ಪ್ರಾಧ್ಯಾಪಕರೊಬ್ಬರು ತರಗತಿ ಕೊಠಡಿಯಲ್ಲೇ ಮುಸ್ಲಿಂ ವಿದ್ಯಾರ್ಥಿಯನ್ನು ‘ಟೆರರಿಸ್ಟ್’ ಎಂದು ನಿಂದಿಸಿದ ಘಟನೆ ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಪ್ರಾಧ್ಯಾಪಕನನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಎನ್‌ಡಿಟಿವಿ ವರದಿಯ ಪ್ರಕಾರ, ಮಂಗಳವಾರ (ಮಾ.24) ಈ ಘಟನೆ ನಡೆದಿದೆ. ಅಫ್ಫಾನ್ ಎಂಬ ವಿದ್ಯಾರ್ಥಿ ಯಾರನ್ನೋ ಭೇಟಿಯಾಗುವ ಸಲುವಾಗಿ ತರಗತಿಯಿಂದ ಹೊರ ಹೋಗಲು ಅನುಮತಿ ಕೇಳಿದಾಗ ಡಾ. ಮುರಳೀದರ್ ದೇಶಪಾಂಡೆ ಎಂಬ ಪ್ರಾಧ್ಯಾಪಕ ನಿಂದಿಸಿದ್ದಾರೆ ಎನ್ನಲಾಗಿದೆ.
ವೈರಲ್ ವಿಡಿಯೋದಲ್ಲಿ ಪ್ರಾಧ್ಯಾಪಕ ವಿದ್ಯಾರ್ಥಿಯನ್ನು ‘ಟೆರರಿಸ್ಟ್’ ಎಂದು ಕರೆದಿರುವುದು ಮತ್ತು ಇತರ ಪದಗಳನ್ನು ಬಳಸಿ ತುಚ್ಚವಾಗಿ ನಿಂದಿಸಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ.
“ಶರಮ್ ನಹೀ ಆತಿ ತುಮ್ಕೋ (ನಿಮಗೆ ನಾಚಿಕೆ ಆಗ್ತಿಲ್ವಾ?)” ಎಂದು ಚೆಕ್ ಪ್ಯಾಟರ್ನ್ ಹೊಂದಿರುವ ಅರ್ಧ ತೋಳಿನ ಶರ್ಟ್ ಧರಿಸಿರುವ ಪ್ರಾಧ್ಯಾಪಕ ತರಗತಿ ಕೇಳುವಂತೆ ಜೋರಾಗಿ ಕೂಗಿರುವುದು ವಿಡಿಯೋದಲ್ಲಿ ನೋಡಬಹುದು.
ಎನ್‌ಡಿಟಿವಿ ವರದಿ ಪ್ರಕಾರ, “ಇರಾನ್ ಯುದ್ಧಕ್ಕೆ ಇವನಂತಹ ಜನರೇ ಕಾರಣ” ಎಂದು ದೂಷಿಸಿರುವುದು, “ಡೊನಾಲ್ಡ್ ಟ್ರಂಪ್ ಬಂದು ಇವನನ್ನು ಎಳೆದೊಯ್ಯುತ್ತಾರೆ” ಎಂದು ಹೇಳಿರುವುದು ಮತ್ತು ಆ ವಿದ್ಯಾರ್ಥಿಗೆ “ನರಕಕ್ಕೆ ಹೋಗುತ್ತಾನೆ” ಎಂದು ಶಪಿಸಿರುವುದು – ಹೀಗೆ ಪ್ರಾಧ್ಯಾಪಕ ಹಲವು ನಿಂದನಾತ್ಮಕ ಪದಗಳನ್ನು ಬಳಸಿದ್ದಾರೆ ಎಂಬ ಆರೋಪವಿದೆ.
ವೈರಲ್ ವಿಡಿಯೋವನ್ನು ವಿದ್ಯಾರ್ಥಿಗಳು ಸೆರೆ ಹಿಡಿದಿದ್ದಾರೆ.
ವಿಡಿಯೋ ವೈರಲ್ ಆದ ಬಳಿಕ, ವಿಶ್ವವಿದ್ಯಾಲಯ ತನಿಖೆ ಬಾಕಿ ಇರಿಸಿ ಪ್ರಾಧ್ಯಾಪಕನನ್ನು ಅಮಾನತುಗೊಳಿಸಿದೆ. ಘಟನೆ ನಡೆದ ಮೂರು ದಿನಗಳ ಬಳಿಕ ಕ್ರಮ ಕೈಗೊಂಡಿದೆ ಎಂದು ಎನ್‌ಡಿಟಿವಿ ವರದಿ ಹೇಳಿದೆ.

ಪ್ರಾಧ್ಯಾಪಕನಿಂದ ನಿಂದನೆಗೆ ಒಳಗಾದ ವಿದ್ಯಾರ್ಥಿಯನ್ನು ಬೆಂಬಲಿಸಿದ ಇತರ ಮೂವರು ವಿದ್ಯಾರ್ಥಿಗಳನ್ನು ಕೂಡ ವಿವಿಧ ಕಾರಣಗಳನ್ನು ನೀಡಿ ಅಮಾನತುಗೊಳಿಸಲಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ವಿದ್ಯಾರ್ಥಿಯೊಬ್ಬರು ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.
ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಪೊಲೀಸ್ ದೂರು ದಾಖಲಿಸಿದ್ದು, ಪ್ರಾಧ್ಯಾಪಕರ ಸಾರ್ವಜನಿಕ ಕ್ಷಮೆಯಾಚಿಸಬೇಕು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.



