Homeಮುಖಪುಟವಿಚಾರ ಕ್ರಾಂತಿಗೆ ಆಹ್ವಾನ ಮತ್ತು ಹೊಸ ಬೆಳಕು

ವಿಚಾರ ಕ್ರಾಂತಿಗೆ ಆಹ್ವಾನ ಮತ್ತು ಹೊಸ ಬೆಳಕು

’ನಾನಿಂದು ನಿಮ್ಮ ಹೆಗಲಿನ ಹೊರೆಯನ್ನು ಇಳಿಸಲು ಬಂದಿಲ್ಲ; ಇನ್ನಷ್ಟು ಹೊರೆಗಳನ್ನು ಹೊರಿಸಲು ಬಂದಿದ್ದೇನೆ..’. ಆದರೆ, ನಾಡಿನ ಯುವಜನತೆ ಆ ಹೊರೆಯನ್ನು ಹೊತ್ತುಕೊಂಡಂತೆ ತೋರುತ್ತಿಲ್ಲ. ಕುವೆಂಪು ಅವರು ದೇಶದ ಬಗೆಗೆ ಅವತ್ತು ಆಲೋಚಿಸಿದ್ದು ಮತ್ತು ಬದಲಾವಣೆ ಬಯಸಿದ್ದು ಆಗುಗೊಂಡಿದೆಯೇ ಎಂದು ಕೇಳಿಕೊಂಡರೆ ನಿರಾಶೆಯ ಕಾರ್ಮೋಡ ಕವಿಯುತ್ತದೆ. ಅವತ್ತಿನ ಆತಂಕಗಳೆಲ್ಲ ಮತ್ತಷ್ಟು ಮೈಕೈ ತುಂಬಿಕೊಂಡು ಹುಯಿಲಿಡುತ್ತಿವೆ. ಅವರು ಬಯಸಿದಂತೆ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಇವುಗಳೆಲ್ಲ ಮಂತ್ರಗಳಾಗಿದ್ದರೆ ಭಾರತವೆಂಬ ’ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ನೆಮ್ಮದಿಯ ಹೂ ಅರಳಿ ಘಮಾಡಿಸುತ್ತಿದ್ದವು.

- Advertisement -
- Advertisement -

ಕುವೆಂಪು ಅವರು 8-12-1974ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಹತ್ತನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿ ಯುವಜನರನ್ನು ಉದ್ದೇಶಿಸಿ ಮಾತನಾಡಿ ’ವಿಚಾರ ಕ್ರಾಂತಿಗೆ ಆಹ್ವಾನ’ ಕೊಟ್ಟಿದ್ದರು. ಈ ಭಾಷಣದಲ್ಲಿ ಕುವೆಂಪು ಅವರು ವ್ಯಕ್ತಪಡಿಸಿದ ಕಾಳಜಿಗಳು, ಆತಂಕಗಳು ಮತ್ತು ಯುವಜನತೆ ಪಯಣಿಸಬೇಕಾದ ಹಾದಿಯಲಿ ಹಚ್ಚಿಟ್ಟ ಹಣತೆಯಂಥ ಮಾತುಗಳು ವರ್ತಮಾನದ ಹೊಸಿಲಿನಲ್ಲಿ ನಿಂತು ಹೇಳಿದಂತಿದೆ. ಈ ಭಾಷಣ ಐದು ದಶಕ ಪೂರೈಸಿದೆ. ಆ ಹೊತ್ತು ಭಾರತ ಎದುರಿಸುತ್ತಿದ್ದ ಜ್ವಲಂತ ಸಮಸ್ಯೆಗಳು ಭಿನ್ನ ರೂಪ ತಾಳಿ ಈ ಹೊತ್ತಿನವರೆಗೂ ಚಾಚಿಕೊಂಡಿವೆ.

ಕುವೆಂಪು ಹೇಳಿದ್ದರು

’ನಾನಿಂದು ನಿಮ್ಮ ಹೆಗಲಿನ ಹೊರೆಯನ್ನು ಇಳಿಸಲು ಬಂದಿಲ್ಲ; ಇನ್ನಷ್ಟು ಹೊರೆಗಳನ್ನು ಹೊರಿಸಲು ಬಂದಿದ್ದೇನೆ..’. ಆದರೆ, ನಾಡಿನ ಯುವಜನತೆ ಆ ಹೊರೆಯನ್ನು ಹೊತ್ತುಕೊಂಡಂತೆ ತೋರುತ್ತಿಲ್ಲ. ಕುವೆಂಪು ಅವರು ದೇಶದ ಬಗೆಗೆ ಅವತ್ತು ಆಲೋಚಿಸಿದ್ದು ಮತ್ತು ಬದಲಾವಣೆ ಬಯಸಿದ್ದು ಆಗುಗೊಂಡಿದೆಯೇ ಎಂದು ಕೇಳಿಕೊಂಡರೆ ನಿರಾಶೆಯ ಕಾರ್ಮೋಡ ಕವಿಯುತ್ತದೆ. ಅವತ್ತಿನ ಆತಂಕಗಳೆಲ್ಲ ಮತ್ತಷ್ಟು ಮೈಕೈ ತುಂಬಿಕೊಂಡು ಹುಯಿಲಿಡುತ್ತಿವೆ. ಅವರು ಬಯಸಿದಂತೆ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಇವುಗಳೆಲ್ಲ ಮಂತ್ರಗಳಾಗಿದ್ದರೆ ಭಾರತವೆಂಬ ’ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ನೆಮ್ಮದಿಯ ಹೂ ಅರಳಿ ಘಮಾಡಿಸುತ್ತಿದ್ದವು. ಆದರೆ, ವಾಸ್ತವ ವ್ಯತಿರಿಕ್ತವಾಗಿದ್ದು, ಬಹಳಷ್ಟು ಕರಾಳವಾಗಿ ಹರಡಿಕೊಂಡಿದೆ.

ಇದನ್ನೂ ಓದಿ:ಪೌರೋಹಿತ್ಯ ಧಿಕ್ಕರಿಸಿದ ವಿವಾಹದ ಪರಿಕಲ್ಪನೆ ’ಮಂತ್ರ ಮಾಂಗಲ್ಯ’

ರೈತರ ಕುರಿತಾಗಿರುವ ಪ್ರಭುತ್ವದ ನಡೆಯನ್ನು ವಿರೋಧಿಸುತ್ತ ಯುವಜನತೆಯ ಕಣ್ಣು ತೆರೆಸುವ ಮಾತಾಡಿದ್ದರು. ’ಹಳ್ಳಿಗಳನ್ನೂ ರೈತವರ್ಗವನ್ನೂ ಮರೆತುಬಿಟ್ಟೆವು. ಅಥವಾ ಮರತೇಬಿಟ್ಟೆವು ಎಂಬ ದೂರಿನಿಂದ ಪಾರಾಗುವುದಕ್ಕಾಗಿಯೂ ಮತ್ತು ಅವರು ಸಂಪೂರ್ಣವಾಗಿ ನಿರ್ಜೀವವಾದರೆ ನಮಗಾಗಿ ದುಡಿಯುವವರು ಯಾರೂ ಇಲ್ಲದಂತೆ ಆಗಬಾರದು ಎಂಬುದಕ್ಕಾಗಿಯೂ ಜೀವವಾಡುವಷ್ಟರಮಟ್ಟಿಗೆ ಅವರ ಭಿಕ್ಷಾಪಾತ್ರೆಗೂ ಕಾಸು ಎಸೆದದ್ದುಂಟು..’. ಕೃಷಿ ಮಸೂದೆ ವಿರೋಧಿಸಿ ಈಗ ರೈತರು ನಡೆಸುತ್ತಿರುವ ಹೋರಾಟ ಮತ್ತು ರೈತರೊಂದಿಗೆ ಸರಕಾರಗಳು ವರ್ತಿಸುತ್ತಿರುವ ಅಮಾನವೀಯ ರೀತಿ ನಮ್ಮೆದುರಿಗಿದೆ. ಅವರ ಪ್ರತಿಭಟನೆಯನ್ನು ತಡೆಯಲು ಹೂಡುತ್ತಿರುವ ತಂತ್ರಗಳಂತೂ ತಲೆತಗ್ಗಿಸುವಂತಿವೆ.

ನೂರ್‌ ಶ್ರೀಧರ್‌

ಒಂದು ದಿನವೂ ಹೊಲದೊಳಗಿನ ಬಿಸಿಲಿಗೆ ಮೈಯೊಡ್ಡದ, ಬೆವರು ಎಂದರೇನೆಂದು ತಿಳಿಯದ ಜನ ರೈತರಿಗೆ ಅನುಕೂಲ ಕಲ್ಪಿಸುತ್ತೇವೆಂದು ಹೇಳುತ್ತಿರುವುದು ಹೂಡಿದ ನಾಟಕವಲ್ಲದೆ ಮತ್ತೇನೂ ಅಲ್ಲ. ಈಗ ತರಲು ಹೊರಟಿರುವ ಕೃಷಿ ಮಸೂದೆಗಳ ಅಪಾಯ ರೈತರಿಗೆ ಸರಿಯಾಗಿ ತಿಳಿದಿದೆ. ರೈತರ ಹಿತವೇ ಸರಕಾರದ್ದಾಗಿದ್ದರೆ ಅವರ ಬೇಡಿಕೆ ಈಡೇರಿಸಲು ಮುಂದಾಗುವುದನ್ನು ಬಿಟ್ಟು ಹೀಗೆ ಹಠ ತೊಟ್ಟು ರೈತರಿಗೆ ತೊಂದರೆ ಕೊಡುವ ಪ್ರಮೇಯವೇ ಬರುತ್ತಿರಲಿಲ್ಲ. ಸರಕಾರ ರೈತರ ವಿರೋಧವನ್ನೂ ಲೆಕ್ಕಿಸದೆ ಕೃಷಿ ಮಾರುಕಟ್ಟೆ ಕಾಯ್ದೆಗಳಿಂದ ರೈತರಿಗಾಗುವ ಲಾಭಗಳನ್ನು ಮನದಟ್ಟು ಮಾಡಲು ಅಮಿತ ಉತ್ಸಾಹ ತೋರುತ್ತಿದೆ. ಉತ್ತರ ಪ್ರದೇಶದ 2,500 ಸ್ಥಳಗಳಲ್ಲಿ ಕಿಸಾನ್ ಸಂವಾದ ಆಯೋಜಿಸಲು ಸಿದ್ಧತೆ ನಡೆಸಿದೆ. ರೈತರ ಪ್ರತಿಭಟನೆಯ ಬಗ್ಗೆ ಯಾವುದೇ ಚರ್ಚೆ ನಡೆಯದಂತೆ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದುಪಡಿಸಲಾಗಿದೆ. ಒಳ್ಳೆಯ ಉದ್ದೇಶದ ಹಿಂದೆ ಇಷ್ಟೆಲ್ಲ ಕಸರತ್ತು ಮಾಡುವ ಅಗತ್ಯವಿರುವುದಿಲ್ಲ.

ಹಾಗೆ ನೋಡಿದರೆ ರೈತರಿಗೆ ನಿಗದಿತ ಆದಾಯವೇ ಇಲ್ಲ. ಒಕ್ಕಲುತನ ರೈತರಲ್ಲಿ ಈಗ ಯಾವ ಭರವಸೆಗಳನ್ನೂ ಉಳಿಸಿಲ್ಲ. ನಾಳೆಯ ಕನಸುಗಳು ಕಣ್ಣೆದುರೆ ಒಂದೊಂದಾಗಿ ಕರಗಿ ಹೋಗುತ್ತಿರುವಾಗ ತಮ್ಮ ಮಕ್ಕಳನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸುವ ಉಮೇದಂತೂ ಅವರೊಳಗೆ ಕಿಂಚಿತ್ತೂ ಉಳಿದಿಲ್ಲ. ಇದುವರೆಗೂ ಅಧಿಕಾರದ ಚುಕ್ಕಾಣಿ ಹಿಡಿದ ಮತ್ತು ಈಗ ಆಡಳಿತ ನಡೆಸುತ್ತಿರುವ ಯಾವ ಸರಕಾರವೂ ಕೃಷಿ ಬಿಕ್ಕಟ್ಟುಗಳನ್ನು ಶಾಶ್ವತವಾಗಿ ಬಗೆಹರಿಸಲು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಸರಕಾರದ ಇಬ್ಬಂದಿತನದ ನೀತಿಗಳು ಯಾವತ್ತೂ ರೈತರ ಪರವಾಗಿಲ್ಲ. ಗೊಬ್ಬರ ತಯಾರಿಕೆಗೆಂದು ಸರಕಾರ ಸಬ್ಸಿಡಿ ಕೊಡುತ್ತದೆ. ಇದರಿಂದ ಗೊಬ್ಬರ ತಯಾರಿಸುವ ಕಂಪನಿಗಳ ಮಾಲೀಕರ ಜೇಬು ಭರ್ತಿಯಾಗುತ್ತದೆ ವಿನಃ ರೈತರಿಗೆ ಫಾಯಿದೆ ಇಲ್ಲ.

ರೈತಸಂಪರ್ಕ ಕೇಂದ್ರಗಳಲ್ಲಿ ಬೀಜ, ಗೊಬ್ಬರ, ಕೀಟನಾಶಕ, ಕೃಷಿ ಸಲಕರಣೆಗಳು ಸಬ್ಸಿಡಿಯಲ್ಲಿ ಸಿಗುತ್ತವೆಯಾದರೂ ಅದು ತೋರಿಕೆಗೆಂಬಂತೆ ಕಡಿಮೆ ಪ್ರಮಾಣದಲ್ಲಿರುತ್ತದೆ. ಆದರೆ, ಆಯಾ ಉತ್ಪನ್ನ ತಯಾರಿಸುವ ಕಂಪನಿಗಳಿಗೆ ತೋರುವ ಉದಾರತೆಯನ್ನು ರೈತರಿಗೆ ತೋರಿಲ್ಲ. ಈವರೆಗೂ ಸಮರ್ಪಕ ಕೃಷಿ ನೀತಿ ಜಾರಿ ಮಾಡಲು ಆಗಿಲ್ಲ. ಪ್ರಕೃತಿ ವಿಕೋಪ, ನೆರೆ ಹಾವಳಿಯ ಜೂಜಾಟದ ನಡುವೆಯೂ ಯಾವುದಕ್ಕೂ ಬಗ್ಗದೆ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ ಸೌಜನ್ಯ ತೋರುತ್ತಿಲ್ಲ. ಇದಾವುದೂ ಅಧಿಕಾರಶಾಹಿಯ ಕುರುಡು ಕಣ್ಣಿಗೆ ಗೋಚರಿಸುತ್ತಿಲ್ಲ. ರೈತರ ಬಗೆಗಿನ ಅವಜ್ಞೆಯ ಕುರಿತು ಕುವೆಂಪು ಅವಾಗಲೇ ಎಚ್ಚರಿಸಿದ್ದರು. ಆದರೆ, ರೈತರು ಅವತ್ತಿಗೂ ಇವತ್ತಿಗೂ ಹರಕೆಯ ಕುರಿಯಾಗುತ್ತಿರುವುದು ದುರಂತ ಸತ್ಯ.

ಇದನ್ನೂ ಓದಿ:ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಸ್ವಪ್ನಗಳ ಪಾತ್ರ

ಮುಂದುವರೆದು ಕುವೆಂಪು ಹೇಳುತ್ತಾರೆ

’ನಮ್ಮ ದೇಶ, ಯಾವತ್ತೂ ಪ್ರಜಾಸತ್ತೆಯ ಗಾಳಿಯನ್ನೂ ಮೂಸಿ ನೋಡದಿದ್ದ ದೇಶ. ರಾಜರನ್ನು ಪ್ರತ್ಯಕ್ಷ ದೇವರೆಂದು ಪೂಜಿಸಿದ ದೇಶ; ಪುರೋಹಿತರನ್ನು ಭೂಸುರರೆಂದು ಆರಾಧಿಸಿದ ದೇಶ! ಮತಮೌಢ್ಯ ಎಂಬ ನಿತ್ಯ ರೋಗವು ಅದರ ನಾಡಿನಾಡಿಗಳಲ್ಲಿ ಮಾತ್ರವಲ್ಲದೆ ಎಲುಬಿನಲ್ಲಿಯೂ ಐದು ಸಾವಿರ ವರ್ಷಗಳಿಂದ ಸರ್ವವ್ಯಾಪಿಯಾಗಿದ್ದು ವರ್ಗವರ್ಣ ಮತ ಜಾತಿ ಪಂಥ ಪಂಗಡ ಎಂಬ ನೂರಾರು ಭೇದಗಳಿಂದ ನರಳುತ್ತಿರುವ ದೇಶ!..’ ಈ ಎಲ್ಲ ಸಂಗತಿಗಳು ಎಂದಿಗಿಂತ ಈಗ ವಿಷಮವಾಗಿ ಹರಡಿ ನಂಜನ್ನು ಕಾರುತ್ತಲಿವೆ. ಈಗ ರಾಜರುಗಳ ಸ್ಥಾನದಲ್ಲಿ ರಾಜಕಾರಣಿಗಳು ಇದ್ದಾರೆ. ಪ್ರಜೆಗಳು ಎಂದಿನಂತೆ ಕುರುಡರಾಗಿ ಅವರ ಆರಾಧನೆಯಲ್ಲಿ ತೊಡಗಿದ್ದಾರೆ. ಅವರೋ ಜನರ ಸುಖಾಗಮನದ ಹೆಸರಿನಲ್ಲಿ ಒಂದು ಜಾತಿಯ ಜನರನ್ನು ಮತ್ತೊಂದು ಜಾತಿಗೆ ಎತ್ತಿಕಟ್ಟುತ್ತಲೇ ದ್ವೇಷದ ಕಿಡಿಯನ್ನು ಎಂದಿಗೂ ಆರದಂತೆ ಕಾಪಿಡುತ್ತಿದ್ದಾರೆ. ಜನರೊಳಗೆ ವಿವೇಚನೆಯ ಪ್ರಜ್ಞೆ, ಅರಿವಿನ ಗಾಳಿ ಬೀಸದಂತೆ ನೋಡಿಕೊಳ್ಳಲಾಗುತ್ತಿದೆ. ಜಾತಿಪದ್ಧತಿಯ ಸಂಪೂರ್ಣ ವಿನಾಶ ಕನಸಿನ ಮಾತಾಗಿಯೇ ಉಳಿದಿದೆ.

ಗುಡಿ ಚರ್ಚು ಮಸಿಜೀದಿಗಳ ಬಿಟ್ಟು ಹೊರಬನ್ನಿ,
ಬಡತನವ ಬುಡಮುಟ್ಟಿ ಕೀಳಬನ್ನಿ
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ,
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ,
ಓ, ಬನ್ನಿ, ಸೋದರರೆ, ಬೇಗ ಬನ್ನಿ !

ಕುವೆಂಪು ಅವರು ಕನಸಿದಂತೆ ಈ ಕವಿತೆಯನ್ನು ಯುವಜನತೆ ಮುಂದಣ ಮಾರ್ಗದರ್ಶಕ ಮಂತ್ರದೀಪವಾಗಿಸಿಕೊಳ್ಳಲೇ ಇಲ್ಲ. ಆಳುವವರ ದಾಳವಾಗಿ, ಅವರು ಬೀಸಿದ ಕಡೆ ಬೀಳುವ ಕಲ್ಲಾಗಿ ಸ್ವಂತಿಕೆಯನ್ನೇ ಕಳೆದುಕೊಂಡ ವಿಚಿತ್ರ ಬದುಕನ್ನು ಜೀವಿಸುತ್ತಿದೆ.

ಕುವೆಂಪು ಅವರ ’ವಿಚಾರ ಕ್ರಾಂತಿಗೆ ಆಹ್ವಾನ’ದ ಆಲೋಚನೆಗಳು ಈ ಕಾಲದ ಬಿಕ್ಕಟ್ಟು, ಗಾಯಗಳನ್ನು ಶಮನಗೊಳಿಸುವ ಪರಿಹಾರೋಪಾಯಗಳಂತಿವೆ. ಯುವಸಮೂಹದ ಎದೆಯಲಿ ಕುವೆಂಪು ಅವರ ಈ ವಿಚಾರಗಳು ಬೀಜದಂತೆ ಬೀಳಲಿ. ಆ ಬೀಜ ಮೊಳೆತು ಹೊಸ ಬೆಳಕು ಕಾಣುವಂತಾಗಲಿ.

ಇದನ್ನೂ ಓದಿ: ಸಾಂಸ್ಕೃತಿಕ ಕ್ರಾಂತಿಯ ರೂವಾರಿ ಕುವೆಂಪು ಹೊರಿಸಿದ ಹೊರೆಗಳು

ಟಿ.ಎಸ್.ಗೊರವರ

ಗದಗ ಜಿಲ್ಲೆಯವರಾದ ಟಿ.ಎಸ್. ಗೊರವರ, ಭ್ರಮೆ (2007) ಕಥಾ ಸಂಕಲನ, ಆಡು ಕಾಯೋ ಹುಡುಗನ ದಿನಚರಿ (2011) ಅನುಭವ ಕಥನ, ಕುದರಿ ಮಾಸ್ತರ (2012) ಕಥಾ ಸಂಕಲನ, ರೊಟ್ಟಿ ಮುಟಗಿ (2016) ಕಾದಂಬರಿ, ಮಲ್ಲಿಗೆ ಹೂವಿನ ಸಖ (2018) ಕಥಾ ಸಂಕಲನ ಹೊರತಂದಿದ್ದಾರೆ. ಸದ್ಯ ’ಸಂಗಾತ’ ತೈಮಾಸಿಕ ಸಾಹಿತ್ಯ ಪತ್ರಿಕೆ ಸಂಪಾದಕ.


ಇದನ್ನೂ ಓದಿ: ಕುವೆಂಪುರವರ ವಿಚಾರ ಕ್ರಾಂತಿಗೆ ಆಹ್ವಾನದ ಮರು ಓದು – ಧನಂಜಯ್ ಎನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

‘ದೆಹಲಿ ಜನರು ನಮಗೆ 56% ಮತ ನೀಡಿದ್ದಾರೆ, ಅವರು ಪಾಕಿಸ್ತಾನಿಗಳೇ..?’; ಅಮಿತ್‌ ಶಾ ವಿರುದ್ಧ...

0
'ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಕಾರಣ ಅವರು ಅಹಂಕಾರಿಯಾಗಿದ್ದಾರೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್...