Homeಮುಖಪುಟಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಸ್ವಪ್ನಗಳ ಪಾತ್ರ

ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಸ್ವಪ್ನಗಳ ಪಾತ್ರ

ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಸುಮಾರು ಹದಿನಾರು ಕಡೆಗಳಲ್ಲಿ ಸ್ವಪ್ನಗಳ ಪ್ರಸ್ತಾಪ ಬರುತ್ತವೆ. ಅವುಗಳಲ್ಲಿ ಆರು ಸ್ವಪ್ನಗಳು ಮುಖ್ಯವಾದವು ಮತ್ತು ವಿಸ್ತೃತವಾದವುಗಳು.

- Advertisement -
- Advertisement -

ಸ್ವಪ್ನ ಎನ್ನುವುದು ವ್ಯಕ್ತಿಯೊಬ್ಬ ತನ್ನ ಪ್ರಜ್ಞೆಯಲ್ಲಿ ಪಡೆದ ಅನುಭವ. ಮನುಷ್ಯನ ಬಯಕೆಗಳು, ಶಂಕೆಗಳು, ಭಯಗಳು, ನೆನಪುಗಳು, ಅನುಭವಗಳು ಅವನ ಜಾಗೃದಾವಸ್ಥೆಯಲ್ಲಿ ಪ್ರಕಟಗೊಳ್ಳಲು ಅವಕಾಶವಿಲ್ಲದಿದ್ದಾಗ ಅದಕ್ಕೆ ವ್ಯತಿರಿಕ್ತವಾದ ಸುಪ್ತಾವಸ್ಥೆಯಲ್ಲಿ ಪ್ರಕಟಗೊಳ್ಳುತ್ತವೆ. ಅಂದರೆ ನಿದ್ರೆಯಲ್ಲಿ ಮನಸ್ಸಿನ ಎರಡನೇ ಪದರವಾದ ಸುಪ್ತಚೇತನದ ಭಾವನೆಗಳು ಕನಸುಗಳ ಮೂಲಕ ಪ್ರಕಟಗೊಳ್ಳುತ್ತವೆ. ಆದರೆ ಅವು ನೇರವಾಗಿ ಪ್ರಕಟಗೊಳ್ಳುವುದಿಲ್ಲ, ಬದಲಿಗೆ ಕೆಲವು ಸಂಕೇತಗಳ ಮೂಲಕ ಪ್ರಕಟಗೊಳ್ಳುತ್ತವೆ.

ಇಂತಹ ಕನಸುಗಳು ಅರ್ಥಪೂರ್ಣವಾಗಿರಬಹುದು, ಅರ್ಥಹೀನವಾಗಿರಬಹುದು; ವಾಸ್ತವವನ್ನ ಹೋಲಬಹುದು, ಹೋಲದೆ ಇರಬಹುದು. ಆದರೆ, ಮನುಷ್ಯನ ಒಳಪ್ರಜ್ಞೆಯ ತಲಾತಲದಲ್ಲಿ ಹುದುಗಿದ ಆಸೆ-ಭಯ-ಆಶಂಕೆ ಇತ್ಯಾದಿಗಳಿಗೆ ನಿದ್ರಾ ಸಮುದ್ರ ಶಿಲ್ಪಿ ಕಡೆದೆಬ್ಬಿಸಿದ ಆಕಾರಗಳು ಹೇಗಿರುತ್ತವೆ ಎಂಬುದನ್ನು ಸೂತ್ರೀಕರಿಸಿ ಹೇಳಲು ಸಾಧ್ಯವಿಲ್ಲ. ಸ್ವಪ್ನ ಸ್ಥಿತಿಯಲ್ಲಿ ಮನುಷ್ಯ ಪಡೆಯುವ ಅನುಭವ, ಜಾಗೃದಾವಸ್ಥೆಗೆ ಮಿಥ್ಯೆಯಾಗಿದ್ದರೂ ಕೂಡ ಅದನ್ನು ಸತ್ಯವಲ್ಲವೆಂದು ಕಡೆಗಣಿಸುವಂತಿಲ್ಲ. ಒಂದೆಡೆ ಕುವೆಂಪು ಹೇಳುವಂತೆ ಸ್ವಪ್ನವು ಜಾಗೃದಾವಸ್ಥೆಯ ಅನುಭವಗಳಿಗೆ ಜಾಗ್ರಜಗತ್ತಿನ ಆಕಾರಗಳನ್ನೇ ಕಲ್ಪಿಸಿದರೆ ಆಗ ಆ ಸೃಷ್ಟಿ ಪ್ರತಿಕೃತಿಯಾಗುತ್ತದೆ. ಹಾಗಲ್ಲದೆ ಜಾಗ್ರದವಸ್ಥೆಯ ಅನುಭವಕ್ಕೆ ಸಾಂಕೇತಿಕ ಪ್ರತೀಕವನ್ನು ನಿರ್ಮಿಸಿದರೆ ಆಗ ಆ ಸೃಷ್ಟಿ ಪ್ರತಿಮೆಯಾಗುತ್ತದೆ. ಆ ಪ್ರತಿಮೆಯಂತಹ ಆಕೃತಿಯನ್ನು ನಾವು ಜಾಗೃದವಸ್ಥೆಯ ಜಗತ್ತಿನಲ್ಲಿ ಎಲ್ಲಿಯೂ ಎಂದೂ ಕಾಣದಿದ್ದರೂ ಅದನ್ನು ಸುಳ್ಳು ಎನ್ನಲಾಗುವುದಿಲ್ಲ. ಯಾಕೆಂದರೆ ಕನಸಿಗೆ ಕಾರಣವಾದ ಅನುಭವ ಮಾತ್ರ ಕನಸಿಗೂ ಎಚ್ಚರಕ್ಕೂ ಸತ್ಯ. ಒಂದು ನೆಲೆಯಲ್ಲಿ ಸಾಹಿತ್ಯ ನಿರ್ಮಿತಿಯಲ್ಲಿನ, ಸಂಕೇತ, ಪ್ರತೀಕ, ಪ್ರತಿಮೆ ಇತ್ಯಾದಿಗಳಿಗೂ ಇರುವಂತ ಅರ್ಥ, ಸ್ವಪ್ನಗಳ ಸಂಕೇತ ಪ್ರತೀಕಾದಿಗಳಿಗೂ ಉಂಟು. ಈ ಅರ್ಥದಲ್ಲಿ ಸ್ವಪ್ನಸೃಷ್ಟಿಗೂ, ಕಲಾಸೃಷ್ಟಿಗೂ ಸಂಬಂಧವಿದೆ. ಯಾಕೆಂದರೆ ಅವೆರಡೂ ಮೂಲತಃ ಮನಸ್ಸಿನ ಸೃಷ್ಟಿಗಳು. ಆದರೆ, ಇವೆರಡಕ್ಕೂ ಮುಖ್ಯವಾದ ವ್ಯತ್ಯಾಸವಿರುವುದು, ಸ್ವಪ್ನಗಳು ಜಾಗೃದವಸ್ಥೆಗೆ ಮಿಥ್ಯೆಯಾಗಿಬಿಡುತ್ತವೆ. ಕಲಾಕೃತಿಗಳು ಎಷ್ಟೋ ವೇಳೆ ಕನಸಿನಂತೆ ತೋರಿದರೂ, ವಾಸ್ತವದ ನೆಲೆಯಲ್ಲಿ ಮಿಥ್ಯೆಯಾಗದೆ, ಬೇರೊಂದು ಅರ್ಥವಂತಿಕೆಯನ್ನು ಪಡೆದುಕೊಳ್ಳತ್ತವೆ.

ಸಾಹಿತ್ಯವನ್ನು ಡಿ.ಆರ್. ನಾಗರಾಜ್ ನಿಯಂತ್ರಿತ ಕನಸು ಎಂದು ಉಲ್ಲೇಖಿಸುತ್ತಾರೆ. ಈ ನಿಟ್ಟಿನಲ್ಲಿ ಕವಿಯನ್ನು ಕನಸುಗಾರ ಎಂದು ಕರೆಯುವ ವಾಡಿಕೆ ಇದೆ. ಕವಿಯು ತಾನು ಕಂಡ ಕನಸು ಮತ್ತು ಕಲ್ಪನೆಗಳನ್ನು ವಾಸ್ತವದೊಂದಿಗೆ ಸಮೀಕರಿಸಿ, ಅವು ಸಾಹಿತ್ಯದಲ್ಲಿ ಜೀವತಳೆವಂತೆ ಮಾಡುತ್ತಾನೆ. (ಕವಿ ಕಂಡ ಕನಸು ನಿದ್ರೆ ಮಾಡುವಾಗ ಕಂಡದ್ದಲ್ಲ; ಎಚ್ಚರಿದ್ದಾಗಲೇ ಕಂಡದ್ದು!) ಕವಿಯಾದವನು ಸಾಹಿತ್ಯದೊಳಗೆ, ವಾಸ್ತವದಲ್ಲಿ ಘಟಿಸದ ಘಟನೆಗಳನ್ನು, ಅಪೌರುಷೇಯವಾಗಿ ಘಟಿಸುವ ಘಟನೆಗಳನ್ನು ಹಾಗೂ ತಾನು ಮಂಡಿಸಿದ ವಿಚಾರಗಳು ವಾಸ್ತವದಲ್ಲಿ ಅರಗಿಸಿಕೊಳ್ಳಲಾಗದು ಎನ್ನುವ ಘಟನೆಗಳನ್ನು ಕನಸಿನ ಮೂಲಕ ವ್ಯಕ್ತಪಡಿಸುತ್ತಾನೆ. ಜತೆಗೆ ಕನಸನ್ನು ಒಂದು ತಂತ್ರವಾಗಿ ಬಳಸಿಕೊಳ್ಳುತ್ತಾನೆ. ಆದರೆ ಕನಸುಗಳನ್ನೇ ಕವಿಗಳು ಸಾಹಿತ್ಯದಲ್ಲಿ ಒಂದು ವಸ್ತುವನ್ನಾಗಿ ತೆಗೆದುಕೊಂಡು, ಅದನ್ನೊಂದು ಕಲಾತಂತ್ರವನ್ನಾಗಿ ಮಾಡಿಕೊಂಡಿರುವರೆಂಬ ಸಂಗತಿ ಗಮನಾರ್ಹವಾಗಿದೆ. ಕವಿಗೆ ಬದುಕಿನ ಯಾವೆಲ್ಲ ಅನುಭವಗಳು ವಸ್ತುವಾಗುವಂತೆ, ಸ್ವಪ್ನಗಳೂ ಆತನ ಕಾವ್ಯದ ಸಾಮಗ್ರಿಯಾಗಿ ಬಳಕೆಯಾಗಿದೆ. ಕವಿ ನಿರ್ಮಿತಿಯಲ್ಲಿ ಬಳಕೆಯಾಗಿರುವ ಕನಸುಗಳ ಸಾರಸ್ಯವನ್ನು ಸಂಕ್ಷಿಪ್ತವಾಗಿ ಹೀಗೆ ನೋಡಬಹುದು: ಕವಿತೆ, ಕಾದಂಬರಿ, ಪುರಾಣ, ಕಾವ್ಯ ಹಾಗೂ ಮಹಾಕಾವ್ಯಗಳಲ್ಲೆಲ್ಲಾ, ಕನಸುಗಳು ಮುಖ್ಯವಾಗಿ ಅಂತರಂಗದ ಬಯಕೆಗಳಿಗೆ ಕನ್ನಡಿಯಾಗಿ ಅಥವಾ ಮುಂದಾಗುವುದನ್ನು ಸೂಚಿಸುವ ಭವಿಷ್ಯವಾಣಿಯ ಸಂಕೇತಗಳಾಗಿ ಬಳಕೆಯಾಗಿರುವುದು ಸಾಮಾನ್ಯ ಸಂಗತಿಯಾಗಿದೆ.

ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಸುಮಾರು ಹದಿನಾರು ಕಡೆಗಳಲ್ಲಿ ಸ್ವಪ್ನಗಳ ಪ್ರಸ್ತಾಪ ಬರುತ್ತವೆ. ಅವುಗಳಲ್ಲಿ ಆರು ಸ್ವಪ್ನಗಳು ಮುಖ್ಯವಾದವು ಮತ್ತು ವಿಸ್ತೃತವಾದವುಗಳು. ಮಮತೆಯ ಸುಳಿ ಮಂಥರೆ ಸಂಚಿಕೆಯಲ್ಲಿ ಮಂಥರೆಗೆ ಬೀಳುವ ಕನಸು ಇಡೀ ಕಥೆಗೆ ಮಹತ್ತರ ತಿರುವನ್ನ ತಂದುಕೊಡುತ್ತದೆ. ಶ್ರೀರಾಮನಿಗೆ ಪಟ್ಟಾಭಿಷೇಕವನ್ನು ಮಾಡಬೇಕೆಂದು, ದಶರಥನು ನಿರ್ಣಯವನ್ನು ಕೈಗೊಂಡ ದಿನ ಕೈಕೆ, ಭರತನಿಗಾಗಿಯೇ ಬದುಕಿದ್ದ ಮಮತೆಯ ಸುಳಿ ಮಂಥರೆಗೆ ಆ ಇರುಳು ಒಂದು ಕನಸು ಬೀಳುತ್ತದೆ, ಅದು ಹೀಗಿದೆ,

ಮುದುಕಿಯಾದಾ ಕೈಕೆ ಭರತನಂ ಕೈವಿಡಿದು

ಮರುಧರೆಯನಲೆಯುತಿರ್ದಳ್ ವಿಧವೆಯೋಲ್, ಕುಬ್ಜೆ

………………………………………………………….

ಮಂಥರೆಗೆ. ಕೇಡದೇನಂ ಸ್ವಪ್ನಮಾಡಿದುದೊ

ತನಗೆನುತೆ ಚಿಂತಿಸುತ್ತಿರೆ, ಕಿವಿಗೆವಂದುದಯ್

ನಲಿವ ಮಂಗಳವಾದ್ಯ ಸಂಭ್ರಮಂ.

ಈ ಕನಸಿನ ಸಾಂಕೇತಿಕತೆ, ರಾಮನ ಪಟ್ಟಾಭಿಷೇಕದಿಂದ, ಕೈಕೆ ಭರತರಿಗೆ ಎಂತಹ ದುಃಸ್ಥಿತಿ ಒದಗುವುದೆಂದು, ಮಂಥರೆಯ ಮನಸ್ಸು ಕಲ್ಪಸಿಕೊಂಡಿತೋ ಅದಕ್ಕೆ ತಕ್ಕುದಾಗಿದೆ. ಬಹುಶಃ ಮಂಥರೆಯು ಈ ಸಮಯದಲ್ಲಿ ತನ್ನ ವರ್ತನೆಯ ಮೂಲಕ ಕೈಕೆಯನ್ನು ಬದಲಾಯಿಸಿ; ದಶರಥ ಎಂದೋ ಕೊಟ್ಟ ವರಗಳನ್ನು ಜ್ಞಾಪಿಸದಿದ್ದರೆ; ಕೈಕೆ ವರಗಳನ್ನೇ ಕೇಳುತ್ತಿರಲ್ಲಿಲ್ಲ. ರಾಮಾಯಣದ ಕಥೆಯೆ ಬೇರೆಯಾಗಿರರುತ್ತಿತ್ತು. ಅಯೋಧ್ಯೆಯಲ್ಲಿ ದಶರಥನೂ ಸಾಯುತ್ತಿರಲ್ಲಿಲ್ಲ; ಲಂಕೆಯಲ್ಲಿ ರಾವಣ ಕುಂಭಕರ್ಣಾದಿಗಳು ಸಾಯುವುದಿರಲಿ; ಕಲ್ಪನೆಗೂ ಬರುತ್ತಿರಲ್ಲಿಲ್ಲವೇನೊ?

ಕೈಕೆ, ಮಂಥರೆಯ ಪ್ರೇರಣೆಯಿಂದ ವರಗಳನ್ನೇನೊ ಪಡೆಯುತ್ತಾಳೆ, ಆದರೆ ತನ್ನ ಸಹಿತ ಎಲ್ಲರನ್ನೂ ದುಃಖದ ಮಡುವಿಗೆ ತಳ್ಳುತ್ತಾಳೆ. ನಿಜವಾಗಿ ಮಂಥರೆಯ ಅಂತರಂಗದೊಳಗೆ ಹುದುಗಿದ್ದ ತಾಯಿ ಮಮತೆ ಹೊರಹೊಮ್ಮುವುದೇ ಇಲ್ಲಿ. ಕುವೆಂಪು ಅವರು ಹೇಳುವಂತೆ: ಮಂಥರೆ ಸೀತೆ ರಾಮ ರಾವಣರೆಲ್ಲರುಂ ಸೂತ್ರಗೊಂಬೆಗಳಲ್ತೆ ಆ ವಿಧಿಯ ಹಸ್ತದಲಿ? ಎನ್ನುವ ಮಾತು ಸತ್ಯ. ರಾವಣನ ಆತ್ಮೋದ್ಧಾರ ಮಾಡಿಸುವ, ಅವನನ್ನು ದುರಂತ ನಾಯಕನನ್ನಾಗಿಸಿ ನಮ್ಮ ಮನದಲ್ಲಿ ಸದಾ ಕರುಣೆಯ ನೆಲೆಯಲ್ಲಿ ನಿಲ್ಲುವಂತೆ ಮಾಡುವ ಹಾಗೂ ರಾಮನ ಮಹತ್ವವನ್ನು ಜಗಕ್ಕೆ ಸಾರುವ; ಮಹತ್ಕಾರ್ಯದ ಮೂಲಬೀಜವೇ ಮಮತೆಯ ಸುಳಿ ಮಂಥರೆ.

ಇದನ್ನೂ ಓದಿ: ಸಾಂಸ್ಕೃತಿಕ ಕ್ರಾಂತಿಯ ರೂವಾರಿ ಕುವೆಂಪು ಹೊರಿಸಿದ ಹೊರೆಗಳು

 

ಮಂಥರೆಯಿಂದಾದ ನಾಂದಿಗೆ; ರಾವಣ ಹಿಡಿಯುವ ಹಾದಿ, ಸೀತಾಪಹರಣ. ಸಂಸ್ಕೃತಿ ಲಂಕಾ ಸಂಚಿಕೆಯಲ್ಲಿ ಚಂದ್ರನಖಿಯ ಕಾವಲಿನಲ್ಲಿರುವ ಜಾನಕಿಗೆ ಬೀಳುವ ಕನಸು; ಅವಳ ಮನದಲ್ಲಿ ಹುಟ್ಟಿದ ತಪ್ಪು ಕಲ್ಪನೆಯು ಅವಳಿಗೆ ಅರಿವು ಮಾಡಿಸುತ್ತದೆ. ಚಂದ್ರನಖಿಯ ಕಾವಲಿನಲ್ಲಿದ್ದ ಸೀತೆಯನ್ನು ಲಂಕಾ ಸುಂದರಿಯರು ಸುತ್ತುವರುದು ನರ್ತಿಸಿ, ದೇವೇಂದ್ರ ವೈಭವವನ್ನು ಸೃಷ್ಟಿಸಿದರು. ಆಗ ಸೀತೆಗೆ ಸುಖದ ಕನಸೊಂದು ಬಿತ್ತು: ಅವರು ವನವಾಸವನ್ನು ಮುಗಿಸಿ ಅಯೋಧ್ಯೆಗೆ ಹಿಂದಿರುಗಿದ್ದಾರೆ. ಜನ ಸಂತೋಷದಿಂದ ನಲಿದಿದೆ, ಕುಣಿದಿದೆ. ಎಲ್ಲೆಲ್ಲೂ ಗಾನದಿಂಪು, ಪರಿಮಳದ ಕಂಪು ತುಂಬಿದೆ. ಕೈಕೆ ಊರ್‍ಮಿಳೆ ಭರತ ಕೌಸಲ್ಯೆಯರ ಆನಂದ ಹೇಳತೀರದು. ಆದರೆ ರಾಮನೆಲ್ಲಿ? ಸೀತೆ ಬೆಚ್ಚಿ ಬೆದರಿ ಅಯ್ಯಯ್ಯೋ ಸೌಮಿತ್ರಿ, ರಾಮನನ್ನು ಕಾಡಿನಲ್ಲಿ ಬಿಟ್ಟು ಬಂದೆವೊ! ಎಂದು ಏಳಲೆಳಸಿ, ಏಳಲಾರದೆ ಕೆಳಗುರುಳಿದಳು. ನಿದ್ರೆ ಸರಿಯಿತು.

ಈ ಕನಸು ಅಂದು ಸೀತೆಯಿಂದಾದ ಅಚಾತುರ್ಯದ ಪಶ್ಚಾತಾಪದಂತಿದೆ. ಪಂಚವಟಿಯಲ್ಲಿ ಸೀತೆ ಮಾಯಾಮೃಗವನ್ನು ನೋಡಿ, ಅದಕ್ಕೆ ಮರುಳಾಗಿ ಅದು ಬೇಕೆಂದು ರಾಮನನ್ನು ಕೇಳುತ್ತಾಳೆ. ರಾಮ-ಲಕ್ಷ್ಮಣರು ಅದು ಮಾಯೆ ಎಂದು ಎಷ್ಟು ಹೇಳಿದರೂ ಕೇಳುವುದಿಲ್ಲ. ಶ್ರೀರಾಮ ಮಾಯಾಮೃಗದ ಬೆನ್ನಟ್ಟಿ ಹೋಗಿ ಹೊಡೆದಾಗ, ಮಾರೀಚ ರಾಮನ ಧ್ವನಿಯಲ್ಲಿ ಚೀರುತ್ತಾನೆ. ಅದನ್ನು ಕೇಳಿದ ಸೀತೆ, ರಾಮ ಅಪಾಯದಲ್ಲಿದ್ದಾನೆಂದು ಭಾವಿಸಿ, ಲಕ್ಷ್ಮಣನಿಗೆ ಸಹಾಯಕ್ಕೆ ಹೋಗುವಂತೆ ಹೇಳುತ್ತಾಳೆ. ಆದರೆ ಅದು ರಾಕ್ಷಸನ ಮಾಯೆಯೆಂದು ಅರಿತಿದ್ದ ಲಕ್ಷ್ಮಣ, ಸೀತೆಯ ಮಾತನ್ನು ನಿರಾಕರಿಸುತ್ತಾನೆ; ಜತೆಗೆ ಅವಳನ್ನು ಸಮಾಧಾನಪಡಿಸಲು ಯತ್ನಿಸುತ್ತಾನೆ. ಆದರೆ ಸೀತೆ, ಅವನ ಮೇಲೆ ಇಲ್ಲದ ಆಪಾದನೆ ಮಾಡುತ್ತಾಳೆ. ವಿಧಿಯಿಲ್ಲದೆ ಲಕ್ಷ್ಮಣ ತೆರಳುತ್ತಾನೆ. ಆದರೆ ಅದರ ಫಲವನ್ನು ತನ್ನೊಂದಿಗೆ ಎಲ್ಲರು ಅನುಭವಿಸುವಂತೆ ಮಾಡುತ್ತಾಳೆ. ಅಂದು ಅವಳಲ್ಲಿ ಮೂಡಿದ ತಪ್ಪು ಕಲ್ಪನೆಯೆ ಈಗ ಕನಸಿನ ರೂಪದಲ್ಲಿ ಅರಿವಾಗಿದೆ ಎನಿಸುತ್ತದೆ. ಈ ಸ್ವಪ್ನವೆ ಸೀತೆಯನ್ನ ನಿತ್ಯತಪಸ್ವಿನಿಯನ್ನಾಗಿ ಮಾಡುತ್ತದೆ.

ಸೀತೆ ಅಶೋಕ ವನದಲ್ಲಿರುವಾಗ ಅವಳ ಕಾವಲು ಕಾಯುತ್ತಿದ್ದ ತ್ರಿಜಟೆಗೆ, ಒಂದು ದಿನ ಸೀತೆಗೆ ಶುಭವಾಗುವಂತೆ ಸ್ವಪ್ನ ಬೀಳುತ್ತದೆ. ತ್ರಿಜಟೆ ಆ ಕನಸನ್ನ ಸೀತೆಗೆ ಹೇಳುತ್ತಾಳೆ: ಪುಣ್ಯೆ, ಆ ಶುಭ ಶಕುನವನ್ನು ನೆನೆದರೆ ರೋಮಾಂಚನವಾಗುತ್ತದೆ. ಒಂದು ಸರೋವರ. ಅದರಲ್ಲಿ ಸಹಸ್ರದಲಗಳ ತಾವರೆಗಳೆರಡು. ಒಂದು ನೀಲವರ್ಣ; ಮತ್ತೊಂದು ಕನಕವರ್ಣ. ತಂಗಾಳಿ ತೀಡುತ್ತಿತ್ತು. ತುಂಬಿ ಝೇಂಕರಿಸುತ್ತಿತ್ತು. ಇದ್ದಕ್ಕಿದ್ದಂತೆ ನೀರನ್ನು ಕದಡುತ್ತ ಮೊಸಳೆಯೊಂದು ಮೇಲೆದ್ದಿತು. ಮೆಲ್ಲಮೆಲ್ಲನೆ ಕನಕ ತಾವರೆಯ ಹತ್ತಿರ ಸರಿದು ಮೂಗರಳಿಸಿ ಅದರ ಕಂಪನ್ನು ಮೂಸತೊಡಗಿತು. ಹೂವು ನಡುಗಿತು. ಒಡನೆಯೇ ಹೂಕುಡಿಯುತ್ತಿದ್ದ ದುಂಬಿಗಳು ಎದ್ದು ಝೇಂಕರಗೈಯುತ್ತ ಅದರ ಮೇಲೆ ಬಿದ್ದು ಕೊಂಡಿಯಿಂದ ಚುಚ್ಚಿ ಅದನ್ನು ಕೊಂದವು. ಅದರ ಶವ ನನ್ನೆಡೆ ತೇಲಿಬರಲು ಅದರಲ್ಲಿ ರಾವಣನ ಕಳೇಬರವನ್ನು ಗುರುತಿಸಿ ಬೆಚ್ಚಿದೆನು. ನೈದಿಲೆಯನ್ನಪ್ಪಿಕೊಂಡು ತಾವರೆಯಲ್ಲಿದ್ದ ನಿನ್ನನ್ನು ಕಂಡು ಅಚ್ಚರಿಗೊಂಡೆನು. ಕಣ್ದೆರೆದು ನೋಡಿದೆ. ನೀನು ಪದ್ಮಾಸನಳಾಗಿ ಧ್ಯಾನನಿರತಳಾಗಿದ್ದೆ.

ಇಲ್ಲಿ ತ್ರಿಜಟೆ ಕಂಡ ಕನಸು ಮನಃಪರಿವರ್ತನೆಯೂ ಹೌದು; ರಾವಣನ ಭವಿಷ್ಯ ಸಂಕೇತವೂ ಹೌದು. ಈ ಎರಡೂ ವಿಷಯಗಳನ್ನು ಕುರಿತು ವಿವೇಚಿಸುದಾದರೆ: ಸ್ವಭಾವತಃ ರಾಕ್ಷಸಿಯಾದ ತ್ರಿಜಟೆಯ ಮನಸ್ಸು ಈ ಕನಸಿನಿಂದಾಗಿ ಪರಿವರ್ತನೆಯಾಗಿದೆ. ಇಲ್ಲಿ ತ್ರಿಜಟೆ ರಾವಣನಿಂದ ನೊಂದ ಸೀತೆಯನ್ನು ಸಮಾಧಾನಿಸುತ್ತಾಳೆ ಹಾಗೂ ಜಾನಕಿಗೆ ಒಳಿತಾಗುವುದೆಂದು ನಂಬಿದ್ದಾಳೆ. ಹಾಗಂತ ಹೇಳಿ ಇವಳಿಗೆ ಸ್ವಾಮಿನಿಷ್ಠೆ ಇಲ್ಲ ಎಂದು ಹೇಳುವಂತೆಯೂ ಇಲ್ಲ; ಏಕೆಂದರೆ ರಾವಣನ ಸ್ಥಿತಿಗೆ ಇವಳೂ ಮರುಗುತ್ತಾಳೆ. ಮತ್ತು ಅವನ ಮನಃಪರಿವರ್ತನೆಗೆ ಪ್ರಾರ್ಥನೆಗೈಯುತ್ತಾಳೆ. ಇಲ್ಲಿಯ ತನಕ ತ್ರಿಜಟೆಯೊಂದಿಗೆ ಬೆರೆಯದಿದ್ದ ಸೀತೆ, ಈ ಕನಸ್ಸನ್ನು ಕೇಳಿದ ಮೇಲೆ ಅವಳೊಂದಿಗೆ ಮುಕ್ತವಾಗಿ ಬೆರೆಯುತ್ತಾಳೆ. ಅಂತೆಯೇ ಇಬ್ಬರೂ ತಾಯಿ-ಮಗಳಂತಾಗುತ್ತಾರೆ. ರಾವಣನ ಮನಃಪರಿವರ್ತನೆಗೆ ಸೀತೆಯ ಪ್ರಾರ್ಥನೆಯೂ ಇದೆ; ಹಾಗೆಯೆ ಅವನ ದುಃಸ್ಥಿತಿಗೆ ಮರುಕವೂ ಇದೆ. ಇಲ್ಲಿ ರಾವಣನ ಅಂತ್ಯದ ಮನ್ಸೂಚನೆಯೂ ಇದೆ. ಈ ಸ್ವಪ್ನ ಸೀತೆಯಲ್ಲಿ, ರಾಮನನ್ನು ಸೇರುವ ಸಂತೋಷವನ್ನು; ಮಂಡೋದರಿಯ ಭವಿಷ್ಯದ ಸ್ಥಿತಿಯನ್ನು ನೆನೆದು ದುಃಖವನ್ನು ಹೆಚ್ಚಿಸುತ್ತದೆ.

ಅದ್ವಿತೀಯಮಾ ದ್ವಿತೀಯಂ ದಿನಂ ಸಂಚಿಕೆಯಲ್ಲಿ ರಾವಣನಿಗೆ ಮತ್ತು ಅನಲೆಗೆ ಬೀಳುವ ಕನಸುಗಳು ವಿಶಿಷ್ಟವಾದವು. ರಾವಣ ಕಂಡ ಕನಸು, ಅವನ ಕಾಮದ ವಿರುದ್ಧ ಜಯದ ಮೆಟ್ಟಿಲನ್ನೇರಹೊರಟರೆ, ಅನಲೆ ಕಂಡ ಸ್ವಪ್ನ ಮನುಷ್ಯ ಜೀವನದ ಸುಖ-ದುಃಖದ ಚಲನೆಯನ್ನು, ರಾವಣನ ಆತ್ಮೋದ್ಧಾರದ ಮುನ್ನುಡಿಯನ್ನು ಸೂಚಿಸುತ್ತದೆ.

ಲಂಕೆಯಲ್ಲಿ ಯುದ್ಧದ ಎರಡನೇ ದಿನ; ರಾವಣನ ಮನದಲ್ಲಿ ಕಾಮದ ವಿರುದ್ಧ ಆಧ್ಯಾತ್ಮದ ಯುದ್ಧವೂ ಪ್ರಾರಂಭವಾಗಿದೆ. ಕ್ರಮಕ್ರಮವಾಗಿ ರಾವಣನಿಗೆ ಸೀತೆಯಲ್ಲಿದ್ದ ಕಾಮತ್ವಗುಣ ಕಡಿಮೆಯಾಗಿ, ಮಾತೃತ್ವಗುಣ ಬೆಳೆಯಲು ಪ್ರಾರಂಭವಾಗಿದೆ. ರಾವಣನಿಗೆ ಮುಂದೊದಗಬಹುದಾದ ಮಹದ್ ಘಟನೆಯೊಂದರ ಮೂಲ ಇಲ್ಲಿ ಮೊಳಕೆಯೊಡೆಯುತ್ತದೆ. ಅದು ರಾವಣನ ಕನಸಿನಲ್ಲಿ ಹೀಗೆ ವ್ಯಕ್ತವಾಗುತ್ತದೆ: ರಾಣಿ, ನೆನ್ನೆಯ ರಾತ್ರಿ ನನಗೆ ಒಂದು ಕನಸಾಯಿತು. ನಿರ್ಭಾಗ್ಯಳಾದ ವೇದವತಿಯು ಚಿತೆಗೇರಿದ ಆ ಭೀಕರ ದೃಶ್ಯವನ್ನು ಪುನಃ ನೋಡಿದೆನು. ಆ ಸುಂದರಿಯ ಸುಂದರ ಶರೀರವು ಕಣ್ಣ ಮುಂದೆ ಉರಿದು ಬಿಳಿಯ ಬೂದಿಯ ರಾಶಿಯಾಯಿತು. ನಾನು ಅದನ್ನು ನೋಡುತ್ತಿರಲು ಒಂದು ತಿಳಿಗಾಳಿಯು ಆ ಬೂದಿಯನ್ನು ಮೆಲ್ಲಗೆ ಹಾರಿಸಿತು. ಕೆದರಿದ ಆ ಮೃತ ಭಸ್ಮರಾಶಿಯಲ್ಲಿ ಕವಿರಚಿತ ರಮಣೀಯವಾದ ಒಂದು ಅಮೃತ ಮೂರ್ತಿಯು ನಿಧಾನವಾಗಿ ಗೋಚರಿಸಿತು. ಅದರಲ್ಲಿ ಈ ಮಹಾತಪಸ್ವಿನಿಯಾದ ಸೀತೆಯನ್ನು ಗುರುತಿಸಿದೆನು. ಕಾರಣವು ತಿಳಿಯಿತು. ನಡುಗಿ ಕಣ್ಣು ತೆರೆದು ಏಳಲು ಬೆವರಿದ್ದ ಮೈಯನ್ನು ನೋಡಿ ಸ್ವಪ್ನದ ಚೇಷ್ಟೆಗೆ ನನ್ನಲ್ಲಿ ನಾನೇ ನಕ್ಕೆನು. ಸುಳ್ಳು ಕನಸಿನ ಅನುಮಾನವನ್ನು ನಿವಾರಿಸಿಕೊಳ್ಳಲು ಹೋಗಿ ಆ ಜನಕಜಾತೆ ಸೀತೆಯನ್ನು ನೋಡಿದೆನು. ಆ ಕೃಶಳಾದವಳನ್ನು ನೋಡಿ ನನ್ನ ಅನುಮಾನವು ಕಳೆಯಿತು. ಇವಳೆಲ್ಲಿ? ಅವಳೆಲ್ಲಿ? ಬುದ್ಧಿಯು ನಿದ್ರಿಸುವಾಗ ಮೃದುವಾದ ಮೆದುಳು ಈ ವಿಕಾರಗಳನ್ನು ಬಡಿದೆಬ್ಬಿಸುತ್ತದೆ. ಮೊದಮೊದಲು ರಾವಣ ತನ್ನಲ್ಲಿ ಉಂಟಾಗುತ್ತಿದ್ದ ಬದಲಾವಣೆಯನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾನೆ. ಮಂಡೋದರಿ ರಾವಣನ ಒಳಮನಸಿನಂತೆ ಬುದ್ಧಿಯನ್ನು ಹೇಳುತ್ತಾಳೆ, ರಾವಣ ಅವಳ ಮಾತನ್ನು ಕೇಳುವುದಿಲ್ಲ; ಆದರೆ ಈ ಸ್ವಪ್ನ ಅವನ ಬದಲಾವಣೆಯ ಮುನ್ನುಡಿಯಾಗುತ್ತದೆ.

ವೇದವತಿ (ವೇದವತಿಯ ಮರುಜನ್ಮವೇ ಸೀತೆ ಎಂದು ಪುರಾಣ ಕಾವ್ಯಗಳು ಚಿತ್ರಿಸಿವೆ.) ಚಿತೆಗೇರಿದಂತೆ, ರಾವಣನಿಗೆ ಸೀತೆಯಲ್ಲಿದ್ದ ಕಾಮತ್ವವೂ ಚಿತೆಗೇರುತ್ತದೆ. ಶ್ವೇತ ವರ್ಣದ ಬೂದಿ ರಾಶಿಯಿಂದೆದ್ದ ಸೀತೆ ರಾವಣನಿಗೆ ಮಾತೆಯಾಗಿ ಕಾಣುತ್ತಾಳೆ. ರಾವಣನ ಕನಸಿನ ಜಾಗೃತಿಗೆ ಮುಂದಿನ ಭಾಗವಾಗಿ ಅನಲೆಯ ಕನಸು ಎಣೆದುಕೊಳ್ಳುತ್ತದೆ. ಅವಳ ಕನಸು ಅತಿಶಯವಾದದು. ತ್ರಿಜಟೆ ತನ್ನ ಕೆಲಸವನ್ನು ಮುಗಿಸಿ ಮಲಗಿದಳಂತೆ. ದೇವಿ ಕಣ್ಣುಮುಚ್ಚದೆ ಯೋಗಿನಿಯಂತೆ ಅಂತರ್‍ಮುಖಿಯಾಗಿ ಕುಳಿತಿದ್ದಳಂತೆ. ಮಹಾಜ್ಯೋತಿಯೊಂದು ಪರ್ಣಶಾಲೆಯನ್ನೆಲ್ಲ ತುಂಬಿದಂತಾಯಿತಂತೆ. ಅನಲೆ ಪುಳಕಿತಳಾಗಿ ನೋಡಿತ್ತಿರಲು ಸೀತೆ ಯಾರೊಡನೆಯೊ ಮಾತನಾಡುತ್ತಿದ್ದಂತೆ ಕಾಣಿಸಿತಂತೆ. ಆ ಪೂಜೆ ಅಲ್ಲಿದ್ದರೂ ಎಲ್ಲೆಲ್ಲಿಯೂ ಚರಿಸುತ್ತಿದ್ದಂತೆ, ಸರ್ವವನ್ನೂ ಕಾಣುತ್ತಿದ್ದಂತೆ, ಅಲ್ಲಿ ತಾಟಸ್ಥ್ಯ ಸ್ಥಿತಿಯಲ್ಲಿದ್ದರೂ ಸೃಷ್ಟಿಚಕ್ರವನ್ನೆ ತಿರುಗಿಸುತ್ತಿದ್ದಂತೆ ಗೋಚರಿಸಿದಳಂತೆ. ಆ ದೃಶ್ಯವನ್ನು ಕಂಡು ಭಯಭೀತಳಾಗಿ ಅನಲೆ ಮಯ್ಮರೆತಳಂತೆ. ಹೀಗೆ ಮಂಡೋದರಿ ರಾವಣನಿಗೆ, ಅನಲೆ ಕಂಡ ಸ್ವಪ್ನದ ಮಹತ್ವವನ್ನ ವಿವರಿಸುತ್ತಾಳೆ.

ಶ್ರೀರಾಮಾಯಣ ದರ್ಶನಂನಲ್ಲಿ ಮುಂದೊದಗಬಹುದಾದ ರಾವಣನ ಆತ್ಮೋದ್ಧಾರಕ್ಕೆ, ಪ್ರತೀಕವಾಗಿ ಕಾಣಿಸಿಕೊಳ್ಳುವ ಈ ಮುಂದಿನ ಕನಸು; ಸರ್ವೋದಯ, ಪೂರ್ಣದೃಷ್ಟಿ ತತ್ತ್ವಗಳನ್ನು ಪ್ರತಿಪಾದಿಸುತ್ತದೆ. ಇಲ್ಲಿ ರಾವಣನ ಸ್ವಪ್ನಸಿದ್ಧಿಗಾಗಿಯೇ ಅಲ್ಲ; ಮಹಾಕಾವ್ಯದ ಸ್ವಪ್ನಸಿದ್ಧಿಗಾಗಿಯೂ ತಂದಿರಿಸಿದ ಸಂಚಿಕೆಯಂತಿದೆ ಶ್ರೀರಾಮಾಯಣ ದರ್ಶನಂನ ದಶಾನನ ಸ್ವಪ್ನಸಿದ್ಧಿ.

ದಶಾನನ ಸ್ವಪ್ನಸಿದ್ಧಿ- ಶ್ರೀರಾಮಾಯಣ ದರ್ಶನಂನ ಒಂದು ಶಿಖರ ಸಂಚಿಕೆ. ರಾವಣನಿಗೆ ಸೀತೆಯ ಬಗೆಗಿದ್ದ ಅದಮ್ಯವಾದ ಕಾಮರುಚಿ ಸಂಪೂರ್ಣ ವಿನಾಶವಾಗಿ, ಅವನ ಮನಸ್ಸು ಆಮೂಲಾಗ್ರವಾಗಿ ಪರಿವರ್ತನೆಯಾದ ಬಗೆಯನ್ನು ಒಂದು ಅದ್ಭುತವಾದ ಪ್ರತಿಮೆಯ ಮೂಲಕ ಚಿತ್ರಿಸುತ್ತದೆ. ಇಡೀ ಸಂದರ್ಭ ರಾವಣನಿಗೆ, ಮಹಾಕಾಳಿಯ ದೇಗುಲದಲ್ಲಿ ಒದಗಿದ ಒಂದು ಸ್ವಪ್ನದರ್ಶನದಂತೆ ಚಿತ್ರಿತವಾಗಿದೆ. ಈ ಸ್ವಾಪ್ನಿಕಮನೋಮಯದಲ್ಲಿ, ರಾವಣ ತಾಯಿ ದುರ್ಗೆಯನ್ನು ಕುರಿತು, ರಾಮನು ರಣದಲ್ಲಿ ಸೋಲುವಂತೆಯೂ, ಸೀತೆ ತನಗೆ ವಶವಾಗುವಂತೆಯೂ ವರವನ್ನು ಕರುಣಿಸು ಎಂದು ಕೇಳಿಕೊಳ್ಳುತ್ತಾನೆ. ಜಗದಂಬೆ ತಥಾಸ್ತು (ಹಾಗೆಯೆ ಆಗಲಿ) ಎನ್ನುತ್ತಾಳೆ. ರಾವಣ ಆಶ್ಚರ್ಯಗೊಂಡು- ಸೀತೆ ಸೋಲ್ವಳೇ, ರಾಮನಂ ಗೆಲ್ವೆನಿದು ದಿಟಮೆ? ಎನ್ನುತ್ತಾನೆ. ತಾಯಿ ಕಾಳಿ ಹೇಳುತ್ತಾಳೆ: ಸೀತೆಯಾಲಿಂಗಿಪಳ್, ಚುಂಬಿಸಿ ಎರ್ದೆಗೊತ್ತುವಳ್; ರಣದಿ ರಾಮನ ಸೋಲಿಪಯ್, ಪುನರ್ ಜನ್ಮದೊಳ್! ಆ ಕೂಡಲೆ ರಾವಣ ಮತ್ತೊಂದು ಕನಸಿನ ಕಾಣ್ಕೆಯನ್ನು ಕಾಣುತ್ತಾನೆ:

ರಾವಣನಿಗೆ, ದೇವಾಲಯದ (ಮನಸ್ಸಿನ) ಪೀಠಾಗ್ರದಲ್ಲಿ ಮಾತೃಸ್ವರೂಪಿಯಾದ ದೇವಿಯ ಬದಲು, ಕಾಮಸ್ವರೂಪಿಯಾದ ಕುದುರೆ ಕಾಣುತ್ತದೆ. ಅದರಲ್ಲಿಯೂ ಕಾಮದ ಉತ್ಕಟತೆಯನ್ನು ಸೂಚಿಸುವಂತೆ, ಮುಂಗಾಲುಗಳನ್ನು ಮೇಲೆತ್ತಿ ಹಿಂಗಾಲುಗಳಲ್ಲಿಯೆ ನಿಂತಿರುವ ಕುದುರೆ. ಇಲ್ಲಿ ರಾವಣನಲ್ಲಿ ಅಡಗಿದ್ದ ಆಧ್ಯಾತ್ಮ ಎಚ್ಚರಗೊಳ್ಳುತ್ತದೆ. ಹಾಗೆಯೆ ರಾವಣನ ಆತ್ಮೋದ್ಧಾರಕ್ಕಾಗಿ, ಸೀತಾ-ಮಂಡೋದರಿಯರು ಮಾಡಿದ ಪ್ರಾರ್ಥನೆ: ನಭದ ಖಡ್ಗ ಮುಷ್ಠಿಯಾಗಿ ರಾವಣನ ಮನದಲ್ಲಿ ಸೀತೆಯ ಬಗೆಗಿದ್ದ ಕಾಮದ ಉತ್ಕಟತೆಯನ್ನು ಬಲಿಗೆಡಹುತ್ತದೆ. ಇದರಿಂದ ಜಾಗೃತವಾದ ರಾವಣನ ಮನಸ್ಸು, ಆತ್ಮೋದ್ಧಾರದ ದೋಣಿಯನ್ನ ಹತ್ತಿ ಮುಂದೆ ಮರುಹುಟ್ಟು ಪಡೆಯಲು ಸಿದ್ಧವಾಗುತ್ತದೆ. ಮುಂದೆ ನದೀಜಲವೆಲ್ಲ ನೆತ್ತರಾಗಿ, ದಶಾನನನು ಏರಿದ್ದ ದೋಣಿ ತಲೆಕೆಳಗಾಗಿ, ನೆತ್ತರಿನ ಹೊಳೆಯೊಳಗೆ ಅವನು ತೇಲಿಮುಳುಗಿ, ಕೂಡಲೆ ತನ್ನ ಸಹೋದರ ಕುಂಭಕರ್ಣನನ್ನು ಕಂಡು ಕೂಗಲಾಗಿ, ಆ ಇಬ್ಬರೂ ಹೊಳೆಯೊಡನೆ ಹೋರಾಡಿ ಹೇಗೋ ದಡಕ್ಕೆ ಏರಿದರು. ನೊಡುತ್ತಾರೆ, ಇದ್ದಕ್ಕಿದ್ದ ಹಾಗೆ ತಾವಿಬ್ಬರೂ ಶಿಶುಗಳಂತಗಿದ್ದಾರೆ! ಸುತ್ತಲೂ ಯಾವುದೋ ಋಷ್ಯಾಶ್ರಮದ ಶಾಂತಿ. ತಾವು ಯಾರು ಏನು-ಎಂಬ ಆ ಪೂರ್ವದ ಏನೊಂದೂ ನೆನಪಿಗೆ ಬರುತ್ತಿಲ್ಲ. ನೆನೆಯುವ ಆ ಪ್ರಯತ್ನವಷ್ಟೂ ವ್ಯರ್ಥವಾಯಿತು. ವಿಸ್ಮೃತಿಯ ವೈತರಣಿಗೆ ಮುಳುಗಿಹೋಯಿತು ಆತ್ಮ ಶಿಶುಶರೀರದಿಂದ ತಾನೂ ತನ್ನ ಸಹೋದರ ಕುಂಭಕರ್ಣನೂ ಆಗತಾನೆ ಹುಟ್ಟಿದ ಮಕ್ಕಳಂತೆ ಅಳತೊಡಗಿದಾಗ, ಸೀತೆ ಅಲ್ಲಿಗೆ ಬಂದು, ಮಕ್ಕಳನ್ನು ಎತ್ತಿ ಮುದ್ದಾಡುತ್ತಾಳೆ. ಹಾಡಿ ಮೊಲೆಯೂಡಿಸಿ, ತೊಡೆಯ ಮೇಲೆ ಕೂಡಿಸಿ ಎದೆಗೊತ್ತಿಕೊಂಡು ಸಂತೈಸುತ್ತಾಳೆ.

ವಾಸ್ತವವಾಗಿ ಇಲ್ಲಿ ಕಾಣುವ ಮಹದ್ ಭೀಮತನುವಿನ ಕುದುರೆ ಮನಃಶಾಸ್ತ್ರದ ಪ್ರಕಾರ ಅದಮ್ಯವಾದ ಕಾಮದ ಸಂಕೇತ. ಅದನ್ನು ಸುದೀರ್ಘವಾದ ಖಡ್ಗವನ್ನು ಹಿಡಿದ ಕೈಯೊಂದು ಕತ್ತರಿಸುವುದು, ಅನಂತರ ಕತ್ತರಿಸಿದ ಕುದುರೆಯ ಮೈಯಿಂದ ಹರಿದ ರಕ್ತವು ಬಂದು ಮಹಾಪ್ರವಾಹವಾಗಿ ರಾವಣನು ಕೊಚ್ಚಿಹೋಗುವುದು, ಅನಂತರ ಪುನರ್ಜನ್ಮ ಸದೃಶವಶದ ಘಟನೆಯೊಂದು ಸಂಭವಿಸಿ, ರಾವಣ-ಕುಂಭಕರ್ಣರಿಬ್ಬರೂ ಅವಳಿಮಕ್ಕಳಾಗಿ ಸೀತೆಯ ತೊಡೆಯೇರುವುದು-ಈ ಎಲ್ಲವೂ ರಾವಣನ ಕಾಮರುಚಿ ವಿನಾಶವಾಗಿ, ಆತನ ಮನಸ್ಸು ಸೀತೆಯ ಬಗೆಗಿನ ಮಾತೃಭಾವದಲ್ಲಿ ಉದಾತ್ತೀಕರಣಗೊಳ್ಳುವ ಪ್ರಕ್ರಿಯೆಯನ್ನು ಸೂಚಿಸುತ್ತವೆ. ಕುವೆಂಪು ಅವರು ಈ ಸಂದರ್ಭವನ್ನು ಚಿತ್ರಿಸುವಲ್ಲಿ ಮನೋವಿಜ್ಞಾನದ ತಿಳುವಳಿಕೆಯನ್ನು ಬಳಸಿಕೊಂಡಿರುವ ಕ್ರಮ ಅಪೂರ್ವವಾಗಿದೆ.

ಒಟ್ಟಾರೆಯಾಗಿ ಸ್ವಪ್ನಗಳು, ಕವಿಗಳ ಪಾಲಿಗೆ ಅನುಭವ ದ್ರವ್ಯದ ಒಂದು ಭಾಗ. ಸ್ವಪ್ನಗಳನ್ನು ಕಾವ್ಯದ ವಸ್ತುವನ್ನಾಗಿ, ಸಂಕೇತ, ಪ್ರತೀಕ, ಪ್ರತಿಮೆಗಳನ್ನಾಗಿ, ತಮ್ಮ ನಿರೂಪಣೆಯ ತಂತ್ರಗಳನ್ನಾಗಿ ಬಳಸಿಕೊಂಡಿರುವುದು ಒಂದು ಸ್ವಾರಸ್ಯದ ಸಂಗತಿಯಾಗಿದೆ.

ಶಿವರಾಜು

ಕನ್ನಡ ಸ್ನಾತಕೋತ್ತರ ಪಡೆದಿರುವ ಇವರು ಸದ್ಯಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿ.


ಇದನ್ನೂ ಓದಿ: ಅನಿಕೇತನದ ಕಿಡಿ ಬಿತ್ತಿದ ವಿಶ್ವಮಾನವ ಸಂದೇಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸ್ವಪ್ನ ಅನ್ನೋ ಒಂದು ಮನೋ ವಾಸ್ತವ ಸ್ಥಿತಿಯನ್ನು ಕುರಿತು , ಅದರ ಕುವೆಂಪು ನಿರ್ವಚನಗಳನ್ನು ಬಳಸುತ್ತಾ ಬರೆದ ಈ ಬರಹವೂ ಚೆನ್ನಾಗಿದೆ.
    ಈ ಕನಸುಗಳ ಬಗೆಗೆ ಚಿತ್ತ ವ ನು ಕೇಂದ್ರೀಕರಿಸಿ ತಮ್ಮ ಸೃಜನಶೀಲ ಬರಹ ಚಿಂತನೆಗಳಿಗೆ ಅದನ್ನು ವಸ್ತು ಅಥವ ವಿವೇಕವನ್ನಾಗಿ ಬಳಸಿದ ಕನ್ನಡ ಲೇಖಕರು ತೀರಾ ಕಡಿಮೆ.
    ಬೇಂದ್ರೆ ಕವಿತೆಗಳ ಹಿಂದೆ ಕೆಲವು ಸಲ ಅವರು ಕಂಡ ಕನಸುಗಳ ಪರಿವೇಶ ವೂ ಇದೆ.ಜಿ ಬೀ.ಜೋಶಿ ಅವರ ” ಜಡ ಭರತನ ಕನಸುಗಳು ” ಕನಸುಗಳನ್ನು ಒಂದು ದಟ್ಟ ವಸ್ತು ಸಂಚಯ ದ ರೀತಿಯಲಿ ಬಳಸಿದ ಕೃತಿ.

    ಕನಸು ಅನ್ನೋ ಶಬ್ದವನ್ನೂ ಕಲ್ಪನೆ ಅನ್ನೋ ಶಬ್ದ ಕೆ ಸಂವಾದಿಯಾಗಿ ಬಳಸುವದು ಹೆಚ್ಚು ರೂಢಿ ಆಗಿದೆ.
    ನಾವು ನಮ್ಮ ಮನೋ ಲೋಕದ ಎಡೆಗೆ ಹೆಚ್ಚು ಸೂಕ್ಷ್ಮ ರಾದರೆ ಮಾತ್ರ ಈ ಕನಸುಗಳ ಲೋಕವು ನಮ್ಮನ್ನು ಕಾಡು ವ ಸಾಧ್ಯತೆ ಇದೆ
    ಉಪನಿಷತ್ ಗಳು ಮನುಷ್ಯನ. ಸಾವಿನ ಸೂಚನೆ ಕೂಡ ಈ.ಕನಸುಗಳ.ಮೂಲಕ ಬರುತ್ತವೆ ಎಂದೂ ಹೇಳುತ್ತವೆ.ನಾನು ಇನ್ನೂ ಎಷ್ಟು ದಿನಗಳ.ನಂತರ ಸಾಯುತ್ತೇನೆ ಅನ್ನೋದನ್ನ ನನಗೆ ಬೀಳೋ ಕನಸುಗಳು ತಿಳಿಸಿ ಹೋಗುತ್ತವೆ ಅಂತೆ.

LEAVE A REPLY

Please enter your comment!
Please enter your name here

- Advertisment -

Must Read

ತಮಿಳುನಾಡಿನ ಜಿಲ್ಲಾಧಿಕಾರಿಗಳಿಗೆ ಅನಾವಶ್ಯಕ ಕಿರುಕುಳ: ED ಅಧಿಕಾರಿಗಳಿಗೆ ಸುಪ್ರೀಂಕೋರ್ಟ್‌ ತರಾಟೆ

0
ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಸಮನ್ಸ್ ಪಡೆದಿರುವ ಜಿಲ್ಲಾಧಿಕಾರಿಗಳಿಗೆ ತಮ್ಮ ಕಚೇರಿಯ ಹೊರಗೆ ಬಹಳ ಗಂಟೆಗಳ ಕಾಲ ಕಾಯುವಂತೆ "ಅನಾವಶ್ಯಕ ಕಿರುಕುಳ" ನೀಡಬೇಡಿ ಎಂದು ಸುಪ್ರೀಂಕೋರ್ಟ್ ಸೋಮವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸೂಚನೆಯನ್ನು...