ಗೆಳೆಯರೇ, ಕಳೆದ ವಾರ ಸಂಪಾದಕೀಯ ಟಿಪ್ಪಣಿಯಲ್ಲಿ ನಿವೇದಿಸಿಕೊಂಡಿದ್ದ ನನ್ನ ವೈಯಕ್ತಿಕ ಕೊರೊನ ಶಂಕೆಯ ಆತಂಕ ಕಳೆದಿದೆ. ಆದರೆ ರಾಜ್ಯದಲ್ಲಿ ಕೊರೊನ ಆತಂಕ ಇದೇ ಸಮಯದಲ್ಲಿ ದುಪ್ಪಟ್ಟು – ಮೂರು ಪಟ್ಟು ಬೆಳೆದಿದೆ. ಅದರ ಸುತ್ತ ಟಿವಿ ಮಾಧ್ಯಮಗಳು ನೂರು ಪಟ್ಟು ಭಯವನ್ನು ಜನರಲ್ಲಿ ಬೆಳೆಸಿವೆ. ಈ ಮಾಧ್ಯಮಗಳು ನಿಜವಾಗಿಯೂ ಒತ್ತಡ ಹಾಕಬೇಕಿದ್ದು, ಪ್ರಶ್ನಿಸಬೇಕಿದ್ದುದು ಸರ್ಕಾರವನ್ನು.
ಖಾಸಗಿ ಆಸ್ಪತ್ರೆಗಳನ್ನು ಈಗ ಕೋವಿಡ್ ಚಿಕಿತ್ಸೆ ನೀಡಲು ತೊಡಗಿಸಿಕೊಳ್ಳಲು ಸರ್ಕಾರ ನಿರ್ಧರಿಸಿ, ದರಪಟ್ಟಿಯನ್ನು ಸೂಚಿಸಿದೆ. ಯಾವುದೇ ನಿಖರತೆಯಿಲ್ಲದೆ ಸೊರಗಿರುವ ಈ ಸೂಚನೆಗಳು ಖಾಸಗಿ ಆಸ್ಪತ್ರೆಗಳಿಗೆ ಲಾಭದಾಯಕವಾಗಿರುವುದರ ವಿರುದ್ಧ ಮಾಧ್ಯಮಗಳು ಕಾರ್ಯಕ್ರಮಗಳನ್ನು ಮಾಡಿ ಜನರಿಗೆ ತಿಳಿವು ಮೂಡಿಸಬೇಕಿತ್ತು. ಮಾಧ್ಯಮಗಳಿಗೆ ಮಹಾ ಮರೆವು!
ಈ ಸಂಚಿಕೆಯಲ್ಲಿ ಡಾ.ಅಖಿಲಾ ಮತ್ತು ಡಾ.ಸಿಲ್ವಿಯಾ ಅವರು ಸದ್ಯದ ಕೊರೊನ ಚಿಕಿತ್ಸೆಯ ನೀತಿಯ ಸಮಸ್ಯೆಗಳ ಮೇಲೆ ಚರ್ಚಿಸಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯದ ಬಗ್ಗೆ, ಖಾಸಗಿ ಆಸ್ಪತ್ರೆಗಳು ಸೃಷ್ಟಿಸಬಹುದಾದ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಈ ಚರ್ಚೆಗಳ ಸಮಯದಲ್ಲಿಯೇ ಕೊರೊನ ಚಿಕಿತ್ಸೆಯನ್ನು ನೀಡಲು ನಿರಾಕರಿಸಿ ಬೆಂಗಳೂರು ನಗರದಲ್ಲಿ ಆಸ್ಪತ್ರೆಗಳನ್ನು ಮುಚ್ಚುತ್ತಿರುವ ವರದಿಗಳು ಕೂಡ ಬರುತ್ತಿವೆ. ಈ ವಿಷಯಗಳನ್ನು ಕೂಡ ಸದ್ಯದ ದೊಡ್ಡ ಮಾಧ್ಯಮಗಳು ಚರ್ಚೆಗೆ ತೆಗೆದುಕೊಳ್ಳುವುದಿಲ್ಲ ಎಂಬುದು ತಿಳಿದಿರುವ ವಿಷಯವೇ. ಇದರ ಬಗ್ಗೆ ನಾವು ಮುಂದಿನ ದಿನಗಳಲ್ಲಿ ಬಯಲಿಗೆಳೆದು, ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಖಾಸಗಿ ಆಸ್ಪತ್ರೆಗಳು ತೋರುತ್ತಿರುವ ಸಣ್ಣತನವನ್ನು ಹಾಗೂ ಸರ್ಕಾರದ ಬೇಜವಾಬ್ದಾರಿತನವನ್ನು ಬಿಚ್ಚಿಡಲಿದ್ದೇವೆ.
ಈ ಬಿಕ್ಕಟ್ಟಿನ ಸಮಯದಲ್ಲಿಯೂ ಪಾರಂಪರಿಕ ಚಿಕಿತ್ಸಾ ಪದ್ಧತಿ ಆಯುರ್ವೇದದ ಬಗ್ಗೆ ಭಾರತದ ಜನರಿಗೆ ಇರುವ ಭಾವನಾತ್ಮಕ ಸಂಬಂಧವನ್ನು ದುರುಪಯೋಗಪಡಿಸಿಕೊಂಡ ಪತಂಜಲಿ ಸಂಸ್ಥೆಯ ಹಗರಣವೂ ನಡೆದಿದೆ. ಬಾಬಾ ರಾಮದೇವ್ ಸ್ಥಾಪಿಸಿದ ಈ ಕಂಪೆನಿಯು ಯಾವುದೇ ನಿಖರ ಪ್ರಯೋಗ ನಡೆಸದೆ, ಕೊರೊನಿಲ್ ಎಂಬ ಔಷಧ ಈ ಸಾಂಕ್ರಾಮಿಕ ರೋಗವನ್ನು ವಾಸಿ ಮಾಡಬಲ್ಲದು ಎಂಬ ಜಾಹೀರಾತಿನೊಂದಿಗೆ ಬಿಡುಗಡೆ ಮಾಡಿದ ಸುದ್ದಿಯನ್ನು ನೀವೆಲ್ಲರೂ ಗಮನಿಸಿರುತ್ತೀರಿ.
ಸಣ್ಣ ಪುಟ್ಟ ಟೀಕೆಯ ಟ್ವಿಟರ್ ಸಂದೇಶಗಳಿಗೆ ದೊಡ್ಡ ಕೇಸುಗಳನ್ನು ಹಾಕುವ ಈ ಸರ್ಕಾರಗಳು, ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಜನರ ಜೀವದ ಜೊತೆಗೆ ತಮ್ಮ ಲಾಭಕ್ಕಾಗಿ ಚೆಲ್ಲಾಟವಾಡುತ್ತಿರುವ ಪತಂಜಲಿ ಸಂಸ್ಥೆ ಮತ್ತು ಅದರ ಸಂಸ್ಥಾಪಕ ಮತ್ತು ಒಡೆಯರ ಮೇಲೆ ತೆಗೆದುಕೊಂಡಿರುವ ಕ್ರಮಗಳು ಏನು? ಇವುಗಳನ್ನು ಯಾವ ಮಾಧ್ಯಮಗಳು ಖಂಡಿಸಿ ಚರ್ಚೆ ಮಾಡಿದವು? ಇವೆಲ್ಲವೂ ದೇಶಪ್ರೇಮದ ಅಡಿಯಲ್ಲಿ ಬರುವುದಿಲ್ಲವೇ? ಈ ಸಂಚಿಕೆಯಲ್ಲಿ ಆಯುರ್ವೇದ ವೈದ್ಯೆ ಡಾ.ಸಾಮ್ನಾ ಅವರು ಹೇಗೆ ಇಂತಹ ಸಂಸ್ಥೆಗಳು ಆಯುರ್ವೇದವನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂಬುದನ್ನು ಚರ್ಚಿಸಿದ್ದಾರೆ.
ಕೊರೊನ ತಂದೊಡ್ಡಿದ ಆರ್ಥಿಕ ಸಂಷ್ಟಗಳನ್ನು ನ್ಯಾಯಪಥ ಪತ್ರಿಕೆ ಹಲವು ವಾರಗಳ ಕಾಲ ಕವರ್ ಮಾಡಿದೆ. ಇದು ಮನರಂಜನಾ ಕ್ಷೇತ್ರಕ್ಕೂ ದೊಡ್ಡ ಸವಾಲನ್ನು ಒಡ್ಡಿದೆ. ಇದೇ ಸಂದರ್ಭದಲ್ಲಿ ಮೂಡಿದ ಹಲವು ಡಬ್ ಧಾರಾವಾಹಿಗಳು, ಡಬ್ಬಿಂಗ್ ಬಗ್ಗೆ ಮತ್ತೆ ಹೊಸ ಚರ್ಚೆಗಳನ್ನು ಎತ್ತಿವೆ. ರಾಮಾಯಣ – ಮಹಾಭಾರತದಂತಹ ಪುರಾಣಗಳನ್ನು ದೃಶ್ಯ ಮಾಧ್ಯಮದಲ್ಲಿ ಕಟ್ಟಿದ ಬಗೆ ಹೇಗೆ ಒಂದು ಪಕ್ಷದ ಸಿದ್ಧಾಂತವನ್ನು ಜನಪ್ರಿಯಗೊಳಿಸಿದವು ಎಂಬುದು ಹಳೆಯ ಚರ್ಚೆ.
ಈಗ ಡಬ್ಬಿಂಗ್ ಮೂಲಕವೂ ಇಂತಹ ಕಾರ್ಯಕ್ರಮಗಳೇ ಕನ್ನಡ ಭಾಷೆಗೆ ಬರುವುದಾದರೆ ಮತ್ತು ಇಲ್ಲಿ ಹುಟ್ಟಬಹುದಾದ ತಾತ್ವಿಕ ಪ್ರತಿರೋಧಗಳನ್ನು ಅವುಗಳು ಹತ್ತಿಕ್ಕಬಹುದಾದ ಸಂದರ್ಭ ಹೆಚ್ಚಾದರೆ ಡಬ್ಬಿಂಗ್ ಎಷ್ಟು ಉಪಯುಕ್ತ? ಅಲ್ಲದೆ ಡಬ್ ಮಾಡಿ ಪ್ರಸಾರ ಮಾಡುವುದು, ಇಲ್ಲೇ ಧಾರಾವಾಹಿಗಳನ್ನು ನಿರ್ಮಾಣ ಮಾಡುವುದಕ್ಕಿಂತ ಆರ್ಥಿಕವಾಗಿ ಹೆಚ್ಚು ಲಾಭದಾಯಕವಾಗಿರುವ ಸನ್ನಿವೇಶದಲ್ಲಿ, ಹಲವು ನಿರ್ಮಾಣ ಸಂಸ್ಥೆಗಳು ಧಾರಾವಾಹಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿವೆ. ಇದರಿಂದ ಹಲವು ನಟರು, ತಂತ್ರಜ್ಞರು ಉದ್ಯೋಗ ಕಳೆದುಕೊಳ್ಳುತ್ತಿರುವ ವರದಿಗಳು ಕಾಣಿಸಿಕೊಂಡಿವೆ.
ಇದೇ ಸಮಯದಲ್ಲಿ, ನಮ್ಮಲ್ಲಿ ಪ್ರಾದೇಶಿಕವಾಗಿ ತಯಾರಿಸಲು ಸಮಸ್ಯೆ ಇರುವ ವಿಜ್ಞಾನ ಸಂಬಂಧಿ, ಇತಿಹಾಸ – ಪರಿಸರ ಸಂಬಂಧಿ ಕಾರ್ಯಕ್ರಮಗಳು ಡಬ್ ಆಗಿ ಕನ್ನಡಿಗರಿಗೆ ಸಿಗಬಾರದೇ ಎಂಬ ಯಾವತ್ತಿನ ಪ್ರಶ್ನೆಯೂ ಮುಖ್ಯವಾಗುತ್ತದೆ. ಈ ಪರ-ವಿರೋಧಿ ಚರ್ಚೆಗಳನ್ನು ಬಿ.ಸುರೇಶ್ ಮತ್ತು ಅಮರ್ ಇಲ್ಲಿ ಮತ್ತೆ ನಿಮ್ಮ ಮುಂದಿಟ್ಟಿದ್ದಾರೆ. ಎರಡೂ ವಾದಗಳ ಸಮನ್ವಯದ ಅಗತ್ಯತೆ ಕಂಡುಬಂದಿದೆ ಮತ್ತು ಇದು ಚರ್ಚೆಯನ್ನು ಮತ್ತಷ್ಟು ವಿಸ್ತರಿಸಲಿದೆ.
ಕಳೆದ ಸಂಚಿಕೆಯಲ್ಲಿ ಚೈನಾದ ಜೊತೆಗಿನ ವಿವಾದದ ಕುರಿತು ಮೂರು ಲೇಖನಗಳು ಇದ್ದವು. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಯಾವುದೇ ಸಕಾರಾತ್ಮಕ ಬೆಳವಣಿಗೆ ನಮಗೆ ಕಂಡುಬಂದಿಲ್ಲ. ಎಂದಿನಂತೆ ಮಾಧ್ಯಮಗಳು ಜಿಂಗೋಯಿಸಂ ಸಂಭ್ರಮಿಸುವುದನ್ನೇ ಮುಂದುವರೆಸಿವೆ.
ಈ ಜಿಂಗೋಯಿಸಂ ನಡುವೆ ತಮಿಳುನಾಡಿನಲ್ಲಿ ಪೊಲೀಸರ ದೌರ್ಜನ್ಯದಿಂದ ಪ್ರಾಣ ಕಳೆದುಕೊಂಡ ಜಯರಾಜ್-ಬೆನಿಕ್ಸ್ (ಅಪ್ಪಮಗ) ಬಗ್ಗೆ ನಮ್ಮ ದೇಶದಲ್ಲಿ ಸಾರ್ವಜನಿಕ ಆಕ್ರೋಶ ಮೂಡಲೇ ಇಲ್ಲ. ಈ ದೌರ್ಜನ್ಯದ ಬಗ್ಗೆ ತೇಜಸ್ವಿ ಈ ಸಂಚಿಕೆಯಲ್ಲಿ ಬರೆದಿದ್ದು, ಪೊಲೀಸ್ ಸಂಸ್ಥೆಯಲ್ಲಿ ಅಗತ್ಯವಿರುವ ಸುಧಾರಣೆಗಳ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ ನಾವು ಲೇಖನಗಳನ್ನು ಪ್ರಕಟಿಸಲಿದ್ದೇವೆ. ವಾರವಾರದಂತೆ ಅಂಕಣಗಳು ಮತ್ತು ವಿಶೇಷ ಬರಹಗಳು ನಿಮಗೆ ಇಷ್ಟವಾಗಿ ಚಿಂತನೆಗೆ ಹಚ್ಚಬಲ್ಲವು ಎಂಬ ನಂಬಿಕೆ ಇದೆ. ಮುಂದಿನ ವಾರ ಇನ್ನಷ್ಟು ಹೊಸತನದಿಂದ ನಿಮ್ಮ ಮುಂದೆ ಬರಲಿದ್ದೇವೆ.
ಇದನ್ನೂ ಓದಿ: ಪತಂಜಲಿಯಿಂದ ಕೊರೊನಾ ಗುಣಪಡಿಸಬಹುದೆಂದು ನಾವು ಹೇಳಿಲ್ಲ: ಸಿಇಒ ಆಚಾರ್ಯ ಬಾಲಕೃಷ್ಣ


