Homeದಲಿತ್ ಫೈಲ್ಸ್ನನ್ನ ಸಹೋದರಿಯ ಆತ್ಮಕ್ಕೆ ವಿಶ್ರಾಂತಿ ಸಿಕ್ಕಿಲ್ಲ; ಆರೋಪಿಗಳ ಖುಲಾಸೆ ಬಳಿಕ ಹತ್ರಾಸ್‌ ಅತ್ಯಾಚಾರ ಸಂತ್ರಸ್ತೆಯ ಸಹೋದರ...

ನನ್ನ ಸಹೋದರಿಯ ಆತ್ಮಕ್ಕೆ ವಿಶ್ರಾಂತಿ ಸಿಕ್ಕಿಲ್ಲ; ಆರೋಪಿಗಳ ಖುಲಾಸೆ ಬಳಿಕ ಹತ್ರಾಸ್‌ ಅತ್ಯಾಚಾರ ಸಂತ್ರಸ್ತೆಯ ಸಹೋದರ ಹೇಳಿಕೆ

- Advertisement -
- Advertisement -

“ನನ್ನ ಸಹೋದರಿಯ ಆತ್ಮಕ್ಕೆ ವಿಶ್ರಾಂತಿ ಸಿಕ್ಕಿಲ್ಲ” ಎಂದು ಹತ್ರಾಸ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಸಹೋದರ ಪ್ರತಿಕ್ರಿಯಿಸಿದ್ದಾರೆ. ವಿಶೇಷ ನ್ಯಾಯಾಲಯವು ನಾಲ್ವರು ಆರೋಪಿಗಳಲ್ಲಿ ಮೂವರನ್ನು ಖುಲಾಸೆಗೊಳಿಸಿದ ಬಳಿಕ ಸಂತ್ರಸ್ತ ಕುಟುಂಬ ಬೇಸರ ವ್ಯಕ್ತಪಡಿಸಿದೆ.

2020ರ ಸೆಪ್ಟೆಂಬರ್‌ನಲ್ಲಿ 19 ವರ್ಷದ ದಲಿತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಖುಲಾಸೆಗೊಳಿಸಿ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲಾ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿದೆ. ವಿಶೇಷ ನ್ಯಾಯಾಧೀಶರಾದ ತ್ರಿಲೋಕ್ ಪಾಲ್ ಸಿಂಗ್ ಅವರು ತೀರ್ಪು ಪ್ರಕಟಿಸಿದ್ದಾರೆ.

ನ್ಯಾಯಾಲಯದ ತೀರ್ಪಿನ ನಂತರ ‘ದಿ ಕ್ವಿಂಟ್‌’ ಜೊತೆ ಮಾತನಾಡಿರುವ ಸಂತ್ರಸ್ತ ಯುವತಿಯ ಸಹೋದರ “ನಮ್ಮ ಕುಟುಂಬವು ಧ್ವಂಸಗೊಂಡಿದೆ” ಎಂದು ನೋವು ತೋಡಿಕೊಂಡಿದ್ದಾರೆ.

“ಭಾರತೀಯ ನ್ಯಾಯಾಂಗದಿಂದ ನಾವು ಹೆಚ್ಚಿನ ಭರವಸೆ ಹೊಂದಿದ್ದೇವೆ. ಆದರೆ ನಮ್ಮ ಭಾರತೀಯ ನ್ಯಾಯ ವ್ಯವಸ್ಥೆ ಏನು ಎಂದು ಈಗ ನಮಗೆ ತಿಳಿದಿದೆ. ನಮ್ಮ ತಂಗಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ, ನಂತರ ಆಕೆಯ ದೇಹವನ್ನು ಮಧ್ಯರಾತ್ರಿಯಲ್ಲಿ ಸುಡಲಾಗಿದೆ. ನನ್ನ ಸಹೋದರಿಯನ್ನು ಅತ್ಯಾಚಾರ ಮಾಡಿದವರನ್ನು ಖುಲಾಸೆಗೊಳಿಸಲು ನ್ಯಾಯಾಲಯ ಅವಕಾಶ ನೀಡಿದೆ. ನಾವು ಧ್ವಂಸಗೊಂಡಿದ್ದೇವೆ” ಎಂದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ಗ್ರಾಮದ ನಾಲ್ವರ ವಿರುದ್ಧ ಅತ್ಯಾಚಾರ (ಐಪಿಸಿ ಸೆಕ್ಷನ್ 376), ಸಾಮೂಹಿಕ ಅತ್ಯಾಚಾರ (ಐಪಿಸಿ ಸೆಕ್ಷನ್ 376 ಡಿ) ಮತ್ತು ಕೊಲೆ (ಐಪಿಸಿ ಸೆಕ್ಷನ್ 304) ಆರೋಪ ಹೊರಿಸಿದೆ.

ಆದರೆ, ಅವರಲ್ಲಿ ಯಾರೊಬ್ಬರೂ ಅತ್ಯಾಚಾರ ಅಥವಾ ಕೊಲೆಯ ತಪ್ಪಿತಸ್ಥರೆಂದು ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. ಮಿಗಿಲಾಗಿ ನ್ಯಾಯಾಲಯದಿಂದ ತಪ್ಪಿತಸ್ಥನೆಂದು ಗುರುತಿಸಲ್ಪಟ್ಟಿರುವ ಆರೋಪಿ ಸಂದೀಪ್‌ಗೆ, ಕೊಲೆಗೆ ಸಮನಾಗದ (ಐಪಿಸಿ ಸೆಕ್ಷನ್ 304) ಮತ್ತು ಎಸ್‌ಸಿ/ಎಸ್‌ಟಿ ಕಾಯಿದೆಯಡಿಯಲ್ಲಿನ ಅಪರಾಧಗಳಿಗೆ ಶಿಕ್ಷೆ ವಿಧಿಸಲಾಗಿದೆ.

“ಅತ್ಯಾಚಾರ ಮತ್ತು ಕೊಲೆ ಆರೋಪದಡಿಯಲ್ಲಿ ಆತನಿಗೆ ಶಿಕ್ಷೆಯಾಗಿಲ್ಲ. ಅಂದರೆ ಅವರಿಗೂ ಬೇಗ ಜಾಮೀನು ಸಿಗುವುದು ಖಚಿತ. ಇದು ಅತಿರೇಕದ ಸಂಗತಿ” ಎಂದು ಸಂತ್ರಸ್ತೆಯ ಸಹೋದರ ನೊಂದು ನುಡಿದಿದ್ದಾರೆ.

“ಉಸ್ಕಿ ಆತ್ಮಾ ಕೋ ಶಾಂತಿ ಕೈಸೇ ಮಿಲೇಗೀ? (ಅವಳ ಆತ್ಮ ಈಗ ಹೇಗೆ ವಿಶ್ರಾಂತಿ ಪಡೆಯುತ್ತದೆ?)” ಎಂದು ಪ್ರಶ್ನಿಸಿದ್ದಾರೆ.

‘ಗ್ರಾಮಸ್ಥರಿಂದ ಆರೋಪಿಗಳಿಗೆ ಬೆಂಬಲ’

ಸೆಪ್ಟೆಂಬರ್ 2020ರಲ್ಲಿ ದಲಿತ ಹೆಣ್ಣುಮಗಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಯಿತು. 29 ಸೆಪ್ಟೆಂಬರ್ 2020ರಂದು, ಹತ್ರಾಸ್ ಪೋಲೀಸ್ ಮತ್ತು ಆಡಳಿತದ ವರ್ಗವು ರಾತ್ರೋರಾತ್ರಿ ಸಂತ್ರಸ್ತೆಯ ಅಂತ್ಯಕ್ರಿಯೆ ನಡೆಸಿತ್ತು. ಇದು ಬೆಳಕಿಗೆ ಬಂದಾಗ ದೇಶಾದ್ಯಂತ ಆಘಾತ ಉಂಟಾಗಿತ್ತು.

ಘಟನೆ ನಡೆದ ಎರಡು ವರ್ಷಗಳ ನಂತರ ಗ್ರಾಮಕ್ಕೆ ಭೇಟಿ ನೀಡಿದ್ದ ‘ದಿ ಕ್ವಿಂಟ್’ ತಂಡ ವರದಿ ಮಾಡುತ್ತಾ, “ಅಪರಾಧದ ಆರೋಪಿಗಳಿಗೆ ವ್ಯಾಪಕ ಬೆಂಬಲ ಮುಂದುವರಿದಿದೆ. ಆರೋಪಗಳನ್ನು ಸುಳ್ಳು ಎಂದು ಅನೇಕ ಗ್ರಾಮಸ್ಥರು ಹೇಳುತ್ತಿದ್ದಾರೆ. ಆರೋಪಿಗಳ ಪರವಾಗಿ ನಿಂತಿದ್ದಾರೆ” ಎಂದಿತ್ತು.

“ಈ ಜನರು ಮೊದಲ ದಿನದಿಂದಲೂ ಆರೋಪಿಗಳನ್ನು ಬೆಂಬಲಿಸುತ್ತಿದ್ದಾರೆ. ಈಗ ಅವರನ್ನು ಖುಲಾಸೆಗೊಳಿಸುವ ತೀರ್ಪು ಬಂದಿರುವುದರಿಂದ ಗ್ರಾಮಸ್ಥರು ಆರೋಪಿಗಳಿಗೆ ಮತ್ತಷ್ಟು ಧೈರ್ಯ ತುಂಬಲಿದ್ದಾರೆ” ಎಂದು ಸಂತ್ರಸ್ತೆಯ ಸಹೋದರ ಆತಂಕ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...