Homeಮುಖಪುಟಬೀದರಿನ ಶಾಹೀನ ಶಾಲೆ ಬ್ರಿಟನ್ನಿನ ಗಾರ್ಡಿಯನ್ನೊಳಗ ಬಂದದ್ದಕ್ಕ ನಾಚಗೋಬೇಕು...

ಬೀದರಿನ ಶಾಹೀನ ಶಾಲೆ ಬ್ರಿಟನ್ನಿನ ಗಾರ್ಡಿಯನ್ನೊಳಗ ಬಂದದ್ದಕ್ಕ ನಾಚಗೋಬೇಕು…

ʻದ ಗಾರ್ಡಿಯನ್ʼ, ಬಿಬಿಸಿ, ಅಲ್ ಝಜೀರಾ, ಯುಕೆ ಟೆಲಿಗ್ರಾಫ, ಮುಂತಾದ ಅಂತಾರಾಷ್ಟ್ರೀಯ ಪೇಪರು, ಟೀವಿ, ವೆಬ್ ಸೈಟಿನ್ಯಾಗ ಛೀ, ಥೂ ಅಂತ ರಾಜ್ಯ ಸರಕಾರಕ್ಕ ಉಗುಳಿದರು.

- Advertisement -
- Advertisement -

ಸುದ್ದಿಯೇನೇ ಮನೋಲ್ಲಾಸಿನಿ

ಇಂಗ್ಲಂಡಿನ ಪ್ರಧಾನಿಯವರು ದಿನಾ ಬೆಳಿಗ್ಗೆ ಓದೋ ಪತ್ರಿಕೆ ʻದ ಗಾರ್ಡಿಯನ್ʼದಾಗ ಬೀದರಿನಂಥಾ ಸಣ್ಣ ಊರಿನ ದೊಡ್ಡು ಸುದ್ದಿ ಬಂತು ಅನ್ನೋದು ಇವತ್ತಿನ ಸುದ್ದಿ.

ಕುರುಡು ನಾಯಿ ಸಂತಿಗೆ ಬಂದಂಗ ಇದು ಯಾಕ ಬಂತು? ಬಂದದ್ದು ಎಂಥಾ ಸುದ್ದಿ? ಅನ್ನೋದನ್ನ ನೋಡೋಣ.

ಅದರಾಗ ಬಂದಿದ್ದು ಅಲ್ಲಮಾ ಇಕಬಾಲ್ ಟ್ರಸ್ಟಿನವರು ನಡೆಸೋ ಶಾಹೀನ್ ಶಾಲೆಯೊಳಗ ಹತ್ತು – ಹನ್ನೊಂದು ವರ್ಷದ ಹುಡುಗ-ಹುಡುಗಿಯರು ಆಡಿದ ನಾಟಕಕ್ಕ ಸಂಬಂಧಪಟ್ಟ ಸುದ್ದಿ. ಅದು ಏನಾತು ಅಂದರ ಅದರಾಗ ಒಂದು ಹುಡುಗಿ ಹಣ್ಣ ಹಣ್ಣ ಮುದಕೀ ಪಾತ್ರ ಮಾಡಿದ್ಲು. ನಮ್ಮ ಕಣ್ಣ ಮುಂದ ಬೆಳದ ಹುಡುಗಾ, ಚಹಾ ಮಾರತಿದ್ದ, ಅಂಥವಾ ಈಗ ದೊಡ್ಡ ಮನಿಷಾ ಆಗ್ಯಾನ, ನಮ್ಮ ದಾಖಲೆ ಕೇಳಲಿಕ್ಕೆ ಹತ್ಯಾನ ಅಂತ ಬೈತಾಳ. ನನ್ನೇನರ ಕಾಗದ ತೋರಸು ಅಂತ ಕೇಳಿದರ ಚಪ್ಪಲ ತೊಗೊಂಡು ಹೊಡೀತೇನಿ ಅಂತ ಅಂತಾಳ. ಇದನ್ನ ದೊಡ್ಡದು ಮಾಡಿ ಪೊಲಿಸರು ಆ ಹುಡುಗಿ ಅವ್ವನ್ನ, ಅಕೀ ಟೀಚರನ ಜೈಲಿಗೆ ಹಾಕ್ಯಾರ.

ಅಷ್ಟ ಅಲ್ಲಾ, ಪೊಲೀಸರು ಆ ಹುಡುಗ – ಹುಡುಗಿಯರನ್ನ ಅವರ ಪಾಲಕರು ಅಥವಾ ವಕೀಲರಿಲ್ಲದೇ ವಿಚಾರಣೆ ಮಾಡ್ಯಾರ. ಪ್ರತಿ ಸಲೆ ನಾಲ್ಕೈದು ತಾಸು ಅವರನ್ನು ಕೂಡಿಸಿಕೊಂಡು ವಿಚಾರಣೆ ಮಾಡ್ಯಾರ. ಖಲಿಸ್ತಾನ ಕೇಸು, ಕಸಾಬ ಕೇಸು, ಕಂದಹಾರ ಅಪಹರಣ ಕೇಸು, ಇಂದಿರಾಗಾಂಧಿ, ರಾಜೀವ ಗಾಂಧಿ ಹತ್ಯೆ ಕೇಸಿನ್ಯಾಗನೂ ಇಷ್ಟು ವಿಚಾರಣೆ ಮಾಡಿದ್ದರೋ ಇಲ್ಲೋ.

ಹಿಂಗ ಬರೆ ಒಂದೆರಡಲ್ಲ, ಬರೋಬ್ಬರಿ ಐದು ಸರೆ ಮಾಡ್ಯಾರ. ಹದಿನೆಂಟು ವರ್ಷಕ್ಕಿಂತ ಚಿಕ್ಕ ಮಕ್ಕಳನ್ನ ಪೊಲೀಸರು ವಿಚಾರಣೆ ಮಾಡಬಾರದು. ಮಾಹಿತಿ ಸಂಗ್ರಹ ಮಾಡಬಹುದು. ಮಾಡುವಾಗ ಅವರ ಪಾಲಕರು ಅಥವಾ ವಕೀಲರು ಇರಬೇಕು ಅಂತ ಅನ್ನೋದು ಸತ್ ಸಂಪ್ರದಾಯ. ಭಾರತ ಸರಕಾರ ಸಹಿ ಮಾಡಿದ ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಪ್ಪಂದದ ಪ್ರಕಾರ ಅದು ಶಿಕ್ಷಾರ್ಹ ಅಪರಾಧ. ಆದರ ಇವೆಲ್ಲಾ ಆ ಪೊಲೀಸರಿಗೆ ನೆನಪಾಗಲಿಲ್ಲ. ಅವರು ರಾಜಕಾರಣಿಗಳ ಒತ್ತಡದಲ್ಲಿ ಮುಸ್ಲಿಂ ಸಾಲಿ ಒಳಗ ನಡಿಯೋದೆಲ್ಲಾ ತಪ್ಪು. ಆ ಹುಡುಗರು ಮುಸ್ಲಿಮರು ಇದ್ದದ್ದಕ್ಕ ಅವರು ಮಾಡಿದ್ದೆಲ್ಲಾ ತಪ್ಪ ಇರಬೇಕು ಅಂತ ಇವರು ನಿರ್ಧಾರ ಮಾಡಿದರು. ಆ ಹುಡುಗ- ಹುಡುಗಿಯರಿಗೆ ಜೀವನಪೂರ್ತಿ ಮರಿಯಲಾರದಂಥಾ ಕೆಟ್ಟ ಅನುಭವ ಮೂಡಿಸಿದರು. ಪೊಲೀಸರ ಕಂಡಾಗೆಲ್ಲಾ ಥರಾ ಥರಾ ಹೆದರೋಹಂಗ ಮಾಡಿದರು.

ಇದೆಲ್ಲಾ ನೋಡಿದ ʻದ ಗಾರ್ಡಿಯನ್ʼ, ಬಿಬಿಸಿ, ಅಲ್ ಝಜೀರಾ, ಯುಕೆ ಟೆಲಿಗ್ರಾಫ, ಮುಂತಾದ ಅಂತಾರಾಷ್ಟ್ರೀಯ ಪೇಪರು, ಟೀವಿ, ವೆಬ್ ಸೈಟಿನ್ಯಾಗ ಛೀ, ಥೂ ಅಂತ ರಾಜ್ಯ ಸರಕಾರಕ್ಕ ಉಗುಳಿದರು. ಈ ಸುದ್ದಿ ಭಾರತದ ಎಲ್ಲಾ ಪ್ರಮುಖ ಪೇಪರಿನ್ಯಾಗನೂ ಬಂತು. ಅಷ್ಟಕ್ಕ ದಪ್ಪ ಚರ್ಮದವರಿಗೆ ಒಂಚೂರು ಚುಚ್ಚಿದಂಗ ಆತು. ಅಲ್ಲಿನ ಪೊಲೀಸ ವರಿಷ್ಠಾಧಿಕಾರಿ ಬದಲಾದರು. ಆದರೂ ಇನ್ನೂ ಆ ಸಾಲಿಯವರಿಗೆ ಪೊಲೀಸರ ಕಿರಿಕಿರಿ ಕಡಿಮಿ ಆಗಿಲ್ಲ.

ಅಷ್ಟಕ್ಕೂ ಆ ಹುಡುಗಿ ಮಾಡಿದ್ದು ಮುದುಕಿಯ ಪಾತ್ರ. ಕೋಲಾರದ ಮುದುಕಿಯೊಬ್ಬಾಕಿಗೆ ಯಾರೋ ನಿನ್ನ ಕಾಗದಾ ಕೇಳಿದರ ಏನು ಮಾಡತೀ ಅಂದಾಗ ಮೆಟ್ಟಿನ್ಯಾಗ ಹೊಡೀತೇನಿ ಅಂದದ್ದು ವಾಟ್ಸಪ್ಪಿನ್ಯಾಗ ಬಂದಿತ್ತು. ಅದನ್ನು ನೋಡಿದ ಪಾಲಕರು- ಹುಡುಗರು ಅದರ ನಾಟಕ ಮಾಡಿದರು. ಇದರ ಹಕೀಕತ್ತು ಏನಪಾ ಅಂದರ ಚರ್ಚಾಸ್ಪದ ಮಾತು ಆಡಿದ್ದು ಆ ಪುಟ್ಟ ಹುಡುಗಿಯಲ್ಲ, ಆ ನಾಟಕದ ಮುದುಕಿಯ ಪಾತ್ರ.

ಈಗ ನಮ್ಮ ಪೊಲೀಸರು ಆ ಹತ್ತು- ಹನ್ನೊಂದರ ಹುಡುಗಾ- ಹುಡುಗಿಯರ ವಿಚಾರಣೆ ನಡಸಬಹುದು ಅಂದರ, ಅವರ ಅವ್ವನ್ನ, ಟೀಚರನ ಜೈಲಿಗೆ ಹಾಕಬಹುದು ಅಂದರ ಯರ‍್ಯಾರನ್ನ ವಿಚಾರಣೆ ನಡಸಬಹುದು, ಯರ‍್ಯಾರನ್ನು ಹಿಡೀಬಹುದು ಅನ್ನೂದನ್ನು ನೋಡೋಣ.

ʻʻಕರ್ಮʼʼ ಅನ್ನೋ ಹಿಂದಿ ಚಲನಚಿತ್ರದಾಗ ಅನುಪಮ ಖೇರ ಅವರು ಡಾಕ್ಟರ್ ಡ್ಯಾಂಗ ಅನ್ನೋ ಹೆಸರಿನ ವಿಲನ್ ಪಾತ್ರ ಮಾಡಿದ್ದರು. ಅದರಾಗ ಅವರು ನಾನು ಇಂಡಿಯಾವನ್ನು ಉಡಾಯಿಸಿ ಬಿಡತೇನಿ ಅಂತ ಮಾತಾಡಿದರು, ಮಿಸೈಲು ತಯಾರಿಸಿದರು, ಹೀರೋಗಳನ್ನು ಗೋಳು ಹೊಯಕೊಂಡರು. ಅವರನ್ನು ವಿಚಾರಣೆ ಮಾಡಬೇಕು.

ಅವರ ಅಪ್ಪ ಪುಷ್ಕರನಾಥ ಹಾಗೂ ಅವ್ವ ದುಲಾರಿ ಅವರನ್ನ ಜೈಲಿಗೆ ಹಾಕಬೇಕು.

ʻನಾಯಕʼ ಚಿತ್ರದಲ್ಲಿ ಅನಿಲಕಪೂರ್ ಅವರು ಮುಖ್ಯಮಂತ್ರಿಯನ್ನು ಹೊಡೆದದ್ದಕ್ಕೆ ಅವರನ್ನು ವಿಚಾರಣೆಗೆ ಒಳಪಡಿಸುವುದಲ್ಲದೇ ಒದ್ದು ಒಳಗೆ ಹಾಕಬೇಕು. ಅವರಪ್ಪ ಸುರಿಂದರ ಕಪೂರ್ ಅವರು ತೀರಿಕೊಂಡಾರ. ರೋಷೋಮನ್ ಚಿತ್ರದಲ್ಲಿ ಮಾಡಿದಂಗ ಅವರ ಆತ್ಮವನ್ನು ಆಹ್ವಾನಿಸಿ ಜೈಲಿಗೆ ಹಾಕಬೇಕು.

ರಾಜೇಂದ್ರ ಕುಮಾರ ಅವರ ʻಶತರಂಜʼ ಚಿತ್ರದಲ್ಲಿ ಮದನ ಪುರಿ ಅವರು ಹಾಗೂ ಅವರ ತಂದೆ ನಿಹಾಲ ಸಿಂಗ್ ಅವರಿಬ್ಬರೂ ಈಗ ಇಲ್ಲ. ಪುರಿ ಅವರು ಭಾರತವನ್ನು ನಾಶಪಡಿಸುವ ಮಾತಾಡಿದ್ದಕ್ಕೆ ಅವರನ್ನು ವಿಚಾರಣೆ ಮಾಡಿ ಅವರ ಅಪ್ಪ ನಿಹಾಲ ಸಿಂಗ್ ಜೊತೆಗೆ ಒಳಗ ಹಾಕಬೇಕು.

ಜಿತೇಂದ್ರ ಅವರ ಫರ್ಜ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿ ದೇಶದ ಮೇಲೆ ಬಾಂಬ ದಾಳಿ ನಡೆಸಿದ ರಾಜನಾಳಾ ಕಾಲೇಶ್ವರ ರಾವು ಅವರು ನಿಧನ ಹೊಂದಿದ್ದಾರೆ. ಅವರ ಆತ್ಮ ಮರಳಿ ಬರಲು ಒಪ್ಪದಿದ್ದರ ಅವರ ಹೆಂಡತಿ – ಮಕ್ಕಳನ್ನ ಜೈಲಿಗೆ ಹಾಕಬೇಕು.

ಮೊನ್ನೆ ಮೊನ್ನೆ ಬಂದ ಆಲಿಯಾ ಭಟ ಅವರ ರಾಝೀ ಸಿನಿಮಾದಾಗ ಪಾಕಿಸ್ತಾನದ ಸೈನ್ಯದ ಕಮಾಂಡರ ಪಾತ್ರ ಮಾಡಿದ್ದ ಅಶ್ವಥ ಭಟ್ ಅವರನ್ನು ಒಳಗ ಹಾಕಬೇಕು.

ಇವೆಲ್ಲಾ ಬರೇ ಉದಾಹರಣೆ ಅಷ್ಟ. ಚೈನಾ, ಪಾಕಿಸ್ತಾನದ ವಿಲನ್‌ಗಳ ಪಾತ್ರ ಮಾಡಿದರ ಜೈಲಿಗೆ ಹಾಕತಾರ ಅಂತ ಗೊತ್ತಾದರ ಸಾಕು, ಧೈರ್ಯವಂತರಿಂದ ತುಂಬಿ ತುಳುಕತಾ ಇರೋ ಹಿಂದಿ ಸಿನಿಮಾ ರಂಗದ ಮಹಾಮಹಿಮರೆಲ್ಲಾ ಅದನ್ನ ಬಿಟ್ಟ ಬಿಡತಾರ. ಬರೇ ನಮ್ಮ ವಜ್ರಮುನಿ, ತೂಗುದೀಪ ಶ್ರೀನಿವಾಸರಂಥಾ ಹಳ್ಳೀ ಗೌಡರ ಪಾತ್ರ ಅಷ್ಟ ಮಾಡತಾರ. ಸಿನಿಮಾರಂಗದ ಭಾರತೀಕರಣ ಆಗತದ.

ಅಂದಂಗ ಶಾಹೀನ ಅಂದರ ಪರ್ಶಿಯನ್- ಉರ್ದು ದಾಗ ಗರುಡ. ಶಾಹೀನ ಅನ್ನೋದರ ಬಗ್ಗೆ ಈ ಯುಗದ ಕವಿ ಅಲ್ಲಮಾ (ಜ್ಞಾನಿ) ಇಕಬಾಲ್ ಏನು ಹೇಳ್ಯಾರ ಅಂತ ನೋಡೋಣ

ʻನೋಡಪಾ ತಮ್ಮಾ ನೀ

ಮಹಾರಾಜರ ಅರಮನಿ ಮ್ಯಾಲೆ

ಅಲ್ಲೆ – ಇಲ್ಲೆ

ಎಲ್ಲಾ ಕಡೆ

ಗೂಡು ಕಟಿಗೋತ ಕೂಡಬ್ಯಾಡʼ

ʻನೀ ಗರುಡ ಅದೀ

ದೊಡ್ ದೊಡ್ಡ ಪರ್ವತದ ನೆತ್ತಿ ಮ್ಯಾಲೆ

ಇರಬೇಕಾದವ ನೀ

ಅಲ್ಲೇ ಇರಂತೀ ಹಾರಿಕೋತ ಹೋಗ್ ಈಗʼ

ʻನೋಡಪಾ ತಮ್ಮಾ,

ನೀ ಗರುಡ ಅದೀ

ಬ್ಯಾರೆ ಏನೇನೂ ಅಲ್ಲ

ಹಾರಿಕೋತ ಇರೋದ ನಿನ್ನ ಕೆಲಸ

ನಿನ್ನೆದುರಿಗೆ ಇರೋದು

ಬರೇ ಒಂದ ಆಕಾಶ ಅಲ್ಲ

ತಿಳಕೋʼ

ಬೀದರಿನ ಶಾಹೀನ ಸಾಲಿಗೂ ದೆಹಲಿಯ ಶಾಹೀನ ಬಾಗಿಗೂ ಏನೂ ಸಂಬಂಧ ಇಲ್ಲ. ಹೆಸರು ಮಾತ್ರ ಒಂದ. ಕನ್ನಡ ಸಿನಿಮಾದಾಗ ಅಪರಾಧ ಆದಮ್ಯಾಲೆ ಬರೋ ಪೊಲಿಸರಿಗೆ ಅದು ಕನ್‌ಫ್ಯೂಸ್ ಆಗಿರಬೇಕು. ಅದಕ್ಕ ಈ ಬಂಧನ- ವಿಚಾರಣೆ ಆಗಿರಬೇಕು, ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಒಟ್ಟಾರೆಯಾಗಿ ಕರ್ನಾಟಕದ ಮಾನ ಮರ್ಯಾದೆಯನ್ನು ನಮ್ಮ ಪೊಲೀಸರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದಾರೆ. ಇನ್ನಾದರೂ ಇವರು ಬುದ್ದಿ ಕಲಿಯುತ್ತಾರಾ?

  2. ಮಕ್ಕಳ ಭವಿಷ್ಯದ ಬಗ್ಗೆ ಚೂರು ಯೋಚನೆ ಮಾಡದೆ ಕಾನೂನಿನ ವಿರುದ್ಧ ಮಕ್ಕಳಿಗೆ ತೊಂದರೆ ಕೊಟ್ಟು ಮಾಡಬಾರದ ಕೆಲಸ ಮಾಡಿದ, ಈ ವಿಷಯಕ್ಕೆ ಸಂಬಂಧಪಟ್ಟ ಎಲ್ಲಾ ಪೋಲೀಸರನ್ನು ಸಸ್ಪೆಂಡ್ ಮಾಡಬೇಕು ಮತ್ತು ಶಿಕ್ಷೆಗೊಳಪಡಿಸಬೇಕು ಹಾಗಾದರೆ ಮಾತ್ರ ಯಾರೂ ಇಂಥ ಬೇಜವಾಬ್ದಾರಿ ಕೆಲಸ ಮಾಡುವುದಿಲ್ಲ.

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...