ಕೋವಿಡ್ ಎರಡನೆ ಅಲೆ ಉಲ್ಬಣಕ್ಕೆ ರಾಜ್ಯದ ಆರೋಗ್ಯ ಮೂಲಸೌಕರ್ಯಗಳು ತತ್ತರಿಸಿ ಹೋಗುತ್ತಿವೆ. ಬೀದರ್‌ನಲ್ಲಿ ಪಾದಚಾರಿ ಮಾರ್ಗಗಳ ಮೇಲೆ ಹತ್ತಾರು ರೋಗಿಗಳು ಮಲಗಿದ್ದರೆ, ಯಾದಗರಿಯಲ್ಲಿ ವ್ಯಕ್ತಿಯೊಬ್ಬರು ಏಪ್ರಿಲ್ 23 ರಂದು ಆಸ್ಪತ್ರೆಯ ಹಾಸಿಗೆಗಾಗಿ ಅಳುವುದು ಕಂಡುಬಂದಿದೆ ಎಂದು ದಿ ಕ್ವಿಂಟ್ ವರದಿ ಮಾಡಿದೆ. ಇದು ಜಿಲ್ಲಾ/ತಾಲ್ಲೂಕು ಮಟ್ಟದಲ್ಲಿನ ಕಳಪೆ ವೈದ್ಯಕೀಯ ಸೌಲಭ್ಯವನ್ನ ಸೂಚಿಸುತ್ತದೆ.
ಡಿ ಭೀಮೇಶ್ ಎಂಬ ವ್ಯಕ್ತಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಲ್ಲಿ ಬೆಡ್ ಇಲ್ಲ ಎಂದು ಪ್ರವೇಶವನ್ನು ನಿರಾಕರಿಸಿದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ನಿಲ್ಲಲು ಸಾಧ್ಯವಾಗದ ಮತ್ತು ಉಸಿರಾಟಕ್ಕಾಗಿ ಹೆಣಗಾಡುತ್ತಿದ್ದ ಭೀಮೇಶ್ ಅಡ್ಮಿಟ್ ಮಾಡಿಕೊಳ್ಳಿ ಪ್ಲೀಸ್ ಎಂದು ಪರಿಪರಿಯಾಗಿ ಕೇಳಿದರೂ ಹಾಸಿಗೆ ಸಿಗಲಿಲ್ಲ ಎನ್ನಲಾಗಿದೆ.
ಏಪ್ರಿಲ್ 20ರಂದು ಅನಾರೋಗ್ಯದಿಂದ ಬಳಲುತ್ತಿದ್ದ ಭೀಮೇಶ್ ಏಪ್ರಿಲ್ 21 ರಂದು ಕೋವಿಡ್ ಪಾಸಿಟಿವ್ ಕೇಸ್ ಎಂದು ವರದಿ ಪಡೆದರು. ಅವರು ಕೋವಿಡ್ ವಾರ್ಡ್‌ನ ಹೊರಗಡೆ ಉಸಿರಾಟಕ್ಕಾಗಿ ಹೆಣಗಾಡುತ್ತಿದ್ದರು ಮತ್ತು ನೆಲದ ಮೇಲೆ ನೋವಿನಿಂದ ಬಳಲುತ್ತ ಒದ್ದಾಡುತ್ತಿದ್ದರು ಎಂದು ವರದಿಯಾಗಿದೆ.
ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರು ಅವರಿಗೆ ಸಹಾಯ ಮಾಡಲು ಮುಂದಾಗಲಿಲ್ಲ ಎಂದು ಭೀಮೇಶ್ ಕುಟುಂಬದ ಸದಸ್ಯರೊಬ್ಬರು ಆರೋಪಿಸಿದ್ದಾರೆ. ಭೀಮೇಶರ ಜೊತೆಯಲ್ಲಿರುವ ಮಹಿಳೆ, “ನಾವು ಇಲ್ಲಿಯೇ (ಕಾರಿಡಾರ್‌ನಲ್ಲಿ) ಇರಲು ಸಿದ್ಧರಿದ್ದೇವೆ. ಆದರೆ ವೈದ್ಯರು ನಮ್ಮನ್ನು ಮನೆಗೆ ಹೋಗುವಂತೆ ಒತ್ತಾಯಿಸಿದರು ಮತ್ತು ಹಾಸಿಗೆಗಳು ಲಭ್ಯವಿಲ್ಲ ಎಂದು ಹೇಳಿದರು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೂ ಆಸ್ಪತ್ರೆಯ ಅಧಿಕಾರಿಗಳು ಭೀಮೇಶ್ ಸಂಬಂಧಿಕರ ಆರೋಪಗಳನ್ನು ನಿರಾಕರಿಸಿದ್ದಾರೆ. ತನಗೆ ಹಾಸಿಗೆ ಅಗತ್ಯವಿಲ್ಲ ಎಂದು ತಿಳಿಸಿ ಅವರು ಫಾರ್ಮ್‌ಗೆ ಸಹಿ ಹಾಕಿದ್ದರು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ರೋಗಿ ಆತಂಕದ ಕ್ಷಣಗಳಲ್ಲಿ ಯಾವ ಫಾರ್ಮ್ ಕೊಟ್ಟರೂ ಸಹಿ ಹಾಕುತ್ತಾನೆ/ಳೆ. ಹಾಸಿಗೆ ನೀಡಬೇಕೋ ಬೇಡವೋ ಎಂಬುದನ್ನು ವೈದ್ಯರು ಪರೀಕ್ಷಿಸಿ ತೀರ್ಮಾನಿಸಬೇಕು ಅಲ್ಲವೇ? ಉಸಿರಾಟದ ತೊಂದರೆಯಲ್ಲಿ ನರಳುತ್ತಿರುವ ಒಬ್ಬ ರೋಗಿಗೆ ಕನಿಷ್ಠ ಪ್ರಾಥಮಿಕ ಚಿಕಿತ್ಸೆಯನ್ನೂ ಕೊಡಲಾಗದ ಪರಿಸ್ಥಿತಿಗೆ ನಮ್ಮ ಜಿಲ್ಲಾ ಆಸ್ಪತ್ರೆಗಳು ತಲುಪಿವೆ. ಇಂತಹ ಸಂದರ್ಭದಲ್ಲೂ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರನ್ನು ಹಂತ ಹಂತವಾಗಿ ತೆಗೆಯುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಏಪ್ರಿಲ್ ಅಂತ್ಯದ ಹೊತ್ತಿಗೆ, ಮೇ ತಿಂಗಳಿನಲ್ಲಿ ಕೋವಿಡ್ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದ್ದು ಈ ಕುರಿತು ರಾಜ್ಯದಲ್ಲಿ ಆಸ್ಪತ್ರೆ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಿ. ಪ್ರತಿದಿನ ಆಕ್ಸಿಜನ್ ಬೆಡ್‌ಗಳನ್ನು ಹೆಚ್ಚಿಸಿ ಎಂದು ಜನಾರೋಗ್ಯ ಚಳುವಳಿ ಒತ್ತಾಯಿಸಿದೆ.


