‘ಯುದ್ಧಭೂಮಿಯಲ್ಲಿ ಗುಂಡು ಬೀಳುತ್ತದೆ ಎಂದು ತಿಳಿದಿದೆ. ಆದರೂ ನಾನು ಹಿಂದೆ ಸರಿಯುವುದಿಲ್ಲ….’ ಈ ಬರಹವಿದ್ದ ಪ್ಲಕಾರ್ಡ್ ಹಿಡಿದಿದ್ದ ಪಂಜಾಬಿ ಯುವಕನನ್ನು ನೀವು ಸೋಶಿಯಲ್ ಮೀಡಿಯಾಗಳಲ್ಲಿ ನೋಡಿರಬಹುದು. ಇದು ಕೇವಲ ಆ ಯುವಕನೊಬ್ಬನ ಮಾತಲ್ಲ. ಕೃಷಿ ಕಾಯ್ದೆಗಳ ವಿರೋಧಿಸಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಾವಿರಾರು ಯುವಜನರು ಸಹ ಇದೇ ಕಿಚ್ಚು, ಹೋರಾಟದ ಉತ್ಸಾಹವನ್ನು ಹೊಂದಿದ್ದಾರೆ.

ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ರೈತರು ನೆರೆದಿದ್ದಾರೆ. ಟಿಕ್ರಿ ಗಡಿಯಲ್ಲಿ ರೈತ ಮಹಿಳೆಯರು, ವಯಸ್ಸಾದ ರೈತರು ಹಾಗೂ ಯುವಜನರೂ ಇದ್ದರೆ. ಆದರೆ ಪಂಜಾಬ್-ಹರಿಯಾಣ ಭಾಗದ ಸಿಂಘು ಗಡಿಯಲ್ಲಿ ಯುವಜನರ ಸಂಖ್ಯೆ ಅತಿ ಹೆಚ್ಚಿದೆ.
ಸಾವಿರಾರು ಯುವಜನರು I love Kisan, I love Kethi, No Farmer No Food…. (ರೈತರನ್ನು ಪ್ರೀತಿಸುತ್ತೇನೆ, ಕೃಷಿಯನ್ನು ಪ್ರೀತಿಸುತ್ತೇನೆ, ರೈತರಿಲ್ಲದೆ ಆಹಾರವಿಲ್ಲ) ಹೀಗೆ ವಿವಿಧ ಘೋಷಣೆಯುಳ್ಳ ಪ್ಲಕಾರ್ಡ್ ಹಿಡಿದುಕೊಂಡು ಸಿಂಘು ಗಡಿಯಲ್ಲಿ ಟ್ಯ್ರಾಕ್ಟರ್ ಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ತಿರುಗುತ್ತಲೆ ಇರುತ್ತಾರೆ. ರೈತರು ಮಲಗಿದ ಮೇಲೂ ಅಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುಲು ಈ ಯುವಕಲು ಸ್ವಯಂ ಸೇವಕರಾಗಿ ಅಲ್ಲಿ ಗಸ್ತು ತಿರುಗುತ್ತ ರಕ್ಷಣೆಯ ಜವಾಬ್ದಾರಿ ನೋಡಿಕೊಳ್ಳುತ್ತಾರೆ.

1984 ರ ಘಟನೆಯ ನಂತರ ಯಾವುದೇ ಹೋರಾಟದಲ್ಲಿ ಭಾಗವಹಿಸದೇ ಇದ್ದ ಪಂಜಾಬಿ ಯುವಜನರು ಇದೇ ಮೊದಲ ಬಾರಿಗೆ ಬೃಹತ್ ಸಂಖ್ಯೆಯಲ್ಲಿ ಈ ರೈತ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಮಾಧ್ಯಮಗಳು ಬಿತ್ತರಿಸಿದಂತೆ ಮಾದಕ ವ್ಯಸನಕ್ಕೆ ಯುವಜನರು ಒಳಗಾಗಿದ್ದಾರೆ ಎಂಬ ಮಾತನ್ನು ಸುಳ್ಳು ಮಾಡಿರುವ ಈ ಯುವಜನರು ಉಳಿದವರಿಗೆ ಸ್ಫೂರ್ತಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಉಡ್ತ ಪಂಜಾಬ್ ಬದಲಿಗೆ ಪಡ್ತ ಪಂಜಾಬ್ ಎಂದು ಬದಲಾಗಿದೆ ಎಂಬ ಪ್ಲಕಾರ್ಡ್‌ಗಳು ಎಲ್ಲೆಲ್ಲೂ ಕಾಣುತ್ತವೆ.
ಈ ಕುರಿತು ನಾನುಗೌರಿ.ಕಾಂ ಜೊತೆಗೆ ಮಾತನಾಡಿ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಅರ್ಷ್‌ದೀಪ್ “ನನ್ನನ್ನು ಒಳಗೊಂಡಂತೆ ಪಂಜಾಬಿನ ಯುವ ಸಮೂಹ ಯಾವುದೇ ಹೋರಾಟದಲ್ಲಿ ಈ ಮಟ್ಟಕ್ಕೆ ತೊಡಗಿಸಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ಯುವ ಸಮೂಹ ಈ ರೈತ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದು ಕೇವಲ ಹೋರಾಟವಲ್ಲ ಕ್ರಾಂತಿಯೂ ಹೌದು” ಎನ್ನುತ್ತಾರೆ.
ನಾನು ಅನ್ನ ತಿನ್ನುತ್ತೇನೆ. ಹಾಗಾಗಿ ಅನ್ನ ಬೆಳೆದವರ ಪರ ಹೋರಾಟ ಮಾಡುತ್ತೇನೆ. ರೈತರಿಲ್ಲದೇ ದೇಶವಿಲ್ಲ ಹಾಗಾಗಿ ನಾನು ರೈತ ಹೋರಾಟದಲ್ಲಿ ವಾಲಂಟೀಯರ್ ಆಗಿ ಕೆಲಸ ಮಾಡಲು ಮುಂದೆ ಬಂದಿದ್ದೇನೆ ಎನ್ನುವ ಅರ್ಷ್‌ದೀಪ್, ನಾನು ಇಲ್ಲಿಗೆ ಹೋರಾಟಕ್ಕೆ ಬಂದಿರುವುದಕ್ಕೆ ನಮಗೆ ತಂದೆಗೆ ಸ್ವಲ್ಪ ಭಯವಿದೆ. ಆದರೆ ನನ್ನ ತಾಯಿ ಸಂಪೂರ್ಣ ಬೆಂಬಲ ನೀಡಿದ್ದಾರೆ ಅನ್ನುತ್ತಾರೆ.

ಶಾಂತಿಯುತವಾಗಿ ಹೋರಾಡುತ್ತಿರುವ ರೈತ ಹೋರಾಟಗಾರರನ್ನು ಖಾಲಿಸ್ತಾನಿಗಳು, ಭಯೋತ್ಪಾದಕರು ಎಂದು ಮಾಧ್ಯಮಗಳು ಮತ್ತು ಬಿಜೆಪಿಗರು ಕರೆದಿರುವುದು ಎಲ್ಲಕ್ಕಿಂತ ಹೆಚ್ಚಾಗಿ ಈ ಯುವಜನರನ್ನು ಕೆರಳಿಸಿದೆ. ರೈತ ಹೋರಾಟದ ವಿರುದ್ಧವಿರುವ ಮಾಧ್ಯಮಗಳನ್ನು ಗೋ ಮೀಡಿಯಾ ಎಂದು ಕರೆಯುವ ಈ ಯುವಜನರು ಯೂಟ್ಯೂಬ್, ಟ್ವಿಟ್ಟರ್, ಫೇಸ್‌ಬುಕ್‌ನಂತ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುವುದಲ್ಲದೇ ರೈತರ ಹೋರಾಟವನ್ನು ನಿರಂತರವಾಗಿ ಪ್ರಚಾರ ಮಾಡುತ್ತಿದ್ದಾರೆ.

1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಭಗತ್‌ಸಿಂಗ್ ರನ್ನು ಕಾಡಿದಂತೆ ಇಂದಿನ ಸರ್ಕಾರ ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯಗಳು ಬಹುಪಾಲು ಯುವಜನರನ್ನು ಕಾಡಿದ್ದು, ಈ ಹೋರಾಟದ ಬದ್ಧತೆಯ ಅರಿವು ಮೂಡಿಸಿದೆ ಎನ್ನಬಹುದು.
ಇದನ್ನೂ ಓದಿ: ಹೋರಾಟನಿರತ ರೈತರ ದೇಹ, ಮನಸ್ಸಿಗೆ ಶಕ್ತಿ ತುಂಬುತ್ತಿರುವ ವಿಭಿನ್ನ ಲಂಗರ್‌ಗಳು…!


