ಸಮಾಜ ಕಲ್ಯಾಣ ಇಲಾಖೆಯಲ್ಲಿನ ಭ್ರಷ್ಟಾಚಾರ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಆಮ್ ಆದ್ಮಿ ಪಕ್ಷ(ಎಎಪಿ)ದ ಕಾರ್ಯಕರ್ತರ ಮೇಲೆ ಬೆಂಗಳೂರಿನ ಜೀವನ್ ಭೀಮಾ ನಗರದ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರ ಸಮ್ಮುಖದಲ್ಲೇ ಸಿ.ವಿ. ರಾಮನ್ ನಗರದ ಬಿಜೆಪಿ ಶಾಸಕ ರಘು ಅವರ ಬೆಂಬಲಿಗರು ಹಲ್ಲೆ ನಡೆಸಿರುವ ಘಟನೆ ಮಂಗಳವಾರ ಬಳಿ ನಡೆದಿದೆ ಎಂದು ಆರೋಪಿಸಲಾಗಿದೆ.
ಕಾಮಗಾರಿಗಳ ಗುತ್ತಿಗೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಎಎಪಿ ಕಾರ್ಯಕರ್ತರು ನಿನ್ನೆ ಪಕ್ಷದ ವತಿಯಿಂದ ತಿಪ್ಪಸಂದ್ರದ ಮಹಾದ್ವಾರದ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನಾನಿರತರನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ, ಈ ವೇಳೆ ಠಾಣೆಗೆ ನುಗ್ಗಿ ಬಿಜೆಪಿ ಕಾರ್ಯಕರ್ತರು ಗೂಂಡಾಗಿರಿ ಮಾಡಿದ್ದಾರೆ ಎಂದು ಪಕ್ಷದ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರು ಎಎಪಿ ಕಾರ್ಯಕರ್ತರಿಗೆ ಮಾತ್ರವಲ್ಲದೆ ಎಎಪಿ ಮಾಧ್ಯಮದಲ್ಲಿ ಕೆಲಸ ಮಾಡುವರಿಗೆ ಮತ್ತು ನಾಗರೀಕರ ಮೇಲೆ ಕೂಡಾ ಹಲ್ಲೆ ನಡೆಸಿದ್ದಾರೆ ಎಂದು ಎಎಪಿ ಮಾಧ್ಯಮ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಚರಣ್ ಐವರ್ನಾಡ್ ಹೇಳಿದ್ದಾರೆ.
“ಬಿಜೆಪಿ ಶಾಸಕ ರಘು ಗೂಂಡಗಳು ಆಪ್‌ನ ಕಾರ್ಯಕರ್ತರು ಸೇರಿ ನಾಗರಿಕರ ಮೇಲೆ, ನನ್ನ ಮೇಲೆ ಪೊಲೀಸ್ ಸಮಕ್ಷಮದಲ್ಲಿ ಹಿಗ್ಗಾಮಗ್ಗ ಹೊಡೆದು ಅವ್ಯಾಚ್ಯವಾಗಿ ಬೆದರಿಕೆ ಹಾಕಿದ್ದಾರೆ. ನನ್ನ ಫೋನ್ ಎಳೆದಾಡಿ ಅದರಲ್ಲಿನ ಡೇಟಾ ಎಲ್ಲಾ ಅಳಿಸಿ ಹಾಕಿದ್ದಾರೆ. ಇದೊಂದು ಸರ್ಕಾರಿ ಕೃಪಾಪೋಷಿತ ಅಪ್ಪಟ ಮಾಬ್ ಲಿಂಚ್” ಎಂದು ಚರಣ್ ಐವರ್ನಾಡ್ ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ರಸ್ತೆ ಗುಂಡಿಗಳಿಗೆ ಹೂವು, ರಂಗೋಲಿ ಹಾಕಿ ಪ್ರತಿಭಟನೆ ಮಾಡಿದ ಎಎಪಿ
ಈ ಬಗ್ಗೆ ಬುಧವಾರದಂದು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿಯ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕರಾದ ಎಚ್.ಡಿ.ಬಸವರಾಜು, “ತಿಪ್ಪಸಂದ್ರ ಮುಖ್ಯರಸ್ತೆಯ ಮಹಾದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದವರ ಪೈಕಿ ಐವರು ಆಮ್ ಆದ್ಮಿ ಪಾರ್ಟಿ ಮುಖಂಡರನ್ನು ಪೊಲೀಸರು ಬಂಧಿಸಿದ್ದರು. ಇದೇ ವೇಳೆ ಜೀವನ್ ಭಿಮಾ ಪೊಲೀಸ್ ಠಾಣೆಗೆ ಆಗಮಿಸಿದ ಮಾಜಿ ಕಾರ್ಪೊರೇಟರ್ ಚಂದ್ರಪ್ಪ ರೆಡ್ಡಿ, ಶಾಸಕ ರಘು ಆಪ್ತ ಸಹಾಯಕ ಉನ್ನಿಕೃಷ್ಣನ್ ಹಾಗೂ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರುಗಳು ಪೊಲೀಸ್ ಸಿಬ್ಬಂದಿಗಳೇ ಹೆದರುವಂತೆ ದಾಂಧಲೆ ಮಾಡಿದ್ದಾರೆ. ಠಾಣೆಯೊಳಗೆ ತೆರಳುತ್ತಿದ್ದ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ” ಎಂದು ಹೇಳಿದ್ದಾರೆ.
“ಘಟನೆ ನಡೆದು ಒಂದು ದಿನವಾದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ರಘು ಬೆಂಬಲಿಗರ ಗೂಂಡಾಗಿರಿಯು ಪೊಲೀಸ್ ಸಿಬ್ಬಂದಿಯ ಫೋನ್‌ಗಳಲ್ಲಿ ರೆಕಾರ್ಡ್ ಆಗಿದ್ದು, ಅವುಗಳನ್ನು ಸಾಕ್ಷಿಯಾಗಿ ಬಳಸಿಕೊಂಡು ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ, “ಪೊಲೀಸ್ ಠಾಣೆಯಲ್ಲಿ ನಡೆದ ದಾಂಧಲೆಗೆ ಶಾಸಕ ರಘುರವರೇ ನೇರ ಹೊಣೆ. ಭ್ರಷ್ಟಾಚಾರವು ಜನರಿಗೆ ತಿಳಿಯುತ್ತದೆ ಎಂದು ಹೆದರಿದ ಅವರು ನಮ್ಮ ಮೇಲೆ ಗೂಂಡಾ ಬೆಂಬಲಿಗರನ್ನು ಛೂ ಬಿಟ್ಟಿದ್ದಾರೆ. ರಾಜ್ಯ ಸರ್ಕಾರ ಹಾಗೂ ಶಾಸಕರ ಪ್ರಭಾವದಿಂದಾಗಿ ಪೊಲೀಸ್ ಸಿಬ್ಬಂದಿಯು ಅಸಹಾಯಕತೆಯಿಂದ ಸುಮ್ಮನಿರಬೇಕಾಗಿದೆ” ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ:ಪ್ರಮೀಳಾ ನಾಯ್ಡು ವಜಾಗೆ ಆಗ್ರಹಿಸಿ, ಮಹಿಳಾ ಆಯೋಗಕ್ಕೆ ಬೀಗ ಜಡಿದು ಎಎಪಿ ಪ್ರತಿಭಟನೆ



ಮನುವಾದಿಗಳ ಗೂಂಡಾಗಿರಿಗೆ ದಿಕ್ಕಾರವಿರಲಿ.