ಬಿಹಾರದ ”ಮಹಾಘಟಬಂಧನ್” ಮೈತ್ರಿ ಪಕ್ಷಗಳಾದ ಕಾಂಗ್ರೆಸ್, ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮತ್ತು ಎಡ ಪಕ್ಷಗಳು ಈ ವರ್ಷದ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಗೊಳಿಸಿದೆ. ಪ್ರಣಾಳಿಕೆಯೂ ಕೃಷಿ ಕಾನೂನುಗಳು ಮತ್ತು ಉದ್ಯೋಗಗಳ ಮೇಲೆ ಕೇಂದ್ರೀಕರಿಸಿದೆ.
ಮೈತ್ರಿಕೂಟವು ಚುನಾವಣೆಯಲ್ಲಿ ಗೆದ್ದರೆ, ಆರ್ಜೆಡಿಯ ತೇಜಶ್ವಿ ಯಾದವ್ ಅವರ ನೇತೃತ್ವದಲ್ಲಿ ಕಳೆದ ತಿಂಗಳು ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ವಿರೋಧಿ ಕಾನೂನುಗಳನ್ನು ಮೊದಲ ವಿಧಾನಸಭಾ ಅಧಿವೇಶನದಲ್ಲಿಯೇ ರದ್ದುಗೊಳಿಸುವ ಮಸೂದೆಯನ್ನು ಅಂಗೀಕರಿಸಲಿದೆ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಬಿಜೆಪಿ ಮೈತ್ರಿ ತೊರೆದ ಚಿರಾಗ್ ಪಾಸ್ವಾನ್!
ಬಿಜೆಪಿಯನ್ನು ತೀವ್ರ ತರಾಟೆಗೆ ಪಡೆದ ಸುರ್ಜೆವಾಲಾ, “ಬಿಜೆಪಿ ಮೂರು ಮೈತ್ರಿಗಳ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ, ಒಂದು ಜನತಾದಳ (ಯುನೈಟೆಡ್) ನೊಂದಿಗೆ, ಇನ್ನೊಂದು ಲೋಕ ಜನಶಕ್ತಿ ಪಕ್ಷ (ಎಲ್ಜೆಪಿ) ಯೊಂದಿಗೆ ಮತ್ತು ಮೂರನೆಯದು ’ಓವೈಸಿ ಸಾಹೇಬ್’ ನೊಂದಿಗೆ” ಎಂದು ಹೇಳಿದ್ದಾರೆ.
“ಮಹಾಘಟಬಂಧನ್” ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಶ್ವಿ ಯಾದವ್ ಮಾತನಾಡಿ, ಪ್ರವಾಹದಿಂದ ಎಷ್ಟು ಜನರು ಹಾನಿಗೊಳಗಾಗಿದ್ದಾರೆಂದು ನೋಡಲು ಕೇಂದ್ರ ತಂಡವು ಇಲ್ಲಿಯವರೆಗೆ ರಾಜ್ಯಕ್ಕೆ ಭೇಟಿ ನೀಡಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಈ ವಾರದ ಆರಂಭದಲ್ಲಿ, “ಮಹಾಘಟಬಂಧನ್” ಮೈತ್ರಿಕೂಟದ ಪಕ್ಷಗಳು ಬಿಹಾರ ವಿಧಾನಸಭೆಯ 243 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದವು. ಬಿಹಾರದಲ್ಲಿ ಅಕ್ಟೋಬರ್ 28 ರಿಂದ ಮೂರು ಹಂತಗಳಲ್ಲಿ ನಡೆಯಲಿದ್ದು, ಫಲಿತಾಂಶಗಳನ್ನು ನವೆಂಬರ್ 10 ರಂದು ಘೋಷಿಸಲಾಗುತ್ತದೆ.
ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣೆ: ಶುರುವಾಗಿದೆ NDA ವಿರುದ್ಧ ’ಬ್ಯಾನರ್’ ಯುದ್ಧ!