Homeಕರ್ನಾಟಕಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಸಾಧ್ಯವಿಲ್ಲ: ಬೊಮ್ಮಾಯಿ

ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಸಾಧ್ಯವಿಲ್ಲ: ಬೊಮ್ಮಾಯಿ

- Advertisement -
- Advertisement -

ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪರಿಸರ ವಲಯ ಎಂದು ಘೋಷಿಸುವುದರಿಂದ ಈ ಭಾಗದಲ್ಲಿ ವಾಸಿಸುವ ಜನರ ಜೀವನೋಪಾಯಕ್ಕೆ ಧಕ್ಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ರಾಜ್ಯ ಸರ್ಕಾರ ಹಾಗೂ ಈ ಭಾಗದ ಜನತೆಯ ಒಕ್ಕೊರಲಿನ ವಿರೋಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪಶ್ಚಿಮ ಘಟ್ಟದ ಸಂರಕ್ಷಣೆಗೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿ ಜಾರಿ ಕುರಿತಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಅವರು ಶನಿವಾರ ನಡೆಸಿದ ವರ್ಚುವಲ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು ರಾಜ್ಯ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶದ ನಿವಾಸಿಗಳು, ಅಧಿಕಾರಿಗಳು ಮತ್ತು ಸಂಬಂಧಪಟ್ಟ ಎಲ್ಲರೊಂದಿಗೆ ಕೂಲಂಕಷವಾಗಿ ಸಮಾಲೋಚನೆ ನಡೆಸಿ ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸಿ ರಾಜ್ಯ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ ಎಂದು ಸಭೆಯ ಗಮನಕ್ಕೆ ತಂದಿದ್ದಾರೆ.

ಕರ್ನಾಟಕ ರಾಜ್ಯ ಅತಿ ಹೆಚ್ಚು ಅರಣ್ಯ ಪ್ರದೇಶಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ನಮ್ಮ ಸರ್ಕಾರ ಹಾಗೂ ಜನತೆ ಪಶ್ಚಿಮ ಘಟ್ಟದ ಜೀವ ವೈವಿಧ್ಯದ ಸಂರಕ್ಷಣೆಗೆ ಹೆಚ್ಚಿನ ಕಾಳಜಿ ತೋರಿದ್ದೇವೆ. ಯಾವುದೇ ಕಾಯ್ದೆ ಕಾನೂನು ಜಾರಿಯಾಗುವ ಮುನ್ನವೂ ಈ ಭಾಗದ ಜನರು ಇಲ್ಲಿನ ಪ್ರಕೃತಿಗೆ ಸಹಜವಾದ ಕೃಷಿ, ತೋಟಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದು, ಪರಿಸರ ಸ್ನೇಹಿ ಜೀವನ ಶೈಲಿಯನ್ನು ರೂಢಿಸಿಕೊಂಡಿದ್ದಾರೆ; ಪಶ್ಚಿಮ ಘಟ್ಟದ ಸಂರಕ್ಷಣೆಗೆ ಆದ್ಯತೆ ನೀಡುತ್ತಲೇ ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿರಿ: ಜೇನುಕುರುಬ ಆದಿವಾಸಿ ಯುವಕನಿಗೆ ಅರಣ್ಯ ಸಿಬ್ಬಂದಿಯಿಂದ ಗುಂಡೇಟು: ಭುಗಿಲೆದ್ದ ಆಕ್ರೋಶ


ಈಗಾಗಲೇ ಜೀವ ವೈವಿಧ್ಯ ಸಂರಕ್ಷಣೆ ಕಾಯ್ದೆ, ಅರಣ್ಯ ಸಂರಕ್ಷಣೆ ಕಾಯ್ದೆ ಮೊದಲಾದ ಹಲವಾರು ಕಾನೂನುಗಳಡಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಕಾನೂನು ಜಾರಿಗೆ ತರುವ ಮೂಲಕ ಈ ಭಾಗದ ಜನರ ಜೀವನೋಪಾಯಕ್ಕೆ ಧಕ್ಕೆ ತರುವುದು ಸರಿಯಲ್ಲ ಎಂದು ಮುಖ್ಯಮಂತ್ರಿಯವರು ಅಭಿಪ್ರಾಯಪಟ್ಟಿದ್ದಾರೆ.

ಉಪಗ್ರಹ ಸಮೀಕ್ಷೆಯ ಆಧಾರದಲ್ಲಿ ಕಸ್ತೂರಿ ರಂಗನ್ ವರದಿ ರೂಪಿಸಲಾಗಿದೆ. ಆದರೆ ವಸ್ತುಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ಪ್ರತಿ ಎಕರೆಯನ್ನು ಪ್ರತ್ಯಕ್ಷವಾಗಿ ಸಮೀಕ್ಷೆ ನಡೆಸುವುದರಿಂದ ಜನರ ಪರಿಸರ ಸ್ನೇಹಿ ಜೀವನಶೈಲಿಯನ್ನು ಗಮನಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅಧಿಕಾರಿಗಳು ರಾಜ್ಯಕ್ಕೆ ಭೇಟಿ ನೀಡಿ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಕೇಂದ್ರ ಸಚಿವರು ಪ್ರತಿಕ್ರಿಯಿಸಿದ್ದಾರೆ. ರಾಜ್ಯ ಸರ್ಕಾರದ ಸಚಿವರಾದ ಅರಗ ಜ್ನಾನೇಂದ್ರ , ಆನಂದ್ ಸಿಂಗ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದರು.

ಕಸ್ತೂರಿ ರಂಗನ್‌ ವರದಿ ಹೇಳುವುದೇನು?

ಗುಜರಾತ್‌ನ ತಪತಿ ನದಿಯಿಂದ ಹಿಡಿದು, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡಿನ ಕನ್ಯಾಕುಮಾರಿವರೆಗೂ 1,64,280 ಚದರ ಕಿಲೋ ಮೀಟರ್ ಪ್ರದೇಶವನ್ನು ಪಶ್ಚಿಮ ಘಟ್ಟ ಎಂದು ಗುರ್ತಿಸಲಾಗಿದೆ. ಕರ್ನಾಟಕದ ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ಹಲವು ಭೂಭಾಗ ಪಶ್ಚಿಮ ಘಟ್ಟಕ್ಕೆ ಸೇರಿದೆ.

ಈ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳು ಗಣಿಗಾರಿಕೆ, ಕೈಗಾರಿಕೆಗಳು, ಜಲ ವಿದ್ಯುತ್ ಯೋಜನೆ, ಪವನ ವಿದ್ಯುತ್ ಯೋಜನೆ ಸೇರಿದಂತೆ ಎಲ್ಲ ರೀತಿಯ ಕಾರ್ಯಗಳನ್ನು ಸ್ಥಗಿತಗೊಳಿಸಬೇಕೆಂದು ಕಸ್ತೂರಿ ರಂಗನ್‌ ವರದಿ ಶಿಫಾರಸ್ಸು ಮಾಡಿದೆ. 20 ಸಾವಿರ ಚದರ ಮೀಟರ್‌ಗಿಂತಲೂ ದೊಡ್ಡ ಕಟ್ಟಡ ನಿರ್ಮಿಸುವಂತಿಲ್ಲ ಎಂದು ಹೇಳಿದೆ. ಈ ಪ್ರದೇಶದಲ್ಲಿ ಸಿಮೆಂಟ್, ಕಲ್ಲು, ರಾಸಾಯನಿಕ ಬಳಕೆ ಹಾಗೂ ಜನವಸತಿ ಪ್ರದೇಶ ನಿರ್ಮಾಣಕ್ಕೂ ನಿಷೇಧ ವಿಧಿಸಬೇಕೆಂದು ಶಿಫಾರಸ್ಸು ಮಾಡಿದೆ. ಹಲವು ವರ್ಷಗಳಿಂದ ಕಸ್ತೂರಿ ರಂಗನ್ ವರದಿ ಹಾಗೂ ಇದಕ್ಕೆ ಮುಂಚೆ ಬಂದ ಮಾಧವ ಗಾಡ್ಗಿಲ್‌ ವರದಿ ಎರಡೂ ಕೂಡ ಸರ್ಕಾರಗಳಿಗೆ ಅಪಥ್ಯವಾಗಿವೆ. ಮಾಧವ್ ಗಾಡ್ಗಿಲ್ ವರದಿ ಜಾರಿ ಸಾಧ್ಯವಿಲ್ಲವೆಂದು ಕಸ್ತೂರಿ ರಂಗನ್ ಸಮಿತಿಯನ್ನು ರಚಿಸಲಾಗಿತ್ತು.

ಕಸ್ತೂರಿ ರಂಗನ್ ಅವರ ವರದಿ ಅನುಷ್ಠಾನವಾದರೆ ಪಶ್ಚಿಮ ಘಟ್ಟ ಹಾಗೂ ಮಲೆನಾಡು ಅತಿ ಸೂಕ್ಷ್ಮ ಪರಿಸರ ವಲಯವಾಗಿ ಘೋಷಣೆಯಾಗುತ್ತದೆ. ಇಲ್ಲಿ ಮಾನವ ಹಸ್ತಕ್ಷೇಪವನ್ನು ನಿಲ್ಲಿಸಬೇಕಾಗುತ್ತದೆ. ವಿದ್ಯುತ್, ನೀರಾವತಿ ಸೇರಿದಂತೆ ಯಾವುದೇ ಕೈಗಾರಿಕೆ ನಡೆಸಲು ಕಷ್ಟ ಸಾಧ್ಯವಾಗಲಿದೆ.


ಇದನ್ನೂ ಓದಿರಿ: ಪಶ್ಚಿಮಘಟ್ಟಗಳು: ಗಾಡ್ಗೀಳ್ ವರದಿ ಕಂಡಂತೆ


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...