Homeಮುಖಪುಟಬುಡ ಅಲ್ಲಾಡಿಸುತ್ತಿರುವ ಭೂಷಣ್ ಟ್ವೀಟ್ಸ್ - ದೇವನೂರ ಮಹಾದೇವ

ಬುಡ ಅಲ್ಲಾಡಿಸುತ್ತಿರುವ ಭೂಷಣ್ ಟ್ವೀಟ್ಸ್ – ದೇವನೂರ ಮಹಾದೇವ

ಗಾಂಧಿ-ಅಂಬೇಡ್ಕರ್-ಜೆಪಿ ವರ್ಚಸ್ಸಿನ ನಾಯಕತ್ವದ ಹುಟ್ಟಿಗೆ ಭಾರತಮಾತೆ ಕಾವು ಕೊಡುತ್ತಿರಬೇಕು, ಅದಕ್ಕಾಗೆ ಭೂಷಣ್‌ರ ಮೇಲೆ ಆರೋಪ, ಅದಕ್ಕಾಗೇ ಈ ನೆಲದ ಪ್ರಜ್ಞೆಗಳಾದ ಆನಂದ್ ತೇಲ್ತುಂಬ್ಡೆ ಮತ್ತಿತರರನ್ನು ರಾಜಕೀಯ ಖೈದು ಮಾಡಿ ಬಂಧನದಲ್ಲಿಟ್ಟಿರುವುದು ಇದ್ದಿರಬಹುದೆ.

- Advertisement -
- Advertisement -

ಮೊನ್ನೆ ಹಿರಿಯ ವಕೀಲರಾದ ರವಿವರ್ಮಕುಮಾರ್ ಅವರಿಗೆ ಫೋನ್ ಮಾಡಿ “ ಹೇಗಿದೆ ನಮ್ಮ ಸುಪ್ರೀಂಕೋರ್ಟ್‌ನ ಯೋಗಕ್ಷೇಮ?” ಎಂದು ಕೇಳಿದೆ. ಪ್ರಶಾಂತ್ ಭೂಷಣ್ ಅವರ ಟ್ವೀಟ್‌ಗಳಿಂದ – ನ್ಯಾಯಾಲಯ ನಿಂದನೆ (Contempt of Court ) ಆಗಿದೆ ಎಂದು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ತ್ರಿಸದಸ್ಯ ಪೀಠ ತೀರ್ಪಿತ್ತ ಹಿನ್ನೆಲೆಯಲ್ಲಿ ನಾವು ಮಾತಾಡುತ್ತಿದ್ದೆವು.

ರವಿ ಹೇಳಿದರು – ‘ನ್ಯಾಯಾಂಗನೇ ಆರೋಪ ಮಾಡುವುದು; ಅದೇ ಮೊಕದ್ದಮೆಯನ್ನೂ ಹೂಡಿ ಮತ್ತೆ ಅದೇನೆ ಆರೋಪವನ್ನು ಸಾಬೀತುಪಡಿಸುವುದು, ಆಮೇಲೆ ಆರೋಪ ಸಾಬೀತಾಗಿದೆ ಎಂದು ತೀರ್ಪು ಕೊಡುವುದು ನಮ್ಮ ಸುಪ್ರೀಂಕೋರ್ಟ್‌ನಲ್ಲಿ ನಡೆದು ಹೋಯಿತು” ಅಂದರು. ಯಾಕೆಂದರೆ, ಆ ತೀರ್ಪಿಗೆ ಪ್ರಶಾಂತ್ ಭೂಷಣ್ ಸಲ್ಲಿಸಿದ ಪ್ರಮಾಣಪತ್ರವನ್ನು ಆ ತ್ರಿಸದಸ್ಯ ಪೀಠ ಗಂಭೀರವಾಗಿ ಪರಿಗಣಿಸಲಿಲ್ಲ್ಲ. ನಿಷ್ಪಕ್ಷಪಾತ ನಿಲುವಿಗಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ತಕ್ಕಡಿ ಹಿಡಿದು ನಿಂತ ನ್ಯಾಯದೇವತೆ ಪ್ರತಿಮೆ ಸುಪ್ರೀಂಕೋರ್ಟ್‌ನಲ್ಲಿ ಇರುವುದೇ ಇಲ್ಲವೇ ಒಮ್ಮೆ ನೋಡಿಬರಬೇಕೆನ್ನಿಸಿತು. ಯಾಕೆಂದರೆ ನ್ಯಾಯಾಲಯದ ಆ ತೀರ್ಪು ಕುರುಡಾಗಿತ್ತು.

ಇದನ್ನೂ ಓದಿ: ಪ್ರಶಾಂತ್ ಭೂಷಣ್‌ರ ನ್ಯಾಯಾಂಗ ನಿಂದನೆ ಪ್ರಕರಣದೆಡೆಗೆ ನನಗೇಕೆ ಕುತೂಹಲವೆಂದರೆ..; ಯೋಗೇಂದ್ರ ಯಾದವ್

ಈ ತೀರ್ಪನ್ನು ಸುಪ್ರೀಂಕೋರ್ಟ್ ವಕೀಲ ಗೌತಮ್ ಬಾಟಿಯಾ ಒಂದು ರೂಪಕದಲ್ಲಿ ಸೆರೆಹಿಡಿಯುತ್ತಾರೆ – “ಬಾಲ್ಯ ಕಾಲದ ನನ್ನ ಫುಟ್‌ಬಾಲ್ ಆಟ ನೆನಪಾಗುತ್ತಿದೆ… ಆಟದ ಮೈದಾನದಲ್ಲಿ ನಾನು ಫುಟ್‌ಬಾಲನ್ನು ಆಫ್‌ವೇ ಲೈನ್‌ನಿಂದ ಎದುರಾಳಿಗಳಿಗೆ ಚೆಂಡು ಸಿಗದಂತೆ ಮಾಡುವ ಚಾಕಚಕ್ಯತೆಯ ಡ್ರಿಬಲ್ ಮಾಡುತ್ತಾ ಗುರಿಯಿಟ್ಟು ಒದ್ದು ಗೋಲ್ ಗಳಿಸುತ್ತಿದ್ದೆ… ಯಾರೂ ಎದುರಾಳಿಗಳು ಇಲ್ಲದ ಆ ಆಟದ ಮೈದಾನದಲ್ಲಿ!” ಈ ಆಟ ನ್ಯಾಯಾಲಯದೊಳಗೆ ನಡೆದು ಬಿಟ್ಟಿತು.

ವಕೀಲ ಪ್ರಶಾಂತ್ ಭೂಷನ್

ಆಯ್ತು, ಪ್ರಶಾಂತ್ ಭೂಷಣ್ ಟ್ವೀಟ್‌ನೊಳಗೆ ಏನಿದೆ? ಅದು ಹೀಗಿದೆ –“ಭವಿಷ್ಯದಲ್ಲಿ ಇತಿಹಾಸಕಾರರು ಕಳೆದ ಆರು ವರ್ಷಗಳ ಬಗ್ಗೆ ಬರೆಯುವಾಗ, ಹೇಗೆ ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಘೋಷಿಸದೆಯೇ ಪ್ರಜಾತಂತ್ರವನ್ನು ನಾಶಮಾಡಲಾಯಿತು ಎಂದು ದಾಖಲಿಸುವಾಗ ಈ ವಿಷಯದಲ್ಲಿ ಸುಪ್ರೀಂಕೋರ್ಟ್‌ನ ಹಿಂದಿನ ನಾಲ್ಕು ಮುಖ್ಯ ನ್ಯಾಯಾಧೀಶರ ಪಾತ್ರವನ್ನು ಗುರುತಿಸುತ್ತಾರೆ” – ಈ ಟ್ವೀಟ್ ಆತ್ಮಾವಲೋಕನಕ್ಕೆ ಕಾರಣವಾಗಬೇಕಿತ್ತು. ಕುಸಿಯುತ್ತಿರುವ ನ್ಯಾಯಾಂಗದ ಘನತೆ ಕಾಪಾಡಲು ಒದ್ದಾಡುತ್ತಿರುವ ಸಂಕಟದಂತೆ ಆ ಟ್ವೀಟ್‌ಗಳ ನುಡಿಗಳು ಕಾಣಿಸಬೇಕಿತ್ತು. ಆದರೆ ಪ್ರಶಾಂತ್ ಭೂಷಣ್‌ರ ಆ ಟ್ವೀಟ್‌ಗಳು ನ್ಯಾಯಾಂಗದ ಬುಡವನ್ನೇ ಅಲ್ಲಾಡಿಸುತ್ತಿವೆ ಎಂಬಂತೆ ನ್ಯಾಯಾಧೀಶರ ತ್ರಿಸದಸ್ಯ ಪೀಠ ಭಾವಿಸಿ, ತಮ್ಮ ಭಾವನೆಗಳೇ ನ್ಯಾಯ ಅಂದುಕೊಂಡಂತೆ ಜೊತೆಗೆ ಭೀತಿಗೆ ಒಳಗಾದವರಂತೆ ತೀರ್ಪು ನೀಡಿದ್ದಾರೆ.

ಇಂದು ಈ ಭೀತಿ ನ್ಯಾಯಾಂಗವನ್ನು ಮಾತ್ರವಲ್ಲ, ಇಡೀ ದೇಶವನ್ನೇ ಆವರಿಸಿಕೊಂಡಿದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಅಷ್ಟೇಕೆ ಮಾಧ್ಯಮ ಕ್ಷೇತ್ರಗಳನ್ನೂ ಈ ಭೀತಿ ಬಿಟ್ಟಿಲ್ಲ. ಈ ಭೀತಿ ಯಾವ ಸ್ವಾಯತ್ತ ಸಂಸ್ಥೆಗಳನ್ನೂ ಸ್ವಾಯತ್ತವಾಗಿ ಉಳಿಸಿಲ್ಲ. ಈ ಭೀತಿ ಬಗ್ಗೆ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರ ಹೇಳಿಕೆಯೊಂದು ಸುಳಿವು ನೀಡುತ್ತದೆ – “ಗೋಗೋಯ್‌ರನ್ನು ನ್ಯಾಯಮೂರ್ತಿ ಎಂದು ಕರೆಯಲು ನನ್ನ ಮನಸ್ಸು ಒಪ್ಪುವುದಿಲ್ಲ… ಅಕ್ಷರಶಃ ಗೋಗೋಯ್ ಅವರು ಆಳುವ ಬಿಜೆಪಿ ಸರ್ಕಾರದ ಕಾಲಿಗೆ ಬಿದ್ದು ನಮಸ್ಕರಿಸಿದರು. ಬಹುತೇಕ ಸುಪ್ರೀಂಕೋರ್ಟ್‌ನ ರಾಜಕೀಯ ಕಾರ್ಯಾಂಗದ ವಶಕ್ಕೆ ಒಪ್ಪಿಸಿದರು” ಎನ್ನುತ್ತಾರೆ.

ಇದನ್ನೂ ಓದಿ: ಕ್ಷಮೆ ಕೇಳುವುದಿಲ್ಲ, ಅದು ನನ್ನ ಆತ್ಮಸಾಕ್ಷಿಯ ನಿಂದನೆಯಾಗುತ್ತದೆ: ಪ್ರಶಾಂತ್ ಭೂಷಣ್

ಅದಕ್ಕಾಗೆ ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ರಾಜಕೀಯ ನಾಯಕರು, ‘ನಾವು ಸಂವಿಧಾನವನ್ನು ಬದಲಿಸಲು ಬಂದಿದ್ದೇವೆ’ ಎಂದು ಹೇಳಿದರೆ ಅದು ನ್ಯಾಯಾಲಯ ನಿಂದನೆ ಆಗುವುದಿಲ್ಲ! ಸಂವಿಧಾನವನ್ನು ಸುಟ್ಟರೂ ಅದು ನ್ಯಾಯಾಲಯ ನಿಂದನೆ ಆಗುವುದಿಲ್ಲ! ಆದರೆ ನ್ಯಾಯಾಂಗದ ಘನತೆಯನ್ನು ಕಾಪಾಡಲು ತಹತಹಿಸುವ ಪ್ರಶಾಂತ್ ಭೂಷಣ್‌ರ ಟ್ವೀಟ್‌ಗಳು ನ್ಯಾಯಾಲಯದ ನಿಂದನೆಯಾಗಿ ಆ ನ್ಯಾಯಮೂರ್ತಿಗಳಿಗೆ ಕಾಣಿಸುತ್ತಿದೆ. ಇದನ್ನೆಲ್ಲಾ ನೋಡಿದಾಗ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರ ಮಾತುಗಳು ಮನಸ್ಸನ್ನು ಆವರಿಸಿಕೊಳ್ಳುತ್ತವೆ.

ಪ್ರಶಾಂತ್‌ ಭೂಷಣ್ ಮಾಡಿದ್ದ ಟ್ವೀಟ್

ಸ್ವಾತಂತ್ಯ್ರನಂತರ ಎಂದೂ ಭಾರತಕ್ಕೆ ಇಂತಹ ಸ್ಥಿತಿ ಬಂದಿರಲಿಲ್ಲವೇನೋ. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ ಕಾಲದಲ್ಲೂ ಕೂಡ. ಆ ಕಾಲದಲ್ಲಿ ನ್ಯಾಯಾಂಗ, ಚುನಾವಣಾ ಆಯೋಗ, ದೇಶದ ಒಕ್ಕೂಟ ಸ್ವರೂಪ, ಆರ್‌ಬಿಐ, ಸಿಬಿಐ, ಮಾಧ್ಯಮ ಇತ್ಯಾದಿ ಹಾಗೂ ಸ್ವಾಯತ್ತ ಸಂಸ್ಥೆಗಳಿಗೆ ಉಗುರು ಹಲ್ಲುಗಳು ಇದ್ದವು. ಅವು ಪ್ರತಿರೋಧ ತೋರಿಸುತ್ತಿದ್ದವು. ಇಂದಿರಾರು ಘೋಷಿಸಿದ ತುರ್ತು ಪರಿಸ್ಥಿತಿ ಅದು ವ್ಯಾಘ್ರ ತುರ್ತು ಪರಿಸ್ಥಿತಿಯಾಗಿತ್ತು. ಹಾಗೇ ಇಂದಿರಾ ವ್ಯಾಘ್ರ ಸರ್ವಾಧಿಕಾರಿಯೂ ಆಗಿದ್ದರು. ಆಗೆಲ್ಲಾ ನೇರಾನೇರಾ ಇತ್ತು. ಎದುರುಬದುರಾ ಆಗುತ್ತಿತ್ತು. ದಮನಿಸಿದರೂ ಪ್ರತಿಭಟನೆಗಳು ಉಕ್ಕುತ್ತಿದ್ದವು.

ಆದರೀಗ? ಈಗ ಇರುವುದು ಗೋಮುಖವ್ಯಾಘ್ರ ತುರ್ತು ಪರಿಸ್ಥಿತಿ. ಇದು ನೋಟಕ್ಕೆ ನಾಜೂಕಾಗಿ ಉದ್ಧಾರಕನಂತೆ ಕಾಣಿಸಿಕೊಳ್ಳುತ್ತದೆ. ಒಳಗೆ ಮಾಡಬಾರದ್ದನ್ನೆಲ್ಲಾ ಮಾಡುತ್ತಿರುತ್ತದೆ. ಇದು ಮುಖಾಮುಖಿಯಾಗುವುದೇ ಇಲ್ಲ. ಬದಲಾಗಿ, ಸಂವಿಧಾನದ ನಾಲ್ಕು ಅಂಗಗಳು ಅಂತೀವಲ್ಲಾ ಅದು ಹಾಗೂ ಎಲ್ಲಾ ಸ್ವಾಯತ್ತ ಸಂಸ್ಥೆಗಳು ಮತ್ತು ದೇಶದ ಒಕ್ಕೂಟ ಸ್ವರೂಪ ಈ ಎಲ್ಲದರ ಕತ್ತಿನ ನರ, ಹಿಮ್ಮಡಿ ನರ ಕತ್ತರಿಸಿ ಇಟ್ಟುಕೊಂಡಿರುತ್ತದೆ. ಈ ಸಂಸ್ಥೆಗಳಿಗೆ ಅವವೇ ಆಕಾರ ಇರುತ್ತದೆ ನಿಜ. ಆದರೆ ಒಳಗೆ ಅರೆಜೀವ. ಹಾಗಾಗಿ ಎಲ್ಲವೂ ರಾಜಕೀಯ ಕಾರ್ಯಾಂಗದ ಉರುಫ್ ಗೋಮುಖವ್ಯಾಘ್ರ ಸರ್ವಾಧಿಕಾರಿಯ ಇಚ್ಛೆ, ಕಣ್ಸನ್ನೆ ಅರಿತು ಕಾರ್ಯ ನಿರ್ವಹಿಸುವಂತಾಗಿಬಿಟ್ಟಿದೆ.

ಇದನ್ನೂ ಓದಿ: ಸುಪ್ರೀಂಕೋರ್ಟಿನಲ್ಲಿ ಪ್ರಶಾಂತ್ ಭೂಷಣ್ ಅವರ ಐತಿಹಾಸಿಕ ಹೇಳಿಕೆಯ ಪೂರ್ಣಪಾಠ

ಇದನ್ನು ಸ್ಪಷ್ಟ ಪಡಿಸುವುದಕ್ಕಾಗಿ, ಇತ್ತೀಚೆಗೆ ಅಮೆರಿಕಾದಲ್ಲಿ ಆಫ್ರೊ-ಅಮೆರಿಕನ್ ಜನಾಂಗದ ಕರಿಯ ವ್ಯಕ್ತಿಯನ್ನು ಅಲ್ಲಿನ ಪೋಲಿಸರು ಕತ್ತು ಹಿಸುಕಿ ಕೊಂದಾಗ ಭುಗಿಲೆದ್ದ ಹಿಂಸೆಗೆ ಪ್ರತಿಕ್ರಿಯಿಸುತ್ತ ಯೂರೋ-ಅಮೆರಿಕನ್ ಜನಾಂಗಕ್ಕೆ ಸೇರಿದ ಅಮೆರಿಕಾದ ಅಧ್ಯಕ್ಷ ಟ್ರಂಪ್ –‘ಡಾಮಿನೇಟ್… ಹಿಡಿತ ಸಾಧಿಸಿ’ ಎಂದು ಕರೆ ಕೊಟ್ಟಾಗ ಅದಕ್ಕೆ ಪೋಲಿಸ್ ಚೀಫ್ Acevedo ದಿಟ್ಟತನದಿಂದ “ಬೇಕಾಗಿರುವುದು ಇಲ್ಲಿ ಡಾಮಿನೇಟ್ ಮಾಡುವುದಲ್ಲ, ಹೃದಯ ಗೆಲ್ಲೋದು. ನಿಮ್ಮ ತಿಳಿಗೇಡಿತನದಿಂದ ಪರಿಸ್ಥಿತಿ ಹಾಳಾಗುವುದು ಬೇಡ. ಅಧ್ಯಕ್ಷ ಟ್ರಂಪ್ ಅವರಿಗೆ ಏನಾದರೂ ರಚನಾತ್ಮಕವಾಗಿ ಹೇಳುವುದಿದ್ದರೆ ಹೇಳಲಿ, ಇಲ್ಲದಿದ್ದರೆ ಬಾಯಿ ಮುಚ್ಚಿಕೊಂಡಿರಲಿ” ಎನ್ನುತ್ತಾರೆ. ಈ ಹಿನ್ನೆಲೆಯನ್ನು ಭಾರತದ ಪರಿಸ್ಥಿತಿಗೆ ಅಳವಡಿಸಿ ನೋಡಿದಾಗ ಎಲ್ಲವೂ ಸ್ವಯಂಸ್ಪಷ್ಟವಾಗುತ್ತದೆ.

ಮತ್ತೊಂದು ಟ್ವೀಟ್

ಈಗ ಮತ್ತೆ ಭಾರತಕ್ಕೆ ಬಂದರೆ, ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯೊಬ್ಬರಿಂದ ಬಹುಮುಖಿ ಮೇಧಾವಿ ಎನ್ನಿಸಿಕೊಂಡ ನಮ್ಮ ಪ್ರಧಾನಿ ಮೋದಿಯವರ ನೋಟು ಅಮಾನ್ಯೀಕರಣ, ಜಿಎಸ್‌ಟಿ ಇತ್ಯಾದಿ ಅಪ್ರಬುದ್ಧ ಹೊಡೆತಗಳಿಂದಾಗಿ ಇಂದು ಭಾರತ ಮುಳುಗುತ್ತಿದೆ. ನಿರುದ್ಯೋಗ ಕಿತ್ತು ತಿನ್ನುತ್ತಿದೆ. ಬಡತನದಿಂದ ಹಸಿವಿನೆಡೆಗೆ ಧಾವಿಸುತ್ತಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಿ ಸರ್ಕಾರ ನೀಸಬೇಕಿದೆ. ಈ ಎಲ್ಲದರಿಂದಾಗಿ ಭುಗಿಲೇಳುವ ಸಾರ್ವಜನಿಕ ಕಿಚ್ಚನ್ನು ನಿಯಂತ್ರಿಸಲು ನ್ಯಾಯಾಂಗ, ಮಾಧ್ಯಮ, ಸಿಬಿಐ, ಆರ್‌ಬಿಐ ಇತ್ಯಾದಿ ಎಲ್ಲಾ ಸ್ವಯತ್ತ ಸಂಸ್ಥೆಗಳನ್ನು ಹೆಚ್ಚೂಕಮ್ಮಿ ಸರ್ಕಾರದ ಅಂಗಸಂಸ್ಥೆಗಳ ಮಟ್ಟಕ್ಕೆ ಸರ್ಜರಿ ಮಾಡಲಾಗಿದೆ. ಇಂದು ಸಾರ್ವಜನಿಕ ಹಿತಾಸಕ್ತಿ ಅನಾಥವಾಗಿ ಬಿದ್ದಿದೆ.

ನೋಡಿದರೆ, ತಬ್ಬಲಿಯಾದ ಈ ಸಾರ್ವಜನಿಕ ಹಿತಾಸಕ್ತಿಗೆ ಪ್ರಶಾಂತ್ ಭೂಷಣ್ ತನ್ನ ವಕೀಲ ವೃತ್ತಿಯನ್ನೇ ಮುಡಿಪಾಗಿಟ್ಟವರು. ಸಾರ್ವಜನಿಕ ಹಿತಾಸಕ್ತಿಯನ್ನು ಪ್ರಭುತ್ವ ಕಸದಂತೆ ಗುಡಿಸಿ ಎಸೆದ ಮೇಲೆ ಅದರ ಮುಂದಿನ ಕೆಲಸ ಸಾರ್ವಜನಿಕ ಹಿತಾಸಕ್ತಿಯ ಧ್ವನಿಯನ್ನು ದಮನ ಮಾಡುವುದು ತಾನೇ? ಗೋಮುಖವ್ಯಾಘ್ರ ಸರ್ವಾಧಿಕಾರತ್ವವು ಪ್ರಶಾಂತ್ ಭೂಷಣ್‌ರ ಟ್ವೀಟ್‌ಗಳನ್ನು ನೆಪ ಮಾಡಿಕೊಂಡು ಸಾರ್ವಜನಿಕ ಹಿತಾಸಕ್ತಿಯ ಧ್ವನಿಯನ್ನು ದಮನಮಾಡಲು ಸರ್ವೋಚ್ಛನ್ಯಾಯಾಲಯವನ್ನೇ ಬಳಸಿಕೊಂಡುಬಿಟ್ಟಿತು ಅನ್ನಿಸುತ್ತದೆ. ಇದನ್ನೆಲ್ಲಾ ಬರೆಯುತ್ತಾ, ಕೋಪ ತಾಪ ವಿಷಾದಗಳನ್ನು ದಾಟಿಕೊಂಡು ಮನಸ್ಸು ತಿಳಿಯಾದಾಗ, ಗಾಂಧಿ-ಅಂಬೇಡ್ಕರ್-ಜೆಪಿ ವರ್ಚಸ್ಸಿನ ನಾಯಕತ್ವದ ಹುಟ್ಟಿಗೆ ಭಾರತಮಾತೆ ಕಾವು ಕೊಡುತ್ತಿರಬೇಕು, ಅದಕ್ಕಾಗೆ ಭೂಷಣ್‌ರ ಮೇಲೆ ಆರೋಪ, ಅದಕ್ಕಾಗೇ ಈ ನೆಲದ ಪ್ರಜ್ಞೆಗಳಾದ ಆನಂದ್ ತೇಲ್ತುಂಬ್ಡೆ ಮತ್ತಿತರರನ್ನು ರಾಜಕೀಯ ಖೈದು ಮಾಡಿ ಬಂಧನದಲ್ಲಿಟ್ಟಿರುವುದು ಇದ್ದಿರಬಹುದೆ ಅನ್ನಿಸಿತು.


ಓದಿ: ಕ್ಷಮೆಯಾಚಿಸುವುದಿಲ್ಲ, ಖುಷಿಯಿಂದ ಶಿಕ್ಷೆ ಸ್ವೀಕರಿಸುತ್ತೇನೆ: ಪ್ರಶಾಂತ್ ಭೂಷಣ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...