ಬೆಂಗಳೂರು ನಗರ ವಿಶ್ವವಿದ್ಯಾಲಯ ಪ್ರಾರಂಭವಾಗಿ ಐದು ವರ್ಷಗಳು ಕಳೆದರೂ ಸರಿಯಾದ ಶೌಚಾಲಯ, ಗ್ರಂಥಾಲಯ, ನೀರಿನ ವ್ಯವಸ್ಥೆ ಇಲ್ಲದ ಕಾಲೇಜಿನ ಅವ್ಯವಸ್ಥೆಯಿಂದ ಬೇಸತ್ತ ನೂರಾರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಹಳೆಯ ಕಟ್ಟಡವನ್ನು ಒಂದೇ ಬಾರಿಗೆ ನವೀಕರಣ ಮಾಡುತ್ತಿದ್ದು, ಇದರಿಂದಾಗಿ ಸರಿಯಾದ ತರಗತಿಗಳು ನಡೆಯುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅಷ್ಟೆ ಅಲ್ಲದೆ ಸುಮಾರು 800 ವಿದ್ಯಾರ್ಥಿಗಳಿರುವ ಕ್ಯಾಂಪಸ್‌ನಲ್ಲಿ ಸರಿಯಾದ ಶೌಚಾಲಯಗಳು ಕೂಡಾ ಇಲ್ಲ, ವಿದ್ಯಾರ್ಥಿನಿಯರು ಶೌಚಾಲಯಕ್ಕಾಗಿ ಮೆಟ್ರೋ ಸ್ಟೇಷನ್‌ವರೆಗೂ ಹೋಗಬೇಕಾಗಿದೆ ಎಂದು ಪ್ರತಿಭಟನೆ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಚಟುವಟಿಕೆ ಎಂದು ಎಂದು ಹಣ ಪಡೆದುಕೊಂಡು ಯಾವುದೆ ಕಾರ್ಯಕ್ರಮಗಳನ್ನು ಕೂಡಾ ನಡೆಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಜೊತೆಗೆ ಆಟದ ಸಾಮಾಗ್ರಿಗಳು, ಪ್ರಯೋಗಾಲಯದ ಫೀಸ್‌ಗಳನ್ನು ಕಟ್ಟಿಸಿಕೊಂಡಿದ್ದರೂ ಅವುಗಳನ್ನು ಕೂಡಾ ನೀಡುತ್ತಿಲ್ಲ ಎಂದು ಪ್ರತಿಭಟನಾ ವಿದ್ಯಾರ್ಥಿಗಳು ಹೇಳಿದ್ದಾರೆ.
ಗ್ರಂಥಾಲಯವಿದ ಫೀಸ್ ಕಟ್ಟಿಸಿಕೊಂಡರೂ ತಮ್ಮ ಅಧ್ಯಯನಕ್ಕೆ ಬೇಕಾದ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದು, ಸೆಮಿಸ್ಟರ್‌ಗಳು ಮುಗಿದು ತುಂಬಾ ಸಮಯವಾದರೂ ಫಲಿತಾಂಶ ಪ್ರಕಟವಾಗಿಲ್ಲ ಎಂದು ಹೇಳಿದ್ದಾರೆ. ಇಷ್ಟೆ ಅಲ್ಲದೆ, ಪ್ರತಿ ವರ್ಷ ಐಡಿ ಕಾಡ್‌ಗಳಿಗೆ ಹಣ ಪಡೆದು ಮೊದಲನೇ ವರ್ಷದ ಐಡಿ ಕಾರ್ಡ್‌ಗಳನ್ನೇ ಉಪಯೋಗಿಸಲು ಹೇಳುತ್ತಿದ್ದಾರೆ. ಹೊಸದಾಗಿ ಐಡಿ ಕಾರ್ಡ್‌ಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ ನಾಯಕ ವೇಣುಗೋಪಾಲ್ ಮೌರ್ಯ,“ವಿದ್ಯಾರ್ಥಿಗಳು ಒಂದು ವಿಷಯದ ಪತ್ರಿಕೆಯನ್ನು ಮರು-ಮೌಲ್ಯಮಾಪನಕ್ಕೆ ಅರ್ಜಿ ಹಾಕಬೇಕು ಅಂದರೆ 3 ಸಾವಿರ ರೂಗಳನ್ನು ಪಾವತಿ ಮಾಡಬೇಕಾಗುತ್ತದೆ. ಬೇರೆ ವಿಶ್ವವಿದ್ಯಾಲಯದಲ್ಲಿ ಸಾವಿರ ರೂಗಳಷ್ಟೆ ಇರುತ್ತದೆ. ಬಡ-ಮಧ್ಯಮ ವರ್ಗದ ವಿದ್ಯಾರ್ಥಿಗಳು ಅವುಗಳನ್ನು ಪಾವತಿ ಮಾಡಲು ಹೇಗೆ ಸಾಧ್ಯ? ಇವರೇನು ದಂಧೆ ನಡೆಸುತ್ತಿದ್ದಾರೆಯೆ” ಎಂದು ಪ್ರಶ್ನಿಸಿದ್ದಾರೆ.
“ಕೋಟ್ಯಾಂತರ ರೂಗಳನ್ನು ಖರ್ಚು ಮಾಡಿಸಿ ಕಾಲೇಜಿಗೆ ಸುಣ್ಣ ಬಣ್ಣ ಬಳಿಯುತ್ತಾರೆ. ಆದರೆ ವಿದ್ಯಾರ್ಥಿಗಳಿಗೆ ಕುಡಿಯಲು ನೀರು ಇಲ್ಲ. ಸರಿಯಾದ ಶೌಚಾಲಯವಿಲ್ಲ. ಇಡೀ ಕಟ್ಟಡಗಳನ್ನು ಒಂದೇ ಬಾರಿಗೆ ನವೀಕರಣ ಮಾಡುತ್ತಿರುವುದರಿಂದ ತರಗತಿ ನಡೆಸಲು ಸರಿಯಾದ ಕೋಣೆಗಳಿಲ್ಲದೆ, ದೂರದ ಹಳ್ಳಿಗಳ ಕಡೆಯಿಂದ ಬಂದ ವಿದ್ಯಾರ್ಥಿಗಳ ಸಂಜೆವೆರೆಗೆ ಕುಳಿತು ವಾಪಾಸು ಮನೆಗೆ ತೆರಳುತ್ತಿದ್ದಾರೆ. ಇದು ಸುಮಾರು ಆರು ತಿಂಗಳಿನಿಂದ ನಡೆಯುತ್ತಿದೆ” ಎಂದು ವೇಣುಗೋಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇತ್ತೀಚೆಗೆ ಬಂದ ಫಲಿತಾಂಶದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಫೇಲ್ ಮಾಡಿದ್ದಾರೆ. ಪರೀಕ್ಷೆಯ ಮೌಲ್ಯಮಾಪನವನ್ನು ಕಳಪೆ ಮಟ್ಟದಲ್ಲಿ ಮಾಡಿದ್ದಲ್ಲದೆ, ಪೇಪರ್‌ಗಳ ಫೋಟೋ ಕಾಪಿ ಕೇಳಿದರೆ ಅವುಗಳನ್ನು ಕೂಡಾ ನೀಡುತ್ತಿಲ್ಲ. ಪತ್ರಿಕೆಗಳ ಫೋಟೋ ಕಾಪಿ ವಿದ್ಯಾರ್ಥಿಗಳ ಹಕ್ಕಾಗಿದ್ದು, ಅದನ್ನು ನೀಡಬೇಕು ಎಂದು ನ್ಯಾಯಾಲಯದ ಆದೇಶವೇ ಇದೆ. ಆದರೆ ಬೆಂಗಳೂರು ನಗರ ವಿಶ್ವವಿದ್ಯಾಲಯ ಅವುಗಳನ್ನು ನೀಡದೆ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ. ಒಟ್ಟಾರೆಯಾಗಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ವಾತಾವರಣ ನೀಡುವುದು ಬಿಟ್ಟು ವಿಶ್ವವಿದ್ಯಾಲಯದ ದುಡ್ಡನ್ನು ಉಪ ಕುಲಪತಿ ಮತ್ತು ರಿಜಿಸ್ಟ್ರಾರ್ ಕಬಳಿಕೆ ಮಾಡುತ್ತಿದ್ದಾರೆ” ಎಂದು ವೇಣುಗೋಪಾಲ್ ಅವರು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ಆರೋಪಗಳಿಗೆ ಪ್ರತಿಕ್ರಿಯಿಸಿದ ಬೆಂಗಳೂರು ನಗರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಶ್ರೀಧರ್ ಸಿ.ಎನ್., ಕೆಲವೊಂದು ಸಣ್ಣ ಪುಟ್ಟ ಸಮಸ್ಯೆಗಳು ಬಿಟ್ಟರೆ ಯಾವುದೆ ಸಮಸ್ಯೆ ವಿಶ್ವವಿದ್ಯಾಲಯದಲ್ಲಿ ಇಲ್ಲ. ಪ್ರತಿಭಟನೆಗಳು ಹೊರಗಿನ ವ್ಯಕ್ತಿಗಳ ಕುಮ್ಮಕ್ಕಿನಿಂದ ನಡೆಯುತ್ತಿದೆ ಎಂದು ಹೇಳಿದ್ದಾರೆ.
ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಶ್ರೀಧರ್ ಅವರು,“ಸುಮಾರು 160 ವರ್ಷಗಳಷ್ಟು ಹಳೆಯ ಕಟ್ಟಡಗಳು ಆಗಿರುವುದರಿಂದ ವಿಶ್ವವಿದ್ಯಾಲಯದ ನವೀಕರಣ ಕೆಲಸ ನಡೆಯುತ್ತಿದೆ. ಗಣಿತ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಎಲ್ಲವೂ ಸರಿಯಾಗಿದ್ದು, ಈಗ ಕನ್ನಡ, ಇತಿಹಾಸ ಮತ್ತು ಭೌತಶಾಸ್ತ್ರ ವಿಭಾಗಗಳನ್ನು ನವೀಕರಣಕ್ಕೆ ತೆಗೆದುಕೊಂಡಿದ್ದಾರೆ. ಇದೀಗ ಒಟ್ಟು ಆರು ತರಗತಿಗಳು ಮತ್ತು ಎರಡು ಶೌಚಾಲಯದಗಳಲ್ಲಿ ಕೆಲಸ ನಡೆಯುತ್ತಿದೆ. ಹೀಗಾಗಿ ಎರಡು ಮೂರು ಕ್ಲಾಸ್ ಮತ್ತು ಎರಡು ಶೌಚಾಲಯಗಳಷ್ಟೆ ಕೊರತೆಯಾಗಿದೆ. ವಿಶ್ವವಿದ್ಯಾಲಯದಲ್ಲಿ ಒಟ್ಟು 34 ಶೌಚಾಲಯ ಕೋಣೆಗಳಿವೆ. ಎಲ್ಲವೂ ಹೊಸದಾಗಿ ನಿರ್ಮಾಣ ಮಾಡಿರುವಂತದ್ದು” ಎಂದು ಹೇಳಿದ್ದಾರೆ.
“ಸಾಂಸ್ಕೃತಿಕ ಚಟುವಟಿಕೆಗಳು ಪರೀಕ್ಷೆಗಳು ಮುಗಿದ ನಂತರ ಪ್ರಾರಂಭವಾಗುತ್ತದೆ. ಅವರು ಹೇಳಿದ ಹಾಗೆ ಪರೀಕ್ಷೆಗಳು ಇರಬೇಕಾದ್ರೆ ಚಟುವಟಿಕೆಗಳನ್ನು ನಡೆಸಲು ಆಗುವುದಿಲ್ಲ. ಪ್ರಯೋಗಾಲಯಗಳ ಸಾಮಾಗ್ರಿಗಳು ಮೊದಲನೇ ವರ್ಷದ ವಿದ್ಯಾರ್ಥಿಗಳಿಗೆ ಈಗಾಗಲೆ ಬಂದಿದೆ. ಕ್ರಿಕೆಟ್ ಸ್ಟೇಡಿಯಂ ಇರುವ ಜಾಗದಲ್ಲಿ ಕಾಂಪ್ಲೆಕ್ಸ್ ನಿರ್ಮಾಣವಾಗುತ್ತಿದೆ ಹೀಗಾಗಿ ಕ್ರೀಡಾ ಸಾಮಾಗ್ರಿಗಳನ್ನು ಖರೀದಿಸಿಲ್ಲ. ಅಲ್ಲದೆ ವಿದ್ಯಾರ್ಥಿಗಳಿಗೆ ಬೇಕಾಗಿರುವ ಗ್ರಂಥಾಲಯದಲ್ಲಿ ಸುಮಾರು 40 ಸಾವಿರ ಪುಸ್ತಕಗಳಿವೆ” ಎಂದು ಅವರು ಹೇಳಿದ್ದಾರೆ.
“ಪತ್ರಿಕೆಗಳ ಮರು ಮೌಲ್ಯ ಮಾಪನದ ವಿಚಾರವಾಗಿ ಸಮಿತಿ ಮಾಡಿ 3 ಸಾವಿರದಿಂದ 1,500 ರೂ.ಗಳಿಗೆ ಇಳಿಸಿದ್ದೇವೆ. ಅದರ ಬಗ್ಗೆ ಇನ್ನಷ್ಟೆ ಅಧಿಸೂಚನೆ ಹೊರಡಿಸಬೇಕಿದೆ. ಉಳಿದಂತೆ ಪತ್ರಿಕೆಗಳ ಫೋಟೊ ಕಾಪಿ ನೀಡುವ ಬಗ್ಗೆ ನಮ್ಮ ವಿಶ್ವವಿದ್ಯಾಲಯದ ನಿಯಮಗಳಲ್ಲಿ ಅದಕ್ಕೆ ಅವಕಾಶವಿಲ್ಲ. ಜೊತೆಗೆ ಒಂದು ಪತ್ರಿಕೆ ಕೊಡಬೇಕು ಅಂದರೆ, ಒಂದು ಶೀಟ್‌ನಲ್ಲಿ 12 ಜನರ ಅಂಕಗಳು ಇರುತ್ತವೆ, ಹಾಗಾಗಿ ಅದನ್ನು ನೀಡಲು ಸಾಧ್ಯವಿಲ್ಲ” ಎಂದು ಶ್ರೀಧರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಾರವಾರ ಮೆಡಿಕಲ್ ಕಾಲೇಜು; ಆತಂಕದಲ್ಲಿ ದಲಿತರು!


