Homeಮುಖಪುಟನ್ಯಾಯ ತೀರ್ಮಾನಕ್ಕೆ ಧರ್ಮದಲ್ಲಿ ಆಧಾರಗಳನ್ನು ಹುಡುಕುವ ನ್ಯಾಯಾಧೀಶರ ಸಂಖ್ಯೆ ತೀವ್ರವಾಗಿ ಏರಿದೆ!

ನ್ಯಾಯ ತೀರ್ಮಾನಕ್ಕೆ ಧರ್ಮದಲ್ಲಿ ಆಧಾರಗಳನ್ನು ಹುಡುಕುವ ನ್ಯಾಯಾಧೀಶರ ಸಂಖ್ಯೆ ತೀವ್ರವಾಗಿ ಏರಿದೆ!

- Advertisement -
- Advertisement -

ಸಂವಿಧಾನಕ್ಕಿಂತ ಧರ್ಮಗಳಲ್ಲಿ ಕಾನೂನಿನ ಮೂಲ ಹುಡುಕುವ ದೇವಪ್ರಭುತ್ವವಾದಿ ನ್ಯಾಯಾಧೀಶರುಗಳ ಸಂಖ್ಯೆ ತೀವ್ರವಾಗಿ ಹೆಚ್ಚಿದೆ ಎನ್ನುತ್ತಾರೆ ಡಾ. ಮೋಹನ್ ಗೋಪಾಲ್.

****

“ಕ್ಯಾಂಪೇನ್ ಫಾರ್ ಜುಡಿಷಿಯಲ್ ಅಕೌಂಟೆಬಿಲಿಟಿ ಎಂಡ್ ರಿಫಾರ್ಮ್ಸ್” ಅಭಿಯಾನವು (ಸಿಜೆಎಆರ್) “ನ್ಯಾಯಾಂಗದ ನೇಮಕಾತಿಗಳಲ್ಲಿ ಕಾರ್ಯಾಂಗದ ಮಧ್ಯಪ್ರವೇಶ” ಎಂಬ ವಿಷಯದ ಬಗ್ಗೆ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಪ್ರಸಿದ್ಧ ಕಾನೂನು ತಜ್ಞರು, ಶಿಕ್ಷಕರೂ ಆಗಿರುವ ಡಾ. ಮೋಹನ್ ಗೋಪಾಲ್ ಅವರು ಇತ್ತೀಚೆಗೆ ಮಾತನಾಡುತ್ತಾ, ಕೆಲವು ಅತ್ಯಂತ ಮಹತ್ವದ ವಿಚಾರಗಳನ್ನು ಎತ್ತಿದ್ದಾರೆ. ತಮ್ಮ ಭಾಷಣದಲ್ಲಿ ಡಾ. ಮೋಹನ್ ಗೋಪಾಲ್ ಅವರು ರಾಜಕೀಯ ತಾರತಮ್ಯ ಅಥವಾ ಪಕ್ಷಪಾತ ಹೊಂದಿರುವ ನ್ಯಾಯಾಧೀಶರುಗಳ ನೇಮಕಾತಿ ಕುರಿತಂತೆ ಆತಂಕ ವ್ಯಕ್ತಪಡಿಸಿದ್ದಾರೆ. ಕೇವಲ ಸಂವಿಧಾನಕ್ಕೆ ಮಾತ್ರವೇ ನಿಷ್ಟೆ ಹೊಂದಿರುವ ನ್ಯಾಯಾಧೀಶರುಗಳನ್ನು ಮಾತ್ರವೇ ನೇಮಕಾತಿ ಮಾಡುವ ಮೂಲಕ ಸಾಂಸ್ಥಿಕವಾಗಿ ನ್ಯಾಯಾಂಗವನ್ನು ರಕ್ಷಿಸಬೇಕು ಎಂದು ಕೊಲಿಜಿಯಂಅನ್ನು ಅವರು ಒತ್ತಾಯಿಸಿದ್ದಾರೆ.

“ಈಗ ನಡೆಯುತ್ತಿರುವುದು ಏನೆಂದರೆ, ಸಂವಿಧಾನವನ್ನು ಬುಡಮೇಲು ಮಾಡಲು ನ್ಯಾಯಾಂಗದಲ್ಲಿ ತಮ್ಮ ಜನರನ್ನು ತುಂಬಿಸುವುದು ಎಂದು ನಾನು ನಂಬಿದ್ದೇನೆ” ಎಂದವರು ಹೇಳಿದರು.

ಅವರು ಈ ಮಾತುಗಳ ಮೂಲಕ ತನ್ನ ಭಾಷಣವನ್ನು ಆರಂಭಿಸಿದರು: “ಹಸ್ತಕ್ಷೇಪ ಎಂಬ ಶಬ್ದದ ಅರ್ಥ ಎಂದರೆ: ನಿಮಗೆ ಪಾತ್ರವೇ ಇಲ್ಲದಿದ್ದಲ್ಲಿ ಮತ್ತು ನಿಮ್ಮ ಪಾತ್ರದ ಅಗತ್ಯವೇ ಇಲ್ಲದಿದ್ದಲ್ಲಿ ಪಾತ್ರವಹಿಸುವುದು. ಅದು ಶಬ್ದಕೋಶದಲ್ಲಿರುವ ವಸ್ತುಶಃ ಅರ್ಥ. ಆದುದರಿಂದ ಇಲ್ಲಿ ನಾವು ಹಸ್ತಕ್ಷೇಪ ಎಂದು ಹೇಳುವಾಗ, ಸರಕಾರಕ್ಕೆ ಪಾತ್ರವೇ ಇಲ್ಲದ ಮತ್ತು ಅದು ಸ್ವೀಕಾರಾರ್ಹವಲ್ಲದ ನ್ಯಾಯಾಂಗದ ನೇಮಕಾತಿಗಳಲ್ಲಿ ಸರಕಾರ ಪಾತ್ರ ವಹಿಸುವುದು ಎಂದು ಅರ್ಥ. ಮಾನ್ಯ ಸೋಧಿಯವರು ಹೇಳಿದಂತೆ, ಇದು ಕೇವಲ ಕೊಲಿಜಿಯಂ ಮತ್ತು ಸರಕಾರದ ನಡುವಿನ ಔಪಚಾರಿಕ ವ್ಯವಹಾರದ ಮೂಲಕ ಮಾತ್ರವಲ್ಲದೆ, ಹಲವಾರು ರೀತಿಗಳಲ್ಲಿ ನಡೆಯುತ್ತಿದೆ. ನಾವು ಹಿಂಬಾಗಿಲಿನ ಮಧ್ಯಪ್ರವೇಶದ ಹಿನ್ನೆಲೆಯಲ್ಲಿ ಇವುಗಳನ್ನು ಹೆಚ್ಚು ವಿಶಾಲವಾದ ನೆಲೆಯಲ್ಲಿ ನೋಡುವ ಅಗತ್ಯವಿದೆ.”

ಹಿಂದೂ ರಾಷ್ಟ್ರ ಸ್ಥಾಪನೆಗೆ ಸರಕಾರದ ಕಾರ್ಯತಂತ್ರದ ಕುರಿತು.

ಮೊತ್ತಮೊದಲಿಗೇ ಡಾ. ಗೋಪಾಲ್ ಅವರು ಸಭಿಕರಿಗೆ ಕೆಲವು ವಾಸ್ತವಾಂಶಗಳ ಪಟ್ಟಿಯನ್ನೇ ಒದಗಿಸಿದರು: “ಮೇ 2004ರಿಂದ ಮತ್ತು ನಂತರ, ಇಲ್ಲಿಯತನಕದ ಎಂಟು ವರ್ಷ ಒಂಭತ್ತು ತಿಂಗಳ ಎನ್‌ಡಿಎ ಅವಧಿಯಲ್ಲಿ 111 ನ್ಯಾಯಾಧೀಶರ ನೇಮಕಾತಿಗಳು ಆಗಿದ್ದು, ಯುಪಿಎ ಅವಧಿಯಲ್ಲಿ 56 ಮತ್ತು ಎನ್‌ಡಿಎ ಅವಧಿಯಲ್ಲಿ 55 ನೇಮಕಾತಿಗಳಾಗಿವೆ.”

“ಇಲ್ಲಿ ನಾವು ಸಾಕಷ್ಟು ವಿಷಯನಿಷ್ಠವಾದ ವ್ಯಾಖ್ಯಾನಕ್ಕೆ ಬರಬಹುದು. ನಾವಿಲ್ಲಿ ನೋಡಬೇಕಿರುವುದು ಏನೆಂದರೆ, ನೇಮಕಗೊಂಡ ನ್ಯಾಯಾಧೀಶರು ರಾಜಕೀಯವಾಗಿ ತಾರತಮ್ಯ ಹೊಂದಿದ್ದಾರೆಯೇ ಎಂಬುದನ್ನು- ಹತ್ತು ವರ್ಷಗಳ ಯುಪಿಎ ಅವಧಿಯಲ್ಲಾಗಲೀ ಮತ್ತು ಎಂಟು ವರ್ಷ, ಒಂಬತ್ತು ತಿಂಗಳುಗಳ ಎನ್‌ಡಿಎ ಅವಧಿಯಲ್ಲಾಗಲಿ…. ನನ್ನ ಸ್ವಂತ ದೃಷ್ಟಿಕೋನದಿಂದ ಹೇಳುವುದಾದರೆ… ನಾನಿಲ್ಲಿ ಯಾವುದೇ ಹೆಸರುಗಳನ್ನು ಹೇಳುವುದಿಲ್ಲ… ಆವುಗಳನ್ನೆಲ್ಲ ಚರ್ಚಿಸಲು ಇಲ್ಲಿ ಸಮಯವಿಲ್ಲ… ಯುಪಿಎ ಅವಧಿಯಲ್ಲಿ ನೇಮಕವಾದ ಆರು ನ್ಯಾಯಾಧೀಶರು ವಿಶಾಲ ಅರ್ಥದಲ್ಲಿ ಸಂವಿಧಾನವಾದಿಗಳು ಎಂದು ನಾವು ಕರೆಯಬಹುದಾದವರು, ಅವರು ಸಂವಿಧಾನದ ಪಾರಮ್ಯದಲ್ಲಿ ನಂಬಿಕೆ ಹೊಂದಿರುವವರು ಎಂದು ನಾನು ಕಂಡುಕೊಂಡಿದ್ದೇನೆ. ಅವರು ಉದಾರವಾದಿ, ಪ್ರಗತಿಪರರು ಎಂದೇನೂ ನಾನು ಹೇಳಲಾರೆ; ಅವರು ಸಂವಿಧಾನವಾದಿಗಳು, ಎಲ್ಲ ನಿರ್ಧಾರಗಳು ಕೇವಲ ಸಂವಿಧಾನದ ಅಡಿಗಲ್ಲಿನ ಆಧಾರದಲ್ಲಿಯೇ ನಡೆಯಬೇಕೆಂಬ ಆಳವಾದ ಮತ್ತು ದೃಢವಾದ ನಂಬಿಕೆ ಹೊಂದಿರುವವರು ಎಂದು ಹೇಳುತ್ತೇನೆ. ಹೌದು, ಆತ ಅಥವಾ ಆಕೆ ಕೇವಲ ಸಂವಿಧಾನದ ತಮ್ಮ ಅತ್ಯುತ್ತಮ ತಿಳಿವಳಿಕೆಯ ಆಧಾರದಲ್ಲಿ ಮಾತ್ರವೇ ತೀರ್ಮಾನ ಮಾಡುತ್ತಾರೆಯೇ ಹೊರತು ಕಾನೂನಿನ ಬೇರಾವುದೇ ಮೂಲದಿಂದ ಪ್ರಭಾವಿತರಾಗುವುದಿಲ್ಲ ಎಂದು ನಾನು ಎದೆಯ ಮೇಲೆ ಕೈಯ್ಯಿಟ್ಟು ಹೇಳಬಹುದಾದಂತವರು ನನಗೆ ಸಿಕ್ಕಿದ್ದು ಕೇವಲ ಆರೇ ಮಂದಿ.”

ಮುಂದುವರಿದು ಅವರು ಹೇಳುತ್ತಾರೆ: “ಈ ಸಂಖ್ಯೆ ನನ್ನ ದೃಷ್ಟಿಯಲ್ಲಿ ಎನ್‌ಡಿಎ ಅವಧಿಯಲ್ಲಿ ಒಂಭತ್ತಕ್ಕೇರುತ್ತದೆ. ಇದು ಮೇಲೇರುತ್ತದೆ, ಕೆಳಗಿಳಿಯುವುದಿಲ್ಲ. ಯಾಕೆ? ಎನ್‌ಡಿಎ ಸರಕಾರ ಇಂತವರನ್ನು ಪ್ರಾಯೋಜಿಸಿತ್ತು ಎಂದೇನಲ್ಲ. ಈ ಸಂಖ್ಯೆ ಮೇಲೇರಿದ್ದು ಕೊಲಿಜಿಯಂ ತೋರಿಸಿದ ಪ್ರತಿರೋಧದ ಕಾರಣದಿಂದ.”

ನಂತರ ಅವರು ಸಭಾಸದರಿಗೆ ಈ ಪ್ರಶ್ನೆಯನ್ನು ಹಾಕುತ್ತಾರೆ: “ಎಷ್ಟು ಮಂದಿ ನ್ಯಾಯಾಧೀಶರು ತಮ್ಮ ತೀರ್ಮಾನಕ್ಕೆ ಆಧಾರವಾಗಿ- ಸಂವಿಧಾನದ ಹೊರಗಿನ ಸನಾತನ ಧರ್ಮ ಅಥವಾ ವೇದಗಳು ಅಥವಾ ಪುರಾತನ ಕಾನೂನು ತತ್ವಗಳತ್ತ ನೋಡುತ್ತಾರೆ? ಸರಕಾರದಿಂದ ಪ್ರಭಾವಿತರಾಗಿ ಅಥವಾ ನಿವೃತ್ತಿಯ ಬಳಿಕ ಯಾವುದಾದರೂ ಹುದ್ದೆಯ ನಿರೀಕ್ಷೆಯಲ್ಲಿ ಅಲ್ಲದೇ, ನಿಜವಾಗಿಯೂ ನ್ಯಾಯದ ನಿಜವಾದ ಆಧಾರವು ವೇದ ಅಥವಾ ಪುರಾತನ ಧರ್ಮಗ್ರಂಥಗಳಿಂದ ಬರಬೇಕೆಂದು ಎಷ್ಟು ಮಂದಿ ನಂಬುತ್ತಾರೆ?”

ಇದನ್ನೂ ಓದಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಮತ್ತಿಬ್ಬರ ಹೆಸರು ಶಿಫಾರಸು ಮಾಡಿದ ಕೊಲಿಜಿಯಂ

ಈ ಪ್ರಶ್ನೆಗೆ ಉತ್ತರ ನೀಡುತ್ತಾ ಡಾ. ಗೋಪಾಲ್ ಹೇಳುತ್ತಾರೆ: “ಆ ಸಂಖ್ಯೆ ಅವರ ತೀರ್ಮಾನಗಳು, ಲಿಖಿತ ತೀರ್ಪುಗಳನ್ನು ನೋಡಿ ಹೇಳುವುದಾದರೆ, ತಮ್ಮ ತೀರ್ಮಾನಗಳಿಗೆ ಸಂವಿಧಾನಕ್ಕೆ ಹೊರತಾದ ಮೂಲಗಳನ್ನು ಹುಡುಕುವವರು ಯುಪಿಎ ಸರಕಾರದ ಅವಧಿಯಲ್ಲಿ ನೇಮಕವಾದವರಲ್ಲಿ ಒಬ್ಬರೂ ಇಲ್ಲ. ಆದರೆ, ಎನ್‌ಡಿಎ ಅವಧಿಯಲ್ಲಿ ನೇಮಕಗೊಂಡ ನ್ಯಾಯಾಧೀಶರಲ್ಲಿ ಈ ಸಂಖ್ಯೆ ಒಂಭತ್ತು ಇದ್ದು, ಅವರಲ್ಲಿ ಐವರು ಈಗಲೂ ಪೀಠದಲ್ಲಿ ಇದ್ದಾರೆ. ನಾನು ಯಾರನ್ನೂ ಹೆಸರಿಸುವುದಿಲ್ಲವಾದರೂ, ಅವರು ತಮ್ಮ ತೀರ್ಪುಗಳಲ್ಲಿ ನಾವು ನ್ಯಾಯ ತೀರ್ಮಾನಕ್ಕೆ ಆಧಾರವಾಗಿ ಸಂವಿಧಾನಕ್ಕೆ ಹೊರತಾದ ಮೂಲಗಳನ್ನು ನೋಡಬೇಕೆಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಉದಾಹರಣೆಗೆ ಅಯೋಧ್ಯೆಯ ಪ್ರಕರಣದಲ್ಲಿ ನಡೆದುದು ಇದೇ ಆಗಿದೆ. ಕೆಲವು ನ್ಯಾಯಾಧೀಶರು ಈ ಪ್ರಕರಣದ ತೀರ್ಮಾನಕ್ಕಾಗಿ ಸಂವಿಧಾನದ ಹೊರಕ್ಕೆ ಹೋದರು. ಈ ಸಂಪ್ರದಾಯವಾದಿ, ದೇವಪ್ರಭುತ್ವವಾದಿ ಮತ್ತು ಧರ್ಮದಲ್ಲಿ ನ್ಯಾಯ ತೀರ್ಮಾನಕ್ಕೆ ಆಧಾರಗಳನ್ನು ಹುಡುಕುವ ನ್ಯಾಯಾಧೀಶರ ಸಂಖ್ಯೆ ತೀವ್ರವಾಗಿ ಏರಿದೆ.”

ಇದು 2047ರ ಒಳಗಾಗಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಎರಡು ಹಂತಗಳ ಕಾರ್ಯತಂತ್ರದ ಮೊದಲ ಭಾಗ ಎಂದು ಡಾ. ಗೋಪಾಲ್ ಹೇಳಿದರು. ಸಂವಿಧಾನವನ್ನು ಕಿತ್ತೆಸೆಯುವುದಕ್ಕೆ ಬದಲಾಗಿ, ಸುಪ್ರೀಂಕೋರ್ಟ್ ಅದನ್ನು ಒಂದು ಹಿಂದೂ ದಾಖಲೆ ಎಂದು ವ್ಯಾಖ್ಯನಿಸುವ ಮೂಲಕವೇ ಈ ಗುರಿಯನ್ನು ಮುಂದೆ ಸಾಧಿಸಲಾಗಬಹುದು ಎಂದು ಅವರು ಭವಿಷ್ಯ ನುಡಿದರು.

ಮುಂದುವರಿದು ಅವರು ಹೇಳಿದ್ದೆಂದರೆ: “ಅದನ್ನು ಮಾಡಲು ಮೊದಲ ಹಂತದಲ್ಲಿ ಸಂವಿಧಾನಕ್ಕೆ ಹೊರತಾದ ಬೇರೆ ಧಾರ್ಮಿಕ ಮೂಲಗಳನ್ನು ಹುಡುಕಲು ಸಿದ್ಧರಿರುವ ನ್ಯಾಯಾಧೀಶರನ್ನು ನೇಮಕಾತಿ ಮಾಡುವುದು. ಈಗ ಆರಂಭವಾಗುತ್ತಿರುವ ಎರಡನೇ ಹಂತದಲ್ಲಿ ಇಂಥ ಮೂಲಗಳನ್ನು ಗುರುತಿಸಿ, ಉಲ್ಲೇಖಿಸಬಲ್ಲ ನ್ಯಾಯಾಧೀಶರನ್ನು ನೇಮಕಾತಿ ಮಾಡುವುದು. ಇದು ಉದಾಹರಣೆಗೆ ಹಿಜಾಬ್ ಪ್ರಕರಣದಲ್ಲಿ ಆರಂಭವಾಗಿದೆ. ಅಲ್ಲಿ ಇಬ್ಬರು ನ್ಯಾಯಾಧೀಶರಲ್ಲಿ ಒಬ್ಬರು, ’ಪಂಥ ನಿರಪೇಕ್ಷ’ ಉಲ್ಲೇಖ ಮಾಡಿದರು; ರಿಲಿಜನ್ ಎಂದರೆ ಮತ ಅಥವಾ ಪಂಥವೇ ಹೊರತು ಧರ್ಮವಲ್ಲ; ಸಂವಿಧಾನದಲ್ಲಿ ’ಪಂಥ ನಿರಪೇಕ್ಷ’ ಎಂದಿದೆಯೇ ಹೊರತು, ’ಧರ್ಮ ನಿರಪೇಕ್ಷ’ ಎಂದಿಲ್ಲ ಎಂದು ಬಹಿರಂಗವಾಗಿಯೇ ವ್ಯಾಖ್ಯಾನಿಸಿದ್ದಾರೆ. ಅವರು ಮುಂದುವರಿದು, ಧರ್ಮವು ಸಂವಿಧಾನಕ್ಕೂ ಅನ್ವಯಿಸುತ್ತದೆ ಮತ್ತು ಸಾಂವಿಧಾನಿಕ ಕಾನೂನೇ ಧರ್ಮ ಎಂದೂ ಹೇಳಿದ್ದಾರೆ. ಅವರ ಅರ್ಥದಲ್ಲಿ: ಧರ್ಮ ಎಂದರೆ, ’ಸನಾತನ ಧರ್ಮ’. ಆದುದರಿಂದ ಅವರು ಹೇಳುತ್ತಿರುವುದು ಸಾಂವಿಧಾನಿಕ ಕಾನೂನೇ ಸನಾತನ ಧರ್ಮವೆಂದು. ನಾವು ಕಾನೂನನ್ನು ಅನ್ವಯಿಸುವಾಗ ಧರ್ಮವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು.”

“ಈ ತರ್ಕವನ್ನು ಬಳಸಿಕೊಂಡು ಸರಕಾರಿ ಶಾಲೆಗಳಲ್ಲಿ ಪೂಜೆಗೆ ಅವಕಾಶ ನೀಡಬಹುದು; ಯಾಕೆಂದರೆ, ಅದು ಧರ್ಮ; ಹಿಜಾಬಿಗೆ ಅವಕಾಶ ನೀಡಬಾರದು, ಯಾಕೆಂದರೆ ಅದು ಮತ ಅಥವಾ ಪಂಥ (ರಿಲಿಜನ್) ಎಂಬ ವಾದವನ್ನು ಮುಂದಿಡಲಾಗಬಹುದು” ಎಂದು ಡಾ. ಗೋಪಾಲ್ ಹೇಳಿದರು.

ಈ ವಾದವನ್ನು ಮುಂದುವರಿಸಿದ ಡಾ. ಗೋಪಾಲ್, ವೇದದ ಮೂಲವನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿ, ಕಾನೂನಿನ ನಿರ್ದಿಷ್ಟವಾದ ವಿಧಿಯೊಂದಕ್ಕೆ ವೇದವೇ ಮೂಲ ಎಂದು ಹೇಳಿದ ಹೈಕೋರ್ಟ್ ನ್ಯಾಯಾಧೀಶರೊಬ್ಬರ ಉದಾಹರಣೆ ನೀಡಿದರು.

“ಒಮ್ಮೆ ಈ ಹಂತವು ಮುಂದಿನ 24 ವರ್ಷಗಳಲ್ಲಿ ಮುಗಿದರೆ, ಇದೇ ಸಂವಿಧಾನವನ್ನು ಸುಪ್ರೀಂಕೋರ್ಟ್ ಮರುವ್ಯಾಖ್ಯಾನ ಮಾಡುವ ಮೂಲಕ ಭಾರತವು ಒಂದು ಹಿಂದೂ ಧಾರ್ಮಿಕ ರಾಷ್ಟ್ರ ಎಂದು ಸುರಕ್ಷಿತವಾಗಿ ಘೋಷಿಸಬಹುದು. ಆದುದರಿಂದ, ನ್ಯಾಯಾಂಗವನ್ನು ಅಪಹರಣ ಮಾಡುವುದರ ಹಿಂದಿರುವ ವಿಚಾರವೆಂದರೆ, ಒಂದು ಹಿಂದೂ ಧಾರ್ಮಿಕ ರಾಷ್ಟ್ರವನ್ನು ಸ್ಥಾಪಿಸುವುದು. ಖಂಡಿತವಾಗಿಯೂ ನನಗೆ ಕೊಲಿಜಿಯಂನಲ್ಲಿ ಇಂತಹ ಒಂದು ಧ್ವನಿ ಬೇಕಾಗಿಲ್ಲ. ಖಂಡಿತವಾಗಿಯೂ ವೈಯಕ್ತಿಕವಾಗಿ ನನಗೆ ಒಬ್ಬ ಕಾನೂನು ಮಂತ್ರಿ ಕೊಲಿಜಿಯಂನಲ್ಲಿ ಕುಳಿತು, ಈ ಅಜೆಂಡಾವನ್ನು ಕಾರ್ಯರೂಪಕ್ಕೆ ತರುವುದು ಬೇಕಾಗಿಲ್ಲ.”

ನ್ಯಾಯಾಂಗವು ತನ್ನ ದೃಷ್ಟಿಕೋನವನ್ನು ಸಂವಿಧಾನದೊಂದಿಗೆ ಹೊಂದಿಸಿಕೊಳ್ಳುವ ಅಗತ್ಯ

ಕೊಲಿಜಿಯಂ ಈ ಅಪಾಯದ ಕುರಿತು ಕುರುಡಾಗಿಲ್ಲ ಮತ್ತು ಅದು ಸ್ವಲ್ಪಮಟ್ಟಿನ ಪ್ರತಿರೋಧವನ್ನು ತೋರಿಸಲು ಯತ್ನಿಸುತ್ತಿದೆ ಎಂದು ಡಾ. ಮೋಹನ್ ಗೋಪಾಲ್ ಹೇಳಿದರು. ಸುಪ್ರೀಂಕೋರ್ಟಿನಲ್ಲಿ ಸಾಕಷ್ಟು ವೈವಿಧ್ಯ ಇಲ್ಲದಿರುವ ಕುರಿತು ಅವರು ಆತಂಕ ವ್ಯಕ್ತಪಡಿಸಿದರು. ವೈವಿಧ್ಯದ ಕೊರತೆಯು ಪ್ರಾತಿನಿಧ್ಯದ ಕೊರತೆಗೆ ಕಾರಣವಾಗಿ, ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅವರು ಸೂಚಿಸಿದರು.

ಅವರ ವಾದವೆಂದರೆ: “ನಮ್ಮ ಸಂವಿಧಾನದ ಯೋಜನೆ ಮತ್ತು ದೃಷ್ಟಿಕೋನವು ಈ ದೇಶವನ್ನು ನಡೆಸುತ್ತಿರುವ ಅಲ್ಪಸಂಖ್ಯೆಯ ಪ್ರತಿಷ್ಟಿತರ ದೃಷ್ಟಿಕೋನ ಮತ್ತು ಮೌಲ್ಯಗಳಿಗೆ ವಿರುದ್ಧವಾಗಿವೆ. ಯಾಕೆಂದರೆ, ಹೆಚ್ಚಿನ ಅಧಿಕಾರಗಳು ನಾಲ್ಕೇ ನಾಲ್ಕು ಪ್ರತಿಷ್ಠಿತ ವರ್ಗಗಳ ಕೈಗಳಲ್ಲಿವೆ. ಸಂವಿಧಾನವನ್ನು ಬಿಟ್ಟರೆ ಅವುಗಳನ್ನು ಪ್ರತಿರೋಧಿಸಬಲ್ಲ ಬೇರಾವುದೇ ಶಕ್ತಿಯಿಲ್ಲ. ಪಾಕಿಸ್ತಾನ ಸೇರಿದಂತೆ ಹಲವಾರು ದೇಶಗಳಲ್ಲಿ ಸಾಂವಿಧಾನಿಕ ಉದ್ದೇಶವು ಅಲ್ಪಸಂಖ್ಯೆಯ ಪ್ರತಿಷ್ಠಿತ ವರ್ಗಗಳ ಹಿತಾಸಕ್ತಿಗಳನ್ನೇ ಪ್ರತಿಫಲಿಸುತ್ತವೆ. ಆದುದರಿಂದ, ಅಲ್ಲಿ ಪ್ರತಿಷ್ಠಿತ ವರ್ಗ ಮತ್ತು ಸಂವಿಧಾನದ ನಡುವೆ ಯಾವುದೇ ನಿಜವಾದ ಸಂಘರ್ಷ ಇಲ್ಲ. ಆದರೆ, ಇಲ್ಲಿ ಸಂವಿಧಾನವು ಉದ್ದೇಶಪೂರ್ವಕವಾಗಿ ಪ್ರಜಾಪ್ರಭುತ್ವ, ಸಮಾನತೆ, ಸ್ವಾತಂತ್ರ್ಯ, ಆತ್ಮಗೌರವ, ಸಮಾಜವಾದ ಮುಂತಾದ ಮೌಲ್ಯಗಳನ್ನು ಪರಿಚಯಿಸಿರುವುದರಿಂದಾಗಿ ಅದು ಆಳುವ ಪ್ರತಿಷ್ಠಿತ ವರ್ಗಗಳ ಜಾಗತಿಕ ದರ್ಶನ ಮತ್ತು ಸಿದ್ಧಾಂತಗಳಿಗೆ ನೇರವಾಗಿ ಸವಾಲೆಸೆಯುತ್ತದೆ.”

ಈ ಸಂಘರ್ಷವು ಭಾರತೀಯ ನ್ಯಾಯಾಂಗ ಸ್ವಾತಂತ್ರ್ಯದ ಮೊದಲ ಹಂತದಲ್ಲಿ ನ್ಯಾಯಾಂಗವು ಸಂವಿಧಾನದ ಉದ್ದೇಶವನ್ನು ಪ್ರತಿಫಲಿಸುವ ಪ್ರಗತಿಪರ ಕಾನೂನುಗಳನ್ನು ವಜಾಗೊಳಿಸುವ ಮೂಲಕ ಸಂವಿಧಾನದ ಅಭಿಯಾನಕ್ಕೆ ತಡೆಗಳನ್ನು ಒಡ್ಡಿತು ಎಂದು ವಿವರಿಸಿದ ಡಾ. ಮೋಹನ್ ಗೋಪಾಲ್, ಇಂತಹ ತಡೆಯು ನ್ಯಾ. ಕೃಷ್ಣ ಅಯ್ಯರ್, ನ್ಯಾ. ಕುಮಾರಮಂಗಲಂ ಮುಂತಾದವರ ಪ್ರತಿರೋಧಕ್ಕೆ ಕಾರಣವಾಯಿತು ಎಂದು ಹೇಳಿದರು.

“ನ್ಯಾ. ಕೃಷ್ಣ ಅಯ್ಯರ್ ಮತ್ತು ಪ್ರೀತಿಯಿಂದ ಕರೆಯಲಾಗುವ, ಅವರನ್ನೂ ಒಳಗೊಂಡ ’ನಾಲ್ವರ ಗ್ಯಾಂಗ್’- ನ್ಯಾ. ಭಗವತಿ, ನ್ಯಾ. ಚಿನ್ನಪ್ಪ ರೆಡ್ಡಿ ಮತ್ತು ನ್ಯಾ. ದೇಸಾಯಿಯವರು ನ್ಯಾಯಾಂಗದ ದೃಷ್ಟಿಕೋನವನ್ನು ಸಾಂವಿಧಾನಿಕ ದೃಷ್ಟಿಕೋನದೊಂದಿಗೆ ಸರಿಹೊಂದಿಸಲು ಯತ್ನಿಸಿದರು. ಆಗ 1991ರಲ್ಲಿ ಮಂಡಲ್ ಆಯೋಗ ಬಂತು. ಒಂದು ವರ್ಷದ ಒಳಗಾಗಿ, 1992ರಲ್ಲಿ ಕೊಲಿಜಿಯಂ ವ್ಯವಸ್ಥೆ ಸ್ಥಾಪಿಸಲಾದುದು ಕಾಕತಾಳೀಯ ಅಲ್ಲ. ಅದು ಮಂಡಲ್‌ಗೆ ಪ್ರತಿಕ್ರಿಯೆಗಳಲ್ಲಿ ಒಂದಾಗಿತ್ತು. ಮಂಡಲ್ ವರದಿ ದೇಶದ ಧೋರಣೆಗಳ ಮೇಲೆ ಪ್ರತಿಷ್ಠಿತರ ನಿಯಂತ್ರಣಗಳನ್ನು ತೆಗೆದುಹಾಕಲು ಬಯಸಿದ್ದು- ನಾವು ಕಂಡಂತೆ ಇತರ ಹಿಂದುಳಿದ ವರ್ಗಗಳ (ಒಬಿಸಿ) ಉತ್ಕರ್ಷವು ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ಉಂಟಾದುದರಿಂದ, ಅವರನ್ನು ನ್ಯಾಯಾಂಗದಿಂದ ಪ್ರತ್ಯೇಕಿಸಬೇಕಾಗಿತ್ತು. ಆದುದರಿಂದ, ಅಲ್ಪಸಂಖ್ಯೆಯ ಪ್ರತಿಷ್ಠಿತ ವರ್ಗಗಳ ಬದಲಾಗಿ ವಿವಿಧ ಸಾಮಾಜಿಕ ಗುಂಪುಗಳ ನಿಯಂತ್ರಣವನ್ನು ಪ್ರತಿರೋಧಿಸಬೇಕಾಗಿತ್ತು. ಹಾಗಾಗಿಯೇ ಕೊಲಿಜಿಯಂ ವ್ಯವಸ್ಥೆ ಹುಟ್ಟಿಬಂದದ್ದು ಕಾಕತಾಳೀಯ ಅಲ್ಲ. ಕೊಲಿಜಿಯಂ ವ್ಯವಸ್ಥೆಗೆ ರಾಜಕೀಯದ ಕಡೆಯಿಂದ ಯಾವುದೇ ವಿರೋಧ ಇರಲಿಲ್ಲ. ನ್ಯಾಯಾಂಗದ ನಿಯಂತ್ರಣವನ್ನು ಇನ್ನೂ ಪ್ರತಿಷ್ಠಿತರೇ ನಿಯಂತ್ರಿಸುವುದನ್ನು ಖಾತರಿಪಡಿಸಲು ಅವರೆಲ್ಲರೂ ಒಟ್ಟಾಗಿ ಕೆಲಸ ಮಾಡಿದರು. ಇಂದು ಸುಪ್ರೀಂಕೋರ್ಟಿನ ಸಂರಚನೆಯನ್ನು ನೋಡಿದಾಗ, ನಾವದನ್ನು ನೋಡಬಹುದು- ಏನನ್ನು ನೋಡಬಹುದು ಎಂದರೆ, ಆ ಸಂರಚನೆಯನ್ನು ಯಾವುದೇ ವೈವಿಧ್ಯ ಇಲ್ಲದಂತೆ ರಚಿಸಿ, ರಕ್ಷಿಸಲಾಗಿರುವುದನ್ನು.”

ನ್ಯಾಯಾಂಗದ ವೈವಿಧ್ಯವನ್ನು ಸಾಮಾಜಿಕ ಮತ್ತು ಲಿಂಗತ್ವಗಳ ದೃಷ್ಟಿಕೋನದಿಂದ ನೋಡುವಾಗ, ಪ್ರಗತಿ ಆಗಿದೆ ಎಂದು ಒಪ್ಪಿಕೊಳ್ಳುತ್ತಲೇ, ಇನ್ನೂ ಪ್ರಾತಿನಿಧ್ಯದ ಕೊರತೆ ಉಳಿದುಕೊಂಡಿದೆ ಎಂದು ಡಾ. ಮೋಹನ್ ಗೋಪಾಲ್ ಹೇಳಿದರು. ಉದಾಹರಣೆಯನ್ನು ನೀಡುತ್ತಾ ಅವರು, “ನೋಡಿ ಐವರು ಮಹಿಳಾ ನ್ಯಾಯಾಧೀಶರು ಇದ್ದಾರೆ” ಎಂದು ಅವರು ಕೊಚ್ಚಿಕೊಳ್ಳುವಾಗ, “ಹೌದು, ಐವರು ಮಹಿಳೆಯರನ್ನು ಅವರು ನೋಡುತ್ತಿದ್ದಾರೆ. ನನಗೆ ಐವರು ಬ್ರಾಹ್ಮಣ ಮಹಿಳೆಯರು ಮಾತ್ರ ಕಾಣುತ್ತಿದ್ದಾರೆ. ಅದು ವೈವಿಧ್ಯದ ಕೊರತೆಯನ್ನು ತೋರಿಸುತ್ತದೆ” ಎಂದರು.

ಇದನ್ನೂ ಓದಿ: ಕೊಲಿಜಿಯಂ ಶಿಫಾರಸ್ಸು ತಡೆಹಿಡಿಯುವುದು, ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಾರಕ: ನಿವೃತ್ತ ನ್ಯಾಯಮೂರ್ತಿ ಆರ್‌‌ಎಫ್‌‌ ನಾರಿಮನ್

“ಸರಕಾರವು ಈಗ ಅದನ್ನು ಒಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ಯುತ್ತಿದೆ: ಸಂವಿಧಾನವನ್ನು ನಾಶಪಡಿಸಿ, ಧರ್ಮಾಡಳಿತವನ್ನು ಸ್ಥಾಪಿಸುವ ಕಡೆಗೆ. ಇಂದು ಈಗಾಗಲೇ ಅಲ್ಪಸಂಖ್ಯೆಯ ಪ್ರತಿಷ್ಟಿತ ವರ್ಗವು ವಕೀಲ ಸಮೂಹವನ್ನು (ಬಾರ್) ನಿಯಂತ್ರಿಸುತ್ತಿದೆ. ನನ್ನ ಅಂತಿಮ ಮಾತು ಏನೆಂದರೆ, ಈಗಿರುವ ಗಣರಾಜ್ಯವನ್ನು ಬುಡಮೇಲು ಮಾಡಿ, ಧರ್ಮಾಡಳಿತವನ್ನು ಸ್ಥಾಪಿಸುವ ಉದ್ದೇಶ ಹೊಂದಿರುವ ಸರಕಾರಕ್ಕೆ ನ್ಯಾಯಾಂಗದ ನೇಮಕಾತಿಗಳಲ್ಲಿ ಯಾವುದೇ ಪ್ರಾತಿನಿಧ್ಯ ನೀಡುವುದು ಅತ್ಯಂತ ಅಪಾಯಕಾರಿ” ಎಂದು ಡಾ. ಮೋಹನ್ ಗೋಪಾಲ್ ಹೇಳಿದರು.

ತನ್ನ ಮಾತುಗಳನ್ನು ಕೊನೆಗೊಳಿಸುತ್ತಾ ಅವರು ಹೇಳಿದ್ದೆಂದರೆ: “ನಾವೀಗ ಏನೇ ಇದ್ದರೂ ಕೊಲಿಜಿಯಂ ವ್ಯವಸ್ಥೆಯನ್ನು ಉಳಿಸಬೇಕಾಗಿದೆ. ಯಾಕೆಂದರೆ, ಈಗಿನ ಮಟ್ಟಿಗೆ ಅದು ನಮಗೆ ಉಳಿದಿರುವ ಅತ್ಯುತ್ತಮ ಆಶಾವಾದ. ಕೊಲಿಜಿಯಂ ಉದ್ದೇಶಪೂರ್ವಕವಾಗಿ ತನ್ನ ಪೀಠದಲ್ಲಿ- ಈಗ ನಡೆಯುತ್ತಿರುವ ತೆರೆಮರೆಯ ದಾಳಿಗೆ ವಿರುದ್ಧವಾಗಿ- ಸಂವಿಧಾನದ ಉದ್ದೇಶಗಳಿಗೆ ಬದ್ಧರಾಗಿರುವವರನ್ನೇ ಆರಿಸಿ ಸೇರಿಸಿಕೊಳ್ಳಬೇಕು. ಕೊಲಿಜಿಯಂ- ನ್ಯಾಯಾಂಗವನ್ನು ಬಲಪಡಿಸುವ ಸಲುವಾಗಿ ವೈವಿಧ್ಯಮಯಗೊಳ್ಳಬೇಕಾಗಿದೆ. ಧರ್ಮ (ಅಥವಾ ಮತ), ಜಾತಿ, ಲಿಂಗತ್ವ, ಆರ್ಥಿಕ ವರ್ಗ ಸೇರಿದಂತೆ- ನಾವು ಒಂದು ಕಾಮನಬಿಲ್ಲಿನಂತ ಎಲ್ಲಾ ಬಣ್ಣಗಳನ್ನು ಒಳಗೊಂಡ ನ್ಯಾಯಾಂಗವನ್ನು ಬಯಸುತ್ತೇವೆ. ಆ ಮೂಲಕ ಪ್ರತೀ ಒಬ್ಬರಿಗೂ ಇದು ನಮ್ಮದೇ ನ್ಯಾಯಾಂಗ ಎಂಬ ಭಾವನೆ ಹುಟ್ಟಬೇಕು.”

ಮೂಲ: ಲೈವ್ ಲಾ ವಿಡಿಯೋ

ಡಾ. ಮೋಹನ್ ಗೋಪಾಲ್ ಅವರು ಮಾಡಿದ ಭಾಷಣವನ್ನು ನಿಖಿಲ್ ಕೋಲ್ಪೆ ಕನ್ನಡಕ್ಕೆ ಅನುವಾದಿಸಿ ನಿರೂಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ: ಕೆನಡಾದಲ್ಲಿ ಶಂಕಿತ ಮೂವರು ಭಾರತೀಯರ ಬಂಧನ

0
ಸಿಖ್‌ ಪ್ರತ್ಯೇಕತವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಮೂವರು ಭಾರತೀಯರನ್ನು ಕೆನಡಾ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಕೆನಡಾದಲ್ಲಿ ಕೆಲ ತಿಂಗಳ ಹಿಂದೆಯೇ ಈ ಶಂಕಿತರನ್ನು ಪೊಲೀಸರು ಗುರುತಿಸಿದ್ದು,...