ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಯಾಗಿರುವ ಕ್ರಾಂತಿಕಾರಿ ತೆಲುಗು ಕವಿ, ಹೋರಾಟಗಾರ ವರವರ ರಾವ್ ಅವರಿಗೆ ಬಾಂಬೆ ಹೈಕೋರ್ಟ್ ಸೋಮವಾರ ವೈದ್ಯಕೀಯ ಆಧಾರದ ಮೇಲೆ ಆರು ತಿಂಗಳ ಕಾಲ ಮಧ್ಯಂತರ ಜಾಮೀನು ನೀಡಿದೆ. 82 ವರ್ಷದವರಾಗಿರುವ ವರವರ ರಾವ್, ಅವರ ಪತ್ನಿ ಪಿ.ಹೆಮಲತಾ ಅವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ಆದೇಶ ಹೊರಬಂದಿದೆ. ಹೇಮಲತಾ ವೈದ್ಯಕೀಯ ಕಾರಣಗಳಿಗಾಗಿ ತಾತ್ಕಾಲಿಕ ಜಾಮೀನು ಕೋರಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಆಗಸ್ಟ್ 2018 ರಿಂದ ವಿಚಾರಣೆಗೆ ಕಾಯುತ್ತಿರುವ ವರವರ ರಾವ್, ಆರು ತಿಂಗಳ ಜಾಮೀನು ಅವಧಿಯ ನಂತರ ಶರಣಾಗಬೇಕು ಅಥವಾ ಜಾಮೀನು ವಿಸ್ತರಣೆಗೆ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.
ವರವರ ರಾವ್ ಅವರು ಮುಂಬೈಯಲ್ಲಿಯೇ ಇರಬೇಕಿದ್ದು ಮತ್ತು ತನಿಖೆಗೆ ಲಭ್ಯವಾಗಬೇಕು ಎಂಬ ಷರತ್ತಿನ ಮೇಲೆ ಜಾಮೀನು ನೀಡಲಾಗಿದೆ. ನ್ಯಾಯಾಲಯವು 50,000 ರೂ.ಗಳ ವೈಯಕ್ತಿಕ ಬಾಂಡ್ ನೀಡಲು ಮತ್ತು ಎನ್ಐಎ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುವಂತೆ ಕೇಳಿದೆ. “ಆದಾಗ್ಯೂ, ಅವರು ಎನ್ಐಎ ನ್ಯಾಯಾಲಯದ ಮುಂದೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಪಡೆಯಬಹುದು” ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ಭೀಮಾ ಕೋರೆಗಾಂವ್ ಪ್ರಕರಣ: ಸಾಕ್ಷ್ಯ ಸಂಗ್ರಹಿಸಲು ಹೆಣಗುತ್ತಿರುವ NIA!
ವರವರ ರಾವ್ ಅವರು ವಾಟ್ಸಾಪ್ ಕರೆಯ ಮೂಲಕ ಹದಿನೈದು ದಿನಕ್ಕೊಮ್ಮ ಹತ್ತಿರದ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕಾಗುತ್ತದೆ. ಮುಂಬೈನಲ್ಲಿ ಅವರು ವಾಸಿಸುವ ಸ್ಥಳ, ಸಂಪರ್ಕ ಸಂಖ್ಯೆ ಮತ್ತು ಅವರೊಂದಿಗೆ ವಾಸಿಸುವ ಸಂಬಂಧಿಕರ ಸಂಖ್ಯೆಯ ಬಗ್ಗೆ ಕೂಡಲೇ ಅವರು ಹೈಕೋರ್ಟ್‌ಗೆ ತಿಳಿಸಬೇಕಾಗುತ್ತದೆ.
2018 ರಿಂದ ಜೈಲಿನ ಅಧಿಕಾರಿಗಳು ವರವರ ರಾವ್‌ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.
ಡಿಸೆಂಬರ್ 31, 2017 ರಂದು ಪುಣೆಯಲ್ಲಿ ಎಲ್ಗರ್ ಪರಿಷತ್ ಸಮಾವೇಶ ನಡೆದಿತ್ತು. ಈ ಸಮಾವೇಶದ ಮರುದಿನ ಪಶ್ಚಿಮ ಮಹಾರಾಷ್ಟ್ರದ ಹೊರವಲಯದಲ್ಲಿರುವ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದ ಬಳಿ ಹಿಂಸಾಚಾರ ಭುಗಿಲೆದ್ದಿತ್ತು. ಸಮಾವೇಶದಲ್ಲಿ ಇವರು ಉದ್ರೇಕಕಾರಿ ಭಾಷಣ ಮಾಡಿದ್ದಾರೆ, ಇದರಿಂದಾಗಿ ಹಿಂಸಾಚಾರ ಸಂಭವಿಸಿದೆ ಎಂದು ಆರೋಪಿಸಿ ಅವರನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಭೀಮಾ ಕೋರೆಗಾಂವ್ ಕಾರ್ಯಕರ್ತರ ಬಿಡುಗಡೆಗಾಗಿ ಮಹಾರಾಷ್ಟ್ರ ಸರ್ಕಾರದ ಮೇಲೆ ತೀವ್ರ ಒತ್ತಡ


