Homeಅಂತರಾಷ್ಟ್ರೀಯಬ್ರೆಜಿಲ್‌ನಲ್ಲಿ ಲೂಲಾ ಜಯ, ವಿಶ್ವದ ಜಯವೂ ಹೌದು!

ಬ್ರೆಜಿಲ್‌ನಲ್ಲಿ ಲೂಲಾ ಜಯ, ವಿಶ್ವದ ಜಯವೂ ಹೌದು!

- Advertisement -
- Advertisement -

ಅಕ್ಟೋಬರ್ 30, 2022ರಂದು ಲೂಯಿಜ್ ಇನಾಷಿಯೋ ’ಲೂಲಾ’ ಡಾ ಸಿಲ್ವಾ ಅವರು ಬ್ರೆಜಿಲ್‌ನ ಎರಡನೇ ಸುತ್ತಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರು. ಕೊನೆಯಲ್ಲಿ ಸ್ಪರ್ಧೆ ಕಠಿಣವಾಗಿದ್ದರೂ, ಲೂಲಾ 50.9 ಶೇಕಡಾ (ಅರು ಕೋಟಿ) ಮತಗಳನ್ನು ಪಡೆದು ಗೆದ್ದರು. ಈಗಿನ ಅಧ್ಯಕ್ಷ ಜೈರ್ ಬೊಲ್ಸೊನಾರೊಗೆ 49 ಶೇಕಡಾ (5.8 ಕೋಟಿ) ಮತಗಳು ಸಿಕ್ಕಿದವು. ಲೂಲಾ ಅವರಿಗೆ ಆಫ್ರೋ ಬ್ರೆಜಿಲಿಯನ್ ಮತ್ತು ಮೂಲನಿವಾಸಿ ಜನರು ಹೆಚ್ಚಾಗಿರುವ ಉತ್ತರ ಮತ್ತು ಈಶಾನ್ಯ ಭಾಗಗಳಲ್ಲಿ ನಿರ್ಣಾಯಕ ಜಯ ದೊರಕಿತು. ದಕ್ಷಿಣ ಬ್ರೆಜಿಲ್‌ನಲ್ಲಿ ಬೊಲ್ಸೊನಾರೊ ಪ್ರಾಬಲ್ಯ ಇತ್ತು. ಹೆಚ್ಚಿನ ಅನುಕೂಲವಂತರು ಬೊಲ್ಸೊನಾರೊಗೆ ಮತ ಹಾಕಿದರೆ, ಹೆಚ್ಚಿನ ಬಡವರು ಲೂಲಾ ಪರವಾಗಿ ಮತ ಚಲಾಯಿಸಿದರು. ಸಂಪ್ರದಾಯವಾದಿ ಇವಾಂಜೆಲಿಕಲ್ ಚರ್ಚ್‌ಗಳ ಸದಸ್ಯರನ್ನು ಹೊರತುಪಡಿಸಿದರೆ, ವರ್ಗ ವಿಭಜನೆಯ ಗೆರೆ ಸ್ಪಷ್ಟವಾಗಿತ್ತು.

ಅಕ್ಟೋಬರ್ 2ರ ಮೊದಲ ಸುತ್ತಿನ ಚುನಾವಣೆಯಲ್ಲಿ ಲೂಲಾ ಉಳಿದ ಅಭ್ಯರ್ಥಿಗಳ ಮೇಲೆ ಜಯ ಸಾಧಿಸಿದ್ದರು. ಆಗಲೂ ಅವರು ಬೊಲ್ಸೊನಾರೊಗಿಂತ ಹೆಚ್ಚು ಮತಗಳನ್ನು ಗಳಿಸಿದ್ದರೂ, ನಿರ್ಣಾಯಕ 50 ಶೇಕಡಕ್ಕಿಂತ ಹೆಚ್ಚು ಮತಗಳನ್ನು ಪಡೆಯಲು ವಿಫಲರಾಗಿದ್ದರು. ಎರಡನೇ ಸುತ್ತಿನಲ್ಲಿ ಇವರಿಬ್ಬರ ನಡುವಿನ ಮತಗಳ ಅಂತರ ಕಡಿಮೆಯಾದರೂ, ಅಧ್ಯಕ್ಷ ಪದವನ್ನು ಉಳಿಸಿಕೊಳ್ಳಲು ಬೊಲ್ಸೊನಾರೊಗೆ ಸಾಧ್ಯವಾಗಲಿಲ್ಲ. ಬೊಲ್ಸೊನಾರೊ ಬಳಸಿದ ಹಣಬಲ, ಬೀದಿ ಹಿಂಸಾಚಾರ ಮತ್ತು ಸುಳ್ಳು ಸುದ್ದಿ ಅಭಿಯಾನಗಳು ಪ್ರಭಾವ ಬೀರಿದರೂ, ಗೆಲ್ಲುವಷ್ಟು ಪ್ರಭಾವ ಬೀರಲಿಲ್ಲ. 2003ರಿಂದ 2010ರ ತನಕ ಎರಡು ಅವಧಿಗೆ ಅಧ್ಯಕ್ಷರಾಗಿದ್ದ ಲೂಲಾ, ಜನವರಿ 1, 2023ರಂದು ಬ್ರೆಜಿಲಿಯಾದ ಪಾಲಾಸಿಯೊ ದೊ ಪ್ಲಾನಾಲ್ಟೊದಲ್ಲಿ ಹೊಸ ಅಧ್ಯಕ್ಷನಾಗಿ ಕೆಲಸ ಆರಂಭಿಸಲಿದ್ದಾರೆ.

ಮಾನವೀಯತೆಯ ಬಿಕ್ಕಟ್ಟುಗಳು

1945ರಲ್ಲಿ ಹುಟ್ಟಿದ ಲೂಲಾ ಹದಿಹರೆಯದಲ್ಲಿ ಆಟೊಮೊಬೈಲ್ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದರು. ಹತ್ತೊಂಬತ್ತನೇ ವಯಸ್ಸಿನಲ್ಲಿಯೇ ಕೈಗಾರಿಕಾ ಅಪಘಾತದಲ್ಲಿ ಎರಡು ಬೆರಳುಗಳನ್ನು ಕಳೆದುಕೊಂಡರು. ಮಿಲಿಟರಿ ಸರ್ವಾಧಿಕಾರದ (1964-1985) ಉಸಿರುಗಟ್ಟಿಸುವ ವರ್ಷಗಳಲ್ಲಿ ಲೂಲಾ, ಕಾರ್ಮಿಕ ಮತ್ತು ಪ್ರಜಾಪ್ರಭುತ್ವವಾದಿ ಚಳವಳಿಗಳನ್ನು ಕಟ್ಟಿ ಬೆಳೆಸಲು ನೆರವಾದರು. 1980ರಲ್ಲಿ ಇತರ ಎಡಪಂಥೀಯ ಜನರ ಜೊತೆ ಸೇರಿ ವರ್ಕರ್ಸ್ ಪಾರ್ಟಿ (ಪಿ.ಟಿ.) ಕಟ್ಟಿದರು. ಕಾರ್ಮಿಕ ಸಂಘಟನೆಗಳು, 1984ರಲ್ಲಿ ಸ್ಥಾಪನೆಯಾದ ಭೂರಹಿತ ಕಾರ್ಮಿಕರ ಚಳವಳಿಯೂ (ಎಂಎಸ್‌ಟಿ) ಸೇರಿದಂತೆ ಜನಾಂದೋಲನಗಳನ್ನು ಒಳಗೊಂಡ ಪ್ರಬಲವಾದ ಅಭಿಯಾನವನ್ನು ಆರಂಭಿಸಿದರು. ಇದುವೇ ಕ್ರಮೇಣವಾಗಿ ಸರ್ವಾಧಿಕಾರವು ಕೊನೆಗೊಳ್ಳುವುದಕ್ಕೆ ಕಾರಣವಾಯಿತು. ಸರ್ವಾಧಿಕಾರ ಕೊನೆಗೊಂಡ 1986ರಲ್ಲಿ ಲೂಲಾ ರಾಷ್ಟ್ರೀಯ ಕಾಂಗ್ರೆಸ್‌ಗೆ (ಸಂಸತ್ತಿಗೆ) ಆಯ್ಕೆಯಾದರು. ಜನಪ್ರಿಯ ಪ್ರಜಾಪ್ರಭುತ್ವ ಮತ್ತು ಸಮಾಜವಾದಿ ಸಿದ್ಧಾಂತಗಳಿಗೆ ಅವರ ರಾಜಕೀಯ ಬದ್ಧತೆಯು ಹೋರಾಟದ ಆರಂಭದ ದಿನಗಳಲ್ಲಿ ಬಲವಾಗಿ ರೂಪುಗೊಂಡಿತು.

ಬೊಲ್ಸೊನಾರೊ

ಲೂಲಾ ತಮ್ಮ ಅಧ್ಯಕ್ಷೀಯ ಅಧಿಕಾರದ ದಿನಗಳಲ್ಲಿ ಆದಷ್ಟು ಮಟ್ಟಿಗೆ ಹಸಿವು, ಅನಕ್ಷರತೆ, ವಸತಿರಹಿತತೆ ಮುಂತಾದ ಮಾನವೀಯತೆಯ ಬಿಕ್ಕಟ್ಟುಗಳನ್ನು ನಿವಾರಿಸುವ ವ್ಯವಸ್ಥೆಗಳನ್ನು ಬಲಗೊಳಿಸಲು ಯತ್ನಿಸಿದರು. ಹಸಿವು ನಿವಾರಣೆಗೆ ತಂದ ಫೋಮೆ ಝೀರೋ (ಶೂನ್ಯ ಹಸಿವು) ಎಂಬ ತೀವ್ರವಾದ ಅಭಿಯಾನವು ದೇಶದಲ್ಲಿ ಹಸಿವನ್ನು ಹಿಮ್ಮೆಟ್ಟಿಸುವುದರಲ್ಲಿ ಯಶಸ್ವಿಯಾದುದೇ ಅಲ್ಲದೆ, 2010ರಲ್ಲಿ ವಿಶ್ವಸಂಸ್ಥೆಯು ಹಸಿವು ನಿವಾರಣೆಯ ಹೋರಾಟಕ್ಕಾಗಿ ನೀಡುವ ’ಗ್ಲೋಬಲ್ ಚಾಂಪಿಯನ್’ ಎಂಬ ಪ್ರಶಸ್ತಿಯನ್ನೂ ದೊರಕಿಸಿಕೊಟ್ಟಿತು. ಸಾರ್ವಜನಿಕ ವಿಶ್ವವಿದ್ಯಾಲಯಗಳ ಸ್ಥಾಪನೆ, ಸಾರ್ವಜನಿಕ ವಸತಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಸರಕಾರಿ ನಿಧಿಯ ಉಪಯೋಗವು ಬ್ರೆಜಿಲ್‌ನ ಅಭಿವೃದ್ಧಿ ದರವನ್ನು ಹೆಚ್ಚಿಸಿದ್ದು ಮಾತ್ರವಲ್ಲ, ಸಾಮಾಜಿಕ ಅಸಮಾನತೆಯನ್ನು ಕಡಿಮೆ ಮಾಡಿತು.

ಅವರ ನಂತರ ಬಂದ ದಿಲ್ಮಾ ರೋಸೆಫ್ ಅಧ್ಯಕ್ಷತೆಯ ಸಮಯದಲ್ಲಿ, ಈ ಸಮಾಜವಾದಿಗಳ ಸಾಧನೆಯನ್ನು ಬಲಪಂಥೀಯರು ತಿರುವುಮುರುವು ಮಾಡಿದರು. ಒಂದು ಸೂಚಿಯನ್ನು ನೀಡುವುದಾದಲ್ಲಿ ಹಸಿವಿನ ಸೂಚ್ಯಂಕದಲ್ಲಿ ಗಣನೀಯವಾಗಿ ಏರಿಕೆಯಾಯಿತು. ತೀವ್ರವಾದ ಆಹಾರದ ಅಭದ್ರತೆಯು 2018 ಮತ್ತು 2019ರ ನಡುವೆ ಇಮ್ಮಡಿಯಾಗಿ, 1990ರ ತನಕ ಹಿಂದೆಂದೂ ನೋಡಿರದ ಮಟ್ಟಕ್ಕೆ ಮುಟ್ಟಿತು. 2020ರ ಡಿಸೆಂಬರ್ ಹೊತ್ತಿಗೆ, ದೇಶದ ಅರ್ಧದಷ್ಟು ಜನರು ಬಡತನವನ್ನು ಅನುಭವಿಸುತ್ತಿದ್ದರು.

ಇದನ್ನೂ ಓದಿ: “ಬಹಳ ಹಿಂದೆ ನಾನು ಜನರಿಗಾಗಿ ಹಲವು ಕನಸು ಕಂಡಿದ್ದೆ…”: ಬ್ರೆಜಿಲ್‌ನ ಮುಂದಿನ ಅಧ್ಯಕ್ಷ ಲೂಲಾರ 2018ರ ಭಾಷಣ

ಮೊದಲ ಮತ್ತು ಎರಡನೇ ಸುತ್ತುಗಳ ನಡುವೆ ಲೂಲಾ, ’ನಾಳಿನ ಬ್ರೆಜಿಲಿಯನ್ ಜನರಿಗಾಗಿ’ ಒಂದು ಪತ್ರವನ್ನು ಬರೆದರು. ಅದರಲ್ಲಿ ಅವರು ಹದಿಮೂರು ಅಂಶಗಳ ಕಾರ್ಯಕ್ರಮವನ್ನು ಮುಂದಿಟ್ಟಿದ್ದರು. ಇದು ಕೈಗಾರಿಕೀಕರಣ ಮತ್ತು ಜ್ಞಾನ ಕ್ಷೇತ್ರದ ಆಧುನಿಕೀಕರಣದ ಕಾರ್ಯತಂತ್ರದ ಮೇಲೆ ಆಧರಿತವಾದ, ಹೊಸ ಆರ್ಥಿಕ ಚಲನಶೀಲತೆಯ ತಳಹದಿಯ ಮೇಲೆ ಕಟ್ಟಲಾಗುವ ಸಾಮಾಜಿಕ ಜೀವನದ ಪರಿಸ್ಥಿತಿಯ ಸುಧಾರಣೆಯ ಭರವಸೆ ನೀಡಿತ್ತು. ಬ್ರೆಜಿಲ್- ಕಚ್ಛಾವಸ್ತುಗಳ ರಫ್ತು ಮತ್ತು ಸಿದ್ಧ ವಸ್ತುಗಳ ಆಮದು ಮೂಲಕ ಕಟ್ಟಲಾದ ಆರ್ಥಿಕತೆಯಿಂದ ದೂರ ಸರಿಯಬೇಕು. ಸಾವೋ ಬರ್ನಾರ್ಡೋದ (ಸಾವೋ ಪೌಲೋ ರಾಜುದಲ್ಲಿ) ತನ್ನ ಒಂದು ವಾಹನ ಉತ್ಪಾದನಾ ಘಟಕವನ್ನು ಮುಚ್ಚುವುದಾಗಿ ಫೋರ್ಡ್ ಹೇಳಿದಾಗ, ಬೊಲ್ಸೊನಾರೊ- ತಾನು ಕೈಗಾರಿಕೆ ಕಣ್ಮರೆಯಾಗುವ ಇನ್ನೊಂದು ನಿದರ್ಶನದ ವಿರುದ್ಧ ಹೋರಾಡುವುದಿಲ್ಲ ಎಂದು ಹೇಳಿದರು. ಅಂದರೆ, ಆ ಉತ್ಪಾದನಾ ಘಟಕವನ್ನು ಉಳಿಸಲು ಸರಕಾರಿ ಹಣವನ್ನು ತಾನು ಬಳಸುವುದಿಲ್ಲ ಎಂದು ಹೇಳಿದರು. ಬೊಲ್ಸೊನಾರೊಗೆ ದೊಡ್ಡ ಕಂಪೆನಿಗಳ ಕೃಷಿ ಉದ್ಯಮವು ಆದ್ಯತೆಯ ವಿಷಯವಾಗಿತ್ತು. ಅದೇ ಹೊತ್ತಿಗೆ ಅವರು ದೇಶದ ಕೈಗಾರಿಕಾ ಅಡಿಪಾಯವನ್ನು ನಿರ್ಲಕ್ಷಿಸಿದರು. ಈ ಬದಲಾವಣೆಯ ಚಿತ್ರಣವನ್ನು ವಿಮಾನಗಳ ರಫ್ತುದಾರನಾಗಿದ್ದ ಬ್ರೆಜಿಲ್, ಸೋಯಾಬೀನ್ಸ್ ರಪ್ತುದಾರನಾದುದರಲ್ಲಿ ಕಾಣಬಹುದು. ಬ್ರೆಜಿಲ್ ಕೃತಕ ಉಸಿರಾಟದ ಯಂತ್ರಗಳು, ರಸಗೊಬ್ಬರ ಪೆಟ್ರೋಲ್, ಡೀಸೆಲ್ ಇತ್ಯಾದಿಗಳ ಆಮದಿನ ಮೇಲೆ ಅವಲಂಬಿಸುವ ಅಗತ್ಯ ಇಲ್ಲ. ಇವುಗಳನ್ನೆಲ್ಲಾ ಲೂಲಾ ತನ್ನ ಪತ್ರದಲ್ಲಿ ಬರೆದರು. “ಮೈಕ್ರೋಪ್ರೊಸೆಸರ್, ಉಪಗ್ರಹಗಳು, ವಿಮಾನಗಳು, ತೈಲ ಪ್ಲಾಟ್ಫಾರ್ಮ್‌ಗಳು ಇತ್ಯಾದಿಗಳನ್ನು ಆಮದು ಮಾಡಬೇಕಾದ ಅಗತ್ಯವಿಲ್ಲ. ನಮ್ಮ ದೇಶಕ್ಕೆ ಸಾಮರ್ಥ್ಯ ಇದೆ. ಸಾಫ್ಟ್‌ವೇರ್, ರಕ್ಷಣೆ, ದೂರಸಂಪರ್ಕ ಮತ್ತಿತರ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಈ ಸಾಮರ್ಥ್ಯವನ್ನು ಹೆಚ್ಚಿಸಬೇಕು” ಎಂದೂ ಅವರು ಬರೆದರು.

ಬಲಪಂಥೀಯ ದಾಳಿ

1985ರಲ್ಲಿ ಹೊಸ ಗಣರಾಜ್ಯವು ಸ್ಥಾಪನೆಯಾದ ನಂತರದಿಂದಲೇ ಬ್ರೆಜಿಲಿನ ರಾಜಕೀಯ ವ್ಯವಸ್ಥೆಯು ಸಹಜ ರೀತಿಯಲ್ಲಿ ದುಡಿಯುವ ವರ್ಗ ಮತ್ತು ರೈತಾಪಿ ಜನರಿಗೆ ಪೂರಕವಾಗಿಲ್ಲ. ರಾಜಕೀಯ ಜಗತ್ತಿನ ಮೂರು ಘಟಕಗಳಾದ ಬೀಫ್, ಬೈಬಲ್ ಮತ್ತು ಬುಲೆಟ್- ಮಿಲಿಟರಿ ಮತ್ತು ರಕ್ಷಣಾಪಡೆಗಳು (ಬುಲೆಟ್), ಇವಾಂಜೆಲಿಕಲ್ ಪಾರ್ಲಿಮೆಂಟರಿ ಫ್ರಂಟ್ (ಬೈಬಲ್) ಮತ್ತು ಕೃಷಿ ಮತ್ತು ಅರಣ್ಯ ನಾಶದ ವಿರುದ್ಧ ಇರುವ ಎಲ್ಲಾ ನಿಯಂತ್ರಣಗಳನ್ನು ಕಿತ್ತೆಸೆಯಲು ಬಯಸುವ ಬೃಹತ್ ಕೃಷಿ ಕೈಗಾರಿಕಾ ಸಂಸ್ಥೆಗಳು (ಬೀಫ್)- ಈ ಮೂರು ಘಟಕಗಳು ತೀರಾ ಅವಕಾಶವಾದಿ ಮಧ್ಯಮ ಪಂಥೀಯ ರಾಜಕೀಯ ಪಕ್ಷಗಳ ಜೊತೆಗೆ ಸೇರಿ ರಾಷ್ಟ್ರೀಯ ಸಂಸತ್ತಿನ (ಕಾಂಗ್ರೆಸ್) ಮೇಲೆ ಮತ್ತು ಬಹಳಷ್ಟು ರಾಜ್ಯ ಶಾಸನಸಭೆಗಳ ಮೇಲೆ ಬಲವಾದ ಹಿಡಿತ ಹೊಂದಿವೆ.

ಲೂಲಾ ಮತ್ತು ದಿಲ್ಮಾ ಅವರು ಆರಂಭಿಸಿದ ಕಾರ್ಯಕ್ರಮಗಳಿಂದ ಸಿಟ್ಟುಗೊಂಡ ಈ ರಾಜಕೀಯ ಶಕ್ತಿಗಳು ಜೊತೆಯಾಗಿ ಬ್ರೆಜಿಲಿನ ಮೇಲೆ ಕರಿ ಮೋಡದಂತೆ ಕವಿದು, 2016ರಲ್ಲಿ ಶಾಸನಾತ್ಮಕ ಬಂಡಾಯದ ಮೂಲಕ ದಿಲ್ಮಾ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಿದವು. ಲೂಲಾ ವಿರುದ್ಧ ಕಾನೂನಿನ ಬಲೆ ಹೆಣೆದು, 2018ರಲ್ಲಿ ಅವರನ್ನು 580 ದಿನಗಳ ಕಾಲ ಜೈಲಿಗೆ ಕಳಿಸಿದವು. ’ಲಾ ಫೇರ್’ ಅಥವಾ ಕಾನೂನು ದಾಳಿ ಎಂಬುದು ಬ್ರೆಜಿಲಿನ ಜನರ ಆಡುನುಡಿಯಲ್ಲಿ ಸೇರಿಹೋಯಿತು. ಮಧ್ಯಮ ಪಂಥವು ಪ್ರತಿಷ್ಠಿತ ವರ್ಗ ಮತ್ತು ಅವರ ಬಹುರಾಷ್ಟ್ರೀಯ ಮಿತ್ರರ ಹಿತಾಸಕ್ತಿಗಳನ್ನು ಕಾಪಾಡಲು ಯಾವುದೇ ವಿಧಾನವನ್ನು ಹಿಂಜರಿಕೆ ಇಲ್ಲದೇ ಬಳಸುವುದನ್ನು ಜನರು ಕಂಡರು.

ದಿಲ್ಮಾ ರೋಸೆಫ್

ದಿಲ್ಮಾ ಮತ್ತು ಲೂಲಾ ಅವರ ಮೇಲಿನ ದಾಳಿಗಳು ಮೈಕೆಲ್ ಟೆಮರ್ (2016-18) ಅಧ್ಯಕ್ಷತೆಗೆ ಮತ್ತು ನಂತರ 2018ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬೊಲ್ಸೊನಾರೊ ವಿಜಯಕ್ಕೆ ದಾರಿ ಮಾಡಿಕೊಟ್ಟಿತು. ಬೊಲ್ಸೊನಾರೊ ಅಧ್ಯಕ್ಷತೆಯು ಎರಡು ಅಂಶಗಳನ್ನು ಹೊಂದಿತ್ತು. ಒಂದೆಂದರೆ, ದೇಶದಲ್ಲಿ ದೊಡ್ಡ ಚಳವಳಿಯಾಗಿ ಬಲಪಂಥದ ಬೆಳವಣಿಗೆ ಮತ್ತು ಎರಡನೆಯದಾಗಿ ಕೋವಿಡ್ ಪಿಡುಗು ಮತ್ತು ಆರ್ಥಿಕ ಬಿಕ್ಕಟ್ಟಿನ ನಿಯಂತ್ರಣದಲ್ಲಿ ಸರಕಾರದ ದಾರುಣ ವೈಫಲ್ಯ. ಒಡೆದುಹೋಗಿದ್ದ ಬಲಪಂಥೀಯ ಶಕ್ತಿಗಳು ಬೊಲ್ಸೊನಾರೊ ಅಡಿಯಲ್ಲಿ ಜೊತೆ ಸೇರಿ, ಆತ ಅವರ ದಾರ್ಶನಿಕನಾಗಿಬಿಟ್ಟ. ಸಭ್ಯತೆ ಮತ್ತು ಪ್ರಜಾಪ್ರಭುತ್ವದ ಮೂಲಭೂತ ನಿಯಮಗಳ ಕುರಿತೂ ತೀರಾ ಅಸಡ್ಡೆ ಹೊಂದಿರುವಂತ ಬೊಲ್ಸೊನಾರೊ ಅಂತವರು ಕೂಡಾ ದೇಶದಲ್ಲಿ ಸ್ವೀಕಾರಾರ್ಹರಾದರು. ಲೂಲಾ ತನ್ನ ಪ್ರಚಾರದಲ್ಲಿ ತಮಾಷೆಯಾಗಿ ಹೇಳಿದಂತೆ: “ಬೊಲ್ಸೊನಾರೊ ಒಬ್ಬ ಸುಳ್ಳ. ತನ್ನ ಅಧಿಕಾರಾವಧಿಯಲ್ಲಿ 6,498 ಬಾರಿ ಸುಳ್ಳು ಹೇಳಿದ್ದಾರೆ. ಸತ್ಯದ ಕುರಿತು ಅಗೌರವ ಹಿಂಸೆಯ ಬೆದರಿಕೆ ಅಥವಾ ಹಿಂಸೆಯನ್ನೇ ಉಪಯೋಗಿಸಲು ಯಾವುದೇ ಹಿಂಜರಿಕೆ ಇಲ್ಲದಿರುವುದು ಈ ಹೊಸ ಬಲಪಂಥೀಯ ಚಳವಳಿಯನ್ನು ರೂಪಿಸಿತು. ವ್ಯವಸ್ಥೆಯ ಹಳೆಯ ಸ್ತಂಭಗಳಾದ ಬೀಫ್, ಬೈಬಲ್ ಮತ್ತು ಬುಲೆಟ್ ತಮ್ಮನ್ನು ನಿಯಂತ್ರಿಸುತ್ತಾ ಅಧಿಕಾರದ ಸ್ಥಾನದಲ್ಲಿದ್ದ ಜನರಿಂದಾಗಿ, ಅಲ್ಲಿ ದೊಡ್ಡ ರೈತರು (ಕೃಷಿ ಉದ್ದಿಮೆಗಳ ಪರವಾಗಿ), ಇವಾಂಜೆಲಿಕ್ ಚರ್ಚುಗಳು ಮತ್ತು ಸೇನಾಪಡೆಗಳು ಸೇರಿಕೊಂಡು, ತಮ್ಮ ಯೋಜನೆಗಳನ್ನೇ ರಾಷ್ಟ್ರೀಯ ಯೋಜನೆಗಳೆಂದು ಸ್ಥಾಪಿಸಲು ಬೀದಿಗೆ ಇಳಿದವು.

ಎರಡು ಬ್ರೆಜಿಲ್‌ಗಳಲ್ಲ

ಅನ್ಯಾಯವಾಗಿ ಕರ್ಟಿಬಾದ ಜೈಲಿನಲ್ಲಿ ಇದ್ದ ಲೂಲಾ, ದೇಶದ ಬಲಮಧ್ಯಮ ಮತ್ತು ಎಡ (ಮುಖ್ಯವಾಗಿ ಎಂಎಸ್‌ಟಿ) ಜೊತೆ ಸೇರಿ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಭ್ಯತೆಯ ಸಂಸ್ಥೆಗಳನ್ನು ಕಟ್ಟಬಲ್ಲ ಸಾಮಾಜಿಕ ಪ್ರಜಾಪ್ರಭುತ್ವದ ಯೋಜನೆಯನ್ನು ರೂಪಿಸಿದರು. ಇದು ಲೂಲಾರನ್ನು ಜೈಲಿನಿಂದ ಬಿಡುಗಡೆ ಮಾಡುವ ’ಲುಲಾ ಲಿವ್ರೆ’ ಚಳವಳಿಯಿಂದ ಮತ್ತು ಏಪ್ರಿಲ್ 2021ರ ನ್ಯಾಯಾಲಯದ ಆದೇಶದ ನಂತರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಹಾದಿಯಲ್ಲಿ ರೂಪುಗೊಂಡಿತು. ತಾನು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿರುವುದು ಖಚಿತವಾದ ನಂತರ ಲೂಲಾ ಅವರು, ಸಾವೊ ಪೌಲೊದಲ್ಲಿ ಭಾಷಣ ಮಾಡಿ, ಈ ಯೋಜನೆಯನ್ನು ಹೀಗೆ ವ್ಯಾಖ್ಯಾನಿಸಿದರು: “ಬ್ರೆಜಿಲಿನ ಜನರು ಚೆನ್ನಾಗಿ ಬದುಕಲು ಬಯಸುತ್ತಾರೆ. ಅದರ ಅರ್ಥವೆಂದರೆ, ಅವರಿಗೆ ಉತ್ತಮ ಉದ್ಯೋಗ ಮತ್ತು ಒಳ್ಳೆಯ ಗುಣಮಟ್ಟದ ಸಾರ್ವಜನಿಕ ಸೇವೆಗಳು ಬೇಕು. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ಅವರು ಆಶಾವಾದವನ್ನು ಮರಳಿ ಪಡೆಯಲು ಬಯಸಿದ್ದಾರೆ. ಅದೆಂದರೆ, ನಾನು ಆರ್ಥ ಮಾಡಿಕೊಂಡಂತೆ- ಪ್ರಜಾಪ್ರಭುತ್ವ ಎಂಬುದು ಕೇವಲ ಕಾನೂನುಗಳಲ್ಲಿ ಬರೆಯಲಾದ ಒಂದು ಸುಂದರ ಪದವಾಗದೇ, ದಿನನಿತ್ಯದಲ್ಲಿ ಏನನ್ನಾದರೂ ಕಟ್ಟಬಲ್ಲ ವಾಸ್ತವಿಕ ವಿಷಯವಾಗಬೇಕು.” ಅವರದನ್ನು- “ಕನಿಷ್ಟ ಹಸಿವನ್ನು, ಬಡತನವನ್ನು ನಿರ್ಮೂಲನ ಮಾಡಬಲ್ಲ ನೈಜ, ವಾಸ್ತವಿಕ ಪ್ರಜಾಪ್ರಭುತ್ವ” ಎಂದು ಕರೆದರು.

ಲೂಲಾರ ಯೋಜನೆಗೆ ಮಧ್ಯಪಂಥೀಯರು ಮತ್ತು ಬೊಲ್ಸೊನಾರೊವಾದಿಗಳು ಕಾಂಗ್ರೆಸ್ ಮೇಲೆ ಹೊಂದಿರುವ ಹಿಡಿತದಿಂದ ತೊಡಕಾಗಲಿದೆ. ಅವರು ಲೂಲಾರ ಬಹುಪಾಲು ಕಾರ್ಯಕ್ರಮಗಳಿಗೆ, ಅದರಲ್ಲೂ ಮುಖ್ಯವಾಗಿ ಹಸಿವಿನ ವಿರುದ್ಧ ಮತ್ತು 160 ಕೋಟಿ ಎಕರೆ ಅಮೆಜಾನ್ ಅರಣ್ಯದ ರಕ್ಷಣೆಗೆ ಸಾರ್ವಜನಿಕ ನಿಧಿಯ ಬಳಕೆಗೆ ತಡೆಯೊಡ್ಡಲಿದ್ದಾರೆ. ಎಡಪಂಥೀಯ ಸಂಘಟನೆಗಳು ಲಕ್ಷಾಂತರ ಜನರನ್ನು ಬೀದಿಗಿಳಿಸಿದ್ದುದರಿಂದ ಲೂಲಾರ ವಿಜಯವು ಸಾಧ್ಯವಾಯಿತು. ಅಲ್ಲಿ ಅವರು, ಲೂಲಾ ಮತ್ತೆ ಅಧಿಕಾರಕ್ಕೆ ಬರುವುದರ ಜೊತೆಗೆ ಅವರು ಪ್ರತಿಪಾದಿಸಿದ ಯೋಜನೆಗಳ ಅಗತ್ಯದ ಕುರಿತು ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ: ಬ್ರೆಜಿಲ್‌ನ ಅತ್ಯಂತ ಧ್ರುವೀಕರಣಗೊಂಡ ಸ್ಪರ್ಧೆಯಲ್ಲಿ ಲೂಲಾ ಗೆದ್ದದ್ದು ಹೇಗೆ?

ಲೂಲಾರ ವಿಜಯವನ್ನು ಆಚರಿಸುವುದರ ಅಪಾಯ ಎಂದರೆ, ಈ ಲಕ್ಷಾಂತರ ಜನರು ಚಳವಳಿಯಿಂದ ದೂರಸರಿಯುವುದನ್ನು ಈ ರಾಜಕೀಯ ಅಧಿಕಾರ ನೋಡುತ್ತಾ, ಬೊಲ್ಸೊನಾರೊ ಮತ್ತು ಬಲಪಂಥದ ರಾಜಕೀಯ ತಂತ್ರಗಾರಿಕೆಗೆ ಎದುರಾಗಿ ತಮ್ಮ ಯೋಜನೆಗಳಿಗೆ ಶಾಶ್ವತವಾದ ಒಂದು ನೆಲೆಯನ್ನು ಕಂಡುಕೊಳ್ಳದಂತೆ ತಡೆಯೊಡ್ಡಲಾಗಬಹುದು. ಅಕ್ಟೋಬರ್ ಅಭಿಯಾನದ ವೇಳೆ ಬಲ-ಮಧ್ಯಮ ಪಂಥದ ದೊಡ್ಡ ಪ್ರಮಾಣದ ಬೆಂಬಲವನ್ನು ಪಡೆದುಕೊಳ್ಳಲು ಲೂಲಾರಿಗೆ ಸಾಧ್ಯವಾಯಿತು. (ಇದರಲ್ಲಿ ಹಿಂದಿನ ಅಧ್ಯಕ್ಷೀಯ ಅಭ್ಯರ್ಥಿ, ಬ್ರೆಜಿಲಿಯನ್ ಡೆಮೋಕ್ರಟಿಕ್ ಮೂವ್‌ಮೆಂಟಿನ ಸಿಮೋನ್ ಟೆಬೆಟ್, ಮಾಜಿ ಅಧ್ಯಕ್ಷ, ಬ್ರೆಜಿಲಿಯನ್ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿಯ ಫರ್ನಾಂಡೊ ಹೆನ್ರಿಕ್ ಕಾರ್ಡೊಸೊ ಸೇರಿದ್ದರು). ಕಾರ್ಡೊಸೊ ಅವರು ಲೂಲಾರಿಗಾಗಿ ಒಂದು ವಿಡಿಯೋ ಮಾಡಿದ್ದರು. ಅದರಲ್ಲಿ ಅವರು ಸರ್ವಾಧಿಕಾರದ ನಂತರದ ಯುಗದ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಒಳಗೊಳ್ಳುವಿಕೆಗಾಗಿ ನಡೆದ ಹೋರಾಟದ ಇತಿಹಾಸಕ್ಕೆ ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದರು. ಲೂಲಾ ಅವರ ಜೊತೆ ಉಪಾಧ್ಯಕ್ಷ ಪದಕ್ಕಾಗಿ ಸ್ಪರ್ಧಿಸಿದ್ದ ಜೆರಾಲ್ಡೊ ಅಲ್ಕ್‌ಮಿನ್ ಸೇರಿದಂತೆ ಬಲ-ಮಧ್ಯಮ ಶಕ್ತಿಗಳು ಕಾಂಗ್ರೆಸಿನೊಳಗೆ ಲೂಲಾರ ಕಾರ್ಯಕ್ರಮಗಳನ್ನು ಪಾರು ಮಾಡಲು ನಿರ್ಣಾಯಕವಾಗಿವೆ.

“ಇಲ್ಲಿ ಎರಡು ಬ್ರೆಜಿಲ್‌ಗಳು ಇಲ್ಲ” ಎಂದು ತನ್ನ ವಿಜಯೋತ್ಸವ ಭಾಷಣದಲ್ಲಿ ಲುಲಾ ಹೇಳಿದರು. “ನಾವು ಒಂದೇ ದೇಶ. ಒಂದೇ ಜನರು, ಒಂದು ಮಹಾನ್ ದೇಶ. ಅಪಶ್ರುತಿ ಇರುವ ಕುಟುಂಬವೊಂದರಲ್ಲಿ ಬದುಕುವುದು ಯಾರ ಹಿತಾಸಕ್ತಿಯಲ್ಲೂ ಇಲ್ಲ. ಕುಟುಂಬಗಳನ್ನು ಜೊತೆಗೆ ತರಬೇಕಾದ ಸಮಯವಿದು. ದ್ವೇಷ ಹರಡುವ ಕ್ರಿಮಿನಲ್ ಅಭಿಯಾನ ಮುರಿದಿರುವ ಸಂಬಂಧಗಳನ್ನು ನಾವು ಮತ್ತೆ ಸರಿಪಡಿಸಬೇಕು. ವಿಭಜನೆಗೊಂಡ ದೇಶದಲ್ಲಿ ಬದುಕುವ ಇಚ್ಚೆ ಯಾರಿಗೂ ಇಲ್ಲ” ಎಂದಿದ್ದಾರೆ. ಇದು ಒಡೆದು ಹೋಗಿರುವ ದೇಶದಲ್ಲಿ ಅಧಿಕಾರ ನಡೆಸಬೇಕಿರುವ ವ್ಯಕ್ತಿಯ ನಾಟಕೀಯ ಮಾತುಗಳೋ ಅಥವಾ ಕಣ್ಣಿಗೆ ಕಾಣುತ್ತಲಿರುವ ತೀವ್ರ ಬಲಪಂಥೀಯ ಕರಾಳ ಮೋಡಗಳನ್ನು ಎದುರಿಸುತ್ತೇನೆ ಎಂದು ನಂಬಿರುವ ಒಬ್ಬ ನಾಯಕನ ಭರವಸೆಯೋ ನಾವು ನೋಡಬೇಕಾಗಿದೆ.

ಲೂಲಾರ ಅಂತಾರಾಷ್ಟ್ರೀಯವಾದ

ತಾನಿರುವ ಕಟ್ಟಡದ ಹೆಸರಾದ ಇಟಮರಾಟಿ ಎಂದೇ ಕರೆಯಲ್ಪಡುವ ಬ್ರೆಜಿಲಿನ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ನನಗೆ ಹೇಳಿದ್ದು ಏನೆಂದರೆ, ಆ ಇಲಾಖೆಯ 80 ಶೇಕಡಾ ಸಿಬ್ಬಂದಿಗಳು ಚುನಾವಣೆಯಲ್ಲಿ ಲೂಲಾರ ವಿಜಯದ ಪರವಾಗಿದ್ದಾರೆ. ವೃತ್ತಿಪರ ವಿದೇಶಾಂಗ ಅಧಿಕಾರಿಗಳು- ವಿಶ್ವಸಂಸ್ಥೆಯು ಒಂದು ಉಪಯೋಗವಿಲ್ಲದ ಕಮ್ಯುನಿಸ್ಟರ ಕೂಟ ಎಂಬ ಹೇಳಿಕೆಯೂ ಸೇರಿದಂತೆ- ಬೊಲ್ಸೊನಾರೊ ಪ್ರತಿಪಾದಿಸಿದ ವಿಕ್ಷಿಪ್ತ ರಾಜಕೀಯದಿಂದ ಆತಂಕಗೊಂಡಿದ್ದಾರೆ. ಬೊಲ್ಸೊನಾರೊ ಮತ್ತಾತನ ವಿದೇಶಾಂಗ ಸಚಿವ ಅರ್ನೆಸ್ಟೊ ಅರೌಜೊ ಅವರ ಜನಮರುಳು ಮಾತುಗಳನ್ನು- ಯುಎಸ್‌ಎಯ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಲಹೆಗಾರನಾಗಿದ್ದ ಸ್ಟೀವ್ ಬ್ಯಾನ್ನನ್ ಅವರೇ ಬರೆದಿದ್ದಾರೋ ಎಂಬಂತೆ ಕೇಳುತ್ತಿದ್ದವು. ಹವಾಮಾನ ಬದಲಾವಣೆ ಎಂಬುದು ಒಂದು ಮಾರ್ಕ್ಸ್‌ವಾದಿ ಸಂಚು ಮತ್ತು ಬೊಲ್ಸೊನಾರೊ ಅವರು ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳಿಂದ ಜುಡಯೊ-ಕ್ರಿಶ್ಚಿಯನ್ ನಾಗರಿಕತೆಯನ್ನು ರಕ್ಷಿಸುತ್ತಾರೆ ಎಂದು ಅರೌಜೊ ಹೇಳಿದ್ದರು. ಬಹುಪಾತಳಿ, ಬಹುಪಕ್ಷೀಯ ವ್ಯವಸ್ಥೆಗಳ ಕುರಿತು ಬೊಲ್ಸೊನಾರೊ ಮಾಡಿದ ಎಡಬಿಡಂಗಿ ಬಡಬಡಿಕೆಗಳು ಮತ್ತು ಬ್ರೆಜಿಲ್‌ನ ಬಹುಕಾಲದ ಬದ್ಧತೆ, ಒಡಂಬಡಿಕೆಗಳ ಬಗ್ಗೆ ಆತನ ಅಗೌರವ ವಿದೇಶಾಂಗ ಸಚಿವಾಲಯದಲ್ಲಿ ದಿಗಿಲು ಉಂಟುಮಾಡಿದ್ದವು. ಅಧಿಕಾರಿಗಳು ಲೂಲಾ ಅವರ ಜಾಗತಿಕ ನಾಯಕತ್ವಕ್ಕೆ ಮರಳಲು ಬಯಸಿದ್ದರು.

ಖಂಡಿತವಾಗಿಯೂ ಕಾಂಗ್ರೆಸ್ ಮೇಲೆ ಬಲಪಂಥೀಯರ ಬಲವಾದ ಹಿಡಿತದ ಅಡಚಣೆಯಿಂದಾಗಿ, ಲೂಲಾ ಅವರ ಕಾರ್ಯಕ್ರಮದ ಅತ್ಯಂತ ಮುಖ್ಯ ಭಾಗವು ಅವರ ಅಂತಾರಾಷ್ಟ್ರೀಯವಾದ ಆಗಬಹುದು. ಚೀನಾದ ವಿರುದ್ಧ ಯುಎಸ್‌ಎಯ ಹೆಚ್ಚುತ್ತಿರುವ ಸಂಘರ್ಷವನ್ನು ಅಂದರೆ, ಹೊಸ ಶೀತಲ ಸಮರವನ್ನು ತಾನು ಬೆಂಬಲಿಸುವುದಿಲ್ಲ ಎಂದು ಲೂಲಾ ಈಗಾಗಲೇ ಹೇಳಿಕೆ ನೀಡಿದ್ದಾರೆ. ಆದರೆ, ತನ್ನ ರಾಜತಾಂತ್ರಿಕ ಕೌಶಲದಿಂದ ಅವರು ರಷ್ಯಾ ಮತ್ತು ಪಾಶ್ಚಾತ್ಯ ರಾಷ್ಟ್ರಗಳನ್ನು ಹತ್ತಿರ ತರಲು ಯತ್ನಿಸಬಹುದು. ಹಿಂದೆ ಯುಎಸ್‌ಎ ಮತ್ತು ಇರಾನ್ ನಡುವೆ ಒಂದು ಶಾಂತಿ ಕಾರ್ಯಕ್ರಮ ರೂಪಿಸಲು ಲೂಲಾ ನೆರವಾಗಿದ್ದರು ಎಂಬುದು ಈಗ ಮರೆತುಹೋಗಿರಬಹುದು. ಅದೇ ಪ್ರತಿಭೆಯು ಪಾಶ್ಚಾತ್ಯ ರಾಷ್ಟ್ರಗಳು ಮತ್ತು ಚೀನಾ, ರಷ್ಯಾ ಸೇರಿದಂತೆ ಯುರೇಷಿಯನ್ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಕಡಿಮೆ ಮಾಡಲು ನೆರವಾಗಬಹುದು. 2023ರಲ್ಲಿ ಕೊನೆಗೊಳ್ಳಲಿರುವ ಬ್ರೆಜಿಲ್‌ನ ಭದ್ರತಾ ಮಂಡಳಿಯ ಸದಸ್ಯತ್ವ ಲೂಲಾ ಅವರಿಗೊಂದು ಮಹತ್ವದ ಅಸ್ತ್ರವಾಗಬಹುದು.

ಇದನ್ನೂ ಓದಿ: ಬೊಲ್ಸೊನಾರೊ ಪತನ; ಸರ್ವಾಧಿಕಾರಿ ಆಡಳಿತದ ಕೊನೆ ಭಾರತಕ್ಕೂ ಸ್ಫೂರ್ತಿಯಾಗುವುದೇ?

ಹಿಂದೆ ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ಒಬ್ಬ ಅಂತಾರಾಷ್ಟ್ರೀಯವಾದಿಯಾಗಿ ಅವರು ವಹಿಸಿದ ಪಾತ್ರದಿಂದಾಗಿ, ಬ್ರೆಜಿಲ್‌ನ ಯಾವುದೇ ಒಬ್ಬ ಅಧ್ಯಕ್ಷ ಈ ತನಕ ಲೂಲಾ ಹೊಂದಿರುವಂತ ಅಂತಾರಾಷ್ಟ್ರೀಯ ಖ್ಯಾತಿಯನ್ನು ಹೊಂದಿರಲಿಲ್ಲ. ಬ್ರಿಕ್ಸ್ (ಬ್ರೆಜಿಲ್, ಭಾರತ ಚೀನಾ, ದಕ್ಷಿಣ ಆಫ್ರಿಕಾ) ಕೂಟವು 2003ರಿಂದ 2009ರ ನಡುವೆ ರೂಪುಗೊಂಡದ್ದು ಲುಲಾ ಅವರ ನಾಯಕತ್ವದಲ್ಲಿಯೇ. ಅವರು 2008 ಮತ್ತು 2009ರ ನಡುವೆ ಕೆರಿಬಿಯನ್ ಮತ್ತು ಲ್ಯಾಟಿನ್ ಅಮೆರಿಕನ್ ದೇಶಗಳ ನಡುವೆ ಸೆಲಾಕ್ (CELAC) ಕೂಟ ರೂಪುಗೊಳ್ಳುವುದಕ್ಕೂ ಹಾದಿ ಮಾಡಿಕೊಟ್ಟಿದ್ದರು. ತಾನು ಈ ಎರಡು ವೇದಿಕೆಗಳನ್ನು ಪುನರುಜ್ಜೀವನಗೊಳಿಸಿ, ನಾಯಕತ್ವ ವಹಿಸುವುದರ ಮೂಲಕ, ಯುದ್ಧ ವಿರೋಧಿಯಾದ ಮತ್ತು ರಾಷ್ಟ್ರಗಳ ಸಾರ್ವಭೌಮತೆಯನ್ನು ಗೌರವಿಸುವ ಮತ್ತು ಜನರಿಗೆ ನೈಜ ಮತ್ತು ವಾಸ್ತವಿಕವಾದ ಆತ್ಮಗೌರವವನ್ನು ಒದಗಿಸಬಯಸುವ ಒಂದು ಪ್ರಪಂಚವನ್ನು ಸ್ಥಾಪಿಸುವ ಒಂದು ಸಾಮಾಜಿಕ ಪ್ರಜಾಪ್ರಭುತ್ವ ಯೋಜನೆಯತ್ತ ಮುನ್ನಡೆಯುವುದಾಗಿ ಲೂಲಾ ಹೇಳಿದ್ದಾರೆ. ಲೂಲಾ ಅವರು ಬ್ರಿಕ್ಸ್ ಮತ್ತು ಸೆಲಾಕ್ ಎಂಬ ಈ ಎರಡು ವೇದಿಕೆಗಳನ್ನು- (ಯುರೇಷಿಯನ್ ಏಕತೆಯನ್ನು ತಡೆಯಲು ಯುಎಸ್‌ಎಯ ಒತ್ತಡದಿಂದ ದುರ್ಬಲಗೊಂಡಿರುವ) ಬಹುಪಕ್ಷೀಯ ವ್ಯವಸ್ಥೆಯನ್ನು ಮರುಸ್ಥಾಪಿಸಲು ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಪ್ರಾದೇಶಿಕತೆಯನ್ನು ಪ್ರೋತ್ಸಾಹಿಸಲು ಬಳಸಲಿದ್ದಾರೆ ಎಂಬುದು ಸ್ಪಷ್ಟವಾಗಿದೆ.

2023ರಲ್ಲಿ ಲೂಲಾ ಬ್ರೆಜಿಲ್‌ನ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಳ್ಳುವಾಗ ಅದು ಮನ್ರೋ ಸಿದ್ಧಾಂತದ 200ನೇ ವರ್ಷಾಚರಣೆಯೂ ಆಗಿರುತ್ತದೆ. ಲ್ಯಾಟಿನ್ ಅಮೆರಿಕವು ವಾಶಿಂಗ್ಟನ್‌ನ ರಕ್ಷಣೆಯಲ್ಲಿರುವುದು ಎಂದು 1823ರಲ್ಲಿ ಯುಎಸ್‌ಎ ಸರಕಾರ ಹೇಳಿತ್ತು. ಈ ಅಹಂಕಾರದ ಪ್ರತಿಪಾದನೆಯು 1991ರಿಂದ ಇಡೀ ಪ್ರಪಂಚವನ್ನು ಆವರಿಸಿದಂತಿದೆ. ಶಾಂತಿಯನ್ನು ತರುವ ಬದಲು ಸಂಘರ್ಷಗಳನ್ನು ಇನ್ನಷ್ಟು ಆಳಗೊಳಿಸುವ ಈ ಜಾಗತಿಕ ಮನ್ರೋ ಸಿದ್ಧಾಂತವನ್ನು ಜಗತ್ತಿನ ಹಲವು ದೇಶಗಳು ತಿರಸ್ಕರಿಸುತ್ತಿವೆ. ಜಾಗತಿಕ ಮನ್ರೋ ಸಿದ್ಧಾಂತದ ವಿರುದ್ಧ ಲುಲಾರ ನಾಯಕತ್ವವು ಅದನ್ನು ಸಾಬೀತುಪಡಿಸುತ್ತದೆ. ಆದುದರಿಂದ ಬ್ರೆಜಿಲಿನ ಚುನಾವಣೆಯಲ್ಲಿ ಲೂಲಾ ವಿಜಯವು ಅಲ್ಲಿನ ಜನರಿಗೆ ಎಷ್ಟು ಮುಖ್ಯವೋ, ಜಗತ್ತಿನ ಜನರಿಗೂ ಅಷ್ಟೇ ಮುಖ್ಯವಾಗಿದೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ವಿಜಯ್ ಪ್ರಶಾದ್

ವಿಜಯ್ ಪ್ರಶಾದ್
ಮಾರ್ಕ್ಸಿಸ್ಟ್ ಇತಿಹಾಸಕಾರ, ಟ್ರೈಕಾಂಟಿನೆಂಟಲ್ ಸಂಶೋಧನಾ ತಂಡದ ಸದಸ್ಯ, ಲೆಫ್ಟ್ ವರ್ಡ್ ಪ್ರಕಾಶನ ಸಂಸ್ಥೆಯ ಸಂಪಾದಕ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...