ಬೆಂಗಳೂರು: ಸಿಇಟಿ ಮೂಲಕ ಕೆಲ ಕಾಲೇಜುಗಳಲ್ಲಿ ಬಹು ಬೇಡಿಕೆಯ ಇಂಜಿನಿಯರಿಂಗ್ ಸೀಟು ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA ) ಸಿಬ್ಬಂದಿ ಸೇರಿದಂತೆ 8 ಮಂದಿಯನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.
ಮಲ್ಲೇಶ್ವರಂ ಪೊಲೀಸರು ಬಹು ಆಯ್ಕೆಯ ನಮೂದುಗಳು ಮತ್ತು ನೋಂದಣಿಗಳಿಗೆ ಬಳಸಲಾದ ಇಂಟರ್ನೆಟ್ ಪ್ರೋಟೋಕಾಲ್ (IP) ವಿಳಾಸಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಸೆಕ್ಷನ್ 316/2 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ), 318/4 (ವಂಚನೆ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನಗಳ ಕಾಲ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಸೀಟ್ ಬ್ಲಾಕಿಂಗ್ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಕೆಇಎ ಅಧಿಕಾರಿಗಳು ನ. 13ರಂದು ದೂರು ನೀಡಿದ್ದರು.
ಅಂತಿಮ ಸುತ್ತಿನ ಆಯ್ಕೆ ಪ್ರಕ್ರಿಯೆ ನಂತರ ಉಳಿದಿರುವ ಸರಕಾರಿ ಕೋಟಾದ ಸೀಟುಗಳು ಕಾಲೇಜುಗಳ ಪಾಲಾಗುವುದರಿಂದ ಕೆಲವು ಖಾಸಗಿ ಕಾಲೇಜಿನ ಆಡಳಿತ ಮಂಡಳಿಯವರು ಈ ಸೀಟುಗಳನ್ನು ಹೆಚ್ಚಿನ ಶುಲ್ಕ ಕಟ್ಟಿಸಿಕೊಂಡು ಕಡಿಮೆ ರ್ಯಾಂಕ್ ಪಡೆದವರಿಗೆ ನೀಡುತ್ತಾರೆ. ಈ ಉದ್ದೇಶದಿಂದ ಕೆಲವು ಕಾಲೇಜಿನವರು ಸೀಟು ಅಗತ್ಯವಿಲ್ಲದ ಅಭ್ಯರ್ಥಿಗಳೊಂದಿಗೆ ಸೇರಿ ಕೊನೆ ಸುತ್ತಿನಲ್ಲಿ ಸೀಟು ಹಂಚಿಕೆ ಪಡೆದು ಕಾಲೇಜಿಗೆ ಸೇರ್ಪಡೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಪ್ರಾಧಿಕಾರಕ್ಕೆ ಸಾರ್ವಜನಿಕರು ದೂರು ನೀಡಿದ್ದರು.
ಒಂದೇ ಐಪಿ ವಿಳಾಸ ಬಳಸಿಕೊಂಡು ಸೀಟು ಬ್ಲಾಕಿಂಗ್ ಎಸಲಾಗಿದೆ ಎಂದು ಕೆಇಎ ಮಾಹಿತಿ ನೀಡಿದ್ದು, ಸತತ ಮೂರು ಸುತ್ತಿನ ಸೀಟು ಹಂಚಿಕೆಯ ನಂತರ 2625 ಅಭ್ಯರ್ಥಿಗಳು ಕಾಲೇಜಿಗೆ ಪ್ರವೇಶ ಪಡೆಯದ ಕಾರಣ ನೋಟಿಸ್ ಜಾರಿ ಮಾಡಲಾಗಿತ್ತು. ಇವರಲ್ಲಿ ಕೆಲವರು ಶುಲ್ಕ ಕಟ್ಟಿರಲಿಲ್ಲ. ಕೆಲವರು ಶುಲ್ಕ ಪಾವತಿಸಿದ್ದರೂ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡಿರಲಿಲ್ಲ. ಬೇಡಿಕೆ ಇರುವ ಕಾಲೇಜುಗಳಲ್ಲಿನ 40ರಿಂದ 90 ಸೀಟುಗಳನ್ನು ಬ್ಲಾಕ್ ಮಾಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ….ಸೋದರಿನಿಂದ ದಲಿತನನ್ನು ವಿವಾಹವಾಗಿದ್ದ ಮಹಿಳಾ ಕಾನ್ ಸ್ಟೇಬಲ್ ಹತ್ಯೆ


