ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಅಂತಿಮ ಪಟ್ಟಿಯಿಂದ ಕೈಬಿಟ್ಟಿರುವ 3.66 ಲಕ್ಷ ಮತದಾರರ ವಿವರಗಳನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ (ಅ.7) ಭಾರತೀಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ವಿಚಾರಣೆ ವೇಳೆ, ಎಸ್‌ಐಆರ್ ಬಳಿಕ ಅಂತಿಮ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿದ ಹೆಚ್ಚಿನ ಹೆಸರುಗಳು ಹೊಸ ಮತದಾರರದ್ದು, ಕೆಲವು ಹಳೆಯ ಮತದಾರನ್ನು ಸೇರಿಸಲಾಗಿದೆ. ಪಟ್ಟಿಯಿಂದ ಕೈಬಿಟ್ಟಿರುವ ಯಾವುದೇ ಮತದಾರರು ಇದುವರೆಗೆ ಯಾವುದೇ ದೂರು ಅಥವಾ ಮೇಲ್ಮನವಿ ಸಲ್ಲಿಸಿಲ್ಲ ಚುನಾವಣಾ ಆಯೋಗ ಹೇಳಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಬಿಹಾರ ಎಸ್ಐಆರ್ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಇಂದಿನ ವಿಚಾರಣೆ ಬಳಿಕ, ಅಂತಿಮ ಪಟ್ಟಿಯಿಂದ ಕೈ ಬಿಡಲಾದ ಮತದಾರರ ಬಗ್ಗೆ ಅಕ್ಟೋಬರ್ 9ರೊಳಗೆ ಮಾಹಿತಿ ಒದಗಿಸುವಂತೆ ಪೀಠ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಅದೇ ದಿನ ನಡೆಸಲಿದೆ.
ಅಂತಿಮ ಪಟ್ಟಿಯನ್ನು ಪ್ರಕಟಿಸಿರುವುದರಿಂದ ಅಗತ್ಯವಿರುವ ದತ್ತಾಂಶವನ್ನು ತುಲನಾತ್ಮಕ ವಿಶ್ಲೇಷಣೆಯ ಮೂಲಕ ಒದಗಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಎಸ್‌ಐಆರ್ ಬಳಿಕ ಸೆಪ್ಟೆಂಬರ್ 30ರಂದು ಚುನಾವಣಾ ಆಯೋಗ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಅಕ್ಟೋಬರ್ 6 ರಂದು ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕವನ್ನೂ ಘೋಷಿಸಿದೆ.
ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿ ಬಾಗ್ಚಿ ಅವರು ಚುನಾವಣಾ ಆಯೋಗದ ಪರವಾಗಿ ಹಾಜರಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರಿಗೆ, ನ್ಯಾಯಾಲಯದ ಆದೇಶಗಳು ಹೆಚ್ಚಿನ ಪಾರದರ್ಶಕತೆಗೆ ಕಾರಣವಾಗಿವೆ ಎಂದು ಹೇಳಿದ್ದಾರೆ.
“ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಜನರಿಗೆ ಲಭ್ಯತೆ ಸುಧಾರಿಸಿದೆ. ಆದರೆ, ಕರಡು ಮತದಾರರ ಪಟ್ಟಿಯಿಂದ 65 ಲಕ್ಷ ಜನರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ದತ್ತಾಂಶಗಳಿಂದ ತಿಳಿದುಬಂದಿದೆ. ಸತ್ತವರು ಅಥವಾ ಬೇರೆಡೆಗೆ ಸ್ಥಳಾಂತರಗೊಂಡವರ ಹೆಸರುಗಳನ್ನು ತೆಗೆಯುವುದು ಸರಿಯಾದ ಕ್ರಮವಾಗಿದೆ. ಆದರೂ, ಯಾರನ್ನಾದರೂ ಪಟ್ಟಿಯಿಂದ ಕೈಬಿಡುವಾಗ ಚುನಾವಣಾ ನಿಯಮ 21 ಮತ್ತು ನಿಗದಿತ ಕಾರ್ಯವಿಧಾನಗಳನ್ನು (ಎಸ್‌ಒಪಿ) ಕಟ್ಟುನಿಟ್ಟಾಗಿ ಪಾಲಿಸಬೇಕು” ಎಂದು ಪೀಠ ಸೂಚಿಸಿದೆ.
“ಮತದಾರರ ಪಟ್ಟಿಯಿಂದ ಯಾರನ್ನಾದರು ಕೈ ಬಿಟ್ಟಾಗ ಅವರ ಮಾಹಿತಿಯನ್ನು ಚುನಾವಣಾ ಕಚೇರಿಗಳಲ್ಲಿ ಪ್ರದರ್ಶಿಸಬೇಕು ಎಂದು ಹಿಂದೆ ಸೂಚಿಸಲಾಗಿತ್ತು. ಆದರೆ, ಅಂತಿಮ ಮತದಾರರ ಪಟ್ಟಿಯು ಕೇವಲ ಸಂಖ್ಯೆಗಳ ಸಂಗ್ರಹವಾಗಿದ್ದು, ಇದರಿಂದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗಿದೆ. ಪಟ್ಟಿಯಲ್ಲಿ ಸೇರಿಸಲಾದ ಹೊಸ ಹೆಸರುಗಳು ತೆಗೆದುಹಾಕಲಾದವರಿಗೆ ಸಂಬಂಧಿಸಿದವುಗಳೇ ಇಲ್ಲವೆ ಸಂಪೂರ್ಣ ಹೊಸ ಹೆಸರುಗಳೇ ಎಂಬ ಸ್ಪಷ್ಟತೆ ಇಲ್ಲ ಎಂದು ಪೀಠ ಹೇಳಿದೆ.
ಇದಕ್ಕೆ ಉತ್ತರಿಸಿದ ದ್ವಿವೇದಿ ಅವರು, ಇದುವರೆಗೆ ಯಾವುದೇ ತೆಗೆದುಹಾಕಲಾದ ಮತದಾರರಿಂದ ದೂರು ಅಥವಾ ಮೇಲ್ಮನವಿ ಸಲ್ಲಿಕೆಯಾಗಿಲ್ಲ ಎಂದು ತಿಳಿಸಿದ್ದಾರೆ.
‘ಫಾದರ್ ಸ್ಟಾನ್ ಸ್ವಾಮಿ ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದ್ದಾರೆ..’; ನ್ಯಾಯಾಲಯಕ್ಕೆ ತಿಳಿಸಿದ ಮಹಾರಾಷ್ಟ್ರ ಸರ್ಕಾರ


