Homeಮುಖಪುಟವರ್ತಮಾನದ ತಲ್ಲಣಗಳ ನುಡಿಗನ್ನಡಿ ಕುವೆಂಪು

ವರ್ತಮಾನದ ತಲ್ಲಣಗಳ ನುಡಿಗನ್ನಡಿ ಕುವೆಂಪು

- Advertisement -
- Advertisement -

ಕೆಲವು ದಿನಗಳಿಂದ ದಿನಪತ್ರಿಕೆಗಳಿಂದ ದೇಶದ ಆಗುಹೋಗುಗಳನ್ನು ಗಮನಿಸುತ್ತಾ ಹೋದಂತೆ, ಹಲವು ವಿಷಯಗಳು ನನ್ನಲ್ಲಿ ಭಯ, ಆತಂಕ, ತಲ್ಲಣಗಳನ್ನು ಉಂಟುಮಾಡುತ್ತಿದ್ದವು. ಹೀಗೆ ಕೆಲವು ದಿನಗಳ ಹಿಂದೆ, ಕುವೆಂಪು ಅವರ ಒಂದು ಪುಸ್ತಕ ತೆರೆದು ’ಓ, ಬನ್ನಿ, ಸೋದರರೆ, ಬೇಗ ಬನ್ನಿ!’ ಕವಿತೆಯ ಸಾಲುಗಳನ್ನು ಗಮನಿಸುತ್ತಿದ್ದೆ..

ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ;
ಮತಿಯಿಂದ ದುಡಿಯಿರೈ ಲೋಕಹಿತಕೆ.
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕೆ.
ಓ, ಬನ್ನಿ, ಸೋದರರೆ, ವಿಶ್ವಪಥಕೆ!

ಎನ್ನುವ ಕೊನೆಯ ಸಾಲುಗಳನ್ನು ಓದಿ ಏಕೋ ಮನಸ್ಸು ಕದಡಿದಂತಾಗಿ ಪುಸ್ತಕವನ್ನು ಮುಚ್ಚಿದೆ; ಯಾವುದೋ ಆಲೋಚನೆಯಲ್ಲಿ ಮುಳುಗಿದಂತೆ ನನ್ನ ಕಣ್ಣು ಪುಸ್ತಕದ ಮೇಲಿದ್ದ ಕುವೆಂಪು ಚಿತ್ರವನ್ನೇ ದೃಷ್ಟಿಸುತ್ತಿತ್ತು. ನಮ್ಮ ಮನೆಯ ಪುಟ್ಟ ಪಾಪು ಬಂದು, ’ಯಾಕೆ ಮಾಮ, ಕುವೆಂಪು ತಾತನ್ನ ಅಂಗೆ ನೋಡ್ತಾಯಿದ್ದಿ?’ ಎಂದು ತನ್ನ ತೊದಲು ನುಡಿಯ ಮೂಲಕ ಪ್ರಶ್ನಾಯುಧವನ್ನು ಹಿಡಿದು ನಿಂತಿತು. ಆ ಕ್ಷಣಕ್ಕೆ ಕೆಲವು ದಿನಗಳಿಂದ ಕಾಡುತ್ತಿದ್ದ ಭಯ, ಆತಂಕ, ತಲ್ಲಣಗಳು ತಟ್ಟನೆ ಕಣ್ಣೆದುರು ಬಂದು ಅಣಕಮಾಡತೊಡಗಿದವು! ಮರುಕ್ಷಣವೆ ಏನೋ ಹೊಳೆದಂತಾಗಿ ನಿರಾಯುಧನಾಗಿಬಿಟ್ಟೆ.

ಒಂದುಕಡೆ ಇನ್ನು ಲೋಕವನ್ನರಿಯದ ಪುಟ್ಟ, ಮತ್ತೊಂದು ಕಡೆ ಲೋಕದ ಆಂತರ್ಯವನ್ನು ಅರಿತ ಪುಟ್ಟಪ್ಪ; ಮಗದೊಂದು ಕಡೆ ವರ್ತಮಾನದ ತಲ್ಲಣಗಳು. ಎದುರಾಳಿಗಳಾಗಿ ನಿಂತು ಚಿಂತನಯುದ್ಧಕ್ಕೆ ಆಹ್ವಾನವನ್ನೀಯುವಂತೆ ಕಂಡಿತು. ಈ ಪುಟ್ಟ ಕಣ್ಮುಂದೆ ತಂದ ತಲ್ಲಣಗಳು ಪುಟ್ಟಪ್ಪನ ಮೂಲಕ ಬಗೆಹರಿಯಬಹುದೆ? ಎಂದುಕೊಳ್ಳುತ್ತಿರುವಾಗ ನನ್ನ ಸ್ಮೃತಿಪಟಲದಲ್ಲಿ ಕುವೆಂಪುವಿನ ಬಗೆಗಿನ ವಿಚಾರಸುರುಳಿ ಎಳೆಎಳೆಯಾಗಿ ಬಿಚ್ಚಿಕೊಳ್ಳತೊಡಗಿತು. ಇದೇ ಕಾರಣವಾಗಿ ಶಾಂತವಾಗಿದ್ದ ನನ್ನ ತಲೆ ಪ್ರಶ್ನೋತ್ತರಗಳ ಯುದ್ಧಕಣವಾಗಿ ಮಾರ್ಪಟ್ಟಿತು.

ಪ್ರಶ್ನೆಗೆ ಪ್ರಶ್ನೆ ಎನ್ನುವಂತೆ, ಪುಟ್ಟ ಹಾಕಿದ ಪ್ರಶ್ನೆ ನನ್ನಲ್ಲಿ ಮತ್ತೊಂದು ಪ್ರಶ್ನೆಗೆ ದಾರಿಮಾಡಿಕೊಟ್ಟಿತು. ನನ್ನನ್ನು ಕಾಡುತ್ತಿರುವ ತಲ್ಲಣಗಳನ್ನು ಈ ಪುಟ್ಟನಿಗೆ ಆರ್ಥಮಾಡಿಸುವುದಾದರೂ ಹೇಗೆ? ಎಂದು. ಏಕೆಂದರೆ, ನನ್ನನ್ನು ಕಾಡುತ್ತಿರುವ ಪ್ರಶ್ನೆಗಳು ಇನ್ನೂ ಅವನ ಅರಿವಿಗೆ ನಿಲುಕದವು. ಮತವೆಂದರೆ ಏನು ಎಂಬುವುದೆ ತಿಳಿಯದ ಕಂದನಿಗೆ, ಮತದ್ವೇಷ, ಮತಾಂಧತೆ, ಮತಾಂತರ, ಮತಾಂತರ ನಿಷೇಧ ಕಾನೂನು, ಜಾತಿ, ಜಾತೀಯತೆ, ಜಾತ್ಯತೀತತೆ, ಆಹಾರ ರಾಜಕಾರಣ, ಭ್ರಷ್ಟಾಚಾರ, ಮೌಢ್ಯತೆ, ಏಕರಾಷ್ಟ್ರಭಾಷೆ, ರೈತ ಮರಣಶಾಸನಗಳು- ಹೀಗೆ ನನ್ನನ್ನು ಕಾಡುತ್ತಿರುವ ತಲ್ಲಣಗಳನ್ನು ಅರ್ಥೈಸಲು ಸಾಧ್ಯವೇ? ಜತೆಗೆ ಇವುಗಳ ಯಾವ ಬಂಧನದ ಗೊಡವೆಯೂ ಇಲ್ಲದೆ ಸ್ವತಂತ್ರವಾಗಿರುವ ಮಗುವನ್ನು ಇವನ್ನೆಲ್ಲ ಹೇಳಿ ನಾನೇ ಬಂಧನಕ್ಕೆ ತಳ್ಳಿಬಿಟ್ಟರೆ ಎನ್ನುವ ಭಯವೂ ಶುರುವಾಯಿತು. ಆದರೂ ವರ್ತಮಾನದ ತಲ್ಲಣಗಳ ವಿರುದ್ಧ ಯುದ್ಧಮಾಡಲು ನಿರಾಯುಧನಾಗಿ ನಿಂತಿದ್ದ ನನ್ನ ಸೇನೆಗೆ ಕುವೆಂಪು ಅವರ ’ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’, ’ವಿಚಾರಕ್ರಾಂತಿಗೆ ಆಹ್ವಾನ’, ’ಓ, ಬನ್ನಿ, ಸೋದರರೆ, ಬೇಗ ಬನ್ನಿ’, ’ಇಂದಿನ ದೇವರು’, ’ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?’, ’ಹೊಸಬಾಳಿನ ಗೀತೆ’, ’ನೇಗಿಲಯೋಗಿ’, ’ಕಲ್ಕಿ’, ’ಪಾಂಚಜನ್ಯ-ಈ ಎಲ್ಲಾ ಸಾಹಿತ್ಯ ಬರಹಗಳು ರಥ, ಆನೆ, ಕುದುರೆ, ಕಾಲಾಳುಗಳಾಗಿ ಬಂದು ಸೇರಿದವು. ಇದೇ ಆವೇಶದಲ್ಲಿ:

’ಈವೊತ್ತು ಎಲ್ಲ ಮತ ಮತ ಅಂತ ಬಾಯಿ ಬಡ್ಕೊಳ್ತಿದ್ದಾರಲ್ಲ’ ಅಂದೆ.
ಪಿಳಿಪಿಳನ ಕಣ್ಣು ಬಿಡುತ್ತಾ ಪುಟ್ಟ, ’ಮತ’ ಅಂದ್ರೆ? ಅಂದ.

ಅವನ ಮಾತುಕೇಳಿ ಬೆರಗಾಯಿತು. ಎಲ್ಲವನ್ನೂ ಪ್ರಶ್ನಿಸುವ ಸರ್ವಸ್ವತಂತ್ರನಾಗಿರುವವನಿಗೆ ಎಲ್ಲವನ್ನೂ ಉತ್ತರಿಸಲು, ಅರ್ಥೈಸಲು ಇದೇ ಸರಿಯಾದ ಕಾಲ! ಎಂದುಕೊಳ್ಳುತ್ತಿರುವಂತೆಯೇ ಮನೋವೇದಿಕೆಯಲ್ಲಿ ಗುರು-ಶಿಷ್ಯರಿಬ್ಬರು ಗೋಚರಿಸಿದಂತಾಯ್ತು. ಗುರುವಿನ ಬಾಯಿಯಿಂದ ಅಸ್ಪಷ್ಟವಾದ ಮಾತುಗಳು ಕೇಳಿಸತೊಡಗಿದವು. “ಮತ ನಮಗೊಂದು ದೊಡ್ಡ ಬಂಧನವಾಗಿದೆ; ನಾಡಿನ ಏಳ್ಗೆಯ ಕುತ್ತಿಗೆಗೆ ಉರುಳಾಗಿದೆ. ಪರಮಶಾಂತಿಯೂ ಆಗಿರುವ ಪರಮೇಶರನನ್ನು ಪಡೆಯಲೆಂದು ಜೀವ ಮಾಡುವ ಪ್ರಯತ್ನವೆ ಮತದ ನಿಜಾವಸ್ಥೆ. ಆದರೆ ಈಗ ನಾವು ಮತ ಎಂದು ಕರೆದುಕೊಳ್ಳುವ ಆಚಾರ ಸಮೂಹ ಬರಿಯ ಸಾಮಾಜಿಕವಾದ ಕಟ್ಟು ಕಟ್ಟಳೆಗಳ ಕಾಟವಾಗಿದೆ. ಒಬ್ಬರನ್ನೊಬ್ಬರು ಮುಟ್ಟದಿರುವುದು, ನೋಡದಿರುವುದು; ಒಬ್ಬರೊಡನೊಬ್ಬರು ಕುಳಿತು ಭೋಜನ ಮಾಡದಿರುವುದು; ನಾಮ ಹಾಕಿಕೊಳ್ಳುವುದು; ವಿಭೂತಿ ಹಚ್ಚಿಕೊಳ್ಳುವುದು, ಮುದ್ರೆ ಹೊಡೆದುಕೊಳ್ಳುವುದು, ಶಿಲುಬೆ ಧರಿಸಿಕೊಳ್ಳ್ಳುವುದು, ಕೆಲವರನ್ನು ಸಾರ್ವಜನಿಕವಾದ ಬಾವಿ ಕೆರೆಗಳಲ್ಲಿ ನೀರು ತೆಗೆದುಕೊಳ್ಳದಂತೆ ಮಾಡುವುದು; ಕೆಲವರನ್ನು ದೇವಸ್ಥಾನದೊಳಕ್ಕೆ ಸೇರಿಸದಿರುವುದು; ಮತ್ತೆ ಕೆಲವರನ್ನು ಗುಡಿಯೊಳಗೆ ಹತ್ತು ಮಾರು ಮಾತ್ರ ಬರಗೊಡಿಸುವುದು; ಹಾಗೆ ಬರಗೊಡಿಸಬೇಕೇ ಬೇಡವೇ ಎಂದು ಚರ್ಚೆ ನಡೆಸುವುದು; – ಇತ್ಯಾದಿ ಕೆಲಸಕ್ಕೂ ಬಾರದ, ಶ್ರೇಯಸ್ಕರವೂ ಅಲ್ಲದ ನೂರಾರು ಆಚಾರ ವ್ಯವಹಾರಗಳ ಸಮಷ್ಟಿಯೇ ನಮ್ಮ ಮತದ ಹುರುಳಾಗಿ ಕುಳಿತಿದೆ. ಮತವನ್ನು ಕುರಿತು ನಮ್ಮಲ್ಲಿ ಯಾವ ಸ್ಪಷ್ಟತೆಯೂ ಇಲ್ಲ. ಎಲ್ಲಾ ಗೋಜಲು ಗೋಜಲಾಗಿದೆ. ಮತದ ಗುರಿ ಸಮಸ್ತ ಸೃಷ್ಟಿಯ ಸಾಮೂಹಿಕ ಪ್ರಜ್ಞೆಯ ವಿಕಾಸ, ಇಡೀ ವಿಶ್ವದ, ಮಾನವಕುಲದ ಆಧ್ಯಾತ್ಮಿಕ ವಿಕಾಸವಾಗಬೇಕಿತ್ತು. ಆದರೆ, ಯಾವುದು ಬಿಡುಗಡೆಗೆ ಸಾಧನವಾಗಬೇಕಿತ್ತೊ ಅದು ಹಿಂದೆಂದಿಗಿಂತಲೂ ಹೆಚ್ಚು ಬಂಧನವಾಗಿ ರೂಪುಗೊಳ್ಳುತ್ತಿದೆ. ವಿವೇಕವನ್ನು ಹೇಳಬೇಕಾದ ಮತಗಳು ದ್ವೇಷ ಅಸೂಯೆಯನ್ನು ಬಿತ್ತುತ್ತಿವೆ. ಧರ್ಮಸಂತತಿಯ ಅಭಿವೃದ್ಧಿಗಾಗಿ ಹಣ, ಅಧಿಕಾರ ಎಲ್ಲವನ್ನೂ ಬಳಸುತ್ತಿರುವವರು ಮಾನವೀಯತೆಯನ್ನು ಮಾತ್ರ ಗಂಟಲು ಕಟ್ಟಿ ರೇಷ್ಮೆವಸ್ತ್ರದಲ್ಲಿ ಸುತ್ತಿ ಯಾವುದೋ ಮೂಲೆಯಲ್ಲಿ ಬಿಸಾಡಿದ್ದಾರೆ. ಹೀಗೆ ಮತಿಹೀನವಾಗಿರುವ ಮತದಿಂದಾಗಿ ಜ್ಞಾನದ ಪ್ರಗತಿಯೂ ಕುಂಠಿತವಾಗಿದೆ. ಆದ್ದರಿಂದ ನಾವೆಲ್ಲರೂ ಮತಿಗೆಟ್ಟ ಮತವನ್ನು ತೊರೆದು ಆತ್ಮೋದ್ಧಾರಕ್ಕಾಗಿ, ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಬೇಕು” ಎನ್ನುತ್ತ ಆ ಗುರುವಾಣಿ ಆವೇಶಭರಿತವಾಗಿಯೇ ನುಡಿಯುತ್ತಿತ್ತು.

ಪುಟ್ಟ ಕೈಹಿಡಿದು ಅಲುಗಾಡಿಸಿದ್ದರಿಂದಾಗಿ ಮನೋವೇದಿಕೆಯ ಗುರು-ಶಿಷ್ಯರು ಮರೆಯಾದರು.

’ಯಾಕೆ?’ ಎಂದು ಪುಟ್ಟ ನಾನು ಮರೆತುಹೋಗಿದ್ದ ಪ್ರಶ್ನೆಯನ್ನು ನೆನಪಿಸಿದ. ಕುವೆಂಪು ಚಿತ್ರದಿಂದ ದೃಷ್ಟಿ ತೆಗೆದು, ’ಕುವೆಂಪು ತಾತನ ದೃಷ್ಟಿಯಲ್ಲಿ ಸೃಷ್ಟಿ ಇದೆಯಪ್ಪಾ’ ಎಂದೆ.

ಮತ್ತೆ ’ಅಂಗಂದ್ರೆ?’ ಎಂದ,

ಮತ್ತೆ ಕುವೆಂಪು ಅವರ ವಿಚಾರಗಳು, ವರ್ತಮಾನದ ತಲ್ಲಣಗಳು ಒಂದಿನಿತೂ ವ್ಯತ್ಯಾಸವಿಲ್ಲದೆ ನನ್ನ ಮುಂದೆ ನಿರೂಪಣೆಗೊಳ್ಳತೊಡಗಿದವು.

ಈಗಿನ ನಮ್ಮ ರಾಜಕೀಯ ರಂಗವಂತೂ ಹೇಗಾಗಿದೆ ಎಂದರೆ, ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ಪಕ್ಷವೂ ಅಧಿಕಾರಕ್ಕಾಗಿ ಬಾಯಿಬಿಡುವಂತಾಗಿದೆ. “ನಿಜವಾದ ಪ್ರಜಾಸತ್ತೆ ಎಂದರೆ ಅನಿರ್ಬಾಧಿತ ಇಚ್ಛಾ ಸ್ವಾತಂತ್ರ್ಯದಿಂದ ಪ್ರಜೆಗಳು ಆಯುವ ಪ್ರಾಮಾಣಿಕ ವ್ಯಕ್ತಿಗಳಿಂದ ಸರ್ವರ ಅಭ್ಯುದಯಕ್ಕಾಗಿ ನಡೆಯುವ ರಾಜ್ಯಭಾರ. ಆ ದೃಷ್ಟಿಯಿಂದ ನೋಡಿದರೆ ಈಗ ನಡೆಯುವ ಚುನಾವಣೆಗಳು ಪ್ರಜಾಸತ್ತಾತ್ಮಕ ಎಂದು ಹೇಳಲಾಗುತ್ತದೆಯೆ?” ಎಂಬ ಗುರುವಾಣಿ ನೆನಪಿಗೆ ಬಂದು, ಈಗ ನಡೆಯುವ ಚುನಾವಣೆಗಳಲ್ಲಂತೂ ಹಣದ ಹೊಳೆಯೆ ಹರಿಯುತ್ತಿರುವುದು, ಇನ್ನೂ ಬದಲಾಗದೆ ಹೋಗಿರುವ ಸಂಗತಿಗೆ ಮರುಗುವಂತಾಯಿತು. ಒಮ್ಮೆ ಅಧಿಕಾರಕ್ಕೆ ಬಂದವರು ತಮ್ಮ ಅಧಿಕಾರಾವಧಿ ಮುಗಿಯುವ ವೇಳೆಗೆ ಅವರ ಆಸ್ತಿ ಹಲವು ಪಟ್ಟು ಹೆಚ್ಚಿಸಿಕೊಳ್ಳುತ್ತಿರುವುದರಿಂದ, ಹೊಸಬರೂ, ಪ್ರಾಮಾಣಿಕರೂ, ಸಂಭಾವಿತರೂ ಈ ರಂಗದ ಹತ್ತಿರಕ್ಕೆ ಸುಳಿಯಲೂ ಸಾಧ್ಯವಾಗುತ್ತಿಲ್ಲ. ಏನೋ ಪ್ರಯತ್ನಪಟ್ಟು ಅವರೂ ಹಣದ ಹೊಳೆಹರಿಸಿ ಬಂದರೆ ಭ್ರಷ್ಟಾಚಾರಕ್ಕೆ ಬಲಿಯಾಗದೇ ಇರಲು ಸಾಧ್ಯವೇ ಇಲ್ಲ. ಆದ್ದರಿಂದಲೇ ಅಧಿಕಾರದ ಪ್ರಹಸನಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರದರ್ಶನ ಕಾಣುತ್ತಿವೆ. ಹೀಗೆ ಆಯ್ಕೆಯಾದವರು ಅಧಿಕಾರದ ಆಸೆಯಿಂದಾಗಿ ನಮ್ಮ ನಾಡು ನುಡಿಯೊಂದಿಗೆ ತಮ್ಮತನವನ್ನೂ ಈ ನೆಲದ ಸಂಸ್ಕೃತಿ, ಅಸ್ಮಿತೆಯನ್ನೂ ಬಲಿಗೊಡುತ್ತಿದ್ದಾರೆ.

ಅಂತೆಯೇ ನಮ್ಮ ಇಂದಿನ ಆಹಾರ ರಾಜಕಾರಣವಂತೂ ಗಂಭೀರ ಸ್ಥಿತಿಯಲ್ಲಿದೆ. ಆರೋಗ್ಯವಂತ ಸಮಾಜದ ಹೊಣೆಹೊತ್ತಿರುವ ಸರ್ಕಾರಗಳು ಕೆಲವು ಮಠಮಾನ್ಯ ಸಂಸ್ಥೆಗಳ ಕೈಗೊಂಬೆಯಾಗಿವೆ. ವಿಜ್ಞಾನಕ್ಕಿಂತಲೂ ಹೆಚ್ಚಾಗಿ ಮಠಮಾನ್ಯಗಳು, ಸಂಸ್ಥೆಗಳು ಒಬ್ಬ ವ್ಯಕ್ತಿ ಎಷ್ಟು ಪ್ರಮಾಣದ ಕ್ಯಾಲರಿ ಇರುವ ಆಹಾರವನ್ನು ಸೇವಿಸಬೇಕೆಂದು ನಿರ್ಧರಿಸುತ್ತಿವೆ. ಯಾವ ಯಾವ ಆಹಾರದಲ್ಲಿ ಎಷ್ಟೆಷ್ಟು ಪ್ರಮಾಣದ ಕ್ಯಾಲರಿಯಿದೆ ಎನ್ನುವ ಪ್ರಮಾಣಪತ್ರವನ್ನು ನೀಡುವುದರ ಜತೆಗೆ ಯಾರ್‍ಯಾರು ಯಾವ್ಯಾವ ಆಹಾರವನ್ನು ಎಷ್ಟೆಷ್ಟು ಪ್ರಮಾಣದಲ್ಲಿ ಯಾವಾಗ ಸೇವಿಸಬೇಕೆಂಬುದನ್ನೂ ನಿರ್ದೇಶಿಸುತ್ತಿವೆ.

ಕುವೆಂಪು ಧನ್ವಂತರಿ ಚಿಕಿತ್ಸೆಯ ಮೂಲಕ ಪ್ರತಿಮಾತ್ಮಕವಾಗಿ ತೋರಿಸಿದ ರೈತನ ಬದುಕು ಇಂದು ನಿಜವಾಗಿದೆ. ನೇಗಿಲ ಮೇಲೆ ನಿಂತಿದ್ದ ಧರ್ಮ ಇಂದು ಕಾಣದಾಗಿದೆ. ಇಡೀ ದೇಶದ ಬೆನ್ನೆಲುಬಾಗಿದ್ದ ನೇಗಿಲಿಡಿದ ರೈತನ ಬೆನ್ನು ಬಾಗಿದೆ; ತಾನೂ ಬದುಕಿ ಎಲ್ಲರನ್ನೂ ಬದುಕಿಸುವ, ಪೋಷಿಸುವ ಹೊಣೆಹೊತ್ತಿದ್ದ ರೈತನ ಬೆನ್ನುಮೂಳೆ ಮುರಿದು ಅವನನ್ನ ಬಲಹೀನನ್ನಾಗಿಸಿ ಅನಾಥನನ್ನಾಗಿಸಿದ್ದಾರೆ. ಇಂದಿನ ಅತಿಯಾದ ಮಾನವನ ದುರಾಸೆಯಿಂದಾಗಿ ಪ್ರಭುತ್ವದೊಂದಿಗೆ ಪ್ರಕೃತಿಯೂ ರೈತನಿಗೆ ವಿರುದ್ಧವಾಗಿ ನಿಂತಿದೆ. ಇಂದಿನ ಸರ್ಕಾರಗಳು ಜಾರಿಗೆ ತರುತ್ತಿರುವ ಶಾಸನಗಳು ರೈತರ ಮರಣಶಾಸನಗಳಾಗುತ್ತಿವೆ. ಅವುಗಳಿಗೆ ಪ್ರತಿರೋಧ ಒಡ್ಡಿದ್ದಕ್ಕಾಗಿ ಅವರ ಪ್ರಾಣಗಳನ್ನೇ ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ. ಕುಚೋದ್ಯವೆಂಬತೆ ಹಲವಾರು ರೈತರ ಶವದ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿಕೊಳ್ಳುವ ಮತ್ತು ಸಾವನ್ನು ಸಂಭ್ರಮಿಸಿ ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ನಮ್ಮ ರಾಜಕೀಯ ವ್ಯವಸ್ಥೆ ಇಳಿದಿವೆ. ಪ್ರಸ್ತುತದಲ್ಲಿ ಯಾರೂ ಅರಿಯದ ನೇಗಿಲಯೋಗಿ ಲೋಕಕ್ಕೆ ಅನ್ನ ನೀಡಲು ತನ್ನ ರಕ್ತವನ್ನು ಸುರಿಸಿ, ಪ್ರಾಣವನ್ನೂ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವ ನೇಗಿಲ ಧರ್ಮ ಲೋಕವನ್ನು ಕಾಯುತ್ತಿತ್ತೋ ಅದರ ಗೋಣುಮುರಿಯುವ ಕಾರ್ಯ ತುಂಬ ನಾಜೂಕಾಗಿಯೇ ಸಾಗಿದೆ.

ನಮ್ಮನ್ನು ಇಂದು ಕೂಡ ಬಾಧಿಸುತ್ತಿರುವ ಹಲವು ಸಮಸ್ಯೆಗಳನ್ನು ಕುರಿತು ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಬಹಳಷ್ಟು ಮಾತನಾಡಿದ್ದಾರೆ, ಅಷ್ಟು ಮಾತ್ರವಲ್ಲ ಅದಕ್ಕೆ ಹಲವು ಬಗೆಗಳ ಪರಿಹಾರವನ್ನೂ ಸೂಚಿಸಿದ್ದಾರೆ. ಅವುಗಳನ್ನು ನಾವು ಸರಿಯಾಗಿ ಗಮನಿಸಿ, ಸಂವಾದ ನಡೆಸಿ, ಉಳಿದ ಮಹಾನ್ ಚಿಂತಕರ ಚಿಂತನೆಗಳೊಂದಿಗೆ ಮಂಥನ ಮಾಡಿ, ಅವುಗಳನ್ನು ಕಾರ್ಯರೂಪುಗೊಳಿಸುವತ್ತ ಪ್ರಾಮಾಣಿಕವಾಗಿ ಹೆಜ್ಜೆ ಇಟ್ಟಲ್ಲಿ ಒಂದು ಮಟ್ಟಿಗೆ ಸುಧಾರಣೆಯಂತೂ ಖಂಡಿತ ಆದೀತು. ಕುವೆಂಪು ಓದು, ಮರು ಓದು, ಯುವಕರ ಜೊತೆಗೆ ಕುವೆಂಪು ಮಾತು-ಕಾವ್ಯ-ಬರಹಗಳ ಸಂವಾದ ಅದಕ್ಕೆ ಅವಕಾಶ ಕೊಟ್ಟೀತು!

ಕವಿವೇದ

ಕವಿವೇದ
ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶಿವರಾಜ್, ಕವಿವೇದ ಹೆಸರಿನಲ್ಲಿ ಬರವಣಿಗೆ ಮಾಡುತ್ತಾರೆ. ಕುವೆಂಪು ಅವರ ಸಾಹಿತ್ಯದ ಬಗ್ಗೆ ಸಂಶೋಧನಾ ಪ್ರಬಂಧದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ


ಇದನ್ನೂ ಓದಿ: ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಸ್ವಪ್ನಗಳ ಪಾತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಕವಿ ವೇದ ಅವರ, ‘ವರ್ತಮಾನದ ತಲ್ಲಣಗಳ ನುಡಿಗನ್ನಡಿ ಕುವೆಂಪು’ ನೋಡಿದೆ. ಮಗು ಮನಸ್ಸಿನ, ಚಿಕಿತ್ಸಕ ದೃಷ್ಟಿಯ ಕುವೆಂಪುರನ್ನು ನೆನೆದು ಬರೆದ ಇಂದಿನ ಮಾನವ ಮನಸ್ಥಿತಿಯ ಅವಲೋಕನ ಚೆನ್ನಾಗಿ ಮೂಡಿಬಂದಿದೆ. ಪ್ರಶ್ನಿಸುವ ಮಗು ಬೌದ್ಧಿಕವಾಗಿ ಬೆಳೆಯುತ್ತದೆ; ಪ್ರಶ್ನೆ ಎದುರಿಸದ ಧರ್ಮ ಚಲನಶೀಲತೆ ಕಳೆದುಕೊಳ್ಳುತ್ತವೆ. ಮತಧರ್ಮಗಳು ನಿಂತ ನೀರಾದಾಗ, ಕೇವಲ ಡಾಗ್ಮಾಗಳಾಗಿ, ಬಲಿಷ್ಠರ ಕೈಯಲ್ಲಿನ ಆಯುಧಗಳಾಗುತ್ತವೆ. ಇವುಗಳ ಪ್ರಭಾವವನ್ನು – ಅದು ಧರ್ಮದಲ್ಲಿ ಇರಲಿ, ರಾಜಕೀಯದಲ್ಲಿ ಇರಲಿ – ‘ಸಾಗರಗಳನ್ನು ದಾಟಿ, ಚಕ್ರವರ್ತಿಗಳ ನೆತ್ತಿಯ ಕುಕ್ಕಿ’ ಅಪ್ರಸ್ತುತ ಮಾಡುವ ಶಕ್ತಿ ಕಾಲಕ್ಕಿದೆ! ಈ ಭೂಮಂಡಲದಲ್ಲಿ ಬಂದುಹೋದ ಎಲ್ಲಾ ಮತಧರ್ಮಗಳ, ರಾಜ ಮಹಾರಾಜರ ಮತ್ತು, ಚಕ್ರವರ್ತಿಗಳಂತೆ ಮೆರೆದ, ಮೆರೆಯುತ್ತಿರುವ ಡಿಕ್ಟೇಟರ್ಗಳ ಹಣೆಬರಹವೂ ಇದೇ ಆಗಿದೆ.
    ಮತಧರ್ಮಗಳ ಅಂತಃಸತ್ವವನ್ನು ಅರಿತವ ಮಾತ್ರ ವಿಶ್ವಮಾನವನಾಗುತ್ತಾನೆ ಮತ್ತು ಅದನ್ನೇ ಹೇಳುತ್ತಾನೆ.
    ಮತಧರ್ಮಗಳ ಇಂದಿನ ಉಡಾಫೆಯನ್ನು ನೋಡಿ, ಕುವೆಂಪುರನ್ನು ಅರಿಯಲು, ಇದು ಸೂಕ್ತ ಕಾಲ.
    ಇಂದು ನಮಗೆ ಕುವೆಂಪು ಆತ್ಮೀಯರಾಗುವುದು ಮತ್ತು ಅವರ ಬಗ್ಗೆ ಗೌರವ ಹೆಚ್ಚುವುದು ಈ ಕಾರಣದಿಂದ.

    ಧನ್ಯವಾದ, ಕವಿ ವೇದ ಮತ್ತು ಪ್ರಕಟಿಸಿದ ಗೌರಿಕಾಂ ಗೆ.

  2. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...