Homeಮುಖಪುಟಭಿಲ್ ಸಮುದಾಯ ಬೆಳೆಸಿದ ಬಾಓಬಾಬ್ ಮರಗಳು

ಭಿಲ್ ಸಮುದಾಯ ಬೆಳೆಸಿದ ಬಾಓಬಾಬ್ ಮರಗಳು

- Advertisement -
- Advertisement -

ಬೃಹದಾಕಾರವಾಗಿ ಬೆಳೆಯುವ ಬಾಓಬಾಬ್ ಅಥವಾ ಕನ್ನಡದಲ್ಲಿ ದೊಡ್ಡ ಹುಣಸೆ, ಆನೆ ಹುಣಸೆ ಎಂದು ಕರೆಯಲ್ಪಡುವ ಮರಗಳು ತಮ್ಮ ವಿಚಿತ್ರವಾದ ಆಕಾರದಿಂದ ಎಲ್ಲರ ಗಮನವನ್ನೂ ಸೆಳೆಯುತ್ತವೆ. ಆಗಾಗ ಪತ್ರಿಕೆಗಳ ಲೇಖನಗಳಲ್ಲಿ ಅಥವಾ ಸಾಕ್ಷ್ಯಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಈ ಮರಗಳು ಮತ್ತೆ ಸುದ್ದಿಯಲ್ಲಿವೆ. ಮಧ್ಯಪ್ರದೇಶದ ಭಿಲ್ ಬುಡಕಟ್ಟು ಜನರು ವಾಸವಿರುವ ಮಂಡು ಎಂಬ ಊರು ಬಹುಶಃ ಭಾರತದಲ್ಲಿಯೇ ಅತಿ ಹೆಚ್ಚು ಬಾಓಬಾಬ್ ಮರಗಳನ್ನು ಹೊಂದಿದ ಪ್ರದೇಶವಾಗಿದೆ. ಈ ಪ್ರದೇಶದಿಂದ ಹನ್ನೊಂದು ಬಾಓಬಾಬ್ ಮರಗಳನ್ನು ಹೈದರಾಬಾದಿನ ಒಂದು ಸಸ್ಯಶಾಸ್ತ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗುತ್ತಿತ್ತು. ಆ ಉದ್ಯಾನವು, ’ಈ ಮರಗಳನ್ನು ಸಂರಕ್ಷಿಸಬೇಕಾಗಿದೆ ಹಾಗಾಗಿ ಅವುಗಳನ್ನು ಕಳುಹಿಸಿಕೊಡಿ’ ಎಂದು ಮಧ್ಯಪ್ರದೇಶದ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿತ್ತು. ಅದರ ಅಂಗವಾಗಿಯೇ ಈ ಕಾರ್ಯಾಚರಣೆ ನಡೆಯುತ್ತಿತ್ತು. ಶತಮಾನಗಳಿಂದ ಈ ಮರಗಳ ಜೊತೆಗೇ ಸಹಜೀವನ ನಡೆಸಿರುವ ಭಿಲ್ ಬುಡಕಟ್ಟು ಜನ, ಈ ಹಠಾತ್ ಸ್ಥಳಾಂತರದಿಂದ ಸಹಜವಾಗಿಯೇ ಕೋಪಗೊಂಡಿದ್ದರು. ಯಾರಾದರೂ ಮರಗಳನ್ನು ಸಂರಕ್ಷಿಸುವದಿದ್ದರೆ ಅವುಗಳ ಸಸಿಗಳನ್ನು ತೆಗೆದುಕೊಂಡು ಹೋಗುತ್ತಾರೆ, ಆದರೆ ಈ ದೊಡ್ಡ ಮರಗಳನ್ನು ತೆಗೆದುಕೊಂಡು ಹೋಗುವ ಉದ್ದೇಶವಾದರೂ ಏನು ಎಂಬುದು ಅವರ ಪ್ರಶ್ನೆಯಾಗಿತ್ತು, ಅಲ್ಲದೆ, ತಲೆಮಾರುಗಳಿಂದ ಈ ಮರಗಳ ಜೊತೆಯೇ ಬದುಕಿ ಬಂದಿರುವ ತಮಗೆ, ಮುಂಬರುವ ದಿನಗಳಲ್ಲಿ ಎಲ್ಲಿ ಇವುಗಳ ಮೇಲಿನ ಹಕ್ಕು ತಪ್ಪಿಹೋಗುವುದೋ ಎಂಬ ಭಯವೂ ಕಾರಣವಿದ್ದಿತು. ಕಡೆಗೆ ಸರ್ಕಾರಿ ಅಧಿಕಾರಿಗಳು ಜನರನ್ನು ಶಾಂತಗೊಳಿಸಿ ಅವರಿಗೂ ಅನುಕೂಲವಾಗುವಂತೆ ಈ ಮರಗಳಿಗೆ ಭೌಗೋಳಿಕ ಸೂಚಿಯನ್ನು ಅಥವಾ ಜಿಯಾಗ್ರಫಿಕಲ್ ಇಂಡಿಕೇಷನ್(ಜಿಐ) ಟ್ಯಾಗ್‌ಅನ್ನು ಕೊಡಲು ಪ್ರಯತ್ನಿಸುವುದಾಗಿ ಹೇಳಿತು. ಸಾವಿರಾರು ವರ್ಷಗಳಿಂದ ನಾವು ರಕ್ಷಿಸಿಕೊಂಡು ಬಂದಿರುವ ಈ ಮರಗಳಿಗೆ ಜಿಐ ಟ್ಯಾಗ್‌ನ ಹಂಗು ಈಗೇಕೆ ಎಂಬ ಪ್ರಶ್ನೆಯೂ ಜನರಲ್ಲಿ ಮೂಡದಿರಲಿಲ್ಲ. ಜಿಐ ಟ್ಯಾಗ್‌ಅನ್ನು ಯಾವುದೇ ಪ್ರದೇಶದ ವಿಶೇಷ ಉತ್ಪನ್ನ, ತಿನಿಸು ಅಥವಾ ಸ್ಥಳೀಯವಾಗಿ ಬೆಳೆಯುವ ಸಸ್ಯ ಅಥವಾ ಬೆಳೆಗಳಿಗೆ ಕೊಡಲಾಗುತ್ತದೆ. ಉದಾಹರಣೆಗೆ ಕರ್ನಾಟಕದ ಬ್ಯಾಡಗಿ ಮೆಣಸಿನಕಾಯಿ, ಮೊಳಕಾಲ್ಮೂರು ಸೀರೆ, ಧಾರವಾಡ ಪೇಢಾ, ಚನ್ನಪಟ್ಟಣದ ಗೊಂಬೆ, ನಂಜನಗೂಡಿನ ರಸಬಾಳೆ ಮತ್ತು ಮೈಸೂರು ಸಿಲ್ಕ್ ಮುಂತಾದವಕ್ಕೆ ಜಿಐ ಟ್ಯಾಗ್ ಕೊಡಲಾಗಿದೆ. ಇದರಿಂದಾಗಿ ಆಯಾ ಉತ್ಪನ್ನಕ್ಕೆ ಮಾನ್ಯತೆಯು ದೊರಕಿ ಅದರ ಮಾರುಕಟ್ಟೆಯೂ ವಿಸ್ತರಿಸುತ್ತದೆ ಮತ್ತು ನಕಲಿಯ ವಿರುದ್ಧ ರಕ್ಷಣೆಯೂ ದೊರೆಯುತ್ತದೆ. ಆದರೆ ಭಾರತದ ಮೂಲದ್ದೇ ಅಲ್ಲದ ಮತ್ತು ಭಾರತದ ಇತರೆಡೆಗಳಲ್ಲಿಯೂ ಇರುವ ಈ ಮರಗಳಿಗೆ ಹೇಗೆ ಜಿಐ ಪಡೆಯುತ್ತಾರೆ ಎಂಬುದೂ ಸೂಕ್ತ ಪ್ರಶ್ನೆಯೇ ಆಗಿದೆ.

ಈ ಬಾಓಬಾಬ್ ಮರಗಳು ನಮ್ಮ ಕರ್ನಾಟಕದಲ್ಲಿಯೂ ಇವೆ. ಮೊದಲು ಸವಣೂರಿನ ಇವುಗಳದ್ದೇ ಹೆಸರಿನ ದೊಡ್ಡಹುಣಸೆ ಮಠದ ಆವರಣದಲ್ಲಿರುವ ಮೂರೇ ಮರಗಳು ಮಾತ್ರ ರಾಜ್ಯದಲ್ಲಿವೆ ಎಂದು ತಿಳಿಯಲಾಗಿತ್ತು; ಆದರೆ ಇವು ಬೆಂಗಳೂರಿನ ಲಾಲ್‌ಬಾಗ್ ಒಳಗೊಂಡಂತೆ ನಾಡಿನ ಬೇರೆ ಪ್ರದೇಶದಲ್ಲಿಯೂ ಇವೆ. ನಾನು ಕೆಲ ವರ್ಷಗಳ ಹಿಂದೆ ನನ್ನ ತಂದೆಯ ಜೊತೆ ಬೆಳಗಾವಿ ಜಿಲ್ಲೆಯ ಗಡಿ ಭಾಗದ ಒಂದು ಹಳ್ಳಿಗೆ ಭೇಟಿ ನೀಡಿದ್ದೆ. ಅಲ್ಲಿ ದೊಡ್ಡಹುಣಸೆ ಮರ ಇದೆ ಎಂದು ಪರಿಚಿತರೊಬ್ಬರಿಂದ ತಿಳಿದ ಸುದ್ದಿಯೇ ಈ ಭೇಟಿಗೆ ಕಾರಣವಾಗಿತ್ತು. ಆ ಮರವು ಸವಣೂರಿನ ಮರದಷ್ಟು ದೊಡ್ಡದಲ್ಲದಿದ್ದರೂ ಸುಮಾರು 42 ಅಡಿಗಳಷ್ಟು ಸುತ್ತಳತೆ ಹೊಂದಿದ ದೊಡ್ಡ ಮರವೇ ಆಗಿತ್ತು. ಈ ಮರವಷ್ಟೇ ಅಲ್ಲದೆ ಆ ಊರಿನ ಹೆಸರೂ ಅಚ್ಚರಿದಾಯಕವಾಗಿಯೇ ಇದೆ. ಬೊಳಶ್ಯಾನ ಹಟ್ಟಿ ಎಂಬ ಆ ಊರಿಗೆ ಆ ಹೆಸರು ಬರಲು ಕಾರಣ ಒಬ್ಬ ಸೂಫಿ ಸಂತ ಎಂದು ಹೇಳಲಾಗುತ್ತದೆ. ಶತಮಾನಗಳ ಹಿಂದೆ ಬುಲ್ಲೆಷಾ ಎಂಬ ಸಂತನೇ ಆ ಮರವನ್ನು ನೆಟ್ಟಿದ್ದು ಎಂದು ಹೇಳಲಾಗುತ್ತದೆ. ಈ ಪ್ರತೀತಿಯ ಕುರಿತು ಸಾಕ್ಷಿಯನ್ನು ಹುಡುಕಬೇಕಷ್ಟೆ. ಇದಷ್ಟೇ ಅಲ್ಲದೆ ಬೆಳಗಾವಿ ಜಿಲ್ಲೆಯ ನಿಡಸೋಸಿಯ ವಿರಕ್ತ ಮಠದಲ್ಲಿಯೂ ಬಾಓಬಾಬ್ ಮರವಿದೆ. ಇನ್ನು ಸವಣೂರಿನಲ್ಲಿರುವ ಮರಗಳು ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಮರಗಳಾಗಿವೆ. ಇವು ಸುಮಾರು 18 ಮೀಟರ್ ಸುತ್ತಳತೆ ಹೊಂದಿದ್ದು, ಸಾವಿರಾರು ವರ್ಷದಷ್ಟು ಹಳೆಯವಾಗಿವೆ. ಇವುಗಳು ಭಾರತಕ್ಕೆ ಬಂದದ್ದು ಬಹುಶಃ ಅರಬ್ ವ್ಯಾಪಾರಿಗಳಿಂದಲೇ ಇರಬೇಕು. ನಮ್ಮ ನಾಡಿನ ಮರಗಳಿಗೆ ಸೂಫಿ ಸಂತರ ನಂಟು ಇದ್ದರೆ, ಮಧ್ಯ ಪ್ರದೇಶದಲ್ಲಿ ಇವುಗಳಿಗೆ ಖೋರಾಸಾನಿ ಇಮ್ಲಿ (ಹುಣಸೆ) ಎಂದು ಕರೆಯುತ್ತಾರೆ. ಖೋರಾಸಾನ್ ಎಂಬುದು ಇರಾನಿನ ಒಂದು ಪ್ರದೇಶವಾಗಿದೆ.

ಇದನ್ನೂ ಓದಿ: ವಿಶ್ವ ಭೂಮಿ ದಿನ; ಪ್ರಾಜೆಕ್ಟ್ ಟೈಗರ್: ಹುಲಿ ಸಂರಕ್ಷಣೆಯ ಹಾದಿಯಲ್ಲಿ ಐವತ್ತು ವರ್ಷಗಳು

ಈ ಮರಗಳ ಮೂಲ ಆಫ್ರಿಕಾ ಖಂಡವಾಗಿದ್ದು ಒಟ್ಟು ಒಂಭತ್ತು ಪ್ರಬೇಧಗಳು ಕಂಡುಬರುತ್ತವೆ. ಅದರಲ್ಲಿಯ ಆರು ಪ್ರಬೇಧಗಳು ಮಡಗಾಸ್ಕರ್ ದ್ವೀಪದಲ್ಲಿ ಕಂಡುಬಂದರೆ ಎರಡು ಪ್ರಬೇಧಗಳು ಆಫ್ರಿಕಾದ ಮುಖ್ಯ ಭೂಮಿಯಲ್ಲಿ (mainland) ಕಂಡುಬರುತ್ತವೆ. ಇನ್ನುಳಿದ ಒಂದು ಪ್ರಬೇಧವು ದೂರದ ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತದೆ. ಇದು ಅಲ್ಲಿ ಹೇಗೆ ಹೋಯಿತು ಎಂಬುದೇ ಸೋಜಿಗ. ಇದು ಭೂಖಂಡಗಳು ಬೇರ್ಪಟ್ಟಾಗ (continental drift) ಒಂದು ಪ್ರಬೇಧ ಅಲ್ಲಿ ವಿಕಾಸ ಹೊಂದಿರಬಹುದು; ಇಲ್ಲವೇ 70000 ವರ್ಷಗಳ ಹಿಂದೆ ಆಫ್ರಿಕಾದಿಂದ ಉಂಟಾದ ಮಾನವ ವಲಸೆಯ ಕಾರಣದಿಂದಾಗಿಯೂ ಅಲ್ಲಿ ಬಾಓಬಾಬ್ ಮರಗಳು ಪಸರಿಸಿ ಹೊಸ ಪ್ರಬೇಧವಾಗಿ ವಿಕಾಸವಾಗಿರಬಹುದು. ಇವುಗಳಲ್ಲಿ ನಮ್ಮ ದೇಶದಲ್ಲಿ ಕಂಡುಬರುವ ಮರಗಳು adansonia digitata ಎಂಬ ಬಾಓಬಾಬ್ ಮರಗಳ ಪ್ರಬೇಧಕ್ಕೆ ಸೇರಿವೆ. ಇವುಗಳ ಎಲೆಯ ಐದು ಕವಲುಗಳನ್ನು ಹೊಂದಿದ್ದು ಅವು ಕೈನ ಐದು ಬೆರಳುಗಳಂತೆ ಕಾಣುತ್ತವೆ, ಲ್ಯಾಟಿನ್ ಭಾಷೆಯಲ್ಲಿ ಡಿಜಿಟ್ ಅಂದರೆ ಬೆರಳು, ಹಾಗಾಗಿ ಇವಕ್ಕೆ digitata ಎಂಬ ಹೆಸರನ್ನು ಕೊಡಲಾಗಿದೆ.

ಈ ಮರವು ನೈಸರ್ಗಿಕವಾಗಿ ಒಣ ಕುರುಚಲು ಅಥವಾ ಮರುಭೂಮಿ ಪ್ರದೇಶದಲ್ಲಿ ಬೆಳೆಯುತ್ತದೆ. ಈ ಮರ ತನ್ನ ಗಾತ್ರ ಮತ್ತು ಆಕೃತಿಯಿಂದ ಗಮನ ಸೆಳೆಯುವುದು ಮಾತ್ರವಲ್ಲ, ಮರುಭೂಮಿ ಜನರ ಜೀವನಾಡಿಯಾಗಿದೆ. ಈ ಮರವನ್ನು ಜೀವದಾಯಿ ಮರವೆಂದೂ ಕರೆಯುತ್ತಾರೆ. ಇದು ಮಳೆ ಕಡಿಮೆಯಿರುವ ಒಣ ಪ್ರದೇಶದಲ್ಲಿ ಬೆಳೆಯುವದರಿಂದ, ಅಲ್ಲಿ ಮಳೆ ಬಂದ ಸಂದರ್ಭದಲ್ಲಿ ಅದು ತನ್ನ ಕಾಂಡದೊಳಗೆ ಸಾವಿರಾರು ಗ್ಯಾಲನ್‌ಗಳಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಬಿರುಬೇಸಿಗೆಯ ಕಾಲದಲ್ಲಿ ಪ್ರಾಣಿಪಕ್ಷಿಗಳು ಮತ್ತು ಅಲ್ಲಿನ ಜನರು ಈ ನೀರನ್ನು ಉಪಯೋಗಿಸುತ್ತಾರೆ. ಇದೇ ತರಹದ ವ್ಯವಸ್ಥೆಯನ್ನು ನಮ್ಮದೇ ನಾಡಿನ ಮತ್ತಿ ಮರವೂ ಮಾಡಿಕೊಂಡಿದೆ. ನಮ್ಮ ನಾಡಿನ ಸೋಲಿಗರು ಮತ್ತಿತರ ಮೂಲನಿವಾಸಿಗಳಿಗೆ ಇದು ಚಿರಪರಿಚಿತ. ಅಷ್ಟೇ ಅಲ್ಲದೆ ಈ ಮರದ ಹಣ್ಣು ಪೋಷಕಾಂಶಗಳ ಆಗರ. ಈ ಹಣ್ಣಿನಲ್ಲಿ ಇರುವಷ್ಟು ವಿಟಮಿನ್ ’ಸಿ’, ಬೇರೆ ಯಾವ ಹಣ್ಣಿನಲ್ಲಿಯೂ ಇಲ್ಲ. ಮುಂಚೆ ಸಮುದ್ರಯಾನ ಮಾಡುವವರು ವಿಟಮಿನ್ ’ಸಿ’ನ ಕೊರತೆಯಿಂದ ಉಂಟಾಗುವ ಸ್ಕರ್ವಿ ರೋಗದಿಂದ ರಕ್ಷಿಸಿಕೊಳ್ಳಲು ಈ ಮರದ ಹಣ್ಣನ್ನೇ ಉಪಯೋಗಿಸುತ್ತಿದ್ದರು. ಬಹುಶಃ ಇದೇ ಕಾರಣಕ್ಕೆ ಸಮುದ್ರಯಾನಿಗಳು ಈ ಮರದ ಬೀಜವನ್ನು ಎಲ್ಲೆಡೆ ಪ್ರಸಾರ ಮಾಡಿರಬಹುದು. ಇನ್ನೊಂದು ವಿಷಯವನ್ನು ಗಮನಿಸುವುದಾದರೆ ಎಲ್ಲೆಲ್ಲಿ ಗುಲಾಮರ ವ್ಯಾಪಾರ ನಡೆಯುತ್ತಿತ್ತೋ ಆ ಎಲ್ಲ ಮಾರ್ಗಗಳಲ್ಲಿ ಮತ್ತು ದೇಶಗಳಲ್ಲಿ ಈ ಮರಗಳು ಕಂಡುಬರುತ್ತವೆ. ಬಹುಶಃ ನಮ್ಮ ದೇಶದಲ್ಲೂ ಸಿದ್ದಿಗಳ ಆಗಮನ ಮತ್ತು ಈ ಮರಗಳ ಪ್ರಸರಣಕ್ಕೆ ಒಂದಕ್ಕೊಂದು ಸಂಬಂಧವಿದ್ದಿರಬಹುದು. ಈ ಮರಗಳು ಸಾವಿರಾರು ವರ್ಷಗಳ ಇತಿಹಾಸವನ್ನು ತಮ್ಮೊಳಗೆ ಇರಿಸಿಕೊಂಡು ಇನ್ನೂ ನಿಂತಿವೆ. ಇನ್ನು ಇಂತಹ ಮರಗಳ ರಕ್ಷಣೆಯ ಕುರಿತು ಹೇಳಬಹುದಾದರೆ, ಅವುಗಳನ್ನು ನಮ್ಮ ದೇಶದಲ್ಲಿ ಸ್ಮಾರಕ ವೃಕ್ಷವಾಗಿ ಉಳಿಸಿಕೊಳ್ಳಬಹುದು, ಆದರೆ ಬಹುಮುಖ್ಯವಾಗಿ, ಅವುಗಳ ನೈಸರ್ಗಿಕ ಅವಾಸದಲ್ಲಿ ಅವುಗಳ ರಕ್ಷಣೆ ಆಗಬೇಕಿದೆ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...