Homeಮುಖಪುಟಸಿದ್ದರಾಮಯ್ಯ ವಿಶೇಷ ಸಂದರ್ಶನ: ನಾನು ಸಿಎಂ ಆಗಿದ್ದಿದ್ದರೆ ಈ ಜನದ್ರೋಹಿ ಸುಗ್ರೀವಾಜ್ಞೆ ತರಲ್ಲ ಅಂತ ಕೇಂದ್ರದ...

ಸಿದ್ದರಾಮಯ್ಯ ವಿಶೇಷ ಸಂದರ್ಶನ: ನಾನು ಸಿಎಂ ಆಗಿದ್ದಿದ್ದರೆ ಈ ಜನದ್ರೋಹಿ ಸುಗ್ರೀವಾಜ್ಞೆ ತರಲ್ಲ ಅಂತ ಕೇಂದ್ರದ ಮುಖಕ್ಕೆ ಹೇಳ್ತಿದ್ದೆ

ನಮ್ಮ ಪಕ್ಷ ನಿರಂತರವಾಗಿ ಜಾತ್ಯತೀತ ತತ್ವಗಳ ಪರವಾಗಿ ಇರುವ ಸೈದ್ಧಾಂತಿಕ ನಿಲುವಿನ ಪಕ್ಷ. ಎಲ್ಲಾ ಸಂದರ್ಭಗಳಲ್ಲೂ ಜಾತ್ಯತೀತತೆಯ ಪರವಾಗಿ ನಿಲ್ಲುವವರು. ನಮ್ಮ ಶಾಸಕರನ್ನು ದ್ರೋಹದಿಂದ ಖರೀದಿಸಿ ಜಾತ್ಯತೀತ ಸರ್ಕಾರವನ್ನು ಕೆಡವಿದ ದುಷ್ಟ ಕೀರ್ತಿ ಬಿ.ಜೆ.ಪಿ.ಗೆ ಸಲ್ಲುತ್ತದೆ.

- Advertisement -
- Advertisement -

ದೇಶ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವುದಲ್ಲದೇ, ಭಾರತದ ʼಅಭಿವೃದ್ಧಿ ಹೊಂದಿದʼ ರಾಜ್ಯಗಳಲ್ಲೊಂದಾದ ಕರ್ನಾಟಕವೂ ದುಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದ ಸುದೀರ್ಘ ಅವಧಿಯ ಹಣಕಾಸು ಸಚಿವರೂ ಆಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನಾನುಗೌರಿ.ಕಾಂ ಮಾತಾಡಿಸಿತು.

ವಿರೋಧ ಪಕ್ಷದ ನಾಯಕರಾಗಿರುವ ಅವರನ್ನು ವಿರೋಧ ಪಕ್ಷದ ಪಾತ್ರ ಮತ್ತು ಹೊಸ ಕೆಪಿಸಿಸಿ ಅಧ್ಯಕ್ಷರ ಜೊತೆಗಿನ ಸಂಬಂಧದ ಕುರಿತೂ ಪ್ರಶ್ನಿಸಿದೆವು. ದೀರ್ಘವಾಗಿಯೇ ಉತ್ತರ ಕೊಟ್ಟಿರುವ ಸಿದ್ದರಾಮಯ್ಯನವರ ವಿಶೇಷ ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ನಾನುಗೌರಿ.ಕಾಂ: ಕೊರೋನಾ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸಿರುವ ನೀತಿಯ ಬಗ್ಗೆ ನೀವು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದೀರಿ. ಆದರೆ ಅದರಲ್ಲಿನ ಅತ್ಯಂತ ಪ್ರಮುಖ ಸಮಸ್ಯೆ ಏನು ಅಂತ ನಿಮ್ಮ ಅಭಿಪ್ರಾಯ?

ಸಿದ್ದರಾಮಯ್ಯ: ಕೊರೋನಾ ಸಂಕಷ್ಟವನ್ನು ನಿಭಾಯಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಸಂಪೂರ್ಣ ವಿಫಲವಾಗಿವೆ. ಜನವರಿ 30ಕ್ಕೆ ದೇಶದಲ್ಲಿ ಮೊದಲ ಕೋವಿಡ್-19 ಪ್ರಕರಣ ದಾಖಲಾಯಿತು. ಫೆಬ್ರವರಿ ತಿಂಗಳ 2ನೇ ವಾರದಲ್ಲಿ ರಾಹುಲ್ ಗಾಂಧಿಯವರು ಅಂತರರಾಷ್ಟ್ರೀಯ ವಿಮಾನಗಳನ್ನು ನಿಲ್ಲಿಸುವ ಕುರಿತು ಮತ್ತು ಚೀನಾ ಅನುಸರಿಸುತ್ತಿರುವ ಮಾದರಿಗಳನ್ನು ಪರಿಶೀಲಿಸಿ ತುರ್ತಾಗಿ ಕ್ರಮವಹಿಸಬೇಕೆಂದು ಒತ್ತಾಯಿಸಿದರು. ಆದರೆ ಮಾರ್ಚ್-24 ರವರೆಗೆ ಕೇಂದ್ರ ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಮಾರ್ಚ್-24ರ ರಾತ್ರಿ 8 ಗಂಟೆಗೆ ಪ್ರಧಾನಮಂತ್ರಿಗಳು ದೇಶವನ್ನು ಉದ್ದೇಶಿಸಿ ಮಾತನಾಡಿ ರಾತ್ರಿ 12 ಗಂಟೆಯಿಂದ ಲಾಕ್‌ಡೌನ್ ಘೋಷಿಸಲಾಗಿದೆ ಎಂಬ ನಿರ್ಧಾರವನ್ನು ಪ್ರಕಟಿಸಿದರು. ದೇಶ ಎಂದರೆ ಜನ. ಜನರಿಗೆ ಹೊಟ್ಟೆ ಬಟ್ಟೆಯ ಚಿಂತೆ ಇರುತ್ತದೆ. ಬದುಕಿನ ಯೋಚನೆಯಿರುತ್ತದೆ. ತಾವು ಹುಟ್ಟಿದ ಊರುಗಳ ಕುರಿತು ಸೆಳೆತವಿರುತ್ತದೆ ಎಂದು ಮಾನವೀಯವಾಗಿ ಯೋಚಿಸುವ ರಾಜಕೀಯ ಮುತ್ಸದ್ದಿಯಂತೆ ಪ್ರಧಾನಮಂತ್ರಿಗಳು ನಡೆದುಕೊಳ್ಳಲಿಲ್ಲ. ಕೋಟ್ಯಾಂತರ ಕಾರ್ಮಿಕರು ಅನ್ನ, ನೀರು ಇಲ್ಲದೇ ಪಡಬಾರದ ಕಷ್ಟಪಟ್ಟರು. ಒಂದು ಅಂದಾಜಿನಂತೆ ಸುಮಾರು 560 ಜನ ಅಪಘಾತಗಳು, ಹಸಿವು ಮುಂತಾದ ಕಾರಣಗಳಿಂದ ಮರಣ ಹೊಂದಿದರು. ಇದಕ್ಕೆಲ್ಲಾ ಯಾರು ಹೊಣೆ?

ನೋಟ್‌ಬ್ಯಾನ್ ಸಂದರ್ಭದಲ್ಲೂ ಜನ ಹೀಗೆ ಸಂಕಷ್ಟವನ್ನು ಅನುಭವಿಸಿ ನೂರಾರು ಜನರು ಮಡಿದರು. ಹಿಂದೆ ನಡೆದ ಉದಾಹರಣೆಗಳಿಂದಲೂ ಮೋದಿಯವರು ಪಾಠ ಕಲಿಯುತ್ತಿಲ್ಲ. ಅವರ 56 ಇಂಚಿನ ಎದೆಯಲ್ಲಿ ಒಂದೇ ಒಂದು ಹನಿ ಮನುಷ್ಯತ್ವದ ತೇವ ಇದೆಯೇ ಎಂಬ ಪ್ರಶ್ನೆ ಹುಟ್ಟುತ್ತಿದೆ. ಅಂತರರಾಷ್ಟ್ರೀಯ ವಿಮಾನಗಳನ್ನು ನಿಲ್ಲಿಸಲಿಲ್ಲ. ತಬ್ಲಿಘಿ ಕಾರ್ಯಕ್ರಮ ನಡೆಯಲು ಅನುಮತಿ ನೀಡಲಾಯಿತು. ನಮಸ್ತೆ ಟ್ರಂಪ್ ಕಾರ್ಯಕ್ರಮವನ್ನು ಮೋದಿಯವರೇ ಮುಂದೆ ನಿಂತು ನಡೆಸಿಕೊಟ್ಟರು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ ಸಮಾರಂಭಗಳನ್ನು ನಡೆಸಿ ಪ್ರಮಾಣವಚನ ಸ್ವೀಕರಿಸಿದರು. ಈ ಎಲ್ಲಾ ಕಾರಣಗಳಿಂದ ಕೊರೋನಾ ಹರಡುತ್ತಾ ಹೋಯಿತು.

ಲಾಕ್‌ಡೌನ್ ಅವಧಿಯಲ್ಲಿ ರಚನಾತ್ಮಕ ಕೆಲಸಗಳನ್ನು ಮಾಡಲಿಲ್ಲ. ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ. ಕಡೆಗೆ ಚಪ್ಪಾಳೆ ತಟ್ಟಿ, ಜಾಗಟೆ ಬಡಿದು, ದೀಪ ಬೆಳಗಿಸಿ ಕೊರೋನಾ ಹೋಯಿತೆಂದು ಮೋದಿಯವರು ಸಂಭ್ರಮಪಟ್ಟರು. ಅದು ಹೋಗಲಿಲ್ಲ. ಕಡೆಗೆ ಸರ್ಕಾರದ ವೈಫಲ್ಯವನ್ನು ತಬ್ಲಿಘಿಗಳ ತಲೆಗೆ ಕಟ್ಟಲಾಯಿತು. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ತಬ್ಲಿಘಿಗಳೇ ಸೋಂಕನ್ನು ಹರಡಿದರೇ ಎಂದು ಪ್ರಜ್ಞಾವಂತರು ಕೇಳಿದರೆ ಪ್ರಧಾನ ಮಂತ್ರಿಗಳು ಬಾಯಿಬಿಡಲಿಲ್ಲ. ನಿರಂತರ ಸುದ್ದಿಯಲ್ಲಿದ್ದು ಆರ್ಭಟ ಮಾಡುತ್ತಿದ್ದ ಗೃಹ ಸಚಿವ ಅಮಿತ್ ಷಾರವರು ನಾಪತ್ತೆಯಾಗಿಬಿಟ್ಟರು. ಉಳಿದ ಸಚಿವರು ಯಾರೆಂಬುದೇ ಜನರಿಗೆ ಗೊತ್ತಿಲ್ಲ. ನಗರಗಳಲ್ಲಿ ಸೋಂಕು ಹೆಚ್ಚಾಯಿತು. ಕಡೆಗೆ ಲಾಕ್‌ಡೌನ್ ಸಡಿಲಿಸಿದರು. ಈಗ ನಗರಗಳಿಂದ ಗ್ರಾಮೀಣ ಪ್ರದೇಶಗಳಿಗೂ ಹಬ್ಬಿದೆ.

ಬಹುರಾಷ್ಟ್ರೀಯ ಕಂಪೆನಿಗಳು, ಸಿದ್ದರಾಮಯ್ಯ

 

ಆತ್ಮನಿರ್ಭರ ಭಾರತ ಜನರ ಕಣ್ಣಿಗೆ ಬರ್ಭರವಾಗಿ ಕಾಣುತ್ತಿದೆ. ಹತ್ತತ್ತಿರ 21 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜು ಎಂದು ಘೋಷಣೆ ಮಾಡಿದರೂ ಅದರಲ್ಲಿ ಜನರಿಗೆ ನೇರವಾಗಿ ಸಿಗುವಂತಿರುವುದು ಜಿಡಿಪಿಯ ಶೇ.1ರಷ್ಟು ಮಾತ್ರ. ಅದೇ ಯುರೋಪ್ ಮತ್ತು ಅಮೇರಿಕಾ ದೇಶಗಳು ಶೇ.25ರಿಂದ 35ರವರೆಗೆ ಜನರಿಗೆ ನೇರವಾಗಿ ಹಣ ತಲುಪಿಸುವ ವ್ಯವಸ್ಥೆ ಮಾಡಿದರು. ಜನರ ಕೈಯಲ್ಲಿ ಹಣ ಇದ್ದರೆ ಕೊಳ್ಳುವ ಶಕ್ತಿ ಹೆಚ್ಚಾಗಿ ದೇಶದ ಆರ್ಥಿಕತೆ ಚೈತನ್ಯ ಪಡೆದುಕೊಳ್ಳುತ್ತದೆ ಎಂಬ ಕನಿಷ್ಠ ಜ್ಞಾನವು ಇವರಿಗೆ ಇಲ್ಲದೇ ಹೋಯಿತಲ್ಲ. ಯಾವ ದೃಷ್ಟಿಯಿಂದ ನೋಡಿದರೂ ಕೇಂದ್ರ ಸರ್ಕಾರದ ನೀತಿಗಳು ಜನಪರವಾಗಿಲ್ಲ.

ನಾನುಗೌರಿ.ಕಾಂ: ವಿರೋಧ ಪಕ್ಷವಾಗಿ ಕಾಂಗ್ರೆಸ್‌ನ ಪ್ರತಿಕ್ರಿಯೆಯು ಹೇಳಿಕೆಗಳನ್ನು ನೀಡುವುದಕ್ಕೆ ಸೀಮಿತವಾಗಿತ್ತು. ಉಚಿತ ರೈಲಿನ ವಿಚಾರದಲ್ಲಿ ಕನಿಷ್ಠ ಫಾಲೋಅಪ್ ಇರಲಿಲ್ಲ. ಇದಕ್ಕಿಂತ ಹೆಚ್ಚಿನದ್ದನ್ನು ಕ್ರಿಯಾಶೀಲ ವಿರೋಧ ಪಕ್ಷದಿಂದ ನಿರೀಕ್ಷಿಸಬಾರದೇ?

ಸಿದ್ದರಾಮಯ್ಯ: ವಿರೋಧಪಕ್ಷವಾಗಿ ನಾವು ಸಮರ್ಪಕ ಕೆಲಸ ಮಾಡುತ್ತಿದ್ದೇವೆ. ಆಹಾರ ಮತ್ತು ಆಹಾರ ಧಾನ್ಯಗಳ ಕಿಟ್‌ಗಳನ್ನು ಜನರ ಜೊತೆ ಸೇರಿ ನಮ್ಮ ಕಾರ್ಯಕರ್ತರುಗಳು, ಶಾಸಕರುಗಳು ಹಂಚಿ ಜನರ ಸಂಕಷ್ಟಗಳಿಗೆ ಮಿಡಿದಿದ್ದಾರೆ. ನೂರಾರು ಕೋಟಿಯ ಹಣ್ಣು, ತರಕಾರಿಗಳನ್ನು ನಮ್ಮ ಪಕ್ಷದ ಶಾಸಕರು, ಕಾರ್ಯಕರ್ತರುಗಳು ರೈತರಿಂದ ಖರೀದಿಸಿ ಜನರಿಗೆ ಹಂಚಿದ್ದಾರೆ. ವಿರೋಧ ಪಕ್ಷವಾಗಿ ನಾವು ಮಾಡಬಹುದಾದ ಕೆಲಸವನ್ನೆಲ್ಲಾ ಮಾಡಿದ್ದೇವೆ. ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಲಾಯಿತು. ರಾಜ್ಯದ ವಿರೋಧ ಪಕ್ಷಗಳ ಜೊತೆ ಸಮಾಲೋಚನೆ ನಡೆಸಲಾಯಿತು. ವಿವಿಧ ಸಂಘಟನೆಗಳ ಮುಖಂಡರಗಳ ಜೊತೆ ಚರ್ಚಿಸಿದೆವು. ದೀರ್ಘವಾದ ಹಕ್ಕೊತ್ತಾಯಗಳನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು. 2-3 ಬಾರಿ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಾಯಿತು. ಯಾವ ಸಮಸ್ಯೆಗಳಿಗೂ ಸರ್ಕಾರ ಸರಿಯಾಗಿ ಸ್ಪಂದಿಸಲಿಲ್ಲ. ಪುಡಿಗಾಸಿನ ಪ್ಯಾಕೇಜನ್ನು ನೀಡಿ ಕೈತೊಳೆದುಕೊಂಡಿತು. ಘೋಷಿಸಿದ ಪ್ಯಾಕೇಜುಗಳನ್ನು ಸಹ ಜನರಿಗೆ ತಲುಪಿಸಿಲ್ಲ. ಕಟ್ಟಡ ಕಾರ್ಮಿಕರ ವಿಚಾರದಲ್ಲಿ ಅವರದೇ ಹಣವನ್ನು ಸುಮಾರು 750 ಕೋಟಿ ವಿನಿಯೋಗಿಸಿದ್ದಾರೆ. ಇದನ್ನು ಬಿಟ್ಟರೆ ಉಳಿದಂತೆ ಯಾವುದೇ ಉಪಯೋಗವಾಗಿಲ್ಲ. ಸರ್ಕಾರದ ನೀತಿಗಳನ್ನು ವಿರೋಧಿಸಿ ಧರಣಿ, ಪ್ರತಿಭಟನೆಗಳನ್ನು ನಡೆಸಲಾಯಿತು. ಕಾರ್ಮಿಕರ ವಿಚಾರದಲ್ಲಿ ನಮ್ಮ ಪಕ್ಷದಿಂದ ಹಣ ನೀಡುತ್ತೇವೆ ಕಾರ್ಮಿಕರ ಸಂಕಷ್ಟಕ್ಕೆ ನೆರವಾಗಿ ಎಂದು ಬೀದಿಗಿಳಿದ ನಂತರ ಸರ್ಕಾರ ಎಚ್ಚೆತ್ತುಕೊಂಡಿತು. ಕಾರ್ಮಿಕರು ಅವರವರ ಊರುಗಳಿಗೆ ತಲುಪಲು ನಮ್ಮ ಕಾರ್ಯಕರ್ತರು ಸಾಕಷ್ಟು ಕೆಲಸ ಮಾಡಿದ್ದಾರೆ.

ಹೆಚ್ಚು ಜನರನ್ನು ಸೇರಿಸಿ ಪ್ರತಿಭಟನೆ ಮಾಡುವುದಕ್ಕೆ ನಿರ್ಬಂಧ ಇರುವುದರಿಂದ ಜನರ ಭಾವನೆಗಳಿಗೆ ಬೆಲೆಕೊಟ್ಟು ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ಮಾಡಲಾಗಿಲ್ಲ. ಆದರೆ ಸರ್ಕಾರ ಇದೇ ರೀತಿಯ ಧಾರ್ಷ್ಟ್ಯ ಮನೋಭಾವ, ನಿರ್ಲಕ್ಷ್ಯ ಧೋರಣೆ ತೋರಿಸಿದರೆ ನಾವು ಸರ್ಕಾರದ ನೀತಿಗಳ, ವರ್ತನೆಗಳ ವಿರುದ್ಧ ಬೀದಿಗಿಳಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

ನಾನುಗೌರಿ.ಕಾಂ: ನೀವು ಮತ್ತು ಕೆಪಿಸಿಸಿ ಅಧ್ಯಕ್ಷರು ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ್ದೀರಿ. ಆದರೆ, ಕೇಂದ್ರ ಸರ್ಕಾರದಿಂದ ಆರ್ಥಿಕ ಅನುದಾನವೂ ಇಲ್ಲದೇ ರಾಜ್ಯ ಸರ್ಕಾರವು ಇದಕ್ಕಿಂತ ಹೆಚ್ಚಿನದ್ದನ್ನು ಮಾಡುವ ಸಾಧ್ಯತೆ ಇತ್ತೇ?

ಸಿದ್ದರಾಮಯ್ಯ: ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗ ಒಂದು ಕೋಟಿ ಕುಟುಂಬಗಳಿಗೆ ತಲಾ ರೂ.10,000ಗಳನ್ನು ಒಂದು ಸಾರಿ ನೀಡಿ ಎಂದು ಒತ್ತಾಯಿಸಿದ್ದೆವು. ಅನಂತರ ತಿಂಗಳ ಅಗತ್ಯವನ್ನು ನೋಡಿಕೊಂಡು ಜನರ ನೆರವಿಗೆ ನಿಲ್ಲಲೂ ಸಹ ಒತ್ತಾಯಿಸಿದ್ದೆವು. ಈಗಲೂ ನಮ್ಮ ಒತ್ತಾಯ ಅದೇ ಇದೆ. ಇದರಿಂದ ಸರ್ಕಾರಕ್ಕೆ 10,000ರಿಂದ 12,000 ಕೋಟಿ ರೂ. ಹಣ ಮಾತ್ರ ಖರ್ಚಾಗುತ್ತದೆ. ಇಷ್ಟು ಹಣವನ್ನು ಹೊಂದಿಸಲು ದೊಡ್ಡ ಕಷ್ಟವಲ್ಲ. ಮನೆಗೆ ಬೆಂಕಿ ಬಿದ್ದಾಗ ಆರಿಸಲು ನೀರಿಲ್ಲ ಎಂಬ ಅಸಹಾಯಕತೆಯನ್ನು ಸರ್ಕಾರಗಳು ತೋರಿಸಬಾರದು. ಕೇಂದ್ರ ಸರ್ಕಾರ ನಿರ್ಲಜ್ಜವಾಗಿದ್ದರೆ, ರಾಜ್ಯದ ಜನರ ಬಗ್ಗೆ ಕ್ರೂರ ಧೋರಣೆಯನ್ನು ಹೊಂದಿದ್ದರೆ ರಾಜ್ಯ ಸರ್ಕಾರವು ಅದೇ ಧೋರಣೆಯನ್ನು ವ್ಯಕ್ತಪಡಿಸಬಾರದಲ್ಲ? ರಾಜ್ಯದಲ್ಲಿ ಆದಾಯ ಸಂಗ್ರಹಣೆಗೆ ಹಲವು ದಾರಿಗಳಿವೆ. ಬಳಕೆಯಾಗದ ದೊಡ್ಡ ಮೊತ್ತದ ಹಣ ಎಲ್ಲ ಇಲಾಖೆಗಳಲ್ಲಿದೆ. ಸಾಲದ ನೆರವನ್ನು ಪಡೆಯಬಹುದಾಗಿತ್ತು. ಇತ್ತೀಚಿನ ಸಚಿವ ಸಂಪುಟ ಸಭೆಗಳಲ್ಲಿ ಸಾವಿರಾರು ಕೋಟಿಯ ರಸ್ತೆ, ಚರಂಡಿ ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಳ್ಳುವುದಾಗಿ ಘೋಷಣೆ ಮಾಡುತ್ತಿದೆ. ಇದನ್ನೆಲ್ಲ ಮುಂದೆ ಹಾಕಿ ಜನರ ಸಂಕಷ್ಟಕ್ಕೆ ನಿಲ್ಲಬಹುದಾಗಿತ್ತು.

ಕೇಂದ್ರ ರಾಜ್ಯ ಎರಡು ಕಡೆ ಒಂದೇ ಪಕ್ಷದ ಆಡಳಿತವಿದ್ದರೆ ಸ್ವರ್ಗ ಸೃಷ್ಟಿಯಾಗುತ್ತದೆ ಎಂದು ಜನರಿಗೆ ಟೋಪಿ ಹಾಕಿ ಅಧಿಕಾರಕ್ಕೆ ಬಂದವರಿವರು. ಪ್ರಧಾನ ಮಂತ್ರಿಗಳ ಬಳಿ ಜೋರು ಮಾಡಿ ಹಣ ತರಲಾಗದ ಹೇಡಿತನದ ವರ್ತನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಬಿ.ಜೆ.ಪಿ ಪಕ್ಷದಿಂದ ಆಯ್ಕೆಯಾದ ರಾಜ್ಯದ ಲೋಕಸಭಾ ಸದಸ್ಯರು ಒಬ್ಬರೂ ಸಹ ಪ್ರಧಾನಮಂತ್ರಿಗಳನ್ನು ಒತ್ತಾಯ ಮಾಡಿದ್ದನ್ನು ನಾನೊಂತು ಕಾಣೆ. ಯಡಿಯೂರಪ್ಪನವರ ಸರ್ಕಾರವಂತು ತೀರ ದೈನೇಸಿ ಸ್ಥಿತಿಗೆ ತಲುಪಿದೆ.

ನಾನುಗೌರಿ.ಕಾಂ: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನವು ಸೂಕ್ತವಾಗಿ ಸಿಗದೇ ಇರುವುದು ಎಲ್ಲಾ ಕಾಲದಿಂದಲೂ ಇದ್ದೇ ಇದೆ. ಆದರೆ ನರೇಂದ್ರ ಮೋದಿ ಸರ್ಕಾರದಲ್ಲಿ ಈ ವಿಚಾರದಲ್ಲಿ ಆದ ನಿರ್ದಿಷ್ಟ ಬೆಳವಣಿಗೆಗಳೇನು? ಯಾವ ಕ್ರಮಗಳ ಮೂಲಕ ಅವರು ವಿತ್ತೀಯ ಫೆಡರಲಿಸಂಗೆ ಧಕ್ಕೆ ತಂದಿದ್ದಾರೆ ಎಂದು ನಿಮಗನ್ನಿಸುತ್ತದೆ?

ಸಿದ್ದರಾಮಯ್ಯ: ಹಿಂದಿನ ಸರ್ಕಾರಗಳು ನಮ್ಮ ರಾಜ್ಯಕ್ಕೆ ಇಷ್ಟೊಂದು ಅನ್ಯಾಯ ಮಾಡಿದ್ದಿಲ್ಲ. ಹಿಂದೆ ಮನಮೋಹನ್ ಸಿಂಗ್‌ರವರು ಪ್ರಧಾನಿಯಾಗಿದ್ದಾಗ ರಾಜ್ಯದಲ್ಲಿ ಪ್ರವಾಹ ಬಂತು. ಶೋಭಾ ಕರಂದ್ಲಾಜೆರವರು ಗ್ರಾಮೀಣ ಮಂತ್ರಿಯಾಗಿದ್ದರು. ನರೇಗಾ ಯೋಜನೆಯನ್ನು 150 ದಿನಗಳಿಗೆ ಏರಿಕೆ ಮಾಡುವಂತೆ ಕೋರಿದ್ದರು. ಕೇಂದ್ರ ಸರ್ಕಾರ ಕೂಡಲೇ ಒಪ್ಪಿಗೆ ಕೊಟ್ಟಿತು. ಇಂತಹ ಹಲವು ಉದಾಹರಣೆಗಳನ್ನು ಹೇಳಬಹುದು. ಆದರೆ ನರೇಂದ್ರ ಮೋದಿಯವರ ಸರ್ಕಾರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯಗಳ ಆರ್ಥಿಕ ಚೈತನ್ಯವನ್ನು ಸಂಪೂರ್ಣ ದಮನಿಸಲು ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. ಅಪಾರ ಪ್ರಮಾಣದ ಸಂಪತ್ತು ನಮ್ಮ ರಾಜ್ಯದಿಂದ ಕೇಂದ್ರಕ್ಕೆ ತೆರಿಗೆಯ ರೂಪದಲ್ಲಿ ಹರಿದು ಹೋಗುತ್ತಿದೆ. ಕಳೆದ ವರ್ಷ ಪ್ರವಾಹದ ಸಂದರ್ಭದಲ್ಲಿ ರಾಜ್ಯಕ್ಕೆ ಸುಮಾರು ರೂ.1 ಲಕ್ಷ ಕೋಟಿಯಷ್ಟು ನಷ್ಟವಾಯಿತು. ಆದರೆ ಕೇಂದ್ರ ಸರ್ಕಾರ ಕೊಟ್ಟಿದ್ದು ಕೇವಲ ರೂ.1,652 ಕೋಟಿ ಮಾತ್ರ. 15ನೇ ಹಣಕಾಸಿನ ಆಯೋಗದ ಶಿಫಾರಸ್ಸುಗಳಲ್ಲೂ ದೇಶದ ಎಲ್ಲಾ ರಾಜ್ಯಗಳಿಗಿಂತ ಹೆಚ್ಚಾಗಿ ನಮ್ಮ ರಾಜ್ಯಕ್ಕೆ ದೊಡ್ಡ ಅನ್ಯಾಯವಾಯಿತು. ಈ ಶಿಫಾರಸ್ಸಿನಿಂದ ಸುಮಾರು ರೂ.11,215 ಕೋಟಿ ರಾಜ್ಯಕ್ಕೆ ಬರಬೇಕಾದ ಹಣ ತಪ್ಪಿ ಹೋಯಿತು. ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತದೆ. ಸುಮಾರು ರೂ.5,495 ಕೋಟಿಗಳಷ್ಟು ಹಣವನ್ನು ಪರಿಹಾರವಾಗಿ ನಮ್ಮ ರಾಜ್ಯಕ್ಕೆ ನೀಡಬೇಕೆಂದು ಆಯೋಗ ಶಿಫಾರಸ್ಸು ಮಾಡಿದೆ. ಆದರೆ ಹಣಕಾಸು ಸಚಿವರು ಕರ್ನಾಟಕಕ್ಕೆ ನೀಡುವ ಅಗತ್ಯವಿಲ್ಲವೆಂದು ನಿರಾಕರಿಸಿ ರಾಜ್ಯಕ್ಕೆ ದೊಡ್ಡ ದ್ರೋಹ ಮಾಡಿದ್ದಾರೆ.

ಕೃಷಿ ಉತ್ಪನ್ನಗಳ ಮಾರುಕಟ್ಟೆಯಿಂದ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಸಣ್ಣ ಮಟ್ಟದ ನೆಮ್ಮದಿ ಉಂಟಾಗಿತ್ತು. ಅಲ್ಲಿ ಸಂಗ್ರಹವಾಗುವ ಶುಲ್ಕದಿಂದ ಮಾರುಕಟ್ಟೆಗಳು ಚೆನ್ನಾಗಿ ನಡೆಯುತ್ತಿದ್ದವು. ಸರ್ಕಾರಕ್ಕೂ ತೆರಿಗೆ ತುಂಬುತ್ತಿದ್ದವು. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ತಲೆಯ ಮೇಲೆ ಕೂತು ಈ ತೆರಿಗೆಗೂ ಎಳ್ಳು ನೀರು ಬಿಡುತ್ತಿದೆ. ಹಾಗಾಗಿ ರಾಜ್ಯದ ತೆರಿಗೆ ಅಧಿಕಾರವನ್ನು ನಿರಂತರವಾಗಿ ಕೇಂದ್ರವು ಕುಗ್ಗಿಸುತ್ತಿದೆ. ಇದರಿಂದ ರಾಷ್ಟ್ರದ ಆರ್ಥಿಕತೆ ದೊಡ್ಡ ಮಟ್ಟದ ಹೊಡೆತವನ್ನು ಅನುಭವಿಸಬೇಕಾಗತ್ತದೆ.

ನಾನುಗೌರಿ.ಕಾಂ: ಜಿಎಸ್‌ಟಿ ವಿಚಾರದಲ್ಲಿ, ಅದನ್ನು ಸರಿಯಾಗಿ ಅನುಷ್ಠಾನಕ್ಕೆ ತರಲಿಲ್ಲ ಎಂಬುದಷ್ಟೇ ಕಾಂಗ್ರೆಸ್‌ನ ತಕರಾರಲ್ಲವೇ? ಜನಸಾಮಾನ್ಯರಿಂದ ತೆರಿಗೆ ಹೀರುವುದನ್ನು ಹೆಚ್ಚು ಮಾಡಿದ್ದು ಅದರ ಪ್ರಮುಖ ಸಮಸ್ಯೆಯಲ್ಲವೇ? ಅದರ ಬಗ್ಗೆ ಕಾಂಗ್ರೆಸ್ ಪಕ್ಷವು ವಿರೋಧ ವ್ಯಕ್ತ ಮಾಡಿದ್ದು ಕಂಡು ಬರುವುದಿಲ್ಲ?

ಸಿದ್ದರಾಮಯ್ಯ: ಜಿ.ಎಸ್.ಟಿ.ಯ ಕ್ರೌರ್ಯವನ್ನು ಮನಗಂಡು ಅದನ್ನು ಸಂಪೂರ್ಣವಾಗಿ ವಿರೋಧಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದೇವೆ.

ನಾನುಗೌರಿ.ಕಾಂ: ಸಮ್ಮಿಶ್ರ ಸರ್ಕಾರವು ಬಿದ್ದು ಹೋಗಿದ್ದರ ಬಗ್ಗೆ ಈಗ ಹಿಂತಿರುಗಿ ನೋಡಿದಾಗ ಏನೆನ್ನಿಸುತ್ತದೆ? ಸರ್ಕಾರ ಹೋಗಿದ್ದೇ ಒಳ್ಳೆಯದಾ? ಅಥವಾ ಜಾತ್ಯತೀತ ಸರ್ಕಾರ ಇರಬೇಕಿತ್ತಾ?

ಸಿದ್ದರಾಮಯ್ಯ: ನಮ್ಮ ಪಕ್ಷ ನಿರಂತರವಾಗಿ ಜಾತ್ಯತೀತ ತತ್ವಗಳ ಪರವಾಗಿ ಇರುವ ಸೈದ್ಧಾಂತಿಕ ನಿಲುವಿನ ಪಕ್ಷ. ಎಲ್ಲಾ ಸಂದರ್ಭಗಳಲ್ಲೂ ಜಾತ್ಯತೀತತೆಯ ಪರವಾಗಿ ನಿಲ್ಲುವವರು. ನಮ್ಮ ಶಾಸಕರನ್ನು ದ್ರೋಹದಿಂದ ಖರೀದಿಸಿ ಜಾತ್ಯತೀತ ಸರ್ಕಾರವನ್ನು ಕೆಡವಿದ ದುಷ್ಟ ಕೀರ್ತಿ ಬಿ.ಜೆ.ಪಿ.ಗೆ ಸಲ್ಲುತ್ತದೆ.

ನಾನುಗೌರಿ.ಕಾಂ: ಲೋಕಸಭಾ ಚುನಾವಣೆಯಲ್ಲಿ ನೀವು ಕಾಯಾ ವಾಚಾ ಮನಸಾ ಮೈತ್ರಿ ಅಭ್ಯರ್ಥಿಗಳ ಪರ ಇದ್ದಿರೇ? ತುಮಕೂರು, ಮಂಡ್ಯ, ಕೋಲಾರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ನಿಮ್ಮ ಬೆಂಬಲಿಗರು ಮೈತ್ರಿ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದ್ದು ನಿಜವಲ್ಲವೇ?

ಸಿದ್ದರಾಮಯ್ಯ: ಶೇಕಡಾ ನೂರಕ್ಕೆ ನೂರರಷ್ಟು ನಾನು ಮತ್ತು ನಮ್ಮ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದೇವೆ. ಜನರನ್ನು ಭಾವನಾತ್ಮಕ ವಿಚಾರಗಳಿಂದ ಬಂಧಿಸಿ ಮತ ಹಾಕಿಸಿಕೊಂಡು ಬಿ.ಜೆ.ಪಿ.ಯು ದೇಶವನ್ನು ಸರ್ವನಾಶದ ಕಡೆಗೆ ಎಳೆದೊಯ್ಯುತ್ತಿದೆ.

ನಾನುಗೌರಿ.ಕಾಂ: ಕೆಪಿಸಿಸಿ ಅಧ್ಯಕ್ಷರು ಮತ್ತು ನಿಮ್ಮ ನಡುವೆ ಸಮನ್ವಯ ಚೆನ್ನಾಗಿರುವಂತೆ ತೋರುತ್ತಿದೆ. ಇದು ಮುಂದಿನ ಚುನಾವಣೆಯವರೆಗೂ ಹೀಗೆಯೇ ಮುಂದುವರೆಯುತ್ತದೆಯಾ?

ಸಿದ್ದರಾಮಯ್ಯ: ಕೋಮುವಾದಿ ಬಿ.ಜೆ.ಪಿಯನ್ನು ಅಧಿಕಾರದಿಂದ ಕಿತ್ತೆಸೆಯುವವರೆಗೂ ನಾವು ನಿರಂತರವಾಗಿ ಶ್ರಮಿಸುತ್ತೇವೆ. ನಮ್ಮ ಸಮನ್ವಯ ಹಿಂದೆಯೂ ಚೆನ್ನಾಗಿತ್ತು, ಮುಂದೆಯೂ ಚೆನ್ನಾಗಿರುತ್ತದೆ.

ನಾನುಗೌರಿ.ಕಾಂ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಮತ್ತು ಡಿ.ಕೆ.ಶಿವಕುಮಾರ್ ನಡುವೆ 2-3 ವರ್ಷಗಳ ಕಾಲ ಮುಖ್ಯಮಂತ್ರಿ ಅವಧಿ ಹಂಚಿಕೊಳ್ಳುವ ಒಪ್ಪಂದ ಆಗಿದೆಯೆಂತೆ ಹೌದೇ?

ಸಿದ್ದರಾಮಯ್ಯ: ಮುಖ್ಯಮಂತ್ರಿ ಹುದ್ದೆಯ ಪ್ರಶ್ನೆ ಈಗ ಉದ್ಭವವಾಗಿಲ್ಲ. ಮೊದಲು ಪಕ್ಷವನ್ನು ಸಶಕ್ತವಾಗಿ ಬೆಳೆಸಿ ಕೋಮುವಾದಿ, ಜನ ವಿರೋಧಿ ಪಕ್ಷದ ವಿರುದ್ಧ ಹೋರಾಡುವ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸುತ್ತೇವೆ.

ನಾನುಗೌರಿ.ಕಾಂ: ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂಸುಧಾರಣಾ ತಿದ್ದುಪಡಿ ಕಾಯ್ದೆ ಸೇರಿದಂತೆ ಈ ಸಂದರ್ಭದಲ್ಲಿ ಕೇಂದ್ರದ ಸೂಚನೆಯ ಮೇರೆಗೆ ರಾಜ್ಯ ಸರ್ಕಾರವು ಕೆಲವು ಬದಲಾವಣೆಗಳನ್ನು ತರುತ್ತಿದೆ. ನೀವೇ ಮುಖ್ಯಮಂತ್ರಿಯಾಗಿದ್ದರೆ ಈ ಬದಲಾವಣೆಗಳನ್ನು ತರುವುದಿಲ್ಲ ಎಂದು ನೀವು ಕೇಂದ್ರಕ್ಕೆ ಸ್ಪಷ್ಟವಾಗಿ ಹೇಳುತ್ತಿದ್ದಿರೇ?

ಸಿದ್ದರಾಮಯ್ಯ: ಖಂಡಿತ ನಮ್ಮ ರಾಜ್ಯದಲ್ಲಿ ನಾನು ಈ ಜನದ್ರೋಹಿ ಸುಗ್ರೀವಾಜ್ಞೆಗಳನ್ನು ತರಲು ಖಂಡಿತ ಒಪ್ಪುತ್ತಿರಲಿಲ್ಲ. ಕೇಂದ್ರದ ಮುಖದ ಮೇಲೆ ನಾಡಿನ ಹಿತಾಸಕ್ತಿಯನ್ನು ಬಲಿಕೊಡುವುದಿಲ್ಲ ಎಂದು ನೇರವಾಗಿ ಹೇಳುತ್ತಿದ್ದೆ.

ನಾನುಗೌರಿ.ಕಾಂ: ನರೇಂದ್ರ ಮೋದಿ, ಬಿ.ಜೆ.ಪಿ, ಆರೆಸ್ಸೆಸ್ ಕುರಿತಂತೆ ನಿಮಗಿರುವ ಸೈದ್ಧಾಂತಿಕ ಸ್ಪಷ್ಟತೆಯು ಕಾಂಗ್ರೆಸ್‌ನ ಉಳಿದವರಲ್ಲಿರಲಿ, ನಿಮ್ಮ ಬೆಂಬಲಿಗರಲ್ಲೇ ಇದ್ದಂತೆ ತೋರುವುದಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಮಾನ ಅರಿವು ಮೂಡಿಸುವಲ್ಲಿ ನೀವು ಪ್ರಜ್ಞಾಪೂರ್ವಕ ಕಾರ್ಯಕ್ರಮಗಳನ್ನು ಹಾಕಿಕೊಂಡಂತೆ ಕಾಣುವುದಿಲ್ಲವಲ್ಲಾ?

ಸಿದ್ದರಾಮಯ್ಯ: ಪಕ್ಷದ ಕಾರ್ಯಕರ್ತರಿಗೆ ಈ ಕುರಿತು ನಿರಂತರವಾಗಿ ತಿಳುವಳಿಕೆ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಕೋಮುವಾದ ಎನ್ನುವುದನ್ನು ವಿರೋಧಿಸಲು ಆಳವಾದ ತಿಳುವಳಿಕೆಯ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಕಾರ್ಯಾಗಾರಗಳನ್ನು, ತರಬೇತಿ ಶಿಬಿರಗಳನ್ನು ಏರ್ಪಡಿಸುವ ಉದ್ದೇಶ ಇದೆ.

ನಾನುಗೌರಿ.ಕಾಂ: ನೀವು ಬಿಜೆಪಿಯನ್ನು ಸ್ಪಷ್ಟವಾಗಿ ವಿರೋಧಿಸುತ್ತೀರಿ, ಆದರೆ ಯಡಿಯೂರಪ್ಪನವರ ವಿಚಾರದಲ್ಲಿ ಸಾಫ್ಟ್ ಇದ್ದಂತೆ ಕಾಣುತ್ತದೆ. ಇದು ನಿಜವೇ?

ಸಿದ್ದರಾಮಯ್ಯ: ಯಡಿಯೂರಪ್ಪ ಬೆನ್ನೆಲುಬಿಲ್ಲದ ದುರ್ಬಲ ಮುಖ್ಯಮಂತ್ರಿ ಎಂದು ನಿರಂತರವಾಗಿ ಹೇಳುತ್ತಿದ್ದೇನೆ. ಸರ್ಕಾರ ದುರ್ಮಾರ್ಗದಲ್ಲಿ ಅಧಿಕಾರ ನಡೆಸುತ್ತಿದೆ. ಜನರ ದ್ರೋಹಿಯಾಗಿ ಕೆಲಸ ಮಾಡುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ದುರ್ಬಲ ಮುಖ್ಯಮಂತ್ರಿಯಾದ ಯಡಿಯೂರಪ್ಪನವರ ವಿಚಾರದಲ್ಲಿ ಸಾಫ್ಟ್ ಕಾರ್ನರ್ ನೀತಿ ಅನುಸರಿಸುವುದು ಸಾಧ್ಯವೇ ಇಲ್ಲ.

ನಾನುಗೌರಿ.ಕಾಂ: ಕೊರೋನೋತ್ತರ ಕಾಲಘಟ್ಟದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಏನಾಗಬಹುದು? ಸರ್ಕಾರವು ಏನು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನೀವು ನಿರೀಕ್ಷಿಸುತ್ತೀರಿ?

ಸಿದ್ದರಾಮಯ್ಯ: ಮುಂದಿನ ದಿನಗಳಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಪ್ರಪಾತದತ್ತ ಸಾಗುತ್ತದೆ. ಜನರ ಬಳಿ ಹಣ ಇಲ್ಲ. ಹಾಗಾಗಿ ಕೊಂಡುಕೊಳ್ಳುವ ಶಕ್ತಿಯೂ ಇಲ್ಲ. ಹೊಟ್ಟೆ ಪಾಡನ್ನು ನೋಡಿಕೊಳ್ಳುವುದೇ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಬೇಡಿಕೆ ಇಲ್ಲದಿದ್ದರೆ ಉತ್ಪಾದನೆಯು ಕುಸಿಯುತ್ತದೆ. ಉತ್ಪಾದನೆ ಕುಸಿದರೆ ನಿರುದ್ಯೋಗ ಸೃಷ್ಟಿಯಾಗುತ್ತದೆ. ಇದರಿಂದ ದೇಶದ ಆರ್ಥಿಕತೆ ಚೇತರಿಸಿಕೊಳ್ಳಲಾಗದಷ್ಟು ಕುಸಿದು ಹೋಗುತ್ತದೆ. ಆದುದರಿಂದ, ಅಮರ್ತ್ಯಸೇನ್, ಅಭಿಜಿತ್ ಬ್ಯಾನರ್ಜಿ ಮುಂತಾದವರು ದೇಶದ ಶೇ.೬೦ ರಷ್ಟು ಜನರ ಜೇಬಿಗೆ ದುಡ್ಡು ಹಾಕಿ ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಪಬ್ಲಿಕ್ ಇಂಟಲೆಕ್ಚ್ಯುವಲ್‌ಗಳ ಮಾತನ್ನು ಕೇಳಿ ಬಿ.ಜೆ.ಪಿ.ಗೆ ಅಭ್ಯಾಸವೇ ಇಲ್ಲ. ಇಂಟಲೆಕ್ಚ್ಯುವಲ್‌ಗಳ ವಿದ್ವತ್ತನ್ನು ಅವಮಾನಿಸಿ, ಸಾಧ್ಯವಾದರೆ ಅವರನ್ನು ಜೈಲಿಗೆ ತಳ್ಳಿ ವಿಮರ್ಶೆ, ಟೀಕೆಗಳನ್ನು ಇಲ್ಲವಾಗಿಸಿಕೊಳ್ಳಲು ಪ್ರಯತ್ನಿಸುತ್ತದೆ. ಇದು ತಪ್ಪಬೇಕು. ನುರಿತ ಜನಪರ ವಿದ್ವಾಂಸರ ಮಾತುಗಳನ್ನು ಮೋದಿಯವರು ಕೇಳಬೇಕು. ಜನರಲ್ಲಿ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಬೇಕು. ಈಗಾಗಲೇ ಉತ್ಪಾದಕರು, ಶ್ರಮಿಕರು ಮಾಡಿಕೊಳ್ಳುತ್ತಿರುವ ಆತ್ಮಹತ್ಯೆ ಪ್ರಕರಣಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಬಹುದು. ಇದು ತಪ್ಪಬೇಕು.

ನಾನುಗೌರಿ.ಕಾಂ: ದೇಶದಲ್ಲಿ ಹಿಂದೂ-ಮುಸ್ಲಿಮರ ನಡುವೆ ಧ್ರುವೀಕರಣ ಆಗುತ್ತಿರುವುದಂತೂ ನಿಜ. ಸಾಮಾನ್ಯ ಜನರೂ ಸಹಾ ಅಸಹನೆ-ದ್ವೇಷ ಬೆಳೆಸಿಕೊಳ್ಳುತ್ತಿದ್ದಾರೆ. ಇದನ್ನು ತಳಮಟ್ಟದಲ್ಲಿ ತಡೆಗಟ್ಟಲು ಕಾರ್ಯಕ್ರಮಗಳೇನಾದರೂ ಇದೆಯಾ?

ಸಿದ್ದರಾಮಯ್ಯ: ಒಳಗೊಂಡು ಬಾಳುವೆ ನಡೆಸುವ ಸಿದ್ಧಾಂತದ ಹಿನ್ನೆಲೆ ನಮ್ಮ ಪಕ್ಷಕ್ಕೆ ಇದೆ. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲೂ ಗಾಂಧೀಜಿಯವರ ಆದಿಯಾಗಿ ಅನೇಕ ನಾಯಕರು ಜಾತಿ, ಧರ್ಮಗಳ ನಡುವೆ ಸಾಮರಸ್ಯ ಇರಬೇಕು. ಜಾತಿ, ಧರ್ಮಗಳಿಗಿಂತ ಬದುಕು ಮತ್ತು ದೇಶ ದೊಡ್ಡದು ಎಂದು ಪ್ರತಿಪಾದಿಸಿದ್ದರು. ಆದರೆ ಕಳೆದ ೩೦ ವರ್ಷಗಳಿಂದ ಜನರಿಗೆ ಜಾತಿ, ಧರ್ಮಗಳ ಒಡೆಯುವ ಮೂಲಕ ಅಧಿಕಾರಕ್ಕೆ ಬಂದ ಬಿ.ಜೆ.ಪಿ.ಯು ಭಾರತದ ಚರಿತ್ರೆಯಲ್ಲಿ ಕರಾಳ ಅಧ್ಯಾಯಗಳನ್ನು ನಿರ್ಮಿಸುತ್ತಿದೆ. ಇದರ ವಿರುದ್ಧ ನಾವು ಜನರಿಗೆ ಅರಿವು ಮೂಡಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ದುಡಿದು ಬದುಕುವ ಕೋಟ್ಯಾಂತರ ಜನ ಧರ್ಮಾತೀತವಾಗಿ, ಜಾತಿ ಮತಗಳನ್ನು ಬದಿಗೆ ಸರಿಸಿ ಭವ್ಯವಾದ ಪರಂಪರೆಯೊಂದನ್ನು ನಿರ್ಮಿಸಿದ್ದಾರೆ. ಅಂತಹ ಪರಂಪರೆಯ ವಾರಸುದಾರರಾದ ನಾವು ಯಾವುದೇ ಬೆಲೆತೆತ್ತು ಇದನ್ನು ಉಳಿಸಿಕೊಳ್ಳಬೇಕು. ನಮ್ಮ ಕಾರ್ಯಕರ್ತರಿಗೂ ಮತ್ತು ಜನಗಳಿಗೂ ಇದು ಅರ್ಥವಾಗುವಂತೆ ಮಾಧ್ಯಮಗಳು ಮತ್ತು ನಾವುಗಳು ಒಟ್ಟುಗೂಡಿ ಶ್ರಮಿಸಬೇಕಾದ ಅನಿರ್ವಾಯತೆ ಸೃಷ್ಟಿಯಾಗಿದೆ.


ಇದನ್ನೂ ಓದಿ: ಗಡಿಯಲ್ಲಿ ಸೈನಿಕರ ಸಾವು: ಆಳುವವರ ಮೌನ ಜನದ್ರೋಹ ಮಾತ್ರವಲ್ಲ, ದೇಶದ್ರೋಹವೂ ಹೌದು – ಸಿದ್ದರಾಮಯ್ಯ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿ ಮಾಡುತ್ತೇವೆ: ರಾಹುಲ್‌ ಗಾಂಧಿ

0
ಜಾತಿ ಗಣತಿ ನನ್ನ ಜೀವನದ ಪ್ರಮುಖ ಗುರಿಯಾಗಿದೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿಯನ್ನು ಮಾಡುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಸಂಪತ್ತು ಮರುಹಂಚಿಕೆ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ...