ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಬೇಗೂರಿನಲ್ಲಿ ನೂರಾರು ಗೂಂಡಾಗಳು ಕಳೆದ ಬುಧವಾರ (ಮೇ.28) ತಡರಾತ್ರಿ ದಲಿತರ ಮನೆ ಮತ್ತು ದೇವಸ್ಥಾನಗಳನ್ನು ಧ್ವಂಸ ಮಾಡಿರುವ ಆರೋಪ ಕೇಳಿ ಬಂದಿದೆ.
ಬೇಗೂರು ಗ್ರಾಮದ ಸರ್ವೆ ನಂಬರ್ 352ರ ಒಂದು ಎಕರೆ ಜಮೀನಿನಲ್ಲಿ ಮುನಿಸ್ವಾಮಿ ಎಂಬವರು 1970ರಿಂದ ಉಳುಮೆ ಮಾಡಿಕೊಂಡು, ಅದೇ ಭೂಮಿಯಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದರು.
ಜಮೀನಿನ ಮುಂಭಾಗದಲ್ಲಿರುವ ಪ್ರೆಸ್ಟೀಜ್ ಕಂಪನಿ ಈ ಭೂಮಿಯನ್ನು ತನ್ನ ವಶಕ್ಕೆ ಪಡೆಯಲು ಸಾಕಷ್ಟು ಬಾರಿ ಪ್ರಯತ್ನಿಸಿತ್ತು. ಬುಧವಾರ ತಡರಾತ್ರಿ ನೂರಾರು ಗೂಂಡಾಗಳು ಏಕಾಏಕಿ ಜಮೀನಿಗೆ ನುಗ್ಗಿ, ಬುಲ್ಡೋಝರ್ ಮೂಲಕ ಮುನಿಸ್ವಾಮಿ ಅವರ ಕುಟುಂಬ ವಾಸವಿದ್ದ ಮನೆ ಮತ್ತು ಪಕ್ಕದ ದೇವಸ್ಥಾನಗಳನ್ನು ನೆಲಸಮಗೊಳಿಸಿದ್ದಾರೆ ಎಂದು ಈದಿನ.ಕಾಂ ವರದಿ ಮಾಡಿದೆ.
ಈ ಸಂಬಂಧ 500ರಕ್ಕಿಂತ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಾಗಿದೆ. ಎಫ್‌ಐಆರ್ ಪ್ರತಿ ನಾನುಗೌರಿ.ಕಾಂಗೆ ಲಭ್ಯವಾಗಿದ್ದು, ಅದರಲ್ಲಿ ರವಿಚಂದ್ರನ್ ಹೆಚ್.ಆರ್ ಎಂಬವರನ್ನು ಮೊದಲನೇ, ನಯೀಮ್ ನೂರ್ ಎಂಬವರನ್ನು ಎರಡನೇ ಮತ್ತು ಸುಮಾರು 400 ರಿಂದ 500 ಇತರರನ್ನು ಮೂರನೇ ಆರೋಪಿಗಳನ್ನಾಗಿ ಗುರುತಿಸಲಾಗಿದೆ.
“ಬುಧವಾರ ರಾತ್ರಿ 12.30ರ ಸುಮಾರಿಗೆ ರವಿಚಂದ್ರನ್ ನಯೀಮ್ ಮತ್ತು ಇತರರು ನಮ್ಮ ಜಮೀನಿಗೆ ಅತಿಕ್ರಮಣ ಪ್ರವೇಶ ಮಾಡಿ, ಬುಲ್ಡೋಝರ್ ಮತ್ತು ಇತರ ಯಂತ್ರಗಳ ಮೂಲಕ ಮನೆ ಹಾಗೂ ಎರಡು ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದಾರೆ. ಈ ವೇಳೆ ತಂದೆ, ತಮ್ಮ ಯಲ್ಲಪ್ಪ, ಸಹೋದರ ಸಂಬಂಧಿ ವರುಣ್ ಮತ್ತು ಅಕ್ಕನ ಮಗನಾದ ಇಂದ್ರಜಿತ್ ಮೇಲೆ ಹಲ್ಲೆಗೆ ಮುಂದಾಗಿದ್ದರು. ವರುಣ್ ಅವರನ್ನು ಕಾರಿನಲ್ಲಿ ಅಪಹರಣ ಮಾಡಿಕೊಂಡು ಹೋಗಿ ಕೆಲ ಸಮಯದ ನಂತರ ವಾಪಸ್ ತಂದು ಬಿಟ್ಟಿದ್ದಾರೆ” ಎಂದು ನಾಗರಾಜ್ ಎಂಬವರು ದೂರು ನೀಡಿದ್ದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
“ಆರೋಪಿಗಳು ನಮ್ಮ ಶ್ರೀ ರೇಣುಕಾ ಯಲ್ಲಮ್ಮ ಮತ್ತು ಶ್ರೀ ಶಾಂತಿ ಮುನೇಶ್ವರ ದೇವಸ್ಥಾನಗಳನ್ನು ಧ್ವಂಸ ಮಾಡಿದ್ದಾರೆ. ದೇವರ ಕಲ್ಲಿನ ಮೂರ್ತಿಗಳು, ದೇವರ ಅಲಂಕಾರದ ಸುಮಾರು 50 ಗ್ರಾಂ ಬಂಗಾರದ ಒಡವೆಗಳು ಮತ್ತು ಮನೆಯಲ್ಲಿದ್ದ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ನಾವು ಪೊಲೀಸರಿಗೆ ಮಾಹಿತಿ ನೀಡಿ ರಕ್ಷಣೆ ಕೊಡುವಂತೆ ಕೋರಿದ್ದೆವು. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಗೂಂಡಾಗಳು ಮನೆಯ ಬೀರುವಿನಲ್ಲಿದ್ದ ಒಡವೆಗಳನ್ನು ದರೋಡೆ ಮಾಡಿದ್ದರು. ಮನೆಯ ಆವರಣದಲ್ಲಿ ನಿಂತಿದ್ದ ಮಾರುತಿ ಕಾರು ಹಾಗೂ ಡಿಯೋ ಬೈಕನ್ನು ಹಾನಿಗೊಳಿಸಿದ್ದರು. ಈ ದೃಶ್ಯಗಳನ್ನು ಸೆರೆ ಹಿಡಿಯಲು ಮುಂದಾದ ನನ್ನ ಮೊಬೈಲ್ ಫೋನ್ ಕಿತ್ತುಕೊಂಡಿದ್ದಾರೆ” ಎಂದು ನಾಗರಾಜ್ ದೂರಿನಲ್ಲಿ ಹೇಳಿದ್ದಾರೆ.
“ಮನೆಯ ಬಳಿಯಿದ್ದ ತೆಂಗು ಮತ್ತು ಹಲಸಿನ ಮರಗಳನ್ನು ಆರೋಪಿಗಳು ನೆಲಕ್ಕೆ ಕೆಡವಿದ್ದಾರೆ. ಜೋಳದ ಸಸಿಗಳನ್ನು ಹಾನಿಗೊಳಿಸಿದ್ದಾರೆ. ನಾವು ಸಾಕಿದ್ದ ನೂರಾರು ಕೋಳಿಗಳನ್ನು ದರೋಡೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿಗಳ ವಿರುದ್ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3 (2) (V), 3(1)(g) ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115 (2), 138, 190,304 (2), 310 (2), 324 (5),331 (4),351 (3), 352 ರ ಅಡಿ ಪ್ರಕರಣ ದಾಖಲಿಸಲಾಗಿದೆ.
ಘಟನೆ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿರುವ ದೂರುದಾರ ನಾಗರಾಜ್, “ಜಮೀನು ಬಿಟ್ಟುಕೊಡುವಂತೆ ನಮಗೆ ಈ ಹಿಂದೆಯೂ ಬೆದರಿಕೆ ಹಾಕಿದ್ದರು. ಬುಧವಾರ ರಾತ್ರಿ ನಾವು ಮನೆಯಲ್ಲಿದ್ದ ವೇಳೆ ನೂರಾರು ಜನರು ಒಂದೇ ಸಮನೆ ಮನೆಯೊಳಗೆ ನುಗ್ಗಿ ನನ್ನ ತಮ್ಮ ಯಲ್ಲಪ್ಪ, ಸಹೋದರ ಸಂಬಂಧಿ ವರುಣ್ ಮತ್ತು ಅಕ್ಕನ ಮಗನಾದ ಇಂದ್ರಜಿತ್ ಮೇಲೆ ಹಲ್ಲೆಗೆ ಮುಂದಾದರು. ಅದನ್ನು ನೋಡಿ ನನ್ನ ಅಪ್ಪ ಆಘಾತಕ್ಕೊಳಗಾದರು. ಅವರನ್ನು ನಮ್ಮದೇ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ನಾನು ಮುಂದಾದಾಗ ನನ್ನನ್ನು ಆಟೋದಿಂದ ಹೊರಗೆಳೆಯಲು ಯತ್ನಿಸಿದರು. ನಾನು ಅಪ್ಪನನ್ನು ಬಿಟ್ಟು ಬರಲಿಲ್ಲ” ಎಂದಿದ್ದಾರೆ.
ಮುಂದುವರಿದು, “ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ನನ್ನನ್ನು ಹುಡುಕುತ್ತಿದ್ದಾರಂತೆ. ನನಗೆ ಭಯ ಆಗಿದೆ ಸರ್. ನಮ್ಮ ರಕ್ಷಣೆಗೆ ಯಾರೂ ಇಲ್ಲ. ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಆದರೆ, ಯಾವಾಗ ಏನಾಗುತ್ತದೆ ಎಂಬ ಭಯದಲ್ಲಿ ಇಡೀ ಕುಟುಂಬ ಇದೆ. ನಮ್ಮ ಜಮೀನಿನ ಸುತ್ತ ಪ್ರೆಸ್ಟೀಜ್ ಮತ್ತು ಡಿಎಲ್‌ಎಫ್ ಸಂಸ್ಥೆಗಳ ಅಪಾರ್ಟ್‌ಮೆಂಟ್‌ಗಳು ಇವೆ. ದಯವಿಟ್ಟು ನಮಗೆ ರಕ್ಷಣೆ ಕೊಡಿ ಸರ್” ಎಂದು ಅಲವತ್ತುಕೊಂಡಿದ್ದಾರೆ.
‘ಪಬ್ಲಿಕ್ ಟಿವಿ’ ವರದಿಗಾರ ಮಂಜುನಾಥನಿಂದ ದೌರ್ಜನ್ಯ; ಹಲ್ಲೆ ಹಿಂದಿನ ಕಾರಣ ಬಿಚ್ಚಿಟ್ಟ ದಲಿತ ಪತ್ರಕರ್ತ


