‘ಅರವಿಂದ್ ಕೇಜ್ರಿವಾಲ್ ಅವರ ಬೆಳೆಯುತ್ತಿರುವ ವರ್ಚಸ್ಸಿನಿಂದ ಬಿಜೆಪಿಗೆ ಭಯವಿದೆ; ಆದ್ದರಿಂದ, ಅವರು ಲೋಕಸಭೆ ಚುನಾವಣೆಗೆ ಪ್ರಚಾರ ಮಾಡುವುದನ್ನು ಬಿಜೆಪಿ ಬಯಸುತ್ತಿಲ್ಲ’ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.
ಇಂಡಿಯಾ ಟುಡೇ ಟಿವಿ ಎಕ್ಸಿಕ್ಯೂಟಿವ್ ಎಡಿಟರ್ ಪ್ರೀತಿ ಚೌಧರಿ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಭಗವಂತ್ ಮಾನ್, “ಕೇಜ್ರಿವಾಲ್ ಅವರನ್ನು ಬಂಧಿಸಲಾಗುವುದು ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ. ಬಿಜೆಪಿಯವರಿಗೆ ಕೇಜ್ರಿವಾಲ್ ಅವರಂತಹ ದೊಡ್ಡ ನಾಯಕ ಪ್ರಚಾರ ಮಾಡಲು ಬಯಸುವುದಿಲ್ಲ. ಏಕೆಂದರೆ, ಅವರು ಹೆದರುತ್ತಾರೆ. ಬಿಜೆಪಿಯು ಕೇಜ್ರಿವಾಲ್ ಮತ್ತು ಎಎಪಿಯನ್ನು ಮುಗಿಸಲು ಬಯಸುತ್ತಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ತನಿಖಾ ಸಂಸ್ಥೆಯು ವಿಚಾರಣೆ ನಡೆಸಿದ ನಂತರ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಆಮ್ ಆದ್ಮಿ ಪಕ್ಷದ ಮುಖ್ಯಸ್ಥರು ಪ್ರಸ್ತುತ ಮಾರ್ಚ್ 28 ರವರೆಗೆ ತನಿಖಾ ಸಂಸ್ಥೆಯ ಕಸ್ಟಡಿಯಲ್ಲಿದ್ದಾರೆ.
ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ‘ಕಿಂಗ್‌ಪಿನ್’ ಎಂಬ ಜಾರಿ ನಿರ್ದೇಶನಾಲಯದ ಆರೋಪದ ಬಗ್ಗೆ ಮಾತನಾಡಿದ ಭಗವಂತ್ ಮಾನ್, “ಇದೊಂದು ರಾಜಕೀಯ ದ್ವೇಷ, ಒಬ್ಬ ಆರೋಪಿ ಶರತ್ ರೆಡ್ಡಿಯನ್ನು ಬಂಧಿಸಲಾಗಿದೆ. ಅವರು ಈ ಹಿಂದೆ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿಲ್ಲ ಎಂದು ಹೇಳಿದರು. ಆದರೆ, ಅವರನ್ನು ಮತ್ತೆ ಜೈಲಿನಲ್ಲಿ ವಿಚಾರಣೆಗೊಳಪಡಿಸಿದಾಗ ತನಗೆ ಗೊತ್ತು ಎಂದು ಹೇಳಿದ್ದರು. ಈಗ ಚುನಾವಣಾ ಬಾಂಡ್‌ಗಳ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿದ್ದು, ಬಿಜೆಪಿಗೆ ಅವರು ₹55 ಕೋಟಿ ದೇಣಿಗೆ ಕೊಟ್ಟಿದ್ದಾರೆ” ಎಂದರು.
ಕೇಜ್ರಿವಾಲ್ ವಿರುದ್ಧ ತನಿಖಾ ಸಂಸ್ಥೆಯ ಆರೋಪಗಳು ಸಾಬೀತುಪಡಿಸಲಾಗದ ಸುಳ್ಳು ಎಂದು ಭಗವಂತ್ ಮಾನ್ ಹೇಳಿದರು.
ದೆಹಲಿ ಸರ್ಕಾರವು ಜೈಲಿನಿಂದ ನಡೆಯುತ್ತದೆ ಎಂಬ ಎಎಪಿಯ ಪ್ರತಿಪಾದನೆಯ ಬಗ್ಗೆ ಕೇಳಿದಾಗ, “ಮುಖ್ಯಮಂತ್ರಿಯೊಬ್ಬರು ಭೌತಿಕವಾಗಿ ತಮ್ಮ ಕಚೇರಿಯಲ್ಲಿ ಇಲ್ಲದಿದ್ದರೂ ಸರ್ಕಾರವನ್ನು ನಡೆಸಬಾರದು ಎಂದು ಹೇಳುವ ಯಾವುದೇ ನಿಯಮವಿಲ್ಲ” ಎಂದು ಹೇಳಿದರು.
ಲೆಫ್ಟಿನೆಂಟ್ ಗವರ್ನರ್ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ಭಗವಂತ್ ಮಾನ್, “ನಮಗೆ ರಾಷ್ಟ್ರಪತಿ ಆಳ್ವಿಕೆ ಏಕೆ ಬೇಕು? ದೆಹಲಿಯಲ್ಲಿ ಏನಾಯಿತು? ಲೆಫ್ಟಿನೆಂಟ್ ಗವರ್ನರ್ ಆಯ್ಕೆಯಾಗುತ್ತಾರೆ ಮತ್ತು ಚುನಾಯಿತರಾಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಚುನಾಯಿತ ಸರ್ಕಾರ ಕಾರ್ಯನಿರ್ವಹಿಸುತ್ತದೆ” ಎಂದರು.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ರಾಜಕಾರಣಿಗಳ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ಏಕೆ ದಾಳಿ ನಡೆಸುತ್ತಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಪ್ರಶ್ನಿಸಿದರು. ಕೇಸರಿ ಪಕ್ಷವು ವಿರೋಧ ಪಕ್ಷಗಳನ್ನು “ಮುಗಿಸಲು ಬಯಸಿದೆ” ಎಂದು ಆರೋಪಿಸಿದರು.
“ಇಡಿ ತನಿಖಾ ಸಂಸ್ಥೆ ಅಲ್ಲ; ಅದು ಬಿಜೆಪಿಗೆ ಸಮಾನ. ಬಿಜೆಪಿಗೆ ನೀತಿ ಆಯೋಗ ಸಮಾನ. ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯೂ ಬಿಜೆಪಿಗೆ ಸಮ. ಬಿಜೆಪಿಯೇತರ ರಾಜ್ಯಗಳಲ್ಲಿ ಮಾತ್ರ ಏಕೆ ದಾಳಿ ನಡೆಯುತ್ತಿದೆ” ಎಂದು ಪಂಜಾಬ್ ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ.
“ನೀವು (ಬಿಜೆಪಿ) 370 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದ್ದೀರಿ. ನೀವು ಮೋದಿ ಅಲೆಯ ಮೇಲೆ ಚುನಾವಣೆಗಳನ್ನು ಎದುರಿಸುತ್ತೀರಿ. ಪ್ರಧಾನಿ ನರೇಂದ್ರ ಮೋದಿ ಅಂತಹ ಎತ್ತರದ ನಾಯಕ, ನೀವು ಏಕೆ ಪ್ರತಿಪಕ್ಷಗಳಿಗೆ ಹೋರಾಡಲು ಅವಕಾಶ ನೀಡುತ್ತಿಲ್ಲ? ಇದು ಯಾವ ರೂಪವಾಗಿದೆ? ಪ್ರಜಾಪ್ರಭುತ್ವದ್ದಾ” ಎಂದು ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
‘ನಾವು ನ್ಯಾಯಾಲಯಗಳಲ್ಲಿ ನಂಬಿಕೆ ಇಟ್ಟಿದ್ದೇವೆ, ಮನೀಷ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ಸತ್ಯೇಂದ್ರ ಜೈನ್ ಸೇರಿದಂತೆ ಕೇಜ್ರಿವಾಲ್ ಮತ್ತು ಇತರ ಎಎಪಿ ನಾಯಕರ ನಿವಾಸಗಳಿಂದ ಜಾರಿ ನಿರ್ದೇಶನಾಲಯವು ಒಂದು ಪೈಸೆಯನ್ನೂ ಹುಡುಕಿಲ್ಲ’ ಎಂದು ಪ್ರತಿಪಾದಿಸಿದರು.
ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಎಎಪಿಗೆ ಸೇರುತ್ತಾರೆ ಮತ್ತು ಪಕ್ಷದ ಆಡಳಿತವನ್ನು ವಹಿಸಿಕೊಳ್ಳುತ್ತಾರೆ ಎಂಬ ಊಹಾಪೋಹಗಳನ್ನು ಭಗವಂತ್ ಮಾನ್ ತಳ್ಳಿಹಾಕಿದರು.
ಲೋಕಸಭೆ ಪ್ರಚಾರಕ್ಕೆ ನೀವು ಎಎಪಿಯ ಮುಖವಾಗುತ್ತೀರಾ ಎಂಬ ಪ್ರಶ್ನೆಗೆ ಮಾನ್, ಪಕ್ಷಕ್ಕೆ ಅಂತಹ ಸಂಸ್ಕೃತಿ ಇಲ್ಲ ಎಂದು ಹೇಳಿದರು.
“ನಾವೆಲ್ಲರೂ ಕೇಜ್ರಿವಾಲ್‌ಗಳು; ನಮ್ಮ ಪಕ್ಷದ ಕ್ಯಾಪ್‌ನಲ್ಲಿ ‘ಮೇನ್ ಭಿ ಕೇಜ್ರಿವಾಲ್’ (ನಾನು ಕೇಜ್ರಿವಾಲ್) ಎಂದು ಬರೆಯಲಾಗಿದೆ. ಎಲ್ಲರೂ ನಾಯಕರು; ನಾವೆಲ್ಲರೂ ಪ್ರಚಾರ ಮಾಡಬಹುದು. ಪಕ್ಷದಿಂದ ನನಗೆ ಯಾವುದೇ ಜವಾಬ್ದಾರಿ ಸಿಕ್ಕರೂ ಅದನ್ನು ನಾನು ಮಾಡುತ್ತೇನೆ” ಎಂದು ಅವರು ಹೇಳಿದರು.
ಇದನ್ನೂ ಓದಿ; ‘ಮೋದಿಯನ್ನು 28 ಪೈಸೆ ಪಿಎಂ ಎಂದು ಕರೆಯಬೇಕು..’; ಕೇಂದ್ರದ ತೆರಿಗೆ ತಾರತಮ್ಯದ ವಿರುದ್ಧ ಉದಯನಿಧಿ ವಾಗ್ದಾಳಿ


