Homeಮುಖಪುಟಭೀಮಾ ಕೋರೆಗಾಂವ್- ಕೇಂದ್ರದ ಹಸ್ತಕ್ಷೇಪ ದುರುದ್ದೇಶಪೂರಿತ

ಭೀಮಾ ಕೋರೆಗಾಂವ್- ಕೇಂದ್ರದ ಹಸ್ತಕ್ಷೇಪ ದುರುದ್ದೇಶಪೂರಿತ

- Advertisement -

ಈ ಕೇಸನ್ನು ಕೇಂದ್ರ ಸರ್ಕಾರದ ಕೆಳಗೆ ಕೆಲಸ ಮಾಡುವ ಎನ್.ಐ.ಎ.ಗೆ ವಹಿಸಿಕೊಡುತ್ತಿರುವ ಸಂದರ್ಭ ಮತ್ತು ಸಮಯ ಎರಡೂ ಪ್ರಶ್ನಾರ್ಹ.

ಎಲ್ಗಾರ್ ಪರಿಷತ್- ಭೀಮಾ ಕೋರೆಗಾಂವ್ ಕೇಸಿನ ತನಿಖೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ) ಗೆ ವಹಿಸಿಕೊಡುತ್ತಿರುವ ಕ್ರಮ ನಿಂದನೀಯ. ಕಾನೂನು ಪ್ರಕಾರ ಹೀಗೆ ರಾಜ್ಯ ಸರ್ಕಾರದ ಪರಿಧಿಯಲ್ಲಿದ್ದ ಕೇಸೊಂದನ್ನು, ಆ ರಾಜ್ಯದ ಅನುಮೋದನೆ ಇಲ್ಲದೆ ಏಕಪಕ್ಷೀಯವಾಗಿ ಎನ್.ಐ.ಎ.ಗೆ ವಹಿಸಿಕೊಡುವ ಕ್ರಮ ಕಾನೂನುಬಾಹಿರವೇನೂ ಅಲ್ಲ. ಕಾನೂನಿನಲ್ಲಿ ಇಂತಹ ಹಸ್ತಾಂತರಕ್ಕೆ ಅವಕಾಶವಿದೆ. ಆದರೆ ಈ ಕೇಸನ್ನು ಕೇಂದ್ರ ಸರ್ಕಾರದ ಕೆಳಗೆ ಕೆಲಸ ಮಾಡುವ ಎನ್.ಐ.ಎ.ಗೆ ವಹಿಸಿಕೊಡುತ್ತಿರುವ ಸಂದರ್ಭ ಮತ್ತು ಸಮಯ ಎರಡೂ ಪ್ರಶ್ನಾರ್ಹ.

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ತನಗಿರುವ ಅಧಿಕಾರವನ್ನು ಹೆಚ್ಚು ಎಚ್ಚರಿಕೆಯಿಂದ ಪ್ರಯೋಗಿಸಬೇಕಾಗುತ್ತದೆ. ಅಧಿಕಾರವಿದೆ ಎಂದ ಮಾತ್ರಕ್ಕೆ ರಾಜ್ಯ ಸರ್ಕಾರಗಳನ್ನು ಧಿಕ್ಕರಿಸಿ ನಡೆದುಕೊಳ್ಳುವುದು ಸಲ್ಲದು. ಕೇಂದ್ರ ಮತ್ತು ರಾಜ್ಯದ ನಡುವಣ ಸಂಬಂಧಗಳು ಸೌಹಾರ್ದಯುತವಾಗಿರಬೇಕು. ಈ ಸಂಬಂಧ ಕೆಟ್ಟರೆ ಅದರ ಫಲವನ್ನು ಕೇವಲ ನಿರ್ದಿಷ್ಟ ರಾಜ್ಯ ಮಾತ್ರವೇ ಅಲ್ಲದೆ ಪ್ರತ್ಯಕ್ಷ-ಪರೋಕ್ಷವಾಗಿ ಇಡೀ ದೇಶವೇ ಅನುಭವಿಸಬೇಕಾಗುತ್ತದೆ.

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೂಡಲಾದ ಈ ಕೇಸಿನಲ್ಲಿ ಮಾಡಲಾಗಿರುವ ಆಪಾದನೆಗಳಿಗೆ ಬಲವಾದ ಸಾಕ್ಷ್ಯ ಪುರಾವೆಗಳಿಲ್ಲ ಎಂಬುದು ಮಹಾರಾಷ್ಟ್ರದ ಈಗಿನ ಸಮ್ಮಿಶ್ರ ಸರ್ಕಾರದ ಸ್ಪಷ್ಟ ನಿಲುವು. ಬಂಧಿತ ಸಾಮಾಜಿಕ ಹೋರಾಟಗಾರರು ಭೀಮಾ ಕೋರೆಗಾಂವ್ ಹಿಂಸೆಯನ್ನು ಪ್ರಚೋದಿಸಿದ್ದರು ಎಂಬುದು ಪುಣೆ ಪೋಲಿಸರ ಆರೋಪ. ಆದಕ್ಕೆ ಅವರು ಒದಗಿಸಿರುವ ಪುರಾವೆಗಳು ಕೇವಲ ಕೆಲ ಪುಸ್ತಕಗಳು ಮತ್ತು ಸಿ.ಡಿ.ಗಳು. ಕೇಸನ್ನು ಎನ್.ಐ.ಎ.ಗೆ ವರ್ಗಾಯಿಸುವ ಕೇಂದ್ರದ ಕ್ರಮ ಕುರಿತು ಮಹಾರಾಷ್ಟ್ರ ಸರ್ಕಾರ ಕಾನೂನು ಸಲಹೆ ಕೋರಿದೆ.

ಮಹಾರಾಷ್ಟ್ರ ಸರ್ಕಾರ ಈ ಕೇಸಿನ ಆರೋಪಪಟ್ಟಿಯನ್ನು ಮರುವಿಮರ್ಶೆ ಮಾಡುವ ನಿರ್ಧಾರ ಕೈಗೊಂಡ ಮರುದಿನವೇ ಹೊರಬಿದ್ದಿರುವ ಕೇಂದ್ರ ಸರ್ಕಾರದ ನಿರ್ಧಾರ ಕೇವಲ ಕಾಕತಾಳೀಯ ಆಗಿರುವುದು ಸಾಧ್ಯವಿಲ್ಲ. ಈ ಕೇಸಿನ ತನಿಖೆಯನ್ನು 2018ರಿಂದ ಪುಣೆಯ ಪೋಲಿಸರು ನಡೆಸುತ್ತಿದ್ದಾರೆ. ಈ ತನಿಖೆಯನ್ನು ಪುಣೆ ಪೋಲಿಸರಿಂದ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರ ಮಾಡುವ ಇಂಗಿತವನ್ನು ರಾಜ್ಯ ಸರ್ಕಾರ ನೀಡಿತ್ತು. ರಾಜ್ಯ ಸರ್ಕಾರ ಈ ಕೇಸನ್ನು ಮರುವಿಮರ್ಶೆಗೆ ಒಳಪಡಿಸುವ ನಿರ್ಧಾರ ತೆಗೆದುಕೊಂಡರೆ ಆ ನಿರ್ಧಾರವೇ ಅಂತಿಮ ಅಲ್ಲ. ಅಂತಹ ನಿರ್ಧಾರವು ನ್ಯಾಯಾಲಯದ ಪರೀಕ್ಷೆಗೆ ಗುರಿಯಾಗಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಶಿವಸೇನಾ-ಎನ್.ಸಿ.ಪಿ.- ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿತ್ತು. ಈ ಸರ್ಕಾರದ ಹಿಂದಿನ ಶಕ್ತಿಯಾಗಿರುವ ಹಿರಿಯ ರಾಜಕಾರಣಿ ಶರದ್ ಪವಾರ್ ಅವರು ಈ ಕೇಸಿನಲ್ಲಿ ಸಾಮಾಜಿಕ ಹೋರಾಟಗಾರರು ಮತ್ತು ಬುದ್ಧಿಜೀವಿಗಳನ್ನು ಸಿಕ್ಕಿಸಿ ಜೈಲಿಗೆ ತಳ್ಳಿದ ಕ್ರಮವನ್ನು ಕಟುವಾಗಿ ಟೀಕಿಸಿದ್ದರು. ಪುಣೆ ಪೋಲಿಸರಾಗಲಿ, ಉದ್ದೇಶಿತ ವಿಶೇಷ ತನಿಖಾ ತಂಡವಾಗಲಿ ರಾಜ್ಯ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತವೆ. ಆದರೆ ಎನ್.ಐ.ಎ. ನೇರವಾಗಿ ಕೇಂದ್ರ ಸರ್ಕಾರದ ಗೃಹಮಂತ್ರಿ ಅಮಿತ್ ಶಾ ಅವರ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬುದು ಗಮನಿಸಬೇಕಿರುವ ಅಂಶ. ಎಲ್ಗಾರ್ ಪರಿಷತ್ ಕೇಸು ಈಗಾಗಲೆ ತನಿಖೆಯ ಹಂತವನ್ನು ಹಾದು ನ್ಯಾಯಾಲಯವನ್ನು ಮುಟ್ಟಿದೆ. ಈ ಹಂತದಲ್ಲಿ ಕೇಂದ್ರ ಸರ್ಕಾರ ಮೂಗು ತೂರಿಸಿರುವುದು ಶಂಕೆಗೆ ಆಸ್ಪದ ಮಾಡಿದೆ. ಈ ಹಿಂದಿನ ಬಿಜೆಪಿ ಸರ್ಕಾರವನ್ನು ರಕ್ಷಿಸುವ ಹುನ್ನಾರವಿದು ಎಂದು ಎನ್.ಸಿ.ಪಿ. ಮತ್ತು ಕಾಂಗ್ರೆಸ್ ಪಕ್ಷಗಳು ಕೇಂದ್ರದ ಹಸ್ತಕ್ಷೇಪವನ್ನು ಟೀಕಿಸಿವೆ. ಎನ್.ಐ.ಎ. ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ತನಿಖಾ ಸಂಸ್ಥೆಯಲ್ಲ, ಸಿ.ಬಿ.ಐ. ಸಂಸ್ಥೆಯಂತೆಯೇ ಕೇಂದ್ರ ಸರ್ಕಾರದ ಇಷಾರೆಯಂತೆ ನಡೆದುಕೊಳ್ಳುವ ಪಂಜರದ ಗಿಳಿ ಎಂಬ ಟೀಕೆಗಳನ್ನು ಎದುರಿಸಿದೆ. ಸಂವಿಧಾನ ಎತ್ತಿ ಹಿಡಿದಿರುವ ಒಕ್ಕೂಟ ವ್ಯವಸ್ಥೆಯ ಆಶಯವನ್ನು ಈ ಕ್ರಮ ಬೀಳುಗಳೆದಿದೆ. ಮಾಲೇಗಾಂವ್ ಸ್ಫೋಟಗಳ ಸಂಬಂಧದಲ್ಲಿ ಬಂಧಿಸಲಾಗಿದ್ದ ಸಾಧ್ವಿ ಪ್ರಗ್ಯಾ ಮತ್ತಿತರರ ಕುರಿತು ಮೆದು ಧೋರಣೆ ತಳೆಯುವಂತೆ ಎನ್.ಐ.ಎ. ತಮಗೆ ಸೂಚಿಸಿತ್ತೆಂದು ಈ ಕೇಸಿನ ಸರ್ಕಾರಿ ವಕೀಲರಾದ ರೋಹಿಣಿ ಸಾಲಿಯಾನ್ ದೂರು ಕೆಲ ವರ್ಷಗಳ ಹಿಂದೆ ಭಾರೀ ಸದ್ದು ಮಾಡಿತ್ತು.

ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಈ ಕೇಸಿನ ಕುರಿತು ಪುಣೆ ಪೋಲೀಸರು ನಡೆಸಿದ ತನಿಖೆಯ ಪ್ರಗತಿ ಕುರಿತು ಎನ್.ಐ.ಎ. ತೃಪ್ತಿ ವ್ಯಕ್ತಪಡಿಸಿತ್ತು ಎಂಬುದು ಗಮನಾರ್ಹ ಅಂಶ.

ಎಲ್ಗಾರ್ ಪರಿಷತ್- ಭೀಮಾ ಕೋರೆಗಾಂವ್ ಕೇಸಿಗೆ ರಾಜಕೀಯ ದುರುದ್ದೇಶವಿದೆ ಎಂಬ ಆಪಾದನೆ ಆರಂಭದಿಂದಲೂ ಕೇಳಿ ಬಂದಿತ್ತು. ಈ ಪ್ರಕರಣವು ಮಾವೋವಾದಿಗಳ ಒಳಸಂಚು ಎಂಬುದು ಪುಣೆ ಪೋಲೀಸರ ಆರೋಪ. ಈ ಆರೋಪದಲ್ಲಿ ಹುರುಳಿಲ್ಲವೆಂದು ಗಟ್ಟಿ ದನಿಗಳು ಕೇಳಿ ಬಂದಿವೆ. ಭೀಮಾ ಕೋರೆಗಾಂವ್‍ನಲ್ಲಿ ಜರುಗಿದ ಹಿಂಸೆಯನ್ನು ಪ್ರಚೋದಿಸಿದ್ದು ಹಿಂದೂ ಕಟ್ಟರ್‍ವಾದಿ ಸಂಘಟನೆಗಳು. ಈ ಗುಂಪುಗಳನ್ನು ರಕ್ಷಿಸಲು ಸಾಮಾಜಿಕ ಕಾರ್ಯಕರ್ತರು ಮತ್ತು ಮಾನವಹಕ್ಕುಗಳ ಹೋರಾಟಗಾರರ ಮೇಲೆ ಹುಸಿ ಆರೋಪಗಳನ್ನು ಹೊರಿಸಲಾಗಿದೆ ಎಂದು ಬಿಜೆಪಿಯೇತರ ರಾಜಕೀಯ- ಸಾಮಾಜಿಕ ಸಂಘಟನೆಗಳು ವಾದಿಸಿವೆ. ಈಗಾಗಲೆ ರಾಜಕೀಯಗೊಳಿಸಿರುವ ಈ ಕೇಸನ್ನು ಕೇಂದ್ರದ ಕ್ರಮವು ಮತ್ತಷ್ಟು ರಾಜಕೀಯಗೊಳಿಸಲಿದೆ.

ಈ ಕೇಸಿನ ಮರುವಿಮರ್ಶೆಯನ್ನು ತಪ್ಪಿಸುವುದೇ ಕೇಂದ್ರದ ಉದ್ದೇಶ. 2017ರ ಡಿಸೆಂಬರ್ 31ರಂದು ಎಲ್ಗಾರ್ ಪರಿಷತ್ತಿನ ಸಭೆಯಲ್ಲಿ ಮಾಡಲಾದ ಭಾಷಣಗಳನ್ನು ಆಧರಿಸಿ ಈ ಕೇಸನ್ನು ದುರುದ್ದೇಶಪೂರ್ವಕವಾಗಿ ಬೃಹದಾಕಾರವಾಗಿ ಬೆಳೆಸಲಾಗಿದೆ. 200 ವರ್ಷಗಳ ಹಿಂದೆ ದಲಿತ ಪೀಡಕ ಪೇಶ್ವೆಗಳ ಸೈನ್ಯದ ವಿರುದ್ಧ ದಲಿತರು ಗಳಿಸಿದ ವಿಜಯವನ್ನು ಪರಿಷತ್ ಸಭೆಯಲ್ಲಿ ಆಚರಿಸಲಾಗಿತ್ತು. ಮರುದಿನ ಈ ಸಭೆಗೆ ಪ್ರತಿಕ್ರಿಯೆಯಾಗಿ ಹಿಂದೂ ಕಟ್ಟರ್ ಪಂಥೀಯ ಗುಂಪುಗಳು ಗಲಭೆಯನ್ನು ಪ್ರಚೋದಿಸಿದ್ದವು. ಈ ಹಿನ್ನೆಲೆಯನ್ನು ಇಟ್ಟುಕೊಂಡು ಕೇಂದ್ರ ಸರ್ಕಾರವನ್ನು ಉರುಳಿಸುವ ಸಂಚಿನ ಆರೋಪವನ್ನು ಹೊರಿಸಲಾಯಿತು. ಪ್ರಧಾನಿಯವರ ಹತ್ಯೆಯ ಆರೋಪವನ್ನು ಮಾಡಲಾದರೂ, ಈ ಆರೋಪ ಎಫ್.ಐ.ಆರ್.ನಲ್ಲಿ ನಮೂದಾಗಲಿಲ್ಲ. ಪೋಲೀಸರ ಆರಂಭಿಕ ತನಿಖೆಯಲ್ಲಿ ಹಿಂಸೆಯ ಹಿಂದೆ ಹಿಂದೂ ಕಟ್ಟರ್‍ವಾದಿ ಗುಂಪುಗಳ ಕೈವಾಡ ಕಂಡುಬಂದಿತ್ತು. ಆನಂತರ ಈ ತನಿಖೆಯ ದಾರಿ ವಿರುದ್ಧ ದಿಕ್ಕು ಹಿಡಿಯಿತು. ಈ ಕೇಸಿನ ಸ್ವತಂತ್ರ ತನಿಖೆ ಸುಪ್ರೀಮ್ ಕೋರ್ಟ್ ಉಸ್ತುವಾರಿಯಲ್ಲಿ ನಡೆಯಬೇಕೆಂಬ ವಾದವನ್ನು ಅಂದಿನ ಮಹಾರಾಷ್ಟ್ರ ಸರ್ಕಾರ ಬಲವಾಗಿ ವಿರೋಧಿಸಿತ್ತು. ಆ ಸಂದರ್ಭದಲ್ಲಿ ಈ ಕೇಸನ್ನು ಎನ್.ಐ.ಎ.ಗೆ ವಹಿಸಿಕೊಡುವ ಇರಾದೆ ಕೇಂದ್ರ ಸರ್ಕಾರಕ್ಕೆ ಇರಲಿಲ್ಲ.

ಮಾನವಹಕ್ಕುಗಳ ಪ್ರತಿಪಾದಕರು ಮತ್ತು ಸಾಮಾಜಿಕ ಹೋರಾಟಗಾರರನ್ನು ಜೈಲಿಗೆ ತಳ್ಳಲು ಮತ್ತು ಮೋದಿ ಸರ್ಕಾರದ ವಿರುದ್ಧದ ಭಿನ್ನಮತದ ದನಿಗಳನ್ನು ಅಡಗಿಸಲು ಹೂಡಲಾಗಿರುವ ದುರುದ್ದೇಶಪೂರಿತ ಮೊಕದ್ದಮೆಯಿದು. ಇಂತಹ ಕೇಸಿನಲ್ಲಿ ನ್ಯಾಯವಾದ ಮತ್ತು ನಿಷ್ಪಕ್ಷಪಾತದ ತನಿಖೆಯ ಅವಕಾಶವನ್ನು ನಿರಾಕರಿಸಿರುವುದು ಖಂಡನೀಯ.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ತನ್ನ ವಿರುದ್ಧ ದನಿ ಎತ್ತುವವರಿಗೆಲ್ಲಾ, “ದೇಶದ್ರೋಹಿ” ಎಂಬ ಹಣೆಪಟ್ಟಿಯನ್ನು ಹಚ್ಚಿ ಅವರನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಿದರೆ, ವಿರೋಧದ ದನಿ ಅಡಗುತ್ತದೆ ಎಂದು, ಕೇಂದ್ರ ಸರ್ಕಾರ ತಿಳಿದಿರುವಂತಿದೆ. ಆದರೆ, ಕೇಂದ್ರ ಸರ್ಕಾರದ ಈ ತಿಳುವಳಿಕೆ ‘ತಪ್ಪು’ ಎಂಬುದು ಪ್ರಪಂಚದ ಇತಿಹಾಸದಲ್ಲಿ ಅನೇಕ ಬಾರಿ ಸಾಬೀತಾಗಿದೆ. ಎಂತೆಂತಹ ಸರ್ವಾಧಿಕಾರಿಗಳೂ ಮಣ್ಣುಮುಕ್ಕಿ ವಿಫಲರಾಗಿರುವ ಇತಿಹಾಸ ನಮ್ಮ ಕಣ್ಮುಂದೆ ಇರುವಾಗ, ಈ ಮನುವಾದಿಗಳ ಆಟ ಹೆಚ್ಚುದಿನ ನಡೆಯುವುದಿಲ್ಲ. ಆದರೆ ಇವರಿಂದ ಅನ್ಯಾಯವಾಗಿ ಜೈಲುಪಾಲಾಗಿರುವ ಸಾಹಿತಿಗಳು, ಚಿಂತಕರು ಮತ್ತು ಹೋರಾಟಗಾರರ ಪರವಾಗಿ ಈ ದೇಶದ ಪ್ರಜ್ಞಾವಂತರೆಲ್ಲರೂ ಒಕ್ಕೊರಲಿನಿಂದ ದನಿ ಎತ್ತಬೇಕು. ಆಗ ಮಾತ್ರ ಅಮಾಯಕರಿಗೆ ಈ ಮನುವಾದಿಗಳಿಂದ ಆಗುತ್ತಿರುವ ಅನ್ಯಾಯವನ್ನು ನಾವು ತಡೆಗಟ್ಟಬಹುದು.

LEAVE A REPLY

Please enter your comment!
Please enter your name here

- Advertisment -

Must Read

ಯುಪಿ ಚುನಾವಣೆ: ಮಹಿಳೆಯರಿಗೆ ಕಾಂಗ್ರೆಸ್‌ ಆದ್ಯತೆ; ಉಳಿದ ಪಕ್ಷಗಳ ಕಥೆಯೇನು..?

0
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಬಿಜೆಪಿ ನೇತೃತ್ವದ ಎನ್‌ಡಿಎ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷಗಳ ನಡುವಿನ ಸ್ಪರ್ಧೆಯಾಗಿದೆ. ಮಾಯಾವತಿಯವರ ಬಿಎಸ್‌ಪಿ ಪಕ್ಷ ಈ ಬಾರಿ ಇದ್ದು ಇಲ್ಲದಂತಾಗಿದೆ. ಬಿಜೆಪಿಯ...
Wordpress Social Share Plugin powered by Ultimatelysocial