Homeಅಂತರಾಷ್ಟ್ರೀಯಸ್ವೀಡನ್ ಸಾರ್ವತ್ರಿಕ ಚುನಾವಣೆಗಳು ಏನನ್ನು ಸೂಚಿಸುತ್ತದೆ?

ಸ್ವೀಡನ್ ಸಾರ್ವತ್ರಿಕ ಚುನಾವಣೆಗಳು ಏನನ್ನು ಸೂಚಿಸುತ್ತದೆ?

- Advertisement -
- Advertisement -

ನಡೆದದ್ದೇನು?

ಸೆಪ್ಟೆಂಬರ್ 11, 2022 ರಂದು ಸ್ವೀಡನ್ನಿನ ಸಾರ್ವತ್ರಿಕ ಚುನಾವಣೆಗಳು ನಡೆದವು. ಯಾವುದೇ ಪಕ್ಷವು ಬಹುಮತ ಪಡೆಯದಿದ್ದರೂ, ನಾಲ್ಕು ಬಲಪಂಥೀಯ ಪಕ್ಷಗಳ ಮೈತ್ರಿ ಸರ್ಕಾರ ರಚಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಸ್ವೀಡನ್ ಡೆಮಾಕ್ರಾಟ್ಸ್, ಮತ್ತು ಬಲಪಂಥೀಯ “ಮಾಡರೇಟ್” ಪಕ್ಷಗಳು ಎರಡನೇ ಮತ್ತು ಮೂರನೇ ಅತಿ ಹೆಚ್ಚು ಸ್ಥಾನಗಳನ್ನು ಪಡೆದಿರುವ ಹಿನ್ನೆಲೆಯಲ್ಲಿ ಇವುಗಳು ಮತ್ತೆರಡು ಬಲಪಂಥೀಯ ಪಕ್ಷಗಳೊಳಗೂಡಿ ಹೊಸ ಸರ್ಕಾರ ರಚಿಸುವ ಸಾಧ್ಯತೆಗಳು ಕಂಡುಬರುತ್ತಿವೆ.

ಇತ್ತೀಚಿಗಷ್ಟೇ ಉಕ್ರೇನಿನ ಯುದ್ಧದ ಸಮಯದಲ್ಲಿಯೇ ನ್ಯಾಟೋ ಮೈತ್ರಿಗೆ ಒಪ್ಪಿಗೆಯನ್ನು ಸೂಚಿಸಿ ಅದಕ್ಕೆ ಸೇರ್ಪಡೆಗೊಂಡ ಕಾರಣಕ್ಕೆ ಸ್ವೀಡನ್ನಿನ ರಾಜಕೀಯವು ಈ ವರ್ಷ ಸರಾಗವಾಗಿರದೆ, ಅಯೋಮಯವಾಗಿಯೇ ಸಾಗಿತ್ತು. ಸದರಿ ಚುನಾವಣೆಯಲ್ಲಿ ಚುನಾವಣಾ ತೀವ್ರ ಧ್ರುವೀಕರಣವೂ ಕೂಡ ಕಂಡುಬಂದಿತ್ತು. ಅತಿ ದೊಡ್ಡ ಎಡಪಕ್ಷವಾದ ಸೋಶಿಯಲ್ ಡೆಮಾಕ್ರೆಟ್ ಪಕ್ಷವು ನಗರಗಳಲ್ಲಿ, ಅದರಲ್ಲೂ ಮುಖ್ಯವಾಗಿ ಸ್ಟಾಕ್‌ಹೋಮ್ ಕೌಂಟಿಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದ ಕಾರಣ ಅತೀ ಹೆಚ್ಚು ಮತಗಳನ್ನು ಪಡೆದಿದೆ. ಮಾಡರೇಟ್ ಪಾರ್ಟಿಯನ್ನು ಹಿಂದಿಕ್ಕಿ, ಅತಿ ಹೆಚ್ಚು ಮತಗಳನ್ನು ತನ್ನದಾಗಿಸಿಕೊಂಡು ಸ್ವೀಡಿಶ್ ಡೆಮಾಕ್ರಾಟ್ಸ್ ಪಕ್ಷವು ಅತಿ ದೊಡ್ಡ ಬಲಪಂಥೀಯ ಪಕ್ಷವಾಗಿ ಹೊರಹೊಮ್ಮಿದೆ.

ಸ್ವೀಡಿಶ್ ಡೆಮಾಕ್ರಾಟ್ ಪಕ್ಷದ ಬೆಳವಣಿಗೆಯು ಹಲವು ಕಾರಣಗಳಿಗೆ ಆತಂಕಕಾರಿ ಎನಿಸುತ್ತದೆ. ಪಕ್ಷದ ಮುಖಂಡತ್ವ ನಿರಾಕರಿಸಿದರೂ ಅದು ನವ-ನಾಜಿಯೊಂದಿಗೆ ಸಂಪರ್ಕವನ್ನು ಮೊದಲಿನಿಂದಲೂ ಹೊಂದಿದೆ. ವಲಸೆಯನ್ನು ಮತ್ತು ಪರಿಸರವಾದವನ್ನು ವಿರೋಧಿಸುವ ವೇದಿಕೆ ಮತ್ತು ಸಭೆಗಳಲ್ಲಿ ಅದು ತನ್ನ ಪ್ರಚಾರವನ್ನು ಕೈಗೊಂಡಿತ್ತು.

ಸೋಶಿಯಲ್ ಡೆಮಾಕ್ರಟ್ – ಸಂಸತ್ತಿನಲ್ಲಿ ಅತಿ ದೊಡ್ಡ ಪಕ್ಷ

ಇಂದಿನವರೆಗೂ ಸ್ವೀಡಿಶ್ ಸೋಶಿಯಲ್ ಡೆಮಾಕ್ರಟಿಕ್ ಪಕ್ಷವೇ ಸ್ವೀಡನ್ನಿನ ಅತೀ ಜನಪ್ರಿಯ ಪಕ್ಷವಾಗಿದೆ. ಅದು 1932ರಿಂದಲೂ 349 ಸ್ಥಾನಗಳ ಪೈಕಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುತ್ತಾ ಬಂದಿದೆ ಮತ್ತು ಪಡೆಯುವ ಸ್ಥಾನಗಳು ಹಾಗ್ತೂ ಮತಗಳೆಂಬ ಎರಡೂ ಸೂಚ್ಯಂಕಗಳಿಂದಲೂ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎರಡನೇ ಇಂಟರ್‌ನ್ಯಾಷನಲ್‌ನಲ್ಲಿ (Second International), ಜಗತ್ತಿನಾದ್ಯಂತ ಸೋಶಿಯಲ್ ಡೆಮಾಕ್ರಟ್ಸ್ ಎಂದು ಗುರುತಿಸಿಕೊಂಡಿದ್ದ ಮಾರ್ಕ್ಸ್‌ವಾದಿ ಪಕ್ಷಗಳು ಸೇರಿ, ಯೂರೋಪಿನ ವಿವಿಧ ದೇಶಗಳಲ್ಲಿ ಪಕ್ಷಗಳನ್ನು ಸ್ಥಾಪಿಸಿದ ವಿದ್ಯಮಾನದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಹುಟ್ಟನ್ನು ನಾವು ಗುರುತಿಸಬಹುದಾಗಿದೆ. ಈ ಪಕ್ಷವು ದೇಶದೆಲ್ಲೆಡೆಗಳಿಂದ ಬೆಂಬಲ ಪಡೆದರೂ, ಅದರ ಶಕ್ತಿ ಅಡಗಿರುವುದು ತನ್ನ ಕಾರ್ಮಿಕ ಸಂಘಟನೆಯಲ್ಲಿ.

ಆದರೆ, 2000ರ ದಶಕದ ಕೊನೆಯಾರ್ಧದಿಂದ ಅದರ ಶಕ್ತಿ ಕಳೆಗುಂದುತ್ತಿರುವುದು ಕಂಡುಬರುತ್ತಿದೆ. ಪಕ್ಷವು ಈಗಲೂ ಕಾರ್ಮಿಕ ಸಂಘಟನೆಯಲ್ಲಿ ಸಕ್ರಿಯವಾಗಿದ್ದರೂ, ಒಟ್ಟಿನಲ್ಲಿ ಕಾರ್ಮಿಕ ಸಂಘಟನೆಗಳೇ ತಮ್ಮ ಕಾವು ಕಳೆದುಕೊಂಡಿವೆ.

ಸ್ವೀಡನ್ನಿನ ಎಡಪಂಥೀಯ ಪಕ್ಷಗಳಿಗೆ ಮುಖ್ಯ ಪೆಟ್ಟು

ಜಾಗತಿಕ ಆರ್ಥಿಕ ಬಿಕ್ಕಟ್ಟು 1990ರ ದಶಕದಲ್ಲಿ ಸ್ವೀಡನ್ನನ್ನು ಅತೀವವಾಗಿ ಆವರಿಸಿ ಕಾಡಿತು. ಈ ಬಿಕ್ಕಟ್ಟನ್ನು ಬಗೆಹರಿಸಲು, ಆಗ ಅಧಿಕಾರದಲ್ಲಿದ್ದ ಸೋಶಿಯಲ್ ಡೆಮಾಕ್ರಟ್ ಪಕ್ಷವು ಜನಕಲ್ಯಾಣ ಯೋಜನೆಗಳಿಗೆ ನೀಡುತ್ತಿದ್ದ ಅನುದಾನಗಳನ್ನು ಕಡಿತಗೊಳಿಸಿದ ಕಾರಣ, ಕಾರ್ಮಿಕ ವರ್ಗವು ತನ್ನ ಶಕ್ತಿಯನ್ನು ಕಳೆದುಕೊಳ್ಳಲು ಕಾರಣವಾಯಿತು. ಇತರೆ ದೇಶಗಳಿಗೆ ಹೋಲಿಸಿದಲ್ಲಿ ಸ್ವೀಡನ್ನಿನ ಸರ್ಕಾರ ಕೈಗೊಂಡ ನಿರ್ಧಾರದ ಪರಿಣಾಮ ಆ ದೇಶದ ಮೇಲೆ ತತ್‌ಕ್ಷಣವೇ ಕಾಣಿಸದಿದ್ದರೂ, ಇದು ನಿಧಾನವಾಗಿ ಸೋಶಿಯಲ್ ಡೆಮಾಕ್ರಟ್ ಪಕ್ಷದ ಶಕ್ತಿಯಾಗಿದ್ದ ಕಾರ್ಮಿಕ ವರ್ಗದ ಮೇಲೆ ದುಷ್ಪರಿಣಾಮವನ್ನು ಬೀರಿದ್ದು ಖಚಿತ.

2006ರಿಂದ ಎಡ ಪಕ್ಷಗಳು ಮುಖ್ಯವಾಗಿ ಎರಡು ವಿಭಾಗಗಳಿಂದ ತನ್ನ ಮತಗಳನ್ನು ಕಳೆದುಕೊಂಡಿವೆ: ಪಿಂಚಣಿದಾರರು ಮತ್ತು ಕಾರ್ಮಿಕ ಸಂಘಟನೆಗಳು. ಕಾರ್ಮಿಕ ವರ್ಗವನ್ನು ತೊರೆದಿರುವ ಪಿಂಚಣಿದಾರರು ಪರ್ಯಾಯ ಬಲಪಂಥೀಯ ಮಾಧ್ಯಮಗಳು ಪ್ರಚಾರ ಮಾಡುತ್ತಿರುವ ಬಲಪಂಥೀಯ ಧೋರಣೆಗಳಿಗೆ ಮಾರುಹೋಗಿದ್ದಾರೆ. ಈ ಪರ್ಯಾಯ ಬಲಪಂಥೀಯ ಮಾಧ್ಯಮಗಳು ಕ್ಸೆನೋಫೋಬಿಕ್ (ಜನಾಂಗೀಯ ದ್ವೇಷ) ಆಗದ್ದು ಕೃತಕವಾದ ತುರ್ತಿನ ಬಿಕ್ಕಟ್ಟಿನ ಭಾವನೆಯನ್ನು ಜನರಲ್ಲಿ ಸೃಷ್ಟಿಸಿದೆ. ಇದು ಸ್ವೀಡನ್ನಿನ ನಡೆಯುವ ಅಪರಾಧಗಳಿಗೆ ಎಡರಂಗವನ್ನೂ, ವಲಸೆ ಬರುವವರನ್ನು ದೂಷಿಸುತ್ತದೆ.

ಸ್ವೀಡಿಶ್ ಡೆಮಾಕ್ರಟ್ಸ್‌ನ ಜನನ

ಎರಡನೇ ವಿಶ್ವಯುದ್ಧದ ನಂತರ, ನಾಜಿ ಸಿದ್ಧಾಂತವು ಸ್ವೀಡನ್ನಿನ ವಿರೋಧ ಪಕ್ಷದ ಸ್ವರೂಪವನ್ನು ಪಡೆದುಕೊಂಡಿತು. ವಿರೋಧ ಪಕ್ಷವು ನಾಜಿ ಸಿದ್ಧಾಂತದಿಂದ ತನ್ನನ್ನು ತಾನು ದೂರವಿರಿಸಿಕೊಂಡರೂ, ವಿಶ್ವಯುದ್ಧದ ನಂತರದಲ್ಲಿ ನಾಜಿ ಸಹಭಾಗೀದಾರರನ್ನು ಬಚಾವು ಮಾಡುವುದರಲ್ಲಿ ಮುಖ್ಯ ಪಾತ್ರ ವಹಿಸಿತು. ತನ್ನನ್ನು ತಾನು ಉಳಿಸಿಕೊಳ್ಳಲು ವಿರೋಧ ಪಕ್ಷವನ್ನು ನ್ಯೂ ಸ್ವೀಡಿಶ್ ಮೂವ್ಮೆಂಟ್ ಎಂಬ ಹೆಸರಿನಲ್ಲಿ ಕರೆದುಕೊಂಡು ತನ್ನ ಕೆಲಸವನ್ನು ಮುಂದುವರಿಸಿತು.

ಹೀಗೆ, 1980ರವರೆಗೂ ನವ-ನಾಜಿ ಜಾಲಗಳು ಬದುಕುಳಿದವು. ಬಿಳಿಯ ಜನಾಂಗವನ್ನು ಸಮರ್ಥಿಸುವ ಸ್ವೀಡಿಶ್ ಜನರಿಂದಲೇ ಇದಕ್ಕೆ ಹೆಚ್ಚು ಬೆಂಬಲ ವ್ಯಕ್ತವಾಗಿದ್ದು. ಸ್ಕಾನಿಯ ಎಂಬ ಪ್ರಾದೇಶಿಕತೆಯಲ್ಲಿ ಹೆಚ್ಚಿನ ಅಭಿಮಾನವನ್ನು ಹೊಂದಿದ್ದ ಪ್ರದೇಶವೇ ಇವರ ಶಕ್ತಿ ಪ್ರದೇಶವಾಗಿದ್ದರೂ, ಇವರು ಸ್ವೀಡನ್ನಿನ್ನೆಲ್ಲಡೆ ಹರಡಿದ್ದರು. ನವ-ನಾಜಿ ಸಿದ್ಧಾಂತಿಗಳು ವಿವಿಧ ಬಲಪಂಥೀಯ ಮತ್ತು ನಡು-ಬಲ (Centre-Right) ರಾಜಕೀಯ ಚಳವಳಿಗಳಲ್ಲಿ ನುಸುಳಿದರು. ಈ ಚಳವಳಿಗಳು ರಾಜಕೀಯವಾಗಿ ಸಕ್ರಿಯವಾಗಿತ್ತು ಮಾತ್ರವಲ್ಲದೇ ಸ್ತ್ರೀವಾದ-ವಿರೋಧಿ ಮತ್ತು ಕ್ಸೆನೋಫೋಬಿಯಾವನ್ನು ಪಸರಿಸುವುದರಲ್ಲಿ ನಿರತವಾಗಿದ್ದವು. ಇದರಲ್ಲಿ ಬಹಳಷ್ಟು ಪಂಗಡಗಳು ಒಂದುಗೂಡಿ ಸ್ವೀಡಿಶ್ ಪ್ರೋಗ್ರೆಸ್ ಪಾರ್ಟಿಯನ್ನು 1979ರಲ್ಲಿ ಸ್ಥಾಪಿಸಿದವು.

ಸ್ವೀಡಿಶ್ ಡೆಮಾಕ್ರಟ್ಸ್ ಮತ್ತು ಬಲಪಂಥದ ಬೆಳವಣಿಗೆ

ಸ್ವೀಡಿಶ್ ಪ್ರೋಗ್ರೆಸ್ ಪಾರ್ಟಿಯು 1988ರಲ್ಲಿ ಇನ್ನೂ ತೀವ್ರ ಬಲಪಂಥೀಯ ಪಕ್ಷಗಳೊಂದಿಗೆ ಕೂಡಿದಾಗ ಸ್ಥಾಪನೆಗೊಂಡದ್ದೇ ಸ್ವೀಡಿಶ್ ಡೆಮಾಕ್ರಟ್ಸ್ ಪಕ್ಷ. ಬಹಳ ಕಾಲ ಈ ಪಕ್ಷವು ಜನಮನ್ನಣೆಯನ್ನು ಪಡೆಯದೆ ಕೇವಲ ಪುಂಡರ ಗುಂಪಾಗಿತ್ತು. 2000ರ ವೇಳೆಗೆ ಯಾವಾಗ ಪಕ್ಷವು ತನ್ನ ನಾಜಿ ಮತ್ತು ಫ್ಯಾಸಿಸ್ಟ್ ಹಿನ್ನೆಲೆಯಿಂದ ದೂರಸರಿದು ಹೆಚ್ಚು ಮುಖ್ಯವಾಹಿನಿಯ ನಿಲುವುಗಳನ್ನು ತೋರಲು ಪ್ರಾರಂಭಿಸಿತೋ ಆಗ ಇದರ ದೆಸೆ ಬದಲಾಯಿತು. ಪಕ್ಷದ ಹಿರಿಯ ನಾಯಕರು ತೀವ್ರ ನಿಲುವುಗಳನ್ನು ಹೊಂದಿದ್ದ ಸದಸ್ಯರನ್ನು ಪಕ್ಷದಿಂದ ಉಚ್ಛಾಟಿಸಲು ಪ್ರಾರಂಭಿಸಿದರು. ಇದರ ಪರಿಣಾಮವಾಗಿ ಸ್ವೀಡಿಶ್ ಡೆಮಾಕ್ರಟರು 2010ರ ವೇಳೆಗೆ ಮೊದಲ ಬಾರಿಗೆ ಚುನಾವಣೆಗಳಲ್ಲಿ ಸ್ಥಾನಗಳನ್ನು ಪಡೆದರು.

ಸಿರಿಯನ್ ಆಶ್ರಯಾರ್ಥಿ ಬಿಕ್ಕಟ್ಟು

2015ರ ಸಿರಿಯನ್ ಅಂತರ್ಯುದ್ಧದ ಸಂದರ್ಭದಲ್ಲಿ, ಬಹಳಷ್ಟು ಪರ್ಯಾಯ ವಾರ್ತಾ ಮಾಧ್ಯಮಗಳು (ಆಲ್ಟ್-ರೈಟ್) ಸಾರ್ವಜನಿಕರಲ್ಲಿ ಭಯ ಹುಟ್ಟಿಸಲು ಪ್ರಾರಂಭಿಸಿದವು. ವರ್ಷಗಳ ಕಾಲ ಪ್ರಚಾರ ಮಾಡಲಾಗಿದ್ದ ಇಸ್ಲಾಮೋಫೋಬಿಯಾದ ಹಿನ್ನೆಲೆಯಲ್ಲಿ, ಮುಸ್ಲಿಮರೇ ಬಹುಸಂಖ್ಯಾತರಾಗಿರುವ ದೇಶದಿಂದ ಆಶ್ರಯಾರ್ಥಿಗಳನ್ನು ಒಳಬಿಟ್ಟುಕೊಳ್ಳುವ ವಿಚಾರವು ವಲಸೆಯ ಬಗೆಗಿನ ಬಲಪಂಥೀಯ ವಿರೋಧಿ ನೀತಿಗೆ ಬೆಂಬಲವನ್ನು ಒದಗಿಸಿಕೊಟ್ಟಿತು. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಸ್ವೀಡಿಶ್ ಡೆಮೋಕ್ರಾಟ್ ಪಕ್ಷವು ಪಡೆಯುವ ಮತಗಳ ಪ್ರಮಾಣ ಶೇ.10ರಿಂದ ಶೇ.25ಕ್ಕೆ ಏರಿಕೆ ಕಂಡಿತು ಮತ್ತು ಇದರಿಂದಾಗಿ ಬಲಪಂಥೀಯ ಪುಂಡರ ಗುಂಪಂತಿದ್ದ ಪಕ್ಷವು ಮುಖ್ಯವಾಹಿನಿ ಪಕ್ಷವೆನಿಸಿತು.

ಚುನಾವಣಾ ಧ್ರುವೀಕರಣ

ಸೋಶಿಯಲ್ ಡೆಮಾಕ್ರಾಟ್ ಮತ್ತು ಸ್ವೀಡನ್ ಡೆಮಾಕ್ರಾಟ್ ಪಕ್ಷಗಳೆರಡೂ ಕೂಡ ತಮ್ಮ ಮತಗಳನ್ನು ಸ್ವಲ್ಪ ಪ್ರಮಣದಲ್ಲಿ ಮತ್ತು ಸ್ಥಾನಗಳನ್ನು ದೊಡ್ಡ ಪ್ರಮಾಣದಲ್ಲಿ ಹಿಗ್ಗಿಸಿಕೊಂಡಿವೆ. ತಮ್ಮ ರಾಜಕೀಯ ನಿಲುವುಗಳತೀತವಾಗಿ ಪರ್ಯಾಯ ಪಕ್ಷಗಳೆಲ್ಲವೂ ಕೂಡ ತಮ್ಮ ಮತ ಮತ್ತು ಸ್ಥಾನಗಳನ್ನು ಕಳೆದುಕೊಂಡಿವೆ. ಇದಕ್ಕೆ ಕಾರಣ ಮತದಾರರ ಮುಂದಿರುವ ಅತಿಮುಖ್ಯ ನಿರ್ಧಾರ: ಗೆಲ್ಲುವ ಪಕ್ಷವನ್ನು ಬೆಂಬಲಿಸಿ, ಇಲ್ಲವೇ ಮತವನ್ನು ಕಳೆದುಕೊಳ್ಳಿ.

ಚುನಾವಣೆಯಲ್ಲಿ ಸ್ವೀಡಿಶ್ ಡೆಮಾಕ್ರಾಟ್ ಪಕ್ಷವು ತನ್ನ ಸ್ವೀಡಿಶ್ ರಾಷ್ಟ್ರೀಯತೆ ಮತ್ತು ಇಸ್ಲಾಮೋಫೋಬಿಯಾದ ಸಲುವಾಗಿ ಹೆಚ್ಚು ಮತ ಮತ್ತು ಸ್ಥಾನಗಳನ್ನು ಪಡೆದಿರುವುದಲ್ಲದೆ, ತನ್ನನ್ನು ಬೆಂಬಲಿಸುವ ಪರ್ಯಾಯ ಬಲಪಂಥೀಯ ಸುದ್ದಿ ಮಾಧ್ಯಮ ಜಾಲದೊಟ್ಟಿಗೆ ಚುನಾವಣಾ ರಂಗದಾಚೆ ಕೂಡ ಬೆಳೆಯುತ್ತಿದೆ. ಐತಿಹಾಸಿಕವಾಗಿ, ಎರಡನೇ ವಿಶ್ವಯುದ್ಧದ ನಂತರದಲ್ಲಿ ಸ್ವೀಡನ್ ರಾಷ್ಟ್ರವು ವಲಸೆ ಬರುವವರಿಗೆ ಮತ್ತು ಆಶ್ರಯಾರ್ಥಿಗಳಿಗೆ ತನ್ನ ಬಾಗಿಲುಗಳನ್ನು ತೆರೆದೇ ಇದ್ದು, ಇತ್ತೀಚಿಗಿನ ಈ ಬೆಳವಣಿಗೆಗಳು ಅತಿರೇಕವಾಗಿದ್ದು. ಸ್ವೀಡಿಶ್ ಸಂಸ್ಕೃತಿಯನ್ನು ರಕ್ಷಿಸುವ ಸಲುವಾಗಿ, ಇತ್ತೀಚಿಗಷ್ಟೇ ವಲಸೆ ಮತ್ತು ಆಶ್ರಯ ಬೇಡಿ ಬಂದವರನ್ನು ಹೊರಹಾಕಬೇಕು ಇಲ್ಲದಿದ್ದರೆ ಅವರು ಸ್ವೀಡಿಶ್ಶರ ಸಂಸ್ಕೃತಿಯನ್ನು ಭ್ರಷ್ಟಗೊಳಿಸಿ ಅವರಿಗೆ ತೊಂದರೆಯೊಡ್ಡುತ್ತಾರೆ ಎಂಬುದು ಇವರ ವಾದ.

ಪಕ್ಷಗಳು ಪಡೆದಿರುವ ಮತಗಳಲ್ಲಿನ ಚಿಕ್ಕ ಅಂತರವೇ ಬಹಳಷ್ಟು ಕಡೆಗಳಲ್ಲಿ ಚುನಾವಣಾ ಗೆಲುವುಗಳನ್ನು ನಿರ್ಧರಿಸಿದೆ. ಆದರೆ, ಭಾರತದ ಅನುಭವವು ಕಲಿಸಿರುವ ಪಾಠವೆಂದರೆ ಈ ಚಿಕ್ಕ ಅಂತರಗಳು ರಾಜಕೀಯದಲ್ಲಿ ಬಲಪಂಥೀಯ ತಿರುವಿನ ಪ್ರಾರಂಭವನ್ನು ಸೂಚಿಸುತ್ತದೆ ಎಂಬುದು. ಹಳೆಯ ಎಡ ಪಕ್ಷಗಳು ಸ್ವೀಡನ್ ಸಮಾಜದಲ್ಲಿನ ಸಾಮಾಜಿಕ ಪ್ರಜಾತಾಂತ್ರಿಕ ಗುಣವನ್ನು ಕಾಪಾಡುವಲ್ಲಿ ವಿಫಲವಾಗಿವೆ ಮತ್ತೀಗ ಸ್ವೀಡನ್ನಿನ ಜನರು ಬಲಪಂಥೀಯ ಪಕ್ಷಗಳಿಗೆ ಅಸ್ಪಷ್ಟವಾಗಿಯಾದರೂ, ಚದುರಿ ಹೋಗಿದ್ದರೂ ಬೆಂಬಲ ಸೂಚಿಸಲು ಪ್ರಾರಂಭಿಸಿದ್ದಾರೆ.

ಅನುವಾದ: ಶಶಾಂಕ್ ಎಸ್ ಆರ್

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಜನಮತಗಣನೆಯಲ್ಲಿ ಚಿಲಿಯ ಹೊಸ ಸಂವಿಧಾನ ಸೋತದ್ದೇಕೆ? ಮಾಧ್ಯಮಗಳ ಪಾತ್ರವೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಬಾಂಡ್‌ ಹಗರಣ: ಸುಪ್ರೀಂ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆಗೆ ಮನವಿ

0
ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪ್ರೇರಿತ ಹಣಕಾಸು ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಶಂಕಿತ ಹಗರಣದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಗೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು...