Homeಮುಖಪುಟಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ಚೆನ್ನಮ್ಮ ಹೆಸರನ್ನು ನಿರಾಕರಿಸಿ, ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟ ಬಿಜೆಪಿಗರು!

ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ಚೆನ್ನಮ್ಮ ಹೆಸರನ್ನು ನಿರಾಕರಿಸಿ, ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟ ಬಿಜೆಪಿಗರು!

ಯಲಹಂಕ ಮೇಲ್ಸೇತುವೆಗೆ ಶತಾಯಗತಾಯ ಸಾವರ್ಕರ್ ಹೆಸರನ್ನು ಇಡಲೇಬೇಕು ಎಂಬುದು ರಾಜ್ಯ ಸರ್ಕಾರದ ಪಾಲಿಗೆ ಪ್ರತಿಷ್ಠೆಯ ವಿಚಾರವಾಗಿದೆ. ಆದರೆ, ಸರ್ಕಾರದ ಈ ನಿರ್ಧಾರಕ್ಕೆ ಕನ್ನಡಪರ ಹೋರಾಟಗಾರರು ಇದನ್ನು ಒಪ್ಪುವ ಮನಸ್ಥಿತಿಯಲ್ಲಿ ಇಲ್ಲ.

- Advertisement -

ಕಿತ್ತೂರು ರಾಣಿ ಚೆನ್ನಮ್ಮ ಭಾರತದ ಸ್ವಾತಂತ್ಯ್ರ ಹೋರಾಟದ ಇತಿಹಾಸದಲ್ಲಿ ಅಗ್ರಗಣ್ಯ ಹೆಸರು. ವಿಪರ್ಯಾಸವೆಂದರೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರಿನ ರಾಣಿ ಚೆನ್ನಮ್ಮ ಹೆಸರಿಡಲು ಕೇಂದ್ರ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿದ್ದರೆ, ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸೆರಿಟ್ಟು ವಿಜೃಂಭಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದ ವಾಣಿಜ್ಯ ನಗರಗಳ ಪೈಕಿ ಬೆಳಗಾವಿಯೂ ಒಂದು. ಹೀಗಾಗಿ ಬೆಳಗಾವಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಅಲ್ಲದೆ 2018ರಲ್ಲಿ ಕಾಂಗ್ರೆಸ್—ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮೇಲ್ದರ್ಜೆಗೇರಿದ್ದ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಯೂ ಮಾಡಲಾಗಿತ್ತು. ಈ ಸಮಾರಂಭದಲ್ಲಿ ಮಾತನಾಡಿದ್ದ ಅಂದಿನ ವಿಮಾನಯಾನ ಸಚಿವ ಅಶೋಕ ಗಜಪತಿರಾಜು, “ಚೆನ್ನಮ್ಮನ ಹೆಸರಿಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ, ಶೀಘ್ರವೇ ಅನುಮೋದನೆ ನೀಡಲಾಗುವುದುʼ ಎಂದು ಆಶ್ವಾಸನೆ ನೀಡಿದ್ದರು.

ಅದರಂತೆ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಡಿಸೆಂಬರ್ 22, 2018ರಂದು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಕೋರಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದು ಒತ್ತಾಯಿಸಿದ್ದರು.

ನಂತರ ಸಮ್ಮಿಶ್ರ ಸರ್ಕಾರ ಉರುಳಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಿಎಂ ಬಿಎಸ್ ಯಡಿಯೂರಪ್ಪನವರೂ “ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರಿನ ರಾಣಿ ಚೆನ್ನಮ್ಮ ಅವರ ಹೆಸರಿಡಿ”ಎಂದು ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದು ಮನವಿ ಮಾಡಿದ್ದರು. ಆದರೆ, 2018ರಲ್ಲಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚೆನ್ನಮ್ಮ ಹೆಸರಿಡಲು ನಮ್ಮದೇನೂ ತಕರಾರಿಲ್ಲ ಎಂದಿದ್ದ ಕೇಂದ್ರ ಸರ್ಕಾರ ಇಂದು ಚೆನ್ನಮ್ಮ ಹೆಸರನ್ನು ಸಾರಾಸಗಟಾಗಿ ತಿರಸ್ಕರಿಸಿದೆ.

ಕೇಂದ್ರ ಸರ್ಕಾರವು ಕನ್ನಡ ನಾಡಿನ ವಿಮಾನ ನಿಲ್ದಾಣಕ್ಕೆ ನಮ್ಮದೇ ಸ್ವಾತಂತ್ಯ್ರ ಹೋರಾಟಗಾರರ ಹೆಸರಿಡಲು ಹಿಂದೂ-ಮುಂದೂ ನೋಡುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ಬಿಬಿಎಂಪಿಯಲ್ಲಿ ಪ್ರಸ್ತಾಪವೇ ಆಗದೆ ಹೆಸರನ್ನು ಕೊನೆಗೂ ಅಂತಿಮಗೊಳಿಸಲಾಗಿದೆ.

ಯಲಹಂಕ ಮೇಲ್ಸೇತುವೆ ವಿವಾದ

ಯಲಹಂಕದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯ ಡೈರಿ ವೃತ್ತದಲ್ಲಿ ನಿರ್ಮಿಸಲಾಗಿರುವ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನು ನಾಮಕರಣ ಮಾಡಲು ಸರ್ಕಾರ ಮುಂದಾಗಿತ್ತು. ಈ ಸಂಬಂಧ ಕಳೆದ ಮೇ.28 ರಂದು ಸಮಾರಂಭವನ್ನೂ ಆಯೋಜಿಸಿತ್ತು.
ಆದರೆ, ಸರ್ಕಾರದ ನಿರ್ಣಯವನ್ನು ತೀವ್ರವಾಗಿ ಟೀಕಿಸಿದ್ದ ವಿರೋಧ ಪಕ್ಷಗಳು ಭಾರತದ ಸ್ವಾತಂತ್ಯ್ರ ಹೋರಾಟಕ್ಕೆ ಸಾವರ್ಕರ್ ಕೊಡುಗೆ ಏನು? ಆತ ಸ್ವಾತಂತ್ಯ್ರಕ್ಕಾಗಿ ಹೋರಾಡಿಲ್ಲ. ಬದಲಾಗಿ ಬ್ರಿಟೀಷರಿಗೆ ಕ್ಷಮಾಪಣಾ ಪತ್ರ ಬರೆದು ಕರಿನೀರಿನ ಶಿಕ್ಷೆಯಿಂದ ಪಾರಾಗಿದ್ದವರು. ಅಂತವರ ಹೆಸರನ್ನು ಕರ್ನಾಟಕದಲ್ಲಿಡುವ ಅಗತ್ಯ ಇಲ್ಲ. ಅಲ್ಲದೆ, ಕನಾಟಕದಲ್ಲಿ ಕನ್ನಡಿಗರ ಹೆಸರನ್ನೇ ಇಡಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷಗಳು ತೀವ್ರವಾಗಿ ಪ್ರತಿಭಟಿಸಿದ್ದವು. ಇದು ರಾಜ್ಯಾದ್ಯಂತ ಚರ್ಚಾಸ್ಪದ ವಿಚಾರವಾಗಿ ಮಾರ್ಪಾಟಾಗಿತ್ತು. ಪರಿಣಾಮ ಆಡಳಿತರೂಢ ಬಿಜೆಪಿ ಸರ್ಕಾರ ಈ ಸಮಾರಂಭವನ್ನೇ ರದ್ದು ಮಾಡಿತ್ತು.

ಆದರೆ, ಕೊನೆಗೂ ಮಂಗಳವಾರ ಬಿಬಿಎಂಪಿ ಪಾಲಿಕೆ ಸಭೆ ಸರ್ವಾನುಮತದಿಂದ ನಿರ್ಣಯ ತೆಗೆದುಕೊಳ್ಳುವ ಮೂಲಕ ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡಲು ತೀರ್ಮಾನಿಸಿದೆ ಎನ್ನಲಾಗುತ್ತಿದೆ. ಅಲ್ಲದೆ, ಪಾಲಿಕೆ ಈ ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸಲಿದ್ದು, ಸರ್ಕಾರವು ಪಾಲಿಕೆಯ ಪ್ರಸ್ತಾವನೆಯನ್ನು ಪರಿಶೀಲಿಸಿ ಅಂತಿಮ ಆದೇಶ ಹೊರಡಿಸಲಿದೆ ಎಂದೂ ಹೇಳಲಾಗುತ್ತಿದೆ.

ಪಾಲಿಕೆ ವ್ಯಾಪಿಯ ಯಾವುದೇ ಸರ್ಕಾರಿ ಕಾಮಗಾರಿಗಳಿಗೆ ಹೆಸೆರಿಡುವ ಮುನ್ನ ಬಿಬಿಎಂಪಿಯಲ್ಲಿ ಸಭೆ ನಡೆಸಬೇಕು. ಆದರೆ, ಪಾಲಿಕೆಯಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳದೆ ಸಾವರ್ಕರ್ ಹೆಸರಿಡಲು ಒಪ್ಪಿಗೆ ನೀಡಲಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಆದರೆ, ಇದು ನಿಜವೇ ಎಂದಾದಲ್ಲಿ ಇದೊಂದು ಕಾನೂನು ಬಾಹಿರವಾದ ನಿರ್ಣಯ ಮತ್ತು ರಾಜ್ಯ ಬಿಜೆಪಿ ಸರ್ಕಾರ ಕಾನೂನು ಬಾಹಿರವಾಗಿಯೇ ಸಾವರ್ಕರ್ ಹೆಸರಿಡಲು ಮುಂದಾಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಈ ಕುರಿತು ನಾನುಗೌರಿ.ಕಾಂ ಬಿಬಿಎಂಪಿಯ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮತ್ತು ಸಾವರ್ಕರ್ ಹೆಸರಿಡಲು ವಿರೋಧ ವ್ಯಕ್ತಿಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಿದ್ದ ಕರ್ನಾಟಕ ರಣಧೀರ ಪಡೆಯ ಅಧ್ಯಕ್ಷ ಬಿ.ಹರೀಶ್ ಕುಮಾರ್ ಹಾಗೂ ಬೆಂಗಳೂರು ಮೇಯರ್ ಕೆ. ಗೌತಮ್ ಕುಮಾರ್ ಅವರನ್ನು ಮಾತಾಡಿಸಿತು.

ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಬಿ. ಹರೀಶ್ ಕುಮಾರ್, “ರಾಜ್ಯ ಸರ್ಕಾರ ಕನ್ನಡದ್ರೋಹಿ ಕೆಲಸಕ್ಕೆ ಮುಂದಾಗಿದೆ. ಟಿಪ್ಪು ಸುಲ್ತಾನ್ ವಿವಾದಾತ್ಮಕ ವ್ಯಕ್ತಿ ಎಂಬ ಏಕೈಕ ಕಾರಣಕ್ಕೆ ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನೇ ರದ್ದು ಮಾಡಿತ್ತು. ಹಾಗೆ ನೋಡಿದರೆ ಸಾವರ್ಕರ್ ಸಹ ವಿವಾದಾತ್ಮಕ ವ್ಯಕ್ತಿ. ಆದರೆ, ಅವರ ಹೆಸರನ್ನು ಮಾತ್ರ ಏಕೆ ಯಲಹಂಕ ಮೇಲ್ಸೇತುವೆಗೆ ನಾಮಕರಣ ಮಾಡಲಾಗುತ್ತಿದೆ?

ಕಳೆದ ತಿಂಗಳು ನಾವು ಈ ಕುರಿತು ರಸ್ತೆಗಿಳಿದು ಪ್ರತಿಭಟಿಸಿದ್ದೆವು. ಈ ವೇಳೆ ಕನ್ನಡ ಹೋರಾಟಗಾರರ ಕಣ್ಣೊರೆಸುವ ಸಲುವಾಗಿ ಕಾರ್ಯಕ್ರಮವನ್ನು ರದ್ದು ಮಾಡಿದ್ದ ರಾಜ್ಯ ಸರ್ಕಾರ ಇದೀಗ ಸದ್ದಿಲ್ಲದೆ ಮತ್ತೆ ಸಾವರ್ಕರ್ ಹೆಸರನ್ನು ನಾಮಕರಣ ಮಾಡಲು ಮುಂದಾಗಿದೆ. ರಾಜ್ಯ ಸರ್ಕಾರದ ಇಂತಹ ನಿರ್ಧಾರವನ್ನು ಕನ್ನಡಿಗರು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕನ್ನಡಿಗರ ಹೆಸರನ್ನೇ ನಾಮಕರಣ ಮಾಡಬೇಕು. ಹೀಗಾಗಿ ನಾವು ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಹೈಕೊರ್ಟ್ ಮೊರೆ ಹೋಗುತ್ತೇವೆ” ಎಂದು ತಿಳಿಸಿದ್ಧಾರೆ.

ಇನ್ನೂ ಇದೇ ವಿಚಾರವಾಗಿ ಸ್ಪಷ್ಟನೆ ನೀಡಿರುವ ಬೆಂಗಳೂರು ಮೇಯರ್ ಕೆ. ಗೌತಮ್ ಕುಮಾರ್, “ಮೇ.28 ರಂದು ಸರ್ಕಾರ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮವನ್ನು ರದ್ದು ಮಾಡಿತ್ತೇ ಹೊರತು, ಸಾವರ್ಕರ್ ಹೆಸರಿಡುವ ಪ್ರಕ್ರಿಯೆಗಳು ಜಾರಿಯಲ್ಲೇ ಇತ್ತು. ನಾವು ಪಾಲಿಕೆಯ ವತಿಯಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದೆವು. ಆದರೆ, ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡಲು ಕೇವಲ ಒಂದೇ ಒಂದು ಆಕ್ಷೇಪಣೆ ಮಾತ್ರ ಬಂದಿತ್ತು.

ಹೀಗಾಗಿ ಮಂಗಳವಾರ ಪಾಲಿಕೆ ಸದಸ್ಯರ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡಲು ಎಲ್ಲರೂ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ. ಪರಿಣಾಮ ಪಾಲಿಕೆಯಿಂದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಮುಂದಿನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ನಿರ್ವಹಿಸಲಿದೆ” ಎಂದಿದ್ದಾರೆ.

ಆದರೆ, ಪಾಲಿಕೆಯಲ್ಲಿ ಎಲ್ಲಾ ಸದಸ್ಯರು ಸಾವರ್ಕರ್ ಹೆಸರಿಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದು ನಿಜವೇ? ಎಂದು ತಿಳಿದುಕೊಳ್ಳುವ ಸಲುವಾಗಿ ನಾನುಗೌರಿ.ಕಾಮ್ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತು. ಆದರೆ, ಅವರು ನಮ್ಮ ಕರೆಯನ್ನು ಸ್ವೀಕರಿಸಲಿಲ್ಲ. (ಇವರ ಸಂಪರ್ಕ ಸಾಧ್ಯವಾದ ನಂತರ ಮತ್ತಷ್ಟು ಅಪ್ಡೇಟ್‌ ಮಾಡಲಾಗುವುದು)

ಒಟ್ಟಾರೆ ಯಲಹಂಕ ಮೇಲ್ಸೇತುವೆಗೆ ಶತಾಯಗತಾಯ ಸಾವರ್ಕರ್ ಹೆಸರನ್ನು ಇಡಲೇಬೇಕು ಎಂಬುದು ರಾಜ್ಯ ಸರ್ಕಾರದ ಪಾಲಿಗೆ ಪ್ರತಿಷ್ಠೆಯ ವಿಚಾರವಾಗಿದೆ. ಆದರೆ, ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ಪಕ್ಷಗಳು ಜಾಣಮೌನ ಸಾಧಿಸಿದರೂ ಸಹ ಕನ್ನಡಪರ ಹೋರಾಟಗಾರರು ಇದನ್ನು ಒಪ್ಪುವ ಮನಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಈ ವಿವಾದ ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.


ಇದನ್ನು ಓದಿ: ಸಿದ್ದರಾಮಯ್ಯ ವಿಶೇಷ ಸಂದರ್ಶನ: ನಾನು ಸಿಎಂ ಆಗಿದ್ದಿದ್ದರೆ ಈ ಜನದ್ರೋಹಿ ಸುಗ್ರೀವಾಜ್ಞೆ ತರಲ್ಲ ಅಂತ ಕೇಂದ್ರದ ಮುಖಕ್ಕೆ ಹೇಳ್ತಿದ್ದೆ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಪಿ ಚುನಾವಣೆ: ಮಹಿಳೆಯರಿಗೆ ಕಾಂಗ್ರೆಸ್‌ ಆದ್ಯತೆ; ಉಳಿದ ಪಕ್ಷಗಳ ಕಥೆಯೇನು..?

0
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಬಿಜೆಪಿ ನೇತೃತ್ವದ ಎನ್‌ಡಿಎ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷಗಳ ನಡುವಿನ ಸ್ಪರ್ಧೆಯಾಗಿದೆ. ಮಾಯಾವತಿಯವರ ಬಿಎಸ್‌ಪಿ ಪಕ್ಷ ಈ ಬಾರಿ ಇದ್ದು ಇಲ್ಲದಂತಾಗಿದೆ. ಬಿಜೆಪಿಯ...
Wordpress Social Share Plugin powered by Ultimatelysocial