Homeಅಂತರಾಷ್ಟ್ರೀಯಅತಂತ್ರ ಫಲಿತಾಂಶ: ಮಲೇಷ್ಯಾದಲ್ಲಿ ಹೊಸ ಮೈತ್ರಿಯ ಅಸ್ಥಿರ ಸರ್ಕಾರ!

ಅತಂತ್ರ ಫಲಿತಾಂಶ: ಮಲೇಷ್ಯಾದಲ್ಲಿ ಹೊಸ ಮೈತ್ರಿಯ ಅಸ್ಥಿರ ಸರ್ಕಾರ!

- Advertisement -
- Advertisement -

ದಿವಾನ್ ರಕ್ಯಾತ್ ಎಂದು ಕರೆಯಲ್ಪಡುವ ಮಲೇಷ್ಯಾ ಪಾರ್ಲಿಮೆಂಟ್‌ಗೆ ನವೆಂಬರ್ 19ರಂದು ಚುನಾವಣೆಗಳು ನಡೆದವು. ಪಕ್ಷಾಂತರ ಮತ್ತು ಆಡಳಿತಾರೂಢ ಮೈತ್ರಿಕೂಟದ ಪತನದಿಂದಾಗಿ 8 ತಿಂಗಳು ಮುಂಚಿತವಾಗಿ ಚುನಾವಣೆ ನಡೆಸಲಾಯ್ತು. ಆದರೆ ಅತಂತ್ರ ಲೋಕಸಭಾ ಫಲಿತಾಂಶ ಬಂದಿದ್ದು, ಯಾವುದೇ ಮೈತ್ರಿಕೂಟಕ್ಕೆ ಶೇ.40ಕ್ಕಿಂತ ಹೆಚ್ಚಿನ ಸೀಟುಗಳನ್ನು ಗೆಲ್ಲಲು ಸಾಧ್ಯವಾಗದೆ, ಹೊಸ ಸರ್ಕಾರವನ್ನು ರಚಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಣಾಮವಾಗಿ ವಿಭಿನ್ನ ಸಿದ್ಧಾಂತವುಳ್ಳ ಮೈತ್ರಿಕೂಟಗಳು ಸೇರಿ ಸರ್ಕಾರ ರಚಿಸಬೇಕಾದ ಅನಿವಾರ್ಯತೆ ಉಂಟಾಗಿದ್ದು, ಹೊಸ ಸರ್ಕಾರವು ಅಸ್ಥಿರತೆಯಿಂದ ಕೂಡಿದೆ. ವಿಪಕ್ಷ ನಾಯಕನಾಗಿದ್ದ ಅನ್ವರ್ ಬಿನ್ ಇಬ್ರಾಹಿಂ ಮಲೇಷ್ಯಾದ 10ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಫಲಿತಾಂಶಗಳು

ಮಲೇಷ್ಯಾ ಪಾರ್ಲಿಮೆಂಟಿನ 222 ಸ್ಥಾನಗಳಲ್ಲಿ ಸರಳ ಬಹುಮತಕ್ಕೆ 112 ಸ್ಥಾನಗಳ ಅಗತ್ಯವಿದೆ. ಅನ್ವರ್ ಇಬ್ರಾಹಿಂ ನಾಯಕತ್ವದ ಪಕತನ್ ಹರಪನ್ (ಭರವಸೆಯ ಮೈತ್ರಿ) ಮೈತ್ರಿಕೂಟವು 83 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಮೈತ್ರಿಕೂಟವೆನಿಸಿಕೊಂಡಿದೆ. ಇದೊಂದು ಕಾಸ್ಮೋಪಾಲಿಟನ್ ಪ್ರಗತಿಪರ ಒಕ್ಕೂಟವಾಗಿದ್ದು, ಈ ಚುನಾವಣೆಯಲ್ಲಿ ಯುವಜನರ ಮತ್ತು ಅಲ್ಪಸಂಖ್ಯಾತರ ಬೆಂಬಲವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. 2019ರ ಸಾಂವಿಧಾನಿಕ ತಿದ್ದುಪಡಿಯ ನಂತರ ನಡೆದು ಅತಿ ನಿರ್ಣಾಯಕ ಚುನಾವಣೆ ಇದಾಗಿತ್ತು. ತಿದ್ದುಪಡಿಯನ್ವಯ ಮತದಾರರ ವಯಸ್ಸಿನ ಮಿತಿಯನ್ನು ಕಡಿಮೆ ಮಾಡಿದ ಪರಿಣಾಮ ಅತಿ ಹೆಚ್ಚಿನ ಯುವಜನರು ಮೊದಲ ಬಾರಿಗೆ ಮತದಾನ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ 1.23 ಕೋಟಿ ಮತದಾರರಿದ್ದರೆ ಈ ಬಾರಿ ಆ ಸಂಖ್ಯೆ 1.60 ಕೋಟಿಗೆ ಏರಿತ್ತು. ಇಷ್ಟು ಮತದಾರರಲ್ಲಿ ಸುಮಾರು ಶೇ.25ರಷ್ಟು ಜನರು 18ರಿಂದ 20 ವರ್ಷ ಆಸುಪಾಸಿನವರಾಗಿದ್ದಾರೆ ಎನ್ನಲಾಗಿದೆ.

ಮಾಜಿ ಪ್ರಧಾನಿ ಮುಹ್ಯುದ್ದೀನ್ ಯಾಸಿನ್ ನಾಯಕತ್ವದ ಪೆರಿಕತನ್ ನ್ಯಾಸಿನಲ್ (ರಾಷ್ಟ್ರೀಯ ಒಕ್ಕೂಟ) ಮೈತ್ರಿಕೂಟವು ಎರಡನೇ ಅತಿ ದೊಡ್ಡ ಮೈತ್ರಿಕೂಟವಾಗಿ ಹೊರಹೊಮ್ಮಿದೆ. ಇದು 72 ಸ್ಥಾನಗಳನ್ನು ಅಂದರೆ ಸುಮಾರು ಮೂರನೇ ಒಂದು ಭಾಗದಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಒಕ್ಕೂಟವು ಸಂಪ್ರದಾಯವಾದಿ ರಾಷ್ಟ್ರೀಯತಾವಾದಿ ಒಕ್ಕೂಟವಾಗಿದೆ.

ಮಹತೀರ್ ಬಿನ್ ಮೊಹಮದ್

ಬಲಪಂಥೀಯ ಬ್ಯಾರಿಸನ್ ನ್ಯಾಸಿನಲ್ (ನ್ಯಾಷನಲ್ ಫ್ರಂಟ್) ಮೈತ್ರಿಕೂಟವು ಈ ಚುನಾವಣೆಯಲ್ಲಿ ಗಣನೀಯ ಸೋಲು ಕಂಡು ಕೇವಲ 30 ಸ್ಥಾನ ಪಡೆಯುವುದರೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ. ಈ ಮೈತ್ರಿಕೂಟದ ಹಲವು ಸ್ಥಾನಗಳು ಈ ಬಾರಿ ಪೆರಿಕತನ್ ನ್ಯಾಷಿನಲ್ ಒಕ್ಕೂಟದ ಪಾಲಾಗಿವೆ. ಇನ್ನು 1946ರಲ್ಲಿ ಮಲೇಷ್ಯಾ ಸ್ವಾತಂತ್ರ್ಯ ಪಡೆದ ನಂತರ ಬಹುಕಾಲ ಆಳ್ವಿಕೆ ನಡೆಸಿದ ಮಲೇಷ್ಯಾದ ಗ್ರಾಂಡ್ ಓಲ್ಡ್ ಪಕ್ಷ ಎಂದು ಕರೆಸಿಕೊಳ್ಳುವ ಯುನೈಟೆಡ್ ಮಲಯ್‌ಸ್ ನ್ಯಾಷನಲ್ ಆರ್ಗನೈಸೇಶನ್ (UMNO) ಭಾರೀ ಸೋಲು ಕಂಡಿದೆ. ಈ ಪಕ್ಷವು ಬ್ಯಾರಿಸನ್ ನ್ಯಾಸಿನಲ್ ಒಕ್ಕೂಟದ ಭಾಗವಾಗಿ ಕಣಕ್ಕಿಳಿದಿತ್ತು. ಆದರೆ ಈ ಒಕ್ಕೂಟವು ಅಧಿಕಾರದಿಂದ ದೂರ ಸರಿದಿರುವುದು ಮಲೇಷ್ಯಾದ ರಾಜಕೀಯ ನೀತಿಯಲ್ಲಿ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ.

ಮಲೇಷ್ಯಾದ ನಾಯಕತ್ವ ಬಿಕ್ಕಟ್ಟಿನ ಇತಿಹಾಸ

1990ರ ದಶಕದಲ್ಲಿ ಮಲೇಷ್ಯಾವು ಹೆಚ್ಚಿನ ಆರ್ಥಿಕ ಬೆಳವಣಿಗೆಯನ್ನು ಕಂಡಿತು. ಪ್ರಾಥಮಿಕವಾಗಿ ರಬ್ಬರ್ ಉತ್ಪಾದಿಸುವ ದೇಶದಿಂದ ಅಭಿವೃದ್ಧಿ ಹೊಂದಿದ ದೇಶವಾಗಿ ಮಾರ್ಪಾಟಾಯಿತು. ಆಗ್ನೇಯ ಏಷ್ಯಾದ ಇತರ ದೇಶಗಳಂತೆ ಮಲೇಷ್ಯಾ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದು ಹಲವರು ಭವಿಷ್ಯ ನುಡಿದರು. ಆದರೆ 1990ರ ದಶಕದ ಉತ್ತರಾರ್ಧದಲ್ಲಿ ಏಷ್ಯಾದ ಆರ್ಥಿಕ ಕುಸಿತವು ಆ ಭವಿಷ್ಯವಾಣಿಗಳನ್ನು ಸುಳ್ಳಾಗಿಸಿತು.

ಈ ಸಮಯದಲ್ಲಿ ದೇಶವನ್ನು ಮಹತೀರ್ ಬಿನ್ ಮೊಹಮದ್ ಮುನ್ನಡೆಸಿದರು. ಮಹತಿರ್ ಮಲಯ ಜನಾಂಗ ಶ್ರೇಷ್ಠತೆಯ ಪ್ರತಿಪಾದಕರಾಗಿದ್ದರು. ಮಲೇಷ್ಯಾದಲ್ಲಿನ ಗಣನೀಯ ತಮಿಳು ಮತ್ತು ಚೀನೀ ಜನಸಂಖ್ಯೆಯ ವಿರುದ್ಧ ಸ್ಥಳೀಯ ಮಲಯ ಜನರನ್ನು ಪ್ರಚೋದಿಸುತ್ತಿದ್ದರು. ಇತರ ಎರಡು ಮುಖ್ಯ ಸಮುದಾಯಗಳಿಗಿಂತ ಕಡಿಮೆ ಸಂಖ್ಯೆಯಲ್ಲಿದ್ದರೂ ಸಹ ಮಲೇಷ್ಯಾ ಸರ್ಕಾರವು ಮಲಯ ಜನಸಂಖ್ಯೆಗೆ ಹೆಚ್ಚಿನ ರಾಜಕೀಯ ಪ್ರಾಮುಖ್ಯತೆಯನ್ನು ನೀಡಿತು. ಮಲಯರು ಪ್ರಧಾನವಾಗಿ ಮುಸ್ಲಿಮರಾಗಿದ್ದು, ಇಸ್ಲಾಂ ರಾಷ್ಟ್ರಧರ್ಮವಾಗಿರಬೇಕೆಂಬುದು ಮಹತಿರ್‌ರವರ ಸಿದ್ಧಾಂತವಾಗಿತ್ತು.

ಇದನ್ನೂ ಓದಿ: ಬ್ರೆಜಿಲ್‌ನಲ್ಲಿ ಲೂಲಾ ಜಯ, ವಿಶ್ವದ ಜಯವೂ ಹೌದು!

ಮಹತಿರ್ ಯುನೈಟೆಡ್ ಮಲಯ್‌ಸ್ ನ್ಯಾಷನಲ್ ಆರ್ಗನೈಸೇಶನ್ (UMNO) ನಾಯಕರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಎರಡು ಬಾರಿ ಮಲೇಷ್ಯಾ ಪ್ರಧಾನಿಯಾಗಿರುವ ಇವರು 24 ವರ್ಷಗಳ ಕಾಲ ದೇಶದ ಪ್ರಧಾನಿಯಾದ ದಾಖಲೆ ಹೊಂದಿದ್ದಾರೆ. UMNO ಮಲಯ ಕೇಂದ್ರಿತ ಸಂಪ್ರದಾಯವಾದಿ ಪಕ್ಷವಾಗಿದ್ದು, ಅದು ಮಲೇಷ್ಯಾದ ತ್ವರಿತ ಅಭಿವೃದ್ಧಿಗೆ ಕಾರಣವಾಗುವ ಅನೇಕ ನೀತಿಗಳನ್ನು ಜಾರಿಗೊಳಿಸಿತು. ಆದರೆ ಅದು ದೇಶದ ಮಲಯೇತರರೊಂದಿಗೆ ತೆರೆದುಕೊಳ್ಳಲು ಯತ್ನಿಸಿ ವಿಫಲವಾಯಿತು. ಆನಂತರ ಅದು ದೇಶದ ಚೀನೀ ಮತ್ತು ಭಾರತೀಯ/ತಮಿಳು ಜನಸಂಖ್ಯೆಯನ್ನು ಪ್ರತಿನಿಧಿಸುವ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಪರಿಪಾಠ ಆರಂಭಿಸಿತು. ಮುಖ್ಯವಾಗಿ ಮಲೇಷ್ಯಾದಲ್ಲಿನ ಚೀನಿಯರನ್ನು ಪ್ರತಿನಿಧಿಸುವ ಚೈನೀಸ್ ಕಾಂಗ್ರೆಸ್ ಮತ್ತು ಭಾರತೀಯ ತಮಿಳರನ್ನು ಪ್ರತಿನಿಧಿಸುವ ಮಲೇಷಿಯನ್ ಇಂಡಿಯನ್ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾ ಬಂದಿತು.

ಆದರೆ ಯಾವಾಗ ಹಠಾತ್ ಆರ್ಥಿಕ ಕುಸಿತ ಸಂಭವಿಸಿತೋ ಅದು ದೇಶದ ನಾಯಕತ್ವದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಯಿತು. ಪಕ್ಷದೊಳಗೆ ಮಹತಿರ್ ನಾಯಕತ್ವದ ಬಗ್ಗೆ ಅಸಮಾಧಾನಗಳು ಭುಗಿಲೆದ್ದವು. ಇದು ಮಲೇಷ್ಯಾ ಆರ್ಥಿಕ ಚಟುವಟಿಕೆಗಳು ಸುಧಾರಿಸಿಕೊಳ್ಳುವವರೆಗೂ ದಶಕಗಳ ಕಾಲ ಅವರನ್ನು ಕಾಡಿತು. ಅವರು 2003ರಲ್ಲಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದರು. ಕೊನೆಗೆ 2016ರಲ್ಲಿ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ UMNO ಪಕ್ಷ ತೊರೆದು ಮಲೇಷಿಯನ್ ಯುನೈಟೆಡ್ ಇಂಡಿಜಿನಸ್ ಪಾರ್ಟಿ (ಮಲೇಷಿಯಾದಲ್ಲಿ BERSATU ಅಥವಾ PPBM ಎಂದೂ ಕರೆಯುತ್ತಾರೆ) ಕಟ್ಟಿದರು. ಮಾತ್ರವಲ್ಲದೆ ಕೇಂದ್ರದಲ್ಲಿ ನಿಂತು ವಿರೋಧಿ ಮೈತ್ರಿಕೂಟವಾದ ಪಕತನ್ ಹರಪನ್‌ನೊಂದಿಗೆ ಮೈತ್ರಿ ಮಾಡಿಕೊಂಡರು ಮತ್ತು 2018ರಲ್ಲಿ ಮತ್ತೆ ಪ್ರಧಾನಿಯಾಗಿ ಆಯ್ಕೆಯಾದರು.

ಶೆರಟಾನ್ ಮೂವ್

2018ರಿಂದ ಆಡಳಿತಾರೂಢ ಮೈತ್ರಿಕೂಟ ಸರ್ಕಾರವು ಬಹುಮತವನ್ನು ಉಳಿಸಿಕೊಳ್ಳಲು ಸಣ್ಣ ಪಕ್ಷಗಳ ಮೇಲೆ ಅವಲಂಬಿತವಾಗಿದೆ. ಇದು ನಾಯಕತ್ವದಲ್ಲಿ ದೊಡ್ಡ ಅಸ್ಥಿರತೆಗೆ ಕಾರಣವಾಗಿದೆ. ಏಕೆಂದರೆ ಪಕತನ್ ಹರಪನ್ ಮೈತ್ರಿಕೂಟದಲ್ಲಿ ಎರಡು ವರ್ಷ ಮಹತಿರ್ ಪ್ರಧಾನಿಯಾಗಿ ಆನಂತರ ಎರಡು ವರ್ಷ ಅನ್ವರ್ ಇಬ್ರಾಹಿಂ ಪ್ರಧಾನಿಯಾಗುತ್ತಾರೆ ಎಂದು ಒಪ್ಪಂದವಾಗಿತ್ತು. ಅದರಂತೆ 2020ರಲ್ಲಿ ಮಹತಿರ್ ಅಧಿಕಾರ ಹಸ್ತಾಂತರ ಮಾಡುವ ಬದಲು ಹೊಸ ಮೈತ್ರಿಕೂಟಗಳೊಂದಿಗೆ ಸೇರಿ ಸರ್ಕಾರ ರಚಿಸುವ ವಿಫಲ ಪ್ರಯತ್ನ ನಡೆಸಿದರು.

ಮಹತಿರ್ ಅವರಿಗೆ ಬೆಂಬಲ ಸೂಚಿಸಿ 131 ಎಂಪಿಗಳು ಫೆಬ್ರವರಿ 2020ರಲ್ಲಿ ಶೆರಟಾನ್ ಹೋಟೆಲ್‌ನಲ್ಲಿ ಸಭೆ ಸೇರಿದರು. ಆದರೆ ಅಲ್ಲಿ ಮಹತಿರ್ ಹಾಜರಿರಲಿಲ್ಲ. ಮಲೇಷ್ಯಾದ ಮಾಧ್ಯಮಗಳು ಈ ನಡೆಯನ್ನು ಶೆರಟಾನ್ ಮೂವ್ ಎಂದು ಕರೆದವು. ಆದರೆ ಮಹತಿರ್ ಹೊಸ ಸರ್ಕಾರದಲ್ಲಿ UMNO ಪಕ್ಷದ ಮುಖಂಡರು ಇದ್ದಲ್ಲಿ ಅಲ್ಲಿ ತಾನು ಇರುವುದಿಲ್ಲ ಎಂದು ನಿರ್ಧರಿಸಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮುಹ್ಯುದ್ದೀನ್ ಯಾಸಿನ್ ದೇಶದ ನೂತನ ಪ್ರಧಾನಿಯಾದರು. ಆದರೂ ಮುಂದಿನ ಎರಡು ವರ್ಷಗಳ ಕಾಲ, ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಸ್ಥಾನಗಳನ್ನು ಬದಲಾಯಿಸುತ್ತಲೇ ಇದ್ದವು. ಸರ್ಕಾರ ಅಸ್ಥಿರವಾಗಿತ್ತು. ಈ ಅಸ್ಥಿರತೆಯು ಅಂತಿಮವಾಗಿ, ಅವಧಿಗೂ 8 ತಿಂಗಳ ಮೊದಲೇ ಸರ್ಕಾರದ ಪತನಕ್ಕೆ ಕಾರಣವಾಯಿತು. ಹಾಗಾಗಿ 2022ರಲ್ಲಿ ಹೊಸ ಚುನಾವಣೆಗಳು ನಡೆಯುವಂತಾಯಿತು. 2021ರಲ್ಲಿ, ಕೋವಿಡ್ ಸಾಂಕ್ರಾಮಿಕ ಮತ್ತು ಮಲೇಷ್ಯಾದಲ್ಲಿ ರಾಜಕೀಯ ನಾಯಕತ್ವದ ಬಿಕ್ಕಟ್ಟಿನ ನಡುವೆ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು.

ಮಹತಿರ್ ಪತನ

2022ರ ಚುನಾವಣೆಯಲ್ಲಿ ಮಹತಿರ್ ಹೋಮ್‌ಲ್ಯಾಂಡ್ಸ್ ಫೈಟರ್ ಪಾರ್ಟಿ ಎಂಬ ಹೊಸ ಪಕ್ಷ ಕಟ್ಟಿದ್ದರು ಮತ್ತು ಬ್ಯಾರಿಸನ್ ನ್ಯಾಸಿನಲ್ ಎಂಬ ಬಲಪಂಥೀಯ ಒಕ್ಕೂಟದ ಭಾಗವಾಗಿದ್ದರು. ಮಲಯ ರಾಷ್ಟ್ರೀಯತೆಯನ್ನು ಮತ್ತೆ ಮುನ್ನಲೆಗೆ ತರುವ ಅವರ ಪ್ರಯತ್ನದಿಂದಾಗಿ ದೇಶದ ಅಲ್ಪಸಂಖ್ಯಾತರು ಪಕತನ್ ಹರಪನ್ ಎಂಬ ಪ್ರಗತಿಪರ ಮೈತ್ರಿಕೂಟದ ಪರ ವಾಲಿದರು. ಪರಿಣಾಮವಾಗಿ ಮಹತಿರ್ ತೀವ್ರ ಮುಖಭಂಗ ಅನುಭವಿಸಬೇಕಾಯಿತು. ಅವರ ಮೈತ್ರಿಕೂಟ ಹೀನಾಯವಾಗಿ ಸೋತಿದ್ದಲ್ಲದೇ ಸ್ವತಃ ಮಹತಿರ್ ಲಂಕಾವಿ ಕ್ಷೇತ್ರದಲ್ಲಿನ ತಮ್ಮ ಸಂಸದೀಯ ಸ್ಥಾನವನ್ನು ಕಳೆದುಕೊಂಡರು. 53 ವರ್ಷಗಳ ನಂತರ ಅವರ ಮೊದಲ ಚುನಾವಣಾ ಸೋಲು ಇದಾಗಿದ್ದು, ಅವರು ಠೇವಣಿ ಕಳೆದುಕೊಂಡು ನಾಲ್ಕನೇ ಸ್ಥಾನಕ್ಕೆ ಕುಸಿದರು. ಅವರ ಪಕ್ಷದಿಂದ ಒಬ್ಬ ಅಭ್ಯರ್ಥಿಯೂ ಸಹ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.

2019ರ ಸಾಂವಿಧಾನಿಕ ತಿದ್ದುಪಡಿ

2019ರ ಸಾಂವಿಧಾನಿಕ ತಿದ್ದುಪಡಿಯಲ್ಲಿ ಪರಿಚಯಿಸಲಾದ ಸುಧಾರಣೆಗಳು ಚುನಾವಣೆಗಳಲ್ಲಿನ ಪ್ರಮುಖ ಬದಲಾವಣೆಗಳಿಗೆ ಕಾರಣವಾಗಿವೆ. 2000 ಮತ್ತು 2010ರ ದಶಕದ ಅಂತ್ಯದ ವೇಳೆಗೂ ಸಹ ಮತದಾರರು ಆಡಳಿತಾರೂಢ ಸರ್ಕಾರದ ಬಗ್ಗೆ ಅತೃಪ್ತರಾಗಿದ್ದರು. ಆದರೆ ಅವರೇನೂ ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ. ಏಕೆಂದರೆ ಸರ್ಕಾರ ಮತದಾರರಾಗುವ ಪ್ರಕ್ರಿಯೆಯನ್ನು ಕ್ಲಿಷ್ಟಗೊಳಿಸಿ ತಮಗೆ ಬೇಕಾದವರನ್ನು ಮಾತ್ರ ಮತದಾರರನ್ನಾಗಿ ಮಾಡುತ್ತಿತ್ತು. ಹಾಗಾಗಿ ಹಲವಾರು ಜನ ಮತದಾರರಾಗಿ ನೋಂದಾಯಿಸಲು ಸಾಧ್ಯವಾಗಲಿಲ್ಲ ಎಂಬ ಆರೋಪಗಳು ಇದ್ದವು. ಅಲ್ಲದೆ ಎರಡು ಸಂಪ್ರದಾಯವಾದಿ ಬಣಗಳ ನಡುವಿನ ವಿಭಜನೆಯಿಂದಾಗಿ ಸಣ್ಣ ಪಕ್ಷಗಳು ಹೆಚ್ಚು ಪ್ರಭಾವಶಾಲಿಯಾಗಲು ಅವಕಾಶ ಮಾಡಿಕೊಟ್ಟಿತು. ಆ ಸಣ್ಣ ಪಕ್ಷಗಳು ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದವು.

ಮುಹ್ಯುದ್ದೀನ್ ಯಾಸಿನ್

ಈ ಹೋರಾಟಗಳಿಂದ ಅನಿವಾರ್ಯವಾಗಿ 2019ರ ಸಾಂವಿಧಾನಿಕ ತಿದ್ದುಪಡಿಯನ್ನು ಮಹತಿರ್ ಸರ್ಕಾರ ಅಂಗೀಕರಿಸಬೇಕಾಯಿತು. ಇದರಿಂದ ಸ್ವಯಂಚಾಲಿತ ಮತದಾರರ ನೋಂದಣಿ ವ್ಯವಸ್ಥೆ ಜಾರಿಗೆ ಬಂದಿತ್ತು ಮತ್ತು ಮತದಾನದ ವಯಸ್ಸನ್ನು 21ರಿಂದ 18 ವರ್ಷಕ್ಕೆ ಇಳಿಸಲಾಯಿತು. ಪರಿಣಾಮವಾಗಿ, 2022ರ ಚುನಾವಣೆಯು ಸುಮಾರು 30% ಹೆಚ್ಚು ಮತದಾರರನ್ನು ಹೊಂದಿತ್ತು. ಸುಮಾರು ನಾಲ್ಕನೇ ಒಂದು ಭಾಗದಷ್ಟು ಹೊಸ ಮತದಾರರು 18-20 ವರ್ಷ ವಯಸ್ಸಿನವರಾಗಿದ್ದರು. ಇಷ್ಟು ದಿನ ಮತದಾನದ ಹಕ್ಕಿಲ್ಲದ ಇವರು ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಈ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳು, ವಿಶೇಷವಾಗಿ ಟಿಕ್‌ಟಾಕ್, ಮಹತ್ವದ ಪಾತ್ರ ನಿರ್ವಹಿಸಿವೆ. ದೇಶದ ರಾಜಕೀಯ ವಿಷಯಗಳ ಕುರಿತ ವಿಡಿಯೋಗಳು ಇವಾಗಿವೆ ಮತ್ತು ಯುವ ರಾಜಕಾರಣಿಗಳು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಜನರನ್ನು ತಲುಪಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸ್ವೀಡನ್ ಸಾರ್ವತ್ರಿಕ ಚುನಾವಣೆಗಳು ಏನನ್ನು ಸೂಚಿಸುತ್ತದೆ?

ಆದರೂ ಈ ಚುನಾವಣೆಯಲ್ಲಿ ಯಾವುದೇ ಮೈತ್ರಿಕೂಟ ಸ್ಪಷ್ಟ ಬಹುಮತ ಸಾಧಿಸಲು ಸಾಧ್ಯವಾಗಿಲ್ಲ. ಅನಿವಾರ್ಯವಾಗಿ ಮೂರು ಮೈತ್ರಿಕೂಟ ಸೇರಿ ಸರ್ಕಾರ ರಚಿಸುವಂತಾಗಿದ್ದು ಇದು ವೈವಿಧ್ಯಮಯದಿಂದ ಕೂಡಿದ ರೈನ್‌ಬೋ ಮೈತ್ರಿಕೂಟವಾಗಿದೆ. ಪ್ರಗತಿಪರ, ಸಂಪ್ರದಾಯವಾದಿ ಮತ್ತು ಮಲಯ ಜನಾಂಗ ಶ್ರೇಷ್ಠತೆಯ ಈ ಮೈತ್ರಿಕೂಟಗಳು ಈಗ ಒಟ್ಟಿಗೆ ಸೇರಿದ್ದು ಯಾವ ರೀತಿ ಮುಂದುವರೆಯುತ್ತವೆ ಎಂಬುದನ್ನು ಭವಿಷ್ಯವೇ ನಿರ್ಧರಿಸಬೇಕಿದೆ.

(ಕನ್ನಡಕ್ಕೆ): ಮುತ್ತುರಾಜು

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...