ಚರಿತ್ರೆಯ ದಾಖಲೀಕರಣದ ವಿಷಯದಲ್ಲಿ ಹಲವು ಆಯಾಮಗಳಿವೆ. ಈ ಆಯಾಮಗಳು ಆಯಾ ಚರಿತ್ರಕಾರನ ಆಸಕ್ತಿ, ಒಲವು, ನಿಲುವು, ದೃಷ್ಟಿ, ತಾನು ಪ್ರತಿನಿಧಿಸುವ ಕ್ಷೇತ್ರ, ಗುಂಪು, ಸಮುದಾಯ, ರಾಜಕೀಯ ಪಕ್ಷ – ಇವೆಲ್ಲದರ ಮೇಲೆ ಅವಲಂಬಿತವಾಗಿರುವ ಸಾಧ್ಯತೆಗಳಿರುತ್ತವೆ. ಆಗ ನಿಷ್ಪಕ್ಷಪಾತವಾಗಿರದ ಚರಿತ್ರೆಯು ಅನೇಕ ಸಲ ಕೃತಕ ಮತ್ತು ಉತ್ಪ್ರೇಕ್ಷೆಯ ಬಣ್ಣಗಳನ್ನು ಪಡೆದುಕೊಂಡು ವಿಜೃಂಭಿಸುತ್ತವೆ. ಹೀಗಾಗಿ ಚರಿತ್ರೆಯ ದಾಖಲೀಕರಣದಲ್ಲಿ ಲಭ್ಯವಾಗಿರುವ ಅಂಶಗಳಿಗಿಂತ ಊಹೆಗಳನ್ನೇ ಪದೇಪದೇ ಉಲ್ಲೇಖಿಸುತ್ತಾ ಜನರ ನಡುವೆ ಮಿಥಿಕಗಳ ಸೃಷ್ಟಿಸಲಾಗುತ್ತದೆ. ತಾವು ಗುರುತಿಸಿಕೊಳ್ಳುವ ಯಾವುದೋ ಒಂದರ ಎಳೆಯೂ ಈ ಆಕರ್ಷಕವಾದ ಮಿಥ್‍ಗಳು ಜೊತೆಗೆ ನೇಯ್ಗೆಯಲ್ಲಿ ಬೆಸೆದುಕೊಂಡಿರುವುದರಿಂದ ಮಿಥಿಕಗಳನ್ನೇ ಪ್ರಚಾರ ಮಾಡುತ್ತಾ ಅದನ್ನೇ ಚರಿತ್ರೆಯನ್ನಾಗಿಸಿಬಿಡುತ್ತಾರೆ. ಇಂತಹ ಚಾರಿತ್ರಿಕ ದ್ರೋಹಗಳು ವಿಶ್ವದ ಎಲ್ಲಾ ದೇಶಗಳಲ್ಲಿ ಇದ್ದರೂ, ನಮ್ಮ ದೇಶದಲ್ಲಂತೂ ವಿಪರೀತವಾಗಿವೆ. ಸಂಶೋಧಕನಿಗಿರಬೇಕಾಗಿರುವ ಶಿಸ್ತು, ಶ್ರದ್ಧೆ ಮತ್ತು ನಿಷ್ಪಕ್ಷಪಾತ ಗುಣಗಳು ಚರಿತ್ರೆಯ ವಿದ್ಯಾರ್ಥಿಗೂ ಇರಬೇಕಾಗುತ್ತದೆ. ತಾನು ಒಪ್ಪುವ, ತಪ್ಪು ಎನ್ನಬಹುದಾದ, ಒಪ್ಪಲು ಇಷ್ಟಪಡುವ ಅಂಶಗಳಿಗೆ ವ್ಯತಿರಿಕ್ತವಾಗಿರುವಂತಹ ಸಾಕ್ಷ್ಯಗಳು, ದಾಖಲೆಗಳು ಕೂಡಾ ಅಧ್ಯಯನದಲ್ಲಿ ಎಡತಾಕಬಹುದು.
ಅವುಗಳೆಲ್ಲವನ್ನೂ ಸಮದೃಷ್ಟಿಯಿಂದ ಮತ್ತು ವಾಸ್ತವದ ಚಿತ್ರಣವನ್ನು ಸಾಕ್ಷೀಕರಿಸುವ ಶ್ರದ್ಧೆಯಿಂದ ಆತ್ಮದ್ರೋಹ ಮಾಡದೇ ಚರಿತ್ರೆಯ ದಾಖಲೆಗೆ ಅಥವಾ ಮರುದಾಖಲೆಗೆ ಅಥವಾ ವಿಶ್ಲೇಷಣೆಗೆ ಮುಂದಾಗಬೇಕಾಗುತ್ತದೆ. ತನ್ನ ಯಾವ ಪೂರ್ವಾಗ್ರಹಗಳೂ ತಾನು ಮಾಡುತ್ತಿರುವ ದಾಖಲೀಕರಣದಲ್ಲಿ ನುಸುಳದಂತೆ ತನ್ನನ್ನು ತಾನು ಎಚ್ಚರಿಕೆಯಿಂದ ಕಾಯ್ದುಕೊಳ್ಳುವ ಬಾಧ್ಯತೆ ಇತಿಹಾಸದ ಪುಸ್ತಕಗಳನ್ನು ಬರೆಯುವವನಿಗಿರುತ್ತದೆ. ತನ್ನಿಂದ ತಪ್ಪಾದರೂ ತಾನು ಸುಳ್ಳು ಹೇಳದಿರುವಂತಹ ವಿವೇಚನೆಯನ್ನು ಆತ ಹೊಂದಿರಬೇಕಾಗುತ್ತದೆ. ಇಂತಹ ವಿವೇಚನೆ ಮತ್ತು ಬಾಧ್ಯತೆಯಿಂದಲೇ ಬರೆದಿರುವ ಇತಿಹಾಸದ ಪುಸ್ತಕ ಎಸ್ ಕೆ ಅರುಣಿಯವರ ‘ಬೆಂಗಳೂರು ಪರಂಪರೆ’. ಇತಿಹಾಸ ಸಂಶೋಧನೆಯ ಹೊಸ ನೋಟಗಳು ನನಗೆ ಈ ಪುಸ್ತಕದಲ್ಲಿ ಕಂಡಿತು.

ಬೆಂಗಳೂರು ಪರಂಪರೆಯನ್ನು ಓದುವಾಗ ಬೆಂಗಳೂರಿಗರೆಂದು ಗುರುತಿಸಿಕೊಳ್ಳುವವರಿಗೆ ಹಲವು ರೀತಿಯ ಭಾವನೆಗಳು ಉಂಟಾಗುತ್ತವೆಂದು ನನಗನಿಸುತ್ತದೆ. ಒಂದು, ಇಂದಿನ ಬೆಂಗಳೂರಿನ ವಿಸ್ತೃತ ಸ್ವರೂಪದ ಮುಂಚಿನ ಮೂಲ ರೂಪದ ಪರಿಚಯ ಕುತೂಹಲವೂ ಮತ್ತು ಆಸಕ್ತಿಕರವೂ ಆಗಿರುವುದು. ಎರಡು, ಈ ಬೆಂಗಳೂರನ್ನು ರೂಪಿಸಿದ, ನಿರ್ಮಿಸಿದ, ವಿಸ್ತರಿಸಿದ ಮತ್ತು ಇದರ ಬೆಳವಣಿಗೆಗೆ ಕಾಣ್ಕೆಗಳನ್ನು ನೀಡಿದ ಹಾಗೂ ಈ ನೆಲವನ್ನು ಪರಕೀಯರಿಂದ ಉಳಿಸಲು ಹೆಣಗಾಡಿ ಹೆಣವಾದ ಅನೇಕಾನೇಕ ಮಹನೀಯರನ್ನು ಅಭಿಮಾನದಿಂದ ಸ್ಮರಿಸುವುದಾಗುತ್ತದೆ. ಮೂರು, ಪಾರಂಪರಿಕವಾಗಿ ಬೆಂಗಳೂರು ಎಷ್ಟು ಗಮನೀಯವೋ ಪರಿಸರದ ದೃಷ್ಟಿಯಿಂದಲೂ ಆಗಿರುವ ಬದಲಾವಣೆಗಳ ಸೂಕ್ಷ್ಮಗಳನ್ನು ಸಾಲುಗಳ ಅಂತರದಲ್ಲಿ ಗುರುತಿಸಲು ಸಹಾಯ ಮಾಡುವುದು. ನಾಲ್ಕು, ಬೆಂಗಳೂರೆಂಬ ಮಹಾನಗರವು ಯುದ್ಧಗಳನ್ನು, ಸಂಧಾನಗಳನ್ನು, ಏಳ್ಗೆಗಳನ್ನು, ಪಲ್ಲಟಗಳನ್ನು, ಬೀಳುಗಳನ್ನು ಸಾಕ್ಷೀಕರಿಸಿದೆ. ಅದನ್ನು ತಿಳಿಯುವ ನಮಗೆ ಹೊಣೆಯರಿತ ನಡೆಗಳನ್ನು ಹೊಂದುವ ಸ್ಫೂರ್ತಿಯನ್ನು ನೀಡುವುದು. ಐದು, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಅಂಶಗಳನ್ನೆಲ್ಲಾ ಒಳಗೊಳ್ಳುವ ಐತಿಹಾಸಿಕ ಪ್ರಜ್ಞೆಯು ವ್ಯಕ್ತಿಗತವಾಗಿ ಬಾಳುತ್ತಾ ನೆಲದ ಸಂವೇದನೆಯ ಜೊತೆಗೆ ಬೆಸೆದುಕೊಳ್ಳಲು ಪ್ರೇರಣೆ ನೀಡುತ್ತದೆ.

ಪ್ರಾಗೈತಿಹಾಸಿಕ ಕಾಲದ ಇತಿಹಾಸವನ್ನು ಹೇಳುತ್ತಾ ಕಬ್ಬಿಣಯುಗದ ಸಂಸ್ಕೃತಿಯ ವಿವರಗಳನ್ನು ಅರುಣಿ ನೀಡುತ್ತಾರೆ. ಲೋಹ ವಿಜ್ಞಾನದಲ್ಲಿ, ಅದರಲ್ಲಿಯೂ ಕಬ್ಬಿಣದ ವಿಷಯದಲ್ಲಿ ಕರ್ನಾಟಕ ಬಹಳ ಮುಂದುವರಿದ ಪ್ರದೇಶವಾಗಿತ್ತು. ಮೆಟಲರ್ಜಿಯು ಬಹಳ ಉನ್ನತ ಮಟ್ಟದ ಸಂಸ್ಕಾರ ಮತ್ತು ಬಳಕೆಯಲ್ಲಿರುವುದಕ್ಕೆ ಅನೇಕ ಕುರುಹುಗಳಿವೆ. ಅವನ್ನು ಈ ಕೃತಿಯಲ್ಲಿಯೂ ಸೂಚಿತವಾಗಿ ಕಾಣಿಸಿದ್ದಾರೆ.
ಬೆಂಗಳೂರಿನಲ್ಲಿ ಅರ್ಕಾವತಿ, ದಕ್ಷಿಣ ಪಿನಾಕಿನಿ, ವೃಷಭಾವತಿ, ಕಣ್ವಾ ಮತ್ತು ಕುಮದ್ವತಿ ಎಂಬ ನದಿಗಳು ಹರಿಯುತ್ತಿದ್ದುದು, ನಾವು ಇಂದು ಅವೆಲ್ಲವನ್ನೂ ಕಳೆದುಕೊಂಡಿರುವುದು ನಮ್ಮ ಪರಿಸರಪ್ರಜ್ಞೆಯ ಬಗ್ಗೆ ನಮಗಿರುವ ಹೊಣೆಗಾರಿಕೆಯನ್ನು ಪ್ರಶ್ನಿಸುತ್ತದೆ.
ಶಿಲಾಯುಗದಿಂದ ಪ್ರಾರಂಭವಾಗುವ ಬೆಂಗಳೂರಿನ ಪರಿಚಯದ ಈ ಕೃತಿ ಕೌತುಕ ಮತ್ತು ಆಸಕ್ತಿಯಿಂದ ಓದಿಸಿಕೊಳ್ಳುವ ಪುಸ್ತಕವಾಗಿದೆ. ನಿರ್ದಿಷ್ಟ ಕ್ಷೇತ್ರದ ಅಧ್ಯಯನಶೀಲ ವಿದ್ಯಾರ್ಥಿಗೆ ಅದೆಷ್ಟು ಉಪಯುಕ್ತವೋ, ಹಾಗೆಯೇ ಸಾಮಾನ್ಯ ಓದಿಗೆ ಕೂಡಾ ಕುತೂಹಲಕರವಾಗಿದೆ.
1537ರಲ್ಲಿ ನಾಡಪ್ರಭು ಹಿರಿಯ ಕೆಂಪೇಗೌಡರು ನಿರ್ಮಾಣ ಮಾಡಿದ ಬೆಂಗಳೂರು ಪ್ರಮುಖ ವಾಣಿಜ್ಯಕೇಂದ್ರವಾಗಿದ್ದರಿಂದ ಹಂತಹಂತವಾಗಿ ಬೆಳೆದುಬಂದ ಬಗೆಯನ್ನು ರೋಚಕ ಭಾಷೆಯಲ್ಲಿ ಅರುಣಿ ವಿವರಿಸುತ್ತಾ ಬರುತ್ತಾರೆ. ಈಗಲೂ ನಾವು ನಿತ್ಯ ನೋಡುತ್ತಿರುವ ಬೆಂಗಳೂರಿನ ವಿವಿಧ ಕಟ್ಟಡಗಳು, ದೇವಸ್ಥಾನಗಳು, ಕೋಟೆಗಳ ವೈಶಿಷ್ಟ್ಯ ಮತ್ತು ಸ್ವಂತಿಕೆಯ ದೃಷ್ಟಿಯ ಕತೆಗಳು ತೆರೆದುಕೊಳ್ಳುವ ರೀತಿ ಸಾಮಾನ್ಯ ಓದುಗನ ಆಕರ್ಷಣೆಯನ್ನು ಹಿಡಿದಿಡುತ್ತದೆ. ನಮ್ಮ ಬೆಂಗಳೂರು ಎಂದು ಹೆಮ್ಮೆಯಿಂದ ಅಭಿಮಾನಿಸುವವರು ಕೊಡುಗೆಯಾಗಿ ಈ ಪುಸ್ತಕವನ್ನು ಇತರರಿಗೆ ನೀಡುವಮಟ್ಟಿಗಿನ ಗುಣಮಟ್ಟವನ್ನು ಈ ಕೃತಿ ಕಾಯ್ದುಕೊಂಡಿದೆ.

1791ರಲ್ಲಿ ಬೆಂಗಳೂರಿನ ರಕ್ಷಣೆಗೆ ಬಲಿದಾನ ಮಾಡಿದ ಕಿಲ್ಲೆದಾರ ಬಹದ್ದೂರ್ ಖಾನ್‍ನ ಅಧ್ಯಾಯವನ್ನು ಓದಿ ಹೇಳುತ್ತಿದ್ದರೆ ಕೇಳುಗರ ಕಣ್ಣಾಲಿಗಳು ತುಂಬಿಬರುವಷ್ಟು ಭಾವುಕವೂ ಮತ್ತು ಆಪ್ತವೂ ಆಗಿದೆ. 1791-92ರ ಮೂರನೆಯ ಆಂಗ್ಲೋ ಮೈಸೂರು ಯುದ್ಧವೆಂದರೆ ಅದು ಮರಾಠರು, ಹೈದರಾಬಾದ್ ನಿಜಾಮರು ಮತ್ತು ಬ್ರಿಟಿಷರು ಟಿಪ್ಪುಸುಲ್ತಾನನ ವಿರುದ್ಧ ಕೈಗೊಂಡ ಸಮರ. ಆಗ ಬೆಂಗಳೂರನ್ನು ವಶಪಡಿಸಿಕೊಳ್ಳುವ ಭರಾಟೆಯಲ್ಲಿ ಅತ್ಯಂತ ಶೂರನಾದ ಕಿಲ್ಲೆದಾರ ಈ ಬಹುದ್ದೂರ್ ಖಾನ್. ಅವನು ಟಿಪ್ಪುನಿಂದ ನೇಮಿಸಲ್ಪಟ್ಟವನು. ಭಾರೀ ಪ್ರಮಾಣದಲ್ಲಿ ಆಕ್ರಮಣಕಾರರಿಗೆ ಹಿನ್ನಡೆಯನ್ನುಂಟುಮಾಡಿದ ಬಹುದ್ದೂರ್ ಖಾನ್ ಕೊನೆಗೆ ಬಲಿಯಾಗುತ್ತಾನೆ. ತನ್ನ ಎಪ್ಪತ್ತನೆಯ ವಯಸ್ಸಿನಲ್ಲಿಯೂ ಖಡ್ಗ ಹಿಡಿದು ಹೋರಾಡಿದ ಈ ವೀರನನ್ನು ಬ್ರಿಟಿಷರೂ ಗೌರವಿಸುತ್ತಾರೆ. ಬೆಂಗಳೂರಿನ ಕೆ ಆರ್ ಮಾರ್ಕೆಟ್ ಬಳಿಯೇ ಇವರ ಸಮಾಧಿ ಅಥವಾ ದರ್ಗಾ ಇದೆ. ಮರಣಿಸಿದರೂ ಯುದ್ಧದ ನಾಯಕನಾಗಿ ಹೊಮ್ಮಿದ ಬಹುದ್ದೂರ್ ಖಾನ್‍ನ ಕತೆಗಳಂತೆಯೇ ಅನೇಕಾನೇಕ ವಿಷಯಗಳು ಬೆಂಗಳೂರನ್ನು ಅಭಿಮಾನದಿಂದ ಆಪ್ತವಾಗಿಸಿಕೊಳ್ಳಲು ನಮಗೆ ಈ ಪುಸ್ತಕ ನೆರವಾಗುತ್ತದೆ.
ಸಾವಿರ ಸಲ ತಿರುಗಾಡಿದ್ದರೂ ನಮ್ಮ ಕಣ್ತಪ್ಪಿಹೋಗಿರುವ ಅನೇಕಾನೇಕ ಸ್ಮಾರಕಗಳು ಈಗಲೂ ಉಸಿರಾಡುತ್ತಿವೆ. ಬೆಂಗಳೂರು ಪರಂಪರೆ ಅವುಗಳ ಕಡೆಗೆ ದೃಷ್ಟಿ ಹರಿಸುವಂತೆ ಮಾಡುವುದಲ್ಲದೇ, ಇತಿಹಾಸವನ್ನೂ ಬಿಚ್ಚಿಡುತ್ತಾ ಹೋಗುತ್ತದೆ. ಅಧ್ಯಯನಶೀಲರನ್ನು ಮತ್ತು ಸಾಮಾನ್ಯ ಓದುಗರನ್ನು ಸಮಾನವಾಗಿ ಗಮನ ಸೆಳೆಯುವ ಕೃತಿ ಇದು.


