ಪುದುಚೇರಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಸೋಮವಾರ ಪತನಗೊಂಡಿದ್ದು, ವಿಶ್ವಾಸ ಮತಯಾಚನೆಯಲ್ಲಿ ಸೋತ ನಂತರ ಅಲ್ಲಿನ ಮುಖ್ಯಮಂತ್ರಿ ವಿ. ನಾರಾಯಣಸಾಮಿ ರಾಜೀನಾಮೆ ನೀಡಿದ್ದಾರೆ. ವಿಶ್ವಾಸಮತ ಯಾಚನೆಯಲ್ಲಿ ತಮ್ಮ ಸರ್ಕಾರದ ಬಹುಮತವನ್ನು ಸಾಬೀತುಪಡಿಸುವಲ್ಲಿ ಮುಖ್ಯಮಂತ್ರಿ ವಿಫಲರಾಗಿದ್ದಾರೆ ಎಂದು ಸ್ಪೀಕರ್ ವಿ.ಪಿ.ಶಿವಕೋಳುಂದು ಘೋಷಿಸಿದ್ದಾರೆ.
ಒಂದು ದಿನದ ವಿಶೇಷ ಅಧಿವೇಶನಕ್ಕಾಗಿ ವಿಧಾನಸಭೆ ಸಭೆ ಸೇರಿದ ಕೆಲವೇ ನಿಮಿಷಗಳಲ್ಲಿ ವಿಶ್ವಾಸಾರ್ಹ ಮತ ಚಲಾಯಿಸುವಂತೆ ಕೋರಿ ನಾರಾಯಣಸಾಮಿ ಅವರು ಈ ನಿರ್ಣಯ ಮಂಡಿಸಿದ್ದರು.
ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ತಮ್ಮ ಸರ್ಕಾರವನ್ನು ಉರುಳಿಸಲು “ಪ್ರತಿಪಕ್ಷಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ” ಎಂದು ಮುಖ್ಯಮಂತ್ರಿ ಆರೋಪಿಸಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ಬಳಿ ಮೀನುಗಾರ ಮಹಿಳೆಯ ಅಳಲು: ತಪ್ಪಾಗಿ ಭಾಷಾಂತರಿಸಿದ ಪುದುಚೇರಿ ಸಿಎಂ!
“ನಾವು ಡಿಎಂಕೆ ಮತ್ತು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸಿದ್ದೇವೆ. ಅದರ ನಂತರ, ನಾವು ವಿವಿಧ ಚುನಾವಣೆಗಳನ್ನು ಎದುರಿಸಿದ್ದೇವೆ. ನಾವು ಎಲ್ಲಾ ಉಪಚುನಾವಣೆಗಳಲ್ಲಿ ಗೆದ್ದಿದ್ದೇವೆ. ಪುದುಚೇರಿಯ ಜನರು ನಮ್ಮನ್ನು ನಂಬುತ್ತಾರೆ” ಎಂದಿದ್ದಾರೆ.
33 ಸದಸ್ಯ ಸ್ಥಾನವಿರುವ ಪುರುಚೇರಿ ವಿಧಾನ ಸಭೆಯಲ್ಲಿ ಹಲವು ಶಾಸಕರು ಸರಣಿಯಾಗಿ ರಾಜೀನಾಮೆ ನೀಡಿದ ನಂತರ ಅಲ್ಲಿ 26 ಸದಸ್ಯರಿದ್ದರು. ಕಾಂಗ್ರೆಸ್-ಡಿಎಂಕೆ ಹಾಗೂ ಒಬ್ಬ ಪಕ್ಷೇತರ ಶಾಸಕರು ಸೇರಿದಂತೆ ಒಟ್ಟು 12 ಶಾಸಕರು ಸರ್ಕಾರದ ಪರವಾಗಿದ್ದರು. ಪ್ರತಿಪಕ್ಷಗಳ ಮೈತ್ರಿಕೂಟದಲ್ಲಿ 14 ಶಾಸಕರು ಇದ್ದರು.
ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಗುರುವಾರ ನೇಮಕಗೊಂಡ ತಮಿಳಿಸೈ ಸುಂದರರಾಜನ್ ಅವರು ವಿಶ್ವಾಸ ಮತ ಯಾಚನೆಗೆ ಆದೇಶಿಸಿದ್ದರು. ಪುದುಚೇರಿಯಲ್ಲಿ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. 2016 ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ನೇತೃತ್ವದ ಒಕ್ಕೂಟವು ವಿಜಯಶಾಲಿಯಾಗಿತ್ತು.
ಇದನ್ನೂ ಓದಿ: ಪುದುಚೇರಿ- ಇನ್ನೂ 3 ಜನ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದ ಬಿಜೆಪಿ
