Homeಅಂತರಾಷ್ಟ್ರೀಯಬ್ರೆಜಿಲ್: ಬೊಲ್ಸೊನಾರೊ ಸೋಲು; ಅಮೆಜಾನ್ ಕಾಡು ಉಳಿವ ಭರವಸೆ; ಜಗತ್ತಿಗೂ ನಿಟ್ಟುಸಿರು

ಬ್ರೆಜಿಲ್: ಬೊಲ್ಸೊನಾರೊ ಸೋಲು; ಅಮೆಜಾನ್ ಕಾಡು ಉಳಿವ ಭರವಸೆ; ಜಗತ್ತಿಗೂ ನಿಟ್ಟುಸಿರು

- Advertisement -
- Advertisement -

ಬ್ರೆಜಿಲ್ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷರಾಗಿದ್ದ ಜೈರ್  ಬೊಲ್ಸೊನಾರೊರನ್ನು ಸೋಲಿಸಿರುವ ಲೂಯಿಜ್ ಇನಾಸಿಯೋ ಲೂಲಾ ಡಿಸಿಲ್ವಾ ನೂತನ ಅಧ್ಯಕ್ಷರಾಗಲಿದ್ದಾರೆ. ಇದು ಕೇವಲ ಲೂಲಾರ ಬೆಂಬಲಿಗರಿಗೆ ಮಾತ್ರವಲ್ಲ ಇಡೀ ವಿಶ್ವಕ್ಕೇ ನಿಟ್ಟುಸಿರು ಬಿಡುವ ಸುದ್ದಿ. ಕನಿಷ್ಠಪಕ್ಷ ಮುಂದಿನ ಅವಧಿಯವರೆಗಾದರೂ ಅಮೆಜಾನ್ ಕಾಡುಗಳ ನಾಶಕ್ಕೆ ಸ್ವಲ್ಪವಾದರೂ ತಡೆ ಬೀಳಬಹುದು ಎಂಬ ಆಶಾವಾದವನ್ನು ಪರಿಸರ ಪ್ರಿಯರಲ್ಲಿ ಅಷ್ಟೇ ಅಲ್ಲದೆ ಸಾಮಾನ್ಯ ಜನತೆಯಲ್ಲಿ ಕೂಡ ಈ ಫಲಿತಾಂಶವು ಮೂಡಿಸಿದೆ. ಅಮೆಜಾನ್ ಕಾಡುಗಳ ಮೇಲೆ ಯುದ್ಧವನ್ನೇ ಸಾರಿದ್ದ ಬೊಲ್ಸೊನಾರೊ ಕೇವಲ ಬ್ರೆಜಿಲ್ ಅಷ್ಟೇ ಅಲ್ಲದೆ ಇಡೀ ವಿಶ್ವದ ಮನುಕುಲದ ಅಸ್ತಿತ್ವಕ್ಕೇ ಧಕ್ಕೆ ತರುವ ಮಟ್ಟಕ್ಕೆ ಅರಣ್ಯನಾಶದ ಪರವಾಗಿ ನಿಂತಿದ್ದರು. ಅವರ ಅವಧಿಯಲ್ಲಿ ಅರಣ್ಯನಾಶವು ಕಳೆದ ಎರಡು ದಶಕಗಳಲ್ಲಿಯೇ ಅತೀ ಹೆಚ್ಚಿನದಾಗಿತ್ತು ಮತ್ತು ಅಮೆಜಾನ್ ಅರಣ್ಯವು ಕಂಡು ಕೇಳರಿಯದ ಮಾನವಜನ್ಯ ಕಾಳ್ಗಿಚ್ಚಿಗೆ ಒಳಗಾಗಿತ್ತು.

ಕನ್ನಡಿಗರಿಗೆ ಅಮೆಜಾನ್ ಕಾಡುಗಳ ಕುರಿತ ಮಾಹಿತಿ ಹೊಸದೇನಲ್ಲ; ಆ ಕಾಡಿನ ಅಗಾಧತೆಯ ಮತ್ತು ಶ್ರೀಮಂತ ಜೀವ ವೈವಿಧ್ಯದ ಪರಿಚಯ ಪೂರ್ಣಚಂದ್ರ ತೇಜಸ್ವಿಯವರ ವಿಸ್ಮಯ ಸರಣಿ ಪುಸ್ತಕದ ಮೂಲಕ ಆಗಿಯೇ ಇರುತ್ತದೆ. ಅಲ್ಲಿನ ಬುಡಕಟ್ಟು ಜನ, ಪಿರಾನ್ಹಾ ಮತ್ತು ಎಲೆಕ್ಟ್ರಿಕ್ ಈಲ್ ಮೀನು, ಅನಕೊಂಡಾ ಹಾವು ಮತ್ತು ಅಲ್ಲಿನ ಜನ ಬೇಟೆಯಾಡಲು ಬಾಣಗಳ ತುದಿಗೆ ಸವರುತ್ತಿದ್ದ ಕುರಾರೇ ಎಂಬ ವಿಷ, ಇವೆಲ್ಲ ಮಾಹಿತಿಯನ್ನು ಹೊತ್ತ ಪುಸ್ತಕ ಸರಣಿಯು ನಮ್ಮೆದುರಿಗೆ ಅಮೆಜಾನಿನ ರಮ್ಯಲೋಕವನ್ನೇ ತೆರೆದಿಟ್ಟಿತ್ತು ಮತ್ತು ಅಮೆಜಾನ್ ಎಂದೂ ಪಳಗಿಸಲು ಸಾಧ್ಯವೇ ಇಲ್ಲದ ದಟ್ಟ ಅರಣ್ಯಗಳ ಭೂ ಪ್ರದೇಶವಾಗಿ ಕನ್ನಡಿಗರ ಭಾವಕೋಶದಲ್ಲಿ ದಾಖಲಾಗಿತ್ತು. ಇಂತಹ ಅರಣ್ಯ ಕೂಡ ಇನ್ನು ಸರಿಪಡಿಸಲಾಗದಷ್ಟು ಪ್ರಮಾಣದಲ್ಲಿ ಕಳೆದ ಕೆಲ ದಶಕಗಳಲ್ಲಿ ನಾಶಕ್ಕೆ ಒಳಗಾಗುತ್ತಿದೆ ಮತ್ತು ಅದರ ಜೊತೆಗೇ ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಇನ್ನಷ್ಟು ಕ್ಷಿಪ್ರಗೊಳಿಸುತ್ತಿದೆ.
ಅಮೆಜಾನ್ ಅರಣ್ಯ ಮತ್ತು ಅದರ ವಿನಾಶವು ಕೇವಲ ದಕ್ಷಿಣ ಅಮೆರಿಕದ ವಿಷಯವಷ್ಟೇ ಅಲ್ಲ, ಕಾರಣ, ವಿಶ್ವದ ಅಳಿವು ಉಳಿವು ಅಮೆಜಾನ್ ಅರಣ್ಯಗಳ ಸುಸ್ಥಿತಿಯ ಮೇಲೆ ನಿಂತಿದೆ. ಹವಾಮಾನ ವೈಪರೀತ್ಯದ ಕುರಿತ ಎಲ್ಲ ಜಾಗತಿಕ ಸಭೆಗಳಲ್ಲಿಯೂ ಅಮೆಜಾನ್ ಕುರಿತ ಚರ್ಚೆ ಇದ್ದೆ ಇರುತ್ತದೆ. ಜಾಗತಿಕ ಸಮುದಾಯದ ಒತ್ತಾಸೆ ಮತ್ತು ಬೆಂಬಲದ ಕಾರಣದಿಂದಾಗಿ, ಬೊಲ್ಸೊನಾರೊರ ಅಧ್ಯಕ್ಷೀಯ ಅವಧಿಗೂ ಮುಂಚೆ, ಬ್ರೆಜಿಲ್‌ನ ಈ ಕಾಡುಗಳ ನಾಶದ ಪ್ರಮಾಣವು ಸ್ವಲ್ಪ ಮಟ್ಟಿಗಾದರೂ ತಗ್ಗಿತ್ತು. ಸುಮಾರು ಎರಡು ಅವಧಿಗೆ ಅಧ್ಯಕ್ಷರಾಗಿದ್ದ ಲೂಲಾರ ಕ್ರಮಗಳಿಂದಾಗಿ ಅಲ್ಲಿನ ಮೂಲನಿವಾಸಿಗಳ ಹಕ್ಕುಗಳ ರಕ್ಷಣೆ ಕೂಡ ತಕ್ಕಮಟ್ಟಿಗೆ ಆಗಿತ್ತು. ಆದರೆ 2019-2022ರ ಅವಧಿಗೆ ಅಧ್ಯಕ್ಷರಾಗಿದ್ದ ಬೊಲ್ಸೊನಾರೊ, ಅಮೆಜಾನ್ ಕಾಡುಗಳ ಮೇಲೆ ಬ್ರೆಜಿಲ್ ಜನರಿಗಷ್ಟೇ ಹಕ್ಕು ಇದೆ, ಅದರಲ್ಲಿ ವಿದೇಶಿ ಹಸ್ತಕ್ಷೇಪ ಆಗಕೂಡದು ಎಂಬ ತತ್ವದ ಮೂಲಕ ಬ್ರೆಜಿಲ್ ನಲ್ಲಿ ವ್ಯಾಪಕವಾಗಿ ಕೃಷಿ ಉದ್ಯಮ, ಗಣಿಗಾರಿಕೆಗೆ ಅವಕಾಶ ಕೊಟ್ಟರು; ಮತ್ತು ಅದರ ಮುಸುಕಿನಲ್ಲಿ ನಡೆಯುವ ಮರಮುಟ್ಟುಗಳ ಉದ್ಯಮಕ್ಕೆ ಸಂಪೂರ್ಣ ಬೆಂಬಲ ಕೊಟ್ಟರು. ಇಲ್ಲಿ ಕೃಷಿಯೆಂದರೆ ನಮ್ಮ ದೇಶದಲ್ಲಿ ಇದ್ದಂತೆ ಸಣ್ಣ ಹಿಡುವಳಿದಾರರ ಸಾಂಪ್ರದಾಯಿಕ ಕೃಷಿ ಅಲ್ಲ. ವಿಶಾಲವಾದ ಪ್ರದೇಶದಲ್ಲಿ ಕಾಡುಗಳನ್ನು ಸವರಿ ಬೆಂಕಿ ಕೊಟ್ಟು ಅಲ್ಲಿ ಸೋಯಾ ಅವರೆಯನ್ನು ಏಕ ಬೆಳೆಯನ್ನಾಗಿ ಬೆಳೆಸುವ ಬೃಹತ್ ಉದ್ಯಮ. ಯಾವ ದೃಷ್ಟಿಯಲ್ಲಿಯೂ ಪರಿಸರ ಸ್ನೇಹಿಯಲ್ಲದ ಈ ಕೃಷಿಯು ಅಪಾರವಾದ ಕೀಟನಾಶಕಗಳನ್ನು ಬೇಡುತ್ತದೆ, ಹೀಗಾಗಿ ಇವರ ಅವಧಿಯಲ್ಲಿ ಬ್ರೆಜಿಲ್, ವಿಶ್ವದ ಅತಿದೊಡ್ಡ ಕೀಟನಾಶಕಗಳ ಬಳಕೆದಾರ ರಾಷ್ಟ್ರವಾಗಿಯೂ ಹೊರಹೊಮ್ಮಿತು. ಮುಂಚೆ ನಿಷೇಧಿತವಾಗಿದ್ದ ಅಪಾಯಕಾರಿ ಕೀಟನಾಶಕಗಳ ಬಳಕೆಗೆ ಅವಕಾಶ ನೀಡಲಾಯಿತು. ಇದಷ್ಟೇ ಅಲ್ಲದೆ ಬ್ರೆಜಿಲ್ ವಿಶ್ವದ ಅತಿದೊಡ್ಡ ದನದ ಮಾಂಸದ ರಫ್ತುದಾರ ರಾಷ್ಟ್ರ.ಇದೇನು ಬಡ ದನಗಾಹಿಗಳು ನಡೆಸುವ ಉದ್ಯೋಗವಲ್ಲ, ದೊಡ್ಡ ದೊಡ್ಡ ಕಾಡುಗಳನ್ನು ಸವರಿ ಅವನ್ನು ಹುಲ್ಲುಗಾವಲನ್ನಾಗಿ ಪರಿವರ್ತಿಸಿ ದನಗಳನ್ನು ಸಾಕುವ ವಿಧಾನ. ಇದು ಕೂಡ  ಅಮೆಜಾನ್ ನಾಶಕ್ಕೆ ದೊಡ್ಡ ಕೊಡುಗೆ ನೀಡಿದೆ.
ಇಷ್ಟೇ ಅಲ್ಲದೆ, ಬೊಲ್ಸೊನಾರೊ ಅಮೆಜಾನ್‌ನ ನಾಶಕ್ಕೆ ಇನ್ನೂ ಮುಂದುವರೆದು ಹೊಸ ಆಯಾಮವನ್ನೇ ತೆರೆದರು. ಕೃಷಿ ಉದ್ಯಮ ಲಾಬಿಯ ಅಣತಿಯಂತೆ ಅಕ್ರಮವಾಗಿ ಕಾಡು ಕಡಿದು ನಿರ್ಮಿಸಿದ ಕೃಷಿ ಭೂಮಿಯನ್ನು ಸಕ್ರಮ ಮಾಡುವ ಕರಡು ಮಸೂದೆಯನ್ನು ಹೊರಡಿಸಿದರು. ಇದು, ಅಪರಾಧಿಗಳಾಗಿ ಕಾನೂನಿನ ಕ್ರಮವನ್ನು ಎದುರಿಸಬೇಕಾಗಿದ್ದಂತವರನ್ನು ಭೂಮಿಯ ಒಡೆಯರನ್ನಾಗಿಸುತ್ತಿತ್ತು. ಅಲ್ಲಿನ ಮೂಲನಿವಾಸಿಗಳ ಹಕ್ಕನ್ನು ಮೊಟಕುಗೊಳಿಸಿ ಅವರ ವ್ಯಾಪ್ತಿಯ ಭೂಮಿಯನ್ನು ಕಾಡುಗಳ್ಳರು ಸುಲಭವಾಗಿ ಪಡೆಯುವಂತಹ ಕರಡನ್ನು ರೂಪಿಸಿದರು. ಸಾಮಾನ್ಯವಾಗಿ ಪರಿಸರ ವಿರೋಧಿ ಧೋರಣೆಯುಳ್ಳವರು ಮಾಡುವ ಮೊದಲ ಕೆಲಸವೆಂದರೆ ವಿಜ್ಞಾನ ಮತ್ತು ವಿಜ್ಞಾನಿಗಳನ್ನು ದೂಷಿಸುವುದು ಮತ್ತು ಸಂಶೋಧನೆಗೆ ಇದ್ದ ಬೆಂಬಲವನ್ನು ಮೊಟಕುಗೊಳಿಸುವುದು.  ಬೊಲ್ಸೊನಾರೊ ಕೂಡ ಇದನ್ನು ಚಾಚೂ ತಪ್ಪದೆ ಜಾರಿಗೆ ತಂದರು. ಬ್ರೆಜಿಲ್‌ನ ಪರಿಸರ ರಕ್ಷಣೆ ಮತ್ತು ಸಂಶೋಧನೆಗೆ ಮೀಸಲಾಗಿದ್ದ ಹಣಕಾಸಿನ ನೆರವನ್ನು ಕಡಿತಗೊಳಿಸಿದರು. ಇದರ ಪರಿಣಾಮವಾಗಿ ಪರಿಸರ ಅಪರಾಧಗಳನ್ನು ಪತ್ತೆ ಹಚ್ಚುವ ಮತ್ತು ಶಿಕ್ಷಿಸುವ ಪ್ರಕ್ರಿಯೆಯು ಕುಂಠಿತವಾಗಿ ಅರಣ್ಯನಾಶ ಇನ್ನೂ ಹೆಚ್ಚಿತು. ಇದು ಅಮೆಜಾನಿನ ಇತಿಹಾಸದಲ್ಲೇ ಭೀಕರವಾದ ಕಾಳ್ಗಿಚ್ಚಿಗೂ ನಾಂದಿ ಹಾಡಿತು. ಈವರೆಗೂ ಜಾಗತಿಕ ಇಂಗಾಲವನ್ನು ಹೀರಿಕೊಳ್ಳುವ ತಾಣವಾಗಿದ್ದ ಅಮೆಜಾನ್, ಭಾರೀ ಪ್ರಮಾಣದ ಇಂಗಾಲವನ್ನು ಹೊರಸೂಸುವ ಕುಲುಮೆಯಾಗಿ ಮಾರ್ಪಟ್ಟಿತು. ಇದರ ತೀವ್ರತೆ ಯಾವ ಮಟ್ಟಕ್ಕೆ ಇತ್ತೆಂದರೆ ಬ್ರೆಜಿಲ್‌ನ ಸಾವೋ ಪೌಲೊ ನಗರ ಬೆಂಕಿಯ ಹೊಗೆಯಿಂದಾಗಿ ಒಂದು ದಿನ ಪೂರ್ತಿ ಕತ್ತೆಲೆಯಿಂದ ಅವರಿಸಲ್ಪಟ್ಟಿತ್ತು. ಇತ್ತ ಎಚ್ಛೆತ್ತ ಜಾಗತಿಕ ಸಮುದಾಯ ನೆರವಿಗೆ ನಿಂತರೂ ಮೊಂಡಾಟ ಬಿಡದ ಬೊಲ್ಸೊನಾರೊ, ಜಿ7 ರಾಷ್ಟ್ರಗಳು ನೀಡಿದ ನೆರವನ್ನು ನಾನು ಸ್ವೀಕರಿಸಲಾರೆ ಎಂದು ಚಂಡಿ ಹಿಡಿದರು. ಬದಲಾಗಿತ್ತರುವ ಜಾಗತಿಕ ರಾಜಕೀಯ ಸಮೀಕರಣಗಳೂ ಅವರ ಮೊಂಡು ಹಠಕ್ಕೆ ಕಾರಣ ಎನ್ನಬಹುದು. ಒಂದು ವೇಳೆ ಯುರೋಪ್ ಅಥವಾ ಅಮೆರಿಕ ಬ್ರೆಜಿಲ್‌ನ ಉತ್ಪನ್ನಗಳನ್ನು ನಿರ್ಬಂಧಿಸಿದರೂ ಚೀನಾ ಅವುಗಳಿಗೆ ದೊಡ್ಡ ಮಾರುಕಟ್ಟೆಯನ್ನೇ ಒದಗಿಸಿದೆ. ಹೀಗಾಗಿ  ಪರಿಸರ ರಕ್ಷಣೆಗೆ ಜಾಗತಿಕ ಒತ್ತಡ ಮುಂಚಿನಷ್ಟು ಪರಿಣಾಮಕಾರಿಯಾಗಿ ಇಲ್ಲದೆ ಹೋಗಬಹುದು, ಒಂದು ವೇಳೆ ಇದ್ದರೂ, ಅದನ್ನು ದೇಶಭಕ್ತಿಯ ಆಧಾರದ ಮೇಲೆ ಅಲ್ಲಗಳೆಯುವ ಕ್ರಮಗಳೂ ಹೆಚ್ಚುತ್ತಿವೆ. ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಬಾಹ್ಯ ಹಸ್ತಕ್ಷೇಪವನ್ನು ವಿರೋಧಿಸುವುದೇನೋ ಸರಿ ಆದರೆ ಆ ವಿರೋಧವನ್ನು ಕೇವಲ ಇನ್ನೂ ಹೆಚ್ಚಿನ ಅರಣ್ಯ ನಾಶಕ್ಕೆ ಬಳಸಿಕೊಳ್ಳಲಾಗಿದೆಯೇ ಹೊರತು ತಮ್ಮದೇ ದೇಶದ ಪರಿಸರ ರಕ್ಷಣೆಯ ಬಾಧ್ಯತೆಯಾಗಿ ಮಾತ್ರ ಪರಿವರ್ತನೆಯಾಗುತ್ತಿಲ್ಲ.
ಇದೆಲ್ಲದರ ಪರಿಣಾಮ ಕಳೆದ ಕೆಲ ವರ್ಷಗಳಲ್ಲಿ ಉಪಗ್ರಹ ಆಧಾರಿತ ಸಂಶೋಧನೆಯ ಪ್ರಕಾರ ಅಮೆಜಾನ್ ಕಾಡಿನ ಕೆಲ ಭಾಗಗಳು ಸರಿಪಡಿಸಲಾಗದಷ್ಟು ನಾಶ ಹೊಂದಿವೆ. ಕಾಳ್ಗಿಚ್ಚಿನ ಪರಿಣಾಮವಾಗಿ ಅಮೆಜಾನ್ ಅರಣ್ಯಗಳು ತೇವವನ್ನು ಕಳೆದುಕೊಂಡು ಬೆಂಕಿಗೆ ಮುಂಚಿಗಿಂತಲೂ ಸುಲಭವಾಗಿ ತುತ್ತಾಗುತ್ತಿವೆ ಮತ್ತು ಇದರಿಂದಾಗಿ ಬರದ ಪ್ರಮಾಣವು ಹೆಚ್ಚಿದೆ. ಹೆಚ್ಚಿನ ಮಳೆಯಿಂದ ಯಾವತ್ತೂ ತೇವವಾಗಿ ಇರುತ್ತಿದ್ದ ಇಲ್ಲಿನ ಕಾಡುಗಳು, ನಿಧಾನವಾಗಿ ಆ ನೀರನ್ನು ಭೂಮಿಗೆ ಬಿಡುವುದಲ್ಲದೆ ತಮ್ಮಲ್ಲಿಯೂ ಸಹ ತೇವವನ್ನು ಹಿಡಿದಿಟ್ಟುಕೊಳ್ಳುತ್ತವೆ. ಇದೆ ತೇವವನ್ನು ವರ್ಷಪೂರ್ತಿ ವಾತಾವರಣಕ್ಕೆ ಆವಿಯ ರೂಪದಲ್ಲಿ ಬಿಡುಗಡೆ ಮಾಡತ್ತವೆ. ಇದೇ ಆವಿಯು ಮಳೆಯ ರೂಪದಲ್ಲಿ ಮತ್ತೆ ಭೂಮಿಗೆ ಬರುತ್ತದೆ. ಒಂದು ಅಂದಾಜಿನ ಪ್ರಕಾರ, ಅಮೆಜಾನ್ ಅರಣ್ಯದ ಮರಗಳು ಬಿಡುಗಡೆ ಮಾಡುವ ಆವಿಯು, ಅಮೆಜಾನ್ ನದಿಯು ಸಮುದ್ರಕ್ಕೆ ಬಿಡುವ ನೀರಿನ ಪ್ರಮಾಣದಷ್ಟು ಅಗಾಧ. ದಕ್ಷಿಣ ಅಮೆರಿಕದ ಸರಿಸುಮಾರು ಎಲ್ಲ ದೇಶಗಳೂ ಮಳೆಗಾಗಿ ಈ ಸೂಕ್ಷ್ಮ ಜಲಚಕ್ರದ ಮೇಲೆಯೇ ಅವಲಂಬಿತವಾಗಿವೆ. ಈ ಸಂಕೀರ್ಣ ಪ್ರಕ್ರಿಯೆಗೆ ತೊಂದರೆ ಉಂಟಾದರೆ ದಕ್ಷಿಣ ಅಮೆರಿಕದ ಎಲ್ಲ ದೇಶಗಳಿಗೂ ತೊಂದರೆ  ತಪ್ಪಿದ್ದಲ್ಲ.

ಅಮೆಜಾನ್ ಕಾಡುಗಳ ಸಂಕೀರ್ಣ ವ್ಯವಸ್ಥೆ ಬಹುಶಃ ವಿಜ್ಞಾನಕ್ಕೆ ಸಂಪೂರ್ಣವಾಗಿ ಯಾವತ್ತೂ ನಿಲುಕಲಾರದೇನೋ. ಮನುಷ್ಯನ ಹಸ್ತಕ್ಷೇಪದಿಂದ ಉಂಟಾದ ಪರಿಣಾಮವನ್ನು ತಿಳಿಯಲೂ ಸಹ ವರ್ಷಗಳೇ ಬೇಕು. ಇಂತಹ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಅದರ ಬೆಲೆ ಅರಿಯದೇ ಹಿಗ್ಗಾಮುಗ್ಗಾ ನಾಶಪಡಿಸಿದರೆ ಅದನ್ನು ಯಾವತ್ತೂ ನಾವು ಮರಳಿ ಪಡೆಯಲಾರವು. ಆಗ “ತುಂಬಲಾರದ ನಷ್ಟ” ಎಂಬ ಪದ ಕೇವಲ ಕ್ಲೀಷೆಯಾಗಿ ಉಳಿಯುತ್ತದೆ.

ಗುರುಪ್ರಸಾದ್ ತಿಮ್ಮಾಪುರ
ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...