Homeಮುಖಪುಟಹಿಂದೂ ಧರ್ಮದ ಪಠ್ಯ, ಸಂಪ್ರದಾಯದ ಮರುಪರಿಶೀಲನೆ ಅಗತ್ಯವಿದೆ: ಭಾಗವತ್‌

ಹಿಂದೂ ಧರ್ಮದ ಪಠ್ಯ, ಸಂಪ್ರದಾಯದ ಮರುಪರಿಶೀಲನೆ ಅಗತ್ಯವಿದೆ: ಭಾಗವತ್‌

- Advertisement -
- Advertisement -

“ಹಿಂದೂ ಧರ್ಮದ ಪಠ್ಯಗಳು ಮತ್ತು ಸಂಪ್ರದಾಯಗಳನ್ನು ಮರುಪರಿಶೀಲಿಸುವ ಅಗತ್ಯವಿದೆ” ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ನಾಗ್ಪುರದಲ್ಲಿ ಗುರುವಾರ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿರುವ ಅವರು, “ಹಿಂದೆ ನಮ್ಮಲ್ಲಿ ಗ್ರಂಥಗಳಿರಲಿಲ್ಲ; ಜ್ಞಾನವು ಮೌಖಿಕ ಸಂಪ್ರದಾಯದ ಮೂಲಕ ಹರಿಯುತ್ತಿತ್ತು. ನಂತರದಲ್ಲಿ ಕೃತಿಗಳನ್ನು ರಚಿಸಲಾಯಿತು. ಕೆಲವು ಸ್ವಾರ್ಥಿಗಳು ತಮಗೆ ಬೇಕಾದಂತೆ ತಪ್ಪುಗಳನ್ನು ಆ ಕೃತಿಗಳಲ್ಲಿ ಸೇರಿಸಿದ್ದಾರೆ” ಎಂದಿದ್ದಾರೆ.

“ಹಿಂದೂ ಮಹಾಕಾವ್ಯವಾದ ‘ರಾಮಚರಿತಮಾನಸ’ದಲ್ಲಿ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಬಗ್ಗೆ ಆಕ್ಷೇಪಾರ್ಹ ಭಾಷೆ ಇದೆ” ಎಂದು ಸಮಾಜವಾದಿ ಪಕ್ಷದ ಎಂಎಲ್‌ಸಿ ಸ್ವಾಮಿ ಪ್ರಸಾದ್ ಮೌರ್ಯ ಅವರು ಹೇಳಿಕೆ ನೀಡಿದ್ದರು. ಈ ವಿವಾದ ಭುಗಿಲೆದ್ದ ಎರಡು ತಿಂಗಳ ನಂತರ ಭಾಗವತ್ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ. ರಾಮಚರಿತಮಾನಸದಲ್ಲಿನ ಈ ಅಂಶಗಳನ್ನು ತೆಗೆದು ಹಾಕಬೇಕು ಎಂದು ಮೌರ್ಯ ಒತ್ತಾಯಿಸಿದ್ದರು.

ಮೌರ್ಯ ವಿರುದ್ಧ ಪ್ರಕರಣವೂ ದಾಖಲಾಗಿದೆ. ಧಾರ್ಮಿಕ ಭಾವನೆಗೆ ಘಾಸಿ, ಅಶಾಂತಿಯನ್ನು ಉಂಟು ಮಾಡಲು ಉದ್ದೇಶಪೂರ್ವಕವಾಗಿ ಅವಮಾನಿಸುವುದು, ವರ್ಗಗಳ ನಡುವೆ ದ್ವೇಷವನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವುದು- ಸೇರಿದಂತೆ ಮೊದಲಾದ ಆರೋಪಗಳನ್ನು ಹೊರಿಸಿ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಉತ್ತರ ಪ್ರದೇಶ ಪೊಲೀಸರು ಸ್ವಾಮಿ ಪ್ರಸಾದ್‌ ಮೌರ್ಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಗುರುವಾರ ಭಾಗವತ್‌ ಅವರು ತಾವು ಮಾಡಿದ ಭಾಷಣದಲ್ಲಿ, “ಹಿಂದೂ ಧರ್ಮವು ಜೀವನವನ್ನು ಸಮತೋಲನಗೊಳಿಸುವ ಧರ್ಮವಾಗಿದೆ. ನಮ್ಮ ಧರ್ಮವು ವೈಜ್ಞಾನಿಕ ತತ್ವಗಳನ್ನು ಅನುಸರಿಸುತ್ತದೆ ” ಎಂದು ಬಣ್ಣಿಸಿದ್ದಾರೆ.

“ನಮ್ಮ ಧರ್ಮವು ಮನುಷ್ಯರಿಗೆ ಅವಶ್ಯಕವಾಗಿದೆ, ಏಕೆಂದರೆ ಹಿಂದೂ ಧರ್ಮವು ವೈಜ್ಞಾನಿಕವಾಗಿ ಮನುಷ್ಯನಿಗೆ ಸಹಾಯ ಮಾಡುತ್ತದೆ. ನಮ್ಮ ಸಂಪ್ರದಾಯಗಳಲ್ಲಿ ನಮ್ಮ ಪೂರ್ವಜರು ಪ್ರತಿಯೊಂದು ಕ್ಷೇತ್ರದಲ್ಲೂ ಜ್ಞಾನದ ಅನ್ವೇಷಣೆ ಮೂಲಕ ಕೊಡುಗೆಗಳನ್ನು ನೀಡಿದ್ದಾರೆ” ಎಂದು ಅಭಿಪ್ರಾಯಟ್ಟಿದ್ದಾರೆ.

“ಎಲ್‌ಜಿಬಿಟಿಕ್ಯೂ (ಲೆಸ್ಬಿಯನ್‌, ಗೇ, ಬೈಸೆಕ್ಸುವಲ್‌, ಟ್ರಾನ್ಸ್‌ಜೆಂಡರ್‌, ಕ್ವೀರ್‌) ಸಮುದಾಯದ ಸದಸ್ಯರೂ ಇತರರಂತೆ ಬದುಕುವ ಹಕ್ಕು ಹೊಂದಿದ್ದಾರೆ” ಎಂದು ಜನವರಿಯಲ್ಲಿ ಭಾಗವತ್‌ ಹೇಳಿಕೆ ನೀಡಿದ್ದರು.

ಹಿಂದೂ ಸಮಾಜವು ಟ್ರಾನ್ಸ್‌ಜೆಂಡರ್‌ಗಳನ್ನು ಸಮಸ್ಯೆಯೆಂದು ಭಾವಿಸುವುದಿಲ್ಲ. ಎಲ್‌ಜಿಬಿಟಿಕ್ಯೂ ಸಮುದಾಯದ ಸದಸ್ಯರು ತಮ್ಮದೇ ಆದ ಖಾಸಗಿತನವನ್ನು, ಸಾಮಾಜಿಕ ಸ್ಥಾನಮಾನವನ್ನು ಹೊಂದಲು ಅರ್ಹರು ಎಂದು ತಿಳಿಸಿದ್ದರು.

“ಜಾತಿ ವ್ಯವಸ್ಥೆಯನ್ನು ಪಂಡಿತರು ಸೃಷ್ಟಿಸಿದ್ದಾರೆ” ಎಂದು ಭಾಗವತ್‌ ಫೆಬ್ರುವರಿಯಲ್ಲಿ ಹೇಳಿಕೆ ನೀಡಿದ್ದು ವಿವಾದಕ್ಕೆ ಗುರಿಯಾಗಿತ್ತು. ಬ್ರಾಹ್ಮಣ ಸಮುದಾಯವು ಭಾಗವತ್‌ ವಿರುದ್ಧ ಕಿಡಿಕಾರಿತ್ತು.

ಭಕ್ತಿ ಕವಿ ಸಂತ ರವಿದಾಸ್ ಅವರ ಜಯಂತಿಯ ಸ್ಮರಣಾರ್ಥ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಭಾಗವತ್ ರವಿದಾಸ್ ಅವರು ದೇವರು ಕುರಿತು ಹೇಳಿರುವುದನ್ನು ಉಲ್ಲೇಖಿಸಿದ್ದರು. “ನಾನು (ದೇವರು) ಎಲ್ಲಾ ಜೀವಿಗಳಲ್ಲಿ ಇದ್ದೇನೆ. ಹೆಸರು ಅಥವಾ ಬಣ್ಣ ಯಾವುದೇ ಇರಲಿ, ಎಲ್ಲರಿಗೂ ಒಂದೇ ಸಾಮರ್ಥ್ಯ, ಒಂದೇ ಗೌರವವಿದೆ. ಎಲ್ಲಾ ನನ್ನ ಸ್ವಂತದ್ದು. ಯಾರೂ ಮೇಲು ಅಥವಾ ಕೀಳು ಅಲ್ಲ. ಶಾಸ್ತ್ರಗಳ ಆಧಾರದ ಮೇಲೆ ಪಂಡಿತರು ಹೇಳುವುದು ಸುಳ್ಳು. ಮೇಲು-ಕೀಳು ಎಂಬ ಈ ಕಲ್ಪನೆಯಲ್ಲಿ ಸಿಲುಕಿ ದಾರಿ ತಪ್ಪಿದ್ದೇವೆ. ಈ ಭ್ರಮೆಯನ್ನು ತೊಲಗಿಸಬೇಕು”- ಎಂದು ಭಾಗವತ್ ಹೇಳಿದ್ದರು.

ವಿರೋಧ ಉಂಟಾದ ಕೆಲವು ದಿನಗಳ ನಂತರ ಆರ್‌ಎಸ್‌ಎಸ್ ಪ್ರತಿಕ್ರಿಯಿಸಿ, ಭಾಗವತ್ ಅವರು ಮಠಾಠಿ ಮೇಲ್ವರ್ಗದ ಹಿಂದೂಗಳನ್ನು ಗುರಿಯಾಗಿಸಿಕೊಂಡು ಮಾತನಾಡಿಲ್ಲ ಎಂದು ತಿಳಿಸಿತ್ತು. ಭಾಗವತ್ ಅವರು ಬಳಸಿದ ‘ಪಂಡಿತ್‌’ ಎಂಬ ಪದವು ‘ವಿದ್ವಾಂಸರು’ ಎಂಬ ಅರ್ಥವನ್ನು ಹೊಂದಿದೆ ಹೊರತು, ‘ಬ್ರಾಹ್ಮಣರು’ ಎಂದಲ್ಲ ಎಂದು ಆರ್‌ಎಸ್‌ಎಸ್‌ ಸಮರ್ಥನೆ ನೀಡಿತ್ತು.

ಭಾಗವತ್‌ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪುರಿ ಶಂಕರಾಚಾರ್ಯರಾದ ನಿಶ್ಚಲಾನಂದ ಸರಸ್ವತಿ ಅವರಲ್ಲಿ ಭಕ್ತರೊಬ್ಬರು ಪ್ರಶ್ನಿಸಿದಾಗ ಸ್ವಾಮೀಜಿಯವರು ಜಾತಿ ವ್ಯವಸ್ಥೆಯನ್ನು ಸಮರ್ಥಿಸಿದ್ದರು. ಭಾಗವತ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿರಿ: ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್‌ ತೇಲಿಬಿಟ್ಟ ಜನಸಂಖ್ಯೆ ಹೆಚ್ಚಳ, ಮತಾಂತರ ಕತೆಯ ವಾಸ್ತವವೇನು?

“ಮೊದಲ ಬ್ರಾಹ್ಮಣನ ಹೆಸರು ಬ್ರಹ್ಮಜಿ. ನೀವು ಧರ್ಮಗ್ರಂಥಗಳನ್ನು ಅಧ್ಯಯನ ಮಾಡಬೇಕು. ಪ್ರಪಂಚದ ಎಲ್ಲಾ ಶಾಸ್ತ್ರಗಳು ಮತ್ತು ಕಲೆಗಳನ್ನು ಬ್ರಾಹ್ಮಣರು ಮಾತ್ರ ವಿವರಿಸುತ್ತಾರೆ. ಶಿಕ್ಷಣ, ರಕ್ಷಣೆ ಮತ್ತು ಇತರ ಸೇವೆಗಳು ಯಾವಾಗಲೂ ಸಮತೋಲನದಲ್ಲಿರಬೇಕು. ನಾವು ಸನಾತನ ವ್ಯವಸ್ಥೆಯನ್ನು ಒಪ್ಪಿಕೊಳ್ಳದಿದ್ದರೆ, ಆಗ ಅಲ್ಲಿ ಯಾವ ವ್ಯವಸ್ಥೆ ಇರಬೇಕು?” ಎಂದು ಪ್ರಶ್ನಿಸಿದ್ದರು.

“ಆರ್‌ಎಸ್‌ಎಸ್‌ಗೆ ಸ್ವಂತ ಜ್ಞಾನವಿಲ್ಲ. ಜಾತಿ ವ್ಯವಸ್ಥೆಯನ್ನು ಪಂಡಿತರು ಸೃಷ್ಟಿಸಿದ್ದಾರೆಯೇ ಹೊರತು ಮೂರ್ಖರಿಂದಲ್ಲ. ಇಂದಿಗೂ ಜನರು ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು ಭಾರತದ ಬ್ರಾಹ್ಮಣರ ಬಳಿಗೆ ಬರುತ್ತಾರೆ” ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದರು.

ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಪ್ರತಿಕ್ರಿಯಿಸಿ, “ಭಾಗವತ್ ಅವರು ತಡವಾಗಿ ಅಪಾರ ಬುದ್ಧಿವಂತಿಕೆಯನ್ನು ಸಂಪಾದಿಸಿದ್ದಾರೆ. ನೀವು ಸಂಶೋಧನೆ ಮಾಡಿದ್ದೀರಾ?… ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ನಾಲ್ಕು ವರ್ಣಗಳನ್ನು ಸೃಷ್ಟಿಸಿದನೆಂದು ನಾವು ಓದಿದ್ದೇವೆ. ದೇವರು ಇದನ್ನು (ಜಾತಿ ವ್ಯವಸ್ಥೆ) ಸೃಷ್ಟಿಸಿಲ್ಲ, ಅವುಗಳನ್ನು ಪಂಡಿತರು ನಿರ್ಮಿಸಿದ್ದಾರೆ ಎಂದು ಭಾಗವತ್ ಹೇಳುತ್ತಿದ್ದಾರೆ. ಈಗವರು ‘ಪಂಡಿತ್’ ಎಂದರೆ ‘ವಿದ್ವಾಂಸರು’ ಹೊರತು ‘ಬ್ರಾಹ್ಮಣ’ ಅಲ್ಲ ಎನ್ನುತ್ತಿದ್ದಾರೆ. ವಿದ್ವಾಂಸರು ಏನಾದರೂ ಹೇಳಿದ್ದರೆ ನೀವು ಅದನ್ನು ಏಕೆ ನಿರಾಕರಿಸುತ್ತೀರಿ?” ಎಂದಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಬಾಂಡ್‌: ಎಸ್ಒಪಿ ಮಾಹಿತಿ ನೀಡಲು ಮತ್ತೆ ನಿರಾಕರಿಸಿದ ಎಸ್‌ಬಿಐ

0
ದೇಶದಲ್ಲಿ ಭಾರೀ ಸದ್ದು ಮಾಡಿದ್ದ ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಎಸ್‌ಒಪಿ ಮಾಹಿತಿಯನ್ನು ನೀಡಲು ಭಾರತೀಯ ಸ್ಟೇಟ್‌ ಬ್ಯಾಂಕ್‌ ಮತ್ತೆ ನಿರಾಕರಿಸಿದ್ದು, ಕೇಂದ್ರ ಮಾಹಿತಿ ಆಯೋಗಕ್ಕೆ (ಸಿಐಸಿ) ನಿರಾಕರಣೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಆರ್‌ಟಿಐ...