ಅಕ್ರಮ ಮರಳು ದಂಧೆ ತಡೆಯಲು ಹೋದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ಶಿವಮೊಗ್ಗದ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ ಅವರ ಪುತ್ರ ಬಸವೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೀಗೆಬಾಗಿ ಬಾಬಾಳ್ಳಿ ಬಳಿ ಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆದು ಟ್ರ್ಯಾಕ್ಟರ್‌ನಲ್ಲಿ ಸಾಗಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭದ್ರಾವತಿ ವಿಭಾಗದ ಭೂ ವಿಜ್ಞಾನಿ ಕೆ.ಕೆ ಜ್ಯೋತಿ ಹಾಗೂ ಶಿವಮೊಗ್ಗ ವಿಭಾಗದ ಭೂ ವಿಜ್ಞಾನಿ ಪ್ರೀತಿ ದೊಡ್ಡಗೌಡರ್ ಮೂವರು ಸಿಬ್ಬಂದಿಯೊಂದಿಗೆ ರಾತ್ರಿ ಸ್ಥಳಕ್ಕೆ ತೆರಳಿದ್ದರು.
ಈ ವೇಳೆ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ವ್ಯಕ್ತಿಯೊಬ್ಬರು ಜ್ಯೋತಿ ಅವರ ಬಳಿ ಬಂದು ಮೊಬೈಲ್ ಕೊಟ್ಟು “ಅಣ್ಣ ಮಾತನಾಡುತ್ತಾರೆ” ಎಂದು ಹೇಳಿದ್ದಾರೆ. ಫೋನ್ ಸ್ವೀಕರಿಸಲು ನಿರಾಕರಿಸಿದ ಅಧಿಕಾರಿ, “ಅವರಿಗೆ ನನ್ನ ಫೋನ್‌ಗೆ ಕರೆ ಮಾಡಲು ಹೇಳಿ” ಎನ್ನುತ್ತಾರೆ.
“ಅಧಿಕಾರಿಯ ಫೋನ್‌ಗೆ ಕರೆ ಮಾಡಬೇಕಂತೆ ಅಣ್ಣ” ಎಂದು ಮರಳು ತೆಗೆಯುತ್ತಿದ್ದ ವ್ಯಕ್ತಿ ಹೇಳಿದ್ದಾರೆ. “ಹೌದಾ? ಎನ್ನುವ ಆಚೆ ಕಡೆಯ ವ್ಯಕ್ತಿ, “ಲೌಡ್ ಸ್ಪೀಕರ್ ಆನ್ ಮಾಡು” ಎಂದು ಹೇಳಿ ಅತ್ಯಂತ ಅವಾಚ್ಯ ಪದ ಬಳಸಿ ಅಧಿಕಾರಿಯನ್ನು ನಿಂದಿಸುತ್ತಾನೆ. “ನೆಟ್ಟಗೆ ಮಾತನಾಡಿ, ಯಾರಿಗೆ ಮಾತನಾಡುತ್ತೀರಿ. ಒಬ್ಬ ಅಧಿಕಾರಿಗೆ ಮಾತನಾಡುತ್ತಿದ್ದೀರಿ. ಬೆಲೆ ಕೊಟ್ಟು ಮಾತನಾಡಿ” ಎಂದು ಮಹಿಳಾ ಅಧಿಕಾರಿ ಹೇಳಿದರೂ, ಹೀನಾಯವಾಗಿ ನಿಂದಿಸುವುದು ಮುಂದುವರಿಸುತ್ತಾನೆ.
ವೈರಲ್ ವಿಡಿಯೋದಲ್ಲಿ ಈ ಎಲ್ಲಾ ದೃಶ್ಯಗಳು ಇವೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಅನೇಕರು, ಶಾಸಕ ಸಂಗಮೇಶ್ ಮತ್ತು ಅವರ ಪುತ್ರ ಬಸವೇಶ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಭದ್ರಾವತಿ ರಿಪಬ್ಲಿಕ್ ಆಗಿದೆ : ಶಾಸಕ ಚೆನ್ನ ಬಸಪ್ಪ
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಚೆನ್ನ ಬಸಪ್ಪ ಅವರು ವಿಡಿಯೋ ಸಂಬಂಧ ಸುದ್ದಿಗೋಷ್ಠಿ ನಡೆಸಿ ಶಾಸಕ ಸಂಗಮೇಶ್ ಮತ್ತು ಅವರ ಪುತ್ರ ಬಸವೇಶ್ ವಿರುದ್ದ ಕಿಡಿಕಾರಿದ್ದಾರೆ. ಭದ್ರಾವತಿ ರಿಪಬ್ಲಿಕ್ ಆಗಿ ಎಷ್ಟೋ ವರ್ಷಗೇ ಕಳೆದಿದೆ ಎಂದಿದ್ದಾರೆ.
ಈ ಪ್ರಕರಣ ಇಡೀ ಭದ್ರಾವತಿಗೆ ಅವಮಾನವಾಗಿದೆ. ಭದ್ರಾವತಿ ರಿಪಬ್ಲಿಕ್ ಆಗಿ ಬಹಳ ವರ್ಷಗಳೇ ಆಗಿವೆ. ಈ ಬಗ್ಗೆ ಮಾತನಾಡುವುದಕ್ಕೆ ಕಾಂಗ್ರೆಸ್‌ನವರಿಗೆ ತಾಕತ್ತಿಲ್ಲ. ಶಾಸಕರ ಮಕ್ಕಳು ಈ ರೀತಿ ಗೂಂಡಾ ವರ್ತನೆ ತೋರಿದರೆ ಏನು ಮಾಡೋಣ?. ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಷ್ಟೆ ಎಂದು ಹೇಳಿದ್ದಾರೆ. ಮಹಿಳಾ ಅಧಿಕಾರಿಗೆ ಧೈರ್ಯ ತುಂಬಿರುವ ಅವರು, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಜೆಡಿಎಸ್ ಕಿಡಿ
ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಜೆಡಿಎಸ್ ಕಿಡಿಕಾರಿದೆ. “ಕಾಂಗ್ರೆಸ್ ಸರ್ಕಾರದಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆಯೇ ಇಲ್ಲವಾಗಿದೆ ! ಭದ್ರಾವತಿಯಲ್ಲಿ ಒಂದು ಪೈಸೆ ಅಭಿವೃದ್ಧಿ ಕೆಲಸ ಮಾಡದ ನಾಲಾಯಕ್ ಕಾಂಗ್ರೆಸ್ ಶಾಸಕ ಸಂಗಮೇಶ್ ಹಾಗೂ ಅವರ ಮಗ ಬಿ.ಎಸ್. ಬಸವೇಶ ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ, ಗೂಂಡಾಗಿರಿ ಮಾಡಿಕೊಂಡು ಲೂಟಿ ಹೊಡೆಯುತ್ತಿದ್ದಾರೆ. ಅಕ್ರಮ ಮರಳುಗಾರಿಕೆಯನ್ನು ತಡೆಯಲು ಬಂದ ಕರ್ತವ್ಯನಿರತ ಮಹಿಳಾ ಅಧಿಕಾರಿಗೆ ಶಾಸಕ ಸಂಗಮೇಶ್ ಅವರ ಪುತ್ರ ಫೋನಿನಲ್ಲಿ ಬೆದರಿಕೆ, ಧಮ್ಕಿ ಹಾಕಿ, ಅಶ್ಲೀಲ ಶಬ್ಧಗಳಿಂದ ನಿಂದಿಸಿರುವುದು ಅಕ್ಷಮ್ಯ ಅಪರಾಧ.
ರಾಜ್ಯದಲ್ಲಿರುವ ಮಹಿಳಾ ಆಯೋಗ ಏನು ಮಾಡುತ್ತಿದೆ ? ಮಹಿಳೆಯ ಗೌರವಕ್ಕೆ ಧಕ್ಕೆ ತಂದಿರುವ ಹೆಣ್ಣುನಿಂದಕ ಶಾಸಕರ ಪುತ್ರನ ವಿರುದ್ಧ ಸರ್ಕಾರ ತಕ್ಷಣವೇ ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂದು ಜನತಾದಳ ಪಕ್ಷವು ಆಗ್ರಹಿಸುತ್ತದೆ. ಸಿಎಂ ಸಿದ್ದರಾಮಯ್ಯ ಅವರೇ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರೇ, ಲಕ್ಷ್ಮೀ ಹೆಬ್ಬಾಳ್ಕರ್ ಮೇಡಂ ತಾವು ಈಗ ಮಹಿಳಾ ಅಧಿಕಾರಿಯ ರಕ್ಷಣೆಗೆ ನಿಂತು ನ್ಯಾಯ ಒದಗಿಸಬೇಕಿದೆ” ಎಂದು ಹೇಳಿದೆ.
ʼ @INCKarnataka ಸರ್ಕಾರದಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆಯೇ ಇಲ್ಲವಾಗಿದೆ !
ಭದ್ರಾವತಿಯಲ್ಲಿ ಒಂದು ಪೈಸೆ ಅಭಿವೃದ್ಧಿ ಕೆಲಸ ಮಾಡದ ನಾಲಾಯಕ್ ಕಾಂಗ್ರೆಸ್ ಶಾಸಕ ಸಂಗಮೇಶ್ ಹಾಗೂ ಅವರ ಮಗ ಬಿ.ಎಸ್. ಬಸವೇಶ ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ, ಗೂಂಡಾಗಿರಿ ಮಾಡಿಕೊಂಡು ಲೂಟಿ ಹೊಡೆಯುತ್ತಿದ್ದಾರೆ.
ಅಕ್ರಮ… pic.twitter.com/XDbJT0nIYD
— Janata Dal Secular (@JanataDal_S) February 10, 2025
ಪ್ರಕರಣ ದಾಖಲಿಸದಿದ್ದರೆ ಲೋಕಾಯುಕ್ತಕ್ಕೆ ದೂರು : ರವಿ ಕೃಷ್ಣಾರೆಡ್ಡಿ
“ಅವಾಚ್ಯವಾಗಿ ನಿಂದನೆ ಮಾಡಿ ಬೆದರಿಕೆ ಹಾಕಿರುವ ಕೊಳಕ ಭದ್ರಾವತಿಯ ಶಾಸಕ ಸಂಗಮೇಶರ ಮಗ ಬಸವೇಶ್ ಎನ್ನುವ ಮಾಹಿತಿ ಇದೆ. ಬಸವೇಶ್ ಆಗಲಿ ಅಥವಾ ಜ್ಯೋತಿ ಎನ್ನುವ ಆ ಶೋಷಿತ ಅಧಿಕಾರಿಯಾಗಲಿ ಇದನ್ನು ನಿರಾಕರಿಸಬೇಕು ಅಥವಾ ಖಚಿತಪಡಿಸಬೇಕು. ಈಗಾಗಲೇ ವೈರಲ್ ಆಗಿರುವ ಈ ವಿಡಿಯೋದ ಆಧಾರದ ಮೇಲೆ ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಈ ಕೂಡಲೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು. ಇಲ್ಲವಾದಲ್ಲಿ DC, SP ಮತ್ತು ಬೈಗುಳ ತಿಂದ ಅಧಿಕಾರಿಯ ವಿರುದ್ಧ KRS ಪಕ್ಷದವರು ಲೋಕಾಯುಕ್ತದಲ್ಲಿ ಕರ್ತವ್ಯಲೋಪದ ಅಡಿಯಲ್ಲಿ ದೂರು ದಾಖಲಿಸಲು ನಾನು ಈ ಮೂಲಕ ಶಿವಮೊಗ್ಗ ಜಿಲ್ಲೆಯ KRS ಪಕ್ಷದ ಮುಖಂಡರಿಗೆ ಸೂಚಿಸುತ್ತಿದ್ದೇನೆ” ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಮೈಸೂರು | ಮುಸ್ಲಿಂ ಸಮುದಾಯದ ಕುರಿತು ಅವಹೇಳನಕಾರಿ ಪೋಸ್ಟ್ : ಆರೋಪಿ ಸುರೇಶ್ ಬಂಧನ


