Homeಕರ್ನಾಟಕಬೇಲೂರು: ಚರ್ಚ್‌ ಮೇಲೆ ದಾಳಿ ಮಾಡಿದವರ ಬಂಧನ ಇನ್ನೂ ಆಗಿಲ್ಲ!

ಬೇಲೂರು: ಚರ್ಚ್‌ ಮೇಲೆ ದಾಳಿ ಮಾಡಿದವರ ಬಂಧನ ಇನ್ನೂ ಆಗಿಲ್ಲ!

- Advertisement -
- Advertisement -

ಬಲವಂತವಾಗಿ ಮತಾಂತರದ ಮಾಡಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಬೆಂಬಲಿತ ಬಜರಂಗದಳದ ಗುಂಪು ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಕ್ರಿಶ್ಚಿಯನ್‌ ಪ್ರಾರ್ಥನಾ ಮಂದಿರಕ್ಕೆ ನುಗ್ಗಿ ಗಲಭೆ ಸೃಷ್ಟಿಸಲು ಯತ್ನಿಸಿ ಒಂದು ವಾರವಾಯಿತು. ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡಲು ಯತ್ನಿಸಿದ ಐವರು ಬಜರಂಗದಳ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೂ ಇಲ್ಲಿಯವರೆಗೆ ಒಬ್ಬರನ್ನೂ ಬಂಧಿಸಲಾಗಿಲ್ಲ.

ನವೆಂಬರ್ 28ರಂದು ಪ್ರಾರ್ಥನಾ ಸಭೆ ನಡೆಯುತ್ತಿದ್ದಾಗ ಬಜರಂಗದಳದ ಸುಮಾರು 25 ಕಾರ್ಯಕರ್ತರು ಪ್ರಾರ್ಥನಾ ಮಂದಿರಕ್ಕೆ ನುಗ್ಗಿದ್ದರು. ಪರಿಸ್ಥಿತಿ ಅವಲೋಕಿಸಲು ಕರೆಸಿಕೊಂಡಿದ್ದ ಪೊಲೀಸರು ದಾಳಿಕೋರರನ್ನು ಹತ್ತಿಕ್ಕುವ ಬದಲು ಬಜರಂಗದಳದ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸುತ್ತಿರುವುದು ಕಂಡುಬಂದಿತ್ತು.

ಚರ್ಚ್ ಸದಸ್ಯರ ದೂರಿನ ಮೇರೆಗೆ ಬೇಲೂರು ಪೊಲೀಸರು ಶಾಂತಿ ಭಂಗದ ಆರೋಪದ ಮೇಲೆ ಭಜರಂಗದಳದ ಐವರ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಕಾನೂನು ಕ್ರಮ ಕೈಗೊಳ್ಳುವ ಬದಲು ಶಾಂತಿ ಸಭೆ ನಡೆಸಿದ್ದಾರೆ. ಘಟನೆ ನಡೆದ ದಿನದಂದು ಬಜರಂಗದಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿರುವುದನ್ನು ವೀಡಿಯೋಗಳು ಸ್ಪಷ್ಟವಾಗಿ ತೋರಿಸುತ್ತಿದ್ದರೂ ಭವಿಷ್ಯದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ಔಪಚಾರಿಕ ಭರವಸೆ ಪಡೆದರು.

“ನಾವು ಎರಡೂ ಸಮುದಾಯಗಳನ್ನು ಠಾಣೆಗೆ ಕರೆಸಿ ಶಾಂತಿ ಸಮಿತಿ ಸಭೆ ನಡೆಸಿದ್ದೇವೆ. ಎರಡೂ ಸಮುದಾಯಗಳು ಸಮಸ್ಯೆಗಳನ್ನು ಉಲ್ಬಣಗೊಳಿಸದಂತೆ ನೋಡಿಕೊಳ್ಳುತ್ತೇವೆ ಮತ್ತು ಸೌಹಾರ್ದಯುತವಾಗಿ ಬಗೆಹರಿಸಿದ್ದೇವೆ” ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಹೇಳಿದ್ದಾರೆ.


ಇದನ್ನೂ ಓದಿರಿ: ಬೇಲೂರು: ಕ್ರಿಶ್ಚಿಯನ್ನರ ಪ್ರಾರ್ಥನೆಗೆ ಬಜರಂಗದಳ ಕಾರ್ಯಕರ್ತರಿಂದ ಅಡ್ಡಿ, ಮಹಿಳೆಯರಿಂದ ಛೀಮಾರಿ!


ಪ್ರಾರ್ಥನಾ ಮಂದಿರದಲ್ಲಿದ್ದ ಸದಸ್ಯರು ಬಲವಂತದ ಮತಾಂತರದ ಆರೋಪಗಳನ್ನು ನಿರಾಕರಿಸಿದ್ದಾರೆ. “ಬಲವಂತದ ಮತಾಂತರವನ್ನು ಏಕೆ ಮಾಡಬೇಕು? ನಾವು ದೇವರನ್ನು ಪೂಜಿಸುತ್ತಿದ್ದೇವೆ, ಬಲವಂತದ ಮತಾಂತರದಿಂದ ಏನು ಪ್ರಯೋಜನ? ಅವರ ಕೃತ್ಯಗಳಿಂದ ನಮಗೆ ನೋವಾಗಿದೆ, ನಾನು ಧರ್ಮದಲ್ಲಿ ನಂಬಿಕೆ ಹೊಂದಿದ್ದೇನೆ ಮತ್ತು ಕ್ರಿಶ್ಚಿಯನ್ ಆಗಲು ಬಯಸುತ್ತೇನೆ, ಇದು ನನ್ನ ವೈಯಕ್ತಿಕ ನಿರ್ಧಾರ ಮತ್ತು ಅದು ನನ್ನ ಹಕ್ಕು. ಕಳೆದ ಐದು ವರ್ಷಗಳಿಂದ ನಾನು ಪ್ರಾರ್ಥನಾ ಸಭೆಯ ಭಾಗವಾಗಿದ್ದೇನೆ. ಯಾರೂ ನನ್ನನ್ನು ಬಲವಂತ ಮಾಡಿಲ್ಲ. ಚರ್ಚ್‌ಗೆ ಬರುವುದು ನನ್ನ ಸ್ವಯಂಪ್ರೇರಿತ ನಿರ್ಧಾರ” ಎಂದು ಘಟನೆ ನಡೆದ ದಿನದಂದು ಹಾಜರಿದ್ದ ಸುನಿತಾ ಎಂಬವರು ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಚರ್ಚ್‌ನ ಪಾದ್ರಿ ಸುರೇಶ್ ಪೌಲ್ ಅವರೂ ಆರೋಪವನ್ನು ನಿರಾಕರಿಸಿದ್ದಾರೆ. ಮೂರು ವರ್ಷಗಳಿಂದ ಚರ್ಚ್ ಸಕ್ರಿಯವಾಗಿದೆ ಎಂದು ಅವರು ಹೇಳಿದ್ದಾರೆ. “ಯಾವುದೇ ಮತಾಂತರ ನಡೆಯುತ್ತಿಲ್ಲ. ಇದು ಮತಾಂತರದ ಸ್ಥಳವಲ್ಲ. ಕಾರ್ಯಕರ್ತರು ಇಲ್ಲಿಗೆ ಬಂದು ನಮಗೆ ಬೆದರಿಕೆ ಹಾಕಿದರು ಮತ್ತು ಕೆಲವರನ್ನು ಥಳಿಸಲು ಪ್ರಯತ್ನಿಸಿದರು” ಎಂದು ಸುರೇಶ್ ಪೌಲ್‌ ಆರೋಪಿಸಿದ್ದಾರೆ.

ಚರ್ಚ್‌ಗೆ ನುಗ್ಗಿದ ಗುಂಪಿನ ಭಾಗವಾಗಿದ್ದ ಬಜರಂಗದಳ ಕಾರ್ಯಕರ್ತರು ಕ್ಷಮೆಯಾಚಿಸಿಲ್ಲ. “ಹಿಂದೂಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ. ಒಮ್ಮೆ ಹಿಂದೂವಾಗಿ ಜನಿಸಿದರೆ, ನೀವು ಹಿಂದೂವಾಗಿ ಸಾಯುತ್ತೀರಿ, ಬೇಲೂರಿನಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ” ಎಂದು ನಾಗೇನಹಳ್ಳಿಯ ಬಜರಂಗದಳದ ಸದಸ್ಯರೊಬ್ಬರು ತಿಳಿಸಿದ್ದಾರೆ. “ಬಹಳಷ್ಟು ಜನರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅದು ಮುಂದುವರಿಯುತ್ತಿದೆ” ಎಂದು ಹಾಸನ ಜಿಲ್ಲೆಯ ಬಜರಂಗದಳದ ಸಂಚಾಲಕ ಮಂಜುನಾಥ್ ಹೇಳಿಕೆ ನೀಡಿದ್ದಾರೆ.

ರಕ್ಷಣೆ ನೀಡಲು ಪ್ರಾರ್ಥನಾ ಮಂದಿರದ ಹೊರಗೆ ಪೊಲೀಸರನ್ನು ನಿಯೋಜಿಸಲಾಗಿದ್ದರೂ, ಪಾದ್ರಿ ಪೌಲ್‌ ಅವರು ಆತಂಕದಿಂದ ಇನ್ನೂ ಹೊರಬಂದಿಲ್ಲ ಎಂದು ಮೂಲಗಳು ಹೇಳಿವೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಸರ್ಕಾರ ಮತಾಂತರ ವಿರೋಧಿ ಮಸೂದೆಯನ್ನು ತರುವುದಾಗಿ ಭರವಸೆ ನೀಡಿದ ಬೆನ್ನಲ್ಲೇ ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರದ ಮೇಲೆ ದಾಳಿ ನಡೆದಿದೆ.


ಇದನ್ನೂ ಓದಿರಿ: ಅಡಿ ಇಡದಿರಿ ಗುಡಿಯೊಳಗೆ…! ದೇವಸ್ಥಾನ ಪ್ರವೇಶ ನಿಷೇಧ ಮತ್ತು ವಿರೋಧ


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...