ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಚರ್ಚೆಯ ನಡುವೆ ಇಂದಿನಿಂದ (ಡಿಸೆಂಬರ್ 8) ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ಪ್ರಾರಂಭಗೊಂಡಿದೆ.
ಉತ್ತರ ಕರ್ನಾಟಕದ ಸಮಸ್ಯೆಗಳು, ರೈತರ ಸಂಕಷ್ಟ ಮತ್ತು ಬೆಲೆ ಏರಿಕೆಯ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಕಟ್ಟಿ ಹಾಕಲು ವಿರೋಧಪಕ್ಷಗಳು ಸಿದ್ದತೆ ನಡೆಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಯ ಜಟಾಪಟಿ ನಡೆಯುತ್ತಿದೆ ಎಂಬ ಸುದ್ದಿ ಹಿನ್ನೆಲೆ, ಸರ್ಕಾರದ ವಿರುದ್ದ ಅವಿಶ್ವಾಸ ನಿಲುವಳಿ ಮಂಡಿಸಲು ಬಿಜೆಪಿ ಯೋಜಿಸಿತ್ತು. ಆದರೆ, ಸಿಎಂ, ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಮೂಲಕ ಒಗ್ಗಟ್ಟು ಪ್ರದರ್ಶಿಸಿರುವ ಹಿನ್ನೆಲೆ, ಆ ಯೋಜನೆಯನ್ನು ಮರು ವಿಮರ್ಶೆ ನಡೆಸುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.
ಕಬ್ಬು ಮತ್ತು ಮೆಕ್ಕೆಜೋಳ ಬೆಳೆಗಾರರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಸರ್ಕಾರದ ಮೇಲೆ ಮುಗಿ ಬೀಳುವ ಸಾಧ್ಯತೆ ಇದೆ. ಆದರೆ, ಸರ್ಕಾರ ಕಬ್ಬು ಬೆಳಗಾರರ ಜೊತೆ ಸಭೆ ನಡೆಸಿ ಈಗಾಗಲೇ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸಿದೆ. ಮೆಕ್ಕೆ ಜೋಳಕ್ಕೆ ಸಂಬಂಧಿಸಿದಂತೆ ಪ್ರತಿ ರೈತರಿಂದ ಕ್ವಿಂಟಲ್‌ಗೆ ರೂ. 2,400 ರಂತೆ ಎಕರೆಗೆ ಒಬ್ಬ ರೈತನಿಂದ ಗರಿಷ್ಠ 80 ಕ್ವಿಂಟಲ್ ಮೆಕ್ಕೆ ಜೋಳ ಖರೀದಿಸುವ ಸಂಬಂಧ ಭಾನುವಾರ ಆದೇಶ ಹೊರಡಿಸಿದೆ.
ಆದರೂ, ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಬೆಳಗಾವಿಯಲ್ಲಿ ಮಂಗಳವಾರ ಪ್ರತಿಭಟನೆ ಮತ್ತು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ವರದಿಗಳು ಹೇಳಿವೆ.
ಕೃಷ್ಣಾ ಮೇಲ್ದಂಡೆ, ಮಹದಾಯಿ, ಮೇಕೆದಾಟು ಸೇರಿದಂತೆ ನೀರಾವರಿ ಯೋಜನೆಗಳ ಬಗ್ಗೆಯೂ ಸದನದಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.
ಈ ಬಾರಿಯ ಕಲಾಪದಲ್ಲಿ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆಯೂ ಸೇರಿ ಸುಮಾರು 30 ಮಸೂದೆಗಳು ಮಂಡನೆಯಾಗಲಿವೆ ಎಂದು ವರದಿಯಾಗಿದೆ.
ಎಂಇಎಸ್, ಶಿವಸೇನೆ ಪ್ರತಿಭಟನೆ ಎಚ್ಚರಿಕೆ
ಅಧಿವೇಶನದ ಸಮಯದಲ್ಲಿ ಎಂಇಎಸ್ ಹಾಗೂ ಶಿವಸೇನೆಯ ಚಟುವಟಿಕೆಗಳು ಬಿರುಸು ಪಡೆದಿದೆ. ಹಾಗಾಗಿ, ಬೆಳಗಾವಿ ನಗರದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ವರ್ಷವೂ ಎಂಇಎಸ್ ಸಂಘಟನೆ ಮಹಾಮೇಳಾವ್ ಆಯೋಜಿಸಲು ಮುಂದಾಗಿತ್ತು. ಆದರೆ, ಕನ್ನಡ ಪರ ಸಂಘಟನೆಗಳ ತೀವ್ರ ವಿರೋಧ ಹಿನ್ನೆಲೆ, ಶಾಂತಿ–ಸುವ್ಯವಸ್ಥೆಗೆ ದಕ್ಕೆ ಉಂಟಾಗುವ ಕಾರಣ ನೀಡಿ ಪೊಲೀಸರು ಕಾರ್ಯಕ್ರಮಕ್ಕೆ ಸಂಪೂರ್ಣವಾಗಿ ಅನುಮತಿ ನಿರಾಕರಿಸಿದ್ದಾರೆ.
ಅನುಮತಿ ನಿರಾಕರಿಸಿದರೂ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರು ಇಂದು ಬೆಳಗಾವಿ ನಗರದಲ್ಲಿ ತೀವ್ರ ಚಟುವಟಿಕೆ ನಡೆಸುವ ಸೂಚನೆ ನೀಡಿದ್ದಾರೆ. ಹಾಗಾಗಿ, ನಗರದ ಪ್ರಮುಖ ರಸ್ತೆ, ಚೌಕ, ಗಡಿ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.


