ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಗಳಿಸಿರುವ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ಇಂದು ನಡೆಯಲಿದ್ದು ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆ ಸಾಧ್ಯತೆಯಿದೆ. ಸೋಮವಾರದಂದು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.
ತಮ್ಮ ಚುನಾವಣಾ ಗೆಲುವಿನ ನಂತರ ಔಪಚಾರಿಕವಾಗಿ ಕ್ಯಾಬಿನೆಟ್ ಸಮೇತ ರಾಜೀನಾಮೆ ನೀಡಿದ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಇಂದು ಬಿಜೆಪಿ ಶಾಸಕರ ಸಭೆಯಲ್ಲಿ ಮತ್ತೊಮ್ಮೆ ಸಿಎಂ ಹುದ್ದೆಗೆ ನಾಮನಿರ್ದೇಶನಗೊಳ್ಳಲಿದ್ದಾರೆ ಎಂದು ಪಕ್ಷ ತಿಳಿಸಿದೆ. ಪಟೇಲ್ ಅವರು ಗುಜರಾತ್ ಬಿಜೆಪಿ ಮುಖ್ಯಸ್ಥ ಸಿ ಆರ್ ಪಾಟೀಲ್ ಮತ್ತು ಪಕ್ಷದ ಮುಖ್ಯ ಸಚೇತಕ ಪಂಕಜ್ ದೇಸಾಯಿ ಅವರೊಂದಿಗೆ ಗಾಂಧಿನಗರದ ರಾಜಭವನದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಗೆ ರಾಜೀನಾಮೆ ನೀಡಿದರು.
ಚುನಾವಣೆಗೆ ಮುಂಚಿತವಾಗಿಯೇ ಭೂಪೇಂದ್ರ ಪಟೇಲ್ ಅವರು ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿತ್ತು. ಹಾಗಾಗಿ ಬಹುತೇಕ ಅವರೆ ಮುಂದಿನ ಅವಧಿಗೂ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ.
182 ಸ್ಥಾನಗಳ ಪೈಕಿ 156 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಶನಿವಾರ ಬೆಳಗ್ಗೆ ನೂತನವಾಗಿ ಆಯ್ಕೆಯಾದ ಎಲ್ಲಾ ಶಾಸಕರ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದು, ಹೊಸ ನಾಯಕನನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ಪಟೇಲ್ ರಾಜ್ಯಪಾಲರಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ.
”ಗಾಂಧಿನಗರದಲ್ಲಿರುವ ಪಕ್ಷದ ಕೇಂದ್ರ ಕಚೇರಿ ಕಮಲಂನಲ್ಲಿ ಶನಿವಾರ ಬೆಳಗ್ಗೆ 10 ಗಂಟೆಗೆ ಶಾಸಕರ ಸಭೆ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ನೂತನ ನಾಯಕರ ಆಯ್ಕೆ ಕುರಿತು ರಾಜ್ಯಪಾಲರಿಗೆ ಮಾಹಿತಿ ನೀಡಲಾಗುವುದು. ಅದಕ್ಕಾಗಿ ಅವರಿಂದ ಸಮಯಾವಕಾಶ ಕೋರಿದ್ದೇವೆ. ಪ್ರಮಾಣ ವಚನ ಸ್ವೀಕಾರ, ಹೊಸ ಮುಖ್ಯಮಂತ್ರಿ ಮತ್ತು ಅವರ ಸಂಪುಟ ರಚನೆಯು ರಾಜ್ಯಪಾಲರ ಸೂಚನೆಯಂತೆ ನಡೆಯುತ್ತದೆ ಎಂದು ಸಚೇತಕ ಪಂಕಜ್ ದೇಸಾಯಿ ತಿಳಿಸಿದ್ದಾರೆ.
ಸೋಮವಾರ ಗಾಂಧಿನಗರದ ಹೆಲಿಪ್ಯಾಡ್ ಮೈದಾನದಲ್ಲಿ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಈ ಹಿಂದೆ ಭೂಪೇಂದ್ರ ಪಟೇಲ್ ಘೋಷಿಸಿದ್ದರು.
ಇದನ್ನೂ ಓದಿ: ಹಿಮಾಚಲ ಪ್ರದೇಶ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಜಿಲ್ಲೆಯ 5 ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಸೋಲು


