ ಮಾಜಿ ಶಾಸಕರಾದ ರಾಜವೀರ್ ಸಿಂಗ್ ಪೆಹೆಲ್ವಾನ್ ಆರೋಪಿಗಳನ್ನು ಬೆಂಬಲಿಸಿ ರ್‍ಯಾಲಿ ನಡೆಸಿದ್ದರು. ಈ ರ್‍ಯಾಲಿಯಲ್ಲಿ ನಾಲ್ವರು ಆರೋಪಿಗಳ ಕುಟುಂಬ ಸದಸ್ಯರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು. ಜೊತೆಗೆ ಈ ಸಭೆಯಲ್ಲಿ ಆರ್‌ಎಸ್‌ಎಸ್, ಕರ್ಣಿ ಸೇನೆ ಮತ್ತು ಬಜರಂಗದಳದಂತಹ ಬಲಪಂಥೀಯ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. ಈ ಸದಸ್ಯರು ಕ್ಷತ್ರಿಯ ಮಹಾಸಭಾ, ರಾಷ್ಟ್ರೀಯ ಸವರ್ಣ ಸಂಘಟನೆ ಮುಂತಾದವುಗಳನ್ನು ಒಳಗೊಂಡಂತೆ ವಿವಿಧ ಮೇಲ್ಜಾತಿಯ ಸಂಘಟನೆಗಳ ಭಾಗವಾಗಿದ್ದರು.

ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಬೆನ್ನಲ್ಲಿ ಹತ್ರಾಸ್ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐ ತನಿಖೆಗೆ ವಹಿಸಿತು.

ಅಕ್ಟೋಬರ್ 5, 2020: ವರದಿ ಮಾಡಲು ತೆರಳಿದ ಪತ್ರಕರ್ತ ಸಿದ್ದಿಕ್ ಕಪ್ಪನ್ ಬಂಧನ

ಹತ್ರಾಸ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ವರದಿ ಮಾಡಲು ಹೊರಟಿದ್ದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್, ಅವರ ಕಾರು ಚಾಲಕ ಸೇರಿ ನಾಲ್ವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಅವರ ಮೇಲೆ ಯುಎಪಿಎ, ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಲಾಗಿತ್ತು. ಇತ್ತೀಚಿಗಷ್ಟೇ ಅವರಿಗೆ ಜಾಮೀನು ದೊರಕಿದ್ದು, 28 ತಿಂಗಳ ಜೈಲು ವಾಸದ ನಂತರ ಬಿಡುಗಡೆಯಾಗಿದ್ದಾರೆ.

ಅಕ್ಟೋಬರ್ 6, 2020: ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಹತ್ರಾಸ್‌ನಲ್ಲಿ ನಡೆದ ದಲಿತ ಯುವತಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯನ್ನು ಸುಪ್ರೀಂ ಕೋರ್ಟ್ “ಅಸಾಧಾರಣ ಮತ್ತು ಆಘಾತಕಾರಿ” ಎಂದು ಕರೆದಿದ್ದು, ಪ್ರಕರಣದಲ್ಲಿ ಸಾಕ್ಷಿಗಳನ್ನು ಹೇಗೆ ರಕ್ಷಿಸಲಾಗುತ್ತಿದೆ ಎಂಬ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ.

ಅಕ್ಟೋಬರ್ 7, 2020: ಆರೋಪಿಗಳ ಪರ ಹೇಳಿಕೆ

ನವಾಬ್‌ಗಂಜ್ ಪುರಸಭೆಯ ಮಾಜಿ ಅಧ್ಯಕ್ಷರಾಗಿರುವ ಬಿಜೆಪಿ ಮುಖಂಡ ರಂಜೀತ್ ಶ್ರೀವಾಸ್ತವ (67) “ಈ ಘಟನೆಯಲ್ಲಿ ಅತ್ಯಾಚಾರ ನಡೆದಿಲ್ಲ, ಯುವತಿಯೇ ತನ್ನ ಗೆಳೆಯನನ್ನು ಹೊಲಕ್ಕೆ ಕರೆಸಿಕೊಂಡಿರಬೇಕು, ಈ ಸಮಯದಲ್ಲಿ ಅವರು ಸಿಕ್ಕಿಬಿದ್ದಿರಬಹುದು” ಎಂದು ಹೇಳಿಕೆ ನೀಡಿ ಆರೋಪಿಗಳ ಪರ ವಕಾಲತ್ತು ವಹಿಸಿದ್ದರು.

ಅಕ್ಟೋಬರ್ 16, 2020: ಅಲಹಾಬಾದ್ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಅಲಹಾಬಾದ್ ಹೈಕೋರ್ಟ್ ಮೇಲ್ವಿಚಾರಣೆ ನಡೆಸಲಿದೆ ಎಂದು ಸುಪ್ರೀಂಕೋರ್ಟ್ ಸೂಚಿಸಿತ್ತು.

ನವೆಂಬರ್ 22, 2020: ಸಂತ್ರಸ್ತರ ಕುಟುಂಬ ಭಯದಲ್ಲಿ

ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣದ ಸಂತ್ರಸ್ಥೆಯ ಕುಟುಂಬ ಸದಸ್ಯರು ಗೃಹಬಂಧನಕ್ಕೆ ಸಮಾನವಾದ ಪರಿಸ್ಥಿತಿಗಳಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ನೀಡಿದ್ದ ಸಿಆರ್‌ಪಿಎಫ್‌ ಭದ್ರತೆ ಹಿಂತೆಗೆದುಕೊಂಡ ನಂತರ, ಕುಟುಂಬ ಸದಸ್ಯರು ಜೀವಭಯಕ್ಕೆ ಒಳಗಾಗಿದ್ದಾರೆ. ನಿರ್ಭಯಾ ನಿಧಿಯ ಮೂಲಕ ಹತ್ರಾಸ್ ಸಂತ್ರಸ್ತ ಕುಟುಂಬಕ್ಕೆ ಭದ್ರತೆ ಮತ್ತು ಪುನರ್ವಸತಿ ಕಲ್ಪಿಸಬೇಕು ಎಂದು ಎಂದು PUCL ತನ್ನ ಸತ್ಯಶೋಧನಾ ವರದಿ ಬಿಡುಗಡೆ ಮಾಡಿತ್ತು.

ಡಿಸೆಂಬರ್ 19, 2020: ಜಾರ್ಜ್ ಶೀಟ್ ಸಲ್ಲಿಕೆ

2020 ಡಿಸೆಂಬರ್ 19 ರಂದು, ಸಿಬಿಐ ಹತ್ರಾಸ್‌ನ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಅನ್ನು ಸಲ್ಲಿಸಿದೆ. ನಾಲ್ಕು ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪಗಳನ್ನು ಹೊರಿಸಲಾಗಿದೆ. ಸಂತ್ರಸ್ತೆಯ ಹೇಳಿಕೆಯನ್ನು ಲಿಖಿತವಾಗಿ ದಾಖಲಿಸುವುದರಲ್ಲಿ ತೋರಿದ ವಿಳಂಬ ಮತ್ತು ಯುವತಿಯ ವೈದ್ಯಕೀಯ ಪರೀಕ್ಷೆಯಲ್ಲಿ ಯುಪಿ ಪೊಲೀಸರ ಲೋಪದೋಷಗಳನ್ನೂ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ಮಾರ್ಚ್ 5, 2021 : ಸಂತ್ರಸ್ತ ಕುಟುಂಬ ಮತ್ತು ವಕೀಲರಿಗೆ ನ್ಯಾಯಾಲಯದಲ್ಲೇ ಬೆದರಿಕೆ!

2021ರ ಮಾರ್ಚ್ 5 ರಂದು ಹತ್ರಾಸ್ ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವೇಳೆ ವಕೀಲರು ಸೇರಿದಂತೆ ಜನರ ದೊಡ್ಡ ಗುಂಪು ನ್ಯಾಯಾಲಯದ ಕೋಣೆಗೆ ಪ್ರವೇಶಿಸಿ ಅರ್ಜಿದಾರರನ್ನು ಮತ್ತು ದೂರುದಾರರ ಸಲಹೆಗಾರರನ್ನು ಸುತ್ತುವರಿದು ಅವರಿಗೆ ಬೆದರಿಕೆ ಹಾಕಿದೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯಾಲಯದಲ್ಲೇ ಬೆದರಿಕೆ ಹಿನ್ನೆಲೆ, ಸದ್ಯ ಪ್ರಕರಣದ ವಿಚಾರಣೆಯನ್ನು ಪಶ್ಚಿಮ ಯುಪಿ ಜಿಲ್ಲೆಯಿಂದ ಸ್ಥಳಾಂತರಿಸುವ ಬಗ್ಗೆ ಯೋಚಿಸುವುದಾಗಿ ನ್ಯಾಯಪೀಠ ಹೇಳಿತ್ತು.

ಮಾರ್ಚ್ 13, 2021: ಪ್ರತಿಭಟನಾಕಾರರಿಗೆ ಪೊಲೀಸ್ ನೋಟಿಸ್

ಹತ್ರಾಸ್ ಸಾಮೂಹಿಕ ಅತ್ಯಾಚಾರ, ಕೊಲೆ ದೌರ್ಜನ್ಯದ ವಿರುದ್ಧದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ 10 ಮಹಿಳಾ ನಾಯಕಿಯರಿಗೆ ಉತ್ತರ ಪ್ರದೇಶ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಈ ಮಹಿಳಾ ನಾಯಕಿಯವರು ಸಿಎಎ ವಿರುದ್ಧ ಕೂಡ ಪ್ರತಿಭಟನೆ ನಡೆಸಿದ್ದರು.

ಮಾರ್ಚ್ 10, 2022: ಹತ್ರಾಸ್‌ನಲ್ಲಿ ಬಿಜೆಪಿಗೆ ಜಯ

2022ರ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಹತ್ರಾಸಿನಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿ ಒಂದೂವರೆ ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಠಾಕೂರ್ ಸಮುದಾಯದ ಅಭ್ಯರ್ಥಿಯನ್ನೇ ಬಿಜೆಪಿ ಕಣಕ್ಕಿಳಿಸಿತ್ತು. ಇಡೀ ಮೇಲ್ಜಾತಿಗಳು ಠಾಕೂರರೊಂದಿಗೆ ಸೇರಿ, ದಲಿತ ಯುವತಿಯನ್ನು ಅತ್ಯಾಚಾರಗೈದು ಕೊಲೆ ಮಾಡಿದ್ದಲ್ಲದೆ, ಸಾಕ್ಷಿನಾಶಕ್ಕಾಗಿ ಅಮಾನವೀಯವಾಗಿ ಶವಸಂಸ್ಕಾರ ಮಾಡಿದ ಬಿಜೆಪಿಯ ಆದಿತ್ಯನಾಥ್ ಸರ್ಕಾರದ ಪರವಾಗಿ ಓಟು ಚಲಾಯಿಸಿ ದಲಿತರನ್ನು ಮತ್ತೆ ಸೋಲಿಸಿದ್ದಾರೆ.

ಫೆಬ್ರವರಿ 02, 2023: ಸಿದ್ದಿಕ್ ಕಪ್ಪನ್ ಬಿಡುಗಡೆ

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣದಲ್ಲಿ 28 ತಿಂಗಳುಗಳಿಂದ ಬಂಧನದಲ್ಲಿದ್ದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್‌ ಕೊನೆಗೂ ಇಂದು ಲಕ್ನೋ ಜೈಲಿನಿಂದ ಹೊರಬಂದರು.

ಮಾರ್ಚ್ 02, 2023: ಮೂವರು ಆರೋಪಿಗಳ ಖುಲಾಸೆ

ಇನ್ನೂ ಮಾಸದ ಆ ದುರ್ಘಟನೆ ನಡೆದು ಸುಮಾರು ಎರಡೂವರೆ ವರ್ಷದ ನಂತರ ಉತ್ತರ ಪ್ರದೇಶದ ವಿಶೇಷ ನ್ಯಾಯಾಲಯ ಗುರುವಾರ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿ, ಒಬ್ಬನನ್ನು ಮಾತ್ರ ದೋಷಿ ಎಂದು ತೀರ್ಪು ನೀಡಿದೆ. ಆರೋಪಿಗಳಾದ ರಾಮು, ಲವಕುಶ್ ಮತ್ತು ರವಿ ಅವರನ್ನು ಖುಲಾಸೆಗೊಳಿಸಲಾಗಿದ್ದು, ಆರೋಪಿ ಸಂದೀಪ್‌ಗೆ ಕೊಲೆಗೆ ಸಮನಲ್ಲದ ನರಹತ್ಯೆ ಮತ್ತು ಎಸ್‌ಸಿ/ಎಸ್‌ಟಿ ಕಾಯಿದೆಯಡಿಯ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಪರಾಧಿಗಳನ್ನು ಬಿಡುವುದಿಲ್ಲ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದರು. ಆದರೆ ಆಗಿದ್ದೇನು? ಮೂವರು ಆರೋಪಿಗಳು ದೋಷಮುಕ್ತರಾಗಿದ್ದಾರೆ. “ನನ್ನ ಸಹೋದರಿಯ ಆತ್ಮಕ್ಕೆ ವಿಶ್ರಾಂತಿ ಸಿಕ್ಕಿಲ್ಲ” ಎಂದು ಹತ್ರಾಸ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಸಹೋದರ ನೋವು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನನ್ನ ಸಹೋದರಿಯ ಆತ್ಮಕ್ಕೆ ವಿಶ್ರಾಂತಿ ಸಿಕ್ಕಿಲ್ಲ; ಆರೋಪಿಗಳ ಖುಲಾಸೆ ಬಳಿಕ ಹತ್ರಾಸ್‌ ಅತ್ಯಾಚಾರ ಸಂತ್ರಸ್ತೆಯ ಸಹೋದರ ಹೇಳಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...

ವಿಬಿ-ಜಿ ರಾಮ್ ಜಿ ಮಸೂದೆ ‘ರಾಜ್ಯ ವಿರೋಧಿ’ ಮತ್ತು ‘ಗ್ರಾಮ ವಿರೋಧಿ’: ರಾಹುಲ್ ಗಾಂಧಿ

ಎರಡು ದಶಕಗಳ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...