Homeಮುಖಪುಟಭಾರತದ ರಾಜಕಾರಣಿಗಳ ಮೇಲೆ ಪೆಗಾಸಸ್ ಕಣ್ಗಾವಲಿದೆ; ಕೇಂಬ್ರಿಡ್ಜ್‌ನಲ್ಲಿ ರಾಹುಲ್ ಪ್ರಸ್ತಾಪ

ಭಾರತದ ರಾಜಕಾರಣಿಗಳ ಮೇಲೆ ಪೆಗಾಸಸ್ ಕಣ್ಗಾವಲಿದೆ; ಕೇಂಬ್ರಿಡ್ಜ್‌ನಲ್ಲಿ ರಾಹುಲ್ ಪ್ರಸ್ತಾಪ

- Advertisement -
- Advertisement -

“ಪೆಗಾಸಸ್‌ ಸ್ಪೈವೇರ್‌ ಬಳಸಿ ನನ್ನನ್ನು ಸೇರಿದಂತೆ ಅನೇಕ ರಾಜಕಾರಣಿಗಳ ಮೇಲೆ ಕಣ್ಗಾವಲು ಇಡಲಾಗಿದೆ” ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಅವರು ಇಂಗ್ಲೆಡ್‌‌ನ ಕೇಂಬ್ರಿಡ್ಜ್‌ ವಿಶ್ವವಿದ್ಯಾನಿಲಯದ ಉಪನ್ಯಾಸದ ವೇಳೆ ಹೇಳಿದ್ದಾರೆ.

ರಾಹುಲ್ ಗಾಂಧಿಯವರು ಮಾತನಾಡಿರುವ ವಿಡಿಯೊವನ್ನು ಕಾಂಗ್ರೆಸ್‌ ನಾಯಕ ಸ್ಯಾಮ್ ಪಿತ್ರೋಡಾ ಅವರು ಶುಕ್ರವಾರ ಹಂಚಿಕೊಂಡಿದ್ದಾರೆ.

ಪೋನಿನಲ್ಲಿ ಮಾತನಾಡುವಾಗ ಜಾಗೂರೂಕವಾಗಿರಿ, ನಿಮ್ಮ ಕಾಲ್‌ ರೆಕಾರ್ಡ್ ಆಗುತ್ತಿದೆ ಎಂದು ಗುಪ್ತಚರ ಅಧಿಕಾರಿಗಳು ಹೇಳಿರುವುದಾಗಿ ರಾಹುಲ್‌ ತಿಳಿಸಿದ್ದಾರೆ.

2021ರಲ್ಲಿ 17 ಮಾಧ್ಯಮ ಸಂಸ್ಥೆಗಳು ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಒಂದು ಗುಂಪು ನಡೆಸಿದ ತನಿಖೆಗೆ ಸಂಬಂಧಿಸಿದಂತೆ ರಾಹುಲ್ ಪ್ರಸ್ತಾಪಿಸಿದ್ದಾರೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಪತ್ರಕರ್ತರು, ಹೋರಾಟಗಾರರು, ರಾಜಕಾರಣಿಗಳ ಮೇಲೆ ಕಣ್ಣಿಡಲು ಪೆಗಾಸಸ್ ಸ್ಪೈವೇರ್ ಅನ್ನು ಬಳಸಲಾಗುತ್ತಿದೆ ಎಂದು ತನಿಖಾ ವರದಿಗಳು ಹೇಳುತ್ತಿವೆ.

ರಾಹುಲ್ ಗಾಂಧಿ, ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಮತ್ತು ಭಾರತದ ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸಾ ಅವರನ್ನು ಟಾರ್ಗೆಟ್‌ ಮಾಡಲು ಉದ್ದೇಶಿಸಿರುವುದನ್ನು ‘ದಿ ವೈರ್’ ವರದಿ ಬಿಚ್ಚಿಟ್ಟಿದೆ.

ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ 10 ಫೋನ್‌ಗಳನ್ನು ಭಾರತದಲ್ಲಿ ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವೆಲ್ಲವೂ ಹ್ಯಾಕ್ ಆಗಿವೆ ಅಥವಾ ಇನ್ನೊಬ್ಬರಿಗೆ ಡಿವೈಸ್‌ಗಳು ಸುಲಭವಾಗಿ ಸಹಕರಿಸಿವೆ ಎಂದು ಪರೀಕ್ಷಾ ವರದಿ ತಿಳಿಸಿದೆ.

ಪ್ರಕರಣ ಬಯಲಿಗೆ ಬಂದ ನಂತರ ಆರೋಪಗಳ ತನಿಖೆ ಮತ್ತು ಸರ್ಕಾರದಿಂದ ಪ್ರತಿಕ್ರಿಯೆಯನ್ನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಸಲಾಯಿತು. ಪೆಗಾಸಸ್ ಪ್ರಕರಣದಲ್ಲಿನ ಸಮಸ್ಯೆಗಳನ್ನು ತನಿಖೆ ಮಾಡಲು ನ್ಯಾಯಾಲಯವು ತಾಂತ್ರಿಕ ಸಮಿತಿಯನ್ನು ಅಕ್ಟೋಬರ್‌ನಲ್ಲಿ ರಚಿಸಿತ್ತು. ರಾಷ್ಟ್ರೀಯ ಭದ್ರತೆಯನ್ನು ಉಲ್ಲೇಖಿಸಿ ಅಫಿಡವಿಟ್‌ಗಳನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ ಎನ್ನುತ್ತಿರುವ ಕೇಂದ್ರ ಸರ್ಕಾರವನ್ನು ಕೋರ್ಟ್ ಕಟುವಾಗಿ ಟೀಕಿಸಿತ್ತು.

ಅಕ್ರಮ ಕಣ್ಗಾವಲು ಆರೋಪಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ಆಗಸ್ಟ್‌ನಲ್ಲಿ ಸಲ್ಲಿಸಿದ 29 ಸಾಧನಗಳ ಪೈಕಿ ಐದರಲ್ಲಿ ಮಾಲ್‌ವೇರ್ ಕುರುಹುಗಳು ಕಂಡುಬಂದಿವೆ. ಆದಾಗ್ಯೂ, ಮಾಲ್ವೇರ್ ಪೆಗಾಸಸ್ ಆಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿರಿ: ರಿಸರ್ವ್ ಬ್ಯಾಂಕಿನಲ್ಲಿರುವುದಕ್ಕಿಂತ ಹೆಚ್ಚು ಹಣ ಬಿಜೆಪಿಗರ ಮನೆಯಲ್ಲಿದೆ: ಕಾಂಗ್ರೆಸ್ ಆರೋಪ

ಇಸ್ರೇಲಿ ಸೈಬರ್ ಗುಪ್ತಚರ ಕಂಪನಿಯಾದ ಎನ್‌ಎಸ್‌ಒ ಗ್ರೂಪ್‌ನ ಮೂಲಕ ಪೆಗಾಸಸ್ ಸ್ಪೈವೇರ್‌ನ ಖರೀದಿಗಳು ನಡೆದಿವೆ. ಪ್ರಪಂಚದಾದ್ಯಂತದ ಸರ್ಕಾರಗಳಿಗೆ ಪರವಾನಗಿಯನ್ನು ಕಂಪನಿಯು ನೀಡಿದೆ. ಉತ್ತಮ ಮಾನವ ಹಕ್ಕುಗಳ ದಾಖಲೆ ‘ಪರಿಶೀಲಿಸಿದ ಸರ್ಕಾರಗಳಿಗೆ’ ಮಾತ್ರ ಸ್ಪೈವೇರ್‌ ಮಾರಾಟ ಮಾಡಲಾಗಿದೆ, ಅಪರಾಧಿಗಳನ್ನು ಗುರಿಯಾಗಿಸುವ ಉದ್ದೇಶ ಇದಕ್ಕಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಕೇಂದ್ರ ಸಚಿವ ಮತ್ತು ಭಾರತೀಯ ಜನತಾ ಪಕ್ಷದ ನಾಯಕ ಅನುರಾಗ್ ಠಾಕೂರ್ ಅವರು ಶುಕ್ರವಾರ ಪ್ರತಿಕ್ರಿಯಿಸಿದ್ದು, “ಇತ್ತೀಚಿನ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿದೆ. ಹೀಗಾಗಿ ರಾಹುಲ್‌ ಗಾಂಧಿಯವರು ವಿದೇಶಿ ನೆಲದಲ್ಲಿ ನಿಂತು ಆರೋಪಗಳನ್ನು ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

“ಪ್ರಧಾನಿಯವರ ಮೇಲಿನ ಅವರ ದ್ವೇಷವನ್ನು ನಾವು ಅರ್ಥಮಾಡಿಕೊಳ್ಳಬಹುದು, ಆದರೆ ವಿದೇಶಿ ಸ್ನೇಹಿತರ ಸಹಾಯದಿಂದ ವಿದೇಶಿ ನೆಲದಲ್ಲಿ ನಿಂತು ದೇಶವನ್ನು ಕೆಡಿಸುವ ಪಿತೂರಿ ಇದಾಗಿದೆ. ಕಾಂಗ್ರೆಸ್‌ನ ಕಾರ್ಯಸೂಚಿಗಳು ಪ್ರಶ್ನಾರ್ಹವಾಗಿವೆ” ಎಂದಿದ್ದಾರೆ ಠಾಕೂರ್‌.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಿರೀಕ್ಷಣಾ ಜಾಮೀನು ಕೋರಿ ಹೆಚ್‌.ಡಿ ರೇವಣ್ಣ ಅರ್ಜಿ: ಎಸ್‌ಐಟಿಗೆ ಕೋರ್ಟ್‌ ನೋಟಿಸ್

0
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಮೊದಲ ಆರೋಪಿ, ಶಾಸಕ ಹೆಚ್‌.ಡಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ವಿಶೇಷ ತನಿಖಾ ತಂಡ (ಎಸ್‌ಐಟಿ)ಗೆ ನೋಟಿಸ್ ಜಾರಿ ಮಾಡಿದೆ...