ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ತೇಜೋವಧೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಹರಡುವ ಪೋಸ್ಟ್ ಶೇರ್ ಮಾಡಿರುವ ಆರೋಪದ ಮೇಲೆ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಪೊಲೀಸರು ಗುರುವಾರ ವಿಚಾರಣೆಗೆ ಕರೆದೊಯ್ದಿದ್ದಾರೆ.
ಉಜಿರೆ ಸಮೀಪದ ತಿಮರೋಡಿಯಲ್ಲಿರುವ ಮಹೇಶ್ ಶೆಟ್ಟಿ ಅವರ ಮನೆಗೆ ಆಗಮಿಸಿದ ಉಡುಪಿಯ ಬ್ರಹ್ಮಾವರ ಠಾಣೆ ಪೊಲೀಸರು, ಅವರನ್ನು ವಿಚಾರಣೆಗೆ ಕರೆದೊಯ್ಯಲು ಮುಂದಾದರು. ಈ ವೇಳೆ ಸ್ಥಳದಲ್ಲಿ ಜಮಾಯಿಸಿದ್ದ ಮಹೇಶ್ ಶೆಟ್ಟಿ ಬೆಂಬಲಿಗರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿ.ಎಲ್ ಸಂತೋಷ್ ಅವರನ್ನು ನಿಂದಿಸಿ, ಅವಹೇಳನ ಮಾಡಿರುವ ಆರೋಪದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಉಡುಪಿಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೇಸ್‌ಬುಕ್ ಪೇಜ್‌ನಲ್ಲಿ ವಿಡಿಯೋ ಮಾಡಿ ಮಹೇಶ್ ಶೆಟ್ಟಿ ಅವರು ಸಂತೋಷ್ ಅವರನ್ನು ಅವಹೇಳನ ಮಾಡಿದ್ದಾರೆ. ಅಲ್ಲದೆ, ಬೇರೆ ಬೇರೆ ಧರ್ಮಗಳ ಹಾಗೂ ಸಮುದಾಯಗಳ ನಡುವೆ ದ್ವೇಷ ಭಾವನೆಯನ್ನು ಉಂಟು ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಉಡುಪಿ ಗ್ರಾಮಾಂತರ ಬಿಜೆಪಿಯ ಮಂಡಲಾಧ್ಯಕ್ಷ ರಾಜೀವ ಕುಲಾಲ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.
ಅದರಂತೆ ಬಿಎನ್‌ಎಸ್ ಸೆಕ್ಷನ್ 196(1), 352, 353(2) ಅಡಿಯಲ್ಲಿ ಮಹೇಶ್ ಶೆಟ್ಟಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿಚಾರಣೆಗೆ ತೆರಳುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಹೇಶ್ ಶೆಟ್ಟಿ, “ಸುಳ್ಳು ಪ್ರಕರಣ ದಾಖಲಿಸಿ ನಮ್ಮನ್ನು ಬಂಧಿಸಲಾಗುತ್ತಿದೆ. ಇದು ಎಸ್ಐಟಿ ತನಿಖೆ ಮುಚ್ಚಿಸಲು ಮಾಡಿರುವ ಷಡ್ಯಂತ್ರ. ಇದು ಬಿಜೆಪಿಯವರ ಪಾಪದ ಕೂಸು. ಅವರು ಸರ್ವ ನಾಶ ಆಗಿ ಹೋಗುತ್ತಾರೆ. ನಾನು ಪೊಲೀಸರಿಗೆ ಹೇಳಿಕೆ ನೀಡುತ್ತೇನೆ. ಸೌಜನ್ಯಾಗೆ ನ್ಯಾಯ ಸಿಗಬೇಕು. ನ್ಯಾಯ ಖಂಡಿತಾ ಸಿಗುತ್ತದೆ. ನನ್ನ ಜೀವಕ್ಕೆ ಏನಾದರೂ ಅಪಾಯ ಆದರೆ ಅದಕ್ಕೆ ಸರ್ಕಾರ ಮತ್ತು ಬಿಜೆಪಿ ಕಾರಣ” ಎಂದು ಹೇಳಿದರು.
ವಿಚಾರಣೆಗೆ ಹಾಜರಾಗಲು ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟೆಣ್ಣನವರ್ ಖಾಸಗಿ ಕಾರಿನಲ್ಲಿ ಪೊಲೀಸರ ಜೊತೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.


