Homeಮುಖಪುಟಬಹುತ್ವ ಬದುಕಿನ ಸಂದೇಶ ಸಾರಿದ ‘ನೆಲದ ಪದ’ ಸಾಂಸ್ಕೃತಿಕ ಉತ್ಸವ

ಬಹುತ್ವ ಬದುಕಿನ ಸಂದೇಶ ಸಾರಿದ ‘ನೆಲದ ಪದ’ ಸಾಂಸ್ಕೃತಿಕ ಉತ್ಸವ

- Advertisement -
- Advertisement -

ಬೆಂಗಳೂರಿನ ಸ್ಫೂರ್ತಿಧಾಮದಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಆಯೋಜಿಸಿದ್ದ ‘ನೆಲದ ಪದ’ ದೇಸಿ ಯುವ ಸಾಂಸ್ಕೃತಿಕ ಉತ್ಸವ ಬಹುತ್ವ ಬದುಕಿನ ಸಂದೇಶ ಸಾರಿತು.

ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪ್ರತಿಮೆಗೆ ವಂದಿಸುವ ಮೂಲಕ ಆರಂಭಿಸಲಾಯಿತು. ‘ಅರಿವೇ ಅಂಬೇಡ್ಕರ, ಗುರುವೇ ಅಂಬೇಡ್ಕರ’ ಎಂದು ನಮಿಸಿ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.

ನಾಡಿನ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ಹಿರಿಯ ಪತ್ರಕರ್ತರಾದ ಡಾ.ವಿಜಯಮ್ಮ ಅವರ ಮುಂದಾಳ್ವದಲ್ಲಿ ಅಂಬೇಡ್ಕರ್‌ ಪ್ರತಿಮೆಯಿಂದ, ಬುದ್ಧನ ಪ್ರತಿಮೆಯವರೆಗೂ ಮೆರವಣಿಗೆ ನಡೆಸಲಾಯಿತು. ಸ್ಫೂರ್ತಿಧಾಮದ ಪ್ರಶಾಂತ ವಾತಾವರಣದಲ್ಲಿ ನಿರ್ಮಿಸಲಾಗಿರುವ ಬುದ್ಧನ ಪ್ರತಿಮೆಯ ಮುಂದೆ ವಿಜಯಮ್ಮ ಹಾಗೂ ಹಂಸಲೇಖ ಅವರು ದೀಪ ಬೆಳಗಿಸಿದರು. ಒನಕೆ ಓಬವ್ವ ಕಹಳೆ ವಾದನ ಕಲಾವಿದರು ಮೆರವಣಿಗೆಯನ್ನು ಮುನ್ನಡೆಸಿದರು. ಮೆರವಣಿಗೆಯುದ್ದಕ್ಕೂ ಕೊಂಬು, ಕಹಳೆ, ತಮಟೆ ಸದ್ದು ಸಾಂಸ್ಕೃತಿಕ ಸಂಕೇತಗಳನ್ನು ಪ್ರತಿಧ್ವನಿಸಿದವು.

ವಿಜಯಸ್ತಂಬದ ಬಳಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೆ.ವಿ.ಎಸ್‌. ರಾಜ್ಯ ಸಂಚಾಲಕ ಸರೋವರ್‌ ಬೆಂಕಿಕೆರೆಯವರು ರೈತ ಹೋರಾಟದ ವಿಜಯವನ್ನು ಸ್ಮರಿಸಿದರು. ಜೊತೆಗೆ ಬರಗೂರಿನ ಅಲೈ ತಂಡದವರು ‘ಮೊಹರಂ ಅಲೈ ಕುಣಿತ’ ನಡೆಸಿಕೊಡುವ ಮೂಲಕ ‘ಹಿಂದೂ-ಮುಸ್ಲಿಂ’ ಭಾವೈಕ್ಯತೆಯನ್ನು ಸಾರಿದರು.

ಸ್ಫೂರ್ತಿಧಾಮದ ವೇದಿಕೆ ಸಜ್ಜಾಗಿತ್ತು. ಗಾಯಕ ಚಿಂತನ್‌ ವಿಕಾಸ್ ಅವರು, ಕುವೆಂಪು ರಚಿತ ವಿಶ್ವಮಾನವ ಗೀತೆ ‘ಓ ನನ್ನ ಚೇತನ, ಆಗು ನೀ ಅನಿಕೇತನ’ವನ್ನು ವಿಶಿಷ್ಟ ರಾಗ ಸಂಯೋಜನೆಯಲ್ಲಿ ಹಾಡುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿವಿಧ ಜಾತಿ, ಧರ್ಮ,‌ ಭಾಷೆ, ಲಿಂಗ, ಪ್ರದೇಶಗಳಿಗೆ ಸೇರಿದ ಸಾಮಾನ್ಯ ಜನರ ಕೂಡಿಬಾಳುವ ಬದುಕಿನ ತತ್ವವನ್ನು ಸಾರುವ, ನಮ್ಮದೇ ನೆಲಮೂಲದ ಹಾಡು, ಕಥೆ, ಕಾವ್ಯ, ಕುಣಿತ, ವಾದ್ಯಗಳ ಲಯವನ್ನು ಮೈಗೂಡಿಸಿಕೊಂಡ ಯುವ ಸಮುದಾಯ ಫ್ಯಾಸಿಸ್ಟ್‌ ಶಕ್ತಿಗಳನ್ನು ಎದುರಿಸುವ ಬಗೆಯನ್ನು ಕಾರ್ಯಕ್ರಮದ ಮೂಲಕ ತೋರಿಸಿಕೊಟ್ಟರು.

ತಳಸಮುದಾಯಗಳ ಅಸಲೀ ಸಂಸ್ಕೃತಿಯನ್ನು, ದಮನಿಸಲ್ಪಡುತ್ತಿರುವ ಭಾಷೆ-ಧರ್ಮಗಳ ಪ್ರತಿರೋಧದ ದನಿಗಳನ್ನು ಸಮಾಜದ ಎಲ್ಲ ಸ್ತರಗಳ ಯುವಜನರೂ ಒಗ್ಗೂಡಿ ಅಭಿವ್ಯಕ್ತಿಸುವ ಮತ್ತು ಸಂಭ್ರಮಿಸುವ ವಿಶಿಷ್ಟ ಹಬ್ಬವಾಗಿ ಹೊಮ್ಮಿದ ‘ದೇಸಿ ಪದ’ದಲ್ಲಿ ಮಂಡ್ಯದ ಮಹಿಳಾ ನಗಾರಿ ತಂಡದ ಕಲಾ ಪ್ರದರ್ಶನ ಮನಸೂರೆಗೊಂಡಿತು. ಧಾರಾವಾಡದ ನಾದ ಝೇಂಕಾರ ಸಾಂಸ್ಕೃತಿಕ ಸಂಘವು, ‘ಎಲ್ಲಿಕಾಣೆಲ್ಲಿಕಾಣಿರೋ ನಮ್ಮ ಎಲ್ಲವ್ವ’ ಹಾಡನ್ನು ಸೊಗಸಾಗಿ ಹಾಡಿದರು.

ಮನಸೂರೆಗೊಂಡ ಜೇನುಕುರುಬರ ಕಲಾ ಪ್ರದರ್ಶನ

ಕುಡಿಯುವ ನೀರು, ವಿದ್ಯುತ್‌ ಸಂಪರ್ಕ, ರಸ್ತೆ ಯಾವುದೂ ಸರಿಯಾಗಿ ಇಲ್ಲದ ಕುಗ್ರಾಮವೊಂದರಿಂದ ಬಂದ ಕೊಡಗು ಜಿಲ್ಲೆಯ ಜೇನು ಕುರುಬರ ಯುಜಜನರ ತಂಡ ನೀಡಿದ ಕಲಾ ಪ್ರದರ್ಶನಕ್ಕೆ ಇಡೀ ಸಭಾಂಗಣ ಒನ್ಸ್‌ ಮೋರ್‌ ಹೇಳಿತು. ಈ ತಂಡದ ಪ್ರದರ್ಶನದಿಂದ ಸಂತೋಷಗೊಂಡ ನಾದಬ್ರಹ್ಮ ಹಂಸಲೇಖ ಅವರು, 25,000 ರೂ. ಬಹುಮಾನವನ್ನು ಘೋಷಿಸಿದ್ದಲ್ಲದೆ, ಝೀ ಕನ್ನಡ ವಾಹಿನಿಗೆ ಜೇನುಕುರುಬ ಸಮುದಾಯದ ಕಲಾ ಪ್ರದರ್ಶನವನ್ನು ತರುವುದಾಗಿ ತಿಳಿಸಿದರು.

ಮಧ್ಯಾಹ್ನದ ಬಳಿಕ ಜಾನಪದ ಗಾಯಕಿ ವೈ.ಜಿ.ಉಮಾ, ನಾದ ಮಣಿನಾಲ್ಕೂರು ಅವರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ವೇದಿಕೆ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ, ಹಿರಿಯ ಪತ್ರಕರ್ತರಾದ ವಿಜಯಮ್ಮ, ಸ್ಫೂರ್ತಿಧಾಮದ ಅಧ್ಯಕ್ಷರಾದ ಮರಿಸ್ವಾಮಿ, ಖ್ಯಾತ ಗಾಯಕಿ ಎಂ.ಡಿ ಪಲ್ಲವಿ, ಯುವ ನಿರ್ದೇಶಕರಾದ ಮಂಸೋರೆ, ಬಿ.ಎಂ.ಗಿರಿರಾಜ್‌ ಹಾಜರಿದ್ದರು.


ಇದನ್ನೂ ಓದಿರಿ: ವರ್ತಮಾನದ ತಲ್ಲಣಗಳ ನುಡಿಗನ್ನಡಿ ಕುವೆಂಪು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಿಕೋಬಾರ್ ದ್ವೀಪಗಳಿಗೆ ಆಗಮಿಸಿದ ನೈರುತ್ಯ ಮಾನ್ಸೂನ್; ಮೇ 31ರ ವೇಳೆಗೆ ಕೇರಳ ತಲುಪುವ ನಿರೀಕ್ಷೆ

0
ಭಾರತದ ಕೃಷಿ ಆಧಾರಿತ ಆರ್ಥಿಕತೆಯ ಜೀವನಾಡಿಯಾಗಿರುವ ನೈಋತ್ಯ ಮಾನ್ಸೂನ್ ಭಾನುವಾರ ದೇಶದ ದಕ್ಷಿಣದ ಪ್ರದೇಶವಾದ ನಿಕೋಬಾರ್ ದ್ವೀಪಗಳ ಮೇಲೆ ತನ್ನ ಆರಂಭವನ್ನು ಮಾಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. "ನೈಋತ್ಯ ಮಾನ್ಸೂನ್...