Homeಅಂತರಾಷ್ಟ್ರೀಯಬ್ರೆಜಿಲ್‌ನ ಅತ್ಯಂತ ಧ್ರುವೀಕರಣಗೊಂಡ ಸ್ಪರ್ಧೆಯಲ್ಲಿ ಲೂಲಾ ಗೆದ್ದದ್ದು ಹೇಗೆ?

ಬ್ರೆಜಿಲ್‌ನ ಅತ್ಯಂತ ಧ್ರುವೀಕರಣಗೊಂಡ ಸ್ಪರ್ಧೆಯಲ್ಲಿ ಲೂಲಾ ಗೆದ್ದದ್ದು ಹೇಗೆ?

- Advertisement -
- Advertisement -

2022ರ ಅಕ್ಟೋಬರ್ 30ರಂದು ಬ್ರೆಜಿಲ್‌ನ ಎರಡನೆಯ ಹಂತದ ಸಾರ್ವತ್ರಿಕ ಚುನಾವಣೆಗಳು ನಡೆದವು. ಅಲ್ಲಿಯ ವರ್ಕರ್ಸ್ ಪಾರ್ಟಿಯ (ಪಿಟಿ) ಲೂಯಿಜ್ ಇನಾಷಿಯೊ ’ಲೂಲಾ’ ಡಾ ಸಿಲ್ವ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಅಲ್ಲಿನ ಬಲಪಂಥೀಯ ಲಿಬರಲ್ ಪಕ್ಷವಾದ ಲಿಬರಲ್ ಪಾರ್ಟಿಯ ಜೈರ್ ಬೊಲ್ಸೊನಾರೊ ಅವರನ್ನು ಸೋಲಿಸಿದ್ದಾರೆ. ಇದರಿಂದ 12 ವರ್ಷಗಳ ನಂತರ ಲೂಲಾ ಅವರು ಬ್ರೆಜಿಲ್‌ನ ಅಧ್ಯಕ್ಷರಾಗಿದ್ದಾರೆ. ಅಲ್ಲಿನ ಸರ್ವೋಚ್ಚ ನ್ಯಾಯಾಲಯವು ಲೂಲಾ ಅವರ ಸೆರೆವಾಸವನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರ ಈ ಚುನಾವಣೆಗಳು ನಡೆದಿವೆ. ಲೂಲಾ ಅವರು ಸೆರೆವಾಸ ಅನುಭವಿಸಿದ ಬ್ರೆಜಿಲ್‌ನ ಮೊದಲನೆಯ ಅಧ್ಯಕ್ಷರಾಗಲಿದ್ದಾರೆ.

ಬ್ರೆಜಿಲ್‌ನ ಇತಿಹಾಸದಲ್ಲಿಯೇ ಈ ಚುನಾವಣೆಗಳು ಅತ್ಯಂತ ಧ್ರುವೀಕರಣಗೊಂಡ ಚುನಾವಣೆಗಳಾಗಿವೆ; ಹಾಗಾಗಿ ದೇಶದ ಇಡೀ ರಾಜಕೀಯ ಚಿತ್ರಣವೇ ಸಂಕುಚಿತಗೊಂಡಂತಾಗಿದೆ. ಮೊದಲ ಸುತ್ತಿನ ಚುನಾವಣೆಯಲ್ಲೂ 90%ಕ್ಕಿಂತ ಹೆಚ್ಚು ಮತಗಳು ಲೂಲಾ ಅಥವಾ ಬೊಲ್ಸೊನಾರೊ ಇವರಿಬ್ಬರಿಗೆ ಬಂದಿದ್ದವು. ಜನಮತ ಸಮೀಕ್ಷೆಗಳು ಲೂಲಾ ಮತ್ತು ಬೊಲ್ಸೊನಾರೊ ನಡುವಿನ ಅಂತರ ಇನ್ನಷ್ಟು ಕಡಿಮೆಯಾಗುತ್ತಿದೆ ಎಂದು ಹೇಳಿದ್ದವು. ಅಂತಿಮ ಚುನಾವಣೆಯಲ್ಲಿ ಲೂಲಾ ಅವರು ಕೇವಲ 2% ಅಂತರದಿಂದ ಗೆದ್ದಿದ್ದಾರೆ. ಇದು ದೇಶವನ್ನು ಆತಂಕಕ್ಕೀಡುಮಾಡಿದೆ ಏಕೆಂದರೆ ಬೊಲ್ಸೊನಾರೊ ಚುನಾವಣೆಗೆ ಮುನ್ನದ ತನ್ನ ಭಾಷಣಗಳಲ್ಲಿ ಚುನಾವಣೆಗಳಲ್ಲಿ ಅಕ್ರಮವೆಸಗಲಾಗುತ್ತಿದೆ ಎಂದು ಹೇಳಿಕೊಂಡಿದ್ದರು. ಈ ವರ್ಷ ಬ್ರೆಜಿಲ್‌ನಲ್ಲಿ ಎರಡೂ ಪಕ್ಷಗಳ ಬೆಂಬಲಿಗರ ಮೇಲೆ ಆದ ಹಿಂಸೆಯೂ ಹೆಚ್ಚಿದೆ.

ಬೊಲ್ಸೊನಾರೊ ಪತನ

ತನ್ನ ಪ್ರಜಾಪ್ರಭುತ್ವ ವಿರೋಧಿ ಹಾಗೂ ಜನವಿರೋಧಿ ರಾಜಕೀಯದಿಂದ ಬೊಲ್ಸೊನಾರೊ ಇಡೀ ವಿಶ್ವದಲ್ಲಿಯೇ ಕೆಟ್ಟ ಹೆಸರನ್ನು ಪಡೆದಿದ್ದಾರೆ. ಅವರು ಕೋವಿಡ್ ಸಾಂಕ್ರಾಮಿಕವನ್ನು ನಿಭಾಯಿಸಿದ ರೀತಿ, ಅಮೆಜಾನ್ ಅರಣ್ಯಪ್ರದೇಶಗಳಿಗೆ ಹಾಗೂ ಅಲ್ಲಿನ ಮೂಲನಿವಾಸಿಗಳಿಗೆ ಅವರು ತೋರಿದ ಅನಾದರದ ವರ್ತನೆ ಹಾಗೂ ಅವರ ಪ್ರಜಾಪ್ರಭುತ್ವವಿರೋಧಿ ರಾಜಕೀಯವು ಇಡೀ ವಿಶ್ವದ ಜನರು ಅವರನ್ನು ಆತಂಕಿತರಾಗಿ ನೋಡುವಂತೆ ಮಾಡಿದ್ದವು.

ಕೋವಿಡ್ ಸಂದರ್ಭವನ್ನು ಅವರು ಅತ್ಯಂತ ಕೆಟ್ಟದಾಗಿ ನಿರ್ವಹಿಸಿದ ರೀತಿಯಿಂದ ವಿಶ್ವದಲ್ಲಿ ವೈರಸ್‌ನ ಹೊಸ ತಳಿಯು ಹರಡಲು ಕಾರಣವಾಗಿತ್ತು. ಪರಿಸ್ಥಿತಿ ಎಷ್ಟು ಹದಗೆಟ್ಟಿತೆಂದರೆ, ಸ್ಥಳೀಯ ಮಾದಕವಸ್ತುಗಳ ಗ್ಯಾಂಗ್‌ಗಳು ಕೋವಿಡ್ ನಿರ್ವಹಣೆಯ ಜವಾಬ್ದಾರಿಯನ್ನು ಕೈಗೆತ್ತಿಕೊಂಡು ಅವರೇ ಲಾಕ್‌ಡೌನ್‌ಗಳನ್ನು ವಿಧಿಸಲು ಶುರು ಮಾಡಿದ್ದವು ಹಾಗೂ ಸ್ಥಳೀಯವಾಗಿ ಕೋವಿಡ್ ನಿರ್ವಹಣೆಯ ಕೆಲಸ ಮಾಡಿದ್ದವು. ಹವಾಮಾನ ವೈಪರೀತ್ಯದ (ಕ್ಲೈಮೆಟ್ ಚೇಂಜ್) ಪರಿಣಾಮಗಳನ್ನು ಜಗತ್ತು ಅನುಭವಿಸಲು ಶುರು ಮಾಡಿದ ಸಮಯದಲ್ಲಿಯೇ ಅಮೆಜಾನ್‌ನ ಅರಣ್ಯ ನಾಶದ ಪ್ರಕ್ರಿಯೆ ಶುರುವಾಗಿತ್ತು.

ಬೊಲ್ಸೊನಾರೊ ಚುನಾವಣೆಯ ಸಮಯದಲ್ಲಿ ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದಾಗ, ದೇಶದಲ್ಲಿ ಪ್ರಜಾಪ್ರಭುತ್ವದ, ಅದರ ಸಂಸ್ಥೆಗಳ ವಿರುದ್ಧ ಒಂದು ಕ್ಷಿಪ್ರಕ್ರಾಂತಿ ಆಗಿಬಿಡುವುದೋ ಎಂಬ ನಿಜವಾದ ಆತಂಕವಿತ್ತು. ಬೊಲ್ಸೊನಾರೊ ಅತಿ ದೊಡ್ಡ ರ್‍ಯಾಲಿಗಳನ್ನು ಆಯೋಜಿಸುವಲ್ಲಿ ಸಮರ್ಥರಾಗಿದ್ದರು, ಆ ರ್‍ಯಾಲಿಗಳಲ್ಲಿ ಲಕ್ಷಗಟ್ಟಲೆ ಜನರೂ ಬರುತ್ತಿದ್ದರು. ತನ್ನ ವಿರುದ್ಧ ಚುನಾವಣೆಗಳನ್ನು ತಿರುಚಲಾಗಿದೆ ಹಾಗೂ ಚುನಾವಣೆಯ ಫಲಿತಾಂಶಗಳ ನ್ಶೆಜತೆಯನ್ನು ನಂಬಬಾರದು ಎಂದು ಬೊಲ್ಸೊನಾರೊ ತನ್ನ ಬೆಂಬಲಿಗರಿಗೆ ಅಪೀಲ್ ಮಾಡಿದ್ದರು.

ಇದನ್ನೂ ಓದಿ: ಬೊಲ್ಸೊನಾರೊ ಪತನ; ಸರ್ವಾಧಿಕಾರಿ ಆಡಳಿತದ ಕೊನೆ ಭಾರತಕ್ಕೂ ಸ್ಫೂರ್ತಿಯಾಗುವುದೇ?

ಮಿಲಿಟರಿಯೊಂದಿಗೆ ಬೊಲ್ಸೊನಾರೊ ತುಂಬಾ ನಿಕಟವಾದ ಸಂಬಂಧ ಹೊಂದಿದ್ದಾರೆ. ಮಿಲಿಟರಿಯ ಬೆಂಬಲದೊಂದಿಗೆ ಬ್ರೆಜಿಲ್‌ನ ಪ್ರಜಾಪ್ರಭುತ್ವಕ್ಕೆ ಘೋರ ಅಪಾಯವನ್ನು ತರುವ ಸಾಧ್ಯತೆಗಳಿದ್ದವು. ಆದರೆ ಅಕ್ಟೋಬರ್ ತಿಂಗಳಲ್ಲಿ ಮಿಲಿಟರಿಯು ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡುವ ಅಂತಹ ಲಕ್ಷಣಗಳು ಕಾಣಿಸಿಲಿಲ್ಲ. ಆಶ್ಚರ್ಯಕಾರಿಯಾಗಿ ಚುನಾವಣೆಗಳು ಶಾಂತಿಯುತವಾಗಿಯೇ ನಡೆದವು. ಚುನಾವಣಾ ಪ್ರಚಾರದ ಸಮಯದಲ್ಲಿ ಅಲ್ಲಲ್ಲಿ ತೀವ್ರ ಹಿಂಸಾಚಾರದ ಘಟನೆಗಳು ಆದವು. ಉದಾಹರಣೆಗೆ, ಇಬ್ಬರಲ್ಲಿ ಯಾವ ಒಬ್ಬ ಅಭ್ಯರ್ಥಿಗೋ ಬೆಂಬಲ ನೀಡಿದ್ದಕ್ಕಾಗಿ ತಮಗೆ ಕಿರುಕುಳ ಮತ್ತು ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಅನೇಕ ಮತದಾರರು ದೂರಿದ್ದಾರೆ. ಬೊಲ್ಸೊನಾರೊ ಮತ್ತು ಲೂಲಾ ಇಬ್ಬರೂ ಪ್ರಚಾರದ ಸಮಯದಲ್ಲಿ ಬುಲೆಟ್‌ಪ್ರೂಫ್ ಜಾಕೆಟ್ ಹಾಕಬೇಕಾಗಿತ್ತು.

ಚುನಾವಣೆಯ ಮುಂಚಿನ ಕೆಲವು ತಿಂಗಳಲ್ಲಿ ರಾಜಕೀಯ ಹಿಂಸಾಚಾರ ಹೆಚ್ಚುತ್ತಲೇ ಇತ್ತು. ಹಾಗೂ ಅಕ್ಟೋಬರ್ ತಿಂಗಳಲ್ಲಿ ಹಿಂಸಾಚಾರ ಇನ್ನಷ್ಟೂ ತೀವ್ರವಾಗುತ್ತದೆ ಎಂಬ ಆತಂಕಗಳಿದ್ದವು; ಆದರೆ ಚುನಾವಣೆಯ ದಿನದಂದು ಅಂತಹ ಹಿಂಸಾಚಾರ ಕಾಣಿಸಿಕೊಳ್ಳದೇ ಬಹುತೇಕ ಶಾಂತಿಯುತ ಮತದಾನ ನಡೆದಿದೆ. ಅಲ್ಲಿನ ಮಿಲಿಟರಿ ಮತ್ತು ಅಧಿಕಾರವರ್ಗವು ಬೊಲ್ಸೊನಾರೊ ನೇತೃತ್ವದ ಕ್ಷಿಪ್ರಕ್ರಾಂತಿಗೆ ಬೆಂಬಲ ನೀಡುವ ಯಾವುದೇ ಲಕ್ಷಣ ಕಾಣಲಿಲ್ಲ. ಅವನ ಬೆಂಬಲಿಗರೂ ಫಲಿತಾಂಶವನ್ನು ಸ್ವೀಕರಿಸಿದಂತಿದೆ ಹಾಗೂ ಚುನಾವಣೆಯ ಫಲಿತಾಂಶಗಳ ವಿರುದ್ಧ ಯಾವುದೇ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆದಿಲ್ಲ. ಚುನಾವಣೆಗೆ ಕೆಲವು ದಿನಗಳ ಮುನ್ನ ಬೊಲ್ಸೊನಾರೊ ತಾನು ಗೆಲ್ಲಲಿ ಅಥವಾ ಸೋಲಲಿ, ಚುನಾವಣೆಯ ಫಲಿತಾಂಶವನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದರು ಹಾಗೂ ಫಲಿತಾಂಶದ ನಂತರ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ಮತದಾರರನ್ನು ಹತ್ತಿಕ್ಕಲಾದ ಕೆಲವು ಪ್ರಕರಣಗಳು ನಡೆದಿವೆ; ಅದು ನಿರ್ದಿಷ್ಟವಾಗಿ ದೇಶದ ಈಶಾನ್ಯ ಪ್ರಾಂತ್ಯದಲ್ಲಿ ಕಂಡುಬಂದಿದೆ. ಪೊಲೀಸರು ಹೆದ್ದಾರಿಗಳಲ್ಲಿ ಅನೇಕ ಚೆಕ್‌ಪಾಯಿಂಟ್‌ಗಳನ್ನು ನಿರ್ಮಿಸಿದ್ದರು, ಅದರಿಂದ ಮತದಾನ ಮಾಡಲು ಕಷ್ಟವಾಯಿತು ಎಂದು ಹಲವರು ದೂರಿದ್ದಾರೆ. ಈ ಪ್ರದೇಶದಲ್ಲಿ ಪೊಲೀಸರು ಅನೇಕ್ ಬಸ್‌ಗಳನ್ನು ತಡೆದಿದ್ದಾರೆ. ಹಾಗಾಗಿ ಶಾಸನಸಭೆಯ ಚುನಾವಣೆಯ ಮೇಲೆ ಇದರ ಪರಿಣಾಮ ಕಾಣಬಹುದಾಗಿದೆ; ಈ ಕಾರಣದಿಂದ ಲಿಬರಲ್ ಪಾರ್ಟಿಯು ನಿಕಟ ಸ್ಪರ್ಧೆಯಿರುವ ಕಡೆ ಗೆಲವು ಕಂಡಿದೆ.

ಶಾಸಕಾಂಗ ಸಭೆಯಲ್ಲಿ ಲೂಲಾ ಏನೆಲ್ಲ ಕಷ್ಟ ಎದುರಿಸಲಿದ್ದಾರೆ?

ಈ ಚುನಾವಣೆಯು ಎರಡು ರೀತಿಯಲ್ಲಿ ಅತ್ಯಂತ ಧ್ರುವೀಕರಣಗೊಂಡಿದ್ದ ಚುನಾವಣೆಯಾಗಿತ್ತು; ಮೊದಲನೆಯದಾಗಿ, ಮತದಾನವು ಬಲ ಮತ್ತು ಎಡ ಎಂಬ ಪರಿಭಾಷೆಯಲ್ಲಿ ನಡೆಯಿತು. ಈ ಮುನ್ನ ಬ್ರೆಜಿಲ್‌ನ ಚುನಾವಣೆಗಳಲ್ಲಿ ಎಡ ಮತ್ತು ಎಡಕ್ಕೆ ಹತ್ತಿರವಿರುವ ಅನೇಕ ಎಡ ಪಕ್ಷಗಳ ನಡುವೆ ಚುನಾವಣೆ ನಡೆಯುತ್ತಿತ್ತು. ಎರಡನೆಯದಾಗಿ, ಈ ಚುನಾವಣೆಗಳು ಬ್ರೆಜಿಲ್‌ಅನ್ನು ಎರಡು-ಪಾರ್ಟಿ ವ್ಯವಸ್ಥೆಯ ಕಡೆಗೆ ಕೊಂಡೊಯ್ದಿವೆ. ಇವೆರಡನ್ನು ಹೊರತುಪಡಿಸಿ ಇತರ ಪಕ್ಷಗಳು ಸಂಪೂರ್ಣವಾಗಿ ವಿಫಲವಾಗಿವೆ.

ಚುನಾವಣೆಯಲ್ಲಿ ಕಾಣಿಸಿಕೊಂಡ ಧ್ರುವೀಕರಣವು ಅಲ್ಲಿನ ಲೋಕಸಭೆ ಎನ್ನಬಹುದಾದ ಚೇಂಬರ್ ಆಫ್ ಡೆಪ್ಯೂಟೀಸ್‌ನಲ್ಲಿ ಹಾಗೂ ಅಲ್ಲಿನ ರಾಜ್ಯಸಭೆ ಎನ್ನಬಹುದಾದ ಸೆನೆಟ್‌ನಲ್ಲಿಯೂ ಕಾಣಿಸಿಕೊಂಡಿದೆ. ಚೇಂಬರ್‌ನಲ್ಲಿ ಈ ಸಲ ಹೆಚ್ಚಿನ ಸಂಖ್ಯೆಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಾಣಿಸಿದ್ದು ಅದು 18% ಇದೆ. ಬ್ರೆಜಿಲ್‌ನಲ್ಲಿ ಮಹಿಳೆಯರು ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಚೇಂಬರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಸೆನೆಟ್‌ನಲ್ಲಿ ಮಹಿಳೆಯರ ಪ್ರಾತಿನಿಧ್ಯ 12 ರಿಂದ 10 ಕ್ಕೆ ಇಳಿದಿದೆ.

ಆತಂಕದ ವಿಷಯವೇನೆಂದರೆ, ಈ ಶಾಸಕಾಂಗವು ಇನ್ನಷ್ಟು ಹೆಚ್ಚು ಸಂಪ್ರದಾಯವಾದಿ ಹಾಗೂ ಬಲಪಂಥೀಯವಾಗಿ ಕಾಣಿಸುತ್ತಿದೆ. ಹೆಚ್ಚು ಸಂಪ್ರದಾಯವಾದಿ ಮತ್ತು ಸೆಚಿಟರ್-ರೈಟ್ ಅಭ್ಯರ್ಥಿಗಳು ಕಾಣಿಸುತ್ತಿದ್ದಾರೆ. ಈ ಎರಡು ಮುಂಚೂಣಿಯಲ್ಲಿರುವ ಪಕ್ಷಗಳನ್ನು ಹೊರತುಪಡಿಸಿ ಇತರ ಪಕ್ಷಗಳು 513ರಲ್ಲಿ 77 ಕ್ಷೇತ್ರಗಳಲ್ಲಿ ಸೋಲುಕಂಡಿವೆ. ಇವುಗಳಲ್ಲಿ ರಾಜಕೀಯ ಸ್ಪೆಕ್ಟ್ರಂನ ಇತರ ಪಕ್ಷಗಳ ಒಳಗೊಂಡಿವೆ. ಸೆನೆಟ್‌ನಲ್ಲಿ ಬೊಲ್ಸೊನಾರೊನ ಲಿಬರಲ್ ಪಕ್ಷಗಳು ಅತಿ ಹೆಚ್ಚು ಸ್ಥಾನಗಳನ್ನುಗಳಿಸಿದೆ. ಇದು ಲೂಲಾ ಅವರ ಎಡಪಂಥೀಯ ನಾಯಕತ್ವದ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡವರಿಗೆ ಸಮಸ್ಯೆಯಾಗಲಿದೆ.

ಇದನ್ನೂ ಓದಿ: ಬ್ರೆಜಿಲ್: ಬೊಲ್ಸೊನಾರೊ ಸೋಲು; ಅಮೆಜಾನ್ ಕಾಡು ಉಳಿವ ಭರವಸೆ; ಜಗತ್ತಿಗೂ ನಿಟ್ಟುಸಿರು

ಚುನಾವಣೆಗಳಲ್ಲಿ ಆದ ತೀವ್ರ ಧ್ರುವೀಕರಣದ ಕಾರಣದಿಂದ ಬೊಲ್ಸೊನಾರೊನ ಲಿಬರಲ್ ಪಾರ್ಟಿಯು ಎರಡೂ ಸದನಗಳಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಚೆಂಬರ್‌ಗಳಲ್ಲಿ 513 ಸೀಟುಗಳಲ್ಲಿ 99 ಸೀಟುಗಳನ್ನು ಹಾಗೂ ಸೆನಟ್‌ನಲ್ಲಿಯ 81 ಸೀಟುಗಳಲ್ಲಿ 13 ಸೀಟುಗಳನ್ನು ತನ್ನದಾಗಿಸಿದೆ. ಲೂಲಾ ಅವರ ವರ್ಕರ್ಸ್ ಪಕ್ಷವು 67 ಮತ್ತು 9 ಸೀಟುಗಳನ್ನು ಮಾತ್ರ ಗೆದ್ದಿದೆ. ಲಿಬರಲ್ ಪಾರ್ಟಿಗೆ ಸೀಟುಗಳು ಹೋಗಿದ್ದರೂ, ಅಲ್ಲಿನ ರಾಜಕೀಯ ವಿಶ್ಲೇಷಕರು ಹೇಳುವುದೇನೆಂದರೆ, ಚುನಾವಣೆಯಲ್ಲಿ ಕಂಡ ಧ್ರುವೀಕರಣವು ಶಾಸಕಾಂಗದಲ್ಲಿ ಪರಿಣಾಮ ಬೀರುವುದಿಲ್ಲ ಎಂದು. ಸೆನೆಟ್‌ನಲ್ಲಿರುವ ಲಿಬರಲ್ ಪಾರ್ಟಿಯ ಸದಸ್ಯರು ಬೊಲ್ಸೊನಾರೊನ ಕಟ್ಟಾ ಬೆಂಬಲಿಗರಲ್ಲ. ಆದರೆ ಅವರು ಒಂದು ಮಧ್ಯಮ ಮಾರ್ಗ ಅನುಸರಿಸುವಂತೆ ರಾಜಿ ಮಾಡಿಕೊಳ್ಳಲು ಲೂಲಾ ಅವರ ಮೇಲೆ ಒತ್ತಡ ಹಾಕಲಿದ್ದಾರೆ.

ಈ ಚುನಾವಣೆಯು ಬೊಲ್ಸೊನಾರೊ ಅವರ ರಾಜಕೀಯ ಜೀವನದ ಕೊನೆ ಎಂದು ಅನೇಕರಿಗೆ ಅನಿಸಿದೆ, ಆದರೆ ವಾಸ್ತವ ಹಾಗಿಲ್ಲ. ಲೂಲಾ ಅವರ ವರ್ಕರ್ಸ್ ಪಾರ್ಟಿಗೆ ಬೊಲ್ಸೊನಾರೊ ಅವರ ಲಿಬರಲ್ ಪಾರ್ಟಿಯನ್ನು ಈ ಚುನಾವಣೆಯು ಪ್ರಮುಖ ಸ್ಪರ್ಧಿಯಾಗಿಸಿದೆ. ಶಾಸಕಾಂಗದಲ್ಲಿ ಲಿಬರಲ್ ಪಾರ್ಟಿಯೂ ಶಕ್ತಿಶಾಲಿಯಾಗಿದೆ ಹಾಗೂ ಕಾರ್ಯಾಂಗದಲ್ಲಿ ಮತ್ತು ನ್ಯಾಯಾಂಗದಲ್ಲಿ ಬೊಲ್ಸೊನಾರೊಗೆ ಅನೇಕ ನಿಕಟ ಸ್ನೇಹಿತರಿದ್ದಾರೆ. ಬ್ರೆಜಿಲ್‌ನ ರಾಜಕೀಯ ಮೌಲ್ಯವು ಒಂದು ಸಂಪೂರ್ಣವಾದ ಬಲಪಂಥೀಯ ತಿರುವನ್ನು ಕಂಡಿದೆ. ಮುಂಚೆ ಹೆಚ್ಚಿನ ಪಕ್ಷಗಳು ಎಡಪಂಥೀಯ ಅಥವಾ ಮಧ್ಯಮಪಂಥೀಯ ಪಕ್ಷಗಳಾಗಿದ್ದವು. ಈಗ ಬ್ರೆಜಿಲ್‌ನ ಮತದಾರರು ಬೊಲ್ಸೊನಾರೊನ ಕಡು ಸಂಪ್ರದಾಯವಾದಿ ರಾಜಕೀಯ ಅಥವಾ ಲೂಲಾ ಅವರ ರಾಜಕೀಯದ ಮಧ್ಯೆಯೇ ತಮ್ಮ ಆಯ್ಕೆ ಮಾಡಬೇಕಿರುವ ಸನ್ನಿವೇಶ ನಿರ್ಮಾಣವಾಗಿದೆ.

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...