ನಿನ್ನೆ NEET ಫಲಿತಾಂಶ ಪ್ರಕಟಗೊಂಡಿದೆ. ಕರ್ನಾಟಕದ ಬೀದರ್‌ನ ಕಾರ್ತಿಕ್ ರೆಡ್ಡಿ 720 ಅಂಕಗಳಿಗೆ 710 ಅಂಕ ಗಳಿಸಿ ಕರ್ನಾಟಕದ ನಂಬರ್ ಒನ್ ಟಾಪರ್‌ ಆಗಿದ್ದಲ್ಲದೇ ಅಖಿಲ ಭಾರತ ಮಟ್ಟದಲ್ಲಿ 9ನೇ ರ್ಯಾಂಕ್ ಪಡೆದು ಮಿಂಚಿದ್ದಾರೆ. ಅಲ್ಲದೇ ಅರ್ಬಜ್ ಅಹ್ಮದ್ ಎಂಬ ಲಾರಿ ಚಾಲಕನ ಮಗ 700 ಅಂಕಗಳೊಂದಿಗೆ ಕರ್ನಾಟಕದ 3ನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಇದರಲ್ಲಿ ವಿಶೇಷ ಅಂಶವೆಂದರೆ ಇವರಿಬ್ಬರೂ ಕಲಿತಿದ್ದು ಬೀದರ್‌ ಶಾಹೀನ್ ಸಂಸ್ಥೆಯಲ್ಲಿ. ಈ ಸಂಸ್ಥೆ ವರ್ಷದ ಆರಂಭದಲ್ಲಿ ಭಾರೀ ಸುದ್ದಿ ಮಾಡಿದ್ದು ನಿಮಗೆ ನೆನಪಿರಬೇಕು. ಈ ಸಂಸ್ಥೆಯ ಮಕ್ಕಳು ಸಿಎಎ ವಿರೋಧಿ ನಾಟಕ ಮಾಡಿದರೆಂಬ ಕ್ಲುಲ್ಲಕ ಕಾರಣಕ್ಕಾಗಿ ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ನಾಟಕದಲ್ಲಿ ಭಾಗವಹಿಸಿದ್ದ ಮಗುವಿನ ತಾಯಿಯನ್ನು ಬಂಧಿಸಿ ಜೈಲಿನಲ್ಲಿಡಲಾಗಿತ್ತು. ಹಲವರ ಮೇಲೆ ಎಫ್‌ಐಆರ್‌ ದಾಖಲಾಗಿತ್ತು. ಪೊಲೀಸರು ಶಾಲೆಗೆ ನುಗ್ಗಿ ಚಿಕ್ಕಮಕ್ಕಳನ್ನು ವಿಚಾರಣೆಗೊಳಪಡಿಸಲಾಗಿತ್ತು. ತದನಂತರ ಹಲವರು ಇಡೀ ಸಂಸ್ಥೆ ವಿರುದ್ಧ ಅಪಪ್ರಚಾರ ಮಾಡಿದ್ದರು. ಹಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಬಿಡಿಸಿ ಬೇರೆಡೆಗೆ ವರ್ಗಾಹಿಸುವಂತೆ ಮಾಡಲಾಗಿತ್ತು.

ಅಂತ ಬೀದರ್‌ನ ಶಾಹೀನ್ ಶಾಲೆಯಲ್ಲಿ ಇಂದು 340ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದು ಉಚಿತ ವೈದ್ಯಕೀಯ ಶಿಕ್ಷಣ ಪಡೆಯಲು ಹೊರಟಿದ್ದಾರೆ. ಈ ವರ್ಷ ಮಾತ್ರವಲ್ಲದೇ ಕಳೆದ ವರ್ಷ ಸಹ ಇದೇ ಸಂಸ್ಥೆಯ 307 ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉಚಿತ ವೈದ್ಯಕೀಯ ಸೀಟು ಪಡೆದಿದ್ದರು. ಕಳೆದ 5 ವರ್ಷಗಳಲ್ಲಿ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಕಲಿತು ಉಚಿತ ವೈದ್ಯಕೀಯ ಸೀಟು ಪಡೆದಿದ್ದಾರೆ!

ಈ ಕುರಿತು ನಾನುಗೌರಿ.ಕಾಂ ಶಾಹೀನ್ ಸಂಸ್ಥೆಯ ಸಿಇಓ ತೌಸೀಫ್ ಮಡಿಕೇರಿಯವರನ್ನು ಮಾತನಾಡಿಸಿತು. ಅವರು “ಕರ್ನಾಟಕದ 1 ಮತ್ತು 3ನೇ ರ್ಯಾಂಕ್ ಮತ್ತು ಅಖಿಲ ಭಾರತ ಮಟ್ಟದಲ್ಲಿ 9 ಮತ್ತು 85 ರ್ಯಾಂಕ್ ನಮ್ಮ ಸಂಸ್ಥೆಗೆ ಲಭಿಸಿದೆ. ನಮ್ಮದು ಕೇವಲ ಮುಸ್ಲಿಂ ವಿದ್ಯಾರ್ಥಿಗಳಿರುವ ಸಂಸ್ಥೆಯಲ್ಲ. ಬದಲಿಗೆ ಶೇ.50ರಷ್ಟು ಇತರ ಸಮುದಾಯಗಳ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ನಾವು ಉಚಿತ ಶಿಕ್ಷಣ ನೀಡುತ್ತಿದ್ದೇವೆ” ಎನ್ನುತ್ತಾರೆ.

ಬೀದರ್ ಹೈದರಾಬಾದ್ ಕರ್ನಾಟಕದ ವ್ಯಾಪ್ತಿಗೆ ಬರುವ ಹಿಂದುಳಿದ ಜಿಲ್ಲೆ. ಇಲ್ಲಿ ನಾವು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಕೆಜಿಯಿಂದ ಪ್ರಾರಂಭವಾಗಿ ಪದವಿವರೆಗೂ ಶಿಕ್ಷಣ ನೀಡುತ್ತಿದ್ದೇವೆ. 7 ದೇಶಗಳ ಮತ್ತು ಭಾರತದ 25 ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಬೀದರ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಶಾಹೀನ್ ಸಂಸ್ಥೆಯು ದೇಶದ 12 ರಾಜ್ಯಗಳಲ್ಲಿ 44 ಕೇಂದ್ರಗಳನ್ನು ತೆರೆದು ಕಾರ್ಯನಿರ್ವಹಿಸುತ್ತಿದೆ. ಇಂತಹ ಗುಣಮಟ್ಟದ ಸಂಸ್ಥೆಯ ಮೇಲೆ ವೃತ್ತಿಮತ್ಸರದ ಕಾರಣಕ್ಕಾಗಿ ಅಪಪ್ರಚಾರ ಮಾಡಲಾಗಿತ್ತು. ಕೋಮುವಾದಿ ಹುನ್ನಾರ ನಡೆಸಲಾಯಿತು. ಆದರೆ ನಾವು ಭಾರತದ ಸಂವಿಧಾನ ಮತ್ತು ನ್ಯಾಯಾಲಯದ ಮೇಲೆ ನಂಬಿಕೆಯಿಟ್ಟಿದ್ದೇವೆ. ಶ್ರದ್ಧೆಯಿಂದ ಶಿಕ್ಷಣ ನೀಡುವ ಕೆಲಸ ಮುಂದುವರೆಸುತ್ತೇವೆ ಎಂದು ತೌಸೀಫ್ ಹೇಳಿದ್ದಾರೆ.

ಶಾಹೀನ್ ಶಾಲೆಯು ಇಂದು ಮತ್ತೆ NEET ಫಲಿತಾಂಶ ಕಾರಣಕ್ಕಾಗಿ ಚರ್ಚೆಗೆ ಬಂದಿದೆ. ಹಲವು ಬಡ ವಿದ್ಯಾರ್ಥಿಗಳು ಇಲ್ಲಿ ಉಚಿತ ಶಿಕ್ಷಣ ಪಡದು ತಮ್ಮ ಶೈಕ್ಷಣಿಕ ಕನಸುಗಳನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ‌ ಶಾಲೆಯ ವಿರುದ್ಧದ ದೇಶದ್ರೋಹ ಪ್ರಕರಣದ ಜಾಮೀನು ವಿಚಾರಣೆ ಸಂದರ್ಭದಲ್ಲಿ ಬೀದರ್‌ನ ಸೆಷನ್ಸ್ ನ್ಯಾಯಾಲಯ ಮೇಲ್ನೋಟಕ್ಕೆ ಇದು ದೇಶದ್ರೋಹದ ಪ್ರಕರಣ ಅಲ್ಲ ಎಂದು ಅಭಿಪ್ರಾಯಪಟ್ಟು ಎಲ್ಲಾ ಆರೋಪಿಗಳಿಗೂ ಜಾಮೀನು ನೀಡಿತ್ತು. ಕರ್ನಾಟಕದ ಖ್ಯಾತ ವಕೀಲರಾದ ಬಿಟಿ ವೆಂಕಟೇಶ್ ಶಾಲೆಯ ಪರ ವಾದಿಸಿದ್ದರು.


ಇದನ್ನೂ ಓದಿ: ಬೀದರ್ ಮಕ್ಕಳ ನಾಟಕ ಪ್ರಕರಣ: ಜನರೆದುರು ಮತ್ತಷ್ಟು ಬೆತ್ತಲಾದ ಸರ್ಕಾರ…

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಮುತ್ತುರಾಜು
+ posts

LEAVE A REPLY

Please enter your comment!
Please enter your name here